• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ವಿಶ್ವಾಸ, ಭರವಸೆಗಳ ಗಂಟು ರಕ್ಷಣೆಗೆ ಒಬ್ಬ ಜಾರ್ಜ್‌ ಸಾಕು!

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಮೊನ್ನೆ ಜಾರ್ಜ್‌ ಫರ್ನಾಂಡಿಸ್‌ ಸಿಕ್ಕಿದ್ದರು. ಸರಿಸುಮಾರು ಐದು ತಾಸು ! ಅದೇ ಕೆದರಿದ ಕೂದಲು, ಇಸ್ತ್ರಿಯಿಲ್ಲದ ಹಳೇ ಜುಬ್ಬಾ, ಕಲೆಯಾದ ಪೈಜಾಮ, ಅಂಗುಷ್ಠ ಕಿತ್ತುಹೋದ ಚಪ್ಪಲಿ, ಸವೆದು ಮಸುಕಾದ ವಾಚು, ಕೈಯಲ್ಲೊಂದಿಷ್ಟು ಪುಸ್ತಕ, ಪೇಪರು. ಆದರೆ ಮುಖದಲ್ಲಿ ಅದೇ ಕಳೆ, ಹೋರಾಟದ ಹುರುಪು, ಟಾಕೋಟಾಕು ಹರಿದು ಬರುವ ನೆನಪುಗಳು, ಅಪ್ಪಿಕೊಳ್ಳುವ ಮುಪ್ಪನ್ನು ದೂರಕ್ಕಟ್ಟುವ ಲವಲವಿಕೆ. ಮಾತಿಗೆ ಕುಳಿತರೆ ಶುದ್ಧ ಹರಟೆಕೋರ. ಐವತ್ತು ವರ್ಷಗಳ ಘಟನೆಗಳೆಲ್ಲ ಹಸ್ತರೇಖೆಗಳಷ್ಟೇ ಆಪ್ತ . ‘ನಾನೇನು ಮಾಡಲಿ? ನಾನು ಬೆಳೆದು ಬಂದಿದ್ದೇ ಹೀಗೇ. ಜೀವನವೆಲ್ಲ ಒಂದಿಲ್ಲೊಂದು ಹೋರಾಟದಲ್ಲಿಯೇ ಕಳೆಯುತ್ತಿದೆ. ಮುಂಬೈಯ ಫುಟ್ಬಾತ್‌ನಲ್ಲಿ ಅವೆಷ್ಟೋ ದಿನಗಳನ್ನು ಕಳೆದವನು ನಾನು. ವಸತಿ ಹಾಗೂ ಕಾರ್ಯಕ್ಷೇತ್ರಗಳೆರಡೂ ಅದೇ ಆಗಿತ್ತು. ಏನಿಲ್ಲವೆಂದರೂ ಐವತ್ತು ಸಲ ಜೈಲಿಗೆ ಹೋಗಿ ಬಂದಿರಬೇಕು’ ಎಂದೇ ಜಾರ್ಜ್‌ ಮಾತಿಗೆ ಮುನ್ನುಡಿ ಇಟ್ಟುಕೊಂಡರು.

‘ಕಳೆದ ನಲವತ್ತು ವರ್ಷಗಳಲ್ಲಿ ಸಿನಿಮಾ ನೋಡಿಲ್ಲ. ‘ದೋ ಬಿಘಾ ಜಮೀನ್‌’ ನಾನು ನೋಡಿದ ಕೊನೆಯ ಸಿನಿಮಾ.ಟಿವಿ ನೋಡುವುದಿಲ್ಲ. ಹೀಗಾಗಿ ಮನೆಯಲ್ಲಿ ಟಿವಿ ಇಲ್ಲ . ಐದಾರು ಜತೆ ಬಟ್ಟೆಗಳೇ ನನ್ನ ಸಂಗಾತಿ . ಅವುಗಳನ್ನು ನಾನೇ ತೊಳೆದು ಹಾಕಿಕೊಳ್ಳುತ್ತೇನೆ. ಕೂದಲು ಉದುರುತ್ತಿರುವುದರಿಂದ ಬಾಚಣಿಕೆ ಅಗತ್ಯ ಇಲ್ಲ. ಕೂದಲು ಇದ್ದಾಗಲೂ ಅದರ ಅಗತ್ಯವಿರಲಿಲ್ಲ. ಮೊಬೈಲು ಬೇಕೆಂದು ಅನಿಸಿಲ್ಲ. ಹೀಗಾಗಿ ಇಟ್ಟುಕೊಂಡಿಲ್ಲ. ಬೇಕೋ ಬೇಡವೋ ವಿವಾದಗಳಂತೂ ಜತೆಗಿದ್ದೇ ಇರುತ್ತವೆ’ ಎಂದು ಜಾರ್ಜ್‌ ನಕ್ಕರು.

ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಜಾರ್ಜ್‌ ಕೇಂದ್ರ ಸಚಿವ ಅನಂತಕುಮಾರ್‌ ಮನೆಯಲ್ಲಿ ರಾತ್ರಿ ಭೋಜನಕ್ಕೆ ಆಗಮಿಸಿದ್ದರು. ಹೊಟ್ಟೆ ತುಂಬಾ ಊಟ, ಪಕ್ಕದಲ್ಲಿ ಹರಟೆ, ಹರಟೆ, ಹರಟೆ. ರಾತ್ರಿ ಹೊರಳಿದ್ದೇ ಗೊತ್ತಾಗಲಿಲ್ಲ . ಮನೆಯ ಹೊರಗಡೆ ನಿಂತು ಮತ್ತಷ್ಟು ಹರಟೆ . ತಮ್ಮ ವಾಹನಕ್ಕಾಗಿ ಜಾರ್ಜ್‌ ಕಾಯುತ್ತಿರಬಹುದೆಂದು ಅಲ್ಲಿದ್ದವರು ಭಾವಿಸಿದ್ದರು. ಆದರೆ ಜಾರ್ಜ್‌ ಆ ಮಧ್ಯರಾತ್ರಿ ಎರಡು ಗಂಟೆಯಲ್ಲಿ ಒಬ್ಬರೇ ದಿಲ್ಲಿಯ ನಿರ್ಜನ ರಸ್ತೆಯಲ್ಲಿ ನಡೆದೇ ಮನೆ ಸೇರಿದ್ದರು!

ಕೈಗೊಬ್ಬ ಆಳು, ಕಾಲಿಗೊಬ್ಬ ಆಳು, ಅಂಗಾಂಗಗಳಿಗೆ ಅಂಗರಕ್ಷಕರು, ಏಕಕಾಲದಲ್ಲಿ ಓಡಾಡುವುದು ಒಂದೇ ಕಾರಿನಲ್ಲಾದರೂ ಮನೆಸುತ್ತ ಏಳೆಂಟು ಕಾರುಗಳನ್ನಿಟ್ಟುಕೊಂಡು ಷೋಕಿ ಉಡಾಯಿಸುವ ಇಂದಿನ ರಾಜಕಾರಣಿಗಳು ಹಾಗೂ ಮಂತ್ರಿಗಳ ಚಿತ್ರವೇ ನಮ್ಮ ಮನಸ್ಸನ್ನು ಆವರಿಸಿರುವಾಗ ಜಾರ್ಜ್‌ ಈ ನಡತೆ -ನಡಿಗೆ ತೀರ ತೀರ ವಿಚಿತ್ರವೆನ್ನಿಸುತ್ತದೆ.ಇಂದಿನ ಯಾವ ರಾಜಕಾರಣಿಯೂ ಕಾರಿಲ್ಲದೇ ಕೆಳಗಿಳಿಯುವುದಿಲ್ಲ . ಆಳಿಲ್ಲದೇ ಶರೀರವನ್ನು ಅಲುಗಾಡಿಸುವುದಿಲ್ಲ. ಇಂಥವರ ಮಧ್ಯೆ ಜಾರ್ಜ್‌ ನಮಗೆ ಗೋಚರಿಸುವುದು ವಿಚಿತ್ರವಾಗಿಯೇ.

ಇನ್ನೊಂದು ವಿಚಿತ್ರ ಅಂದರೆ ಕೃಷ್ಣ ಮೆನನ್‌ ಮಾರ್ಗ್‌ನಲ್ಲಿರುವ ಜಾರ್ಜ್‌ ಮನೆಗೆ ಗೇಟ್‌ ಇಲ್ಲ . ಹಿಂದೆ ಆಂತರಿಕ ಭದ್ರತಾ ಸಚಿವರಾಗಿದ್ದ ಎಸ್‌.ಬಿ.ಚವಾಣ್‌ ಮನೆಯೂ ಇದೇ ಮಾರ್ಗದಲ್ಲಿತ್ತು. ಭದ್ರತಾ ದೃಷ್ಟಿಯಿಂದ ಅಲ್ಲೊಂದು ನಿಯಮವಿತ್ತು. ಚವಾಣ್‌ ಮನೆಯಿಂದ ಹೋಗುವಾಗ ಹಾಗೂ ಬರುವಾಗ ಆ ಮಾರ್ಗ ದಲ್ಲಿರುವ ಇತರ ಮನೆಗಳ ಗೇಟುಗಳನ್ನು ಕಡ್ಡಾಯವಾಗಿ ಮುಚ್ಚಬೇಕಾಗುತ್ತಿತ್ತು. ಕೆಲಮೊಮ್ಮೆ 10-15 ನಿಮಿಷಗಳಾದರೂ ಗೇಟುಗಳನ್ನು ತೆರೆಯುತ್ತಿರಲಿಲ್ಲ. ಇದರ ಉಸಾಬರಿಯೇ ಬೇಡವೆಂದು ಜಾರ್ಜ್‌, ಗೇಟುಗಳನ್ನು ಕಿತ್ತು ಹಾಕಿಸಿ ಬಿಟ್ಟರು! ಅಂದು ಕಿತ್ತ ಗೇಟು ಇಂದಿಗೂ ಹಾಗೆಯೇ ಉಳಿದಿದೆ. ಜಾರ್ಜ್‌ ಮನೆಯಾಳಗೆ ಕಾಲಿಟ್ಟರೆ, ಒಬ್ಬ ಕೇಂದ್ರ ಮಂತ್ರಿಯ ಮನೆಯಲ್ಲಿ ಕಾಣುವ ಯಾವ ಐಷಾರಾಮವೂ ಕಾಣುವುದಿಲ್ಲ. ಮನೆಯ ಮುಂದೆ ಕಾರುಗಳೂ ಇಲ್ಲ. ಈಗಂತೂ ಜಾರ್ಜ್‌ಗೆ ಮಂತ್ರಿಗಿರಿಯೂ ಇಲ್ಲ. ಪಾರ್ಲಿಮೆಂಟ್‌ ಕಾಲ್ನಡಿಗೆಯಲ್ಲೇ. ಮಂತ್ರಿ ಪದವಿ ಇದ್ದಾಗಲೂ ಸೌತ್‌ಬ್ಲಾಕ್‌ನಲ್ಲಿರುವ ಕಚೇರಿಗೆ ಅನೇಕ ಸಲ ಕಾಲ್ನಡಿಗೆಯಲ್ಲಿಯೇ ಹೋದದ್ದುಂಟು. ಇಂದಿಗೂ ಲಿಫ್ಟ್‌ ಎಂದರೆ ಅಲರ್ಜಿ. ಎಷ್ಟೇ ಎತ್ತರದ ಕಟ್ಟಡವಾದರೂ ಲಿಫ್ಟ್‌ ಬೇಡ. ಈ ಮಾತು ಕಟ್ಟಡಕ್ಕೆ ಮಾತ್ರ ಸೀಮಿತ ಅಲ್ಲ. ಸಿಯಾಚಿನ್‌ ಬೆಟ್ಟಕ್ಕೂ ಅನ್ವಯ. ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ಗೆ, ಮೂಳೆಗಳನ್ನು ಸಹ ಕೊರೆಯುವ ಮೈನಸ್‌ ನಲವತ್ತು ಶೀತವಿರುವ ಸಿಯಾಚಿನ್‌ಗೆ, ಯಾವ ರಾಜಕಾರಣಿ, ಮಂತ್ರಿ, ಪ್ರಧಾನ ಮಂತ್ರಿಯೂ ಭೇಟಿ ಕೊಡದ ಸಿಯಾಚಿನ್‌ಗೆ ಜಾರ್ಜ್‌ ಏನಿಲ್ಲವೆಂದರೂ 40 ಬಾರಿ ಹೋಗಿ ಬಂದಿದ್ದಾರೆ. ಸಿಯಾಚಿನ್‌ ಎಂಥ ಕಟು ಶೀತ ಪ್ರದೇಶವೆಂದರೆ ಅಲ್ಲಿ ಸೈನಿಕರ ಗುಂಡಿಗಿಂತ ಕೊರೆಯುವ ಶೀತದಿಂದ ಹೆಚ್ಚು ಮಂದಿ ಸತ್ತಿದ್ದಾರೆ. ಅಂಥ ಪ್ರದೇಶಕ್ಕೆ ಒಮ್ಮೆ ಹೋದವನು ಮತ್ತೊಂದು ಸಲ ಹೋಗಲಾರ. ಅಲ್ಲಿ ಜಾರ್ಜ್‌ ಸೈನಿಕರ ಡೇರೆಯಲ್ಲೇ ಕುಳಿತು ತಿಂಡಿ ಹಂಚಿಕೊಂಡು ತಿಂದಿದ್ದಾರೆ. ಅಲ್ಲಿ ಮೈಚೆಲ್ಲಿ ಮಲಗಿದ್ದಾರೆ. ಅದೇ ಡೇರೆಯನ್ನು ಕಚೇರಿಯನ್ನಾಗಿ ಮಾರ್ಪಡಿಸಿಕೊಂಡು ಸರಕಾರಿ ಕಡತಗಳನ್ನು ನೋಡಿದ್ದಾರೆ.

ಸೇವೆಯ ಶಿಬಿರಕ್ಕೆ ರಕ್ಷಣಾ ಸಚಿವರೊಬ್ಬರು ಹೋದರೆ, ಅಲ್ಲಿ ಬ್ಯಾಂಡು, ಕಹಳೆ, ಪಥಸಂಚಲನ, ಸೆಲ್ಯೂಟ್‌ ಎಲ್ಲವೂ ಶಿಷ್ಟಾಚಾರ . ಆದರೆ ಜಾರ್ಜ್‌ಗೆ ಅವೆಲ್ಲ ವರ್ಜ್ಯ. ಇವೆಲ್ಲ ‘ಕೂಡದು’ ಎಂದು ಕಟ್ಟಪ್ಪಣೆ ವಿಧಿಸಿದ್ದರಿಂದ ಜಾರ್ಜ್‌ ಯಾವುದೇ ಸೇನಾ ಶಿಬಿರಕ್ಕೆ ಹೋದರೂ ಈ ಧಾಂಧೂಂ ಇರುತ್ತಿರಲಿಲ್ಲ. ಬರೀ ಬಿಸಿನೆಸ್‌.

ಬಹುಶಃ ಜಾರ್ಜ್‌ ತಮಗೆ ವಿಧಿಸಿಕೊಂಡಿರುವ ಡ್ರೆಸ್‌ಕೋಡ್‌ ನಿಬಂಧನೆಯನ್ನು ಸಡಿಲಿಸಿದ್ದು ಒಂದೇ ಒಂದು ಸಲ . ಫೈಟರ್‌ ವಿಮಾನಗಳ ಪೈಲಟ್‌ಗಳು ಎಂಥ ಮನಸ್ಥಿತಿಯಲ್ಲಿ ಹಾಗೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆಂಬುದನ್ನು ನೋಡಲು ಜಾರ್ಜ್‌ ಸುಖೋಯ್‌ ವಿಮಾನದಲ್ಲಿ ಹಾರಲು ನಿರ್ಧರಿಸಿದಾಗ ಫ್ಲಾಯಿಂಗ್‌ ಜಾಕೆಟ್‌, ಟ್ರೌಸರ್‌,ಬೂಟುಗಳನ್ನು ಧರಿಸಿದ್ದು . ಪ್ರಾಯಶಃ ಜಾರ್ಜ್‌ ಸುಖೋಯ್‌ದಲ್ಲಿ ಹಾರಿದ ಮೊದಲ 70ದಾಟಿದ ಮನುಷ್ಯ . ಸುಖೋಯ್‌ದಲ್ಲಿ ಜಾರ್ಜ್‌ ಹಾರಿಬಂದು ಕೆಳಗಿಳಿಯುತ್ತಿದ್ದರೆ ಯುದ್ಧ ವಿಮಾನಗಳ ಪೈಲಟ್‌ಗಳೆಲ್ಲ ರೋಮಾಂಚಿತರಾಗಿ ಗದ್ಗದಿತರಾಗಿದ್ದರು. ಅದೇ ಜಾರ್ಜ್‌ ನೌಕಾಪಡೆಯ ಜಲಾಂತರ್ಗಾಮಿ ನೌಕೆಯಲ್ಲಿ ರಾತ್ರಿಯಿಡೀ ನೀರಿನಡಿ ಕಳೆದಿದ್ದರು. ಅಷ್ಟೇ ಅಲ್ಲ ಸೇನೆಯ ಸಶಸ್ತ್ರ ರೆಜಿಮೆಂಟ್‌ಗೆ ಹೋದಾಗ ಯುದ್ಧದ ಟ್ಯಾಂಕ್‌ನೊಳಗೆ ಕುಳಿತು ಗಡಿಪ್ರದೇಶದಲ್ಲಿ ಗಸ್ತು ತಿರುಗಿದ್ದರು. ರಕ್ಷಣಾ ಸಚಿವರೊಬ್ಬರು ಆಕಾಶ -ಭೂಮಿ-ಪಾತಾಳದಲ್ಲಿ ಸಂಚರಿಸಿ ಸೇನೆಯ ಮೂರೂ ಪಡೆಗಳನ್ನು ಹುರಿದುಂಬಿಸಿದ್ದು ಹೀಗೇ.

ಮಂಗಳೂರಿನಲ್ಲಿ ಹುಟ್ಟಿದ ಜಾರ್ಜ್‌ ಮೂಲತಃ ಕ್ರಿಯಾಶೀಲ, ಛಲಗಾರ ಹಾಗೂ ನಂಬಿದ್ದನ್ನು ಆಚರಣೆಗೆ ತರುವ ಹಠವಾದಿ. ಜಾರ್ಜ್‌ ಸ್ವಯಂ ನಿರ್ಮಿತ (self made) ವ್ಯಕ್ತಿ. ಜೀವನದಲ್ಲಿ ನಂಬಿದ್ದು ಇಬ್ಬರನ್ನೇ-ಡಾ.ಲೋಹಿಯಾ ಹಾಗೂ ಜೆಪಿ. ಅದ್ಯಾವ ಗಳಿಗೆಯಲ್ಲಿ ಸಾರ್ವಜನಿಕ ರಂಗಕ್ಕೆ ಕಾಲಿಟ್ಟರೋ ವಿವಾದ, ಆರೋಪ, ಟೀಕೆಗಳು ಮಾತ್ರ ಅವರನ್ನು ಬಿಡಲಿಲ್ಲ. ಹಾಗೆ ನೋಡಿದರೆ, 19ನೇ ವಯಸ್ಸಿನಲ್ಲಿಯೇ ತಂದೆ ಜಾರ್ಜ್‌ರನ್ನು ಮನೆಯಿಂದ ಹೊರಹಾಕಿದರು. ತಂದೆಗೆ ಮಗ ಪಾದ್ರಿಯಾಗಲಿ ಎಂದಿತ್ತು. ಆದರೆ ಜಾರ್ಜ್‌ಗೆ ಆಗಲೇ ಸೋಷಿಯಲಿಸ್ಟ್‌ ಆಗಬೇಕೆಂಬ ತಲಬು. ಮನೆಯಿಂದ ಹೊರಬಿದ್ದು ನೇರವಾಗಿ ಹೊರಟಿದ್ದು ಮುಂಬೈಗೆ. ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯಲ್ಲಿ ಪ್ರೂಫ್‌ ರೀಡರ್‌ ಕೆಲಸ. ದಿನವಿಡೀ ಪತ್ರಿಕಾ ಕಚೇರಿಯಲ್ಲಿ ಕೆಲಸ. ಅನಂತರ ಕ್ಷುದ್ರ ನಗರಿ ಮುಂಬೈಯ ಕೊಳೆಗೇರಿಗಳಲ್ಲಿ, ಫುಟ್‌ಪಾತ್‌ನಲ್ಲಿ, ಬಂದರುಗಳಲ್ಲಿ ದೈನೇಸಿ ಬದುಕು ಸಾಗಿಸುವ ಅಸಂಖ್ಯ ಜನರನ್ನು ಸಂಘಟಿಸಿ ಅವರ ಹಕ್ಕಿಗಾಗಿ ಹೋರಾಡಲು ಸಂಕಲ್ಪ. ಐವತ್ತು ವರ್ಷಗಳ ಹಿಂದೆ, ಅದೂ ದೇಶಕ್ಕೆ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಕಾಂಗ್ರೆಸ್‌ನಾಯಕರನ್ನು ಎದುರು ಹಾಕಿಕೊಂಡು ಚಳವಳಿ, ಧರಣಿ, ಮೆರವಣಿಗೆ ಏರ್ಪಡಿಸುವುದು ಸಣ್ಣ ಮಾತಾಗಿರಲಿಲ್ಲ. ಇಂಥ ಜಾರ್ಜ್‌ ಯಾರ ಸಹಾಯವಿಲ್ಲದೇ, ಗಾಡ್‌ಫಾದರ್‌ಗಳಿಲ್ಲದೇ, ಜಾತಿ ಬೆಂಬಲವಿಲ್ಲದೇ ಮುಂಬೈಯಲ್ಲಿ ದೊಡ್ಡ ಟ್ರೇಡ್‌ ಯೂನಿಯನ್‌(ಕಾರ್ಮಿಕ ಮುಖಂಡ)ನಾಯಕರಾಗಿ ಹೊರಹೊಮ್ಮಿದ್ದರು. 1952ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಕೆ.ಪಾಟೀಲ್‌ ವಿರುದ್ಧ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದಾಗ ‘ಆನೆಯ ಮುಂದೆ ಮಿಡತೆ’ ಎಂದು ಪತ್ರಿಕೆಗಳು ಬರೆದಿದ್ದವು. ಜಾರ್ಜ್‌ ಪಾಟೀಲರನ್ನು ಭಾರಿ ಅಂತರದಿಂದ ಸೋಲಿಸಿ ‘ಜೈಂಟ್‌ಕಿಲ್ಲರ್‌’ ಎಂದೆನಿಸಿಕೊಂಡರು. ಜಾರ್ಜ್‌ ಹೆಸರು ರಾಷ್ಟ್ರಮಟ್ಟದಲ್ಲಿ ಕೇಳಿಸಿದ್ದು ಆಗಲೇ.

ಆದರೆ ಜಾರ್ಜ್‌ ಸಂಘಟನಾ ಚಾತುರ್ಯ, ನಾಯಕತ್ವ ಗುಣ, ಧೀಮಂತಿಕೆ ಪ್ರದರ್ಶನಕ್ಕೆ ಬಂದಿದ್ದು 1974ರಲ್ಲಿ ಸಂಘಟಿಸಿದ ದೇಶವ್ಯಾಪಿ ರೈಲು ನೌಕರರ ಮುಷ್ಕರದಲ್ಲಿ. ರೈಲ್ವೆ ನೌಕರರು ಅನುಭವಿಸುತ್ತಿರುವ ಕಷ್ಟ-ಕೋಟಲೆಗಳತ್ತ ಗಮನಸೆಳೆಯಲು ಜಾರ್ಜ್‌ ಸಂಘಟಿಸಿದ ಈ ಮುಷ್ಕರ ಐತಿಹಾಸಿಕವಾದುದು. ಸುಮಾರು 15 ಲಕ್ಷ ಮಂದಿ ಇದರಲ್ಲಿ ಭಾಗವಹಿಸಿದ್ದರು. ಪ್ರಧಾನಿ ಇಂದಿರಾಗಾಂಧಿಯವರ ಕುರ್ಚಿ ಮೊದಲ ಬಾರಿಗೆ ಅಲುಗಾಡಿದ್ದು ಆಗಲೇ. ಅನಂತರ ಇದೇ ಮುಷ್ಕರದ ಬಿಸಿ ಮುಂದಿನ ವರ್ಷ ತುರ್ತುಸ್ಥಿತಿ ಹೇರಲು ಕಾರಣವಾಯಿತು. ತುರ್ತುಸ್ಥಿತಿ ಹೇರಿದಾಗ ಜಾರ್ಜ್‌ ಭೂಗತರಾದರು. ತುರ್ತುಸ್ಥಿತಿ ಕೊನೆಗೊಂಡಾಗ ಜಾರ್ಜ್‌ ಜೈಲಿನಲ್ಲಿದ್ದೇ ಮುಜಫರ್‌ಪುರದಿಂದ ಸ್ಪರ್ಧಿಸಿದರು. ಪಕ್ಷದ ಕಾರ್ಯಕರ್ತರು ಅವರ ಫೋಟೊ ತೋರಿಸಿ ಮತ ಕೇಳಿದರು. ಭಾರಿ ಬಹುಮತದಿಂದ ಚುನಾಯಿತರಾದರು. ಮೊರಾರ್ಜಿ ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿ ಬಹುರಾಷ್ಟ್ರೀಯ ಕಂಪನಿಗಳಾದ ಕೋಕಾ-ಕೋಲಾ, ಐಬಿಎಂನ್ನು ಹೊರಹಾಕಿದ್ದು ಸಾಮಾನ್ಯ ಸಂಗತಿಯಲ್ಲ. ಅಂದಿನಿಂದ ಇಂದಿನತನಕ ಜಾರ್ಜ್‌ ರೈಲ್ವೆ ಸಚಿವರಾಗಿ, ರಕ್ಷಣಾ ಸಚಿವರಾಗಿ ಒಂದಿಲ್ಲೊಂದು ಸಂದರ್ಭದಲ್ಲಿ ಈ ದೇಶದ ಜನಮಾನಸದಲ್ಲಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರಸ್ತುತರಾಗುತ್ತಲೇ ಹೋಗುತ್ತಿದ್ದಾರೆ. ಈ ಮಧ್ಯೆ ತೆಹಲ್ಕಾ ಪ್ರಕರಣದಲ್ಲಿ ಅವರ ತೇಜೋವಧೆಯೂ ಆಯಿತು. ಜಾರ್ಜ್‌ ಕತೆ ಮುಗಿಯಿತೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಜಾರ್ಜ್‌ ಜಿಗಿದು ಬಂದರು. ಇಂದು ಜಾರ್ಜ್‌ ಪ್ರಧಾನಿ ಅಭ್ಯರ್ಥಿ ಎಂದು ಕರೆಯಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ಮುಂಬೈಯಲ್ಲಿ ಬೆಳೆದು ಬಿಹಾರದಲ್ಲಿ ರಾಜಕೀಯ ಮಾಡಿ ದಿಲ್ಲಿಯಲ್ಲಿ ಬೆಳೆದು ಗಟ್ಟಿಯಾಗಿ ಸ್ಥಾಪಿತರಾಗಿರುವ ಜಾರ್ಜ್‌ ಉಳಿದ ರಾಜಕಾರಣಿಗಳಿಗಿಂತ ಭಿನ್ನರಾಗಿ ಕಾಣಿಸುತ್ತಾರೆ. ‘‘ರಾಜಕಾರಣಿಗಳೆಂದರೆ ಇಷ್ಟೇನೇ ಬಿಡು’ ಎಂಬ ಮಾತಿನ ಸಾಲಿನಲ್ಲಿ ಜಾರ್ಜ್‌ ಕಾಣಿಸಿಕೊಳ್ಳವುದಿಲ್ಲ. ರಾಜಕಾರಣಿಗಳ ಮೇಲೆ ವಿಶ್ವಾಸ ಕಳೆಗುಂದುತ್ತಿರುವ ದಿನಗಳಲ್ಲಿ ಸ್ವಲ್ಪವಾದರೂ ಆಶಾಭಾವನೆ ಇಟ್ಟು ಕೊಳ್ಳಬಹುದಾದರೆ, ನಮ್ಮ ಭರವಸೆಯೆಲ್ಲವನ್ನೂ ಗಂಟುಕಟ್ಟಿ ಒಬ್ಬ ರಾಜಕಾರಣಿಯ ಬಳಿಕೊಡುವುದಾದರೆ ಅದನ್ನು ಜಾರ್ಜ್‌ಗೆ ಕೊಡಬಹುದು. ಜಗಳ, ಟೀಕೆ, ಆರೋಪ, ವಿವಾದ ಎಲ್ಲವನ್ನೂ ಜಾರಿಯಲ್ಲಿಟ್ಟುಕೊಂಡು ಪ್ರೀತಿಸಬಹುದಾದ ವ್ಯಕ್ತಿಯೆಂದರೆ ಜಾರ್ಜ್‌.

Sorry, ಅವರ ಬಗ್ಗೆ ಇನ್ನು ಮುಂದೆ ಬರೆಯುವುದೆಲ್ಲ ಹೊಗಳಿಕೆಯಾದೀತು.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more