• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಕಾರಣ ‘ಅವರಿಗೆ’ ವೃತ್ತಿಯಲ್ಲ, ನಮ್ಮವರಿಗೋ ನಿವೃತ್ತಿಯೇ ಇಲ್ಲ !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ನಮ್ಮ ರಾಜಕಾರಣಿಗಳೇಕೆ ನಿವೃತ್ತರಾಗುವುದಿಲ್ಲ?

ನಡೆದಾಡಲು ಆಗದಿರಲಿ, ಕಿವಿ ಕೇಳದಿರಲಿ, ಕಣ್ಣು ಕಾಣದಿರಲಿ, ಮನಸ್ಸು, ದೇಹಕ್ಕೆ ಮುಪ್ಪು ಅಡರಿಕೊಂಡು ನಿಸ್ತೇಜವಾಗಿರಲಿ, ಬೇರೆಯವರ ಸಹಾಯವಿಲ್ಲದೇ ಒಂದು ಹೆಜ್ಜೆ ಕಿತ್ತಿಡಲು ಆಗದಿರಲಿ, ಅಂಗಾಂಗಗಳೆಲ್ಲವು ಕಸುವು ಕಳೆದುಕೊಂಡು ಶಟಗೊಳ್ಳಲಿ, ಇಡೀ ಶರೀರ ಜೀವಚ್ಛವವಾಗಿ ಬಿದ್ದುಕೊಂಡಿರಲಿ ಅಧಿಕಾರ ಮಾತ್ರ ಬಗಲಲ್ಲಿರಬೇಕು. ಮಂತ್ರಿಗಿರಿ, ರಾಜ್ಯಪಾಲ ಹುದ್ದೆ, ರಾಯಭಾರಿಪಟ್ಟ ಮಾತ್ರ ಇರಲೇಬೇಕು.

ಜೀವ, ಜೀವನವಿರುವುದೇ ಈ ಹುದ್ದೆಗಳನ್ನು ಗಿಟ್ಟಿಸುವುದರಲ್ಲಿ ಹಾಗೂ ಇಟ್ಟುಕೊಳ್ಳುವುದರಲ್ಲಿ ಎಂದು ರಾಜಕಾರಣಿಗಳು ಭಾವಿಸಿರುವುದರಿಂದ ಅವರಿಗೆ ನಿವೃತ್ತಿಯ ಪ್ರಶ್ನೆಯೇ ಕಾಡುವುದಿಲ್ಲ. ವಕ್ರತುಂಡೋಕ್ತಿಯಲ್ಲಿ ಹೇಳಿದಂತೆ ‘ಕೆಲವು ರಾಜಕಾರಣಿಗಳಿಗೆ ನಿವೃತ್ತಿಯೆಂದರೆ ಈ ಲೋಕವನ್ನು ತ್ಯಜಿಸುವುದು’ ಎಂಬುದು ಕಟುಸತ್ಯ. ಯಾವುದೇ ಮಂತ್ರಿ, ರಾಜಕಾರಣಿಯ ಮೇಲೆ ಗಂಭೀರ ಆರೋಪ ಮಾಡಿ, ಆಗ ಅವರು ‘ಆರೋಪ ಸಾಬೀತಾದರೆ ರಾಜಕಾರಣದ ನಿವೃತ್ತಿ’ ಎಂದು ಹೇಳುವುದುಂಟು. ಆದರೆ ಸ್ವತಂತ್ರ ಭಾರತದಲ್ಲಿ ಯಾವ ರಾಜಕಾರಣಿಯೂ ಈ ಕಾರಣದಿಂದ ನಿವೃತ್ತಿಯಾದ ನಿದರ್ಶನವಂತೂ ಇಲ್ಲ.

ನಮ್ಮ ದೇಶದಲ್ಲಿರುವ ಎಲ್ಲ ರಾಜ್ಯಪಾಲರನ್ನು ನೋಡಿ. ಎಲ್ಲರೂ ವಯಸ್ಸಾದವರು. ಸ್ವತಂತ್ರವಾಗಿ ಯಾವ ಕೆಲಸವನ್ನೂ ಮಾಡಲು ಆಗದವರು. ಉತ್ತರ ಪ್ರದೇಶದ ರಾಜ್ಯಪಾಲರೊಬ್ಬರಿದ್ದರು. ಅವರು ಸ್ನಾನ, ಬಟ್ಟೆ ತೊಡುವುದನ್ನು ಸಹ ಬೇರೆಯವರ ಸಹಾಯದಿಂದಲೇ ಮಾಡಿಸಿಕೊಳ್ಳಬೇಕಿತ್ತು. ಇಂಥ ಚಾಕರಿಗೆಂದೇ ಮೂವರು ಜವಾನರು ನೇಮಕವಾಗಿದ್ದರು. ಬಗ್ಗಿ ಸಾಕ್ಸ್‌ ಹಾಕಿಕೊಳ್ಳಲೂ ಸಹ ಇವರಿಗೆ ಆಗುತ್ತಿರಲಿಲ್ಲ. ಮಂಚದ ಮೇಲೆ ಅನಾಮತ್ತಾಗಿ ಎತ್ತಿ ಮಲಗಿಸಬೇಕಾಗುತ್ತಿತ್ತು. ನಂತರ ಇದೇ ಪರಿಸ್ಥಿತಿ ರಾಷ್ಟ್ರಪತಿ ಶಂಕರ ದಯಾಳ್‌ ಶರ್ಮ ಅವರಿಗೂ ಬಂದೊದಗಿತ್ತು. ಪ್ರಧಾನಿ ವಾಜಪೇಯಿ ಅವರದ್ದೂ ಹೆಚ್ಚೂಕಮ್ಮಿ ಇದೇ ಸ್ಥಿತಿ. ಪ್ರಧಾನಿಯಾಗಲು ಹವಣಿಸುತ್ತಿರುವ ದೇವೇಗೌಡ, ವಿ.ಪಿ.ಸಿಂಗ್‌, ಚಂದ್ರಶೇಖರ್‌, ಐ.ಕೆ.ಗುಜ್ರಾಲ್‌, ಜಾರ್ಜ್‌ ಫರ್ನಾಂಡಿಸ್‌, ಹರಕಿಶನ್‌ ಸಿಂಗ್‌ ಸುರ್ಜಿತ್‌, ಜ್ಯೋತಿ ಬಸು ಇವರೆಲ್ಲರೂ ಸೆವೆಂಟಿ ಪ್ಲಸ್‌. ಇವರ ಸನಿಹ ನಿವೃತ್ತಿ ಸುಳಿದೇ ಇಲ್ಲ. ನಮ್ಮ ದೇವೇಗೌಡರಿಗಂತೂ ಕೈತುಂಬ ಕೆಲಸ. ಮೈತುಂಬಾ ರಾಜಕಾರಣ. ವಿನಾಕಾರಣ ದೇಶದ ಚಿಂತೆ. ಸ (ಸ್ವ) ಕಾರಣಕ್ಕಾಗಿ ಸದಾ ಕ್ರಿಯಾಶೀಲ. ಅಧಿಕಾರ ಪಡೆಯುವುದಕ್ಕಾಗಿ ಶತಾಯಗತಾಯ ಹೋರಾಟ. ಸೋತರೂ ಸುಮ್ಮನಾಗದೇ ಮತ್ತೆ ಮತ್ತೆ ಧೂಳಿನಿಂದ ಎದ್ದು ಬರುವ ಪ್ರಯತ್ನ. ರಾಮಕೃಷ್ಣ ಹೆಗಡೆ ನಿವೃತ್ತಿಯ ಬಗ್ಗೆ ಮಾತನಾಡಿದರು. ಆದರೆ ನಿವೃತ್ತಿರಾಗಲಿಲ್ಲ. ರಾಜಕೀಯ ಸನ್ಯಾಸದ ಬಗ್ಗೆ ಪ್ರತಿಪಾದಿಸಿದರು. ಆದರೆ ಸನ್ಯಾಸತ್ವ ಸ್ವೀಕರಿಸಲಿಲ್ಲ.

ಇದೇ ಸ್ಥಿತಿಯಲ್ಲಿ ಅಲ್ಲವೇ ಎಂ.ಜಿ.ರಾಮಚಂದ್ರನ್‌ ತಮಿಳುನಾಡನ್ನು ಎರಡು ವರ್ಷ ಆಳಿದ್ದು. ಚಿಕಿತ್ಸೆಗೆಂದು ಎಂಜಿಆರ್‌ ವಿದೇಶಕ್ಕೆ ಹೋದರೂ ಕುರ್ಚಿ ಮಾತ್ರ ಬಿಟ್ಟಿರಲಿಲ್ಲ. ಗಂಟಲು ಹರಕೊಂಡು ಬಿದ್ದುಹೋಗುವಂತೆ ಕಿರುಚಿದರೂ ಅವರಿಗೆ ಕೇಳಿಸುತ್ತಿರಲಿಲ್ಲ.

ದೇಹದ ಇನ್ನಿತರ ಬಿಡಿಭಾಗಗಳು ಕೆಲಸ ಮಾಡುತ್ತಿರಲಿಲ್ಲ. ಆಸ್ಪತ್ರೆಯ ಹಾಸಿಗೆಯ ಮೇಲೆ ಎಂಜಿಆರ್‌ ಶಾಂತವಾಗಿ ಜೀವಂತ ಹೆಣವಾಗಿ ಮಲಗಿದ್ದರು. ಅದಕ್ಕಿಂತ ಮುಖ್ಯವಾಗಿ ಆ ಸ್ಥಿತಿಯಲ್ಲಿ ಅವರು ತಮಿಳುನಾಡಿನ ಸಕ್ರಿಯ, ಜನಪ್ರಿಯ ಮುಖ್ಯಮಂತ್ರಿಯಾಗಿದ್ದರು !

ಮೊನ್ನೆ ಮೊನ್ನೆ ನಿಧನರಾದ ಮುರಸೋಳಿ ಮಾರನ್‌ ಎಂಬ ಕೇಂದ್ರ ಸಚಿವರ ಕತೆಯೇನು ಬೇರೆಯೇ? ಅವರಿಗೆ ಮಂತ್ರಿಯಾಗಲು ದೇವೇಗೌಡರ ಸಂಪುಟವಾದರೂ ಆದೀತು. ನಡೆದಾಡಲು ಆಗಲಿ, ಬಿಡಲಿ, ಮಂತ್ರಿ ಪದವಿ ಮಾತ್ರ ಬೇಕು. ಸರಿಸುಮಾರು ಎರಡು ವರ್ಷ ಹದಗೆಟ್ಟ ಆರೋಗ್ಯದಿಂದ ನಿಷ್ಕಿೃಯರಾಗಿದ್ದ ಮಾರನ್‌, ಮಂತ್ರಿ ಸ್ಥಾನ ಬಿಡಲಿಲ್ಲ. ಒಂದೇ ಒಂದು ಫೈಲನ್ನೂ ಸಹ ನೋಡಲು ಆಗುತ್ತಿರಲಿಲ್ಲ. ಆರು ತಿಂಗಳು ಕಚೇರಿಗೂ ಬರಲಿಲ್ಲ. ಯಾರನ್ನೂ ಭೇಟಿ ಮಾಡಲಿಲ್ಲ. ಒಂದೂ ಸಹಿ ಹಾಕಲಿಲ್ಲ. ಆದರೂ ಅವರು ದೇಶದ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸುವ ವಾಣಿಜ್ಯ ಖಾತೆಯಂಥ ಪ್ರಮುಖ ಖಾತೆಗೆ ಮಂತ್ರಿಯಾಗಿದ್ದರು. ಯಾವಾಗ ಈ ಖಾತೆ ಕಿತ್ತು ಕಿಲುಬು ಹಿಡಿದು ಕಿಲುಸಾರೆದ್ದಿತೋ ವಾಜಪೇಯಿ ತೀರಾ ಪ್ರಯಾಸ ಪಟ್ಟು ಖಾತೆಯನ್ನು ಬೇರೆಯವರಿಗೆ ವಹಿಸಬೇಕಾಯಿತು. ವಾಣಿಜ್ಯ ಖಾತೆಯನ್ನು ಮಾರನ್‌ ಅವರಿಂದ ಕಿತ್ತುಕೊಂಡಿರಬಹುದು. ಆದರೆ ವಾಜಪೇಯಿ ಅವರಿಗೆ ಖಾತೆ ಕಿತ್ತುಕೊಳ್ಳಲು ಆಗಲಿಲ್ಲ. ಮಾರನ್‌ ಖಾತೆ ರಹಿತ ಮಂತ್ರಿಯಾಗಿಯೇ ಸಾಯುವತನಕ ಉಳಿದರು ! ಸತ್ತು ‘ರಾಜಕೀಯದಿಂದ ನಿವೃತ್ತ’ರಾದರು!

ಇದೇ ಮಾರನ್‌ರ ಸೋದರ ಸಂಬಂಧಿ ಕರುಣಾನಿಧಿ, ಎಂಜಿಆರ್‌ ಆಸ್ಪತ್ರೆಯಲ್ಲಿ ಮಲಗಿ ಆಳುತ್ತಿರುವುದನ್ನು ನೋಡಿ ಬಾಯಿಗೆ ಬಂದಂತೆ ಬಯ್ದಿದ್ದರು. ಅದೇ ಕರುಣಾನಿಧಿ ಎಂಜಿಆರ್‌ಗೆ ಹೇಳಿದ ಮಾತನ್ನು ತುಸು ನೆನಪಿಸಿಕೊಂಡು ಒಂದು ಸಣ್ಣ ಬುದ್ಧಿ ಮಾತನ್ನು ಮಾರನ್‌ಗೆ ಹೇಳಬಹುದಾಗಿತ್ತು. ಹೇಳಲಿಲ್ಲ. ಖಾತೆ ರಹಿತ ಮಂತ್ರಿಯಾಗಿ ಸರಕಾರಿ ವೆಚ್ಚದಲ್ಲಿ ನಾಚಿಕೆ ಬಿಟ್ಟು ಎಲ್ಲ ಚಿಕಿತ್ಸೆ ಮಾಡಿಸಿಕೊಂಡರು. ಜೀವ ಉಳಿಸಿಕೊಳ್ಳುವುದಕ್ಕಾಗಿ ರಾಜಕಾರಣಿಗಳು ಅಧಿಕಾರಕ್ಕೆ ಅಂಟಿಕೊಂಡಿರುತ್ತಾರೆ ಎಂದು ಹೇಳಿದ್ದು ಈ ಕಾರಣಕ್ಕೆ.

ಈ ವಿಷಯದಲ್ಲಿ ಸ್ವಲ್ಪ ಅಪವಾದ ಎಂದರೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು. ಮನಸ್ಸು ಮಾಡಿದ್ದರೆ ಅವರು ಇನ್ನೂ ಒಂದು ಅವಧಿಗೆ ಅಧಿಕಾರದಲ್ಲಿ ಮುಂದುವರಿಯಬಹುದಿತ್ತು. ವಯಸ್ಸಾಗುತ್ತಿದೆಯೆಂಬುದು ಇಪ್ಪತ್ತೆೈದು ವರ್ಷ ಅಧಿಕಾರ ನಡೆಸಿದ ಬಳಿಕ ಎಂಬತ್ತೆೈದನೆ ಇಳಿವಯಸ್ಸಿನಲ್ಲಿ ಗೊತ್ತಾದಾಗ ಅಧಿಕಾರದಿಂದ ಕೆಳಕ್ಕಿಳಿದರು. ಆದರೆ ಜ್ಯೋತಿ ಬಸು ಸ್ವ ಇಚ್ಛೆಯಿಂದ ಅಧಿಕಾರ ತ್ಯಾಗ ಮಾಡಿದ್ದಕ್ಕೆ ಬೇರೆಯದೇ ಕತೆಯಿದೆ.

ವಿದೇಶಗಳಲ್ಲಿರುವ ಭಾರತದ ಹೈಕಮೀಷನರ್‌ಗಳು, ರಾಯಭಾರಿಗಳನ್ನು ನೋಡಿ. ಎಲ್ಲ ಎಪ್ಪತ್ತೆೈದನ್ನು ದಾಟಿದವರು. ಅದೇ ದಿಲ್ಲಿಯಲ್ಲಿರುವ ಇತರ ದೇಶಗಳ ರಾಯಬಾರಿಗಳನ್ನು ನೋಡಿ. ಎಲ್ಲ ಐವತ್ತು- ಐವತ್ತೆೈದರ ಖದರಿನವರು. ಇಲ್ಲಿ ರಾಜಕೀಯ ಮಾಡಿ ಸುಸ್ತಾದವರು, ಮಂತ್ರಿಗಿರಿಯ ಅವಕಾಶದಿಂದ ವಂಚಿತರಾದವರು, ಮುಂದೆ ಅಂಥ ಅವಕಾಶ ಪಡೆಯಲು ಭವಿಷ್ಯ ಉಜ್ವಲವಾಗಿಲ್ಲದವರು, ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿಗಳು, ನಿವೃತ್ತಿಯ ನಂತರವೂ ಒಂದಿಲ್ಲೊಂದು ಪದವಿಗೆ ತಮ್ಮನ್ನು ನೆಟ್ಟಿಕೊಂಡಿರುವವರು, ಅಧಿಕಾರದಲ್ಲಿದ್ದಾಗಲೇ ನಿವೃತ್ತಿಯ ನಂತರದ ಅಧಿಕಾರಕ್ಕೆ ಶ್ರಮಿಸಿದವರು ನಮ್ಮ ರಾಯ‘ಭಾರಿ’ಗಳು.

ಹೌದು, ನಮ್ಮ ರಾಜಕಾರಣಿಗಳು ನಿವೃತ್ತರಾಗುವುದೇ ಇಲ್ಲ.

ಮೊನ್ನೆ ಸಹೋದರ ಅಮೆರಿಕದಿಂದ ಬರುವಾಗ ಪುಸ್ತಕವೊಂದನ್ನು ತಂದು ಕೈಗಿಟ್ಟ. ಅಚ್ಚರಿಯಾಯಿತು. ಒಂದೇ ದಮ್ಮಿಗೆ ಓದಲು ತೊಡಗಿದರೆ ಪುಟಪುಟಗಳಲ್ಲಿ ಕುತೂಹಲಗಳ ಸಾಲುಸಾಲು. ಅಮೆರಿಕಾದ ಅಧ್ಯಕ್ಷನಾಗಿದ್ದ ಜಿಮ್ಮಿ ಕಾರ್ಟರ್‌ ಅಮೆರಿಕದ ಕ್ರಾಂತಿಯ ಸಂದರ್ಭದಲ್ಲಿ ನಡೆದ ಘಟನೆಯನ್ನಾಧರಿಸಿದ ಕೃತಿಯದು. ಪಾಂಗಿತ ಲೇಖಕನಂತೆ ಕಾರ್ಟರ್‌ ಈ ಕಾದಂಬರಿ ಬರೆದಿದ್ದಾರೆ. ಕಾದಂಬರಿ ಬರೆದ ಅಮೆರಿಕದ ಮೊದಲ ಅಧ್ಯಕ್ಷ. ಅಮೆರಿಕ ಕ್ರಾಂತಿ ಕುರಿತು ಆರು ವರ್ಷ ಅಧ್ಯಯನ ಮಾಡಿ, ಅನಂತರ ಎರಡು ವರ್ಷ ಬರೆದು ಮುಗಿಸಿದ ಕೃತಿಯಿದು. ಹಾಗೆ ನೋಡಿದರೆ ಕಾರ್ಟರ್‌ ಈತನಕ 18 ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಇತಿಹಾಸ, ಸಾರ್ವಜನಿಕ ನೀತಿ, ವಿದೇಶಾಂಗ ವ್ಯವಹಾರ, ಕತೆ, ಆತ್ಮಕಥೆ, ಮಕ್ಕಳ ಪುಸ್ತಕಗಳು ಸೇರಿವೆ. ಕಾದಂಬರಿಯ ಹೊದಿಕೆಯನ್ನು ಸರಿಸಿದರೆ ಚಿಕ್ಕದಾದ ಅವರ ಹೆಸರು. ಮುಖಪುಟದ ತೈಲಚಿತ್ರವೂ ಅವರದೇ. (ಕಳೆದ ಹದಿನೈದು ವರ್ಷಗಳಿಂದ ಪೇಂಟಿಂಗ್‌ ಮಾಡುತ್ತಿರುವ ಕಾರ್ಟರ್‌ ತಮ್ಮ ಕೃತಿಗಳ ಪ್ರದರ್ಶನವನ್ನೂ ಏರ್ಪಡಿಸಿದ್ದುಂಟು). ಅಮೆರಿಕದ ಅಧ್ಯಕ್ಷನೊಬ್ಬ ಇಂಥ ಹವ್ಯಾಸಕ್ಕಿಳಿದಿದ್ದು ಇದೇ ಮೊದಲು. ಈಗ ಕಾರ್ಟರ್‌ಗೆ 79 ವರ್ಷ ವಯಸ್ಸು. ಸೃಜನಶೀಲ ಚಟುವಟಿಕೆಯಲ್ಲಿ ನಿರತ.

ಒಮ್ಮೆ ಅಧ್ಯಕ್ಷನಾದ ಬಳಿಕ ಯಾರೂ ಅಮೆರಿಕದಲ್ಲಿ ರಾಜಕೀಯದೆಡೆಗೆ ಮುಖ ಮಾಡುವುದಿಲ್ಲ. ಅಧಿಕಾರದಿಂದ ದೂರ ಉಳಿದರೂ ಅಧಿಕಾರದಲ್ಲಿದ್ದವರನ್ನು ಕೆಳಗಿಳಿಸಲು ಹುನ್ನಾರ ನಡೆಸುವುದಿಲ್ಲ. ತಮ್ಮ ಮಕ್ಕಳು, ನೆಂಟರನ್ನು ಕುರ್ಚಿ ಮೇಲೆ ಕುಳ್ಳಿರಿಸಲು ಸ್ಕೆಚ್‌ ಹಾಕುವುದಿಲ್ಲ. ಜನರನ್ನು, ಸಮಾಜವನ್ನು ಕಾಡುವ ಯಾವುದಾದರೂ ಒಂದು ವಿಷಯವನ್ನು ಕೈಗೆತ್ತಿಕೊಂಡು ಅದರಲ್ಲಿ ತೊಡಗಿಕೊಳ್ಳುತ್ತಾರೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಲಿಕ ಜಿಮ್ಮಿ ಕಾರ್ಟರ್‌ ವಿಶ್ವಶಾಂತಿ ಹಾಗೂ ಆರೋಗ್ಯ ಕಾಳಜಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವದಾದ್ಯಂತ ಪ್ರವಾಸ ಮಾಡಿದ. ಜನರನ್ನು, ಸಂಸ್ಥೆಯನ್ನು ಸಂಘಟಿಸಿದ. ಊರೂರಿಗೆ ಹೋಗಿ ಭಾಷಣ ಮಾಡಿದ. ರ್ವಾಂಡಾದ ಯುದ್ಧಭೂಮಿಯಲ್ಲಿ ನಡೆದು ಹೋಗಿ ಫಿರಂಗಿಗಳ ಮೊನೆಯನ್ನು ಚುಂಬಿಸಿ ಬಂದ. ಕಾರ್ಟರ್‌ಗೆ ಶಾಂತಿಗಾಗಿ ನೀಡುವ ನೊಬೆಲ್‌ ಪ್ರಶಸ್ತಿ ಬಂತು. ಈಗ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಏಡ್ಸ್‌ ಬಗ್ಗೆ ಅರಿವು ಮೂಡಿಸಲು ದೇಶ ದೇಶ ಸುತ್ತುತ್ತಿದ್ದಾರೆ.

ಬ್ರಿಟನ್‌ನ ಉಪಪ್ರಧಾನಿ ಡೇವಿಡ್‌ಕೋಲ್‌ ಪಟ್ಟದಿಂದ ಇಳಿದ ಬಳಿಕ ಪತ್ರಿಕೋದ್ಯಮ ಶಿಕ್ಷಣ, ತರಬೇತಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ. ಥಾಮ್ಸನ್‌ ಫೌಂಡೇಷನ್‌ನಲ್ಲಿ ಗೌರವ ಅಧ್ಯಕ್ಷನಾಗಿ ಪತ್ರಕರ್ತರಿಗೆ ವೃತ್ತಿ ತರಬೇತಿ ಕೇಂದ್ರಗಳನ್ನು ತೆರೆದ. ಉಪಪ್ರಧಾನಿಯಾಗಿದ್ದ ಆತ ಪ್ರಧಾನಿಯಾಗುವುದಕ್ಕೆ ಮರಳಿ ಪ್ರಯತ್ನವ ಮಾಡಲಿಲ್ಲ.

ವಿನ್‌ಸ್ಟನ್‌ ಚರ್ಚಿಲ್‌ ಗೊತ್ತಲ್ಲ. ಎರಡನೆ ಮಹಾಯುದ್ಧದ ಕಾಲದಲ್ಲಿ ಬ್ರಿಟನ್‌ನ ಪ್ರಧಾನಿಯಾಗಿದ್ದವ. ವಿಶ್ವದ ಮಹಾನ್‌ ನಾಯಕರ ಸಾಲಿನಲ್ಲಿ ಮೇರು ವ್ಯಕ್ತಿತ್ವ. ಚರ್ಚಿಲ್‌ ಇಂದಿಗೂ Wartime GREAT Prime Minister ಎಂದೇ ಜನಜನಿತ. ಇಂಥ ಚರ್ಚಿಲ್‌ ಮಹಾಯುದ್ಧ ಮುಗಿದ ಬಳಿಕ ನಡೆದ ಚುನಾವಣೆಯಲ್ಲಿ ದಯನೀಯ ಸೋಲನ್ನು ಕಂಡ. ಅವನಲ್ಲಿ ಇನ್ನೂ ಸಾಕಷ್ಟು ರಾಜಕಾರಣ ಉಳಿದಿತ್ತು. ನೇಪಥ್ಯಕ್ಕೆ ಸರಿಯುವಂಥ ಹಗುರಪಿಂಡ ಅವನದಾಗಿರಲಿಲ್ಲ. ಯುದ್ಧ ಕಾಲದಲ್ಲಿ ಬ್ರಿಟನನ್ನು ಜಯದ ಅಂಗಳದಲ್ಲಿ ನಿಲ್ಲಿಸಿದ ಚರ್ಚಿಲ್‌ ಚುನಾವಣೆಯಲ್ಲಿ ಸೋಲುಣ್ಣಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಚರ್ಚಿಲ್‌ ಮತ್ತೆ ಧೂಳಿನಿಂದ ಎದ್ದು ಬರುವಂಥ ಶಪಥ ತೊಡಲಿಲ್ಲ. ತನ್ನ ಪಾಡಿಗೆ ತಾನು ಓದುವುದು, ಬರೆಯುವುದರಲ್ಲಿ ತೊಡಗಿದ. ಹಾಗಂತ ರಾಜಕೀಯದ ಮೇಲಿನ ಮುನಿಸು ಅಂದೇನೂ ಅಲ್ಲ. ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಅವನ ಉದ್ದೇಶವಾಗಿತ್ತು. ಅಚ್ಚರಿಯೆಂದರೆ ಚರ್ಚಿಲ್‌ಗೆ ಸಾಹಿತ್ಯಕ್ಕಾಗಿ ಮೀಸಲಿರುವ ನೊಬೆಲ್‌ ಪ್ರಶಸ್ತಿ ಬಂತು. ರಾಜಕಾರಣದಲ್ಲಿದ್ದರೂ ಆಥ ತನ್ನ ಛಾಪನ್ನು ಮೂಡಿಸಿದ್ದು ಬರವಣಿಗೆಯಲ್ಲಿ.

ಬ್ರಿಟನ್‌ನ ಜಾನ್‌ ಮೇಜರ್‌, ಅಮೆರಿಕ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟ್‌, ಕೂಲಿಡ್ಜ್‌, ರೇಗನ್‌, ಜಾರ್ಜ್‌ಬುಶ್‌ (ಸೀನಿಯರ್‌) ಮುಂತಾದವರೆಲ್ಲ ಅಧಿಕಾರದಿಂದ ಇಳಿದ ಬಲಿಕ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು. ಸಮಾಜ ಸೇವೆಗೆ ಮುಡಿಪಾಗಿಟ್ಟರು. ರಾಜಕೀಯದ ಕಡೆ ಕತ್ತೆತ್ತಿ ನೋಡಲಿಲ್ಲ.

ಏಕೆಂದರೆ ಇವರಿಗ್ಯಾರಿಗೂ ರಾಜಕೀಯ ಒಂದು ವೃತ್ತಿಯಾಗಿರಲಿಲ್ಲ. ಹೀಗಾಗಿ ನಿವೃತ್ತಿಯ ಬಗ್ಗೆ ಯೋಚಿಸಲಿಲ್ಲ. ತಲೆಕೆಡಿಸಿಕೊಳ್ಳಲಿಲ್ಲ. ಅಧಿಕಾರ ಮುಗಿಸಿ ಮನೆಗೆ ಬಂದು ಬೇರೆ ಕೆಲಸದಲ್ಲಿ ನಿರತರಾದರು. ಬಯಸಿದಾಗ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಈ ಕಾರಣದಿಂದ ಆ ದೇಶಗಳಲ್ಲಿ ಕೈಕಾಲುಗಳಲ್ಲಿ ಕಸುವು ಇರುವವರು ರಾಷ್ಟ್ರದ ಚುಕ್ಕಾಣಿ ಹಿಡಿಯುತ್ತಾರೆ. ಅವಧಿ ಮುಗಿದ ನಂತರ (date bar) ಬೇರೆ ರಂಗ ನೋಡಿಕೊಳ್ಳುತ್ತಾರೆ.

ನಮ್ಮ ದೇಶದಲ್ಲಿ ಇದು ಸಾಧ್ಯಾನಾ? ನಾಯಕತ್ವಕ್ಕಾಗಿ ಜೀವನವಿಡೀ ಒಬ್ಬನನ್ನು ನೆಚ್ಚಿಕೊಳ್ಳುವುದಕ್ಕೂ ಎಂಥ ಸಹನೆ ಬೇಕಲ್ಲವೆ?

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more