ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನು ಬರೆದು ಬೀಗುತ್ತಿದ್ದ, ಅವಳು ಬಾಗಿ ಬಿಕ್ಕಳಿಸುತ್ತಿದ್ದಳು!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

Former American president Bill Clintons autobiography Monica Lewinsky in tearsಇತ್ತ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ತನ್ನ ಜೀವನಕಥೆ (ಆತ್ಮಕಥೆ ಎಂದು ಕರೆಯಲು ಮನಸ್ಸಾಗುತ್ತಿಲ್ಲ. ಕಾರಣ ಆತ್ಮ ಎಂದಿಗೂ ಸುಳ್ಳು ಹೇಳುವುದಿಲ್ಲ) ಬಿಡುಗಡೆ ಮಾಡುತ್ತಿದ್ದರೆ, ಅತ್ತ ಅವನ ಮಾಜಿ ಪ್ರೇಯಸಿ ಮೋನಿಕಾ ಲೆವಿನ್‌ಸ್ಕಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಟಿವಿ ಸಂದರ್ಶಕನ ಮುಂದೆ ಕುಳಿತ ಆಕೆ ಚಿಕ್ಕ ಮಗುವಿನಂತೆ ಬಿಕ್ಕುತ್ತಿದ್ದರೆ, My life ಎಂಬ ತನ್ನ ಹಳವಂಡದ ಕಥೆಗಳನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡುತ್ತಾ ಕ್ಲಿಂಟನ್‌ My life in politics was a great joy ಎಂದು ಹೇಳುತ್ತಿದ್ದ. ಈ ಪುಸ್ತಕ ಬರೆದು ಕ್ಲಿಂಟನ್‌ ಲಕ್ಷಾಂತರ ಡಾಲರ್‌ ಸಂಪಾದಿಸಿದರೆ, ಮುಂದಿನ ಜೀವನ ಹೇಗೆ ಸಾಗಿಸಬೇಕೆಂಬುದನ್ನು ತಿಳಿಯದ ಮೋನಿಕಾ ಕಲ್ಲವಿಲಗೊಂಡು ಕುಳಿತಿದ್ದಳು.

ಇಡೀ ಪುಸ್ತಕದಲ್ಲಿ ಕ್ಲಿಂಟನ್‌ ಮೋನಿಕಾ ಬಗ್ಗೆ ಒಂದೇ ಒಂದು ಪ್ರೀತಿಯ ಅಕ್ಷರವನ್ನು ಬರೆದಿಲ್ಲ. ಆಕೆಯ ಬಗ್ಗೆ ಅನುಕಂಪ ವ್ಯಕ್ತಪಡಿಸಿಲ್ಲ. ಮನಸೋ ಇಚ್ಛೆ ಪ್ರೀತಿಸಿದ ಸುಂದರಿಯ ಕುರಿತು, ಆ ಪ್ರೀತಿಯ ಸಂಬಂಧದ ಕುರಿತು ಒಳ್ಳೆಯ ಮಾತುಗಳನ್ನೂ ಬರೆದಿಲ್ಲ.

ಮೋನಿಕಾ ಬಿಕ್ಕುವುದು ಅದೇ ಕಾರಣಕ್ಕೆ. ನಮ್ಮಿಬ್ಬರ ಮಧ್ಯೆ ಎಂಥ ಸಂಬಂಧವಿತ್ತೆಂಬುದು ಇಡೀ ಜಗತ್ತಿಗೇ ಗೊತ್ತಿದೆ. ನಾವಿಬ್ಬರೂ ಗುಟ್ಟಾಗಿ ಇಂಥ ಸಂಬಂಧ ಹೊಂದಲು ಪರಸ್ಪರ ನಿರ್ಧರಿಸಿದ್ದೆವು. ಅಲ್ಲಿ ಒಬ್ಬರನ್ನೊಬ್ಬರು ಗೌರವಿಸುವ, ಇಷ್ಟಪಡುವ, ಪ್ರೀತಿಸುವ ಒಡಂಬಡಿಕೆಯಿತ್ತು. ಆದರೆ ಕ್ಲಿಂಟನ್‌ ಈ ರೀತಿಯಲ್ಲಿ ನನ್ನ ಕೈಬಿಡುತ್ತಾನೆಂದು ಭಾವಿಸಿರಲಿಲ್ಲ ಎಂದು ಮೋನಿಕಾ ಬಡಬಡಿಸುತ್ತಿದ್ದಳು. ಕ್ಲಿಂಟನ್‌ ಈ ಕೃತಿಯಲ್ಲಿ ಒಂದೆಡೆ ಬರೆದುಕೊಂಡಿದ್ದಾನೆ. ಪತ್ರಕರ್ತರು ಆತನನ್ನ ನೀನ್ಯಾಕೆ ಇಂಥ ಅಕ್ರಮ ಸಂಬಂಧಕ್ಕೆ ಮನಸ್ಸು ಮಾಡಿದೆ ಅಂತ ಕೇಳುತ್ತಾರೆ. ಅದಕ್ಕೆ ಆತ Because I could ಅಂತಾನೆ. ಈ ಒಂದು ಮಾತು ಆಕೆಯಲ್ಲಿ ಕ್ಲಿಂಟನ್‌ ಬಗ್ಗೆ ಹೊಸ ತಾತ್ಸಾರಕ್ಕೆ ಕಾರಣವಾಗಿದೆ.

ಬಹುಶಃ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ತನ್ನ ಲೈಂಗಿಕ ಹಗರಣ ಬಹಿರಂಗವಾದಾಗ ಅಮೆರಿಕದ ಅಧ್ಯಕ್ಷನಾಗಿದ್ದ ಕ್ಲಿಂಟನ್‌ ಹಾಗೂ ಆತನ ಹೆಂಡತಿ ಹಿಲರಿಯ ಸಂಬಂಧ ಸಂಪೂರ್ಣ ಹದಗೆಟ್ಟು ಹೋಗಿತ್ತು. ಒಬ್ಬರನ್ನೊಬ್ಬರು ಮುಖ ನೋಡುವುದು ಇರಲಿ, ಕ್ಲಿಂಟನ್‌ನನ್ನು ಬೆಡ್‌ರೂಮ್‌ಗೆ ಸಹ ಬಿಟ್ಟುಕೊಳ್ಳುತ್ತಿರಲಿಲ್ಲ. ಎರಡು ತಿಂಗಳು ಬೆಡ್‌ರೂಮಿನ ಬಾಗಿಲ ಮುಂದೆ ಕಾರ್ಪೆಟ್‌ ಮೇಲೆ ಅಂಗಾತ ಮಲಗಿ ರಾತ್ರಿ ಕಳೆಯುತ್ತಿದ್ದ. ಇಡೀ ಜಗತ್ತೆಲ್ಲ ಅಮೆರಿಕ ಅಧ್ಯಕ್ಷನಿಗೆ ಕೊಡಬೇಕಾದ ಮಾನ-ಮರ್ಯಾದೆ ಕೊಡುತ್ತಿದ್ದರೆ, ಕ್ಲಿಂಟನ್‌ ಊಟ-ನೀರು ಇಲ್ಲದೆ ಅಬ್ಬೇಪಾರಿಯಂತೆ ಶ್ವೇತಭವನದ ನೆಲದ ಮೇಲೆ ಬಿದ್ದುಕೊಂಡಿರುತ್ತಿದ್ದ.

ಆದರೂ ಕ್ಲಿಂಟನ್‌ಗೊಂದು ಪಟ್ಟ ಇತ್ತು. ಅಧಿಕಾರವಿತ್ತು. ಅಧ್ಯಕ್ಷನೆಂಬ ಕೋಡು ಇತ್ತು. ಇಡೀ ಜಗತ್ತು ತನ್ನೊಂದಿಗಿದೆಯೆಂಬ ಹುಚ್ಚು ನಂಬಿಕೆಯಿತ್ತು. ಆದರೆ ಮೋನಿಕಾಗೆ ಯಾರಿದ್ದರು? ಶ್ವೇತಭವನದ ಕೆಲಸ ಹೋಗಿತ್ತು. ಯಾರೂ ಕೆಲಸ ಕೊಡುತ್ತಿರಲಿಲ್ಲ. ಹೊರಗೆ ಬೀಳುವಂತಿರಲಿಲ್ಲ. ಹೊರಗೆ ಬಿದ್ದರೆ ಟಿವಿ ಕೆಮರಾಗಳು ಮುತ್ತಿಕ್ಕುತ್ತಿದ್ದವು, ಕುಕ್ಕುತ್ತಿದ್ದವು. ಜನರು ಬಾಯಿಗೆ ಬಂದಂತೆ ಮಾತಾಡುತ್ತಿದ್ದರು. ಶ್ವೇತಭವನದ ಶ್ವೇತ ಸೂಳೆ, ಬಿಚ್‌, ಕ್ಲಿಂಟನ್‌ ಕೀಪು ಎಂದೆಲ್ಲ ಹೀಗಳೆಯುತ್ತಿದ್ದರು. ವಾಷಿಂಗ್‌ಟನ್‌ನಲ್ಲಿ ಉಳಿದುಕೊಳ್ಳಲು ಮನೆ ಬಾಡಿಗೆಗೆ ಸಿಗುತ್ತಿರಲಿಲ್ಲ. ವಾಟರ್‌ಗೇಟ್‌ ಹೋಟೆಲ್‌ನಲ್ಲಿ ತಿಂಗಳಾನುಗಟ್ಟಳೆ ಉಳಿದುಕೊಂಡಳು. ರೂಮು ಬಾಡಿಗೆ ಕಟ್ಟಲು ಆಗಲಿಲ್ಲ. ಮೂರ್ನಾಲ್ಕು ತಿಂಗಳಲ್ಲಿ ಮೋನಿಕಾ ಹೈರಾಣಾಗಿ ಹೋದಳು. ಈಕೆಯ ನೆರವಿಗೆ ಯಾವ ನರಪಿಳ್ಳೆಯೂ ಬರಲಿಲ್ಲ. ಕಳಂಕಿತೆಯಾದರೆ ಪರವಾಗಿರಲಿಲ್ಲ. ಯಾರಿಗೂ ಬೇಡವಾದವಳಾಗಿ ಹೋದಳು. ಮೂರ್ನಾಲ್ಕು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಜನರೊಂದೇ ಅಲ್ಲ ಸೂರ್ಯನನ್ನು ನೋಡಿದರೂ ಆತ ಹಂಗಿಸಬಹುದೆಂದು ಭಾವಿಸಿ ರೂಮು ಸೇರಿಕೊಂಡಳು. ಈ ಮಧ್ಯೆ ಕ್ಲಿಂಟನ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದಳು. ಪ್ರಯೋಜನವಾಗಲಿಲ್ಲ.

ಐದಾರು ತಿಂಗಳುಗಳ ನಂತರ ಪ್ರಕರಣ ತಣ್ಣಗಾಯಿತು. ಕ್ಲಿಂಟನ್‌ನ ಅಧಿಕಾರವೂ ಹೋಯಿತು. ಆಗಲೂ ಕೆಲವು ಸ್ನೇಹಿತರ ಮೂಲಕ ಅವನನ್ನು ಸಂಪರ್ಕಿಸಲು ಯೋಚಿಸಿದಳು. ಆತನಿಗೆ ಅವಳ ಹೆಸರು ಸಾವಿರ ಚೇಳು ಕಡಿದಂತಾಗುತ್ತಿತ್ತು. ಆತ ಅವಳಿಂದ ಶಾಶ್ವತವಾಗಿ ದೂರವುಳಿಯಲು ಯಾವತ್ತೋ ನಿರ್ಧರಿಸಿದ್ದ.

ಇಲ್ಲಿ ಕ್ಲಿಂಟನ್‌-ಮೊನಿಕಾ ಲೈಂಗಿಕ ಹಗರಣ, ಹಾದರದ ಕತೆ ಮುಖ್ಯ ಅಲ್ಲ. ಶ್ವೇತಭವನ ಇಂಥ ಅದೆಷ್ಟು ಘಟನೆಗಳಿಗೆ ಸಾಕ್ಷಿಯಾಗಿದೆಯೋ ಏನೋ? ಆದರೆ ಕ್ಲಿಂಟನ್‌ ಹಾದರ ಮಾಡಿ ಸಿಕ್ಕಿಬಿದ್ದ. ಹೀಗಾಗಿ ಎಲ್ಲರಿಗೂ ಗೊತ್ತಾಯಿತು ಅಷ್ಟೆ. ಆದರೆ ಇದೇ ಕ್ಲಿಂಟನ್‌ ಮುಂದೇನು ಮಾಡಿದ? ಊರೂರು ಅಲೆಯುತ್ತ್ತಾ ಅಕ್ರಮ ಸಂಬಂಧಗಳ ವಿರುದ್ಧ ಮಾತನಾಡತೊಡಗಿದ. ಲೈಂಗಿಕ ಸಂಬಂಧಗಳಿಂದ ಹುಟ್ಟುವ ಏಡ್ಸ್‌ ಬಗ್ಗೆ ಭಾಷಣ ಬಿಗಿಯತೊಡಗಿದ. ಅಷ್ಟೇ ಅಲ್ಲ ಏಡ್ಸ್‌ ಬಗ್ಗೆ ಅರಿವು ಮೂಡಿಸಲು ದೇಶ ದೇಶ ಸಂಚರಿಸತೊಡಗಿದ. ಈಗ ಕ್ಲಿಂಟನ್‌ ಈ ಅಭಿಯಾನದ ಅಧಿಕೃತ ಅಂಬಾಸಿಡರ್‌! ವಿಶ್ವಸಂಸ್ಥೆ ಇಂದು ಕ್ಲಿಂಟನ್‌ನನ್ನು ತನ್ನ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಲೈಂಗಿಕ ಸಂಬಂಧವನ್ನು ಯಾಕೆ ಮಾಡಬಾರದು, ಒಂದು ವೇಳೆ ಮಾಡಿದರೂ ಏಡ್ಸ್‌ನಂಥ ಮಾರಕ ರೋಗದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಕ್ಲಿಂಟನ್‌ ಬಣ್ಣಿಸುತ್ತಾನೆ. ಈ ಕೆಲಸಕ್ಕೆ ಬೇರೆ ಯಾರೂ ಸಿಗಲ್ಲವಾ? ಅಥವಾ ಇದಕ್ಕೆ ಕ್ಲಿಂಟನ್‌ನೇ ಯೋಗ್ಯ ವ್ಯಕ್ತಿಯಾ? ಅಕ್ರಮ ಲೈಂಗಿಕ ಸಂಬಂಧವಿರಿಸಿಕೊಂಡೂ ಏಡ್ಸ್‌ ಹತ್ತಿಸಿಕೊಳ್ಳದ ಗಣ್ಯವ್ಯಕ್ತಿ ಮತ್ತ್ಯಾರೂ ಇರಲಿಕ್ಕಿಲ್ಲವೆಂದು ಕ್ಲಿಂಟನ್‌ನನ್ನು ಈ ಕೆಲಸಕ್ಕೆ ಹಚ್ಚಿರಬಹುದಾ?

ಎಂಥ ವಿಚಿತ್ರ ನೋಡಿ, ಕಳಂಕಿತರೇ, ಆಪಾದಿತರೇ ಇಂದು ಒಂದೊಂದು ಉದ್ದೇಶಕ್ಕಾಗಿ ಅಧಿಕೃತ ರಾಯಭಾರಿಗಳಾಗಿ ಜನರ ಮುಂದೆ ನಿಂತುಕೊಳ್ಳುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಕೆಲವು ಸಿಖ್‌ರಿಗೆ ಒಂದು ಐಡಿಯಾ ಹೊಳೆಯಿತು. ತಮ್ಮ ಪರಮಪವಿತ್ರ ಗ್ರಂಥ ಸಾಹಿಬ್‌ನ್ನು ಜನಸಾಮಾನ್ಯರಿಗೂ ತಲುಪಿಸಲು ಅವರೊಂದು ಯೋಜನೆ ಹಮ್ಮಿಕೊಂಡರು. ಈ ಗ್ರಂಥದಲ್ಲಿರುವ ಸಾರವನ್ನು ಅನ್ಯಧರ್ಮೀಯರಿ ಗೆತಿಳಿಸಿದರೆ ಅವರಿಗೆ ಸಿಖ್‌ ಧರ್ಮದ ಬಗ್ಗೆ ಮತ್ತಷ್ಟು ಹೆಮ್ಮೆ, ಗೌರವ ಮೂಡಬಹುದೆಂದು ಅವರು ಭಾವಿಸಿದರು. ಹಾಗಾದರೆ ಈ ಕೆಲಸವನ್ನು ಯಾರಿಗೆ ಒಪ್ಪಿಸುವುದು? ಸಿಖ್‌ರ ಮುಕುಟಮಣಿ ಯಾರು ಎಂಬ ಬಗ್ಗೆ ಯೋಚನೆ ಹರಿಯಲಾರಂಭಿಸಿತು. ಕಟ್ಟಕಡೆಗೆ ಈ ಕೆಲಸಕ್ಕೆ ಆಯ್ಕೆಗೊಂಡ ವ್ಯಕ್ತಿ ಯಾರು ಗೊತ್ತಾ? ಮೈಮೇಲೆ ಭೂತ ಬಂದವರು ಕೈ, ಕಾಲು, ಸೊಂಟ ಕುಣಿಸುವಂತೆ ಕುಣಿಯುವ ಬೋಲೋ ತರ ತರರ ಖ್ಯಾತಿಯ ದಲೇರ್‌ ಮೆಹಂದಿ! ಗುರು ಗ್ರಂಥ ಸಾಹೀಬ್‌ ಎಲ್ಲಿ, ದಲೇರ್‌ ಮೆಹಂದಿ ಎಲ್ಲಿ? ದಲೇರ್‌ ಮೆಹೆಂದಿ ತನ್ನ ಗಾಯನದ ವೂಲಕ ಜನಪ್ರಿಯನಾಗಿರಬಹುದು. ಆದರೆ ಗುರುಗ್ರಂಥ ಸಾಹಿಬ್‌ದಂಥ ಪವಿತ್ರ ಮಹಾಗ್ರಂಥದ ಮುಂದೆ ಆತನೆಲ್ಲಿ? ಅದಕ್ಕಿಂತ ಹೆಚ್ಚಾಗಿ ಆ ಗ್ರಂಥದಲ್ಲಿ ಏನಿದೆಯೆಂದು ಅವನಿಗೇನು ಗೊತ್ತು? ಈ ನಿರ್ಧಾರಕ್ಕೆ ತೀವ್ರ ಪ್ರತಿರೋಧಗಳು ಬರುತ್ತಿರುವಂತೆ ಮೆಹೆಂದಿ ಒಂದು ಭಾನಗಡಿಯಲ್ಲಿ ಸಿಕ್ಕಿಬಿದ್ದ. ಪೊಲೀಸರು ಅವನನ್ನು ಬಂಧಿಸಿದರು. ಒಂದು ವೇಳೆ ಅಧಿಕೃತ ಅಂಬಾಸಿಡರ್‌ ಎಂದು ಘೋಷಿಸಿಕೊಂಡ ನಂತರ ಆತನೇನಾದರೂ ಸಿಕ್ಕಿಬಿದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹಿಸಬಹುದು.

Amithabh Bachchanನಿಮಗೆ ಗೊತ್ತಿರಬಹುದು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ ಬ್ರ್ಯಾಂಡ್‌ ಅಂಬಾಸಿಡರ್‌ ಆಗದ ವಸ್ತುಗಳಿರಲಿಕ್ಕಿಲ್ಲ. ರೀಫಿಲ್‌ನಿಂದ ಹಿಡಿದು ಕಾರಿನ ತನಕ ಎಲ್ಲ ವಸ್ತುಗಳಿಗೂ ಅವರೇ ರಾಯಭಾರಿ. ಅವರು ಶಿಫಾರಸು ಮಾಡುವ ವಸ್ತುಗಳೆಲ್ಲವೂ ಭಾರಿ ಮಾರಾಟವಾಗುತ್ತವೆಯೆಂಬ ಭ್ರಮೆ ನಮ್ಮ ಜನರಿಗೆ ಹುಟ್ಟಿದೆ. ಹೀಗಾಗಿ ಅವರು ಎಲ್ಲ ವಸ್ತುಗಳನ್ನೂ ಖರೀದಿಸಿ ಎಂದು ಶಿಫಾರಸು ಮಾಡುತ್ತಾರೆ. ಅವರ ಈ ಶಿಫಾರಸು ರೀಫಿಲ್ಲು, ಫ್ರಿಜ್ಜು, ಫ್ಯಾನ್‌, ಕಾರು ಉಪ್ಪಿನಕಾಯಿಗೆ ಸೀಮಿತವಾಗಿದ್ದರೆ ಪರವಾಗಿರಲಿಲ್ಲ. ಅಮಿತಾಭ್‌ ಈಗ ಕೆಲವು ರಾಜ್ಯಗಳಿಗೂ ಅಧಿಕೃತ ರಾಯಭಾರಿಗಳಾಗಿದ್ದಾರೆ! ಉದಾಹರಣೆಗೆ ಬಚ್ಚನ್‌ರನ್ನು ಅಧಿಕೃತ ರಾಯಭಾರಿಯಾಗಿ ಇಟ್ಟುಕೊಂಡರೆ, ಯಾವುದೇ ಶ್ರೀಮಂತನನ್ನು ಸಂಪರ್ಕಿಸಿ ಬಂಡವಾಳ ಹೂಡುವಂತೆ ಮನವೊಲಿಸಹುದು. ಆ ರಾಜ್ಯದ ಪರವಾಗಿ ಬಚ್ಚನ್‌ ಶ್ರೀಮಂತರ ಮುಂದೆ ಹೋಗುತ್ತಾರೆ. ನೀವ್ಯಾಕೆ ಅಲ್ಲಿ ಹಣ ತೊಡಗಿಸಬೇಕೆಂದು ಹೇಳಿ ಬಂಡವಾಳ ಹರಿದುಬರುವಂತೆ ಮಾಡುತ್ತಾರೆ. ಒಬ್ಬ ಮುಖ್ಯಮತ್ರಿ ಮಾಡುವ ಕೆಲಸವನ್ನು ಬಚ್ಚನ್‌ ಅವರಿಂದ ಮಾಡಿಸಬಹುದಾದರೆ ಆ ರಾಜ್ಯಕ್ಕೆ ಮುಖ್ಯಮಂತ್ರಿಯೇಕೆ?

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಮಿತಾಭ್‌ ಬಚ್ಚನ್‌ ಅವರನ್ನು ಉತ್ತರಪ್ರದೇಶ ಸರಕಾರ ಹೊಸ ಜವಾಬ್ದಾರಿ ನಿಭಾಯಿಸುವಂತೆ ಕೇಳಿಕೊಂಡಿದೆ. ಅದಕ್ಕೆ ಅವರು ಒಪ್ಪಿದ್ದಾರೆ. ಜಗದ್ವಿಖ್ಯಾತ ತಾಜ್‌ಮಹಲ್‌ನ್ನು ಜನಪ್ರಿಯಗೊಳಿಸಲು ಉತ್ತರ ಪ್ರದೇಶ ಸರಕಾರ ಅಮಿತಾಭ್‌ ಅವರನ್ನು ಅಧಿಕೃತ ರಾಯಭಾರಿಯನ್ನಾಗಿ ನೇಮಿಸಿದೆ! ಎಲ್ಲಿಯ ತಾಜ್‌ಮಹಲ್‌? ಎಲ್ಲಿಯ ಅಮಿತಾಭ್‌?

ತನ್ನ ಹೆಂಡತಿಯ ಪ್ರೀತಿಯ ದ್ಯೋತಕವಾಗಿ ಶಹಜಹಾನ್‌ ಕಟ್ಟಿಸಿದ ತಾಜ್‌ಮಹಲ್‌ಗೆ ಮುನ್ನೂರೈವತ್ತು ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವುದು ಸರಕಾರದ ನಿರ್ಧಾರ. ತಪ್ಪಿಲ್ಲ. ಆದರೆ ಈ ಕೆಲಸಕ್ಕೆ ಅಮಿತಾಣ್‌ ಯಾಕೆ ಬೇಕು? ಎತ್ತರ ಕಾಯದ ಅಮಿತಾಭ್‌, ತಾಜ್‌ಮಹಲ್‌ಗಿಂತ ಎತ್ತರದವರಾ? ವಿಶ್ವದ ಅದ್ಭುತಗಳಲ್ಲೊಂದಾದ ತಾಜ್‌ಮಹಲ್‌ ಪ್ರಚಾರಕ್ಕೆ ವ್ಯಕ್ತಿಯಾಬ್ಬನನ್ನು ನಿಯೋಜಿಸಿದ್ದೇ ದೊಡ್ಡ ತಪ್ಪು. ಅದರಲ್ಲೂ ಅಮಿತಾಭ್‌ರನ್ನು ಈ ಕೆಲಸಕ್ಕೆ ಹಚ್ಚಿದ್ದು ಎರಡನೆಯ ದೊಡ್ಡ ತಪ್ಪು. ಯಾವ ಘನಂದಾರಿ ಕಾರ್ಯ ಮಾಡಿದ್ದಾರೆಂದು ಅಮಿತಾಭ್‌ರನ್ನು ಈ ಕೆಲಸಕ್ಕೆ ತೊಡಗಿಸಿದ್ದು? ಪ್ರತಿ ವರ್ಷ ಸರಕಾರಕ್ಕೆ ತೆರಿಗೆ ಕೊಡದೇ ವಂಚಿಸುವ, ವರ್ಷ ವರ್ಷ ನೂರಾರು ಕೋಟಿ ರೂ. ಗಳನ್ನು ಜಾಹೀರಾತು ರೂಪದರ್ಶಿಯಾಗಿ ಗಳಿಸಿಯೂ ಸುಳ್ಳು ಲೆಕ್ಕ ಕೊಟ್ಟು ಸರಕಾರಕ್ಕೆ ಟೋಪಿ ಹಾಕುವ, ವಿಶ್ವಸುಂದರಿ ಸ್ಪರ್ಧೆಯ ಸಂಘಟಕರಾಗಿ ಹತ್ತಾರು ಕೋಟಿ ರೂ.ಗಳ ಪಂಗನಾಮ ಹಾಕಿದ ಅಮಿತಾಭ್‌ ಅದೆಂಥ ಆದರ್ಶವನ್ನು ಪ್ರತಿಧಿಸಬಹುದೆಂಬುದು ಎಲ್ಲರಿಗೂ ಗೊತ್ತಿದೆ. ಅವರೊಬ್ಬ ಉತ್ತಮ ನಟನಾಗಿರಬಹುದು ಫುಲ್‌ಸ್ಟಾಪ್‌. ಅಷ್ಟಕ್ಕೇ ಅವರನ್ನು ಮೆಚ್ಚಬಹುದು. ಆದರೆ ತಾಜ್‌ಮಹಲ್‌ ಪ್ರಚಾರಕ್ಕೆ ಹೋಗಿ ಹೋಗಿ ಅಮಿತಾಭ್‌ರಂಥವರನ್ನು ಕರೆದುಕೊಂಡು ಬರುವುದಿದೆಯಲ್ಲ ಅದರಂತ ಮೂರ್ಖತನ ಇನ್ನೊಂದಿಲ್ಲ. ನಮ್ಮ ಸರಕಾರಕ್ಕಾಗಲಿ, ಅಮಿತಾಭ್‌ಗಾಗಲಿ ಒಂದು ಸಂಗತಿ ಗೊತ್ತಿಲ್ಲ- ತಾಜ್‌ಮಹಲ್‌ ಶಾಶ್ವತವಾದ ಸ್ಮಾರಕ. ಅಮಿತಾಭ್‌ ಸತ್ತ ನಂತರವೂ ಅದು ಹಾಗೇ ಇರುತ್ತದೆ! ಅದಕ್ಕೆ ಪ್ರಚಾರವೇಕೆ ಬೇಕು?

ನಾಳೆ ಸೂರ್ಯನ ಪ್ರಚಾರಕ್ಕೆ, ಅವನನ್ನು ಜನರಿಗೆ ಪರಿಚಯಿಸಲು ಹಾಲಿವುಡ್‌, ಬಾಲಿವುಡ್‌ ತಾರೆಗಳನ್ನು ಅಧಿಕೃತ ರಾಯಭಾರಿಗಳನ್ನಾಗಿ ನೇಮಿಸುವ ದಿನಗಳು ಬಂದರೆ ಅಚ್ಚರಿಯಿಲ್ಲ. ಇದೇ ಸಂಪ್ರದಾಯ ಮುಂದುವರಿದರೆ ನಾಳೆ ಕುವೆಂಪು, ಬೇಂದ್ರೆ ಅವರನ್ನು ಪರಿಚಯಿಸಲು ಕನ್ನಡದ ಹೋರಾಟಗಾರರಂಥ ವಾಟಾಳ್‌ ನಾಗರಾಜ್‌, ಜಿ. ನಾರಾಯಣಕುಮಾರ್‌, ಚಿಕ್ಕನಾಯಕನಹಳ್ಳಿ ಚಿಗಳಿಯಪ್ಪ ಮುಂತಾದವರನ್ನು ಅಧಿಕೃತ ರಾಯಭಾರಿಗಳನ್ನಾಗಿ ನೇಮಿಸಿಕೊಳ ್ಳಬೇಕಾದೀತು.

ಶುದ್ಧ ನಾನ್‌ಸೆನ್ಸ್‌!

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X