ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸುಗಾರ ತೇಲಿಬಿಟ್ಟ ಕಾಗದಗಳ ದೋಣಿಯಲ್ಲಿ .. !

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಪತ್ರ ಒಂದು; ಪ್ರಿಯ ಜಹಂಗೀರ್‌ ಗಾಂಧಿ, ಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ಸಂಸ್ಥೆಯ ಜಾಹೀರಾತನ್ನು ಗಮನಿಸಿದೆ. ಹಿಂದಿನ ಜಾಹೀರಾತಿನಂತೆ ಈ ಸಲ ವ್ಯಾಕರಣ ತಪ್ಪುಗಳಿರಲಿಲ್ಲ . ಆದರೆ ಭಾಷೆ ಅಷ್ಟೇನೂ ಸೊಗಸಾಗಿರಲಿಲ್ಲ. ಸಂಸ್ಥೆಯ ಘನತೆ, ಪ್ರತಿಷ್ಠೆಗೆ ತಕ್ಕುದಾದ ಭಾಷೆ ಜಾಹೀರಾತಿನಲ್ಲಿರಬೇಕು. ಮುಂದಿನ ಸಲ ಜಾಹೀರಾತನ್ನು ಬಿಡುಗಡೆ ಮಾಡುವ ಮುನ್ನ ನನ್ನ ಗಮನಕ್ಕೆ ತರುವುದು.

ಪತ್ರ ಎರಡು; ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ಬಾಬು ರಾಜೇಂದ್ರಪ್ರಸಾದ್‌ಜೀ, ನಿಮ್ಮನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನದೊಳಗೆ ಬರುವಾಗ ಗೋಡೆಗೆ ತಗುಲಿಹಾಕಿದ ದೊಡ್ಡ ಫೋಟೊ ಕೆಳಗಡೆ president swearing at ceremony ಎಂದು ಬರೆಯಲಾಗಿದೆ. ಅದು president at swearing in ceremony ಎಂದಾಗಬೇಕಿತ್ತು. ಅಲ್ಲವೇ ?

Vishveshwar Bhat writes on JRD TATA LETTERSಪತ್ರ ಮೂರು ; ಗೌರವಾನ್ವಿತ ಪ್ರಧಾನಿಗಳಾದ ಶ್ರೀ ಜವಹರಲಾಲ್‌ ನೆಹರೂಜೀ, ನಿಮಗೆ ಯುರೋಪಿನ ರುಚಿಭರಿತ ಮಾವಿನ ಫಲಗಳನ್ನು ಕಳುಹಿಸುವುದಾಗಿ ಹೇಳಿದ್ದೆ. ನೀವು ವಾಪಸ್‌ ಹೋಗುವಾಗ ನಿಮ್ಮ ಜತೆಯಲ್ಲೇ ಅವುಗಳನ್ನು ಒಯ್ಯಲು ವಿಶೇಷವಾಗಿ ಪ್ಯಾಕ್‌ ಮಾಡಿಸಿದ್ದೇನೆ. ನೀವು ಈ ಪ್ಯಾಕ್‌ಗಳ ತೂಕದ ಬಗ್ಗೆ ತಲೆಕೆಡಿಸಿಕೊಳ್ಳ ಬೇಕಿಲ್ಲ . ಭಾರತದ ಪ್ರಧಾನಿ ವಿಮಾನದಲ್ಲಿ ಒಯ್ಯುವ ಮಾವಿನಫಲಗಳು ಎಷ್ಟು ವಿಶೇಷವಾಗಿರುತ್ತವೆಂದರೆ ಅವುಗಳಿಗೆ ಗುರುತ್ವಾಕರ್ಷಣೆಯ ನಿಯಮಗಳು ಅನ್ವಯವಾಗುವುದಿಲ್ಲ,

ಪತ್ರ ನಾಲ್ಕು; ಪ್ರಿಯ ಸುಮಂತ್‌ ಮುಲಗಾಂವಕರ್‌, ನಿನ್ನೆಯ ಸಭೆಯಲ್ಲಿ ನಿಮ್ಮ ಮೇಲೆ ನಾನು ಏಕಾಏಕಿ ಕೂಗಾಡಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ. ನಾನು ತೀವ್ರ ಒತ್ತಡದಲ್ಲಿ ಇದ್ದುದರಿಂದ ವಿಚಿತ್ರವಾಗಿ ವರ್ತಿಸಿದೆ. ನೀವು ನನ್ನನ್ನು ವಿನಾಕಾರಣ ಟೀಕಿಸುತ್ತಿದ್ದೀರೆಂದು ಭಾವಿಸಿದೆ. ತಾತ್ಪರ್ಯ ಅರ್ಥವಾಯಿತು. ಇನ್ನೊಮ್ಮೆ ಕ್ಷಮೆಯಾಚಿಸುವೆ. ನಿಮ್ಮ ಮೇಲಿನ ಪ್ರೀತಿ, ಅಭಿಮಾನ ಎಂದಿಗೂ ಬದಲಾಗುವುದಿಲ್ಲ.

ಪತ್ರ ಐದು; ಆತ್ಮೀಯ ಶ್ರೀ ಮನಮೋಹನ್‌ ದೇಸಾಯಿ, ನೀವು ನಿದೇ}ಶಿಸಿದ ‘ಕೂಲಿ’ ಚಿತ್ರ ನೋಡಿದೆ. ಸಿನಿಮಾ ಚೆನ್ನಾಗಿದೆ. ಕ್ಯೂನಲ್ಲಿ ನಿಂತು ಟಿಕೆಟ್‌ ಖರೀದಿಸಿ ಮೂರು ಗಂಟೆ ಸಿನಿಮಾ ವೀಕ್ಷಿಸಿದ್ದು ನಿರರ್ಥಕವಾಗಲಿಲ್ಲ.

ಹೀಗೆಲ್ಲ ಪತ್ರಗಳ ಮೇಲೆ ಪತ್ರಗಳನ್ನು, ಅಕ್ಷರಗಳೊಂದಿಗೆ ಅಕ್ಷರಗಳನ್ನು, ಭಾವನೆಗಳ ಮೇಲೆ ಭಾವನೆಗಳನ್ನು ಮೂಡಿಸಿದವರು, ಅರಳಿಸಿದವರು ಈ ರಾಷ್ಟ್ರ ಕಂಡ ಧೀಮಂತ ಉದ್ಯಮಿ, ಕನಸುಗಾರ, ಛಲಗಾರ , ಸಾಹಸಿ, ಸಾಧಕ ಭಾರತ ರತ್ನ ಜೆ.ಆರ್‌.ಡಿ . ಟಾಟಾ! ಅವರು ಬದುಕಿದ್ದರೆ ಮೊನ್ನೆ ಜುಲೈ 29ಕ್ಕೆ ನೂರು ವರ್ಷವಾಗುತ್ತಿತ್ತು , ಈ ಮಹಾಪುರುಷ ಜೀವಿತ ಅವಧಿಯಲ್ಲಿ ಬರೆದ ನಲವತ್ತು ಸಾವಿರ ಪತ್ರಗಳ ಪೈಕಿ ಒಂಬೈನೂರು ಪತ್ರಗಳನ್ನು ಕಾಳಜಿಪೂರ್ವಕ ಆಯ್ದು ಪ್ರಕಟಿಸಿದ ಜೆ.ಆರ್‌.ಡಿ ಲೆಟರ್ಸ್‌ ಪುಸ್ತಕವನ್ನು ಮುಂಬೈನಿಂದ ಹಿರಿಯ ಸ್ನೇಹಿತ ಡಾ.ಸುಧಾಕರ ಪಾಠವಾಳ ಪ್ರೀತಿಯಿಂದ ಕಳುಹಿಸಿದಂದಿನಿಂದ ಮೈಮನಗಳಲ್ಲಿ ಬರೀ ಜೆ. ಆರ್‌.ಡಿ., ಕನವರಿಕೆಗಳಲ್ಲೂ ಟಾಟಾ, ಉಳಿದ ಕೆಲಸಗಳಿಗೂ ಟಾಟಾ,

ಭಾರತದಲ್ಲಿ ಟಾಟಾ ಮನೆಮಾತು. ಟ್ರಕ್ಕಿನಿಂದ ಹಿಡಿದು ಗುಂಡುಸೂಜಿ ತನಕ, ಉಕ್ಕಿನಿಂದ ಹಿಡಿದು ಉಪ್ಪಿನತನಕ ಎಲ್ಲ ಸಾಮಾನುಗಳನ್ನು ತಯಾರಿಸುವ, ದೇಶದ ಮೂಲೆ ಮೂಲೆಗಳಲ್ಲಿ ಚಿರಪರಿಚಿತವಾಗಿರುವ ಸಂಸ್ಥೆ ಟಾಟಾ. ಕಲೆ , ಸಂಸ್ಕೃತಿಯಿರಬಹುದು, ಶಿಕ್ಷಣ, ಸಮಾಜ ಸೇವೆಯಿರಬಹುದು, ವಿಮಾನ ಹಾರಾಟ, ಅಣು ಸಂಶೋಧನೆಯಿರಬಹುದು, ಟಾಟಾ ಸಂಸ್ಥೆ ಕೈಯಾಡಿಸದ ರಂಗವೇ ಇಲ್ಲ. ನಮ್ಮ ದೈನಂದಿನ ಜೀವನದ ಒಂದಲ್ಲ ಒಂದು ಕ್ಷಣದಲ್ಲಿ ನಾವು ಟಾಟಾ ಸಂಸ್ಥೆ ತಯಾರಿಸಿದ ವಸ್ತುಗಳೊಂದಿಗೆ, ಕಲ್ಪಿಸಿದ ಸೇವೆಯಾಂದಿಗೆ ತಾಕಿಕೊಂಡಿರುತ್ತೇವೆ. ಆ ಪರಿ ಈ ದೇಶದಲ್ಲಿ ಬೃಹತ್‌ ಪ್ರಮಾಣದಲ್ಲಿ ವ್ಯಾಪಿಸಿದ ಸಂಸ್ಥೆ ಟಾಟಾ. ಪರ್ಯಾಯ ಸರಕಾರದಂತೆ, ಬದಲಿ ವ್ಯವಸ್ಥೆಯಂತೆ ಹೊರಹೊಮ್ಮಿರುವ ಟಾಟಾ, ಈ ದೇಶದ ಅಭಿವೃದ್ಧಿಯ ಬೆನ್ನೆಲುಬು. ವಾರ್ಷಿಕ ವಹಿವಾಟು ಸುಮಾರು 60-70 ಸಾವಿರ ಕೋಟಿ ರೂ. ಅಂಥ ಸಂಸ್ದೆಯ ಮಾಲೀಕ ಪ್ರತಿದಿನ ತನಗೆ ಬರುವ ಪತ್ರಗಳಿಗೆ ಖುದ್ದಾಗಿ ಉತ್ತರಿಸುವುದಿದೆಯಲ್ಲ , ಅದು ಸಾಮಾನ್ಯ ಸಂಗತಿಯಲ್ಲ. ಮುಂಬೈ ಮಹಾನಗರದಲ್ಲಿ ರಸ್ತೆಗಳನ್ನು ಬೇಕಾಬಿಟ್ಟಿ ಅಗೆದಾಗ ಪಾಲಿಕೆಯ ಮೇಯರ್‌ಗೆ, ಟ್ರಾಫಿಕ್‌ ದೀಪ ಕೆಟ್ಟು ಹೋದಾಗ ಸಂಚಾರಿ ಪೋಲೀಸರಿಗೆ, ರಸ್ತೆಯ ಉಬ್ಬಿನ ಮೇಲೆ ಬಿಳಿಪಟ್ಟಿ ಬಳಿಯದಿದ್ದಾಗ ಸಂಬಂಧಪಟ್ಟವರಿಗೆ ಪತ್ರ ಬರೆಯಲು ಪುರುಸೊತ್ತು ಮಾಡಿಕೊಳ್ಳುವುದಿದೆಯಲ್ಲ ಅದು ನಿಜಕ್ಕೂಗ್ರೇಟ್‌. ಟಾಟಾ ಕಂಪನಿಯ ಮುಖ್ಯಸ್ಥ ಪ್ರತಿದಿನ ಬಿಡುವು ಮಾಡಿಕೊಂಡು ಸ್ವಹಸ್ತಾಕ್ಷರದಲ್ಲಿ ಬರೆಯುವುದು ಅಥವಾ ಟೈಪ್‌ರೈಟರ್‌ ಮುಂದೆ ಕುಳಿತು ಪಟಪಟ ಎಂದು ಟೈಪಿಸುವುದನ್ನು ಕಲ್ಪಿಸಿಕೊಳ್ಳುವುದೇ ಒಂದು ರೋಚಕ ಅನುಭವ.

ಒಬ್ಬ ವ್ಯಕ್ತಿಗೆ ಚಿಕ್ಕ ಹುದ್ದೆ, ಅಧಿಕಾರ, ಕೈಯಲ್ಲೊಂದಿಷ್ಟು ಹಣ ಓಡಾಡತೊಡಗಿದರೆ ಏಕಾಏಕಿ ದೊಡ್ಡ ಮನುಷ್ಯನಾಗಿಬಿಡುತ್ತಾನೆ. ದೊಡ್ಡ ಮನುಷ್ಯನಾದರೆ ಸಾಕು ಆತನಿಗೆ ಯಾವುದಕ್ಕೂ ಸಮಯ ಸಿಗುವುದಿಲ್ಲ. ಆತ ಸದಾ ಬ್ಯುಸಿ, ಕೈಗೆ ಕಾಲಿಗೆ ಆಳುಕಾಳುಗಳಿದ್ದರೂ ಆತನಿಗೆ ಯಾವುದಕ್ಕೂ ಟೈಮಿರುವುದಲ್ಲ. ಹೀಗಿರುವಾಗ ಬೇರೆಯವರಿಗೆ ಪತ್ರ ಬರೆಯುವುದಕ್ಕೆ ಪುರುಸೊತ್ತಾದರುಾ ಎಲ್ಲಿ ಸಿಗಬೇಕು? ನಮ್ಮ ಮಧ್ಯೆ ಇರುವವರೆಲ್ಲ ಈ ರೀತಿಯ ಟೈಮಿಲ್ಲದ ದೊಡ್ಡ ಮನುಷ್ಯರೇ. ಆದರೆ ಜೆ.ಆರ್‌.ಡಿ ಎಷ್ಟು ದೊಡ್ಡವರಾಗಿದ್ದರೆಂದರೆ ಅವರಿಗೆ ಪ್ರತಿಯಾಂದಕ್ಕೂ ಟೈಮಿತ್ತು. ನೂರಾರು ಸಹಾಯಕರನ್ನು ಕೇಳಿದ ಸಂಬಳಕ್ಕೆ ಇಟ್ಟುಕೊಳ್ಳುವ ಶ್ರೀಮಂತಿಕೆಯು ಇತ್ತು. ಆದರೆ ಅವರು ಎಲ್ಲ ಕೆಲಸಗಳನ್ನು ತಾವೇ ಮಾಡುತ್ತಿದ್ದರು.ಪತ್ರಗಳನ್ನಂತೂ ಖುದ್ದಾಗಿ ಬರೆಯುತ್ತಿದ್ದರು. ಯಾರೇ ಪತ್ರ ಬರೆದರೂ ಅವರಿಂದ ಉತ್ತರ ನಿರೀಕ್ಷಿಸಬಹುದಾಗಿತ್ತು.

ಒಮ್ಮೆ ಹೀಗೆ ಆಯಿತು. ನಮ್ಮ ಸುಧಾಮೂರ್ತಿ ಇದ್ದಾರಲ್ಲ (ಇನ್‌ಪೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ), ಅವರು ಆಗ ನಾರಾಯಣಮೂರ್ತಿಯವರನ್ನು ಮದುವೆಯಾಗಿರಲಿಲ್ಲ. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌(ಈಗಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌)ನಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಮಾಸ್ಟರ್ಸ್‌ ಕೋರ್ಸ್‌ ಓದುತ್ತಿದ್ದರು. ಅಲ್ಲಿನ ನೋಟಿಸ್‌ಬೋರ್ಡಿಗೆ ಟಾಟಾ ಒಡೆತನದ ಟೆಲ್ಕೋ ಸಂಸ್ಥೆಯ ವಾಂಟೆಡ್‌ ಜಾಹೀರಾತನ್ನು ಅಂಟಿಸಿದ್ದರು. ಜಾಹೀರಾತಿನ ಕೊನೆಯಲ್ಲಿ lady candidates need not apply ಎಂದು ಬರೆಯಲಾಗಿತ್ತು. ಇದನ್ನು ಓದಿ ಸುಧಾಮೂರ್ತಿಗೆ ತೀವ್ರ ಅಸಮಾಧಾನವಾಯಿತು. ಪುರುಷ-ಸ್ತ್ರೀಯರೆಂಬ ಭೇದಭಾವ ಟಾಟಾದಂಥ ಸಂಸ್ಥೆಯನ್ನೂ ಬಿಟ್ಟಿಲ್ಲವಲ್ಲ ಎಂದು ಅವರಿಗೆ ಖೇದವಾಯಿತು. ಅವರು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಹಾಸ್ಟೆಲ್‌ಗೆ ಬಂದು ಪೋಸ್ಟ್‌ಕಾರ್ಡಿನಲ್ಲಿ ಲಿಂಗಭೇದ ಪ್ರತಿಭಟಿಸಿ ಜೆ.ಆರ್‌.ಡಿಗೆ ನೇರವಾಗಿ ಪತ್ರ ಬರೆದರು. ಅಲ್ಲಿಗೆ ಸುಧಾಮೂರ್ತಿ ಈ ವಿಷಯ ಮರೆತುಬಿಟ್ಟರು. ಇಂಥ ಅದೆಷ್ಟು ಪತ್ರಗಳು ಜೆ.ಆರ್‌.ಡಿಗೆ ಬರುತ್ತವೋ ಏನೋ, ಆ ಪೈಕಿ ಎಷ್ಟು ಪತ್ರಗಳು ಅವರಿಗೆ ತಲುಪುತ್ತವೋ ಏನೋ, ಅಷ್ಟಾಗಿಯೂ ಅವರು ಓದುತ್ತಾರೆಂಬುದಕ್ಕೆ ಏನು ಗ್ಯಾರಂಟಿ ಎಂದು ಸುಧಾಮೂರ್ತಿ ಭಾವಿಸಿದ್ದರು.

ಪತ್ರಬರೆದು ಹತ್ತು ದಿನಗಳೂ ಆಗಿರಲಿಲ್ಲ. ಸುಧಾಮೂರ್ತಿಗೆ ಟೆಲಿಗ್ರಾಂ ಬಂತು. ಪುಣೆಯಲ್ಲಿರುವ ಕಂಪನಿಯ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕೆಂದೂ, ಅದಕ್ಕೆ ಕಂಪನಿಯೇ ಪ್ರವಾಸ ವೆಚ್ಚ ಭರಿಸುವುದೆಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಪತ್ರ ತಡವಾಗಿ ತಲುಪಿದರೆ ಸಮಸ್ಯೆಯಾಗಬಹುದೆಂದು ಭಾವಿಸಿ ಜೆ.ಆರ್‌.ಡಿ ಯೇ ಟೆಲಿಗ್ರಾಂ ಕಳಿಸಿದ್ದರು! ಸುಧಾಮೂರ್ತಿಯವರಿಗೆ ಆಕ್ಷಣಕ್ಕೆ ನಂಬಲು ಸಾಧ್ಯವಾಗಲಿಲ್ಲ. ಅನಂತರ ಅವರು ಸಂದರ್ಶನಕ್ಕೆ ಹಾಜರಾದರು. ಕೆಲಸವೂ ಸಿಕ್ಕಿತು. ಕೆಲ್ಕೋ ಶಾಫ್‌ಪ್ಲೋರ್‌ನ ಮೊದಲ ಮಹಿಳಾ ಉದ್ಯೋಗಿ.

ಪುಣೆಯಲ್ಲಿ ಕೆಲಸಕ್ಕೆ ಸೇರಿದ ಕೆಲ ದಿನಗಳ ಬಳಿಕ ಸುಧಾಮೂರ್ತಿ ಮದುವೆಯಾಯಿತು. ಒಂದು ದಿನ ಕೆಲಸ ಮುಗಿದ ಬಳಿಕ ಸಾಯಂಕಾಲ ಪತಿ ನಾರಾಯಣ ಮೂರ್ತಿಯವರಿಗಾಗಿ ಟೆಲ್ಕೋ ಕಚೇರಿ ಯ ಮುಂದೆ ಕಾಯುತ್ತಿದ್ದರು. ಅದೇ ಹೊತ್ತಿಗೆ ಜೆ.ಆರ್‌.ಡಿ ಕೂಡ ಹೊರ ಬಂದರು. ಗಂಡನಿಗಾಗಿ ಕಾಯುತ್ತಿರುವುದಾಗಿ ಸುಧಾಮೂರ್ತಿ ಹೇಳಿದರು. ಕತ್ತಲು ನಿಧಾನವಾಗಿ ಆವರಿಸುತ್ತಿರುವಾಗ ಮಹಿಳೆಯಾಬ್ಬರನ್ನು ಏಕಾಂಗಿಯಾಗಿ ಬಿಟ್ಟು ಹೋಗುವುದು ಸರಿಯಲ್ಲವೆಂದು ಜೆ.ಆರ್‌.ಡಿ.ಗೆ ಅನ್ನಿಸಿರಬೇಕು. ಪರವಾಗಿಲ್ಲ , ನಿಮ್ಮ ಯಜಮಾನರು ಬರುವ ತನಕ ನಾನು ಪಕ್ಕದಲ್ಲಿ ನಿಂತಿರುತ್ತೇನೆ ಎಂದರು. ಜೆ.ಆರ್‌.ಡಿ. ದೇಶದ ಶ್ರೀಮಂತ ಉದ್ಯಮಿಯಾಬ್ಬ ತನ್ನ ಸಂಸ್ಥೆಯ ಸಾಮಾನ್ಯ ಉದ್ಯೋಗಿಗಾಗಿ ತೋರುವ ಕಾಳಜಿ ಅದಾಗಿತ್ತು. ಸುಧಾಮೂರ್ತಿಗೆ ತೀವ್ರ ಕಸಿವಸಿ, ಮುಜುಗರ. ಸ್ವಲ್ಪ ಹೊತ್ತಿನಲ್ಲಿ ನಾರಾಯಣಮೂರ್ತಿ ಬಂದರು. ಆಗ ಜೆಆರ್‌ಡಿ ಸುಧಾಮೂರ್ತಿಗೆ ಹೇಳಿದರು- young lady, tell your husband never to make his wife wait again.

ಗ್ರೇಟ್‌ ಈಸ್ಟರ್ನ್‌ ಶಾಪಿಂಗ್‌ ಸಂಸ್ಥೆಯ ಸಂಸ್ಥಾಪಕ ವಸಂತ್‌ ಸೇಠ್‌ ಕಾಲೇಜಿನಲ್ಲಿ ಓದುತ್ತಿದ್ದಾಗ, ಕ್ಲಾಸು ಮುಗಿಸಿ ಮನೆಗೆ ಹೋಗಲು ಮೂವರು ಹುಡುಗಿಯರೊಂದಿಗೆ ಬಸ್‌ಸ್ಟಾಪ್‌ನಲ್ಲಿ ನಿಂತಿದ್ದರು. ಅವರ ಮುಂದೆ ಮರ್ಸಿಡಿಸ್‌ ಬೆಂಜ್‌ ಕಾರೊಂದು ಗಕ್ಕನೆ ನಿಂತಿತು. ಡ್ರೆೃವರ್‌ ಸೀಟಿನಲ್ಲಿ ಚಾಲಕನ ಪೋಷಾಕು ಧರಿಸಿದ್ದ ವ್ಯಕ್ತಿ ಕಿಟಕಿಯ ಗ್ಲಾಸನ್ನು ಇಳಿಸಿ, ನಿಮಗೆ ಲಿಫ್ಟ್‌ ಕೊಡಲೇನು ಎಂದು ಕೇಳಿದ. ಸೇಠ್‌ಗೆ ಅಚ್ಚರಿ. ಸೇಠ್‌ ತನ್ನ ಮೂವರೂ ಸ್ನೇಹಿತೆಯರಿಗೆ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದ. ಸೇಠ್‌ ಚಾಲಕನ ಪಕ್ಕದಲ್ಲಿ , ಉಳಿದವರು ಹಿಂದಿನ ಸೀಟಿನಲ್ಲಿ ಕುಳಿದರು. ಕಾರು ಹೊರಟಿತು. ಸೇಠ್‌ ತನ್ನ ದೊಡ್ಡಸ್ತಿಕೆ ತೋರಿಸಲು ಈ ಕಾರು ಯಾರದು ಗೊತ್ತಾ ? ನಿಮ್ಮ ಜೀವನದಲ್ಲಿ ಇಂಥ ಕಾರನ್ನು ಏರಲಿಕ್ಕಿಲ್ಲ ನೀವು. ಇದು ಜೆ.ಆರ್‌.ಡಿ.ಟಾಟಾ ಕಾರು ಗೊತ್ತಾ ? ಅವರು ಇದರಲ್ಲಿ ಓಡಾಡೋದು ಎಂದ. ಡ್ರೆೃ ೖವರ್‌ ಸೀಟಿನಲ್ಲಿದ್ದವ ಹೇಳಿದ-ನಿಮ್ಮ ಸ್ನೇಹಿತ ಹೇಳೋದು ನಿಜ. ಈ ಕಾರಿನ ಚಾಲಕ ಯಾರು ಗೊತ್ತಾ ? ಅವನೂ ಜೆ.ಆರ್‌.ಡಿ. ಟಾಟಾ. ಸೇಠ್‌ ಹಾಗೂ ಅವನ ಸ್ನೇಹಿತೆಯರಿಗೆ ಹೇಗಾಗಿರಬೇಡ?

ಜೆ.ಆರ್‌.ಡಿ.ಗೆ ಮಹಿಳೆಯಾಬ್ಬಳು ಪತ್ರ ಬರೆದಿದ್ದಳು- ನೀವು ಕಾರಿನಲ್ಲಿ ಹೋಗುವಾಗ ಸಿಗ್ನಲ್‌ ಬಳಿ ಗಮನಿಸಿದೆ. ಪದೇಪದೇ ಕಣ್ಣು ಮುಚ್ಚುತ್ತಿದ್ದಿರಿ. ನಿಮ್ಮ ವಿಚಿತ್ರ ವರ್ತನೆ ಅರ್ಥವಾಗಲಿಲ್ಲ . ಅದಕ್ಕೆ ಜೆ.ಆರ್‌.ಡಿ. ಉತ್ತರಿಸಿದ್ದರು- ನಾನು ಕಂಪನಿಯ ಮರ್ಸಿಡಿಸ್‌ ಕಾರಿನಲ್ಲಿ ಓಡಾಡುತ್ತೇನೆ. ಎಲ್ಲರಿಗೂ ಇದು ಸಾಧ್ಯವಾಗೊಲ್ಲ. ರಸ್ತೆಯಲ್ಲಿ ಪಾದಾಚಾರಿಗಳನ್ನು ಕಂಡಾಗ, ನಾನು ಹೀಗೆ ಹೋಗುವುದು ಎಷ್ಟು ಸರಿ ಎನಿಸುತ್ತದೆ. ದೇವ ಪಾದಚಾರಿಗಳಿಗೂ ಓಡಾಡಲು ವಾಹನ ಕರುಣಿಸು ಎಂದು ಆಗಾಗ ಕಣ್ಣು ಮುಚ್ಚಿ ಪ್ರಾರ್ಥಿಸುವೆ. ಇದು ವಿಚಿತ್ರವಾಗಿ ಕಂಡರೆ ನಾನೇನು ಮಾಡಲಿ?

ಐನೂರು ಪುಟಗಳ ಈ ಕೃತಿಯ ಒಂದೊಂದು ಪತ್ರದಲ್ಲಿ ಜೆ.ಆರ್‌.ಡಿ ಗುಣ, ವ್ಯಕ್ತಿತ್ವ ಎಂಥವರನ್ನೂ ನಿಬ್ಬೆರಗುಗೊಳಿಸುತ್ತದೆ. ಅದಕ್ಕಾಗಿಯೇ ಜೆ.ಆರ್‌.ಡಿ ಮಹಾನ್‌ ಎನಿಸಿಕೊಳ್ಳುತ್ತಾರೆ. ಉದ್ಯಮಿಗಳಾಗಿಯೂ ಮೊದಲ ಹಾಗೂ ಏಕೈಕ ಭಾರತರತ್ನರಾಗುತ್ತಾರೆ.

ಆದರ್ಶ ವ್ಯಕ್ತಿಗಳಿಗಾಗಿ ಪದೇಪದೇ ಸಚಿನ್‌, ಶಾರೂಕ್‌ ಕಡೆ ನೋಡಿ ಪರದಾಡುವ ನಮ್ಮ ಯುವಕರಿಗೆ ಜೆ.ಆರ್‌.ಡಿ ಕಡೆ ದೃಷ್ಟಿ ಹಾಯಿಸಿದರೆ ನಿಶ್ಚಿತವಾಗಿಯೂ ನಿರಾಸೆಯಾಗುವುದಿಲ್ಲ.

ಕಾರಣ ಜೆ.ಆರ್‌.ಡಿಯ ನೀಲಿ ಕಂಗಳನ್ನು ನೋಡಿದರೆ ಆಕಾಶದ ನೆನಪಾಗುತ್ತದೆ. ಅಂಥ ಹರವು, ಅಂಥ ಅಗಾಧತೆ!

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X