• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುದ್ಧ ಕೊಳಕರೂ ನಮ್ಮ ನಂಬಿಕೆಯ ಸೌಧ ಕೆಡುವುತ್ತಾರಲ್ಲ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಇಂದಿಗೂ ಇವರ ಬಗ್ಗೆ ನಮ್ಮ ಕಲ್ಪನೆ ಹಾಗೆಯೇ ಉಳಿದಿದೆ. ಕವಿಗಳು, ಸಾಹಿತಿಗಳು ಹಾಗೂ ಲೇಖಕರನ್ನು ಬೇರೆ ರೀತಿಯಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಾಹಿತಿಗಳೆಂದರೆ ಸಾತ್ವಿಕರು, ಸಂಭಾವಿತರು, ಸುಸಂಸ್ಕೃತರು ಹಾಗೂ ಸಂಪನ್ನ ಶೀಲರು ಎಂದೇ ಹಲವರ ಭಾವನೆ. ಇವನ್ನು ಬಿಟ್ಟು ಬೇರೆ ರೀತಿಯಲ್ಲಿ ನಮಗೆ ಅವರ ಚಿತ್ರಣವನ್ನು ಮೂಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ( ಈ ಸಾಲಿಗೆ ಕೆಲವು ಪತ್ರಕರ್ತರನ್ನು ಕಾಳಜಿಪೂರ್ವಕವಾಗಿ ಸೇರಿಸಬಹುದೇನೋ ?) ಅದ್ಯಾಕೋ ಗೊತ್ತಿಲ್ಲ, ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಇವರ ಬಗ್ಗೆ ಒಂದು ಚಿತ್ರವನ್ನು ರೂಪಿಸಿ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡು ಬಿಡುತ್ತೇವೆ. ಹೀಗಾಗಿ ಸಾಹಿತಿ, ಬರಹಗಾರರನ್ನು ಬೇರೆ ರೂಪದಲ್ಲಿ, ಬೇರೆ ರೀತಿಯಲ್ಲಿ ಅವರನ್ನು ಕಂಡರೆ ಕಿರಿಕಿರಿಯಾಗುತ್ತದೆ. ಆ ರೂಪದಲ್ಲಿ, ಆ ರೀತಿಯಲ್ಲಿ ಅವರನ್ನು ನೋಡಲು ಮನಸ್ಸು ಹರಗೀಸು ಒಪ್ಪಲ್ಲ.

ಮೊನ್ನೆ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ಪ್ರಕಟವಾದಾಗಲೂ ಹಾಗೇ ಆಯಿತು. ರೇಸಿನಲ್ಲಿ ಕುದುರೆ ಗುರಿ ತಲುಪಿದಾಗ ಇಡೀ ರೇಸ್‌ಕೋರ್ಸ್‌ ಕ್ಷಣಕಾಲ ಸ್ತಬ್ಧವಾಗುವಂತೆ, ವಿಶ್ವಕಪ್‌ ಫುಟ್ಬಾಲ್‌ ಪಂದ್ಯದ ಅಂತಿಮ ಕ್ಷಣದಲ್ಲಿ ನಿರ್ಣಾಯಕ ಗೋಲ್‌ ಹೊಡೆದಾಗ ಇಡೀ ಕ್ರೀಡಾಂಗಣ ಒಂಚಣ ಸ್ತಂಭೀಭೂತವಾಗುವಂತೆ ಈ ಸಲದ ಬೂಕರ್‌ ಪ್ರಶಸ್ತಿ ಘೋಷಣೆಯಾದಾಗಲೂ ಇಡೀ ಜಗತ್ತು ಆ ಕ್ಷಣ ಗರಬಡಿದಂತೆ ನಿಂತು ಬಿಟ್ಟಿತ್ತು. ಕಾರಣ ಪ್ರಶಸ್ತಿಗೆ ಪಾತ್ರನಾದವ ಮೂಲತಃ ಸಾಹಿತಿಯೇ ಆಗಿರಲಿಲ್ಲ. ಸಾಹಿತಿಯ ಯಾವ ಗುಣಲಕ್ಷಣವೂ ಅವನಲ್ಲಿರಲಿಲ್ಲ. ಸಾಹಿತಿಯಾಗಿ ಅವನನ್ನು ಕಲ್ಪಿಸಿಕೊಳ್ಳುವುದು ಸಹ ಸಾಧ್ಯವಿರಲಿಲ್ಲ.

ಅಸಲಿಗೆ ಆತನೊಬ್ಬ ಹರಾಮುಜಾದಾ. ಆತನೊಬ್ಬ ಹರತಟ್ಟು. ಕಾವಣ್ಣ ಮೂವಣ್ಣನಂತಿದ್ದ ಆತ ಥೇಟು ಲಂಗುಧಡಂಗ. ಸಾಹಿತ್ಯದ ಗಂಧಗಾಳಿ ಅವನೆಡೆ ಸುಳಿದಿರಲಿಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆತ ಒಬ್ಬ ಲಲಾಟಲಿಪಿಯೂ ಇಲ್ಲದ ಹತಭಾಗ್ಯ. ಯಾವ ಸಾಹಿತಿಯ ಯಾವ ಕೃತಿಯನ್ನೂ ಓದದ, ಏನನ್ನೂ ಓದದ ಅಡ್ನಾಡಿಯಾಬ್ಬ ಪರ್ಯಾಯ ನೊಬೆಲ್‌ ಎಂದೇ ಪರಿಗಣಿಸುವ ಬೂಕರ್‌ ಪ್ರಶಸ್ತಿಗೆ ಕೈಯಿಟ್ಟಾಗ ಇಡೀ ವಿಶ್ವ ಸಾಹಿತ್ಯ ಲೋಕ ಒಂದಪ ತಣ್ಣಗೆ ಕಂಪಿಸಿದ್ದು ಈ ಕಾರಣಕ್ಕೆ.

DBC Pierre wins booker award 2003ಡಿಬಿಸಿ ಪಿಯರ್‌ ಅಲಿಯಾಸ್‌ ಡರ್ಟಿ ಬಟ್‌ ಕ್ಲೀನ್‌ ಪಿಯರ್‌ ಅಲಿಯಾಸ್‌ ಪೀಟರ್‌ ಫಿನ್ಲೆ ಹೆಸರನ್ನು ಯಾವ ಸಾಹಿತ್ಯ ಪ್ರೇಮಿಯೂ ಕೇಳಿರಲು ಸಾಧ್ಯವೇ ಇರಲಿಲ್ಲ. ಆತ ಮೊದಲ ಬಾರಿಗೆ ‘ವೆರ್ನಾನ್‌ ಗಾಡ್‌ ಲಿಟಲ್‌’ ಎಂಬ ಕಾದಂಬರಿ ಬರೆದಾಗ ಫೆಬರ್‌ ಆ್ಯಂಡ್‌ ಫೆಬರ್‌ ಪ್ರಕಾಶಕ ಸಂಸ್ಥೆ ಆರು ತಿಂಗಳು ಹಸ್ತಪ್ರತಿಯನ್ನು ಕಣ್ಣೆತ್ತಿ ನೋಡಿರಲಿಲ್ಲ. ಅದಕ್ಕೂ ಮೊದಲು ಫಿನ್ಲೆ ಏನಿಲ್ಲವೆಂದರೂ ಹದಿನೈದು ಪ್ರಕಾಶಕರಿಗೆ ಪುಸ್ತಕ ಪ್ರಕಟಿಸುವಂತೆ ದುಂಬಾಲು ಬಿದ್ದಿದ್ದ. ಆತನ ಹಿನ್ನೆಲೆ, ವೇಷಭೂಷಣ ಕಂಡು ಯಾರೂ ಹತ್ತಿರಕ್ಕೆ ಬಿಟ್ಟುಕೊಂಡಿರಲಿಲ್ಲ. ಫಿನ್ಲೆ ಬರುತ್ತಿದ್ದರೆ ಗಬ್ಬುನಾತ. ಆತನ ಸ್ನೇಹಿತರು ಇವನನ್ನು ಹಪ್ಪು ಹೊಲಸು ಎಂದೇ ದೂರವಿಟ್ಟಿದ್ದರು. ಅದಕ್ಕಾಗಿ ಆತ ತನ್ನ ಹೆಸರನ್ನು ‘ಡರ್ಟಿ ಬಟ್‌ ಕ್ಲೀನ್‌’ ಎಂದು ಬದಲಿಸಿಕೊಂಡಿದ್ದ. ‘ನನ್ನ ಪುಸ್ತಕ ಪ್ರಕಟಿಸಿದರೆ ಬೂಕರ್‌ ಪ್ರಶಸ್ತಿ ಬರೋದು ಗ್ಯಾರಂಟಿ. ದಯವಿಟ್ಟು ಪ್ರಕಟಿಸಿ’ ಎಂದು ಪ್ರಕಾಶಕರ ಮುಂದೆ ಗೋಗರೆಯುತ್ತಿದ್ದ. ಫಿನ್ಲೆಗೆ ಗೊತ್ತಿತ್ತು - ಪ್ರಶಸ್ತಿ ಗಿಶಸ್ತಿ ಬರೋಲ್ಲ ಅಂತ. ಆದರೆ ಪುಸ್ತಕ ಪ್ರಕಟವಾದರೆ ಮೂರ್ನಾಲ್ಕು ತಿಂಗಳು ತುಡುವು ಮಾಡದೇ ಹಾಯಾಗಿ ಬದುಕಬಹುದು, ಪ್ರತಿ ರಾತ್ರಿ ಕಂಠ ಮಟ್ಟ ಕುಡಿಯಬಹುದು, ಗಾಂಜಾ ಸೇದಬಹುದು, ದಿನಕ್ಕೊಬ್ಬ ಹುಡುಗಿಯ ಸಖ್ಯ ಬಯಸಬಹುದು ಎಂಬುದು ಲೆಕ್ಕಾಚಾರ. ಯಾವ ಪ್ರಕಾಶಕನೂ ಮುಂದೆ ಬರದಿದ್ದಾಗ ಫಿನ್ಲೆ ಕಿಚ್ಚುಗುಳಿಯಿಂದ ಹಸ್ತ ಪ್ರತಿಯನ್ನು ಸುಟ್ಟು ಹಾಕಲು ನಿರ್ಧರಿಸಿದ್ದ. ಅದಕ್ಕೂ ಮೊದಲು ಕೊನೆ ಪ್ರಯತ್ನವಾಗಿ ಫೆಬರ್‌- ಫೆಬರ್‌ ಪಬ್ಲಿಷಿಂಗ್‌ ಹೌಸ್‌ಗೆ ಅಂಚೆಯಲ್ಲಿ ಹಸ್ತಪ್ರತಿ ಕಳಿಸಿದ. ಅದು ಸ್ವೀಕೃತವಾಗಿದೆಯೆಂದು ಗೊತ್ತಾದ ನಂತರವೇ ಆತ ಪ್ರಕಾಶನನ್ನು ಭೇಟಿ ಮಾಡಿದ್ದು. ಮೊದಲೇ ಗೊತ್ತಾಗಿದ್ದರೆ ಈತ ಸೂಸುವ ಗಬ್ಬುನಾತಕ್ಕೆ ಪ್ರಕಾಶಕ ಅವನನ್ನು ಹೊರಗಟ್ಟುವ ಸಾಧ್ಯತೆಯಿತ್ತು. ಈತನ ಅಣಿಮುತ್ತುಗಳನ್ನು ಕೇಳಿದ್ದರೆ ಯಾರೂ ಹತ್ತಿರಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಬಾಯಿ ತೆರೆದರೆ ಅವಾಚ್ಯ ಪದಗಳು. ಬೂಕರ್‌ ಪ್ರಶಸ್ತಿ ಬಂದ ಕೂಡಲೇ ಅವನ ಉದ್ಗಾರ ಏನು ಗೊತ್ತಾ ? ‘how the F**k could that happen ? there is some thing really F**king wrong. I swear my a**, I am capable of becoming F**king a great writer’

ಫಿನ್ಲೆಯದು ವಿಚಿತ್ರ ಬದುಕು. ಆತ ಆಸ್ಟ್ರೇಲಿಯಾದಲ್ಲಿ ಬ್ರಿಟಿಷ್‌ ದಂಪತಿಗೆ ಹುಟ್ಟಿದ. ಬೆಳೆದಿದ್ದು ಮೆಕ್ಸಿಕೋದಲ್ಲಿ. ಅವನಿಗೊಂದು ರಾಷ್ಟ್ರೀಯತೆ ಎಂಬುದೇ ಇರಲಿಲ್ಲ. ತಂದೆ ಮಹಾ ಜೂಜುಕೋರ. ತಾಯಿ ಕಂಡವರ ಮನೆಯಲ್ಲಿ ಗಾರ್ಡನಿಂಗ್‌ ಕೆಲಸ ಮಾಡಿಕೊಂಡಿದ್ದಳು. ಫಿನ್ಲೆ ಶಾಲೆಗೆ ಹೋಗಿದ್ದಕ್ಕಿಂತ ಜೂಜು ಅಡ್ಡೆಗೆ ಹೋಗಿದ್ದೇ ಜಾಸ್ತಿ. ಹತ್ತನೇ ವಯಸ್ಸಿನಲ್ಲಿದ್ದಾಗ ಬಾಲವೇಶ್ಯೆಯರ ಸಹವಾಸಕ್ಕೆ ಬಿದ್ದ. ಕುಡಿತ, ಸಿಗರೇಟು, ಗಾಂಜಾ ಸಂಗಾತಿಗಳಾದವು. ತಂದೆಯ ದುಡ್ಡನ್ನು ಎಗರಿಸತೊಡಗಿದ. ಚಟ ಸಾರ್ವಭೌಮನಾದ ತಂದೆಗೂ ಹಣ ಸಾಕಾಗುತ್ತಿರಲಿಲ್ಲ. ಆತನೂ ಕಳ್ಳತನಕ್ಕೆ ಬಿದ್ದ. ಮಗನೂ ಅದೇ ದಾರಿ ಹಿಡಿದ. ಫಿನ್ಲೆಗೆ ಯಾವುದೇ ಉದ್ಯೋಗ ಇರಲಿಲ್ಲ. ಜೂಜು ಅಡ್ಡೆಗೆ ಬರುವವರಿಗೆ ರಂಗು ರಂಗಿನ ಕಥೆ ಹೇಳಿ, ಗೋಳು ತೋಡಿಕೊಂಡು ಹಣ ಕೀಳುತ್ತಿದ್ದ. ಒಮ್ಮೊಮ್ಮೆ ಮಹಾ ಶ್ರೀಮಂತನ ದರ್ಪ ಧಿಮಾಕಿನ ಪೋಸುಕೊಟ್ಟು ಅಡ್ಡೆಗೆ ಬರುವವರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಸಲುಗೆ ಮೂಡುತ್ತಿದ್ದಂತೆ ಅವರಿಂದ ಹಣಕಿತ್ತು ಕೆಲಕಾಲ ಊರಿನಿಂದ ಪಲಾಯನ ಮಾಡುತ್ತಿದ್ದ. ಅಮೆರಿಕಾದ ಖ್ಯಾತ ಕಲಾವಿದ ರಾಬರ್ಟ್‌ ಲೆಂಟನ್‌ ಜತೆ ಗೆಳೆತನ ಬೆಳೆಸಿಕೊಂಡು ಅವನ ಮನೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡು, ಅನಂತರ ಆ ಮನೆಯನ್ನು ಮೂವತ್ತು ಸಾವಿರ ಪೌಂಡ್‌ಗೆ ಮಾರಾಟ ಮಾಡಿ, ಲೆಂಟನ್‌ನನ್ನು ನಿರ್ಗತಿಕನನ್ನಾಗಿಸಿ ತಲೆ ಮರೆಸಿಕೊಂಡಿದ್ದ. ಮನೆ ಮಾರಿ ಸಿಕ್ಕ ಹಣದಿಂದ ಆಫ್ರಿಕಾ ಸುತ್ತಿದ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಮಲೇಶಿಯಾ, ಥಾಯ್‌ಲ್ಯಾಂಡ್‌ನಲ್ಲಿ ಜೂಜಾಡಿದ. ಆರು ವರ್ಷಗಳಲ್ಲಿ ಹದಿನಾರು ಗರ್ಲ್‌ಫ್ರೆಂಡ್‌ಗಳ ಜತೆ ಮಜಾ ಮಾಡಿದ.

ಫಿನ್ಲೆ ಅದೆಂಥ ಕೊಳಕನಾಗಿದ್ದನೆಂದರೆ ತಿಂಗಳುಗಟ್ಟಲೆ ಸ್ನಾನ ಮಾಡುತ್ತಿರಲಿಲ್ಲ. ಗಾಂಜಾ ಮಂಪರಿನಲ್ಲಿ ನಾಲ್ಕೈದು ದಿನ ಹಾಸಿಗೆಯಿಂದ ಏಳುತ್ತಿರಲಿಲ್ಲ. ಒಂದೇ ಡ್ರೆಸ್ಸನ್ನು ಎರಡು ಮೂರು ತಿಂಗಳು ತೊಡುತ್ತಿದ್ದ. ( ಸಾಲಗಾರರನ್ನು ದೂರವಿಡುವ ಮಾರ್ಗ ಇದಿರಬಹುದಾ ?) ಕೆದರಿದ ಕೂದಲು, ಕುರಚಲ ಗಡ್ಡ, ಹರಿದ ಬೂಟ್ಸು, ಕೊಳೆಯಾದ ಉಡುಪಿನಲ್ಲಿಯೇ ಸದಾ ಕಾಣಿಸಿಕೊಳ್ಳುತ್ತಿದ್ದ ಫಿನ್ಲೆಯನ್ನು ಬಹುತೇಕ ಮಂದಿ ಭಿಕ್ಷುಕನೆಂದೇ ಭಾವಿಸಿದ್ದರು ! ಈ ಮಧ್ಯೆ ಫಿನ್ಲೆ ಸಿನಿಮಾ ನಿರ್ದೇಶಕ, ಹೊಟೇಲು ಮಾಲಿಕ, ಗ್ರಾಫಿಕ್‌ ಕಲಾವಿದ, ಬಸ್‌ ಏಜೆಂಟು, ಟೂರಿಸ್ಟ್‌ ಗೈಡ್‌ ಆಗಲು ನಿರ್ಧರಿಸಿ ಯಾವುದರಲ್ಲೂ ಉದ್ಧಾರ ಆಗಲಿಲ್ಲ.

ಬರಬರುತ್ತಾ ಫಿನ್ಲೆಗೆ ಬದುಕು ಎಷ್ಟು ನಿರ್ದಯಿಯಾತೆಂದರೆ ತೊಟ್ಟು ಗುಂಡು, ದಮ್ಮು ಗಾಂಜಾಕ್ಕೂ ತತ್ವಾರವಾಯಿತು. ಎಲ್ಲ ಬಿಟ್ಟ ಬಂಗಿ ನೆಟ್ಟ ಅಂತಾರಲ್ಲ ಹಾಗೆ ಯಾರ ಕಣ್ಣಿಗೂ ಕಾಣಸಿಗದೇ ಐರ್‌ಲ್ಯಾಂಡ್‌ಗೆ ಹೋಗಿ ಕಾದಂಬರಿಯ ಬರೆಯಲು ಕುಳಿತ. ಇದೂ ಕೂಡ ವಂಚನೆಯ ಹೊಸ ವಿಧಾನ ಎಂದು ಫಿನ್ಲೆ ಸ್ನೇಹಿತರು ಅಂದುಕೊಂಡರು. ಆದರೆ ಯಾರೂ ಕೂಡ ಆತನ ಕೃತಿ ಬೂಕರ್‌ ಪ್ರಶಸ್ತಿಗೆ ಪಾತ್ರವಾಗಬಹುದೆಂದು ಊಹಿಸಿರಲಿಲ್ಲ. ಈ ಪ್ರಶಸ್ತಿ ನಿರ್ಣಯಿಸುವ ತೀರ್ಪುಗಾರರ ಪೈಕಿ ನಾಲ್ವರು ಫಿನ್ಲೆ ಕೃತಿಗೆ ಹೆಚ್ಚು ಅಂಕ ನೀಡಿದರು. ಈ ಪ್ರಶಸ್ತಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆಯ್ಕೆ ಪ್ರಕ್ರಿಯೆ ಕೇವಲ ಒಂದು ತಾಸಿಗೆ ಮುಗಿದು ಹೋಯಿತು. ಸಾಹಿತಿಯ ಹಿನ್ನೆಲೆಗಿಂತ ಅವನ ಕೃತಿಯೇ ಮುಖ್ಯವಾಗುತ್ತದೆನ್ನುವ ವಾದವನ್ನು ತೀರ್ಪುಗಾರರು ಪ್ರತಿಪಾದಿಸಿದ್ದರು.

ಫಿನ್ಲೆ ಮನೆ ಮುಂದೆ ಈಗ ಸಾಹಿತ್ಯಾಸಕ್ತರಿಗಿಂತ ಹೆಚ್ಚು ಸಾಲಗಾರರು ನಿಂತಿದ್ದಾರೆ. ಸಾಲ ತೀರಿಸಲು ಪ್ರಶಸ್ತಿ ಜತೆ ಬಂದ ಐವತ್ತು ಸಾವಿರ ಪೌಂಡ್‌ ಏನೇನೂ ಸಾಲದು.

R. Kapuscinskiಫಿನ್ಲೆಯ ಕತೆಯನ್ನು ಓದುತ್ತಿದ್ದಾಗ ತಟ್ಟನೆ ಸುಳಿದು ಹೋದವನು ಪೋಲ್ಯಾಂಡ್‌ನ ಪ್ರಸಿದ್ಧ ಪತ್ರಕರ್ತ, ಕಾದಂಬರಿಕಾರ ರಿಯಸರ್ಡ್‌ ಕಪುಸಿನ್‌ಸ್ಕಿ. ಈತ ಕೂಡ ಪಕ್ಕಾ ತಿಕ್ಕಲು. ಪರಮ ತಿರಬೋಕಿ. ಈಗನ ಬೆಲಾರಸ್‌ನ ಮಿನ್‌ಸ್ಕ್‌ದಲ್ಲಿ ಹುಟ್ಟಿದ ಈತ ಕಳೆದಿದ್ದು ಕತ್ತಲ ಜಗತ್ತಿನಲ್ಲಿ. ಹನ್ನೆರಡು ವರ್ಷಗಳ ಕಾಲ ಬಾರೊಂದರಲ್ಲಿ ಸಹಾಯಕನಾಗಿದ್ದ. ಏಳು ವರ್ಷ ವೇಶ್ಯಾಗೃಹದಲ್ಲಿ ಕಾವಲುಗಾರನಾಗಿದ್ದ. ರಾತ್ರಿ ಪುಂಡಪೋಕರಿಗಳು, ಪಾತಕಿಗಳು, ಜೂಜುಕೋರರು, ವ್ಯಸನಿಗಳು, ಗೂಂಡಾಗಳು, ದಗಲುಬಾಜಿಗಳ ಜತೆಯಲ್ಲೇ ಕಳೆಯುತ್ತಿದ್ದ ಕಪುಸಿನ್‌ಸ್ಕಿ ಬೆಳಗ್ಗೆ ಕಚೇರಿಗೆ ಬಂದು ತಾನು ಕೆಲಸ ಮಾಡುವ ಪೊಲಿಷ್‌ ಪ್ರೆಸ್‌ ಏಜೆನ್ಸಿಗೆ ರೋಮಾಂಚಕವಾದ ವರದಿ ಬರೆಯುತ್ತಿದ್ದ. ಮೂವತ್ತು ವರ್ಷಗಳ ಕಾಲ ವಿದೇಶಿ ವರದಿಗಾರನಾಗಿ ಕೆಲಸ ಮಾಡಿದ ಈತ ನೂರಾರು ದೇಶಗಳಲ್ಲಿ ಸಂಚರಿಸಿದ್ದ. 27 ಕ್ರಾಂತಿಗಳು, ಹನ್ನೊಂದು ಯುದ್ಧ, ಹದಿಮೂರು ಕ್ಷಿಪ್ರಕ್ರಾಂತಿ, ಮೂವರು ರಾಷ್ಟ್ರಾಧ್ಯಕ್ಷರ ಕೊಲೆ- ಇವುಗಳ ವರದಿ ಹಾಗೂ ನೂರಾರು ರಾಷ್ಟ್ರಾಧ್ಯಕ್ಷರ ಸಂದರ್ಶನಗಳನ್ನು ಮಾಡಿದ ಕಪುಸಿನ್‌ಸ್ಕಿ ಕೂಡ ಹಪ್ಪು ಹೊಲಸು. ಮಹಾ ಕೊಳೆಗಾರ. ತಿಂಗಳುಗಟ್ಟಲೆ ಸ್ನಾನ ಮಾಡುತ್ತಿರಲಿಲ್ಲ. ಜೇಬಿನಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ. ಬಾಟಲಿ ಮಾತ್ರ ಇರಲೇಬೇಕಿತ್ತು. ನೈಜೀರಿಯಾದ ಬುಡಕಟ್ಟು ಜನಾಂಗದ ವಿಚಿತ್ರ ಸಂಪ್ರದಾಯಗಳ ಬಗ್ಗೆ ವರದಿಗೆಂದು ಹೋದಾಗ, ಬಿಳಿ ಚರ್ಮದವರನ್ನು ಕೊಲೆ ಮಾಡಲಾಗುವುದೆಂಬ ಸಂಗತಿ ಗೊತ್ತಿದ್ದರೂ ಅವರ ಗುಡಿಸಲೊಳಗೆ ಕಾಲಿಟ್ಟು ಅವರೊಂದು ಮೂರ್ನಾಲ್ಕು ತಿಂಗಳು ಕಳೆದು ಯಾರಿಗೂ ಗೊತ್ತಿರದ ಅಂಶಗಳನ್ನು ಜಗತ್ತಿನ ಮುಂದಿಟ್ಟ ಕಪುಸಿನ್‌ಸ್ಕಿ ಆಫ್ರಿಕಾದಲ್ಲಿ ನೆಲೆಸಿರುವ ಅಸಂಖ್ಯ ಬಿಳಿಯರಲ್ಲಿ ರೋಮಾಂಚನ ಮೂಡಿಸಿದ್ದ. ಆತನಿಗೆ ಕತ್ತಲ ಜಗತ್ತೆಂದರೆ ವಿಸ್ಮಯಗಳ ಕಣಜ. ನಾಲ್ಕೈದು ತಿಂಗಳಿಗೆ ಸಾಕಾಗುವಷ್ಟು ಸ್ಕಾಚ್‌, ಸಿಗರೇಟು ಸಂಗ್ರಹಿಸಿಟ್ಟುಕೊಂಡು ಕುಳಿತುಕೊಂಡನೆಂದರೆ ಒಂದು ಕಾದಂಬರಿ ಬಂತೆಂದೇ ಲೆಕ್ಕ. ಶಾಹ ಆಫ್‌ ಶಾಹ್ಸ್‌, ದಿ ಎಂಪರರ್‌, ದಿ ಶಾಡ್‌ ಆಫ್‌ ದಿ ಸನ್‌, ದಿ ಸಾಂಗ್‌ಲೈನ್ಸ್‌, ಇಂಪೆರಿಯಂ, ದಿ ಸಾಕರ್‌ ವಾರ್‌, ದಿ ಅನದರ್‌ ಡೇ ಆಫ್‌ ಲೈಫ್‌, ಕೃತಿಗಳೆಲ್ಲ ಇದೇ ಸ್ಥಿತಿಯಲ್ಲಿ ಬಂದಂಥವು. ಕಪುಸಿನ್‌ಸ್ಕಿ ಅದೆಂಥ ದಾಢಸಿ ವ್ಯಕ್ತಿಯೆಂದರೆ ಒಮ್ಮೆ ಕಂಪಾಲಾದ ಮರುಳುಗಾಡಿನಲ್ಲಿ ನಡೆದಾಡುವಾಗ ಎಲ್ಲೂ ತೊಟ್ಟು ನೀರು ಸಿಗದಿದ್ದಾಗ, ಕೊನೆಗೆ ಸಿಕ್ಕ ಚೊಂಬು ನೀರನ್ನು ತನ್ನ ಬೂಟಿನಲ್ಲಿ ತುಂಬಿಕೊಂಡು ಬರಿಗಾಲಲ್ಲಿ ಹತ್ತಾರು ಮೈಲಿ ನಡೆದು ಬಾಯಾರಿಕೆ ತಣಿಸಿಕೊಂಡ ಭೂಪ !.

ದಿ ಕನ್‌ಫೆಶನ್‌ ಆಫ್‌ ಜೀನೋದಂತಹ ಕೃತಿ ಬರೆದ ಇಟಾಲಿಯನ್‌ ಕಾದಂಬರಿಕಾರ ಇಟಾಲೋಸ್ವೇವೋ, ದಿ ಸೌಂಡ್‌ ಆಫ್‌ ದಿ ಮೌಂಟೇನ್‌, ಪುಸ್ತಕ ಬರೆದು ಯಸುನಾರಿ ಕವಬಾಟಾ, ನಮ್ಮವರೇ ಆದ ಟಿ. ಪಿ. ಕೈಲಾಸಂ,... ಇವರ ಸ್ವಂತ ಕಥೆಗಳನ್ನು ಕೇಳಿದರೆ ಯಾರೂ ಇವರನ್ನು ಸಾಹಿತಿಗಳು ಅಂತ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಸಾಹಿತಿಗಳೆಂದರೆ ನಮ್ಮ ಬೇಂದ್ರೆ, ಕುವೆಂಪು, ತರಾಸು, ಸಂಸ, ಅನಕೃ, ಮಾಸ್ತಿ, ಕಾರಂತ, ಡಿಗ, ರಾಜರತ್ನಂ, ಡಿವಿಜಿ ರೀತಿ ಇರಬೇಕೆಂಬುದು ನಿರೀಕ್ಷೆ.

ಇವರೆಲ್ಲ ನೋಡಲು ಥೇಟಾನುಥೇಟು ಸಂಭಾವಿತರು, ಸಂಪನ್ನರು, ‘ಸಾಹಿತಿಗಳು ಒಳ್ಳೆಯವರಿದ್ದರಷ್ಟೇ ಸಾಲದು, ಒಳ್ಳೆಯವರಂತೆ ಕಾಣಿಸಿಕೊಳ್ಳಬೇಕು. ಒಳ್ಳೆಯದಾಗಿ ಬರೆದರಷ್ಟೇ ಸಾಲದು ಒಳ್ಳೆಯವರಾಗಿಯೂ ಇರಬೇಕು’ ಎಂಬ ನಂಬಿಕೆಗಳನ್ನು ಫಿನ್ಲೆ , ಕಪುಸಿನ್‌ಸ್ಕಿಯಂಥವರು ಕಾಲಕಾಲಕ್ಕೆ ಅಲುಗಾಡಿಸುತ್ತಿರುತ್ತಾರೆ.

ಸಾಹಿತಿಗಿಂತ ಸಾಹಿತ್ಯ ಕೃತಿ ಮುಖ್ಯವಾಗುವುದು ಈ ಕಾರಣದಿಂದ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more