• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಥ ಪ್ರತಿ ಜಾಹೀರಾತಿನ ಹಿಂದೆಯೂ ಒಂದು ಕರುಣ ಕಥೆ ಇರುತ್ತದೆ!

By * ವಿಶ್ವೇಶ್ವರ ಭಟ್
|

ಮನೆ ಮಾರಾಟಕ್ಕಿದೆ! "

ಇಂಥ ಜಾಹೀರಾತುಗಳು ಪ್ರತಿದಿನ ಪತ್ರಿಕೆಯಲ್ಲಿ ಕಾಣಿಸುತ್ತವೆ. ಅದರಲ್ಲೇನೂ ವಿಶೇಷವಿಲ್ಲ. ಆದರೆ ಪ್ರತಿ ಜಾಹೀರಾತೂ ಕೂಡ ಒಂದು ಕತೆಯನ್ನು, ನೋವಿನ ಗಾಥೆಯನ್ನು, ಸಂಕಟದ ಕೈಫಿಯತ್ತನ್ನು ತನ್ನೊಳಗೇ ಸಣ್ಣಗೆ ಹೇಳುವುದು ನಮಗೆ ಕೇಳಿಸುವುದಿಲ್ಲ. ಮಗಳ ಮದುವೆಗೆ, ಮಗನ ಓದಿಗೆ, ಹೆಂಡತಿ ಆಸ್ಪತ್ರೆ ಖರ್ಚಿಗೆ, ಮಾಡಿದ ಸಾಲಕ್ಕೆ, ವ್ಯವಹಾರದಲ್ಲಾದ ಸಾಲಕ್ಕೆ ಹಣ ಕೂಡಿಸುವ ಜರೂರತ್ತು ಎದುರಾದಾಗ ಮನೆಯೆಂಬ ಸರ್ವಸ್ವ ಬಿಕರಿಗೆ ಬಿದ್ದಿರುತ್ತದೆ. ಈ ಜೀವನದಲ್ಲಿ ದುಡಿದ ಹಣವನ್ನೆಲ್ಲ ಸೇರಿಸಿ, ಸಾಲಸೋಲ ಮಾಡಿ ಪ್ರೀತಿಯಿಂದ, ಕಳಕಳಿಯಿಂದ ಕಲ್ಪಿಸಿಕೊಂಡ ಖಾಸಗಿ ಪ್ರಪಂಚವೆಂಬ ಮನೆ ಮಾರಾಟದ ವಸ್ತುವಾಗುವಾಗ ಅದನ್ನು ಕಟ್ಟಿಸಿದವನ ಕರುಳಿಗೆ ಮೆಣಸು ಹಾಕಿ ಕುಟ್ಟಿದಂತಾಗುತ್ತದೆ. ಹೀಗಾಗಿ ಇಂಥ ಪ್ರತಿ ಜಾಹೀರಾತು ಕಾಣಿಸಿಕೊಂಡಾಗಲೂ ನೋವಿನಿಂದ, ವಿಷಾದದಿಂದ ಕರುಳು ನೆಟ್ಟಿಗೆ ಮುರಿದು ಕುಳುಕುಳು ಅನ್ನುತ್ತದೆ.

'ಮನೆ ಮಾರಾಟಕ್ಕಿದೆ"ಯೆಂಬ ಆ ಜಾಹೀರಾತೊಂದನ್ನು ನೋಡಿದಾಗಲೂ ಅನಿಸಿದ್ದು ಅದೇ.

ಈಗಿನ ತಲೆಮಾರಿನ ಹಿಂದಿ ಚಿತ್ರಪ್ರೇಮಿಗಳಿಗೆ ಸಿ.ರಾಮಚಂದ್ರ ಅಂದ್ರೆ 'ಯಾರು ಅಂತ ಕೇಳುವುದಿಲ್ಲ. ಹಾಗಂದ್ರೆ ಏನು" ಅಂತ ಕೇಳುತ್ತಾರೆ. ಅದರಲ್ಲೂ ಚಿತಲ್ಕರ್‌ ರಾಮಚಂದ್ರ ಅಂದ್ರೆ, ಗೊತ್ತಾ ಅಂತ ಕೇಳಿದ್ರೆ, 'ಹೌದು ಎಲ್ಲೋ ಕೇಳಿದ ಹಾಗಿದೆ. ಅವರೇನಾದ್ರೂ ಸೈಕಲ್‌ ಬ್ರ್ಯಾಂಡ್‌ ಊದಿನ ಕಡ್ಡಿ ಮಾರಾಟಗಾರರಾಗಿದ್ದರಾ?" ಎಂದು ಹೇಳಬಹುದು. ಹೌದು, ಕುಛ್‌ ಕುಛ್‌ ಹೋತಾ ಹೈ, ಕಭಿ ಡಿಸ್ಕೋ ಮೇ ಜಾಯೇ.... ಧಕ್‌ ಧಕ್‌ ಕರನೇ ಲಗಾ...

Music Director C. Ramachandraಹಾಡುಗಳನ್ನು ಕೇಳುವವರಿಗೆ ಚಿರತ್ಕಲ್‌ ರಾಮಚಂದ್ರ ಎಂಬ ಹಿಂದಿ ಚಿತ್ರರಂಗದ ಧೀಮಂತ, ಅಪರೂಪದ, ಸಂಗೀತ ನಿರ್ದೇಶಕ, ಗೀತ ರಚನಕಾರ ಹಾಗೂ ಹಾಡುಗಾರನ ನೆನಪಾಗಲಿ, ಗುರುತು ಪತ್ತೆಯಾಗಲಿ ಹೇಗೆ ಸಿಗಬೇಕು? ಚಿರತ್ಕಲ್‌ ರಾಮಚಂದ್ರ ನಮ್ಮ ನೆನಪಿನಿಂದ ಯಾವ ಪರಿ ಜಾಗ ಕಿತ್ತುಕೊಂಡು ಪರಾರಿಯಾಗಿದ್ದಾನೆ ಅಂದರೆ, ಈಗ ಅವನ ಹೆಸರನ್ನು ಹೇಳಿದರೆ ಅಂಥ ಒಬ್ಬ ವ್ಯಕ್ತಿ ಬದುಕಿದ್ದನಾ ಅಂತ ಕೇಳುವಂತಾಗಿದೆ. ಒಂದು ವ್ಯಕ್ತಿತ್ವ ಹೇಗೆ ನಿರ್ದಯವಾಗಿ ಮನಸ್ಸಿನಿಂದ ಅಳಿಸಿಹೋಗುತ್ತದೆಂಬುದಕ್ಕೆ ಈತನೇ ಸಾಕ್ಷಿ. ಹಳೆಯ ಹಾಡುಗಳ ಕದ ತೆರೆದುಕೊಂಡು ಮನಸ್ಸನ್ನು ಅಂಗಾತವಾಗಿ ಹರಡಿಕೊಂಡು ಕುಳಿತಾಗಲೂ ಚಿತಲ್ಕರ್‌ ಎಂಬ ಚಿತ್ತಾಕರ್ಷಕ ಹಾಡುಗಳನ್ನು ಬರೆದವನ, ಹಾಡಿದವನ ಚಿತ್ರಣ ಕಿಂಚಿತ್ತಾದರೂ ಕಣ್ಮುಂದೆ ಬರುವುದಿಲ್ಲ.

ಅದ್ಯಾವ ಗಳಿಗೆಯಲ್ಲಿ ಈತ ಹಿಂದಿ ಚಿತ್ರರಂಗ ಪ್ರವೇಶಿಸಿದನೋ ಏನೋ? ಪ್ರಸಿದ್ಧಿ, ಹಣ, ಘನತೆ, ಗೌರವ, ಸ್ಥಾನಮಾನ ಎಲ್ಲವೂ ರಾಮಚಂದ್ರನಿಗೆ ವರಾತವಿಲ್ಲದೇ ಬಂದವು. ಆದರೆ ಇವೆಲ್ಲವೂ ಅಷ್ಟೇ ಅನಾಯಾಸವಾಗಿ ಹೊರಟು ಹೋದವು. ಅವು ಹೇಗೆ ಹೊರಟು ಹೋದವೆಂದು ವಾಪಸು ಬರುವ ಸುಳಿವನ್ನೂ ಸಹ ಕೊಡದೇ.

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿ ಪುಟ್ನಾಟಂಬೆ ಎಂಬ ಪುಟ್ಟ ಹಳ್ಳಿಯಾಂದಿದೆ. ಭೂಪಟದ ಮೇಲೆ ಸಹ ಕಾಣಿಸಿಕೊಳ್ಳಲು ಲಾಯಕ್ಕಲ್ಲದ ಹಳ್ಳಿಯದು. ಆ ಊರಲ್ಲಿ ರಾಮಚಂದ್ರ ಹುಟ್ಟಿದ್ದು (1917). ಹುಟ್ಟಿನೊಂದಿಗೆ ಬಂದ ಬಡತನ. ಅಣ್ಣಂದಿರು ತಮ್ಮಂದಿರು ಕಾಯಿಲೆ ಪೀಡಿತರು. ಇಬ್ಬರಿಗೆ ಫೋಲಿಯೋ. ರಾಮಚಂದ್ರನೇ ಇದ್ದುದರಲ್ಲಿ ಸುಬಗ. ಶಾಲೆಗೆ ಹೋಗು ಎಂದರೆ ಬೆಟ್ಟದ ಮೇಲೆ ಕುಳಿತು ದಿನವೆಲ್ಲಾ ಹಾಡುತ್ತ ಕುಳಿತುಬಿಡುತ್ತಿದ್ದ. ಈತನ ಸಂಗೀತದ ಗೀಳನ್ನು ಕಂಡು ಸೋದರಮಾವ ಪೂಣಾದಲ್ಲಿದ್ದ ಪಂಡಿತ ವಿನಾಯಕ ಬುವಾ ಪಟವರ್ಧನ್‌ ಅವರ ಬಳಿ ಸೇರಿಸಿದ. ಅನಂತರ ನಾಗಪುರಕ್ಕೆ ಹೋಗಿ ಪಂಡಿತ್‌ ಶಂಕರ್‌ ರಾವ್‌ ಸಪ್ರೆ ಅವರನ್ನು ಸೇರಿಕೊಂಡ. ಹಾಡು ಹಾಗೂ ಹಾರ್ಮೋನಿಯಂ ಸಂಗಾತಿಗಳಾದವು. ಕಂಪನಿ ನಾಟಕಗಳಲ್ಲಿ ರಾಮಚಂದ್ರನಿಗೆ ಭಾರೀ ಬೇಡಿಕೆ ಇತ್ತು. ಹಾಡು ಬರೆಯುವುದರಲ್ಲಿ ಹಾಗೂ ರಾಗ ಸಂಯೋಜಿಸುವುದೆಂದರೆ ರಾಮಚಂದ್ರನಿಗೆ ಸಸ್ತಾ ಸಲೀಸು. ಎಲ್ಲ ಊರುಗಳಲ್ಲೂ ಈತನಿಗೆ ಮನ್ನಣೆ. ಬಹುಬೇಗ ಅವನ ಖ್ಯಾತಿ ಮುಂಬಯಿಯ ಚಿತ್ರರಂಗದ ಹೆಬ್ಬಾಗಿಲ ತನಕ ತಲುಪಿತು.

ಮೊದಲ ಬಾರಿಗೆ ಉದ್ಯೋಗ ಕೇಳಿಕೊಂಡು ಮುಂಬೈಗೆ ಬಂದಾಗ ನಟ-ನಿರ್ದೇಶಕ ಭಗವಾನ್‌, ರಾಮಚಂದ್ರನನ್ನು ಕಂಡು, ಅವನ ಖದರನ್ನು ನೋಡಿ, ಯಾವ ರೀತಿಯ ಪಾತ್ರಗಳಲ್ಲಿ ಅಭಿನಯಿಸುತ್ತೀ ಎಂದು ಕೇಳಿದ್ದರಂತೆ. ಪಟ್ಟಾದ ಕ್ರಾಪು, ಕರ್ಚೀಫು ಸುತ್ತಿದ ಕೊರಳು, ಟಕಟಕ ಓಡಾಟ, ಪಟಪಟ ಮಾತು, ಲಕಲಕ ಕಂಗಳನ್ನು ಕಂಡ ಭಗವಾನ್‌ಗೆ ರಾಮಚಂದ್ರನೊಬ್ಬ ನಟನ ಪಾತ್ರ ಬಿಟ್ಟು ಸಂಗೀತ ನಿರ್ದೇಶಕನ ಕೆಲಸ ಕೇಳಿಕೊಂಡು ಬಂದಾಗ ಅಚ್ಚರಿಯಾಗಿತ್ತು. ಅವರು ತಮ್ಮ ಸುಖೀ ಜೀವನ ಚಿತ್ರಕ್ಕೆ ರಾಮಚಂದ್ರನನ್ನು ಸೇರಿಸಿಕೊಂಡರು. ಡಾ. ಇಕ್ಬಾಲ್‌ರ 'ಸಾರೇ ಜಹಾನ್‌ ಸೆ ಅಚ್ಛಾ... " ಹಾಡಿದರೂ ಈ ಚಿತ್ರ ಫ್ಲಾಪ್‌ ಆಯಿತು. ಯಾಕೋ ಮೊದಲ ಸಿನಿಮಾ ತೋಪಾದಾಗ ರಾಮಚಂದ್ರನನ್ನು ಎರಡು ವರ್ಷ ಯಾರೂ ಕತ್ತೆತ್ತಿ ನೋಡಲಿಲ್ಲ. ಮುಂಬೈ ಜೀವನ ಹಿಡಿಸಲಿಲ್ಲ. ಹೇಳದೇ ಕೇಳದೇ ಎರಡು ವರ್ಷ ಚೆನ್ನೈಗೆ ಹೋಗಿ ತಮಿಳು ಚಿತ್ರರಂಗ ಸೇರಿಕೊಂಡ. ಅಲ್ಲೂ ಅಂಥ ಯಶಸ್ಸೇನೂ ಸಿಗಲಿಲ್ಲ.

ಖ್ಯಾತ ಸಂಗೀತ ನಿರ್ದೇಶಕ ಮೀರ್‌ ಸಾಹಿಬ್‌ ಮುಂಬೈಗೆ ಕರೆದುಕೊಂಡು ಬರದಿದ್ದರೆ ರಾಮಚಂದ್ರ ಯಾವ ವನವಾಸ ಸೇರುತ್ತಿದ್ದನೋ ಏನೋ? 'ಲಾಲ್‌ ಹವೇಲಿ" ಚಿತ್ರದಲ್ಲಿ ತಮ್ಮ ಸಹಾಯಕನನ್ನಾಗಿ ಸೇರಿಸಿಕೊಂಡರು. ಈ ಚಿತ್ರಕ್ಕೆ ಹಾಡಿದ ನೂರ್‌ ಜಹಾನ್‌ ಜತೆ ಪ್ರೀತಿ, ಸುತ್ತಾಟ ಶುರುವಾಯಿತು. ಮೂಲತಃ ಶ್ರೀಮಂತೆಯಾಗಿದ್ದ ನೂರ್‌ ಜಹಾನ್‌ ಬರುಬರುತ್ತಾ ಪ್ರೀತಿಯ ಸೋಗಿನಲ್ಲಿ ಜವಾನನಂತೆ ನಡೆಸಿಕೊಳ್ಳುವುದು ಗೊತ್ತಾದಾಗ ರಾಮಚಂದ್ರನ ಪ್ರೀತಿಯ ಕನ್ನಡಿ ಚೂರುಚೂರಾಗಿತ್ತು. ಈ ಮಧ್ಯೆ ಆಕೆ ಬೇರೆಯಾಬ್ಬನ ಜತೆಯಲ್ಲಿ ಪಾಕಿಸ್ತಾನಕ್ಕೆ ಹೋಗಿಬಿಟ್ಟಳು! ರಾಮಚಂದ್ರ ನಿಜಕ್ಕೂ ಕಂಗಾಲಾಗಿದ್ದ. ಜೀವನ ಬಹಳ ಬೇಗನೆ ವಿಷಾದ, ಸೋಲು, ಅವಮಾನಗಳ ಪಾಠಗಳನ್ನು ಬೋಧಿಸಿತ್ತು. ನಾಗಪುರಕ್ಕೆ ಹೋಗಿ ಲಾಡ್ಜ್‌ವೊಂದರಲ್ಲಿ ಮ್ಯಾನೇಜರ್‌ ಆಗಿ ಸೇರಿಕೊಂಡ. ಮುಂಬೈ ಚಿತ್ರರಂಗದ ಕಡೆ ಮಣ್ಣು ಸೋಕಿ ಸ್ವಾಟೆ ತಿರುವಿ ಹಾರ್ಮೋನಿಯಂ ಪೆಟ್ಟಿಗೆಯನ್ನು ಅಟ್ಟಕ್ಕೆ ಹಾಕಿ ಉಳಿದುಬಿಟ್ಟ.

ಅಲ್ಲಿಗೆ ಚಿತ್ರರಂಗದ ಗೀಳು, ಸಂಬಂಧದ ಗೀಳು, ಸಂಬಂಧ ತೀನತೇರಾ ಆಗಿ ಮುರಿದುಬಿತ್ತು ಎಂದೇ ಎಲ್ಲರೂ ಭಾವಿಸಿದ್ದರು. ರಾಮಚಂದ್ರ ಇದ್ದ ಲಾಡ್ಜ್‌ಗೆ ಮೀರ್‌ ಸಾಹಿಬ್‌ ಉಳಿದುಕೊಳ್ಳಲು ಬಂದ. ನೋಡಿದರೆ ಗಲ್ಲದ ಮೇಲೆ ರಾಮಚಂದ್ರ ಕುಳಿತಿದ್ದಾನೆ. ಅದೇ ಕ್ಷಣಕ್ಕೆ ಅವನನ್ನು ಅಲ್ಲಿಂದ ಎಬ್ಬಿಸಿಕೊಂಡು ಮುಂಬೈಗೆ ಬಂದ. ಸ್ವತಂತ್ರ ಸಂಗೀತ ನಿರ್ದೇಶಕನಾಗಲು ಅವಕಾಶ ಕೊಟ್ಟ. 'ದಿಲ್‌ ಕಿ ಬಾತ್‌" ಚಿತ್ರಕ್ಕೆ ರಾಮಚಂದ್ರನದೇ ಸಂಗೀತ. ಚಿತ್ರ ಗೆದ್ದಿತು. ಸಾಲಲ್ಲಿಯೇ ಮೂರು ಚಿತ್ರಗಳಿಗೆ ಅವಕಾಶ ಸಿಕ್ಕಿತು. ಒಂದು ವರ್ಷದಲ್ಲಿ ರಾಮಚಂದ್ರನ ಅದೃಷ್ಟ ಬದಲಾಗಿಬಿಟ್ಟಿತು.

ಸರಗಮ್‌ ಚಿತ್ರದಲ್ಲಿ ರಾಮಚಂದ್ರನಿಗೆ ಲತಾ ಮಂಗೇಶ್ಕರ್‌ ಜತೆ ಅವಕಾಶ. 'ವೋ ಹಮ್ಸೇ ಛುಪ್‌ ಹೈ" ಹಾಡು ಹಿಟ್‌ ಆಯಿತು. 'ಸಿಫಾ ಹಿಯಾ" ಚಿತ್ರದಲ್ಲಿ ಲತಾ ಜತೆ ಆಂಕ್‌ ಅಬ್‌ ನ ರೋನಾ, 'ಅಜಾದ್‌" ನಲ್ಲಿ ಕಿತ್ನಾ ಹಸೀನಾ ಹೈ ಮೌಸಂ, 'ಅಲಬೇಲಾ" ದಲ್ಲಿ ಮೆರೆ ದಿಲ್‌ ಕಿ ಗಾಡಿ ಕರೆ ಟಿಕ್‌ ಟಿಕ್‌ ಟಿಕ್‌... ಹಾಡಂತೂ ದೇಶಾದ್ಯಂತ ಎಲ್ಲರ ಬಾಯಲ್ಲೂ ಗುನುಗುವಂತಾಯ್ತು.

ಈ ಮಧ್ಯೆ ರಾಮಚಂದ್ರ ಶೆಹನಾಯ್‌, ಹಂಗಾಮಾ, ಸಮಾಧಿ, ಸಂಗೀತಾ, ಪತಂಗ್‌, ಸಾಖ್‌, ಅನಾರ್ಕಲಿ, ಪೆಹಲಿ ಝಲಕ್‌, ಮೀನಾರ್‌, ನಾಸ್ತಿಕ್‌, ತಲ್ಲಾಖ್‌, ಬಾರಿಷ್‌, ಸುಬಹ ಕಾ ತಾರಾ, ಇನ್‌ಸಾನ್‌ ಜಾಗ್‌ ಉಠಾ, ನವರಂಗ್‌, ಸ್ತ್ರೀ, ಬಹುರಾಣಿ, ಜಿಂದಗಿ ಔರ್‌ ಮೌತ್‌ ಮುಂತಾದ ಚಿತ್ರಗಳಿಗೆ ಹಾಡು ಬರೆದ. ರಾಗ ಸಂಯೋಜಿಸಿದ. ಲತಾ, ಶಮಶಾದ್‌ ಬೇಗಂ, ಆಶಾ ಭೋಸ್ಲೆ ಮುಂತಾದವರ ಜತೆ ನಿಂತು ಹಾಡಿದ. ಹೇಮಂತ್‌, ತಲತ್‌ ಮೆಹಮೂದ್‌, ರಫಿ, ಮನ್ನಾಡೇ, ಮಹೇಂದ್ರ ಕುಮಾರ್‌ ಅವರನ್ನು ಚಿತ್ರಗಳಿಗೆ ದುಡಿಸಿಕೊಂಡ. ಈ ಹೊತ್ತಿಗೆ ಹಿಂದಿ ಚಿತ್ರರಂಗದಲ್ಲಿ ರಾಮಚಂದ್ರನಿಗೆ ಶಾಶ್ವತ ಸ್ಥಾನ ಸಿಕ್ಕಿತು. 'ಸರಗಮ್‌" ಚಿತ್ರ ದೇಶಾದ್ಯಂತ ಹಿಟ್‌ ಆದಾಗ ಪ್ರೀತಿಯಿಂದ ಕಟ್ಟಿಸಿದ ಮನೆಗೆ 'ಸರಗಮ್‌" ಎಂದು ಹೆಸರಿಟ್ಟ! ಐವತ್ತರ ದಶಕದಲ್ಲಿ ಭಾರೀ ಬೇಡಿಕೆಯಲ್ಲಿರುವ ವ್ಯಕ್ತಿಯಾಗಿದ್ದ. ಚಿತ್ರ ನಟ, ನಟಿಯರು ರಾಮಚಂದ್ರನನ್ನು ಪಕ್ಕಕ್ಕೆ ಇಟ್ಟುಕೊಳ್ಳುತ್ತಿದ್ದರು. ಒಂದೆರಡು ವಾರಗಳಲ್ಲಿ ಇಡೀ ಚಿತ್ರಕ್ಕೆ ಸಂಗೀತ ಮುಗಿಸಿಕೊಡುತ್ತಿದ್ದುದರಿಂದ ಅವನಿಗೆ ಯಾರಿಗೂ ಇಲ್ಲದ ಕಿಮ್ಮತ್ತು . ಇಲ್ಲಿ ತನಕ ಎಲ್ಲವೂ ಚೆನ್ನಾಗಿತ್ತು.

ಆದರೆ ವಿಧಿ ಬೇರೆಯ ಹಾಡಿಗೆ ರಾಗ ಸಂಯೋಜಿಸುತ್ತಿದ್ದ. ಕರೆದಾಗ ಬರುತ್ತಿದ್ದ ಲತಾ, ರಾಮಚಂದ್ರನಿಗೆ ಮುಖಕ್ಕೆ ಹೊಡೆಯುವಂತೆ ಒಲ್ಲೆ ಎನ್ನತೊಡಗಿದಳು. ರಾಮಚಂದ್ರ ಬರೆದ ತೇರೆ ಫೂಲೋಂ ಸೆ ಭಿ ಪ್ಯಾರ್‌, ತುಂ ಕ್ಯಾ ಜಾನು ತುಹ್ಮಾರಿ ಯಾದ್‌ ಮೇ, ಬಲ್ಮಾ ಬಡಾ ನಾದಾನ್‌ ರೇ ಮುಂತಾದ ಜನಪ್ರಿಯ ಹಾಡುಗಳನ್ನು ಹಾಡಿದ ಲತಾ-ರಾಮಚಂದ್ರ ಸ್ನೇಹ, ವ್ಯವಹಾರ ಮುರಿದು ಬಿದ್ದಿತ್ತು. ಒಂದು ಹಂತದಲ್ಲಿ ಲತಾಳಿಂದ ರಾಮಚಂದ್ರನ ಚಾರಿತ್ರ್ಯ ವಧೆಯೂ ನಡೆಯಿತು. ರಾಮಚಂದ್ರನಿಗೆ ಘಟಾನುಘಟಿ ಹಾಡುಗಾರರು ಬೆನ್ನು ತಿರುಗಿಸತೊಡಗಿದರು. ಚಿತ್ರರಂಗದಲ್ಲಿ ಇಂಥ ಒಂದು ಸಣ್ಣ ಗಾಳಿ ಹುಟ್ಟಿಕೊಂಡರೆ ಅದು ಹೊರಬೀಳುವಾಗ ಸುಂಟರಗಾಳಿಯಾಗಿಬಿಡುತ್ತದೆ. ಹದಿನೈದು ವರ್ಷಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಎಲ್ಲರ ಕಣ್ಮಣಿಯಾಗಿದ್ದ ರಾಮಚಂದ್ರನಿಗೆ ಆರೇಳು ತಿಂಗಳಲ್ಲಿ ಅರ್ಧಚಂದ್ರ!

ಚಿತ್ರರಂಗದಲ್ಲಿ ಕೀರ್ತಿಶಿಖರವೇರಿದವರು ಪಾತಾಳಕ್ಕೆ ಬಿದ್ದರೆ ಅವರ ಮನೆಯ ಮೇಲೆ ಕಾಗೆಯೂ ಕುಂತು ಕೂಗುವುದಿಲ್ಲ. ಅದಕ್ಕೂ ಮನೆಯ ಮಾಲೀಕನ ಯೋಗ್ಯತೆ ಗೊತ್ತಾಗಿರುತ್ತದೆ. ನಾಲ್ಕೈದು ವರ್ಷ ಕೆಲಸವಿಲ್ಲದೇ ಖಾಲಿ ಕುಳಿತ. ನಿಧಾನವಾಗಿ ಕಾಯಿಲೆಗಳು ಕುಳಿತುಕೊಳ್ಳಲಾರಂಭಿಸಿದವು. ್ತ ದೈನಂದಿನ ಬದುಕು, ಮಗಳ ಮದುವೆ, ವ್ಯಾವಹಾರಿಕ ನಷ್ಟ, ಸಾಂಸಾರಿಕ ತಾಪತ್ರಯಗಳು ಅವನನ್ನು ಹಿಂಸಿಸಲಾರಂಭಿಸಿದವು. ಜೀವನ ನಿರ್ವಹಣೆ ದುಸ್ತರವಾಯಿತು. ಮುಂಬೈ ಮನೆ ಖಾಲಿ ಮಾಡಿ ಬಾಡಿಗೆಗೆ ಕೊಟ್ಟು ಪೂನಾದ ಡೆಕ್ಕನ್‌ ಜಿಮುಖಾನ ಪ್ರದೇಶದಲ್ಲಿ ಬಾಡಿಗೆ ಮನೆಯಾಂದನ್ನು ಹಿಡಿದು ಹಾರ್ಮೋನಿಯಂ ಪೆಟ್ಟಿಗೆಯಿಂದ ತುತ್ತಿನ ಪೆಟ್ಟಿಗೆ ತುಂಬುತ್ತಿರಲಿಲ್ಲ. ಆದರೆ ಬಡ ಪೆಟ್ಟಿಗೆಯ ತುಂಬಾ ಸಾಲ!

ಸಾಲಗಾರರು ಮನೆಮುಂದೆ ಬಂದು ರಂಪ ಮಾಡುವುದು ದೈನಂದಿನ ಕಾಯಕವಾದಾಗ ಬೇರೆ ದಾರಿ ಕಾಣದೇ ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದ. ಹಾಗೆಂದು ಪತ್ರಿಕೆಗೆ ಜಾಹೀರಾತು ಕೊಟ್ಟಿದ್ದ- 'ಮನೆ ಮಾರಾಟಕ್ಕಿದೆ. ಸಂಪರ್ಕಿಸಿ-ಚಿತಲ್ಕರ್‌ ರಾಮಚಂದ್ರ".

ಮುಂಬೈನ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದಿನ ಸಂಚಿಕೆಯ ತುಣುಕೊಂದರಲ್ಲಿ ಕಾಣಿಸಿಕೊಂಡ ಈ ಜಾಹೀರಾತನ್ನು ಕಂಡಾಗ ಮನಸ್ಸಿನ ಕೊನೆ ಕೋಣೆಯಿಂದ ಎದ್ದು ಹೋದ ಚಿತಲ್ಕರ್‌ ರಾಮಚಂದ್ರನೆಂಬ ಅಸಾಧ್ಯ ವ್ಯಕ್ತಿ ಮತ್ತೆ ಮನದಂಗಳದಲ್ಲಿ ನಿಂತಿದ್ದ.

ಏಕೋ 'ಬಹುರಾಣಿ " ಚಿತ್ರಕ್ಕೆ ರಾಮಚಂದ್ರ ಬರೆದ ಲತಾ-ಹೇಮಂತ್‌ ಹಾಡಿದ 'ಉಮ್ರ ಹುಯಿ ತುಮ್ಸೇ ಮಿಲೇ, ಫಿರ್‌ ಭೀ ಜಾನೇ ಕ್ಯೋಂ" (ನಿನ್ನನ್ನು ಭೇಟಿಯಾಗದೇ ಅನೇಕ ವರ್ಷಗಳಾದವು, ಆದರೂ ಈಗ ಎಲ್ಲಿ ಹೊರಟಿದ್ದೀಯಾ?) ನೆನಪಾಯಿತು. ರಾಮಚಂದ್ರ ತನ್ನ ಪಾಡನ್ನು ನೆನೆದು ಈ ಹಾಡನ್ನು ಬರೆದಿದ್ದನಾ?ತನ್ನ ಹಾಡುಗಳಲ್ಲಿ ಭಾವನೆಯ ಹಂದರ ಮೂಡಿಸಿದ ರಾಮಚಂದ್ರ ಈಗ ಹಾಡುಗಳಲ್ಲಿ ಮಾತ್ರ ಜೀವಂತ.

ಯಾರೇ ಆಗಲಿ 'ಮನೆ ಮಾರಾಟಕ್ಕಿದೆ" ಎಂಬ ಜಾಹೀರಾತು ಕೊಟ್ಟಾಗ ಮನಸ್ಸು ಸಣ್ಣಗೆ ಕಂಪಿಸುವುದು ಈ ಕಾರಣಕ್ಕೇ. ಜೀವನದ ಪರಮೋದ್ದೇಶವೆಂಬಂತೆ ಕಟ್ಟಿಸಿದ 'ಮನೆ ಮಾರಾಟ"ದ ಜಾಹೀರಾತು ನೋವಿನ ಚರಮಗೀತೆಯಂತೆ ಕೇಳಿಸುತ್ತದೆ.

ಹೊಟ್ಟೆಯಾಳಗೆ ಚಿತಲ್ಕರ್‌ನದೇ ಹಸಿ ಹಸಿ ಭಾವ...!

(ಸ್ನೇಹ ಸೇತು : ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more