• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಯಿಬೇರು ಅರಸಿ ಬಂದ ಹೊಕ್ಕಳ ಬಳ್ಳಿ

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಹೊಕ್ಕಳ ಬಳ್ಳಿಗೆ ಅಂಥ ಒಂದು ಆಕರ್ಷಣ ಶಕ್ತಿಯಿತ್ತು. ಗುರುತೇ ಇಲ್ಲದ ತಂದೆ ತಾಯಿಯ ಬಳಿ ಗುರುತ್ವಾಕರ್ಷಣ ಶಕ್ತಿಯೂ ಬೆರಗಾಗುವಂತೆ ಆಕೆಯನ್ನು ತಂದು ನಿಲ್ಲಿಸಿತ್ತು.

ಕಳೆದುಹೋದ ಪೆನ್ನು, ಉಂಗುರ, ಚಪ್ಪಲಿ, ಕೀ ಚೈನು ಸಿಕ್ಕಾಗ ಆನಂದಪಡುವ ಮನಸ್ಸು, ಕಳೆದುಹೋದ ತಂದೆ ತಾಯಿ ಸಿಕ್ಕರೆ ಅದೆಷ್ಟು ಆನಂದಪಡಹುದು?

ಹೌದು ಆಕೆಗೆ ಇಪ್ಪತ್ತೆರಡು ವರ್ಷಗಳ ನಂತರ ಹೆತ್ತ ತಂದೆ ತಾಯಿ ಸಿಕ್ಕರು.

ಕತೆ ಆರಂಭವಾಗುವುದು ಉತ್ತರ ಪ್ರದೇಶದ ಸಣ್ಣ ಹಳ್ಳಿ ಮರಿಯಹು ಎಂಬಲ್ಲಿ. ರಾಜ್ಯದ ಭೂಪಟ ಹಾಸಿದರೆ ಕಣ್ಣಿಗೆ ಕಾಣದ ದಟ್ಟದರಿದ್ರ ಹಳ್ಳಿ. ಪೂರ್ವ ಉತ್ತರ ಪ್ರದೇಶದ ಜಾನಪುರ ಜಿಲ್ಲೆಯಲ್ಲಿದೆ. ಎಪ್ಪತ್ತು ಮನೆಗಳಿರುವ ಈ ಹಳ್ಳಿಯಲ್ಲಿ ಮಹಮ್ಮದ್‌ ಅಹಮ್ಮದ್‌ ರಫಿ ಹಾಗೂ ಜಿನ್ನಾತುನ್ನೀಸಾ ಅವರದು ತೆಕ್ಕೆಗೆ ಸಿಗುವ ಸಂಸಾರ. ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ. ರಫಿಗೆ ಜೀವನ ನಿರ್ವಹಣೆಗೆ ಕುಲುಮೆಯಲ್ಲಿ ಕಬ್ಬಿಣದ ಕೆಲಸ. ಬೀಡಿ ಸೇದಿ ಸೇದಿ, ಕುಲುಮೆಯಲ್ಲಿ ತಿದಿ ಊದಿ ಊದಿ ಕುತ್ತಿಗೆ ಸಪೂರ ನಳಿಕೆಯಂತಾಗಿತ್ತು. ಆದರೂ ರಫಿ ತನ್ನ ಸಂಸಾರದಲ್ಲಿ ನೆಮ್ಮದಿಯನ್ನಿಟ್ಟಿದ್ದ. ಮಕ್ಕಳನ್ನು ಚೆನ್ನಾಗಿ ಸಾಕಿದ್ದ. ಮಗನಿಗೊಂದು ಒಳ್ಳೆಯ ಬಾಳು ಕಟ್ಟಿಕೊಡಲು ಹೆಣಗುತ್ತಿದ್ದ. ಹೆಣ್ಣುಮಕ್ಕಳು ಕಲಿತರೆ ಉತ್ತಮ ಭವಿಷ್ಯ ನಿರ್ಧರಿಸಿಕೊಳ್ಳಬಹುದೆಂದು ಅವರನ್ನು ಶಾಲೆಗೆ ಕಳಿಸಿದ್ದ. ಸಣ್ಣ ಗುಡಿಸಲಲ್ಲಿ ರಫಿಯ ನಂದನವನ ದಿನವೂ ಎದ್ದು ಮಲಗುತ್ತಿತ್ತು. ದುಡಿದ ಹಣವೆಲ್ಲ ಮನೆಯಲ್ಲಿಯೇ ಬಂದು ಜಮೆ ಆಗುತ್ತಿದ್ದವು. ಮಕ್ಕಳ ಮುಖದಲ್ಲಿ ಅವು ಅರಳುತ್ತಿದ್ದವು.

ಅಲ್ಲಿಯ ತನಕ ಅವನ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿದ್ದವು.

ಒಂದು ದಿನ ಏಳು ವರ್ಷದ ಶಹಜಾನ್‌ ಹಾಗೂ ಐದು ವರ್ಷದ ಕಿಶ್ವರ್‌ಜಾನ್‌ಳನ್ನು ಮನೆಗೆ ಬಂದ ಸಂಬಂಧಿಕನೊಬ್ಬ ಹೊರಗಡೆ ಸುತ್ತಾಡಿಸಲು ಕರೆದುಕೊಂಡು ಹೋದವನು ವಾಪಸ್‌ ಬರಲೇ ಇಲ್ಲ. ಈತ ಮತ್ಯಾರೂ ಅಲ್ಲ. ಜಿನ್ನಾತುನ್ನೀಸಾಳ ಖಾಸಾ ಸಹೋದರ. ಹೆಣ್ಣು ಮಕ್ಕಳಿಬ್ಬರ ಸೋದರಮಾವ. ಸಾಯಂಕಾಲವಾದರೂ ವಾಪಸ್‌ ಬರದಿರುವುದನ್ನು ನೋಡಿ ರಫಿ ಕಂಗಾಲಾದ. ಇಪ್ಪತ್ತು ವರ್ಷಗಳ ನಂತರ ಅಕ್ಕನಮನೆಗೆ ಬಂದಿದ್ದ ಆತ. ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿರಹುದೆಂದು ಭಾವಿಸಿದ. ಎರಡು ದಿನಗಳಾದರೂ ಆಸಾಮಿ ಪತ್ತೆ ಇಲ್ಲ. ಆಗ ರಫಿ ದಿಗಿಲಿಗೆ ಬಿದ್ದ. ಎರಡು ಹೆಣ್ಣು ಮಕ್ಕಳೊಂದಿಗೆ ಮಿರ್ಜಾಪುರ ರಸ್ತೆಯತ್ತ ಹೋಗಿರುವುದನ್ನು ಕಂಡಿದ್ದಾಗಿ ಊರ ಜನ ಹೇಳಿದರು. ಇನ್ನು ಕೆಲವರು ವಾರಾಣಸಿ ರೈಲು ನಿಲ್ದಾಣದಲ್ಲಿ ಈ ವ್ಯಕ್ತಿಯನ್ನು ನೋಡಿದ್ದಾಗಿ ತಿಳಿಸಿದರು. ರಫಿ ಪೊಲೀಸ್‌ ಕಂಪ್ಲೇಂಟ್‌ ಕೊಟ್ಟ.

ಪೊಲೀಸರು ಏಕಾಏಕಿ ಜಾಗೃತರಾದರು. ಮೂವರಿಗಾಗಿ ಬಲೆ ಬೀಸಿದರು. ಸುಳಿವು ಸಿಕ್ಕ ಕಡೆ ತಲಾಷ್‌ ಮಾಡಿದರು. ವಾರಾಣಸಿ ರೈಲು ನಿಲ್ದಾಣದಲ್ಲಿ ಸೀತಾದೇವಿ ಎಂಬ ಕಸಗುಡಿಸುವ ಹೆಂಗಸಿನ ಮನೆಯಲ್ಲಿ ಕಿಶ್ವರ್‌ ಜಾನ್‌ ಸಿಕ್ಕಳು. ಮಗು ಜ್ವರದಿಂದ ಗಡಗಡ ನಡುಗುತ್ತಿದ್ದಳು. ಒಂದು ದಿನದಿಂದ ಊಟ ತಿಂಡಿಯಿರಲಿಲ್ಲ. ಮನೆಯಲ್ಲಿನ ಘೋರ ಕತ್ತಲು ಆಕೆಯನ್ನು ಕಂಗಾಲು ಮಾಡಿತ್ತು. ಆಕೆಗೆ ಅಕ್ಕನ ಬಗ್ಗೆ ಏನೂ ಗೊತ್ತಿಲ್ಲ. ತಾನು ಹೇಗೆ ಇಲ್ಲಿಗೆ ಬಂದೆ, ಯಾರು ಕರೆತಂದರು ಎಂಬುದೂ ಗೊತ್ತಿಲ್ಲ. ಎಲ್ಲವೂ ಗೋಜಲು ಗೋಜಲು. ಪೊಲೀಸರು ಸೀತಾದೇವಿ ಮನೆಯಲ್ಲೇ ಕಿಶ್ವರ್‌ಜಾನ್‌ಳನ್ನು ಬಿಟ್ಟು ಅಲ್ಲಿ ಕಾವಲು ಹಾಕಿ, ಶಹಜಾನ್‌ಳ ಬೇಟೆಗೆ ಹೊರಟರು. ಅಪಹರಣಕಾರ ಅಂದರೆ ಜಿನ್ನಾತುನ್ನೀಸಾಳ ತಮ್ಮ ಇಪ್ಪತ್ತು ವರ್ಷಗಳಲ್ಲಿ ಮಾಡಬಾರದ ಕೆಲಸ ಮಾಡಿ, ಒಂದೊಂದು ಊರಲ್ಲಿ ಒಂದೊಂದು ವೇಷ ತೊಟ್ಟು ನಿಜ ನಾಮಧೇಯ ಗುರುತು ಬಿಟ್ಟಿರದಿದ್ದರಿಂದ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ. ಉತ್ತರ ಪ್ರದೇಶ ಪೊಲೀಸರು ಮುಂಬೈ ಹಾಗೂ ಕೋಲ್ಕತಾ ಪೊಲೀಸರನ್ನು ಎಚ್ಚರಿಸಿದರು. ಅವರು ಘರ್‌ವಾಲಿಗಳು ಮತ್ತು ಕೆಂಪುದೀಪ ಪ್ರದೇಶಗಳ ಮೇಲೆ ಕಣ್ಣಿಟ್ಟರು. ಅಪಹರಣಕಾರನನ್ನು ಪತ್ತೆ ಮಾಡುವುದೇ ದೊಡ್ಡ ತಲೆನೋವಾಯಿತು. ತನ್ನ ಸ್ವಂತ ತಮ್ಮ ಮನೆಗೆ ಬಂದಾಗ ಜಿನ್ನಾತುನ್ನೀಸಾಗೆ ಅವನ ಗ ಗುರುತು ಹಿಡಿಯಲು ಆಗಿರಲಿಲ್ಲ. ಆತನಿಗೆ ತನ್ನದೆಂಬ ಸಂಸಾರವಾಗಲಿ, ಮನೆಯಾಗಲಿ ಇರಲಿಲ್ಲ.

ಪೊಲೀಸರು ಒಂದೆರಡು ತಿಂಗಳು ಹುಡುಕಾಟ ನಡೆಸಿ ಕೊನೆಗೆ ಕೈಚೆಲ್ಲಿದರು. ಕಳೆದುಹೋದ ಒಬ್ಬಳನ್ನಾದರೂ ಹುಡುಕಿ ಕೊಟ್ಟಿದ್ದೇವಲ್ಲ ಎಂಬ ಸಮಾಧಾನದಿಂದ ಅವರು ಸಂತೃಪ್ತರಾದಂತಿದ್ದರು. ಸ್ಟೇಶನ್ನಿಗೆ ಅಲೆದು ಅಲೆದು ರಫಿ ಹೈರಾಣಾಗಿದ್ದ. ಅವನ ಕಬ್ಬಿಣದ ಅಂಗಡಿಯಲ್ಲಿ ಕುಲುಮೆಯ ತುಂಬಾ ಬೂದಿಯಾವರಿಸಿತ್ತು. ಆತ ಎಷ್ಟೋ ದಿನಗಳವರೆಗೆ ಅಂಗಡಿ ಬಾಗಿಲನ್ನೇ ತೆರೆಯಲಿಲ್ಲ. ಸುಖ-ನೆಮ್ಮದಿ ಅವನ ಮನೆಯ ಹಿಂಬಾಗಿಲಿನಿಂದ ಹೊರನಡೆದಿದ್ದವು.

ಈ ಮಧ್ಯೆ ಅಪಹರಣಕಾರ ಶಹಜಾನ್‌ಳನ್ನು ಕೋಲ್ಕತಾದಲ್ಲಿ ಹದಿನೈದಿಪ್ಪತ್ತು ದಿನ ಕಷ್ಟಪಟ್ಟು ಹಿಡಿದಿಟ್ಟುಕೊಂಡಿದ್ದಾನೆ. ಆದರೆ ಪೊಲೀಸ್‌ ನೆರಳು ತನ್ನನ್ನು ಹಿಂಬಾಲಿಸುತ್ತಿದೆಯೆಂಬ ಸುಳಿವು ಸಿಕ್ಕಿದ ಳಿಕ ಪ್ರತಿದಿನ ನೆಲೆ ಬದಲಿಸಲು ಯತ್ನಿಸಿದ್ದಾನೆ. ಪುಟ್ಟ ಬಾಲಕಿಯ ಚೀರಾಟ, ಕೂಗಾಟ, ಅಳುವನ್ನು ನಿಯಂತ್ರಿಸಲಾಗದೇ ಕಂಗಾಲಾಗಿದ್ದಾನೆ. ಆಕೆಯನ್ನು ಹಿಡಿದಿಟ್ಟುಕೊಳ್ಳುವುದು ಕ್ಷಣಕ್ಷಣಕ್ಕೂ ಕಷ್ಟವಾಗಿದೆ. ಈಕೆಯನ್ನು ಖರೀದಿಸಲು ಬರಬೇಕಾಗಿದ್ದವ ಏನೇನೋ ಕಾರಣಗಳಿಂದ ಬಂದಿಲ್ಲ. ಅವನನ್ನು ಸಂಪರ್ಕಿಸುವ ಈತನ ಪ್ರಯತ್ನ ಕೈಗೂಡಿಲ್ಲ. ಖರೀದಿದಾರನೂ ಸಹ ಪತ್ರಿಕಾ ವರದಿ ಓದಿ ಪೊಲೀಸ್‌ ಭಯದಿಂದ ಖರೀದಿಗೆ ಮುಂದಾಗಿಲ್ಲ. ಹುಡುಗಿಯ ಕಿರುಚಾಟ, ಪೊಲೀಸ್‌ ಭಯ, ಖರೀದಿದಾರನ ಅಸಹಕಾರದಿಂದ ಸುರಕ್ಷಿತವಾಗಿ ದಿನದೂಡುವುದು ಕಷ್ಟವೆನಿಸಿದಾಗ ಅಪಹರಣಕಾರ ಹೌರಾ ಸೇತುವೆಯ ಮೇಲೆ ಮಗುವನ್ನು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ.

ತಂದೆ ತಾಯಿ ಅಕ್ಕರೆಯಲ್ಲಿ ಮುದ್ದಾಗಿ ಬೆಳೆದ ಹುಡುಗಿ ಊಟ ತಿಂಡಿಯಿಲ್ಲದೇ ಅನಾಥವಾಗಿ ಬೀದಿ ಕಸದಂತೆ ಬಿದ್ದಿದ್ದಾಳೆ.

ಅದ್ಯಾವುದೋ ಕರುಳು ಈ ಪುಟ್ಟ ಮಗುವನ್ನು ನೋಡಿರಬೇಕು. ಬೊಗಸೆಯಲ್ಲಿ ಎತ್ತಿಕೊಂಡು ಮದರ್‌ ತೆರೇಸಾ ಅವರ ಅನಾಥಶಾಲೆಯಲ್ಲಿ ಬಿಟ್ಟು ಹೋಯಿತು. ಶಹಜಾನ್‌ ಶಹಜಾದಿ ಆದಳು. ಅನಾಥ ಶಾಲೆಯಲ್ಲಿ ಸಾವಿರಾರು ಮಕ್ಕಳ ಜತೆ ಕೂಡಿಕೊಂಡಳು. ಪ್ರತಿನಿತ್ಯ ಶಾಲೆ, ಓದು, ಆಟದ ನಡುವೆ ದಿನಗಳು ಕಳೆದುಹೋಗುತ್ತಿದ್ದವು.ತಂದೆ-ತಾಯಿ, ತಂಗಿ, ತಮ್ಮನ ನೆನಪು ಕ್ರಮೇಣ ಮಾಸುತ್ತಾ ಹೋಯಿತು. ಅಲ್ಲಿನ ಮಕ್ಕಳ ಜತೆ ಬಾಲ್ಯ ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ತಾನೊಬ್ಬ ಅನಾಥೆ ಎಂಬ ಭಾವನೆಯೂ ಅವಳಲ್ಲಿ ಮೊಳೆಯಲಿಲ್ಲ.

ಶಹಜಾದಿಯನ್ನು ಅನಾಥಾಶ್ರಮದಲ್ಲಿ ನೋಡಿದ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತೆಯಾಬ್ಬಳು ಸ್ವಿಸರ್‌ಲ್ಯಾಂಡಿನಲ್ಲಿರುವ ತನ್ನ ಪರಿಚಿತರಿಗೆ, ‘‘ನೀವು ಅಪೇಕ್ಷಿಸಿದ ರೀತಿಯ ಹೆಣ್ಣುಮಗಳೊಬ್ಬಳನ್ನು ನೋಡಿದ್ದೇನೆ. ಅವಳ ಫೋಟೋ ಇಟ್ಟಿದ್ದೇನೆ. ಇಷ್ಟವಾದರೆ ದತ್ತು ತೆಗೆದುಕೊಳ್ಳಹುದು’’ ಎಂದು ಬರೆದಳು. ಪತ್ರ ಸಿಕ್ಕಿದ್ದೇ ತಡ ಅವರು ಕೋಲ್ಕತಾಕ್ಕೆ ಬಂದು ಶಹಜಾದಿಯನ್ನು ನೋಡಿದರು. ಮಗು ಇಷ್ಟವಾಯಿತು. ಶಹಜಾದಿಯಾಂದಿಗೆ ಸ್ವಿಸ್‌ ದಂಪತಿಗಳು ಒಂದು ವಾರ ಉಳಿದರು. ಅವರಿಗೂ ಮಗು ತುಂಬಾ ಹಿಡಿಸಿತು. ಶಹಜಾದಿಯೂ ‘ಹೊಸ ತಂದೆ-ತಾಯಿ’ ಜತೆಗಿರಲು ಒಪ್ಪಿದಳು.

ಶಹಜಾದಿ ಸ್ವಿಸರ್‌ಲ್ಯಾಂಡಿಗೆ ಬಂದಳು. ಹೊಸ ಪರಿಸರ, ಭಾಷೆ, ಮನೆ, ಎಲ್ಲವೂ ಹೊಸದು, ಅಪರಿಚಿತ. ಮೊದಮೊದಲು ಹೊಸ ತಂದೆ-ತಾಯಿ ಜತೆ ಮಾತಾಡಲು ಆಗುತ್ತಿರಲಿಲ್ಲ. ಎಲ್ಲವೂ ಸನ್ನೆ, ಸಂಕೇತಗಳಲ್ಲೇ. ಶಹಜಾದಿ ಅಲ್ಲಿ ಕಾಲೇಜಿಗೆ ಹೋಗಲಾರಂಭಿಸಿದಳು. ಸ್ವಿಸ್‌, ಜರ್ಮನ್‌ ಭಾಷೆ ಕಲಿತಳು. ಅವಳಿಗೆ ತನ್ನ ಮೊದಲಿನ ಊರು, ತಂದೆ, ತಾಯಿ ಎಲ್ಲ ಮರೆತು ಹೋಗಿತ್ತು. ಹೊಸ ತಂದೆ-ತಾಯಿ ಶಹಜಾದಿಗಾಗಿ ಒಳ್ಳೆಯ ಬದುಕನ್ನು ಕಟ್ಟಿ ಕೊಟ್ಟಿದ್ದರು. ಅವಳಿಗಾಗಿ ಹೊಸ ಕಾರನ್ನು ಕೊಟ್ಟಿದ್ದರು. ಆಕೆಯ ನಗು, ಲಾಸ್ಯದಿಂದ ಅವರ ಬಾಳಿನಲ್ಲೂ ಹೊಸಯುಗ ಆರಂಭವಾಗಿತ್ತು. ಈ ಮಧ್ಯೆ ಶಹಜಾದಿಗೆ ಸ್ಟೀಫನ್‌ ಎಂಬುವವನ ಪರಿಚಯವಾಯಿತು. ಎಲ್ಲ ಪರಿಚಯಗಳು ಪ್ರೀತಿಗೆ ಎರವಾಗುವಂತೆ ಇದೂ ಸಹ ಪ್ರೇಮ ಅನಂತರ ವಿವಾಹದಲ್ಲಿ ಮುಗಿಯಿತು. ಹೊಸ ತಂದೆ- ತಾಯಿ ಮುಂದೆ ನಿಂತು ಮದುವೆ ನೆರವೇರಿಸಿದರು.

ಮದುವೆಯಾಗಿ ನಾಲ್ಕೈದು ತಿಂಗಳಿಗೆ ಶಹಜಾದಿ ತನ್ನ ಮೊದಲ ತಂದೆ ತಾಯಿಯನ್ನು ನೋಡಲು ಕನವರಿಸತೊಡಗಿದಳು. ಸ್ವಿಸ್‌ ದಂಪತಿಗಳಿಗೆ ಪರಿಚಯಿಸಿದ ಸ್ವಯಂ ಸೇವಾಸಂಸ್ಥೆ ಕಾರ್ಯಕರ್ತೆಯ ಮುಂದೆ ತನ್ನ ಮನದ ಬೇಡಿಕೆಯನ್ನು ಇಟ್ಟಳು. ಆಕೆ ದಿಲ್ಲಿಯಲ್ಲಿರುವ ಸಿಬಿಐ ಅಧಿಕಾರಿಯನ್ನು ಸಂಪರ್ಕಿಸಿದಳು. ಅವರ ಸೂಚನೆ ಪ್ರಕಾರ ಶಹಜಾದಿಯ ಕುಲಗೋತ್ರ, ಪರಿಚಯ, ಮುಖಪತ್ರ ವಿವರಗಳನ್ನು ಸಂಗ್ರಹಿಸಲಾಯಿತು. ದಿಲ್ಲಿಯ ಪತ್ರಿಕೆಗಳಲ್ಲಿ ಸಿಬಿಐ ಜಾಹೀರಾತನ್ನು ನೀಡಿತು.

ಇಲ್ಲಿ ಮಗಳ ನೆನಪಲ್ಲಿ ರಫಿ ಜಿನ್ನಾತುನ್ನೀಸಾ ಕೃಶವಾಗಿದ್ದರು. ಮಗಳ ಹುಡುಕಾಟದಲ್ಲಿ ಇಪ್ಪತ್ತೆರಡು ವರ್ಷ ಗತಿಸಿಹೋಗಿದ್ದವು. ಶಹಜಾದಿಯನ್ನು ಹೆತ್ತ ಕರುಳು ಮರೆತೀತೇ? ದಿನದಿಂದ ದಿನಕ್ಕೆ ಆಕೆಯ ನೆನಪು ಅವರನ್ನು ಸುಡುತ್ತಿತ್ತು. ಯಾರೋ ಈ ಜಾಹೀರಾತನ್ನು ನೋಡಿ ವಿಷಯವನ್ನು ರಫಿಗೆ ತಿಳಿಸಿದರು. ಅಷ್ಟರೊಳಗೆ ಪತ್ರಿಕೆ ರದ್ದಿಯಾಗಿ ಹದಿನೈದು ದಿನಗಳಾಗಿದ್ದವು. ಪತ್ರಿಕೆಗಾಗಿ 60 ಮೈಲಿ ದೂರದ ಜಾನಪುರಕ್ಕೆ ಹೋದ. ಪವಾಡವೆಂಬಂತೆ ಜಾಹೀರಾತು ಪ್ರಕಟವಾದ ಪತ್ರಿಕೆ ಸಿಕ್ಕಿತು. ಶಹಜಾದಿಯ ಚಿತ್ರ ನೋಡಿದಾಕ್ಷಣ ತಟ್ಟನೆ ಗುರುತು ಹಿಡಿಯಲಾಗಲಿಲ್ಲ. ಮನೆಗೆ ಬಂದವನೇ ಹೆಂಡತಿಯ ಮುಂದೆ ಪತ್ರಿಕೆ ಹಿಡಿದ. ‘‘ನೂರಕ್ಕೆ ನೂರು ಈಕೆ ನಮ್ಮ ಶಹಜಾನ್‌ಳೇ. ಕಣ್ಣು, ಮೂಗು, ಬಾಯಿ ನೋಡಿದರೆ ಗೊತ್ತಾಗೊಲ್ವೆ? ‘ಕ್ಯಾ ಅಲ್ಲಾ ಕೊನೆಗೂ ನಮ್ಮ ಮಗಳು ಸಿಕ್ಕಿದಳಲ್ಲಾ’ ಅಂತ ಆಕೆ ಭಾವಾವೇಶದಲ್ಲಿ ಕೂಗಿದಳು. ಪರಿಚಿತರ ಸಲಹೆಯ ಮೇರೆಗೆ ರಫಿ ಪತ್ರಿಕೆಯಾಂದಿಗೆ ದಿಲ್ಲಿಗೆ ಬಂದು ಸಿಬಿಐ ಅಧಿಕಾರಿಯನ್ನು ಭೇಟಿ ಮಾಡಿದ. ರಫಿಯಿಂದ ವಿವರ ಪಡೆದ ಅಧಿಕಾರಿಗಳು ಸ್ವಿಸರ್‌ಲ್ಯಾಂಡಿನಲ್ಲಿರುವ ಶಹಜಾದಿ ಹಾಗೂ ಆಕೆಯ ಹೊಸ ತಂದೆ-ತಾಯಿಯನ್ನು ಸಂಪರ್ಕಿಸಿದರು. ಸ್ವಿಸ್‌ ದಂಪತಿಗಳಿಗೆ ಖುಷಿಯಾದರೂ ಅವರು ಏಕಾಏಕಿ ಶಹಜಾದಿಯನ್ನು ಕಳಿಸಲು ಒಪ್ಪಲಿಲ್ಲ. ಡಿಎನ್‌ಎ ಪರೀಕ್ಷೆ ಮಾಡಿ ಖಾತ್ರಿಪಡಿಸಲು ಸಿಬಿಐಗೆ ವಿನಂತಿಸಿದರು. ಸಿಬಿಐ ರಫಿ-ಜಿನ್ನಾತುನ್ನೀಸಾಳ ಕೂದಲುಗಳನ್ನು ಸ್ವಿಸರ್‌ಲ್ಯಾಂಡಿಗೆ ಕಳುಹಿಸಿತು. ಅಲ್ಲಿ ಶಹಜಾದಿಯ ಕೂದಲನ್ನಿಟ್ಟು ಡಿಎನ್‌ಎ ಪರೀಕ್ಷೆ ಮಾಡಿದರೆ...

ಹೌದು... ಇವರೇ ತಂದೆ ತಾಯಿ! ಆಕೆಯೇ ಮಗಳು!

ಅದಾದ ಬಳಿಕ ಒಂದು ದಿನವೂ ಆಕೆಗೆ ಅಲ್ಲಿರಲು ಮನಸ್ಸಾಗಲಿಲ್ಲ. ತಂದೆ ತಾಯಿ, ತಂಗಿ, ತಮ್ಮನನ್ನು ನೋಡಬೇಕೆಂದು ತವಕಿಸತೊಡಗಿದಳು. ಅವಳ ‘ಭಾರತ ಯಾತ್ರೆ’ ಆರಂಭವಾಯಿತು.

ಹಿಂದಿನ ತಿಂಗಳು ಶಹಜಾನ್‌ಳ ಆಗಮನಕ್ಕೆ ಇಡೀ ಊರು ಎದ್ದು ಬಂದು ಸ್ವಾಗತಕ್ಕೆ ಮುಂದೆ ನಿಂತಿತ್ತು. ಅಲ್ಲಿ ಮಾನವ ಭಾವನೆಗಳು ಸಂತಸಕ್ಕೆ ಹಾರಾಡುವ ಎಲ್ಲ ಕ್ಷಣಗಳಿದ್ದವು. ತಾನು ಹುಟ್ಟಿದ ಮನೆ ಮುಂದೆ ನಿಂತಾಗ ಶಹಜಾನ್‌ಳಿಗೆ ಮಾತು ಮರೆತು ಹೋಗಿತ್ತು, ಭಾಷೆಯೂ ಮರೆತು ಹೋದ ಹಿಂದಿಯೂ ಬಾಯಿಗೆ ಬರದೇ ಸನ್ನೆಗೆ ಶರಣಾಗಿತ್ತು. ಅಲ್ಲಿ ಮಾತನಾಡುವಂಥದ್ದೇನೂ ಉಳಿದಿರಲಿಲ್ಲ.

ಈ ಬದುಕಿಗೆ ಅವೆಷ್ಟು ತಿರುವುಗಳು? ಅವೆಷ್ಟು ಸ್ಟಾಪುಗಳು? ಅವೆಷ್ಟು ಮೈಲಿಗಲ್ಲುಗಳು?

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more