• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೂರು ಕೋಟಿಗೆ ಒಂದು ಬೆಳ್ಳಿ, ಆತ್ಮಾಭಿಮಾನಕ್ಕೆ ಕೊಳ್ಳಿ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಅಥೆನ್ಸ್‌ ಈಗ ಬರಿದಾಗಿದೆ. ಭಾರತವೂ ಬರಿಗೈಲಿ ವಾಪಸ್ಸಾಗಿದೆ.

ಹಾಸಿದರೆ ಚಾದರದಷ್ಟೂ ಅಗಲವಿಲ್ಲದ, ಬೀಸಿದರೆ ಗಾಳೀಪಟದಷ್ಟು ಉದ್ದವಿಲ್ಲದ, ಜನಸಂಖ್ಯೆಯಲ್ಲಿ ನಮ್ಮ ಕಲಾಸಿಪಾಳ್ಯ, ಕೋರಮಂಗಲದಷ್ಟು ವೀಸ್ತೀರ್ಣವಿಲ್ಲದ ದೇಶಗಳಾದ ಮಾಂಟೆನಿಗ್ರೂ, ಎಸ್ತೋನಿಯಾ, ಸ್ಲೊವಾಕಿಯಾ, ಜಮೈಕ ಚಿನ್ನವನ್ನು ಬಾಚಿ ಬಂದರೆ, ಶತಕೋಟಿ ಜನಸಂಖ್ಯೆಯಿರುವ ಭಾರತ ಮಾತ್ರ ಅದನ್ನು ಚಿನ್ನದಂಗಡಿಯಲ್ಲಿ ನೋಡಿ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಪದಕಗಳ ಪಟ್ಟಿಯಲ್ಲಿ 67ನೇ ಸ್ಥಾನ ಎನ್ನುವುದಕ್ಕಿಂತ ಕೊನೆಯಿಂದ ಒಂಬತ್ತನೆಯದು ಎನ್ನುವುದೇ ಹೆಚ್ಚು ಸಮಾಧಾನಕರ! ಅಮೆರಿಕ ಒಟ್ಟು 103 ಪದಕಗಳನ್ನು ಬಾಚಿಕೊಂಡರೆ ಭಾರತಕ್ಕೆ ದಕ್ಕಿದ್ದು ಒಂದೇ ಒಂದು. ಅದೂ ಬೆಳ್ಳಿ. ಕರವಸ್ತ್ರದಷ್ಟೂ ವಿಸ್ತ್ರೀರ್ಣವಿರದ ಜಾರ್ಜಿಯಾ, ರುಮೇನಿಯಾದಂಥ ದೇಶಗಳು ಹದಿನೈದು-ಇಪ್ಪತ್ತು ಪದಕಗಳನ್ನು ಪಡೆದವು. ಆ ದೇಶಗಳಿಗೆಲ್ಲ ಬಂಗಾರದ ಕಪ್‌ಗಳು ಬಂದರೆ ನಮಗೆ ಸಿಕ್ಕಿದ್ದು ಮಾತ್ರ ಚಿಪ್ಪು !

ಎಂಥ ನಾಚಿಕೆಗೇಡಿನ ಸಂಗತಿ ? ಇದೆಂಥ ದುರ್ಗತಿ? ನಿಜಕ್ಕೂ ಎಲ್ಲ ಭಾರತೀಯನೂ ತಲೆತಗ್ಗಿಸುವ ವಿಷಯವಿದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸ್ಥಾನವೇ ಇಲ್ಲ ಎಂದರೆ ಅದಕ್ಕಿಂತ ಮಾನಗೇಡಿ ಸಂಗತಿ ಇನ್ನೊಂದಿದೆಯಾ? ಕ್ಷಣಕ್ಷಣಕ್ಕೂ ನಾವು ಜನಸಂಖ್ಯೆಯಲ್ಲೊಂದೇ ಪ್ರಬಲರಾಗಿ ಸೆಣಸುವ ಚೀನಾ ಕೂಡ ಈ ಸಲ 63 ಪದಕಗಳನ್ನು ಪಡೆಯಿತು. ಅಮೆರಿಕಕ್ಕೆ 35 ಚಿನ್ನ ಬಂದರೆ ಚೀನಾಕ್ಕೆ ಬಂದಿದ್ದು 32. ಪದಕಗಳ ಪಟ್ಟಿಯಲ್ಲಿ ಎರಡನೆ ಸ್ಥಾನ. ಹಾಗೆ ನೋಡಿದರೆ ಚೀನಾ ಒಲಂಪಿಕ್ಸ್‌ ಕ್ರೀಡಾಕೂಟವನ್ನು ಪ್ರವೇಶಿಸಿದ್ದೇ 1980ರಲ್ಲಿ. ಕೇವಲ ಇಪ್ಪತ್ತು ವರ್ಷಗಳಲ್ಲಿ ಚೀನಾ ಮೊದಲ ಮೂರರ ಪೈಕಿ ಒಂದಿಲ್ಲೊಂದು ಸ್ಥಾನ ಗಟ್ಟಿಮಾಡಿಕೊಂಡಿದೆ.

Rajyavardhan Singh Rathoreಅದೇ ನಮ್ಮ ಸ್ಥಿತಿ ಹೇಗಿದೆ ನೋಡಿ. 1900ರಿಂದ ಅಂದರೆ ಕಳೆದ 104 ವರ್ಷಗಳಿಂದ ನಮಗೆ ಒಲಿಂಪಿಕ್ಸ್‌ನಲ್ಲಿ ಒಂದೇ ಒಂದು ಚಿನ್ನದ ಪದಕ ಪಡೆಯಲು (ಹಾಕಿ ಬಿಟ್ಟು) ಈ ತನಕ ಸಾಧ್ಯವಾಗಿಲ್ಲ. ಇಲ್ಲಿಯತನಕ ನಮಗೆ ಬಂದಿದ್ದು ಕೇವಲ ಮೂರು ಕಂಚಿನ ಪದಕಗಳು. ಮೊನ್ನೆ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ಗೆ ಸಿಕ್ಕಿದ್ದು ಶತಮಾನದಲ್ಲಿ ಮೊದಲ ಬೆಳ್ಳಿ. ನಮ್ಮ ಬಗ್ಗೆ ಮರುಕಪಟ್ಟುಕೊಳ್ಳುವುದಕ್ಕಿಂತ ಬೇರೇನು ಮಾಡಲು ಸಾಧ್ಯವಿಲ್ಲ. ಆ ಪರಿ ಒಲಿಂಪಿಕ್ಸ್‌ನಲ್ಲಿ ನಮ್ಮ ಮಾನ-ಮರ್ಯಾದೆ ಹರಾಜಾಗಿದೆ.

ಒಲಿಂಪಿಕ್ಸ್‌ನಲ್ಲಿ ನಮಗ್ಯಾಕೆ ಪದಕಗಳು ಬರಲಿಲ್ಲ ಎಂದು ಕೇಳಿದರೆ ಹೊಟ್ಟೆ ತುಂಬಾ ಸಮಾಧಾನವಾಗುವಂಥ ಉತ್ತರಗಳನ್ನು ನಮ್ಮ ಕ್ರೀಡಾಸಚಿವರು, ಕ್ರೀಡಾ ಪ್ರಾಧಿಕಾರದ ಪದಾಧಿಕಾರಿಗಳು, ಕೋಚ್‌ಗಳು ಕೊಡುತ್ತಾರೆ. ಪದಕ ಪಡೆಯುವುದೆಷ್ಟು ಕಷ್ಟ ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತಾರೆ. ನಾವು ಸೋತಿದ್ದು ಹೇಗೆ ಎಂಬುದನ್ನೂ ಹೇಳುತ್ತಾರೆ. ನಾವು ಎಡವಿದ್ದೆಲ್ಲಿ ಎಂಬುದನ್ನೂ ಮನವರಿಕೆ ಮಾಡಿಕೊಡುತ್ತಾರೆ. ಪದಕ ಪಡೆಯುವುದು ಹೇಗೆ ಹಾಗೂ ಹಾಗೆ ಪದಕ ಪಡೆಯಬಹುದಾದರೆ ನಮಗೇಕೆ ಸಾಧ್ಯವಾಗಲಿಲ್ಲ ಎಂದು ಕೇಳಿದರೆ ಅವರ ಬಳಿ ಉತ್ತರವಿರುವುದಿಲ್ಲ. ಪಲಾಯನವಾದಿ ಓಟದಲ್ಲಿ ನಮಗೆ ಚಿನ್ನ !

ಕಿತ್ತು ಕಿಲುಸಾರೆದ್ದು ಹೋದ ಕ್ಷೇತ್ರವೆಂದರೆ ಕೇವಲ ರಾಜಕೀಯ ಒಂದೇ ಎಂದು ನಾವು ಭಾವಿಸಿದ್ದರೆ ನಮ್ಮಷ್ಟು ಗಾಂಪರು ಯಾರೂ ಇರಲಿಕ್ಕಿಲ್ಲ. ರಾಜಕೀಯದಷ್ಟೇ ಹೊಲಸೆದ್ದು ಹೋಗಿರುವುದರಲ್ಲಿ ಕ್ರೀಡೆಯೂ ಒಂದು. ರಾಜಕಾರಣದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟು ಇರಬಹುದು. ಆದರೆ ಕ್ರೀಡೆಯಲ್ಲಿ ಮಾತ್ರ ರಾಜಕೀಯ ಹಾಗೂ ರಾಜಕಾರಣಿಗಳು ಇರಲೇಬಾರದು. ಆದರೆ ನಮ್ಮ ದೇಶದಲ್ಲಿ ಏನಾಗಿದೆ ನೋಡಿ. ರಾಜಕೀಯವಂತೂ ರಾಜಕಾರಣಿಗಳಿಂದ , ವೃತ್ತಿ ರಾಜಕಾರಣಿಗಳಿಂದ ತುಂಬಿ ಹೋಗಿದೆ. ಪರವಾಗಿಲ್ಲ ಬಿಡಿ. ಆದರೆ ಕ್ರೀಡಾರಂಗವೂ ರಾಜಕಾರಣಿಗಳಿಂದಲೇ ತುಂಬಿಹೋಗಿದೆ. ರಾಜಕಾರಣಿಗಳ ವಿರುದ್ಧದ ಸಿಟ್ಟು, ನಂಜಿನಿಂದ ಈ ಮಾತನ್ನು ಹೇಳುತ್ತಿಲ್ಲ. ವಿವಿಧ ಕ್ರೀಡಾ ಪ್ರಾಧಿಕಾರ, ಕ್ರೀಡಾಸಂಸ್ಥೆಗಳಲ್ಲಿರುವ ರಾಜಕಾರಣಿಗಳ ಕಿರ್ದಿ ಇಂತಿದೆ- ಸುರೇಶ್‌ ಕಲ್ಮಾಡಿ, ಪ್ರಿಯರಂಜನ್‌ ದಾಸ ಮುನ್ಷಿ , ಪ್ರಫುಲ್‌ ಪಟೇಲ್‌, ವಿ.ಕೆ.ಮಲ್ಹೋತ್ರಾ, ಜಗದೀಶ ಟೈಟ್ಲರ್‌, ವಿದ್ಯಾ ಸ್ಟೋಕ್ಸ್‌, ದಿಗ್ವಿಜಯ್‌ ಸಿಂಗ್‌, ವಿ.ಪಿ,ಶುಕ್ಲಾ, ಆರ್‌.ಕೆ.ಆನಂದ, ವಿಜಯ ಮಲ್ಯ, ಸುಖದೇವ ಸಿಂಗ್‌ ಧಿಂಡ್ಸಾ, ಶರದ್‌ ಪವಾರ್‌, ಅರುಣ್‌ ಜೇಟ್ಲಿ, ಲಾಲು ಪ್ರಸಾದ ಯಾದವ್‌, ಬನ್ಸಿಲಾಲ್‌ ಪುತ್ರ ರಾಜಬೀರ್‌ ಸಿಂಗ್‌.. ಇಂಥ ರಾಜಕಾರಣಿಗಳ ಕಟ್ಟಿಕೊಂಡಿರುವ ಕ್ರೀಡಾರಂಗ ಮುನ್ನಡೆಯಬೇಕಾದ ಪರಿಸ್ಥಿತಿ ಬಂದಿದೆ. ಜಾಲಿಮುಳ್ಳಿನ ಮರದ ಕೆಳಗೆ ಜಾಲಿಮುಳ್ಳಿನ ಗಿಡಗಳು ಹುಟ್ಟಬಹುದೇ ಹೊರತು ಮಾವಿನ ಮರ ಹುಟ್ಟಲು ಸಾಧ್ಯವಿಲ್ಲ. ತೆಂಗಿನ ಮರ ಬೆಳೆಯುವುದಿಲ್ಲ.

ಕಾಂಗ್ರೆಸ್‌ ಮುಖಂಡ, ಮಾಜಿ ಮಂತ್ರಿ, ಹಾಲಿ ಎಂಪಿ ಸುರೇಶ್‌ ಕಲ್ಮಾಡಿ ಇಂಡಿಯನ್‌ ಲಿಂಪಿಕ್ಸ್‌ ಅಸೋಸಿಯೇಶನ್‌ಗೆ ಕಳೆದ ಎಂಟು ವರ್ಷಗಳಿಂದ ಅಮರಿಕೊಂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯುವ ಚುನಾವಣೆಗೆ ಮತ್ತೊಂದು ಅವಧಿಗೆ ಗೆಲ್ಲಲು ಎಲ್ಲ ತಯಾರಿ ನಡೆಸಿದ್ದಾರೆ. ಅಷ್ಟೇ ಅಲ್ಲ ಗೆದ್ದು ಬರುತ್ತಾರೆ. ಇದೇ ಕಲ್ಮಾಡಿ ಅಮೆಚೂರ್‌ ಅಥ್ಲೀಟ್ಸ್‌ ಅಸೋಸಿಯೇಶನ್‌ ಆಫ್‌ ಇಂಡಿಯಾಕ್ಕೆ ಹದಿನಾರು ವರ್ಷಗಳಿಂದ ಅಧ್ಯಕ್ಷರು ಬೇರೆ. ಮೊನ್ನೆ ಮತ್ತೆ ನಾಲ್ಕು ವರ್ಷ ಅವಧಿಗೆ ಆಯ್ಕೆಯಾದರು. ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕಳಪೆ ಪ್ರದರ್ಶನ ಪ್ರತಿಭಟಿಸಿ ಕಲ್ಮಾಡಿ ರಾಜೀನಾಮೆಗೆ ಒತ್ತಾಯಿಸಿದರೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯನ್ನು ತಮ್ಮ ಸ್ವಂತ ಆಸ್ತಿಯಂಬಂತೆ ಮಾಡಿಕೊಂಡಿರುವ ಕಲ್ಮಾಡಿ ಅವರಿಂದ ದೇಶದ ಕ್ರೀಡಾ ರಂಗಕ್ಕೆ ಏನು ಪ್ರಯೋಜನವಾಗಿದೆಯೆಂದು ರಹಸ್ಯ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ ಪುಣ್ಯಕಟ್ಟಿಕೊಳ್ಳಬೇಕು. ಜಾಲಿ ಮುಳ್ಳಿನ ಮರ ಎತ್ತರಕ್ಕೆ ಬೆಳೆಯುತ್ತಲೇ ಇದೆ!

ಬಿಜೆಪಿ ನಾಯಕ ವಿ.ಕೆ. ಮಲ್ಹೋತ್ರಾಗೂ ಬಿಲ್ಲುಗಾರಿಕೆಗೂ ಏನು ಸಂಬಂಧವೋ ಭಾರತಮಾತೆಯೇ ಹೇಳಬೇಕು. ಆರ್ಚರಿ ಫೆಡರೇಶನ್‌ ಆಫ್‌ ಇಂಡಿಯಾಕ್ಕೆ ಈ ಮಲ್ಹೋತ್ರಾ ಜಗ್ಗಿ ಇಪ್ಪತ್ತೆಂಟು ವರ್ಷಗಳಿಂದ ಅಧ್ಯಕ್ಷರಾಗಿ ಕುಳಿತುಬಿಟ್ಟಿದ್ದಾರೆ. ಈ ಫೆಡರೇಷನ್‌ನ ಕಚೇರಿ ಮಲ್ಹೋತ್ರಾ ಮನೆಯಲ್ಲಿಯೇ ಇದೆ. ಬಿಲ್ಲುಗಾರಿಕೆ ಫೆಡರೇಷನ್‌ ಮುಖ್ಯಸ್ಥರಾಗಿರುವ ಮಲ್ಹೋತ್ರಾ ಎಲ್ಲಿ ಗುರಿ ನೆಟ್ಟಿದ್ದಾರೆಂಬುದನ್ನು ಊಹಿಸಬಹುದು. ಯಾರೂ ಇವರನ್ನು ಕದಲಿಸಲು ಆಗುತ್ತಿಲ್ಲ.

ಕಾಂಗ್ರೆಸ್‌ ಮಂತ್ರಿ ಪ್ರಿಯ ರಂಜನ್‌ ದಾಸ್‌ ಮುನ್ಷಿಯೇನು ಕಮ್ಮಿ ಆಸಾಮಿಯಲ್ಲ . ಅಖಿಲ ಭಾರತ ಫುಟ್ಬಾಲ್‌ ಫೆಡರೇಶನಗೆ ಇವರು ಹನ್ನೆರಡು ವರ್ಷಗಳಿಂದ ಬ್ರಹ್ಮಕಪಾಲದಂತೆ ಅಂಟಿಕೊಂಡಿದ್ದಾರೆ. ಅದಕ್ಕೂ ಮೊದಲು ಉಪಾಧ್ಯಕ್ಷರಾಗಿದ್ದರು. ದಾಸ್‌ಮುನ್ಷಿ ಮಾತು ಕೇಳದವರಿಗೆ ‘ಫುಟ್ಬಾಲ್‌’ಗತಿಯೇ! ಅವರದೇ ಪಾರುಪತ್ಯ. ಅವರಿಗೆ ‘ದಾಸ’ನಾಗದಿದ್ದರೆ ಫುಟ್ಭಾಲ್‌ತಂಡ ಸೇರುವುದು ಕನಸು. ಮೊದಲ ಸಲ ದಾಸ ಮುನ್ಯಿ ಫೆಡರೇಶನ್‌ ಅಧ್ಯಕ್ಷರಾಗುವಾಗ ಫುಟ್ಬಾಲ್‌ನಲ್ಲಿ ಭಾರತ 72ನೇ ಸ್ಥಾನವನ್ನು ಹೊಂದಿತ್ತು. ಈಗ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ 167! ಭಾರತೀಯ ಫುಟ್ಬಾಲ್‌ಗೆ ಈ ಮಂತ್ರಿಯ ಕೊಡುಗೆಯಿದು. ಈ ಮಂತ್ರಿಯನ್ನು ಪದಚ್ಯುತ ಗೊಳಿಸದಿದ್ದರೆ ಭಾರತೀಯ ಫುಟ್ಬಾಲ್‌ಗೆ ಉಳಿಗಾಲವಿಲ್ಲವೆಂದು ಎರಡು ವರ್ಷಗಳ ಹಿಂದೆ ಪಶ್ಚಿಮ ಬಂಗಾಲ ಕಾಂಗ್ರೆಸ್‌ ನಾಯಕ ಬಸುದೇವ ಭಟ್ಟಾಚಾರ್ಯ ಗಲಾಟೆ ಮಾಡಿದ. ಅವರಿಗೆ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಟಿಕೆಟ್‌ ಸಿಗದಂತೆ ದಾಸ್‌ ಮುನ್ಷಿ ನೋಡಿಕೊಂಡರು ಫೇಡರೇಶನ್‌ ಅಧ್ಯಕ್ಷ ಸ್ಥಾನದಿಂದ ಜಪ್ಪಯ್ಯ ಅಂದರೂ ಅವರನ್ನು ಕದಲಿಸಲು ಸಾಧ್ಯವಿಲ್ಲ. ಆ ರೀತಿ ಕುಳಿತುಕೊಂಡು ಬಿಟ್ಟಿದ್ದಾರೆ.

ಈಗ ಅನಿವಾಸಿ ಭಾರತೀಯ ಖಾತೆ ಮಂತ್ರಿಯಾಗಿರುವ ಜಗದೀಶ್‌ ಟೈಟ್ಲರ್‌ 12 ವರ್ಷಗಳಿಂದ ಭಾರತದ ಜೂಡೋ ಫೆಡರೇಶನ್‌ ಅಧ್ಯಕ್ಷ. ಇದೂ ಕೂಡ ಭಾರಿ ಎತ್ತರದ ಜಾಲಿಮುಳ್ಳಿನ ಮರ.

ಹಿಮಾಚಲ ಪ್ರದೇಶ ಸರಕಾರದಲ್ಲಿ ಸಚಿವೆಯಾಗಿರುವ ವಿದ್ಯಾ ಸ್ಟೋಕ್ಸ್‌ ಕೂಡ ಕಡಿಮೆಯೇನಲ್ಲ. ಭಾರತೀಯ ಮಹಿಳಾ ಹಾಕಿ ಫೆಡರೇಶನ್‌13 ವರ್ಷಗಳಿಂದ ತಗುಲಿಕೊಂಡಿದ್ದಾರೆ. ಒಮ್ಮೆ ಈ ಸಚಿವೆಯ ಕೆಂಗಣ್ಣಿ ಗೆ ಗುರಿಯಾದ ಆಟಗಾರ್ತಿ, ಹಾಕಿ ಆಡುವುದನ್ನೇ ಬಿಡುವ ತನಕ ಪಿಶಾಚಿಯಂತೆ ಕಾಡಿದಳು. ಫೆಡರೇಶನ್‌ ವ್ಯವಹಾರದಲ್ಲಿ ಕೈ ಹಾಕುತ್ತಿದ್ದಾರೆಂದು ಅನಿಸಿದರೆ ವಿದ್ಯಾ ಸ್ಟೋಕ್ಸ್‌ ಚಂಡಿಯಾಗುತ್ತಾರೆ. ಅವರ ಆದೇಶವಿಲ್ಲದೇ ಹರಗೀಸು ಏನೂ ಆಗುವುದಿಲ್ಲ.

ದಾಸ್‌ ಮುನ್ಷಿಯರನ್ನಾಗಲಿ, ಮಲ್ಹೋತ್ರಾ ಅವರನ್ನಾಗಲಿ ನೀವ್ಯಾಕೆ ಈ ಪರಿ ಉಡ ಹಿಡಕೊಂಡ ಹಾಗೆ ಕ್ರೀಡಾಸಂಸ್ಥೆಗಳ ಕುರ್ಚಿಗಳ ಹಿಡಿದುಕೊಂಡಿದ್ದೀರಿ ಎಂದು ಕೇಳಿ. ‘ಭಾರತದಲ್ಲಿ ಕ್ರೀಡೆ ಪ್ರಭಾವಿ ಬಳಸಿ ಪ್ರಾಯೋಜಕತ್ವ ಪಡೆಯಬಹುದು. ನಮ್ಮಿಂದಾಗಿಯೇ ಇಷ್ಟಾ ದರೂ ಕ್ರೀಡೆ ಉಳಿದುಕೊಂಡಿದೆ’ ಎಂದು ಹೇಳುತ್ತಾರೆ. ತಾವೇ ಕ್ರೀಡೆಗೆ ಉಪಕಾರ ಮಾಡುತ್ತಿದ್ದೇವೆಂದು ಧಿಮಾಕಿನಿಂದ ಕೊಚ್ಚಿಕೊಳ್ಳುತ್ತಾರೆ.

ಇಂದಿನ ಆಕಾರ ಹಿಂದಿನದನ್ನು ಮರೆಯಿಸುವಂತಾಗಬಾರದು. ಅದು ಬೆಳವಣಿಗೆಯೂ ಅಲ್ಲ. ಪ್ರಗತಿಯೂ ಅಲ್ಲ ಎಂಬ ಸಾಮಾನ್ಯ ಪ್ರಜ್ಞೆಯೂ ಇವರಿಗೆ ಇದ್ದಂತಿಲ್ಲ. ಭಾರತದ ಕ್ರೀಡೆಗೆ ಹತ್ತಿರುವ ಗೆದ್ದಲುಗಳು ತಾವೆಂಬುದು ಅರಿವಿಗೆ ಬಂದಂತಿಲ್ಲ.

ರಾಷ್ಟ್ರದ ಏಕತೆ, ಸಮಗ್ರತೆ, ಭಾವೈಕ್ಯದ ಏಕೈಕ ಸೂಚಕ ಎಂಬಂತಾಗಿರುವ ಕ್ರಿಕೆಟ್‌ ಎಂಬ ಕ್ರೀಡೆಯ ಸಂಘಸಂಸ್ಠೆ ಗಳಿಗಂತೂ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ದಂಡು ಅಂಟಿಕೊಳ್ಳುತ್ತಿದೆ. ‘ಕಿರಿಕೆಟ್ಟು’ ಎಂದೇ ಹೇಳುವ, ಬಾಲನ್ನೇಕೆ ಕೈಯಲ್ಲಿ ತಿರುಗಿಸಿ ಎಸೆಯಬೇಕೆಂದು ಆಟದ ಬಗ್ಗೆ ಅಸಂಬದ್ದ ಮಾತಾಡುವ ಲಾಲುಪ್ರಸಾದ್‌ ಯಾದವ್‌ರಂಥವರೂ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ನೋಡಿದರೆ ಕ್ರಿಕೆಟ್‌ ಭವಿಷ್ಯದ ಬಗ್ಗೆ ಚಿಂತೆಯಾಗುತ್ತದೆ. ಶರದ್‌ ಪವಾರ್‌, ಚೌಟಾಲ, ಬನ್ಸಿಲಾಲರ ಪುತ್ರರೆಲ್ಲ ಕ್ರಿಕೆಟ್‌ ಮಂಡಲಿ ತಗುಲಿಕೊಂಡಿರುವುದು ಖಂಡಿತವಾಗಿಯೂ ಶುಭ ಸೂಚನೆಯಲ್ಲ.

ಕ್ರೀಡೆಯಲ್ಲಿ ಹಣವೂ ಇದೆ. ಖ್ಯಾತಿಯೂ ಇದೆ. ಜತೆಗೆ ಗ್ಲಾಮರ್‌ ಕೂಡ. ಒಬ್ಬ ಕ್ರಿಕೆಟ್‌ ತಾರೆ, ಟೆನಿಸ್‌ಪಟು ಈ ದಿನಗಳಲ್ಲಿ ಒಬ್ಬ ರಾಜಕಾರಣಿಗಿಂತ, ಮಂತ್ರಿಗಿಂತ ಹೆಚ್ಚು ಜನಪ್ರಿಯತೆ ಪಡೆಯುತ್ತಾನೆ. ಕ್ರಿಕೆಟ್‌, ಹಾಕಿ, ಫುಟ್ಬಾಲ್‌, ಅಥ್ಲೀಟ್‌- ಬೋರ್ಡ್‌, ಫೆಡರೇಶನ್‌ಗಳಲ್ಲಿ ಅಧ್ಯಕ್ಷರಾಗಿ ಕುಳಿತು ಕೊಳ್ಳುವುದು ಪ್ರತಿಷ್ಠೆಯ ವಿಷಯ. ಜತೆಗೆ ಪುಕ್ಕಟೆ ವಿದೇಶಿ ಪ್ರವಾಸ, ತಿರುಗಾಟ ಭತ್ಯೆ, ಪತ್ರಿಕಾ ಪ್ರಚಾರ ಪ್ಲಸ್‌ ಕಮಾಯಿ. ಇವೆಲ್ಲವೂ ಒಟ್ಟಿಗೆ ಸಿಗುವ ಜಾಗವನ್ನು ಯಾವ ರಾಜಕಾರಣಿ ತಾನೆ ಬಿಟ್ಟಾನು? ಹೀಗೆ ರಾಜಕಾರಣಿಗಳೆಲ್ಲ ಕ್ರೀಡಾರಂಗಕ್ಕಿಳಿದು ‘ಕೆಟ್ಟ ಆಟ’ ವನ್ನಾರಂಭಿಸಿದ್ದಾರೆ. ಇವರು ಕೈಯಿಟ್ಟ ಯಾವ ಕ್ಷೇತ್ರ ಬಚಾವಾದೀತು ಹೇಳಿ? ಒಲಿಂಪಿಕ್ಸ ನಲ್ಲಿ ಪದಕ ಯಾಕೆ ಬರುವುದಿಲ್ಲ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.

ಈ ದೇಶದಲ್ಲಿ ಏನೆಲ್ಲ ವಿಸ್ಮಯಗಳಾಗುತ್ತದೆ. ಸಾವಿರ ಕೋಟಿ ತಿಂದವರು ಬಾರಿಬಾರಿ ಆರಿಸಿಬರುತ್ತಾರೆ. ಮಂತ್ರಿಯಾಗುತ್ತಾರೆ. ಬಹುಮತವೇ ಇಲ್ಲದಿದ್ದವರು ಅಧಿಕಾರಕ್ಕೆ ಕುಳಿತುಕೊಳ್ಳುತ್ತಾರೆ. ದೇವೇಗೌಡರು ಬೇಕಾದರೆ ಮತ್ತೊಮ್ಮೆ ಪ್ರಧಾನಿಯಾಗಬಲ್ಲರು. ಹಳಿಗಳೆಲ್ಲ ನೀರಿನಲ್ಲಿ ಮುಳುಗಿದರೂ ರೈಲು ಮಾತ್ರ ಓಡುತ್ತಿರುತ್ತದೆ. ಮನಸ್ಸು ಮಾಡಿದರೆ ಸೂರ್ಯನೂ ಪಶ್ಚಿಮಕ್ಕೆ ಎದ್ದಾನು. ಭಾರತಕ್ಕೆ ಮಾತ್ರ ಒಲಂಪಿಕ್ಸ್‌ನಲ್ಲಿ ಪದಕ ಬರುವುದಿಲ್ಲ. ಕೆಟ್ಟ ಕ್ರೀಡೆಯಲ್ಲಿ ನಮ್ಮನ್ನು ಮೀರಿಸುವವರಿಲ್ಲ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more