ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಗಳೆರಡು, ಆದರೆ ಹೈಕಮಾಂಡ್‌ ಒಂದೇ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಹೋಗಿ ಹೋಗಿ ನಾವು ನಾವು ಆರಿಸಿ ಕುಳ್ಳಿರಿಸಿದ್ದು ಇದೇ ಸರಕಾರವನ್ನಾ? ಇಂಥ ಸರಕಾರ ಬೇಕೆಂದು ಆಸೆಪಟ್ಟಿದ್ದೆವಾ? ಅಷ್ಟಕ್ಕೂ ನಾವು ಕನವರಿಸಿಕೊಂಡು ಹಪಾಹಪಿಗೆ ಬಿದ್ದು ಎಂಥ ಸರಕಾರವನ್ನು ಆರಿಸಿಬಿಟ್ಟೆವು? ಹೋಗಿ ಗತಿಗೋತ್ರವಿಲ್ಲದ, ಲಂಗುಲಗಾಮು ಇಲ್ಲದ, ಒಂದು ಸಣ್ಣ ಆಸೆ, ಭರವಸೆಯನ್ನು ಸಹ ಮೂಡಿಸದ ಪರಪಾಟು ಯಜಮಾನನೊಬ್ಬನ ನೇತೃತ್ವದ ಸರಕಾರವನ್ನು ತಂದು ವಿಧಾನಸೌಧದಲ್ಲಿ ಸ್ಥಾಪಿಸಿದ್ದೆವಲ್ಲ, ಅದಕ್ಕಾಗಿ ಈ ಪರಿ ಖರ್ಚು ಮಾಡಿ ಚುನಾವಣೆ ಮಾಡಬೇಕಾಗಿತ್ತಾ? ಅಥವಾ ಇದೇ ಸರಕಾರ ಬೇಕೆಂದು ರಾಜ್ಯದ ಮಹಾಜನತೆ ಕನಸು ಕಂಡಿದ್ದರಾ?

ಈ ಯಾವ ಪ್ರಶ್ನೆಗಳಿಗೂ ಉತ್ತರಗಳು ಸಿಗುತ್ತಿಲ್ಲ. ಉತ್ತರಗಳೆಲ್ಲವೂ ಮತ್ತೆ ಮತ್ತೆ ಪ್ರಶ್ನೆಗಳ ರೂಪದಲ್ಲಿಯೇ ಎದುರು ನಿಲ್ಲುತ್ತಿವೆ. ಮತ ಹಾಕಿದ ಮತದಾರ ಮಂಕು ಕವಿದವನಂತೆ, ಏನೂ ಅರ್ಥವಾಗದೇ ಸುಮ್ಮನೆ ಕುಳಿತಿದ್ದಾನೆ. ಬೇರೆ ದಾರಿಯೇ ಇಲ್ಲ. ಮುಂದಿನ ಚುನಾವಣೆ ತನಕ ಅನುಭವಿಸಲೇಬೇಕಾಗಿದೆ.

ಈ ಸಲದ ಚುನಾವಣೆ ಫಲಿತಾಂಶ ಇಂಥ ಅತಂತ್ರ ಸ್ಥಿತಿಯನ್ನು ನಿರ್ಮಿಸಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಮತದಾರ ಆಡಳಿತಾರೂಢ ಕಾಂಗ್ರೆಸ್ಸನ್ನು ಧಿಕ್ಕರಿಸಿ ಪಕ್ಕಕ್ಕಿಟ್ಟಿದ್ದ. ಹಾಗೆಂದು ಬಿಜೆಪಿಗಾಗಲಿ, ಜೆಡಿಎಸ್‌ಗಾಗಲಿ ಸ್ಪಷ್ಟ ಜನಾದೇಶವನ್ನು ನೀಡಿರಲಿಲ್ಲ. ಬಿಜೆಪಿ ಬಲಿಷ್ಠವಿರುವ ಕ್ಷೇತ್ರಗಳಲ್ಲಿ ಪಕ್ಷವನ್ನು ಬೆಂಬಲಿಸಿದ್ದ. ಬಿಜೆಪಿ ದುರ್ಬಲವಿರುವ ಕ್ಷೇತ್ರಗಳಲ್ಲಿ ಜೆಡಿಎಸ್‌ಅನ್ನು ಬೆಂಬಲಿಸಿದ್ದ. ಇದು ಎಂಥವನಿಗಾದರೂ ಸುಲಭವಾಗಿ ಅರ್ಥವಾಗುವ ಲೆಕ್ಕಾಚಾರ. ರಾಜ್ಯದ ಮಟ್ಟಿಗೆ ಮತದಾರ ಕಾಂಗ್ರೆಸ್‌ ವಿರೋಧಿ ಭಾವವನ್ನು ತಳೆದಿದ್ದು ಸ್ಪಷ್ಟ.

Sonia gandhi - The sole high commandನೋಡಿ, ಯಾವಾಗ ಫಲಿತಾಂಶ ಹೊರಬಿದ್ದು ಯಾರಿಗೂ ಸರಕಾರ ರಚಿಸುವಷ್ಟು ಸ್ಪಷ್ಟ ಬಹುಮತ ದಕ್ಕುವುದಿಲ್ಲವೆಂಬ ಖಾತ್ರಿಯಾಯಿತೋ ಪರಸ್ಪರ ಯಕ್ಕಾಮಕ್ಕಾ ಬೈದುಕೊಂಡಿದ್ದ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಒಂದಾಗಿಬಿಟ್ಟರು. ಚುನಾವಣೆ ಸಂದರ್ಭದಲ್ಲಿ ಈ ದೇವೆಗೌಡ, ಸಿದ್ಧರಾಮಯ್ಯ ಅವರ ಬಳಿ ಕುಳಿತುಕೊಂಡಾಗ ಅವರ ಬಾಯಿಗಳಿಂದ ಬರೀ ಕಾಂಗ್ರೆಸ್‌ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಕೊಳಕು ಬೈಗುಳಗಳ ಎಂಜಲು ಸಿಡಿಯುತ್ತಿತ್ತು. ಕಾಂಗ್ರೆಸ್‌ ನಾಯಕರನ್ನು ಅಂತರಂಗಕ್ಕೆ ಬಿಟ್ಟುಕೊಂಡಾಗ ಅವರು ಇದಕ್ಕೆ ಎರಡು ಪಟ್ಟು ಸೇರಿಸಿ ಪರತ್‌ ಪಾವತಿ ನೀಡುತ್ತಿದ್ದರು. ನಾನೊಂದು ಕೈ ನೋಡುತ್ತೇನೆ, ಜೈಲಿಗೆ ಕಳಿಸುತ್ತೇನೆ, ಕಂಬಿ ಎಣಿಸುವಂತೆ ಮಾಡುತ್ತೇನೆ, ತೊಲಗುವವರೆಗೂ ವಿರಮಿಸುವುದಿಲ್ಲ, ಹುಟ್ಟಡಗಿಸುವ ತನಕ ನಿದ್ರಿಸುವುದಿಲ್ಲ, ನೀವು ಅಂಥವರು, ನೀವು ಇಂಥವರು ಎಂದು ಜೆಡಿಎಸ್‌ ನಾಯಕರು ತಾರಕ ಸ್ವರದಲ್ಲಿ ಗಂಟಲು ಹರಿದುಕೊಳ್ಳುತ್ತಿದ್ದರೆ, ಕಾಂಗ್ರೆಸ್‌ ನಾಯಕರು ತಾವೂ ಕಮ್ಮಿಯಿಲ್ಲವೆಂದು ಇದೇ ಧಾಟಿಯಲ್ಲಿ ಮಾತಾಡುತ್ತಿದ್ದರೆ ಚುನಾವಣಾ ಕಣವೆಂಬುದು ಕೆಸರು ಗದ್ದೆಯಂತಾಗಿತ್ತು. ರಾಜ್ಯದ ಜನತೆ ಇದನ್ನೆಲ್ಲ ನಿಜವೆಂದು ನಂಬಿದರು. ಕಾಂಗ್ರೆಸ್‌ಅನ್ನು ಧೂಳೀಪಟ ಮಾಡಿಯೇ ದೇವೇಗೌಡರು ನಿದ್ದೆಹೋಗಬಹುದೆಂದು ಭಾವಿಸಿದರು. ಜೆಡಿಎಸ್‌ನ್ನು ಗುಡಿಸಿ ಹಾಕಿ ಮತ್ತೆ ಅಧಿಕಾರಕ್ಕೆ ಬರಬಹುದೆಂದು ಕಾಂಗ್ರೆಸ್‌ ನಾಯಕರು ಜನರನ್ನು ನಂಬಿಸಿದರು.

ಫಲಿತಾಂಶ ಹೊರಬಿದ್ದಾಗ ಕಾಂಗ್ರೆಸ್‌ ಧೂಳೀಪಟವಾಗಿತ್ತು. ಜೆಡಿಎಸ್‌ ನಿರೀಕ್ಷೆಗೂ ಮೀರಿ ಯಶ ಪಡೆದರೂ ಮೂರನೆ ಸ್ಥಾನಕ್ಕೆ ನಿಲ್ಲಬೇಕಾಯಿತು. ಕಾಂಗ್ರೆಸ್‌-ಜೆಡಿಎಸ್‌ ನಾಯಕರು ತಕ್ಷಣ ತಮ್ಮ ತಮ್ಮ ಬೈಗುಳವನ್ನು ಮರೆತು ಪರಸ್ಪರರನ್ನು ಅಪ್ಪಿಕೊಳ್ಳಲು ಮುಂದಾದರು. ತಾವು ಯಾರ ವಿರುದ್ಧ ಹೋರಾಡಿ ಗೆದ್ದಿದ್ದೇವೆಯೋ, ಯಾರನ್ನು ವಿರೋಧಿಸಿದ್ದೇವೆಯೋ, ಯಾರನ್ನು ಪರಮಶತ್ರುಗಳೆಂದು ಶಪಥಗೈದು ಜನರ ಮುಂದೆ ಮತಭಿಕ್ಷೆಗಾಗಿ ಕೈಯಾಡ್ಡಿದ್ದೇವೆಯೋ, ಯಾರನ್ನು ವಿರೋಧಿಸಿದ್ದೇವೆಯೋ, ಯಾರನ್ನು ಸೋಲಿಸುವುದೇ ಜನ್ಮದ ಗುರಿ ಎಂದು ಗುಟುರು ಹಾಕಿದ್ದೇವೆಯೋ ಅವೆಲ್ಲವನ್ನೂ ಮರೆತು ತೆರೆಯ ಮರೆಯಲ್ಲಿ ಎಲ್ಲ ಅನೈತಿಕ ವ್ಯವಹಾರಗಳನ್ನು ಮುಗಿಸಿ ಹೊರಬಂದು ಆ ಕೋಮುವಾದಿಗಳಿದ್ದಾರಲ್ಲ ಅವರನ್ನು ಅಧಿಕಾರದಿಂದ ದೂರವಿಡಲು ಈಗ ಪರಸ್ಪರ ಆಲಂಗಿಸಿಕೊಂಡಿದ್ದೇವೆ ಎಂದರು. ಅಂದರೆ ತಾವು ಮಾಡಿದ್ದು ಅನೈತಿಕ ಸಂಬಂಧ ಎಂಬುದನ್ನು ಅವರು ಒಪ್ಪಿಕೊಂಡಿದ್ದರು. ಅಷ್ಟಾದ ಮೇಲೆ ಅನೈತಿಕ ಸಂಬಂಧವನ್ನು ಸಮರ್ಥಿಸಿಕೊಳ್ಳುವುದು ಯಾವ ದೊಡ್ಡ ಕೆಲಸ?

Former Prime Minster HD Devegowdaಇಷ್ಟಾಗುವ ಹೊತ್ತಿಗೆ ಹದಿನೈದು ದಿನಗಳಾಗಿದ್ದವು. ದೇವೇಗೌಡರು ಎರಡು-ಮೂರು ಬಾರಿ ಸೋನಿಯಾ ಬಾಗಿಲ ಬಳಿ ನಿಂತಿದ್ದರು. ಅವರ ಪಕ್ಷದಲ್ಲಿ ಯಾರು ಏನಾಗಬೇಕೆಂಬ ಬಗ್ಗೆ ಕ್ಷಣಕ್ಕೊಂದು ನಿರ್ಧಾರಗಳು. ಈ ಎಲ್ಲ ನಿರ್ಧಾರಗಳನ್ನು ತೆಗೆದುಕೊಂಡು ಕಾಂಗ್ರೆಸ್‌ ನಾಯಕರ ಮನೆಯ ಮುಂದೆ ಹಿಡಿದು ನಿಲ್ಲಬೇಕು. ತಮಗೆ ಬೇಕಾದ ಬೇಡಿಕೆ ಪಟ್ಟಿ ಹಿಡಿದು ಕಾಂಗ್ರೆಸ್‌ ನಾಯಕರು ದೇವೇಗೌಡರಿಗೆ ಸಲ್ಲಿಸಬೇಕು. ದೇವೇಗೌಡರು ಅವೆರಡನ್ನೂ ತೆಗೆದುಕೊಂಡು ಸೋನಿಯಾ ಮುಂದೆ ಹಿಡಿಯಬೇಕು. ಯಾರು ಯಾರ ಪರ ಅಥವಾ ಯಾರು ಪರವೋ ಪರರೋ ಎಂಬುದು ಅರ್ಥವಾಗದೇ ಸೋನಿಯಾ ಪರಚಿಕೊಂಡು ಇನ್ನೊಮ್ಮೆ ಮಾತುಕತೆ ಮಾಡಿಕೊಂಡು ಬನ್ನಿ ಎಂದು ಹೇಳುತ್ತಿದ್ದರೆ ಮತ್ತೊಮ್ಮೆ ಎಲ್ಲ ಸೇರುತ್ತಿದ್ದರು. ಭಲೇ ತಮಾಷೆ. ಮತ್ತೆ ಅದೇ ಚರ್ಚೆ. ಅದೇ ವಾದ. ಅದೇ ನಿರ್ಧಾರ. ಮತ್ತೆ ದಿಲ್ಲಿ ಯಾತ್ರೆ. ಮತ್ತೆ ಸೋನಿಯಾ ಭೇಟಿ. ಮತ್ತೆ ಅದೇ ಪರಿಹಾರ.

ಇಷ್ಟಾಗುವ ಹೊತ್ತಿಗೆ ರಾಜ್ಯದ ಜನತೆಗೆ ಒಂದು ಸಂಗತಿ ಸ್ಪಷ್ಟವಾಗಿತ್ತು. ಇಲ್ಲಿಯ ತನಕ ಜೆಡಿಎಸ್‌ ಹೈಕಮಾಂಡ್‌ ಅಂದರೆ ಎಲ್ಲರೂ ದೇವೇಗೌಡರು ಎಂದೇ ಭಾವಿಸಿದ್ದರು. ಆದರೆ ಅದು ಸೋನಿಯಾ ಗಾಂಧಿ ಎಂದು ಯಾರೂ ಅಂದುಕೊಂಡಿರಲಿಲ್ಲ. ಅದನ್ನು ದೇವೇಗೌಡರೇ ಸಾಬೀತುಪಡಿಸಿದರು. ಅಂದರೆ ಈಗ ಕಾಂಗ್ರೆಸ್‌-ಜೆಡಿಎಸ್‌ ಎರಡೂ ಬೇರೆ ಬೇರೆ ಪಕ್ಷಗಳಾದರೂ ಹೈಕಮಾಂಡ್‌ ಮಾತ್ರ ಒಂದೇ -ಸೋನಿುೂಂ ಗಾಂಧಿ! ಅಷ್ಟರ ಮಟ್ಟಿಗೆ ಈ ಎರಡೂ ಪಕ್ಷಗಳ ನಾಯಕರ ನಿಷ್ಠೆ ಹಾಗೂ ವಿಶಾಲ ಹೃದಯವನ್ನು ಮೆಚ್ಚಲೇಬೇಕು.

ಈಗ ದೇವೇಗೌಡರು ಯಾವ ನಿರ್ಧಾರವನ್ನೂ ಏಕಾಂಗಿಯಾಗಿ ತೆಗೆದುಕೊಳ್ಳಲಾರರು. ಎಲ್ಲದಕ್ಕೂ ಸೋನಿಯಾ ಹೂಂ ಎನ್ನಬೇಕು. ಅಂದರೆ ಸೋನಿಯಾ ಅವರೇ ತಮ್ಮ ಹೈಕಮಾಂಡ್‌ ಎಂಬುದನ್ನು ಮತ್ತೊಮ್ಮೆ ಒಪ್ಪಿಕೊಂಡಂತಾಯಿತು.

ಹಾಗಾದರೆ ಚುನಾವಣೆ ಸಮಯದಲ್ಲಿ ಹೇಳಿದ ಮಾತುಗಳೆಲ್ಲ ಎಲ್ಲಿಗೆ ಹೋದವು? ಯಾರು ನುಂಗಬೇಕು ಅವುಗಳನ್ನು? ಯಾರು ಯಾರನ್ನು ಮೋಸ ಮಾಡುತ್ತಿದ್ದಾರೆ?

ಇಲ್ಲ, ಇಷ್ಟಾಗಿಯೂ ನಾವು ಮಾಡಿದ್ದು ಮೋಸವಲ್ಲ, ಜನಮೆಚ್ಚುವ ಕಾರ್ಯ ಎಂದು ಕಾಂಗ್ರೆಸ್‌, ಜೆಡಿಎಸ್‌ನವರು ಎದೆತಟ್ಟಿ ಹೇಳಲಿ. ಮುಂದೆ ಮಾತಾಡುವ ಅಗತ್ಯವೇ ಇಲ್ಲ. ಆಗ ಕೋಮುವಾದಿ ಬಿಜೆಪಿಯನ್ನು ದೂರವಿರಿಸಲು ಈ ಎಲ್ಲ ಗಂಡಾಗುಂಡಿ ಎಂಬ ಮಾತನ್ನು ಹೇಳುವ ಅಗತ್ಯವೂ ಇಲ್ಲ.

ಇಲ್ಲಿ ಸಹಜವಾಗಿ ಉದ್ಭವಿಸುವ ಪ್ರಶ್ನೆಯೆಂದರೆ ದೇವೇಗೌಡರೇಕೆ ಇಂಹ ದೈನೇಸಿ ಸ್ಥಿತಿಯನ್ನು ತಂದುಕೊಂಡರು? ರಾಜಕಾರಣಿಯಾಗಿ ಅವರ ಒಲವು-ನಿಲುವುಗಳೇನೇ ಇರಲಿ, ಅವರೊಬ್ಬ ಅಪ್ಪಟ ರಾಜಕಾರಣಿ ಎಂಬುದು ಎಲ್ಲರೂ ಒಪ್ಪಲೇಬೇಕು. (ನಿದ್ದೆಯಲ್ಲೂ) ರಾಷ್ಟ್ರ ಚಿಂತನೆ, ರಾಜಕಾರಣದ ಬಗ್ಗೆ ನಿರತರಾಗಿರುವ ಫುಲ್‌ಟೈಂ ನಾಯಕರು. ದೇಶದ ಪ್ರಧಾನಿ ಪಟ್ಟದ ಮೇಲೆ ಕುಳಿತೆದ್ದು ಬಂದವರು. ರೈತನ ಮಗನಾಗಿ, ಕರ್ನಾಟಕದ ಮಗನಾಗಿ ಗೌಡರು ಏರಿದ ಎತ್ತರ ಎಲ್ಲರನ್ನೂ ಬೆರಗುಗೊಳಿಸುವಂಥದು. ಅಂಥ ಗೌಡರಿಗೆ ಇದೆಲ್ಲ ಬೇಕಿತ್ತಾ? ಸೋನಿಯಾ ಮರ್ಜಿ ಕಾಯುವ ಅಗತ್ಯವಿತ್ತಾ? ಯಾವಾಗ ಫಲಿತಾಂಶ ಹೊರಬಿದ್ದು ಸರಕಾರ ರಚನೆಗೆ ಬೇಕಾಗುವಷ್ಟು ಸೀಟು ಇಲ್ಲದಿರುವುದು ಗೊತ್ತಾದ ತಕ್ಷಣ ಇಲ್ಲ ನಮಗೆ ಜನಾದೇಶ ಇಲ್ಲ. ನಾವು ಸರಕಾರ ರಚಿಸುವುದಿಲ್ಲ. ಅದರಲ್ಲೂ ಕೇಮುವಾದಿ ಬಿಜೆಪಿ ಜತೆಗೂಡುವ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ನಾವೇ ಹೀನಾಯವಾಗಿ ವಿರೋಧಿಸಿದ ಕಾಂಗ್ರೆಸ್‌ ಜತೆ ಕೈಜೋಡಿಸಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ದೇವೇಗೌಡರು ಸುಮ್ಮನಾಗಿ ಬಿಟ್ಟಿ ದ್ದರೆ ಅವರು ದೊಡ್ಡವರಾಗಿಬಿಡುತ್ತಿದ್ದರು. ಅನಂತರ ಏನಾಗುತ್ತದೋ ಆಗಲಿ ನೋಡೋಣ ಎಂದು ಬಿಟ್ಟು ಬಿಡಬೇಕಾಗಿತ್ತು. ಯಾಕೆಂದರೆ ಸರಕಾರ ರಚಿಸುವುದೇ ಆದರೆ ಕಾಂಗ್ರೆಸ್‌ಗೇ ಆಗಲಿ ಬಿಜೆಪಿಗೇ ಆಗಲಿ ಗೌಡರನ್ನು ಬಿಡಲು ಸಾಧ್ಯವೇ ಆಗುತ್ತಿರಲಿಲ್ಲ. ಅವರಿಬ್ಬರೂ ಗೌಡರ ಮರ್ಜಿ ಕಾಯಲೇಬೇಕಿತ್ತು. ಆಗ ಗೌಡರು ಟವೆಲ್ಲು ಕೊಡವಿ ಪಟ್ಟು ಹಾಕಬಹುದಿತ್ತು. ಅದು ಬಿಟ್ಟು ತಾವೊಬ್ಬ ಮಾಜಿ ಪ್ರಧಾನಿ ಎಂಬುದನ್ನೂ ಮರೆತು ಕಾಂಗ್ರೆಸ್‌ನ ಚಿಳ್ಳೆಪಿಳ್ಳೆ ನಾಯಕರನ್ನು ಹರಡಿಕೊಂಡು ಮಾತುಕತೆಗೆ ಕುಳಿತು ಅದನ್ನೆಲ್ಲ ಕಟ್ಟಿಕೊಂಡು ಸೋನಿಯಾ ಮುಂದೆ ಒಪ್ಪಿಸುದಿದೆಯಲ್ಲ ಇವೆಲ್ಲ ಗೌಡರಂಥ ನಾಯಕನಿಗೆ ಶೋಭಿಸುವಂಥದ್ದೆ?

ಇಷ್ಟೆಲ್ಲ ಆಗಿರುವುದಕ್ಕೆ ಗೌಡರಿಗೆ ಗೌಡರಿಗೆ ಸಮಾಧಾನವಿದೆಯ? ಹೂಮ್‌... ಖಂಡಿತಾ ಇಲ್ಲ. ಖಾಸಗಿಯಾಗಿ ಕುಳಿತು ದೇವೇಗೌಡರನ್ನು ಸುಮ್ಮನೆ ಕೇಳಿ, ಗೌಡ್ರೇ ಈ ಸರಕಾರ ಎಷ್ಟುದಿನ ಬಾಳಿಕೆ ಬರುತ್ತದೆ ಅಂತ. ಒಂದು ವರ್ಷ ಬಂದ್ರೆ ದೊಡ್ಡದು. ನಂತರದ ಒಂದೊಂದು ದಿನವೂ ಬೋನಸ್‌ ಎಂದು ನಿಸ್ಸಂದೇಹವಾಗಿ ಹೇಳುತ್ತಾರೆ. ಮತ್ಯಾಕೆ ಈ ಸರಕಾರ ರಚಿಸಲು ಹೋರಾಡಿದಿರಿ? ಈ ಉಸಾಬರಿ ಬೇಕಿತ್ತಾ? ಅಂತ ಕೇಳಿದರೆ ಗೌಡರು ನೇರ ಉತ್ತರ ಕೊಡುವುದಿಲ್ಲ. ಅವರ ಸಂಕಟವೇನೆಂಬುದನ್ನು ಯಾರು ಬೇಕಾದರೂ ಅರ್ಥೈಸಿಕೊಳ್ಳಬಹುದು.

ಅಧಿಕಾರ ಹೋಗಿ ಅನೇಕ ದಿನಗಳಾಗಿವೆ. ಅಧಿಕಾರವಿಲ್ಲದ ರಾಜಕೀಯ ಎಂಥ ರಾಜಕಾರಣಿಯನ್ನೂ ಹಿಂಜಿ ಹಿಪ್ಪಲಿ ಮಾಡಿಬಿಡುತ್ತದೆ. ಕೈತಪ್ಪಿ ಹೋದ ಅಧಿಕಾರ ಈಗ ಮುಂದೆ ನಿಂತಿದೆ. ಬಾಚಿ ತಬ್ಬಿಕೊಳ್ಳದಿದ್ದರೆ ಅದು ಮತ್ತೆಲ್ಲೋ ಹೋಗಿ ನಿಲ್ಲುತ್ತದೆ. ಹೀಗಾಗಿ ಗೌಡರು ಅಧಿಕಾರಕ್ಕಾಗಿ ಎಲ್ಲ ಗುಣಗಳನ್ನು ತ್ಯಾಗ ಮಾಡಲೇಬೇಕಿದೆ. ಕಾಂಗ್ರೆಸ್‌ನವರ ಮುಂದೆ ಬಾಳಿಕೆಯ ಪ್ರಶ್ನೆಯಿಟ್ಟರೆ ಅವರ ಉತ್ತರವೂ ಅದೇ.

ಇನ್ನು ದಿಲ್ಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗವನಿಸಿ. ಸೊತವರು-ಗೆದ್ದವರು ಮಂತ್ರಿ ಪದವಿಗೆ ಲಾಬಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸರಕಾರವೆಂಬುದು ಈಗ ಇಲ್ಲವೇ ಇಲ್ಲ. ಪ್ರಯಾಸಪಟ್ಟು ರಚಿಸಿದ ಸರಕಾರದ ಇಬ್ಬೇ ಇಬ್ಬರು ಕೂಡ ದಿಲ್ಲಿಯಲ್ಲಿ ಜಮಾ ಆಗಿ ಮೂರು ದಿನಗಳಾಗಿವೆ. ಕೊಡ-ಕೊಳ್ಳುವ ವ್ಯವಹಾರ ಮುಗಿಯುತ್ತಿಲ್ಲ.

ಸರಕಾರ ರಚಿಸಿದ ಎರಡೇ ದಿನಗಳಲ್ಲಿ ಧರ್ಮಸಿಂಗ್‌ ಹಾಗೂ ಸಿದ್ಧರಾಮಯ್ಯ ಮುಂದಿನ ದಿನಗಳಲ್ಲಿ ಹೇಗೆ ಸಾಗುತ್ತೇವೆಂಬ ಬಗ್ಗೆ ಈಗಾಗಲೇ ಸುಳಿವು ನೀಡಿ ಪಾರದರ್ಶಕತೆ ಮೆರೆದಿದ್ದಾರೆ. ವಿಧಾನಸೌಧದಲ್ಲಿದ್ದಾಗ ಮಾತ್ರ ನಾವು ಒಂದು. ಹೊರಗೆ ಬಿದ್ದರೆ ಕಾಂಗ್ರೆಸ್‌ ವಿರುದ್ಧ ಹೋರಾಟ ಜರಿಯಲ್ಲಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿರುವುದು ಮದುವೆ ಮಂಟಪಲ್ಲಿಯೇ ವಿಚ್ಛೇದನ ರಾಗ ಹಾಡಿದಂತಾಗಿದೆ. ಇದು ಸರಕಾರಿ ವಿರೋಧಿ ಹೇಳಿಕೆ ಎಂಬುದೂ ಉಪಮುಖ್ಯಮಂತ್ರಿಗಳಿಗೆ ಗೊತ್ತಾಗದಿದ್ದರೆ ಹೇಗೆ?

ಹಾವು- ಮುಂಗುಸಿಯಂತಿರುವ ಕಾಂಗ್ರೆಸ್‌- ಜೆಡಿಎಸ್‌ ನಾಯಕರು ಒಂದು ಕಡೆ ಕುಳಿತುಕೊಂಡು ಸರಕಾರ ನಡೆಸುವ, ನಿರ್ಧಾರ ತೆಗೆದುಕೊಳ್ಳುವ ಪರಿಯನ್ನು ಪಲ್ಪಿಸಿಕೊಂಡರೆ, ಲಾಭ ತರುವ ಖಾತೆಗಳನ್ನು ಎದುರಾಬದುರಾ ಕುಳಿತು ಹಂಚಿಕೊಳ್ಳುವುದನ್ನು ನೆನಪಿಸಿಕೊಂಡರೆ, ಇದೇ ಖಾತೆ ಬೇಕು, ಅದೇ ಬೇಕು ಎಂದು ಹಠಕ್ಕೆ ಬೀಳುತಿರುವುದನ್ನು ಕಂಡರೆ ಯಾರದ್ದೋ ಮದುವೆಯಲ್ಲಿ ಉಂಡು ಜಾಣರಾಗಲು ಸನ್ನದ್ದರಾಗುತ್ತಿದ್ದಾರೇನೋ ಎಂದೆನಿಸುತ್ತದೆ.

ಅದೆಲ್ಲ ಇರಲಿ, ಇವರೆಲ್ಲ ಜನರನ್ನು ಏನೆಂದು ಭಾವಿಸಿದ್ದಾರೆ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X