ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವತ್ತು ಸಾವಿರ ಜನರನ್ನು ಸಾಯಿಸಿದ ಆತನಿಗೆ ಯಾವ ಶಿಕ್ಷೆಯೂ ಆಗಲಿಲ್ಲ !

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಡಿಸೆಂಬರ್‌ 3ಕ್ಕೆ ಸರೋಸರಿ ಇಪ್ಪತ್ತು ವರ್ಷಗಳಾದವು. ಭೋಪಾಲ ಎಂಬ ಶಾಪಗ್ರಸ್ತ ಊರು ಅದೇ ವೈಧವ್ಯ, ವಿಷಣ್ಣತೆ ಹಾಗೂ ಪಾಪಪ್ರಜ್ಞೆಯಿಂದ ಹಾಗೇ ನಿಂತಿದೆ. ಡಿಸೆಂಬರ್‌ ಮೂರು ಬಂದರೆ ಅನಿಲ ದುರಂತದ ಕರಾಳ ನೆನಪು ಭೋಪಾಲನ್ನು ಹಿಂಜಿ ಹಿಪ್ಪಲಿ ಮಾಡುತ್ತದೆ. ಡಿಸೆಂಬರ್‌ 3 ರ ದಿನ ಇಪ್ಪತ್ತು ವರ್ಷಗಳ ಗರ್ಭ ಧರಿಸಿ ಪುನಃ ಬಂತು. ಆದರೆ ಈ ಪಾಪನಗರಿ ಹಾಗೆಯೇ ಇದೆ.

ಅಂದು ನೆನಪಿರಬಹುದು. 1984ರ ಡಿಸೆಂಬರ್‌ ಎರಡರ ಮಧ್ಯರಾತ್ರಿ ಸರಿಯುತ್ತಿರುವಾಗ ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌ನ ಕೀಟನಾಶಕ ತಯಾರಿಕ ಕಾರ್ಖಾನೆಯಿಂದ ಮೀಥೈಲ್‌ ಐಸೋಸೈನೇಟ್‌ ಎಂಬ ವಿಷಾನಿಲ ಭೋಪಾಲ ನಗರದ ಮೇಲೆ ಮೋಡಗಟ್ಟಿಕೊಂಡಿತು. ಆ ನಸುಕಿನಲ್ಲಿ ಕಳ್ಳಹೆಜ್ಜೆ ಹಾಕುತ್ತಾ ಬಾಗಿಲು, ಕಿಟಕಿಯ ಸಂದಿಗೊಂದಿಗಳಿಂದ ಈ ವಿಷಾನಿಲ ಮನೆಯಾಳಗೆ ಎಲ್ಲ ನಿದ್ರಿಸುತ್ತಿರುವಾಗ ಕಾಲಿಟ್ಟರೆ ಸಾಕ್ಷಾತ್‌ ಬ್ರಹ್ಮರಾಕ್ಷಸನ ಪ್ರವೇಶ ! ನೋಡನೋಡುತ್ತಿದ್ದಂತೆ ವಿಷಾನಿಲ ಹರಡುತ್ತಿದ್ದಂತೆ ಜನ ಸಾಮೂಹಿಕವಾಗಿ ಏಕಾಏಕಿ ಜೋರಾಗಿ ಕೆಮ್ಮತೊಡಗಿದರು. ಗಂಟಲೊಳಗೆ ಬೆಂಕಿ ಕೆಂಡ ತುರುಕಿದ ಉರಿ. ಕಣ್ಣೊಳಗೆ ನೂರು ಕೆಂಪು ಮೆಣಸಿನ ಕಾಯಿ ಅರೆದು ಕುಟ್ಟಿದ ಯಾತನೆ. ಒಂದೇ ಸುಮನೆ ನೋವು, ಉರಿ ಎಂದು ಅರಚುತ್ತಾ ಮನೆಯ ಹೊರಗೋಡಿ ಬರುವಷ್ಟರಲ್ಲಿ ಉಸಿರುಗಟ್ಟಿ ಸತ್ತರು. ಮುದುಕರು ಹಾಸಿಗೆಯಲ್ಲೇ ಮಡಿದರು. ಗರ್ಭಿಣಿಯರು ಇದ್ದಲ್ಲಿಯೇ ಗರ್ಭಪಾತ ಮಾಡಿಕೊಂಡರು. ಆಸ್ಪತ್ರೆಯಲ್ಲಿ ಹುಟ್ಟಿದ ನೂರಾರು ನವಜಾತ ಶಿಶುಗಳು ತೊಟ್ಟಿಲಲ್ಲೇ ಅಸು ನೀಗಿದವು. ವಿಷಾನಿಲ ಯಾವ ಯಾವ ಮನೆಗೆ ಕಾಲಿಟ್ಟಿತೋ ಅಲ್ಲೆಲ್ಲ ಹೆಣಗಳ ರಾಶಿ. ದಾರಿಯಲ್ಲಿ ಹೋಗುವವರು, ಬೀದಿಬದಿಯಲ್ಲಿ ಮಲಗಿದವರು, ಕಣ್ಣುಗಳನ್ನು ತೆರೆಯುವುದರೊಳಗೆ ಶಾಶ್ವತವಾಗಿ ಕಣ್ಮುಚ್ಚಿದ್ದರು. ಸಾವಿರಾರು ಮಂದಿ ದಿಕ್ಕಾಪಾಲಾಗಿ ಓಡಿದರು. ಈ ಧಾವಂತದಲ್ಲಿ ಕಾಲ್ತುಳಿತಕ್ಕೊಳಗಾಗಿ ಸತ್ತರು, ಗಾಯಗೊಂಡರು. ವಿಷಾನಿಲದಲ್ಲಿ ನೆಂದ ಕಣ್ಣುಗಳು ಕುರುಡಾದವು.

Victims of the 1984 Bhopal gas disaster cry for justiceಬೆಳಗ್ಗೆ ಆರು ಸರಿಯುವ ಹೊತ್ತಿಗೆ ಭೋಪಾಲದ ಸುಮಾರು 20 ಸಾವಿರ ಮಂದಿ ಹೆಣವಾಗಿ ಮಲಗಿದ್ದರು. ಕನಿಷ್ಠ ಒಂದು ಲಕ್ಷ ಮಂದಿ ಅಸ್ವಸ್ಥರಾಗಿ, ಗಾಯಾಳುಗಳಾಗಿ, ವಿಚಿತ್ರ ಕಾಯಿಲೆಕೋಟಲೆಗಳನ್ನು ಅಂಟಿಸಿಕೊಂಡು ಆಸ್ಪತ್ರೆ ಸೇರಿದ್ದರು. ಇಡೀ ಊರಿಗೆ ಊರು ಅಕ್ಷರಶಃ ಯುದ್ಧಭೂಮಿಯಂತೆ, ಸ್ಮಶಾನದಂತೆ, ಸುಡುಗಾಡು ಸಿದ್ಧನ ಜಗಲಿಯಂತಾಗಿತ್ತು. ಒಂದೇ ಒಂದು ಬೀಸಿಗೆ ವಿಷಾನಿಲ ಇಡೀ ಊರಿನ ಮೇಲೆ ಆಕ್ರಮಣ ಮಾಡಿತ್ತು.

ಇದು ಮೊದಲ ದಿನದ ಆಟದ ಪರಿಣಾಮ. ಆದರೆ ಆಟ ಅಲ್ಲಿಗೆ ನಿಲ್ಲಲಿಲ್ಲ. ಖರೆ ಹೇಳಬೇಕೆಂದರೆ ಆಟ ಅಂದು ಆರಂಭವಾಯಿತಷ್ಟೆ. ಅಂದು ಬೀಸಿದ ವಿಷಾನಿಲ ಈ ಕ್ಷಣದ ತನಕ ತನ್ನ ಆಟಾಟೋಪವನ್ನು ಮೆರೆಯುತ್ತಿದೆ. ತಿಂಗಳಿಗೆ ನಾಲ್ಕೈದು ಮಂದಿಯಾದರೂ ಅಂದು ತಿಂದ ವಿಷಾನಿಲದಿಂದ ಸಾಯುತ್ತಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ದುರಂತದಲ್ಲಿ ಏನಿಲ್ಲವೆಂದರೂ ಮೂವತ್ತು ಸಾವಿರ ಮಂದಿ ಸತ್ತಿದ್ದಾರೆ. ಐದು ಲಕ್ಷ ಮಂದಿ ಒಂದಿಲ್ಲೊಂದು ರೋಗ, ವ್ರಣ, ಕಾಯಿಲೆ, ವೈಕಲ್ಯಗಳಿಂದ ನರಳುತ್ತಿದ್ದಾರೆ. ಅನಿಲ ಸೋರುವಾಗ ಗರ್ಭಿಣಿಯರಾಗಿದ್ದ ಹಾಗೂ ಅನಂತರ ಗರ್ಭಧರಿಸಿದ ಮಹಿಳೆಯರು ಹೆತ್ತ ಹತ್ತು ಮಕ್ಕಳ ಪೈಕಿ ನಾಲ್ಕು ಮಕ್ಕಳು ಸತ್ತಿವೆ. ನಾಲ್ಕು ಮಕ್ಕಳು ಅಂಗವಿಕಲವಾಗಿ ಹುಟ್ಟಿವೆ. ಈಗಲೂ ಹುಟ್ಟುತ್ತಿವೆ. ಸೀಳುತುಟಿ, ಮೂರು ಕಣ್ಣು, ಏಳು-ಎಂಟು ಬೆರಳುಗಳುಳ್ಳ ಮಕ್ಕಳು ಜನ್ಮ ತಾಳುವುದು ಸಾಮಾನ್ಯ. ಇನ್ನು ಬಹುತೇಕ ಮಕ್ಕಳಿಗೆ ವಿಚಿತ್ರಕಣ್ಣು, ದೊಡ್ಡ ತಲೆಬರುಡೆ, ಶರೀರ ತುಂಬಾ ಕೂದಲು, ಮುಖವಿಡೀ ಗಡ್ಡ, ಒಂದೇ ವೃಷಣ, ಬೆರಳುಗಳಿಲ್ಲದ ಕೈ, ಉದ್ದಗಿಡ್ಡದ ಕಾಲುಗಳು! ಇನ್ನುಳಿದ ಮಕ್ಕಳಿಗೆ ಕ್ಯಾನ್ಸರ್‌, ಮಿದುಳು ಬೇನೆ, ಅಜೀರ್ಣ, ತಲೆನೋವು, ಕಜ್ಜಿ, ಉರಿ, ಕೆನ್ನೆಶೂಲೆ, ಅಂಧತ್ವ, ಕಿವುಡುತನ. ಏನಿಲ್ಲವೆಂದರೂ ಹನ್ನೆರಡು ಸಾವಿರ ಮಕ್ಕಳು ಇಂಥ ಕಾಯಿಲೆ, ವೈಕಲ್ಯಗಳನ್ನು ಹೊತ್ತು ಹುಟ್ಟಿವೆ. ತಮ್ಮದಲ್ಲದ ತಪ್ಪಿಗೆ ಸಾಯುವ ತನಕವೂ ನರಕಯಾತನೆಯಲ್ಲಿ ನರಳಬೇಕು. ಒಂದು ದೃಷ್ಟಿಯಲ್ಲಿ ಅಂದು ಸತ್ತವರೇ ಪುಣ್ಯವಂತರು. ಬದುಕುಳಿದವರೇ ಭಾಗ್ಯಹೀನರು.

ಅಂದು ಆಗಬಾರದ್ದು ಆಗಿ ಹೋಯಿತು. ಇರಲಿ. ಆದರೆ ಇಡೀ ದುರಂತವನ್ನು ನಾವು ಹೇಗೆ ನಿಭಾಯಿಸಿದೆವು ? ಇದರಲ್ಲಿ ನಮ್ಮ ಹೊಣೆಗಾರಿಕೆಯೇನು? ಸರಕಾರಗಳು ಏನು ಮಾಡಿದವು ? ಯೂನಿಯನ್‌ ಕಾರ್ಬೈಡ್‌ ಕಂಪನಿ ಮಾಡಿದ್ದೇನು? ನಿರಾಶ್ರಿತರಾದವರಿಗೆ, ಮನೆಮಠ ಕಳಕೊಂಡವರಿಗೆ, ಗಂಡಂದಿರನ್ನು ಕಳಕೊಂಡವರಿಗೆ ಪರಿಹಾರ ಸಿಕ್ಕಿತಾ? ಈಗ ಭೋಪಾಲ ಹೇಗಿದೆ? ಈ ಇಪ್ಪತ್ತು ವರ್ಷಗಳಲ್ಲಿ ಆಗಿದ್ದೇನು? ಈ ಪ್ರಶ್ನೆಗಳನ್ನು ಹರಡಿಕೊಂಡು ಕುಳಿತರೆ ಸಿಗುವ ಉತ್ತರಗಳು ದುರಂತದಷ್ಟೇ ಭಯಾನಕ. ಇದೆಂಥ ದೇಶ ಎಂದರೆ ಇಲ್ಲಿ ಎಂಥ ಹೀನಾತಹೀನ ಅಪರಾಧಗಳನ್ನು ಎಸಗಿಯೂ ಹಾಯಾಗಿರಬಹುದು. ಯಾರನ್ನು ಸರಿಯಾಗಿ ನೋಡಿಕೊಳ್ಳಬೇಕೋ ಅವರನ್ನು ಬೆಚ್ಚಗೆ ಇಟ್ಟುಕೊಂಡರೆ ನಿಮ್ಮ ನೆಮ್ಮದಿಗೆ ಧಕ್ಕೆ ಇಲ್ಲ. ಮುಂದೆ ಮಾಡುವ ಅಪರಾಧಗಳಿಗೂ ಮುಫ್ತ್‌. ಸರಕಾರ ಜಡವಾದರೆ, ಭ್ರಷ್ಟವಾದರೆ, ನ್ಯಾಯದೇವತೆ ತನಗೆ ಕಟ್ಟಿಕೊಂಡ ಕಪ್ಪು ಬಟ್ಟೆಯನ್ನು ಒಮ್ಮೆಯಾದರೂ ಬಿಚ್ಚಿ ಕಣ್ಣರಳಿಸಿ ನೋಡದಿದ್ದರೆ, ಅಧಿಕಾರಷಾಹಿಗೆ ತುಕ್ಕು ಹಿಡಿದರೆ, ಜನರೂ ಉದಾಸೀನ ಭಾವ ಬೆಳೆಸಿಕೊಂಡರೆ ಏನಾಗಬಹುದೆಂಬುದಕ್ಕೆ ಭೋಪಾಲ ವಿಷಾನಿಲ ದುರಂತ ನಿದರ್ಶನ.

Victims of the 1984 Bhopal gas disaster cry for justiceಅಲ್ಲಾ ಸ್ವಾಮಿ, ದುರಂತ ಸಂಭವಿಸಿ ಗಂಡ, ಮಕ್ಕಳನ್ನು ಕಳೆದು ಕೊಂಡು ಇಪ್ಪತ್ತು ವರ್ಷಗಳಾದವು. ಆಯುಷ್ಯವೇ ಮುಗೀತಾ ಬಂತು. ಇನ್ನೂ ದಮ್ಡಿ ಪರಿಹಾರ ಬಂದಿಲ್ಲ ಗೊತ್ತಾ ? ಪರಿಹಾರ ಧನ ಇಂದು ಕೊಡ್ತೇವೆ, ನಾಳೆ ಕೊಡ್ತೇವೆ, ನಾಡಿದ್ದು ಸಿಗುತ್ತದೆ, ಇದೋ ಬಂದೇ ಬಿಟ್ಟಿತು ಅಂತ 20 ವರ್ಷಗಳಿಂದ ಮಾನಗೇಡಿ ಕೇಂದ್ರ ಸರಕಾರ, ವಚನಭ್ರಷ್ಟ ಮಧ್ಯಪ್ರದೇಶ ಸರಕಾರ, ಪರಮಪಾಪಿ ಯೂನಿಯನ್‌ ಕಾರ್ಬೈಡ್‌ ಕಂಪನಿ ಈ ಸಂತ್ರಸ್ತರನ್ನು ನಂಬಿಸಿಕೊಂಡು, ಸುಳ್ಳು ಹೇಳಿಕೊಂಡು, ಸಬೂಬು ಕೊಟ್ಟುಕೊಂಡು ಬಂದಿವೆ. ಇಲ್ಲಿ ತನಕ ಕೊಟ್ಟಿಲ್ಲ. ಅಂದರೆ ಮುಂದೆಯೂ ಕೊಡುವುದಿಲ್ಲ. ಏಕೆಂದರೆ ಕೊಡುವ ಮನಸ್ಸಿದ್ದಿದ್ದರೆ 20 ವರ್ಷ ಕಾಯಿಸಬೇಕಾದ ಆಗತ್ಯವಿರಲಿಲ್ಲ. ಆ ಕೋರ್ಟು, ಈ ಕೋರ್ಟು, ಈ ಸಮಿತಿ, ಆ ಆಯೋಗ ಎಂದು ಎಲ್ಲರೂ ಕತೆ ಕಟ್ಟುತ್ತಿದ್ದಾರೆಯೇ ಹೊರತು ರೊಕ್ಕ ಮಾತ್ರ ಕೊಟ್ಟಿಲ್ಲ. ಕೆಲವರಿಗಂತೂ ಯೂನಿಯನ್‌ ಕಾರ್ಬೈಡ್‌ ಇನ್ನೂರು, ಮುನ್ನೂರು ರೂಪಾಯಿ ಕೊಟ್ಟು ಬಾಯಿ ಮುಚ್ಚಿಸಿದೆ! 5 ಲಕ್ಷ ರೂ. ಕೊಡುತ್ತೇವೆಂದು ಹೇಳಿದ ಕಂಪನಿಯ ಔದಾರ್ಯ ಆಂಗಡಿಗೆ ಬಾಗಿಲು ಹಾಕಿಕೊಂಡು ಡೋವ್‌ ಕಂಪನಿಗೆ ಕಾರ್ಖಾನೆಯನ್ನು ಮಾರಾಟ ಮಾಡಿ ಹೊರಟು ಹೋಗಿದೆ. ಡೋವ್‌ ಮಾಲೀಕನ ಮುಂದೆ ನಿಂತು ರೊಕ್ಕ ಎಲ್ಲಿ ಅಂತ ಕೇಳಿದರೆ, ಏನೂ ಗೊತ್ತಿಲ್ಲದವರಂತೆ ‘ನಿಮಗ್ಯಾಕೆ ರೊಕ್ಕ ಕೊಡಬೇಕು? ನಾನು ನಿಮ್ಮ ಜತೆ ವ್ಯವಹಾರವನ್ನೇ ಮಾಡಿಲ್ಲ. 20 ವರ್ಷಗಳ ಹಿಂದೆ ನಡೆದ ದುರಂತಕ್ಕೆ ನಿನ್ನೆ ಬಂದ ನಾನೇಕೆ ಕೊಕ್ಕ ಕೊಡಬೇಕು. ಅದಕ್ಕಿಂತ ಹೆಚ್ಚಾಗಿ ನೀವ್ಯಾರೆಂಬುದೇ ನಂಗೆ ಗೊತ್ತಿಲ್ಲ’ ಎಂದು ದಬಾಯಿಸುತ್ತಾನೆ. ಯೂನಿಯನ್‌ ಕಾರ್ಬೈಡ್‌ ಮಾಲೀಕನನ್ನು ಕೇಳೋಣವೆಂದರೆ ಆತ ಸಿಗುವುದೇ ಇಲ್ಲ.

ನಿಮಗೆ ಗೊತ್ತಿರಬಹುದು ಇದೇ ಯೂನಿಯನ್‌ ಕಾರ್ಬೈಡ್‌ನ ಮಾಲೀಕ ವಾರನ್‌ ಅಂಡರ್‌ಸನ್‌ ಎಂಬ ನಿಸ್ಸೀಮ ಪಾಪಿಯನ್ನು ‘ನಮ್ಮ ಸುಪರ್ದಿಗೆ ಕೊಡಿ’ ಎಂದು ಭಾರತ ಸರಕಾರ ನೂರಾರು ಸಲ ಅಮೆರಿಕ ಸರಕಾರವನ್ನು ಅಂಗಲಾಚಿದೆ. ಅಂತರಾಷ್ಟ್ರೀಯ ಸಂಘಟನೆಗಳು ಮತ್ತು ನ್ಯಾಯಾಲಯಗಳ ಮುಂದೆ ಗೋಗರೆದಿದೆ. ಏನೂ ಪ್ರಯೋಜನವಾಗಿಲ್ಲ. ಮೂವತ್ತು ಸಾವಿರ ಮಂದಿಯ ಪ್ರಾಣಗಳನ್ನು ಆಪೋಷನ ತೆಗೆದುಕೊಂಡ ಅಂಡರ್‌ಸನ್‌ ವಿರುದ್ಧ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಸಾಯಲಿ, ಈ ದುರಂತದಲ್ಲಿ ಇಷ್ಟೆಲ್ಲ ಮಂದಿ ಸತ್ತರಲ್ಲ , ನಮ್ಮ ಸರಕಾರ ಒಬ್ಬನೇ ಒಬ್ಬನನ್ನು ಹಿಡಿದು ಜೈಲಿಗೆ ಹಾಕಿ ತದುಕಲಿಲ್ಲ. ಕೆಲಸಕ್ಕೆ ಬಾರದ ವೇಶ್ಯೆಯರನ್ನು ಹಿಡಿದು ಹಿಂಸಿಸುವ ನಮ್ಮ ಪೊಲೀಸರು ಸಾವಿರಾರು ಜನರ ಸಾವಿಗೆ ಕಾರಣವಾದ ಪರಮ ನೀಚನನ್ನು ವಿಚಾರಿಸಿಕೊಳ್ಳಲಿಲ್ಲ. ಅದೂ ಸಾಯಲಿ, ಇದೇ ಅಂಡರ್‌ ಸನ್‌ ದುರಂತ ಸಂಭವಿಸಿ ಎಂಟು ವರ್ಷಗಳ ನಂತರ (ಡಿಸೆಂಬರ್‌ 7, 1992) ಭಾರತಕ್ಕೆ ಬಂದಿದ್ದ. ಈತ ಬರುತ್ತಾನೆಂಬುದು ನಮ್ಮ ಸರಕಾರಕ್ಕೆ, ಪೊಲೀಸರಿಗೆ ಗೊತ್ತಿತ್ತು. ಆತ ಭೋಪಾಲದ ವಿಮಾನ ನಿಲ್ದಾಣಕ್ಕೆ ಬಂದಿಳಿದ. ಘಟನೆ ನಡೆದಾಗಿನಿಂದ ತಲೆಮರೆಸಿಕೊಂಡಿದ್ದ, ಅಮೆರಿಕ ಸರಕಾರದ ಮುಂದೆ ಯಾರನ್ನು ತನಗೊಪ್ಪಿಸಬೇಕೆಂದು ಭಾರತ ಸರಕಾರ ಕೇಳಿಕೊಂಡಿತ್ತೋ ಅದೇ ವ್ಯಕ್ತಿ ದುರಂತ ಸಂಭವಿದ ಊರಿಗೇ ಬಂದಿದ್ದರೆ, ಪೊಲೀಸರು ಹಿಡಿಯಲೇ ಇಲ್ಲ ! ಹಿಡಿಯಲಿಲ್ಲ ಎನ್ನುವುದಕ್ಕಿಂತ ಬಿಟ್ಟುಬಿಟ್ಟರು! ಬಿಟ್ಟುಬಿಟ್ಟರು ಎನ್ನುವುದಕ್ಕಿಂತ ಆತನನ್ನು ಕಳುಹಿಸಿ ಬಂದರು! ಭೋಪಾಲ ನಿಲ್ದಾಣದಲ್ಲಿ ಬಂದ ಅಂಡರ್‌ಸನ್‌ ಹಠಾತ್ತನೆ ಕಣ್ಮರೆಯಾಗಿಬಿಟ್ಟ. ಆನಂತರ ಆತನನ್ನು ಯಾರೂ ನೋಡಲಿಲ್ಲ. ಆತ ಎಲ್ಲಿಗೆ ಹೋದನೆಂಬುದೇ ಗೊತ್ತಾಗಲಿಲ್ಲವೆಂದು ಸರಕಾರ ಹೇಳಿತು. ಆದರೆ ಆತ ಸುರಕ್ಷಿತವಾಗಿ ಅಮೆರಿಕಕ್ಕೆ ಹೋಗಿದ್ದಾನೆಂಬುದು ಎಲ್ಲರಿಗೂ ಗೊತ್ತಿತ್ತು. ಈಗ ಅಂಡರ್‌ಸನ್‌ ಅಮೆರಿಕದ ಹ್ಲಾಂಪ್ಟನ್ಸ್‌ನಲ್ಲಿ ಸುಖವಾಗಿ, ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ. ಅವನ ಸುಖ, ನೆಮ್ಮದಿಗೆ ಭಂಗವುಂಟು ಮಾಡಲು ಭಾರತ ಹಾಗೂ ಅಮೆರಿಕ ಸರಕಾರಗಳಿಗೆ ಮನಸ್ಸಿಲ್ಲ. ಈ ವರ್ಷ ಭಾರತದ ಮುಖಕ್ಕೆ ಹೊಡೆಯುವ ಹಾಗೆ ಅಮೆರಿಕದ ಹೇಳಿದೆ- ಸುತಾರಾಂ ಅಂಡರ್‌ ಸನ್‌ನನ್ನು ಒಪ್ಪಿಸಲು ಸಾಧ್ಯವಿಲ್ಲ.

ದೀರ್ಘ ಕೋರ್ಟ್‌ ವಿಚಾರಣೆ ಬಳಿಕ ಬಾಕಿ ಉಳಿದಿರುವ 1567ಕೋಟಿ ರೂ.ಗಳನ್ನು ತಕ್ಷಣವೇ ಸಂತ್ರಸ್ತರಿಗೆ ವಿತರಿಸಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹಣ ಮಾತ್ರ ಯಾರಿಗೆ ಸೇರಬೇಕಿದೆಯೋ ಅವರಿಗೆ ಸೇರಿಲ್ಲ. ಯಾವಾಗ ಸೇರುವುದೋ ಗೊತ್ತಿಲ್ಲ. ಸೇರೀತೆಂಬ ಗ್ಯಾರಂಟಿಯೂ ಇಲ್ಲ.

ವಿಷಾನಿಲ ಸೋರಿಕೆಯಿಂದ ಕಲುಷಿತಗೊಂಡ ಭೋಪಾಲದ ಕೆಲ ಪ್ರದೇಶಗಳು ಇಂದಿಗೂ ವಾಸಕ್ಕೆ ಯೋಗ್ಯವಾಗಿಲ್ಲ. ವಿಷಾನಿಲದ ಕಮಟು ವಾಸನೆ ಈಗಲೂ ಮೂಗಿಗೆ ಬಡಿಯುತ್ತದೆ. ದುರಂತ ಸಂಭವಿಸಿದಾಗ ಎಂಟು ಸಾವಿರ ಟನ್‌ ವಿಷಕಾರಿ ರಾಸಾಯನಿಕವನ್ನು ಕಾರ್ಖಾನೆಯಲ್ಲೇ ಬಿಟ್ಟು ಬೀಗ ಜಡಿಯಲಾಗಿತ್ತು. ಅವುಗಳನ್ನು ಇಲ್ಲಿತನಕ ಸಂಸ್ಕರಿಸಲಾಗಿಲ್ಲ. ದುರಂತ ನಡೆದ ಸ್ಥಳವನ್ನು ಈವರೆಗೆ ಸ್ವಚ್ಛಗೊಳಿಸಲಾಗಿಲ್ಲ. ಇದರಿಂದ ಅಂತರ್ಜಲ ಕಲುಷಿತಗೊಂಡು ಜನ ಇಂದಿಗೂ ವಿಷಯುಕ್ತ ನೀರನ್ನೇ ಕುಡಿಯುವಂತಾಗಿದೆ. ಯಾರೂ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ. ಭೋಪಾಲದ ನೀರು, ಗಾಳಿ, ಮಣ್ಣು ಎಷ್ಟು ವಿಷಯುಕ್ತವಾಗಿದೆಯೆಂದರೆ ತಾಯಿಯ ಮೊಲೆ ಹಾಲಿನಲ್ಲೂ ಡೈಕ್ಲೋರೋ ಬೆಂಜೀನ್‌, ಕ್ಲೋರೊಫಾರ್ಮ, ಪಾದರಸ, ನಿಕೆಲ್‌ ಅಂಶಗಳಿರುವುದು ಬಹಿರಂಗವಾಗಿದೆ. ಹುಟ್ಟುವ ಮಗು ಸೇವಿಸುವ ಗಾಳಿ, ಆಹಾರ ಕೂಡ ವಿಷ. ಅಮ್ನೆಸ್ಟಿ ಇಂಟರ ನ್ಯಾಷನಲ್‌ ಈ ಎಲ್ಲ ಅಂಶಗಳತ್ತ ಸಮರ ಸಾರಿದ್ದರೂ ಏನೂ ಪ್ರಯೋಜನವಾಗಿಲ್ಲ. ಅಮೆರಿಕದಲ್ಲಿ ಅವಳಿಗೋಪುರ ಧ್ವಂಸವಾಗಿ ಏಳು ತಿಂಗಳೊಳಗೆ ಇಡೀ ತಾಣವನ್ನು ಸ್ವಚ್ಛಗೊಳಿಸಲಾಯಿತು. ಆದರೆ ಈ ದುರಂತಕ್ಕೆ ಕಾರಣವಾಗಿರುವ ಅಮೆರಿಕ ಕಂಪನಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಕಂಪನಿಯನ್ನು ಭಾರತದ ನ್ಯಾಯಾಲಯದ ಕಟಕಟೆ ಮುಂದೆ ತಂದು ನಿಲ್ಲಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ. ಈಗಂತೂ ಯೂನಿಯನ್‌ ಕಾರ್ಬೈಡ್‌ ಕಾರ್ಖಾನೆಯನ್ನು ಡೋವ್‌ ಕೆಮಿಕಲ್ಸ್‌ಗೆ ಮಾರಿರುವುದರಿಂದ ಯಾರನ್ನು ಕೇಳುವುದು ? ‘ಪರಿಹಾರ ಧನ ನೀಡುವುದಿಲ್ಲ ಏನ್ಮಾಡಿಕೊಳ್ತೀರಿ?’ ಎಂದು ಹೇಳಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಇದು ಒಂದು ರೀತಿಯಲ್ಲಿ ನಮ್ಮ ನ್ಯಾಯಾಂಗದ ಸೋಲು ಸಹ ಹೌದು.

ಭೋಪಾಲ ದುರಂತ ನಮ್ಮ ಜಿಡ್ಡುಗಟ್ಟಿದ ವ್ಯವಸ್ಥೆಯ ಪ್ರತಿಬಿಂಬ. ನಮ್ಮ ರಾಜಕಾರಣಿಗಳು ನೋಡಿ, ಡಿಸೆಂಬರ್‌ ಮೂರರಂದು ಹೇಗೆ ಕಂಬನಿ ಸುರಿಸಿದರೆಂದು. ಗಂಡ, ನಾಲ್ವರು ಮಕ್ಕಳನ್ನು ಕಳಕೊಂಡ ಪೂನಾಬಾಯಿಯಂಥ ನೂರಾರು ಹೆಂಗಸರು ಕಾಸು ಪರಿಹಾರ ಪಡೆಯದೇ ಎರಡು ದಶಕಗಳಿಂದ ಕಣ್ಣೀರು ಸುರಿಸುತ್ತಿದ್ದಾರಲ್ಲ , ಅವರಿಗೆ ಬೊಗಸೆಯಾಡ್ಡುವವರು ಯಾರು?

(ಸ್ನೇಹ ಸೇತು : ವಿಜಯ ಕರ್ನಾಟಕ)


ಪೂರಕ ಓದಿಗೆ-
ರಷೀದಾ-ಚಂಪಾ: ಬೆಂಕಿಯಲ್ಲಿ ಅರಳಿದ ಹೂಗಳು


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X