• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರು ನಮ್ಮ ದೇಶದ ಮಾನ ಕಳೆಯುತ್ತಿದ್ದಾರೆ, ನಾವು ಮೌನವಾಗಿದ್ದೇವೆ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಪ್ರಾಯಶಃ ಈ ಪ್ರಶ್ನೆಗಳು ಯಾವತ್ತೂ ನಮ್ಮನ್ನು ಕಾಡಿಲ್ಲವೆನಿಸುತ್ತದೆ.

ಭಾರತದಲ್ಲಿ ನೆಲೆಸಿರುವ ವಿದೇಶಿ ಪತ್ರಕರ್ತರು ತಮ್ಮ ಪತ್ರಿಕೆಗಳಲ್ಲಿ ಈ ದೇಶವನ್ನು ಹೇಗೆ ಬಿಂಬಿಸುತ್ತಾರೆ? ಈ ದೇಶದ ಬಗ್ಗೆ ಅವರಿಗೆ ಎಂಥ ಅಭಿಪ್ರಾಯಗಳಿವೆ? ಅವರ ದೃಷ್ಟಿಯಲ್ಲಿ ಭಾರತ ಅಂದ್ರೆ ಏನು? ಅವರು ಅಂದುಕೊಂಡ ಭಾರತ ನಿಜವಾದ ಭಾರತವಾ?

ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕುಳಿತರೆ ಹತ್ತಾರು ‘ಸುದ್ದಿ ಮನೆಕತೆ’ಗಳೇ ಆದೀತು.ಭಾರತವೆಂದರೆ ದಿಲ್ಲಿ ಎಂದೇ ಭಾವಿಸಿರುವ ಈ ವಿದೇಶಿ ಪತ್ರಕರ್ತರು ಈ ರಾಷ್ಟ್ರದ ಸಂಸ್ಕೃತಿ, ಪರಂಪರೆ, ಇತಿಹಾಸ, ನಾಗರಿಕತೆ, ನೆಲ, ಜಲ, ಪ್ರತಿಷ್ಠೆ ಮೇಲೆ ಜನಸಾಮಾನ್ಯನಿಗೆ ಗೊತ್ತಾಗದಂತೆ ನಿರಂತರ ನಡೆಸುತ್ತಿರುವ ಬೌದ್ಧಿಕ ದೌರ್ಜನ್ಯ, ಅಪಪ್ರಚಾರ, ಅವಹೇಳನಕಾರಿ campaign ಮಾತ್ರ ತೀರಾ ಗಂಭೀರ ಸ್ವರೂಪದ್ದು. ನಾವ್ಯಾರೂ ಪ್ರತಿನಿತ್ಯ ವಿದೇಶಿ ಪತ್ರಿಕೆಗಳನ್ನು ಓದುವುದಿಲ್ಲ. ಹೀಗಾಗಿ ಇವರು ನಡೆಸುತ್ತಿರುವ ದೌರ್ಜನ್ಯ ಗೊತ್ತಾಗುವುದಿಲ್ಲ. ಆದರೆ ಇವರು ಮಾತ್ರ ಅವ್ಯಾಹತ ದಾಳಿಗೆ ಕುಳಿತುಬಿಟ್ಟಿದ್ದಾರೆ. ಭಾರತದ ಬಗ್ಗೆ ವಿದೇಶಗಳಲ್ಲಿ ಜನಾಭಿಪ್ರಾಯ ಮೂಡಿಸುವ ಇವರ ‘ನಿತ್ಯ ಪ್ರಹಾರ’ ಎಂಥ ಆಘಾತಕಾರಕವಾಗಿರಬಹುದೆಂಬುದನ್ನು ಊಹಿಸಲು ಸಾಧ್ಯವಿಲ್ಲ.

India as seen by Western Mediaಭಾರತದಿಂದ ಕಳೆದ ಮೂವತ್ತೆರಡು ವರ್ಷಗಳಿಂದ ಫ್ರೆಂಚ್‌ ಪತ್ರಿಕೆಗೆ ಬಾತ್ಮೀದಾರರಾಗಿರುವ, ಮೂಲತಃ ಫ್ರಾನ್ಸ್‌ ಸಂಜಾತ ಹಾಗೂ ಈಗ ಅಪ್ಪಟಾಪ್ಪಟ ಭಾರತೀಯರಾಗಿರುವ ಫ್ರಾಂಕ್ವಾಗಾಟಿಯೇ ಜತೆ ಈ ಎಲ್ಲ ಪ್ರಶ್ನೆಗಳೊಂದಿಗೆ ಕುಳಿತಾಗ ಅವರು ನೀಡಿದ ವಿವರಗಳು ದಂಗುಬಡಿಸುವಂತಿದ್ದವು. ವಿದೇಶಿ ಪತ್ರಕರ್ತರಿಗೆ ಭಾರತವೆಂದರೆ ಇಂದಿಗೂ ಮಧ್ಯಕಾಲೀನದಲ್ಲಿಯೇ ಪವಡಿಸುತ್ತಿರುವ, ಪ್ರಾಚೀನ ಕಟ್ಟುಪಾಡು, ಆಚರಣೆಗಳನ್ನು ಪಾಲಿಸುತ್ತಿರುವ ಹಿಂದುಳಿದ ದೇಶ. ಮೂಢನಂಬಿಕೆ, ಕಂದಾಚಾರ, ಮಾಟ, ಮಂತ್ರ, ಗೊಲ್ಲರ, ಹಾವಾಡಿಗರ ದೇಶ. ಹಿಂದೂ ಮೂಲಭೂತವಾದಿಗಳ , ಸಗಣಿಯಲ್ಲಿನ ಹುಳು ಹಪ್ಪಟೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವವರನ್ನೊಳಗೊಂಡ ದರಿದ್ರ ದೇಶ. ಇಂದಿಗೂ ಸತ್ತ ಹೆಣಗಳಿಗೆ ಕ್ರಿಯೆ ಮಾಡಿಸುವುದಕ್ಕೆ ಪ್ರಸಿದ್ಧವಾಗಿರುವ ಕಾಶಿ, ಕಿಡ್ನಿ ಮಾರಾಟಕ್ಕೆ ಕುಖ್ಯಾತವಾಗಿರುವ ತಮಿಳುನಾಡು, ಕೊಳೆಗೇರಿಗಳಿಂದಲೇ ಆವೃತವಾಗಿರುವ ಕೋಲ್ಕತಾ, ನವವಧುಗಳನ್ನು ಜೀವಂತವಾಗಿ ಸುಡುವುದಕ್ಕೆ ಹೆಸರಾಗಿರುವ ರಾಜಸ್ತಾನ, ಕಳ್ಳಕಾಕರು ತುಂಬಿರುವ ಮಧ್ಯಪ್ರದೇಶದ ಎಂದೇ ಬರೆಯುತ್ತಾರೆ. ಎರಡು ತಿಂಗಳ ಹಿಂದೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿಯವರು ವಿದೇಶಿ ಕಂಪನಿಗಳಿಗೆ ಬಂಡವಾಳ ಹೂಡಲು ಆಹ್ವಾನಿಸಿದಾಗ ‘ಒಂದು ಕಾಲಕ್ಕೆ ದರೋಡೆಕೋರರು ಹಾಗೂ ಕಳ್ಳಕಾಕರಿಂದ ತುಂಬಿದ್ದ.....’ ಎಂದು ‘ಮನಿಲಾ ಟೈಮ್ಸ್‌’ ಪತ್ರಿಕೆ ಬಾತ್ಮೀದಾರ ಬರೆದರೆ ಅವನ ದೇಶದ ಯಾವ ಉದ್ದಿಮೆದಾರರ ಬಂಡವಾಳ ಹೂಡಲು ಮುಂದೆ ಬಂದಾನು ಯೋಚಿಸಿ.

ಡಾಮಿನಿಕ್‌ ಲೇಪಿಯರ್‌ ಎಂಬ ಕಾದಂಬರಿಕಾರನ ಬಗ್ಗೆ ಹೇಳಬೇಕು. ಈ ಪುಣ್ಯಾತ್ಮನಿಗೆ ಭಾರತದ ಬಡತನ, ರೋಗರುಜಿನ, ಅನಕ್ಷರತೆ, ನಿರುದ್ಯೋಗಗಳೇ ಕಾದಂಬರಿ ವಸ್ತು. ಭಾರತದ ಬಡತನವನ್ನು ಮಾರಾಟ ಮಾಡಿ ಭಾರೀ ಶ್ರೀಮಂತರಾದವರಲ್ಲಿ ಈತ ಅಗ್ರಗಣ್ಯ. ಈತ ನಮ್ಮ ದೇಶಕ್ಕೆ ಬಗೆದ ದ್ರೋಹ, ಅಪಚಾರ ಅಕ್ಷಮ್ಯ. ಲೇಪಿಯರ್‌ ‘ಸಿಟಿ ಆಫ್‌ ಜಾಯ್‌’ ಎಂಬ ಪುಸ್ತಕ ಬರೆದಿದ್ದಾನೆ. ಈ ಕೃತಿ ಇಂದಿಗೂ best seller. ಇದರಿಂದ ಆತ ಕೋಟಿಗಟ್ಟಲೆ ಹಣ ಮಾಡಿದ. ಈ ಕೃತಿ ಆಧರಿಸಿ ಅನಂತರ ಸಿನಿಮಾ ಕೂಡ ಬಂತು. ಕೋಲ್ಕತಾದ ಸ್ಲಮ್ಮು, ಅಲ್ಲಿ ವಾಸಿಸುವ ಅಬ್ಬೇಪಾರಿಗಳ ಜೀವನಕ್ಕೆ ಸಂಬಂಧಿಸಿದ ಕಥಾ ವಸ್ತು . ಈ ಕೃತಿ ಓದಿದ, ಸಿನಿಮಾ ನೋಡಿದ ಯಾರೇ ಆಗಲಿ ಕೋಲ್ಕತಾ ಬಗ್ಗೆ ತಮ್ಮ ಮನಸ್ಸಿನಲ್ಲಿ ಒಳ್ಳೆಯ ಚಿತ್ರಣ ಮೂಡಿಸಿಕೊಳ್ಳಲು ಸಾಧ್ಯವೇ ಇಲ್ಲ.

ದಿಲ್ಲಿಯಲ್ಲಿ ಏನಿಲ್ಲವೆಂದರೂ ಸುಮಾರು ಆರುನೂರು ವಿದೇಶಿ ಪತ್ರಕರ್ತರಿದ್ದಾರೆ. ಎಲ್ಲ ದೇಶಗಳ ಪ್ರಮುಖ ಪತ್ರಿಕೆ, ನಿಯತಕಾಲಿಕ, ಸುದ್ದಿಸಂಸ್ಥೆ, ಟಿವಿ ಚಾನೆಲ್‌ಗಳ ವರದಿಗಾರರಿದ್ದಾರೆ. ಇವರೆಲ್ಲ ಸೇರಿಕೊಂಡು ತಮ್ಮದೇ ಆದ ಸಂಘಟನೆಯನ್ನು ಸ್ಥಾಪಿಸಿಕೊಂಡಿದ್ದಾರೆ. ಕೆಲವರು ಭಾರತ ಸರಕಾರದ ಕೃಪೆಯಿಂದ ಕಡಿಮೆ ಬಾಡಿಗೆಗೆ ಬಂಗಲೆಗಳನ್ನು ಹಿಡಿದುಕೊಂಡಿದ್ದಾರೆ. ಅಗ್ಗದ ಬಾಡಿಗೆಗೆ ಕಚೇರಿ ತೆರೆದುಕೊಂಡಿದ್ದಾರೆ. ಈ ನೆಲದ ಸಕಲ ಸವಲತ್ತು ಪಡೆದುಕೊಂಡ ಇವರು ಬರೆಯುವುದು ಮಾತ್ರ ಭಾರತ ವಿರೋಧಿ ವರದಿ, ಲೇಖನಗಳು.

ಭಾರತಕ್ಕೆ ಆಗಮಿಸುವ ಯಾವುದೇ ವಿದೇಶಿ ಪತ್ರಕರ್ತ ಈ ದೇಶದ ಬಗ್ಗೆ ಧಾರಾಳ ಪೂರ್ವಗ್ರಹ, ಸೀಮಿತ ತಿಳಿವಳಿಕೆ, ಸಂಕುಚಿತ ಮನೋಭಾವಗಳಿಂದಲೇ ಪದಾರ್ಪಣ ಮಾಡುತ್ತಾನೆ. ಆರ್ಯರು ಭಾರತದ ಮೇಲೆ ಆಕ್ರಮಣ ಮಾಡಿದರು, ಬಹುಸಂಖ್ಯಾ ಹಿಂದುಗಳು ಕೋಮುವಾದಿಗಳು, ಆಧುನಿಕ ಭಾರತದ ನಿರ್ಮಾತೃ ಜವಾಹರಲಾಲ್‌ ನೆಹರು, ಕಾಶ್ಮೀರದಲ್ಲಿ ನೆಲೆಸಿರುವವರು, ಕ್ರಿಶ್ಚಿಯನ್‌ರ ಮೇಲೆ ಸದಾ ಆಕ್ರಮಣ ನಡೆಯುತ್ತಿರುತ್ತವೆ. ಮುಂತಾದ ಅಂಶಗಳನ್ನೊಳಗೊಂಡ ಸಾಹಿತ್ಯಗಳನ್ನು ಓದುವ ಮೂಲಕವೇ ಭಾರತವನ್ನು (ತಪ್ಪು)ತಿಳಿದುಕೊಳ್ಳಲು ಆರಂಭಿಸುತ್ತಾರೆ.

ಈ ದೇಶ ವಿಶಾಲವಾದದ್ದು, ವೈವಿಧ್ಯಮಯವಾದದ್ದು. ಅನೇಕ ಮತ, ಧರ್ಮ, ಜಾತಿ, ನಂಬಿಕೆ, ಸಂಸ್ಕೃತಿ, ಆಚರಣೆಗಳಿರುವ ಭವ್ಯ ಪರಂಪರೆ, ಇತಿಹಾಸವಿರುವ ದೇಶ. ಮೊದಲ ತೆಕ್ಕೆಗೆ ಸಿಗುವಂಥದ್ದಲ್ಲ.

ಮೊದಲ ನೋಟಕ್ಕೆ ದಕ್ಕುವಂಥದ್ದಲ್ಲ. ಇವೆಲ್ಲ ಈ ದೇಶವಾಸಿಗಳಿಗೇ ಕಬ್ಬಿಣದ ಕಡಲೆಯಾಗಿರುವಾಗ ವಿದೇಶಿಯರಿಗೆ ಹೇಗೆ ಸುಲಭವಾಗಿ ಅರ್ಥವಾದೀತು? ಮನಸ್ಸು ಬಂದಾಗ ಹೆಂಡತಿ, ಗಂಡನನ್ನು ಬದಲಿಸುವ ಪಾಶ್ಚಿಮಾತ್ಯರಿಗೆ ಸತಿಪದ್ಧತಿ ಅರ್ಥವಾಗುವುದೇ ಇಲ್ಲ. ಆ ಪದ್ಧತಿ ಅಮಾನುಷವೆಂಬುದು ಬೇರೆ ಮಾತು. ಇಂಥ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಗಾಗಿ ಸ್ವಾಭಾವಿಕವಾಗಿ ನಮ್ಮ ಕುಲಬಾಂಧವರಾದ ಭಾರತೀಯ ಪತ್ರಕರ್ತರೆಡೆಗೆ ಹೊರಳುತ್ತಾರೆ. ದುರಂತ ಕಾದಿರುವುದೇ ಇಲ್ಲಿ. ಫ್ರಾಂಕ್ವಾ ಗಾಟಿಯೇ ಹೇಳುವಂತೆ Indian are often the worst enemies of their own country- they are more secular than the secular, more anti indian than its worst adversaries. ಉದಾಹರಣೆಗೆ ಫ್ರಂಟ್‌ಲೈನ್‌ ಆಂಗ್ಲ ಪಾಕ್ಷಿಕ. ಈ ಪತ್ರಿಕೆಯಂತೂ ಅಕ್ಷರಶಃ ಚೀನಾ ಮುಖವಾಣಿಯೇ. ಚೀನಾ ಕಮ್ಯುನಿಷ್ಟ್‌ ಪಾರ್ಟಿಯ ಅಭಿಪ್ರಾಯ, ಸಿದ್ಧಾಂತಗಳನ್ನೇ ಪ್ರತಿನಿಧಿಸುವ ಈ ಪತ್ರಿಕೆಯಿಂದ ಭಾರತ ಪರ ವಿಚಾರಗಳು ಹೇಗೆ ಧ್ವನಿಸಬಹುದು ಎಂಬುದು ಫ್ರಾಂಕ್ವಾ ಪ್ರಶ್ನೆ.

ದಿಲ್ಲಿಯ ಪತ್ರಕರ್ತರು, ರಾಜತಾಂತ್ರಿಕರು, ಬುದ್ಧಿಜೀವಿಗಳ ಸಾಂಗತ್ಯ ಹಾಗೂ ಇವರೊಂದಿಗೆ ರಾತ್ರಿ ಪಾರ್ಟಿಗಳಲ್ಲಿ ಒಡನಾಟದಲ್ಲಿಯೇ ಕಳೆಯುವ ಬಹುತೇಕ ವಿದೇಶಿ ಪತ್ರಕರ್ತರಿಗೆ ದಿಲ್ಲಿಯಾಚೆಗೂ ಭಾರತವಿದೆ ಹಾಗೂ ನಿಜವಾದ ಭಾರತವೇ ಅದು ಎಂಬುದು ಗೊತ್ತಾಗುವುದಿಲ್ಲ. ಇಲ್ಲಿರುವ ಮೂರ್ನಾಲ್ಕು ವರ್ಷಗಳಲ್ಲಿ ಅವರೇನಿದ್ದರೂ ಇಂಡಿಯಾಕ್ಕೆ ಬಂದು ಭಾರತವನ್ನು ನೋಡುವುದೇ ಇಲ್ಲ. ಅವರಿಗೆ ಇಂಡಿಯಾ ಅಂದ್ರೆ ಕೇವಲ ದಿಲ್ಲಿ. ದಕ್ಷಿಣ ಭಾರತದ ಯಾವ ವಿದ್ಯಮಾನಗಳೂ ಅವರನ್ನು ಆಕರ್ಷಿಸುವುದೇ ಇಲ್ಲ. ಕುಂಭಮೇಳದ ಮಹತ್ವವಾಗಲೀ, ಆಚರಣೆಯ ವಿಧಾನವಾಗಲಿ ಅರ್ಥವಾಗುವುದಿಲ್ಲ. Lakhs of people dip in a dirty water presuming it as a holy ಎಂದು ಅಪದ್ಧ ಬರೆಯುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ನದಿಗಿರುವ ಪಾವಿತ್ರ್ಯ ಗೊತ್ತಾಗದವರಿಗೆ ನದಿ ನೀರಿನ ಪುಣ್ಯಸ್ನಾನದ ಮಹತ್ವ ಅರ್ಥವಾಗುವುದಾದರೂ ಹೇಗೆ? ಹೀಗಾಗಿ ಪರಮ ಕೊಳಕ ಮಾತ್ರ ಗಂಗಾಸ್ನಾನ ಮಾಡಬಲ್ಲ ಅಥವಾ ಗಂಗೆಯನ್ನು ಮುಳುಕು ಹಾಕಿದವರೆಲ್ಲ ಪರಮ ಕೊಳಕರು ಎಂದು ಬರೆಯುತ್ತಾರೆ.

ಕಾಶ್ಮೀರಿ ಮುಜಾಹಿದೀನ್‌ಗಳಿಗೆ, ಅಲ್ಲಿನ ಭಯೋತ್ಪಾದಕರಿಗೆ ಪಾಕಿಸ್ತಾನ ತರಬೇತಿ, ಶಸ್ತ್ರಾಸ್ತ್ರ ಪೂರೈಕೆ ಹಾಗೂ ದುಡ್ಡು ಕಾಸು ನೀಡುತ್ತಿದೆಯೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತರಾಷ್ಟ್ರೀಯ ಭಯೋತ್ಪಾದನೆಗೂ ಪಾಕ್‌ ಕುಮ್ಮಕ್ಕು ನೀಡುತ್ತಿದೆಯೆಂಬುದು ವಿಶ್ವಕ್ಕೇ ಗೊತ್ತು. ಜಗತ್ತಿನಲ್ಲಿಯೇ ಅತಿ ಅಪಾಯಕಾರಿ ತಾಲಿಬಾನ್‌ಗಳಿಗೂ ಪಾಕ್‌ ಶ್ರೀರಕ್ಷೆ ಇದ್ದೇ ಇದೆ. ಆದರೆ ಕಾಶ್ಮೀರ ವಿಷಯಕ್ಕೆ ಬಂದಾಗ ಬಿಬಿಸಿ India says Pak is training Kashmiri militants an accusation which Islamabad refutes ಎಂದು ವರದಿ ಮಾಡುತ್ತದೆ.

ಕಾಶ್ಮೀರದಲ್ಲಿನ ಉಗ್ರಗಾಮಿಗಳ ಮೇಲೆ ಸೈನಿಕರು ದಾಳಿ ನಡೆಸಿದರೆ ಮಾನವ ಹಕ್ಕು ಆಯೋಗಕ್ಕೆ ಗುಂಡಿನ ಸದ್ದು ಕೇಳಿಸುತ್ತಿದೆಯೇ ಎಂದು ಬರೆಯುವ ವಿದೇಶಿ ವರದಿಗಾರರು- ಲಕ್ಷಾಂತರ ಟಿಬೆಟಿಯನ್‌ರನ್ನು ನಿರ್ದಯವಾಗಿ ಕೊಂದು ಹಾಕಿದ, ಪಾಕಿಸ್ತಾನಕ್ಕೆ ಗುಟ್ಟಾಗಿ ಅಣುತಂತ್ರಜ್ಞಾನ ರವಾನಿಸಿದ, ಭಾರತದ ಗಡಿಯನ್ನು ದಾಟಿ ನೆಲ ನುಂಗಿದ ಚೀನಾವನ್ನು ಆಧುನಿಕ, ಪ್ರಗತಿಪರ ದೇಶ ಎಂಬಂತೆ ಬಿಂಬಿಸುತ್ತಾರೆ.

ಕೊಸೋವಾದಲ್ಲಿನ ವಿದ್ಯಮಾನಗಳನ್ನು ಬಿಬಿಸಿ ಹೇಗೆ ವರದಿ ಮಾಡುತ್ತವೆಂಬುದನ್ನು ಗಮನಿಸಿ. ಸೆರ್ಬಿಯನ್‌ರು ನಡೆಸುತ್ತಿರುವ ಅವ್ಯಾಹತ ನರಮೇಧದ ಬಗ್ಗೆ ಹೇಳುವುದೇ ಇಲ್ಲ. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಬೋಸ್ನಿಯಾದಲ್ಲಿನ ಮುಸ್ಲಿಮರು ನಾರಿkುಗಳ ಜತೆಗೂಡಿ ಸಾವಿರಾರು ಅಮಾಯಕ ಸೆರ್ಬಿಯನ್‌ರನ್ನು ಕೊಂದು ಹಾಕಿದ್ದನ್ನು ಬುದ್ಧ್ಯಾಪೂರ್ವಕವಾಗಿ ಮರೆತುಬಿಡುತ್ತದೆ. ಕಾಶ್ಮೀರದಲ್ಲಿ ಲಕ್ಷಾಂತರ ಮೂಲವಾಸಿ ಪಂಡಿತರು ಮನೆಮಠ ತೊರೆಯುವಂತಾದಾಗ, ಸಾವಿರಾರು ಹಿಂದುಗಳ ಹತ್ಯೆಯಾದಾಗ, ಪಾಕ್‌ ಸೈನಿಕರು ಲೆಫ್ಟಿನೆಂಟ್‌ ಅಹುಜಾರನ್ನು ಪೈಶಾಚಿಕವಾಗಿ ಕೊಲೆ ಮಾಡಿದಾಗ, ನೂರಾರು ದೇವಾಲಯಗಳು ಧ್ವಂಸವಾದಾಗ ಅವ್ಯಾವವೂ ವಿದೇಶಿ ಪತ್ರಿಕೆಗಳಲ್ಲಿ ವರದಿಯಾಗುವುದೇ ಇಲ್ಲ. ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಈ ಎಲ್ಲ ಘಟನೆಗಳನ್ನು ನೆನಪಿಟ್ಟುಕೊಂಡು ಮರೆತುಬಿಡುತ್ತದೆ! ಇರಾಕ್‌ ನೆಲದಲ್ಲಿ ಅಮೆರಿಕ ಸೈನಿಕರು ದಾಂಧಲೆ ಎಬ್ಬಿಸಿದರೆ, ಮಾಡಬಾರದ ಅಕೃತ್ಯಗಳನ್ನೆಸಿಗಿದರೆ, ಬೀದಿಬೀದಿಗಳಲ್ಲಿ ಹೆಂಗಳೆಯರನ್ನು ಮಾನಭಂಗ ಮಾಡಿದರೆ, ಮನಬಂದಂತೆ ಗುಂಡು ಹಾರಿಸಿ ನಿಷ್ಪಾಪಿಗಳನ್ನು ಕೊಂದು ಹಾಕಿದರೆ, ಮನಬಂದಂತೆ ಗುಂಡು ಹಾರಿಸಿ ನಿಷ್ಪಾಪಿಗಳನ್ನು ಕೊಂದು ಹಾಕಿದರೆ,ಜೈಲಿನಲ್ಲಿನ ಕೈದಿಗಳಿಗೆ ಕ್ರೂರ ಹಿಂಸೆ ನೀಡಿದರೆ ಅದು ಅಮೆರಿಕ ಪತ್ರಿಕೆಗಳಲ್ಲಿ ವರದಿಯಾಗುವುದೇ ಇಲ್ಲ. ಹೇಗಿದೆ ತಮಾಷೆ?

ಭಾರತವನ್ನು ತೃತೀಯ ಜಗತ್ತಿನ ದೇಶ ಎಂದು ಮೂದಲಿಸುವ, ದಾರಿದ್ರ್ಯ, ನಿರುದ್ಯೋಗ ಪೀಡಿದರೆ ಬೆಂಗಾಡು ಎಂದು ಜರೆಯುವ ಈ ವಿದೇಶಿ ಪತ್ರಕರ್ತರು ನಿರಂತರವಾಗಿ ನಮ್ಮ ದೇಶದ ಮೇಲೆ, ನಮ್ಮ ನೆಲದಲ್ಲಿಯೇ, ನಮ್ಮ ಮುಂದೇ ನಿಂತು ದಾಳಿ ಮಾಡುತ್ತಿದ್ದರೂ ನಾವು ಅದನ್ನು ಕಂಡು ಅಸಹಾಯಕರಾಗಿ ನೋಡುತ್ತಿದ್ದೇವೆ. ಇದೊಂದು ರೀತಿಯಲ್ಲಿ ನಮ್ಮ ಮುಂದೆ ನಡೆಯುತ್ತಿರುವ ನಿತ್ಯ ಆಕ್ರಮಣ. ಸೋನಿಯಾ ಗಾಂಧಿಯವರನ್ನು ಮಹಾತ್ಮಾಗಾಂಧೀಜಿ ಮೊಮ್ಮಗಳು ಎಂದು ಬರೆಯುವ, ಸ್ವದೇಶಿ ಚಿಂತನೆ ದೇಶದ ಪ್ರಗತಿಗೆ ಮಾರಕವೆಂದು ಷರಾ ಗೀಚುವ ಈ ವಿದೇಶಿ ಪತ್ರಕರ್ತರಿಗೆ ಪಾಠ ಮಾಡುವವರಾರು? ಭಾರತದ ಬಡತನವನ್ನೇ ಮಾನವ ಆಸಕ್ತ ವರದಿಗಳನ್ನಾಗಿಸಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಹಣ ಮಾಡಿಕೊಳ್ಳುವ ಈ ವಿದೇಶಿ ಪತ್ರಕರ್ತರ ದಾಂಧಲೆ ನಿಯಂತ್ರಿಸುವುದು ಹೇಗೆ?

ಯಾಕೋ ಕೊನೆಯಲ್ಲಿ ಫ್ರಾಂಕ್ವಾ ಗಾಟಿಯೇ ಸುಮ್ಮನಾದರು. ಅವರೂ ಉತ್ತರವನ್ನು ಹುಡುಕುತ್ತಿದ್ದಾರೆನಿಸಿತು.

(ಸ್ನೇಹಸೇತು: ವಿಜಯಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more