• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇರಾ ಭಾರತದಲ್ಲಿ ನಾಯಕರ ಪಟ್ಟವೇಕೆ ಖಾಲಿ ಖಾಲಿ?

By Staff
|
Vishweshwar Bhat ವಿಶ್ವೇಶ್ವರ ಭಟ್‌
ನಮ್ಮ ಮಧ್ಯೆ ಏಕೆ ಒಬ್ಬನೇ ನಾಯಕ ಕಾಣುವುದಿಲ್ಲ ?

ಸುತ್ತಲೂ ಕತ್ತೆತ್ತಿ ನೋಡಿ. ಯೋಗ್ಯ, ಅರ್ಹ, ವಿಶ್ವಾಸಕ್ಕೆ ಪಾತ್ರನಾದ, ನಂಬಿಕೆಗೆ ಅರ್ಹನಾದ ಒಬ್ಬನೇ ಒಬ್ಬ ನಾಯಕ ಕೂಡ ಕಾಣುವುದಿಲ್ಲ. ನಾಯಕ ಎನಿಸಿಕೊಂಡವನು ಮುಂದೆ ಬಂದಾಗ ಅವನ ಬಗ್ಗೆ ಸಣ್ಣ ಅನುಮಾನ, ಗುಮಾನಿಯಿಂದಲೇ ಯೋಚನೆಗಳು ಹುಟ್ಟಿಕೊಳ್ಳುತ್ತವೆಯೇ ಹೊರತು ದಮಡಿ ಗೌರವ ಬರುವುದಿಲ್ಲ. ಆತನ ಮಾತುಗಳಲ್ಲಿ ವಿಶ್ವಾಸ ಮೂಡುವುದಿಲ್ಲ. ಆತನ ಮಾತುಗಳನ್ನು ನಂಬಬೇಕೆಂದು ಅನಿಸುವುದಿಲ್ಲ. ಕಾರಣ ಆತ ನಾಯಕನಾಗಿ ನಮ್ಮಲ್ಲಿ ಹನಿ ಚೇತನವನ್ನಾಗಲಿ, ಉತ್ಸಾಹವನ್ನಾಗಲೀ ಮೂಡಿಸಲಾರ. ನಮ್ಮಲ್ಲೊಂದು ಭರವಸೆಯನ್ನು ಚಿಗುರಿಸಲಾರ. ನಮ್ಮ ಕಾರ್ಪಣ್ಯ, ಕನವರಿಕೆ, ಕದಲಿಕೆ, ಕಂಬನಿಗೆ ಆತ ಪರಿಹಾರವಾಗುತ್ತಾನೆಂದು ಅನಿಸುವುದೇ ಇಲ್ಲ. ಹೀಗಾಗಿ ಆತ ಬರುತ್ತಿದ್ದರೆ ನಮ್ಮಲ್ಲೊಂದು ಅಸಹನೆ, ಅಸಹ್ಯ, ವಾಕರಿಕೆ, ಸಂದೇಹ, ದುಗುಡ ಆವರಿಸಿಕೊಳ್ಳುತ್ತದೆ.

ಕಳೆದ ಎಪ್ಪತ್ತು, ಎಂಬತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ನಮ್ಮ ಸುತ್ತ ಅದೆಷ್ಟು ನಾಯಕರಿದ್ದರು? ಅವರ ಬಗ್ಗೆ ನಮಗೆಷ್ಟು ಗೌರವವಿತ್ತು ? ಅವರ ಮಾತು ನಮಗೆ ವೇದವಾಕ್ಯವಾಗಿತ್ತು. ಅವರು ನಮ್ಮ ಮನೆಯ ಗೋಡೆಗಳಲ್ಲಿ ಅಜ್ಜ, ಮುತ್ತಜ್ಜರಂತೆ ಆರಾಧ್ಯದೈವಗಳಂತೆ ಅಲಂಕರಿಸಿದ್ದರು. ಅವರ ಫೋಟೊಕ್ಕೊಂದು ಗಂಧದ ಮಾಲೆ ತೊಡಿಸಿರುತ್ತಿದ್ದೆವು. ಒಬ್ಬೊಬ್ಬನೂ ಒಂದೊಂದು ಗುಣಕ್ಕೆ, ವಿಶೇಷಕ್ಕೆ ನಮ್ಮ ಅಂತರಂಗದಲ್ಲಿ ನೆಲೆಸಿರುತ್ತಿದ್ದ. ಸ್ವಾತಂತ್ರ್ಯಕ್ಕಾಗಿ ಸರ್ವತ್ಯಾಗ ಮಾಡಿದವರ, ಬಲಿದಾನ ಮಾಡಿದವರ ಆದರ್ಶಗಳು ಮೈ ರೋಮಾಂಚನಗೊಳಿಸುತ್ತಿದ್ದವು. ದೇಶಸೇವೆ, ದೇಶಪ್ರೇಮವೆಂದರೆ ತ್ಯಾಗ, ಬಲಿದಾನಗಳಿಗೆ ಪರ್ಯಾಯವಾಗಿದ್ದವು.

Where are the leaders like Gandhiji?ಒಮ್ಮೆಗೆ ಮೇಲೆತ್ತಿದರೆ ಸರಿಯಾಗಿ ಐವತ್ತು ಕೆ.ಜಿ.ಯನ್ನು ಸಹ ತೂಗದ ಅರೆನಗ್ನ ಪಿಕಲಾಟಿ ಶರೀರದ ಆ ಗಾಂಧಿಯೆಂಬ ವ್ಯಕ್ತಿ ಒಂದು ಮಾತನ್ನಾಡಿದರೆ, ಒಂದು ಸಣ್ಣ ಕರೆ ಕೊಟ್ಟರೆ ದೇಶಕ್ಕೆ ದೇಶವೇ ಎದ್ದು ಕುಳಿತಿರುತ್ತಿತ್ತು. ರಸ್ತೆ, ರೇಡಿಯೋ, ಟಿವಿ, ಫೋನು, ಪತ್ರಿಕೆಗಳಿಲ್ಲದ ಆ ಕಾಲದಲ್ಲಿ ಅವರು ಆಡಿದ ಮಾತಿಗೆ ರಾತ್ರಿ ಬೆಳಗಾಗಿ ಎದ್ದು ನಿಲ್ಲುವ ಹೊತ್ತಿಗೆ ಇಡೀ ದೇಶ ಸ್ಪಂದಿಸಲು ಟೊಂಕ ಕಟ್ಟಿರುತ್ತಿತ್ತು. ಸರ್ದಾರ್‌ ಪಟೇಲ್‌, ನೆಹರು, ಜಯಪ್ರಕಾಶ್‌ ನಾರಾಯಣ್‌, ಲೋಹಿಯಾ, ಶ್ಯಾಮ ಪ್ರಸಾದ್‌ ಮುಖರ್ಜಿ, ದೀನ್‌ದಯಾಳ್‌ ಉಪಾಧ್ಯಾಯ, ರಾಜೇಂದ್ರ ಪ್ರಸಾದ್‌, ಡಾ. ರಾಧಾಕೃಷ್ಣನ್‌, ಜಕೀರ್‌ ಹುಸೇನ್‌ ಮುಂತಾದವರ ಜತೆಗೆ ಅಸಂಖ್ಯ ನಾಯಕ ಗಣವಿತ್ತು. ಇವರೆಲ್ಲರೂ ನಮಗೆ ಒಂದಿಲ್ಲೊಂದು ಕಾರಣಕ್ಕೆ ಆದರ್ಶರಾಗಿದ್ದರು.

ಈಗ ಇಂಥ ನಾಯಕರೆಲ್ಲ ಎಲ್ಲಿಗೆ ಹೋದರು? ಅಂಥವರು ಈಗ ಏಕಿಲ್ಲ? ನಮ್ಮ ಸುತ್ತ ಇಂದೇಕೆ ನಾಯಕರಿಲ್ಲ? ನಾಯಕತ್ವ ಏಕೆ ಖಾಲಿ ಖಾಲಿ? ಐವತ್ತು ಅರವತ್ತು ವರ್ಷಗಳಲ್ಲಿ ನಾವೇಕೆ, ನಾವು ಹೇಗೆ ನಾಯಕರಿಲ್ಲದೇ ಬರಿದಾಗಿ ಬಿಟ್ಟೆವು? ಅಬ್ಬೆಪಾರಿಗಳಾಗಿಬಿಟ್ಟೆವು?

ಚುನಾವಣೆ ಮುಗಿದು ಮುಂದಿನ ನಾಯಕನ ನಿರೀಕ್ಷೆಯಲ್ಲಿರುವ ನಮ್ಮೆಲ್ಲರ ಮುಂದೆ ಈ ಪ್ರಶ್ನೆ ಎದುರಾಗಿದ್ದರೆ ಸಹಜ. ದುರದೃಷ್ಟವಶಾತ್‌ ಈ ಸಲದ ಚುನಾವಣೆ ಈ ಸಮಸ್ಯೆಯನ್ನು ಪರಿಹರಿಸುವ ಯಾವ ಸೂಚನೆಗಳನ್ನೂ ನೀಡುತ್ತಿಲ್ಲ. ಕಾರಣ ಚುನಾವಣೆಗೆ ಮೊದಲು ಯಾವನೂ ನಾಯಕನೆಂದು ನಮಗೆ ಅನಿಸಲಿಲ್ಲ. ನಾಯಕನಿಲ್ಲದ ಚುನಾವಣೆಯಿಂದ, ಚುನಾವಣೆಯ ನಂತರ ನಾಯಕ ಹೊರಬರುತ್ತಾನೆಂದು ನಿರೀಕ್ಷಿಸುವುದಾದರೂ ಹೇಗೆ?

ಇಡೀ ದೇಶವೇ ಒಪ್ಪಿಕೊಳ್ಳುವ ನಾಯಕನ ಬಗ್ಗೆ ಮಾತನಾಡುವುದು ಬೇಡ. ಕನಿಷ್ಠ ಪಕ್ಷ ರಾಜ್ಯ ಅಥವಾ ಪ್ರದೇಶಗಳಿಗೆ ಸೀಮಿತವಾಗುವ ನಾಯಕರು ಯಾರಾದರೂ ಇದ್ದಾರಾ ಎಂದು ಪಟ್ಟಿ ಮಾಡಿದರೆ, ಆಗಲೂ ಯೋಗ್ಯ ಅಥವಾ ಸರ್ವಸಮ್ಮತವೆನ್ನಿಸುವ ಒಬ್ಬಾತ ಸಿಗುವುದಿಲ್ಲ. ಅರವತ್ತು-ಎಪ್ಪತ್ತು ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರಭಾವೀ ಎನ್ನಿಸುವಂಥ ಮಹಾನ್‌ ನಾಯಕರಿದ್ದರು. ಫಿರೋಜ್‌ಷಾ ಮೆಹತಾ, ದಾದಾಭಾಯ್‌ ನೌರೋಜಿ, ಬದ್ರುದ್ದೀನ್‌ ತ್ಯಾಬ್‌ಜೀ, ಸುರೇಂದ್ರನಾಥ ಬ್ಯಾನರ್ಜಿ, ಬಾಲಗಂಗಾಧರ ತಿಲಕ್‌, ಗೋಪಾಲಕೃಷ್ಣ ಗೋಖಲೆ, ಡಬ್ಲು. ಸಿ. ಬ್ಯಾನರ್ಜಿ ಮುಂತಾದ ನಾಯಕರಿದ್ದರು. ಸ್ವಾತಂತ್ರ್ಯಾನಂತರ ಕೂಡ ಇವರ ಸಂತತಿ ಮುಂದುವರಿಯಿತು. ಕೆಲವರಂತೂ ರಾಷ್ಟ್ರ ನಾಯಕರಿಗಿಂತ ಪ್ರಭಾವ, ಸ್ಥಾನಮಾನದಲ್ಲಿ ಕಡಿಮೆಯಿರಲಿಲ್ಲ. ಈ ಸಾಲಿಗೆ ಕೆ. ಕಾಮರಾಜ್‌, ಗೋವಿಂದ ವಲ್ಲಭ ಪಂತ್‌, ಪ್ರತಾಪ್‌ ಸಿಂಗ್‌ ಖೈರಾನ್‌, ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್‌. ನಿಜಲಿಂಗಪ್ಪ ಮುಂತಾದವರನ್ನು ಸೇರಿಸಬಹುದು.

ಗಾಂಧೀಜಿ ಮಾತು ಒಂದೆಡೆಯಿರಲಿ. ಜವಾಹರಲಾಲ್‌ ನೆಹರು ಅವರು ಕರೆ ಕೊಟ್ಟರೆ ದೇಶ ತಟಕ್ಕನೆ ಎದ್ದು ನಿಲ್ಲುತ್ತಿತ್ತು. ಲಾಲ ಬಹಾದ್ದೂರ್‌ ಶಾಸ್ತಿ ್ರ ಅವರ ಮಾತನ್ನು ಅಂತರಂಗದ ಪಿಸುಮಾತಿನಂತೆ ಇಡೀ ದೇಶವೇ ಕೇಳಿಸಿಕೊಳ್ಳುತ್ತಿತ್ತು. ಚೀನಾ ಯುದ್ಧದ ಬಳಿಕ ದೇಶದೆಲ್ಲೆಡೆ ತಲೆದೋರಿದ ಆಹಾರ ಸಮಸ್ಯೆಯನ್ನು ಕಂಡು ಪ್ರಧಾನಿ ಶಾಸ್ತಿ ್ರ ಅವರು ‘ದೇಶ ವಾಸಿಗಳೆಲ್ಲರೂ ವಾರದಲ್ಲಿ ಒಂದು ಹೊತ್ತು ಊಟ ಬಿಟ್ಟು ಉಪವಾಸ ಆಚರಿಸಿ ’ಎಂದು ಕರೆ ನೀಡಿದರು. ದೇಶಕ್ಕೆ ದೇಶವೇ ತುಂಬು ಮನಸ್ಸಿನಿಂದ, ಪ್ರೀತಿಯಿಂದ ಎತ್ತಿಕೊಂಡ ಆದೇಶದಂತೆ ಈ ಕರೆಗೆ ಸ್ಪಂದಿಸಿತು. ಅಂದು

ಶಾಸ್ತಿ ್ರಯವರ ಒಂದು ಬಾನುಲಿ ಕರೆ ಎಂಥ ಮ್ಯಾಜಿಕ್ಕು ಮಾಡಿತೆಂದರೆ ಈಗಲೂ ಕೆಲವರು ವಾರಕ್ಕೊಂದು ಹೊತ್ತು ಉಪವಾಸ ಮಾಡುವುದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ!

ಈಗ ಯಾವ ನಾಯಕನ ಮಾತಿಗೆ ಅಂಥ ಬೆಲೆಯಿದೆ? ಇಡೀ ದೇಶವನ್ನು ಎದ್ದು ನಿಲ್ಲಿಸುವ ನಾಯಕನಾರು, ಆತ ಎಲ್ಲಿದ್ದಾನೆ? ತಕ್ಷಣಕ್ಕೆ ಗೋಚರಿಸುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವೆಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್‌ ಅಧ್ಯಕ್ಷ ಸೋನಿಯಾ ಗಾಂಧಿ ಅವರೇನಾದರೂ ಕರೆ ಕೊಟ್ಟರೆ ದೇಶವಾಸಿಗಳನ್ನು ಬಿಟ್ಟುಬಿಡಿ, ಅವರ ಪಕ್ಷದವರೇ ಹರಗೀಸು ಪಾಲಿಸುವುದಿಲ್ಲ. ಇನ್ನು ಕೃಷ್ಣ, ಖರ್ಗೆ ಯಾವ ಮರದ ತೊಪ್ಪಲು?

ತಮ್ಮ ಮಾತನ್ನು ಪಾಲಿಸಬೇಕೆಂದು ಈ ನಾಯಕರು ಬಯಸಿದರೆ, ಎಲ್ಲರೂ ನಾವು ಹೇಳಿದಂತೆ ಕೇಳಬೇಕು ಎಂದು ಕಾನೂನು ಮಾಡಬೇಕು. ಆಗಲೂ ದಂಡ ತೆತ್ತಾದರೂ ಆ ಕಾನೂನನ್ನು ಉಲ್ಲಂಘಿಸುವವರೇ ಹೆಚ್ಚಿರುತ್ತಾರೆ. ನಮ್ಮ ನಾಯಕರ ಹಣೆಬರಹ ಇದು.

ಸೋನಿಯಾ ಗಾಂಧಿ ಅವರನ್ನಾಗಲಿ, ಕೃಷ್ಣ ಅವರನ್ನಾಗಲಿ ಯಾವ ಕಾರಣಕ್ಕೆ ನಾಯಕರೆಂದು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬುದೇ ಅರ್ಥವಾಗುವುದಿಲ್ಲ. ಈ ಪ್ರಶ್ನೆಯನ್ನು ಬೇರೆ ಪಕ್ಷಗಳ ನಾಯಕರಿಗೆ ಅನ್ವಯಿಸಿದರೂ ಫಲಿತಾಂಶ ಮಾತ್ರ ಅದೇ ಆಗಿರುತ್ತದೆ. ಯಾವ ಆದರ್ಶ, ಯಾವ ಗುಣಗಳಿಗಾಗಿ ನಾವು ಇವರನ್ನು ನಾಯಕರೆಂದು ಸ್ವೀಕರಿಸಬೇಕು? ಜಾತಿ, ಹಣ, ನೀಚತನ, ಮೋಸ, ನಂಬಿಕೆ ದ್ರೋಹ, ಅಸಿದ್ಧಾಂತ, ಕಪಟತನವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಬಂದವನು ಎಂದೂ ನಾಯಕನೆನಿಸಿಕೊಳ್ಳುವುದಿಲ್ಲ. ಆತ ಮಂತ್ರಿ ಅಥವಾ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳಬಹುದೇ ಹೊರತು ನಾಯಕನೆನಿಸಿಕೊಳ್ಳಲಾರ. ತಮ್ಮ ಜೀವಿತ ಅವಧಿಯಲ್ಲಿ ಗಾಂಧಿ ಮಂತ್ರಿಯಾಗಲಿ, ಮುಖ್ಯಮಂತ್ರಿಯಾಗಲಿ, ಪ್ರಧಾನಿಯಾಗಲಿ ಆಗಲಿಲ್ಲ. ಕಡೇಪಕ್ಷ ಒಂದ್ಸಲ ಎಮ್ಮೆಲ್ಲೆಯೂ ಆಗಲಿಲ್ಲ. ಆದರೆ ಅವರು ನಾಯಕರಲ್ಲ ಮಹಾನ್‌ ನಾಯಕರೆಂದು ಕರೆಯಿಸಿಕೊಂಡರು. ‘ಮಹಾತ್ಮ’ರಾದರು! ಮುಖ್ಯ ಮಂತ್ರಿ ಅಥವಾ ಪ್ರಧಾನಿಯಾಗುವುದಕ್ಕೂ ನಾಯಕನಾಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಈ ಮಾತನ್ನು ಹೇಳುವಾಗ ಸಿಂಗಪುರದ ಲೀ ಕ್ವಾನ್‌ ಯ್ಯೂ ಬಗ್ಗೆ ಹೇಳಬೇಕು. ಸಿಂಗಪುರಕ್ಕೆ ಹೊಸ ಸ್ವರೂಪ ಕೊಟ್ಟ ಮಹಾತ್ಮ. ರಸ್ತೆ ಬದಿಯ ಹೊಲಸು, ಕೊಳಕು ಬಂದರಿನಿಂದ ನಾತ ಬೀರುತ್ತಿದ್ದ ಮಂಗಪುರವನ್ನು ಸಿಂಗಪುರ ಮಾಡಿದ. ಜಗತ್ತಿನಲ್ಲಿಯೇ ತನ್ನ ಪುಟ್ಟ ದೇಶವನ್ನು ಆಧುನಿಕ ರಾಷ್ಟ್ರವನ್ನಾಗಿ ಮಾಡಿದ. ಆತ ಮಾಡಿದ್ದಾದರೂ ಏನು? ಸಿಂಗಪುರದಲ್ಲಿ ಅಡಗಿರುವ ಚೆಲುವನ್ನು ಹೊರತೆಗೆದಿಟ್ಟ. ದೇಶದೆಲ್ಲೆಡೆ ಮೂಲ ಸೌಕರ್ಯ ಒದಗಿಸಿದ. ಅಂತರರಾಷ್ಟ್ರೀಯ ಗುಣಮಟ್ಟದ ಸೇವಾ ಸೌಲಭ್ಯ ಕಲ್ಪಿಸಿದ. ಒಂದು ಹಡಗಿನಲ್ಲಿದ್ದ ಸಾಮಾನು ಸರಂಜಾಮುಗಳನ್ನು ಖಾಲಿ ಮಾಡಲು ಹಿಡಿಯುತ್ತಿದ್ದ ಹದಿನೈದು ದಿನಗಳಿಂದ ಬಂದರು ಕಲಸುಮೇಲೋಗರವಾಗುತ್ತಿದ್ದುದನ್ನು ತಪ್ಪಿಸಿದ. ಕೇವಲ ಐದು ನಿಮಿಷಗಳಲ್ಲಿ ಹಡಗು ಖಾಲಿ ಮಾಡಿಸುವ ವ್ಯವಸ್ಥೆ ಜಾರಿಗೆ ತಂದ. ಆಗ ಬಂದರು ಮಾರುಕಟ್ಟೆ ಪುನಶ್ಚೇತನಗೊಂಡಿತು. ದೇಶದ ಆರ್ಥಿಕ ಪ್ರಗತಿ ಚೇತರಿಸಿಕೊಂಡಿತು. ದೇಶದ ಕಳೆಯೇ ಬದಲಾಗತೊಡಗಿತು. ಕೇವಲ ಐದು ವರ್ಷಗಳಲ್ಲಿ ಹಳೆ ಮುಖ ಕಳಚಿತ್ತು. ಕ್ರಮೇಣ ಸಿಂಗಪುರ ಸದೃಢ ದೇಶವಾಯಿತು. ಇಂದು ಈ ದೇಶ ವಿಶ್ವದಲ್ಲಿಯೇ ವಾಣಿಜ್ಯ, ವ್ಯಾಪಾರದಲ್ಲಿ ಅಗ್ರಪಂಕ್ತಿ ದೇಶದಲ್ಲೊಂದು. ಭಾರತ ಹಾಗೂ ಚೀನಾವನ್ನು ಸಹ ಹಿಂದಕ್ಕೆ ಹಾಕಿದ.

ಲೀ ಕ್ವಾನ್‌ ಯ್ಯೂ ಮಾಡಿದ ದೊಡ್ಡ ಚಮತ್ಕಾರವೆಂದರೆ ತಾನು ಹಮ್ಮಿಕೊಂಡ ಯೋಜನೆಯಲ್ಲಿ ದೇಶವಾಸಿಗಳಿಗೆ ನಂಬಿಕೆ ಮೂಡಿಸಿದ್ದು. ತನ್ನ ಮಾತಿನಲ್ಲಿ ಅವರಿಗೆ ವಿಶ್ವಾಸ ಚಿಗುರಿಸಿದ್ದು. ಸಾಮಾನ್ಯ ಜನರೊಂದಿಗೆ ಯ್ಯೂ ಹೃದಯ ಸಂವಾದಕ್ಕಿಳಿದ. ಟ್ಯಾಕ್ಸಿ ಚಾಲಕರ ಜತೆ ಮಾತಿಗೆ ಕುಳಿತ. ‘ಸಿಂಗಪುರವನ್ನು ವಿಶ್ವದ ನಂ. 1 ದೇಶವನ್ನಾಗಿ ಮಾಡಬೇಕೆಂದರೆ ನಿಮ್ಮ ಯೋಗದಾನ ಅತ್ಯಮೂಲ್ಯ’ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟ. ಪ್ರವಾಸೋದ್ಯಮದ ದೃಷ್ಟಿಯಿಂದ ದೇಶವನ್ನು ಸೂಕ್ತವಾಗಿ ಬಿಂಬಿಸುವವರು ನೀವೇ ಎಂದು ಹೇಳಿದ. ಲೀ ಕ್ವಾನ್‌ ಯ್ಯೂಗೆ ತನ್ನ ದೇಶವನ್ನು ಮುನ್ನಡೆಸುವ ಆಸೆಯಿತ್ತೇ ಹೊರತು ಜೀವವಿರುವ ತನಕ ಪ್ರಧಾನಿಯಾಗಿ ಅಧಿಕಾರಕ್ಕೆ ಅಂಟಿಕೊಂಡಿರಬೇಕೆಂಬ ದುರಾಸೆಯಿರಲಿಲ್ಲ. ಹೀಗಾಗಿ ಅವನ ಮಾತುಗಳಲ್ಲಿ ಸಹಜತೆಯಿತ್ತು. ಕಾಳಜಿ, ಕಳಕಳಿಯಿತ್ತು. ಜನರನ್ನು ನಂಬಿಸಿದ ಹಾಗೂ ನಂಬಿದ. ಜನರೂ ನಂಬಿದರು.

ಆದರೆ ನಂಬಿಕೆಗೆ ದ್ರೋಹ ಬಗೆಯಲಿಲ್ಲ. ನಂಬಿಕೆಯನ್ನು ಇಮ್ಮಡಿಗೊಳಿಸಿದ.

ಒಂದು ದಶಕದೊಳಗೆ ಯಾರೂ ಕೇಳಿರದ ಪುಟಗೋಸಿಯಂತಿದ್ದ ಸಣ್ಣ ದ್ವೀಪ ರಾಷ್ಟ್ರ ನೋಡನೋಡುತ್ತಿದ್ದಂತೆ ವಿಶ್ವದ ನಂ.1 ವಾಣಿಜ್ಯ ಕೇಂದ್ರವಾಯಿತು. ನಂ.1 ಪ್ರವಾಸಿತಾಣವಾಯಿತು. ಸಿಂಗಪುರವೆಂದರೆ ಸಾಕು, ಜಗತ್ತಿನ ಎಲ್ಲ ದೇಶಗಳ, ಎಲ್ಲ ಪ್ರತಿಷ್ಠಿತ ಕಂಪೆನಿಗಳಿಗೆ ಅಚ್ಚುಮೆಚ್ಚಿನ ತಾಣವಾಯಿತು. ‘ಈ ಭೂಮಿಯ ಮೇಲೆ ಮಾದರಿ ಎನ್ನುವಂಥ ತಾಣವಿದ್ದರೆ ಅದು ಸಿಂಗಪುರ’ ಎಂದು ಯಾವನಾದರೂ ಸರ್ಟಿಫಿಕೇಟು ಕೊಡುವಂತಾಯಿತು.

ನಮ್ಮ ಮುಖ್ಯಮಂತ್ರಿಗಳೂ ಬೆಂಗಳೂರನ್ನು ಸಿಂಗಪುರ ಮಾಡುತ್ತೇನೆಂದರು. ಅವರ ಮಾತು ಗೇಲಿ, ಅಪಹಾಸ್ಯಕ್ಕೆ ವಸ್ತುವಾಯಿತೇ ಹೊರತು ಬೆಂಗಳೂರು ಸಿಂಗಪುರವಾಗಲಿಲ್ಲ. ಸಿಂಗಪುರವಾಗುವುದು ಬೇಕಿರಲಿಲ್ಲ. ಬೆಂಗಳೂರನ್ನು ಬೆಂಗಳೂರಾಗಿ ಇರಲು ಬಿಟ್ಟಿದ್ದರೆ ಚೆನ್ನಾಗಿತ್ತು. ಅದೂ ಆಗಲಿಲ್ಲ.

ಪ್ರಧಾನಿಯಾಗಿ ಯ್ಯೂ ಮಹಾನ್‌ ನಾಯಕನೆನಿಸಿಕೊಂಡ. ಅಧಿಕಾರ ಸ್ಥಾನ ಅಲಂಕರಿಸಿದವರು ನಾಯಕರಾಗುವುದು ಸಾಧ್ಯವೆಂಬುದನ್ನು ಆತ ತೋರಿಸಿಕೊಟ್ಟ. ಆತ ಪ್ರಧಾನಿಯಾಗುವುದಕ್ಕಿಂತ ಮುಖ್ಯವಾಗಿ ನಾಯಕನಾಗಿ ಗುರುತಿಸಿಕೊಂಡ.

ಕಿತ್ತು ಹೋಗಿರುವ ವ್ಯವಸ್ಥೆಯನ್ನು ರಿಪೇರಿ ಮಾಡಲು, ನಪರೆದ್ದು ಹೋದ ಸಮಾಜ ಜೀವನಕ್ಕೆ ತಂಪೆರೆಯಲು, ಸಮಾಜದ ಸ್ವಾಸ್ಥ್ಯವನ್ನು ಕಿಂಚಿತ್ತಾದರೂ ನೆಮ್ಮದಿಯಿಂದ ಇರಗೊಡಲು ಇಂದು ನಮಗೆ ಬೇಕಾಗಿರುವವರು ಮಂತ್ರಿಗಳಲ್ಲ, ಮುಖ್ಯಮಂತ್ರಿಗಳಲ್ಲ, ಪ್ರಧಾನಮಂತ್ರಿಗಳಲ್ಲ.

ಬೇಕಾದವನು ಒಬ್ಬ ದಕ್ಷ ನಾಯಕ!

ಆತ ಇದ್ದಾನಾ? ಇದ್ದರೆ ಎಲ್ಲಿದ್ದಾನೆ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more