ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನದ ಮೂಲೆಯಲ್ಲಿ ಕುಳಿತು ಕೊನೆ ತನಕ ಕಾಡುವ ಕಹಿ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ನರ್ಗಿಸ್‌ ದತ್‌ ಪೊಲೀಸ್‌ ಠಾಣೆಯಲ್ಲಿ ಕುಳಿತು ಒಂದೇ ಸಮನೆ ಅಳ್ಳಳ್ಳಾಗುಟ್ಟಿ ಅಳುತ್ತಿದ್ದಳು. ಅತ್ತು ಅತ್ತು ಕಣ್ಣುಗಳು ಕೆಂಪಾಗಿದ್ದವು. ರೆಪ್ಪೆಗಳು ಬಾಡಿದ್ದವು. ಮುಖ ಕಳೆಗಟ್ಟಿತ್ತು. ಹನ್ನೆರಡು ತಾಸುಗಳಿಂದ ಏನನ್ನೂ ಸೇವಿಸದೆ ಇದ್ದುದರಿಂದ ಆಕೆ ನಿತ್ರಾಣಗೊಂಡಿದ್ದಳು. ಹಿಂದಿ ಚಿತ್ರರಂಗದ ಖ್ಯಾತ ಅಭಿನೇತ್ರಿ, ಭಾರತದ ‘ಎಲಿಜಬೆತ್‌ ಟೇಲರ್‌’ ಲಂಡನ್‌ ನ ಪೊಲೀಸ್‌ ಠಾಣೆಯ ಒಂದು ಮೂಲೆಯಲ್ಲಿ ದಿಕ್ಕೆಟ್ಟು ಕುಳಿತಿದ್ದಳು. ಆಗ್‌, ಆವಾರಾ, ಬರಸಾತ್‌, ಮದರ್‌ ಇಂಡಿಯಾ ಚಿತ್ರಗಳಲ್ಲಿನ ಮನಮೋಹಕ ಅಭಿನಯದಿಂದ She has all of India under her feet ಎಂದು ನೆಹರೂ ಅವರಿಂದ ಹೊಗಳಿಸಿಕೊಂಡ, ಆ ಕಾಲದ ಸೂಪರ್‌ಸ್ಟಾರಿಣಿ ಅಪೂರ್ವ ಸುಂದರಿ ನರ್ಗಿಸ್‌ ಅಂದು ಅಸಹಾಯಕಳಾಗಿ, ಕಳಂಕಿತೆಯಾಗಿ, ಅವಮಾನಿತೆಯಾಗಿ, ಜರ್ಝರಿತಗೊಂಡಿದ್ದಳು.

ಇಂಥ ಸ್ಥಿತಿ ಎಲ್ಲರಿಗೂ ಅವರವರ ಜೀವನದ ಮುರುಕಿಯಲ್ಲಿ ಒಮ್ಮೆಯಾದರೂ ಬಂದೇ ಬರುತ್ತದೆ. ಅದೆಂಥ ವ್ಯಕ್ತಿಯೇ ಆಗಿರಲಿ ಇಂಥ ಸ್ಥಿತಿ ಆತನನ್ನು ಹಿಂಜಿ ಹಿಪ್ಪಲಿ ಮಾಡಿಬಿಡುತ್ತದೆ. ಜೀವನದ ಕೊನೆ ಬಿಂದುವಿನ ತನಕ ತಂದು ನಿಲ್ಲಿಸಿಬಿಡುತ್ತದೆ.

ಅಂದು ನರ್ಗಿಸ್‌ಗೆ ಆಗಿದ್ದು ಕೂಡ ಇದೇ. ಅವಳ ಮಾನ ಪಾವಾಣೆಗೆ ಹರಾಜು ಬಿದ್ದಿತ್ತು. ಅವಮಾನದಿಂದ ಎದೆ ಕದಕದಿಸುತ್ತಿತ್ತು. ಮೈತುಂಬಾ ಸಾಕಿಕೊಂಡಿದ್ಡ ಮರ್ಯಾದೆಯೆಂಬ ಮೂರಕ್ಷರದ- ಸರ್ವಸ್ವ- ತಿಸುಗುಟ್ಟುತ್ತಿತ್ತು. ನರ್ಗಿಸ್‌ ಗಡಗಡ ನಡುಗುತ್ತ ಪೊಲೀಸ್‌ ಠಾಣೆಯ ಮೂಲೆಯಲ್ಲಿ ಅಬರುಗೇಡಿಯಂತೆ ಕುಳಿತಿದ್ದಳು.

Nargis - Indian Elizabeth Tailorಲಂಡನ್‌ಗೆ ಯಾರೇ ಹೋಗಲಿ ಆಕ್ಸ್‌ ಫರ್ಡ್‌ ಸ್ಟ್ರೀಟ್‌ನಲ್ಲಿರುವ ಮಾರ್ಕ್ಸ್‌ ಆಂಡ್‌ ಸ್ಪೆನ್ಸರ್‌ ಮಳಿಗೆಗೆ ಹೋಗೇ ಹೋಗುತ್ತಾರೆ. ಅಲ್ಲಿ ತಾಯಿಯಾಂದನ್ನು ಬಿಟ್ಟು ಮತ್ತೆಲ್ಲ ವಸ್ತುಗಳು ಸಿಗುತ್ತವೆ. ಏನನ್ನು ಬೇಕಾದರೂ ಸ್ವತಃ ನಿಮ್ಮ ಕೈಗಳಿಂದಲೇ ಆರಿಸಿಕೊಳ್ಳಬಹುದಾದ ಅಂಗಡಿಯದು. ಗ್ರಾಹಕನಿಗೆ ಮಾರುಕಟ್ಟೆಯ ಪ್ರಜಾಪ್ರಭುತ್ವ ನೆನಪಿಗೆ ತರುವ ತಾಣವಿದು. ನರ್ಗಿಸ್‌ ಕೂಡ ಅಂದು ಕೈಗೆ ಸಿಕ್ಕಿದ ಸಾಮಾನುಗಳನ್ನು ಕೊಂಡಳು. shop till you drop ಅಂತಾರಲ್ಲ ಹಾಗೆ. ಕಂಡಿದ್ದೆಲ್ಲವನ್ನೂ ಖರೀದಿಸಿ ನಿಯತ್ತಾಗಿ ಬಿಲ್‌ ಪಾವತಿಸಿ ಹೊರಡಬೇಕೆನ್ನುವಷ್ಟರಲ್ಲಿ ಮತ್ತೇನೋ ಕಣ್ಣಿಗೆ ಬಿತ್ತು. ಅದನ್ನು ಖರೀದಿಸಿದಳು. ಬಿಲ್‌ ಪಾವತಿಸಿದಳು. ಅಲ್ಲಿಂದ ಹೋಗುವಾಗ ಮತ್ತೇನೋ ಕಾಣಿಸಿತು. ಇನ್ನೇನೋ ಕಂಡಿತು. ಎಲ್ಲವನ್ನೂ ಬ್ಯಾಗಿಗೆ ಹಾಕಿಕೊಂಡು ಬಂದುಬಿಟ್ಟಳು.

ಆಕೆ ಎಡವಿದ್ದೇ ಇಲ್ಲಿ. ಮೊದಲೆರಡು ಬಾರಿ ಸಾಮಾನುಗಳನ್ನು ಕೊಂಡಿದ್ದಕ್ಕೆ ಹಣ ಕೊಟ್ಟ ನರ್ಗಿಸ್‌ ಮೂರನೆ ಬಾರಿ ಖರೀದಿಸಿದ್ದಕ್ಕೆ ಹಣ ಕೊಡಲು ಮರೆತಿದ್ದಳು ಅಥವಾ ಅದಕ್ಕೂ ಹಣ ಕೊಟ್ಟಿದ್ದೇನೆಂದು ಭಾವಿಸಿರಬೇಕು. ಆದರೆ ಆಕೆ ಹಣ ಕೊಟ್ಟಿರಲಿಲ್ಲ. ಅಂಗಡಿಯವ ಥಟ್ಟನೆ ಬಂದು ನರ್ಗಿಸ್‌ಳನ್ನು ಹಿಡಿದುಬಿಟ್ಟ ! ಕಳ್ಳತನ(shop lifting)ದ ಆರೋಪ ಹೊರಿಸಿದ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಪೊಲೀಸರಿಗೆ ದೂರು ಕೊಟ್ಟ. ಪೊಲೀಸರು ಬಂದು ನರ್ಗಿಸ್‌ಳನ್ನು ನಿಷ್ಕರುಣೆಯಿಂದ ಠಾಣೆಗೆ ಕರೆದೊಯ್ದರು. ಏನಾಗುತ್ತಿದೆಯೆಂಬುದು ಸ್ಪಷ್ಟವಾಗಿ ಅರಿವಿಗೆ ಬಾರದಷ್ಟು ಕ್ಷಿಪ್ರವಾಗಿ ಈ ಎಲ್ಲ ಘಟನಾವಳಿಗಳು ಅವಸರವಸರವಾಗಿ ಜರುಗಿದ್ದವು!

ನರ್ಗಿಸ್‌ ಕುಸಿದು ಕುಳಿತಿದ್ದಳು. ನಾಲ್ವರು ಪೊಲೀಸರು ಸುತ್ತುಗಟ್ಟಿಕೊಂಡು ಜಬರ್ದಸ್ತಿನಿಂದ ಬಾಯಿಬಿಡಿಸುತ್ತಿದ್ದರು. ಮೊದಮೊದಲು ನರ್ಗಿಸ್‌ ಬಾಯಿಬಿಡಲಿಲ್ಲ. ಕಾರಣ ಆಕೆಗೆ ಬಾಯಿ ಬಿಡಲು ಆಗುತ್ತಿರಲಿಲ್ಲ. ಮಾತೇ ಬಾರದ ಸ್ಥಿತಿ. ತನ್ನ ನಿಜವಾದ ನಾಮಧೇಯ, ಪರಿಚಯ ಮಾಡಿಕೊಳ್ಳಬೇಕೋ ಬೇಡವೋ ಎಂಬ ದ್ವಂದ್ವ. ನರ್ಗಿಸ್‌ ಎಂದು ಹೇಳಿದರೆ ಇಡೀ ಜಗತ್ತಿಗೇ ತಾನು ಕಳ್ಳಿ ಎಂಬುದು ಗೊತ್ತಾಗುವುದಲ್ಲ ಎಂಬ ಆತಂಕ. ಈ ಗುಲ್ಲುಗಪಟೆ ಎಲ್ಲರಿಗೂ ಗೊತ್ತಾಗಿಬಿಟ್ಟರೆ ಮರ್ಯಾದೆ ಮೂರು ಕಾಸಾಗಿ, ಘನತೆ ಹೈರಾಣಾಗಿ ಹೋದೀತೆಂಬ ಡವಡವ. ಹಾಗೆಂದು ನಿಜ ಹೇಳದೇ ಇರುವಂತಿಲ್ಲ.

ನರ್ಗಿಸ್‌ ನಿಜ ಹೇಳಿದಳು. ನಡೆದುದೆಲ್ಲವನ್ನೂ ಸಾವರಿಸಿಕೊಂಡು ವಿವರಿಸಿದಳು. ಪೊಲೀಸರು ಕೇಳಲಿಲ್ಲ. ಮತ್ತಷ್ಟು ಒತ್ತಡ ಹೇರಲಾರಂಭಿಸಿದರು. ‘ಬುದ್ಧಿ ಪೂರ್ವಕವಾಗಿ ಹಣ ಕೊಡದೆ ಸಾಮಾನುಗಳನ್ನು ತಂದಿಲ್ಲ. ಎರಡು ಬಾರಿ ಹಣ ಕೊಟ್ಟು, ಮೂರನೆ ಸಲ ಸಾಮಾನು ಖರೀದಿಸುವಾಗ ಹಣ ಕೊಟ್ಟಿರಬಹುದೆಂಬ ಯೋಚನೆಯಲ್ಲಿ ಬಂದುಬಿಟ್ಟೆ’ ಎಂದು ಹೇಳಿದಳು. ಪೊಲೀಸರು ಆಕೆಯ ಈ ವಾದವನ್ನು ಒಪ್ಪಲಿಲ್ಲ. ಒಂದು ಹಂತದಲ್ಲಿ ನರ್ಗಿಸ್‌ಗೆ ಅನ್ನಿಸಿತು-ಇವರು ತನ್ನನ್ನು ಬಿಡುವುದಿಲ್ಲ. ಠಾಣೆಯಲ್ಲಿಯೇ ಕೂರಿಸುತ್ತಾರೆ. ಇಡೀ ರಾತ್ರಿ ಪೊಲೀಸು ಠಾಣೆಯಲ್ಲಿ ಕಳೆಯಲು ಸಾಧ್ಯವಿಲ್ಲ. ಕಳ್ಳತನದ ಆರೋಪವನ್ನು ಒಪ್ಪಿಕೊಂಡರೆ ಕೇಸು ದಾಖಲಿಸಿಕೊಂಡುಬಿಡಬಹುದು. ‘ಹೌದು, ಕಳ್ಳತನ ಮಾಡಿದ್ದು ನಿಜ, ತಪ್ಪಾಯಿತು. ಕ್ಷಮಿಸಿ’ ಎಂದುಬಿಟ್ಟಳು. ಪೊಲೀಸರ ದಬಾವಣೆ ಕಮ್ಮಿಯಾಗುವ ಬದಲು ಜಾಸ್ತಿಯಾಗತೊಡಗಿತು. ಕಳ್ಳತನಕ್ಕೆ ಶಿಕ್ಷೆಯಾಗಲೇಬೇಕು ಎಂಬ ನಿರ್ಧಾರಕ್ಕೆ ಪೊಲೀಸರು ಬಂದರು. ನರ್ಗಿಸ್‌ ಪರಿಪರಿಯಾಗಿ ಬೇಡಿಕೊಂಡಳು. ಮೊದಲು ಕದ್ದಿಲ್ಲ ಎಂದು ಹೇಳಿ ಈಗ ಕದ್ದಿದ್ದು ಹೌದೆಂದು ಹೇಳುವ ಯಾರನ್ನೇ ಆಗಲಿ ಪೊಲೀಸರು ನೋಡುವ ರೀತಿಯೇ ಬೇರೆ. ಪೊಲೀಸರು ಮೆತ್ತಗಾಗುವ ಬದಲು ಇನ್ನಷ್ಟು ಗಟ್ಟಿಯಾದರು, ಕಠೋರರಾದರು. ನರ್ಗಿಸ್‌ ಜತೆಯಲ್ಲಿ ಯಾರೂ ಇರಲಿಲ್ಲ. ಆಕೆ ಉಳಿದುಕೊಂಡ ಸ್ನೇಹಿತರ ಮನೆಗೆ ವಿಷಯವನ್ನು ತಿಳಿಸೋಣವೆಂದರೆ ಇಡೀ ಘಟನೆಯಿಂದ ಅವರು ತಪ್ಪು ಭಾವಿಸಬಹುದೆಂಬ ದುಗುಡ. ಹಾಗೆಂದು ಮುಂಬೈನಲ್ಲಿರುವ ಗಂಡ ಸುನಿಲ್‌ದತ್ತನಿಗೆ ವಿಷಯವನ್ನು ಹೇಳಲು ನರ್ಗಿಸ್‌ಗೆ ಧೈರ್ಯ ಸಾಕಾಗಲಿಲ್ಲ. ಹೇಳದೆ ಇದ್ದರೆ ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂಬುದು ಆಕೆಗೆ ಖಾತ್ರಿಯಾಯಿತು.

ಈ ಮಧ್ಯೆ ನರ್ಗಿಸ್‌ಳನ್ನು ಬಂಧಿಸಿದ ಸುದ್ದಿ ಇಂಡಿಯಾ ಹೌಸ್‌ ಗೆ ತಿಳಿಯಿತು. ಕೆ.ನಟವರ ಸಿಂಗ್‌ (ಈಗಿನ ಕಾಂಗ್ರೆಸ್‌ ನಾಯಕ) ಬ್ರಿಟನ್ನಲ್ಲಿ ಭಾರತದ ರಾಯಭಾರಿ. ನರ್ಗಿಸ್‌ ಅಭಿಮಾನಿ. ಆಕೆಯ ಚಿತ್ರಗಳನ್ನು ಕುತೂಹಲದಿಂದ ನೋಡಿದವರು. ಆಕೆಯ ಬಗ್ಗೆ ಸಾಕಷ್ಟು ಗೌರವ ಇಟ್ಟುಕೊಂಡವರು. ಅದಕ್ಕೂ ಮೇಲಾಗಿ ಇಂದಿರಾಗಾಂಧಿ ಜತೆ ನರ್ಗಿಸ್‌ಗೆ ಒಳ್ಳೆಯ ಒಡನಾಟವಿದ್ದ ಅಂಶ ನಟವರಸಿಂಗ್‌ಗೆ ಗೊತ್ತಿತ್ತು. (1980 ರಲ್ಲಿ ಇಂದಿರಾ ನರ್ಗಿಸ್‌ಳನ್ನು ರಾಜ್ಯಸಭೆ ಸದಸ್ಯೆಯಾಗಿ ಮಾಡಿದ್ದನ್ನು ಸ್ಮರಿಸಿಕೊಳ್ಳಿ) ನರ್ಗಿಸ್‌ ಇದ್ದ ಪೊಲೀಸ್‌ ಠಾಣೆಗೆ ನಟವರಸಿಂಗ್‌ ಹೋದರೆ, ತಮ್ಮ ನೆಚ್ಚಿನ ಅಭಿನೇತ್ರಿ ಅತ್ತು ಅತ್ತು ನಿತ್ರಾಣಳಾಗಿ ಮೂಲೆಯಲ್ಲಿ ತೂಕಡಿಸುತ್ತಾ ಕುಳಿತಿದ್ದಾಳೆ! ಭಾರತದಲ್ಲಾದರೆ ನಟವರ ಸಿಂಗ್‌ನಂಥ ಪ್ರಭಾವವಿರುವ ವ್ಯಕ್ತಿ ನೇರವಾಗಿ ಠಾಣೆಗೆ ಹೋಗಿ ಪೊಲೀಸು ಅಧಿಕಾರಿಗೆ ತನ್ನ ಪ್ರಭಾವದ ಪ್ರವರ ಹೇಳಿ ಯಾರನ್ನು ಬೇಕಾದರೂ ಬಿಡಿಸಿಕೊಂಡು ಬರಬಹುದು. ಆದರೆ ಲಂಡನ್‌ನಲ್ಲಿ ಹಾಗಿಲ್ಲವಲ್ಲ. ಆಗಲೇ ಪೊಲೀಸರು ಕೇಸನ್ನು ದಾಖಲಿಸಿಕೊಂಡಿದ್ದರು.

ಈ ಮಧ್ಯೆ ನರ್ಗಿಸ್‌ ಕಳ್ಳತನದ ಪ್ರಕರಣದಲ್ಲಿ ಪೊಲೀಸ್‌ ಠಾಣೆಯಲ್ಲಿರುವ ವಿಷಯ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಲಂಡನ್‌ ವರದಿಗಾರನಿಗೆ ಗೊತ್ತಾಯಿತು. ಅವನಿಗೆ ಗೊತ್ತಾಗಿದೆಯೆಂದು ನರ್ಗಿಸ್‌ಗೂ ಗೊತ್ತಾಯಿತು. ಅಲ್ಲಿ ತನಕ ಪಡಬಾರದ ಪಾಡು ಪಟ್ಟು ಸುಮ್ಮನೆ ಸಾವರಿಸಿಕೊಂಡಿದ್ದ ನರ್ಗಿಸ್‌ ಕಟಕಂಗಾಲಾಗಿ ಹೋದಳು. ಪತ್ರಿಕೆಯಲ್ಲಿ ಬಂದರೆ ತನ್ನ ಗತಿಯೇನು? ಅದನ್ನು ಊಹಿಸಿಕೊಂಡರೆ ಸಾವಿರ ಚೇಳು ಕಡಿದ ಅನುಭವ. ನಟವರಸಿಂಗ್‌ನನ್ನು ನೋಡಿದ್ದೇ ನರ್ಗಿಸ್‌ ಗೋಳೋ ಎಂದು ಅಳತೊಡಗಿದಳು. ಎಲ್ಲ ಸಂಗತಿಗಳನ್ನು ವಿವರಿಸಿದಳು. ಲಂಡನ್‌ ವರದಿಗಾರ Nargis caught steeling in London store ಎಂಬ ಸುದ್ದಿಯನ್ನು ಕಳುಹಿಸಿದ್ದ. ನಟವರಸಿಂಗ್‌ ಈ ವಿಷಯವನ್ನು ಪ್ರಧಾನಿ ಇಂದಿರಾಗಾಂಧಿಗೆ ತಿಳಿಸಿದ. ಅದು ತುರ್ತು ಪರಿಸ್ಥಿತಿಯ ಕಾಲ(1976). ಪತ್ರಿಕೆಗಳ ಮೇಲೆ ಇಂದಿರಾ ನಿರ್ಬಂಧ ಹೇರಿದ್ದರು. ಎಲ್ಲ ಪತ್ರಿಕೆಗಳು ಸೆನ್ಸಾರ್‌ ಅಧಿಕಾರಿಗಳನ್ನು ದಾಟಿಯೇ ಮುದ್ರಣಕ್ಕೆ ಹೋಗಬೇಕಾಗಿತ್ತು. ನರ್ಗಿಸ್‌ ಸುದ್ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗದಂತೆ ಪ್ರಧಾನಿ ಕಛೇರಿಯಿಂದ ಸ್ಪಷ್ಟ ಸೂಚನೆ ಇತ್ತು. ಸುದ್ದಿ ಪ್ರಕಟವಾಗಲಿಲ್ಲ. ಅಷ್ಟರ ಮಟ್ಟಿಗೆ ನರ್ಗಿಸ್‌ ಮರ್ಯಾದೆ ಉಳಿಯಿತು. ಆದರೆ ಪೊಲೀಸ್‌ ಠಾಣೆಯಿಂದ ಮುಕ್ತಿ ಸಿಗಲಿಲ್ಲ. ಎರಡು ದಿನ ರಜಾ ಇದ್ದುದರಿಂದ ಅವರು ಅಲ್ಲಿಯೇ ಇರಬೇಕಾಯಿತು. ಪರಿಸ್ಥಿತಿ ಹೇಗಾಗಿರಬೇಡ?

ನಟವರಸಿಂಗ್‌ ಪ್ರಧಾನಿ ಮೂಲಕ ಬ್ರಿಟನ್‌ ಸರಕಾರದ ಉನ್ನತ ಮೂಲವನ್ನು ಸಂಪರ್ಕಿಸಿ ಪೊಲೀಸ್‌ ಠಾಣೆಯಿಂದ ಪಾರು ಮಾಡಿದರಾದರೂ ಹೆದರಿಕೆಯಿಂದ ಕದ್ದಿದ್ದು ಹೌದೆಂದು ಒಪ್ಪಿಕೊಂಡಿದ್ದಕ್ಕೆ ಶಿಕ್ಷೆಯಾಗಿ ಕೋರ್ಟು ನೀಡಿದ ಆದೇಶದಂತೆ ಐನೂರು ಪೌಂಡ್‌ ತೆತ್ತು ಹೊರ ಬಂದಳು. ಆ ಮೂರು ದಿನಗಳಲ್ಲಿ ನರ್ಗಿಸ್‌ ಅನುಭವಿಸಿದ ಯಾತನೆ, ಮಾನಸಿಕ ಹಿಂಸೆ ಮಾತ್ರ ಯಾರಿಗೂ ಬೇಡ.

ನ್ಯೂಯಾರ್ಕಿನ ಆಸ್ಪತ್ರೆಯ ಹಾಸಿಗೆಯ ಮೇಲೆ ನರ್ಗಿಸ್‌ ಕ್ಯಾನ್ಸರ್‌ ಪೀಡಿತೆಯಾಗಿ ಮಲಗಿದ್ದಳು. ಆಕೆ ಬದುಕುವ ಸಾಧ್ಯತೆ ಕ್ಷೀಣಿಸಿತ್ತು. ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಳು. ವೈದ್ಯರು ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿ ಮುಗಿಸಿದ್ದರು. ಟೈಂಸ್‌ ಆಫ್‌ ಇಂಡಿಯಾದ ವರದಿಗಾರ ನರ್ಗಿಸ್‌ ಮಲಗಿದ್ದ ಆಸ್ಪತ್ರೆಯ ಕೋಣೆಯಾಳಗೆ ಹೋದ. ಆಕೆ ಮಾತನಾಡಲು ಹರಪ್ರಯಾಸ ಪಡುತ್ತಿದ್ದಳು. ಆಕೆಯನ್ನು ನೋಡಲು ನಟವರಸಿಂಗ್‌ ಕೂಡ ಬಂದಿದ್ದರು. ವರದಿಗಾರನನ್ನು ಕಂಡವಳೇ ನರ್ಗಿಸ್‌ ಏನನಿಸಿತೋ ಏನೋ? ‘ನನ್ನ ಕೊನೆಯ ಸಂದರ್ಶನ ಇದಾಗುವುದಾದರೆ ನಾನು ಮಾತಾಡುತ್ತೇನೆ’ ಎಂದಳು. ನರ್ಗಿಸ್‌ ಮನಬಿಚ್ಚಿ ಮುಕ್ಕಾಲು ಗಂಟೆ ಮಾತನಾಡಿದಳು. ಕೊನೆಯಲ್ಲಿ ವರದಿಗಾರ ‘ನಿಮ್ಮ ಜೀವನದ ಕಹಿ ಘಟನೆ ಯಾವುದು?’ ಎಂದು ಕೇಳಿದ. ನರ್ಗಿಸ್‌ ಥಟ್ಟನೆ ‘ವೋ ತೀನ್‌ ದಿನ್‌’ ಅಂದಳು. ನರ್ಗಿಸ್‌ ಆ ಮೂರು ದಿನಗಳು ಯಾವುವು ಎಂಬುದನ್ನು ವಿವರಿಸಬಹುದು ಎಂದು ಸ್ವಲ್ಪ ಹೊತ್ತು ಕಾದ. ಆಕೆ ಮಾತಾಡಲಿಲ್ಲ. ‘ವೋ ತೀನ್‌ ದಿನ್‌ ಅಂದ್ರೆ ಏನು?’ ಎಂದು ಕೇಳಿದ. ಆಕೆ ಏನೂ ಹೇಳಲಿಲ್ಲ. ವರದಿಗಾರನಿಗೆ ಏನೂ ಗೊತ್ತಾಗಲಿಲ್ಲ. ನಟವರಸಿಂಗ್‌ ಕನ್ನಡಕ ತೆಗೆದು ಕಣ್ಣು ಒರೆಸಿಕೊಂಡರು!

ನರ್ಗಿಸ್‌ ಭಾರತೀಯ ಚಿತ್ರಪ್ರೇಮಿಗಳ ಹೃದಯ ಕದ್ದವಳು. ಆದರೆ ಲಂಡನ್‌ನಲ್ಲಿ ಆಕೆ ಸಾಮಾನ್ಯ ಹೆಣ್ಣುಮಗಳು. ಆರ್ಡಿನರಿಯಾಗಿ ಯೋಚಿಸಿದ್ದರಿಂದಲೇ ಎಲ್ಲಾ ಎಡವಟ್ಟುಗಳನ್ನು ಎದುರಿಸಿದಳು ಎಂದೇ ತಿಳಿಯೋಣ. ಅದರೆ ಜೀವನ ಪೂರ್ತಿ ನೀತಿ, ನಿಯಮ, ಕಾನೂನು, ದಂಡನೆಯನ್ನೇ ಉಸಿರಾಡಿದ್ದ ಸೇನಾ ದಂಡನಾಯಕರೊಬ್ಬರು ಇಂಥದೇ ಇಕ್ಕಟ್ಟಿನ ಪ್ರಸಂಗ ಎದುರಿಸಿ ತಲೆ ತಗ್ಗಿಸಿದರು ಅಂದ್ರೆ ನಂಬ್ತೀರಾ?

ಭಾರತೀಯ ಮಹಾದಂಡನಾಯಕ, ಅಚ್ಚಕನ್ನಡಿಗ ಜನರಲ್‌ ಜಿ.ಜಿ. ಬೇವೂರ್‌ ಎಂಟು ತಾಸು ನ್ಯೂಯಾರ್ಕ್‌ ವಿಮಾನ ನಿಲ್ದಾಣದಲ್ಲಿ ಅನುಭವಿಸಿದ ಕಿಟಿಕಿಟಿ ಯಾತನೆಯಿದೆಯಲ್ಲ ಅದು ಯಾವ ವೈರಿಗೂ ಬೇಡ. ಅಂದು ಬೇವೂರ್‌ ಮಾಡಿದ ಮಹಾಪರಾಧವೆಂದರೆ ತಮ್ಮದಲ್ಲದ ಸೂಟ್‌ಕೇಸನ್ನು ಎತ್ತಿಕೊಂಡು ಹೋಗಿದ್ದು! ವಿಮಾನವಿಳಿದು ನಿಲ್ದಾಣಕ್ಕೆ ಬಂದರೆ ಕನ್‌ವೇಯರ್‌ ಬೆಲ್ಟ್‌ ಮೇಲೆ ಎಲ್ಲ ಪ್ರಯಾಣಿಕರ ಬ್ಯಾಗುಗಳು ಹರಿದು ಬರುತ್ತವೆ ತಾನೆ. ಜನರಲ್‌ ಬೇವೂರ್‌ ತಮ್ಮ ಸೂಟ್‌ಕೇಸ್‌ ಎಂದು ಬೇರೆ ಬ್ಯಾಗು ಎತ್ತಿಕೊಂಡರು. ಬ್ಯಾಗಿನೊಂದಿಗೆ ಹೊರಗೆ ಬಂದರು. ಅದೇ ರೀತಿಯ ಇನ್ನೊಂದು ಬ್ಯಾಗ್‌ ಕೂಡ ಇತ್ತು. ಬ್ಯಾಗ್‌ ಗೆ ಬರೆದ ತಮ್ಮ ಗುರುತಿನ ಚೀಟಿಯನ್ನು ಗಮನಿಸಲಿಲ್ಲ. ಬ್ಯಾಗ್‌ ಅದಲು ಬದಲಾಯಿತು. ಬೇವೂರ್‌ ಒಯ್ದ ಬ್ಯಾಗ್‌ ಬೇರೊಬ್ಬ ಪ್ರಯಾಣಿಕನದಾಗಿತ್ತು. ಅಂತರರಾಷ್ಟ್ರೀಯ ವಿಮಾನ ಕಾಯಿದೆ ಪ್ರಕಾರ ಇದು ಅಪರಾಧ. ಜನರಲ್‌ ತಮ್ಮ ಪರಿಚಯ ಹೇಳಲಿಲ್ಲ. ಪೊಲೀಸ್‌ಗೆ ಇವರ ಪರಿಚಯ ತಿಳಿಯಲಿಲ್ಲ. ಅಲ್ಲಿಯೇ ಕುಳ್ಳಿರಿಸಿ ವಿಚಾರಣೆಗೊಳಪಡಿಸಿದ. ಬೇವೂರರನ್ನು ಸ್ವಾಗತಿಸಲು ಬಂದ ಭಾರತೀಯ ದೂತಾವಾಸದ ಅಧಿಕಾರಿಗಳು ಮಧ್ಯ ಪ್ರವೇಶಿಸಿದರೂ ಪೊಲೀಸರು ಬೇವೂರರನ್ನು ಸಂದೇಹದಿಂದಲೇ ನೋಡಿದರು. ಅವರ್ಯಾರೆಂದು ಗೊತ್ತಾದರೂ ತಪಾಸಣೆ ನಿಲ್ಲಿಸಲಿಲ್ಲ. ಬೇವೂರರಿಗೆ ಹೇಗಾಗಿರಬೇಡ ?

ಘಟನೆಗಳು ಜೀವನದಲ್ಲಿ ನೆನಪಿನಲ್ಲಿ ಉಳಿಯುವಂತಾಗಲು ಇಂಥ ಪ್ರಸಂಗಗಳೇ ಎದುರಾಗಬೇಕಾ? ಇಂಥ ಪ್ರಸಂಗಗಳನ್ನು ನೆನಪಿಸಿಕೊಂಡು ನಮ್ಮ ವೈರಿಗೂ ಇಂಥ ಸ್ಥಿತಿ ಬರದಿರಲಿ ಅಂತ ಹೇಳುತ್ತೇವೆ. ಕಾರಣ ಇವು ವೈರಿಗಿಂತ ನಿರ್ದಯಿ!

(ಸ್ನೇಹ ಸೇತು: ವಿಜಯ ಕರ್ನಾಟಕ)


ಪೂರಕ ಓದಿಗೆ
ಬೆಳಗಾವಿಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ : ದತ್‌ಗೆ ನೆನಪಾದಳು ನರ್ಗಿಸ್‌ !


ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X