• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿ ಒಬ್ಬನೊಳಗೆ- ಒಬ್ಬನೆಯೋ ಇಬ್ಬರೋ...?

By Staff
|
Vishweshwar Bhat ವಿಶ್ವೇಶ್ವರ ಭಟ್‌
ಒಬ್ಬ ವ್ಯಕ್ತಿಯಾಳಗೆ ಒಬ್ಬನೇ ಇರ್ತಾನಾ ಅಥವಾ ಒಬ್ಬನೊಳಗೆ ಅದೆಷ್ಟು ವ್ಯಕ್ತಿಗಳು ಇರ್ತಾರೆ ಅಥವಾ ಇರುವುದಕ್ಕೆ ಸಾಧ್ಯ?

ಕ್ಷಣ ಕ್ಷಣಕ್ಕೆ ಸುಳ್ಳು ಹೇಳುವವರು, ಮಹಾ ಸತ್ಯವಂತನಂತೆ ಸೋಗು ಹಾಕುವವರು, ಎದುರಾ ಎದುರಾ ಅಕೃತ್ಯ, ಅಕ್ರಮ ಎಸಗಿ ಬಂದು ಸುಸಂಸ್ಕೃತನ ಪೋಸು ಕೊಡುವವರು, ಮಾಡಬಾರದ್ದೆಲ್ಲವನ್ನೂ ಮಾಡಿ, ಅಮಾಯಕನಂತೆ ಕುಳಿತು ಮಹಾಮಹಿಮನಂತೆ ಕಾಣಿಸಿಕೊಳ್ಳುವವರು, ಅಲ್ಲೊಂದು ಇಲ್ಲೊಂದು ಮಾತನ್ನು ಪರಿಸ್ಥಿತಿಗನುಗುಣವಾಗಿ ಮಾತಾಡಿ ಎಲ್ಲೆಡೆಯೂ ಸಲ್ಲುವವರು, ಕಂಡಕಂಡ ಕಡೆ ಆಸ್ತಿ ಮಾಡಿ ಸರಳ ಸುಭಗನಂತೆ ಇಮೇಜು ಕೊಡುವವರು... ಹೌದು, ಒಬ್ಬನೊಳಗೆ ಅವನಿಗೇ ಗೊತ್ತಿರದಂತೆ, ಗೊತ್ತಿದ್ದೂ ಸುಮ್ಮನಿರುವಂತೆ ಅದೆಷ್ಟು ವ್ಯಕ್ತಿಗಳಿರುವುದು ಸಾಧ್ಯ?

ಇವೆಲ್ಲ ವ್ಯಕ್ತಿಯ ಬೇರೆ ಬೇರೆ ಗುಣ, ಸ್ವಭಾವಗಳಾದರೂ ಈ ಗುಣಾವಗುಣಗಳೇ ವ್ಯಕ್ತಿಯಂತೆ, ವ್ಯಕ್ತಿತ್ವದಂತೆ ಬೆಳೆದು ನಿಲ್ಲುವ ಪರಿ ಇದೆಯಲ್ಲ ಅದು ಊಹೆಗೂ ನಿಲುಕದ್ದು. ‘ಆತ ಕೇವಲ ಒಂದು ವ್ಯಕ್ತಿ ಅಲ್ಲ, ಶಕ್ತಿ’ ಅಂತ ಹೇಳ್ತಾರಲ್ಲ. ಅಲ್ಲಿ ಕೂಡ ಇರುವುದು ಒಂದು ಗುಣ ಅಲ್ಲ. ಹಲವು ಗುಣಗಳ ಮೇಳೈಸುವಿಕೆ. ಹಲವು ವ್ಯಕ್ತಿತ್ವಗಳ ಸಂಗಮ. ಇದು ಅನಿವಾರ್ಯವಾ, ಮಾನವ ಸಹಜವಾ, ಮನುಷ್ಯನ ಗುಣ ದೋಷವಾ ಗೊತ್ತಿಲ್ಲ. ಆದರೆ ನಮ್ಮೊಳಗೆ ಇನ್ನೊಬ್ಬ, ಮತ್ತೊಬ್ಬ ನಮಗೆ ಗೊತ್ತಿಲ್ಲದೇ ಪುಕ್ಕಟೆ ಕುಳಿತಿದ್ದಾನೆ, ಯಾವುದೇ ಬಾಡಿಗೆ ಕೊಡದೇ. ಇಂಥವರನ್ನು ನಾವು ನಮ್ಮೊಂದಿಗೆ ಕರೆದುಕೊಂಡು ಹೋಗುತ್ತಿರುತ್ತೇವೆ. ಎಂಥ ಏಕಾಂತವನ್ನು ನಮ್ಮ ಸುತ್ತ ನಿರ್ಮಿಸಿಕೊಂಡಾಗಲೂ ನಮ್ಮೊಳಗಿನ ಇನ್ನೊಬ್ಬನ ಜತೆಗೆ ಮಾತಿಗೆ ಕುಳಿತಿರುತ್ತೇವೆ. ಈ ಇನೊಬ್ಬ ಇದ್ದಾನಲ್ಲ, ಆತ ವ್ಯಕ್ತಿಯಾಬ್ಬನ ಬಗ್ಗೆ ಚಾಡಿ ಹೇಳುತ್ತಿರುತ್ತಾನೆ.

ಎಷ್ಟೋ ಸಲ ನಿಮ್ಮೊಳಗಿನ ಇನ್ನೊಬ್ಬ, ಮತ್ತೊಬ್ಬ ನಿಮ್ಮ ವಿರುದ್ಧವೇ ಪಟಗಚ್ಚೆ ಸೆಕ್ಕಿ ನಿಂತಿರುತ್ತಾರೆ.

ಇಷ್ಟೆಲ್ಲ ಮಂದಿಯನ್ನು ನಮ್ಮೊಳಗೆ ಬಿಟ್ಟುಕೊಂಡಿರುವುದರಿಂದಲೇ ನಾವು ಕ್ಷಣಕ್ಷಣಕ್ಕೆ ವಿಚಿತ್ರವಾಗಿ ವರ್ತಿಸುತ್ತೇವೆ. ನಮ್ಮ ವರ್ತನೆಯೇ ನಮಗೆ ವಿಚಿತ್ರವಾಗಿ ತೋರುತ್ತದೆ. ಮೊನ್ನೆ ಹಾಗೆ ತಿಕ್ಕಲು ತಿಕ್ಕಲಾಗಿ ವರ್ತಿಸಿದ್ದು ನಾನೇನಾ ಅಂತ ಯೋಚನೆಯಾಳಗೆ ಜಾರುತ್ತೇವೆ. ಸತ್ಯವನ್ನು ಬಿಡದ ನಾನು ಹಸಿಹಸಿ ಸುಳ್ಳು ಹೇಳಿದ್ದೇಕೆ, ಹುಡುಗಿಯರನ್ನು ಕಂಡರೆ ಸಂಭಾವಿತನಂತೆ ಗೆಟಪ್ಪು ಕೊಡುತ್ತಿದ್ದ ನಾನು ಅಂದು ಚೆಲ್ಲುಚೆಲ್ಲಾಗಿ ಆಡಿದ್ದೇಕೆ, ಬೇರೆಯವರ ವಸ್ತುವಿಗೆ ಆಸೆ ಪಡದ ನಾನು ಯಾರಿಗೂ ಗೊತ್ತಾಗದಂತೆ ಕೈ ಹಾಕಿದ್ದೇಕೆ, ಯಾರ ಮೇಲೂ ಗಟ್ಟಿ ದನಿಯಲ್ಲಿ ಮಾತಾಡದ ನಾನು ವರಟ ವರಟನಂತೆ ಕೂಗಾಡಿದ್ದೇಕೆ, ಹೀಗೆಲ್ಲ ಮಾಡಿದ್ದು ನಾನಾ ಅಥವಾ ನನ್ನೊಳಗಿನ ಇನ್ನೊಬ್ಬನಾ, ಮತ್ತೊಬ್ಬನಾ, ಮಗದೊಬ್ಬನಾ...? ಇದನ್ನು ಕೆಲವರು ಮುಖವಾಡ, ಸೋಗಲಾಡಿತನ ಅಂತಾರೆ. ಕೇವಲ ಮುಖವಾಡ ಮಾತ್ರ ವ್ಯಕ್ತಿಯನ್ನು ಈ ಪಾಟಿ ವಿಚಿತ್ರ ವರ್ತನೆಗೆ ನೂಕುವುದಿಲ್ಲ. ಒಂದು ಸೋಗು ಮಾಡಬಾರದ ಕೆಲಸ ಮಾಡಿಸುವುದಿಲ್ಲ.

ಮೊದಲನೆಯದಾಗಿ ನಮ್ಮೊಳಗೆ ಮತ್ತೊಬ್ಬನನ್ನು ಬಿಟ್ಟುಕೊಂಡಿದ್ದೇ ದೊಡ್ಡ ತಪ್ಪು. ಎರಡನೆಯದಾಗಿ ನಾವು ಮಾಡುವ ದೊಡ್ಡ ತಪ್ಪೆಂದರೆ ಈತನನ್ನು ಎಲ್ಲೆಡೆ ಕರೆದುಕೊಂಡು ಹೋಗುವುದು, ಈತನನ್ನು ನಮ್ಮೊಳಗೇ ಬೆಳೆಸುವುದು, ಅವನ ಅಂತರಂಗಕ್ಕೆ ಕಿವಿಯಾಗುವುದು, ಅವನ ಚಾಡಿ ಮಾತುಗಳನ್ನು ನಂಬುವುದು.

ಒಬ್ಬ ವ್ಯಕ್ತಿಯಾಳಗೆ ಇಂಥ ಹಲವು ಜನ ಕಾಣಿಸಿಕೊಳ್ಳುವ ಪರಿ ಬಗ್ಗೆ ಯೋಚಿಸಿದಾಗ ತಟ್ಟನೆ ನೆನಪಾಗುವವನು ಚರಣ್‌ ಸಿಂಗ್‌. ಎಂಥಾ ಘಾಟಿ ಮನುಷ್ಯ. ಈತ ಒಂದುನೂರ ಎಪ್ಪತ್ತೊಂದು ದಿನದ ಮಟ್ಟಿಗೆ ಈ ದೇಶದ ಪ್ರಧಾನಿಯೆಂಬ ಅಪವಾದಕ್ಕೂ ಕಾರಣನಾಗಿದ್ದ. ಸಂಸ್ಕೃತ ಭವನದಲ್ಲಿರುವ ಪ್ರಧಾನಿ ಖುರ್ಚಿಯಲ್ಲಿ ಈತ ಕೇವಲ ನಲವತ್ತು ಸೆಕೆಂಡು ಮಾತ್ರ ಕುಳಿತಿದ್ದ. ಇಂಥ ದಾಖಲೆ ಮಾಡಿದ ಮತ್ತೊಬ್ಬ ಪ್ರಧಾನಿ ವಿಶ್ವದ ಚರಿತ್ರೆಯಲ್ಲೇ ಸಿಗಲಿಕ್ಕಿಲ್ಲ.

ಈ ಚರಣ್‌ ಸಿಂಗ್‌ತನ್ನೊಳಗೆ ಅದೆಷ್ಟು ವ್ಯಕ್ತಿಗಳನ್ನು ಸಾಕಿಕೊಂಡಿದ್ದನೋ ಏನೋ? ಇದಕ್ಕಾಗಿಯೇ ಆತನೊಬ್ಬ ವೈರುಧ್ಯಗಳ ಮೂಟೆಯಾಗಿದ್ದ. ಈತನನ್ನು ಇಡಿಯಾಗಿ ಅರ್ಥಮಾಡಿಕೊಂಡವರು ಯಾರೂ ಇರಲಿಕ್ಕಿಲ್ಲ. ಕಾರಣ ಯಾರಿಗೂ ಅರ್ಥಮಾಡಿಕೊಳ್ಳಲು ಬಿಡುತ್ತಿರಲಿಲ್ಲ. ಈಗಿದ್ದ ಹಾಗೆ ಆತ ಆಚೆ ಗಳಿಗೆಗೆ ಇರುತ್ತಿರಲಿಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಈಗ ಹೇಳಿದ್ದಕ್ಕೆ ಸರಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದ. ಆತನಿಗೆ ಯಾವುದೇ ತತ್ವವಾಗಲೀ ಸಿದ್ಧಾಂತವಾಗಲಿ ಇರಲಿಲ್ಲ. ಕಾರಣ ಅವನ್ನೆಲ್ಲ ಇಟ್ಟುಕೊಂಡರೆ ಪಾಲಿಸಬೇಕೆಂಬ ಕಟ್ಟುಪಾಡು, ಕಷ್ಟ ಯಾರಿಗೆ ಬೇಕೆಂದು ಭಾವಿಸಿದ್ದ. ಸಂದರ್ಭ ಒದಗಿ ಬಂದಾಗಲೆಲ್ಲ ಆತ ಅವನ್ನು ಗಾಳಿಗೆ ತೂರುತ್ತಿದ್ದ. ಆತನಿಗೆ ಜೀವನದಲ್ಲಿ ಇದ್ದಿದ್ದು ಒಂದೇ ಆಸೆ - ಯಾವತ್ತೂ ಅಧಿಕಾರದಲ್ಲಿರಬೇಕು. ಅದಕ್ಕಾಗಿ ಆತ ತನ್ನೊಳಗೆ ಅನೇಕ ಜನರನ್ನು ಸಾಕಿಕೊಂಡಿದ್ದ. ಚರಣ್‌ ಸಿಂಗ್‌ ಹೆಜ್ಜೆ ಹೆಜ್ಜೆಗೆ ನಿರ್ಧಾರ ಬದಲಿಸುತ್ತಿದ್ದ !

1959. ಪಂಡಿತ್‌ ಸಂಪೂರ್ಣಾನಂದ ಉತ್ತರ ಪ್ರದೇಶದ ಮುಖ್ಯಮಂತ್ರಿ. ಈತ ವಿದ್ವಾಂಸ. ಸಂಸತ್‌, ಹಿಂದಿಯಲ್ಲಿ ಅಗಾಧ ಅಧ್ಯಯನ ಮಾಡಿದ ಸಜ್ಜನ. ಸಂಗೀತದಲ್ಲಿ ವಿಶೇಷ ಆಸಕ್ತಿ. ಈತನನ್ನು ಎಲ್ಲರೂ ಅಗ್ದಿ ಸ್ಕಾಲರ್‌, ಜಂಟಲ್‌ಮ್ಯಾನ್‌ ರಾಜಕಾರಣಿ ಎಂದೇ ಕರೆಯುತ್ತಿದ್ದರು. ಈತನ ಸಂಪುಟದಲ್ಲಿದ್ದ ಚಂದ್ರಬಾನು ಗುಪ್ತಾ ಬಂಡೆದ್ದ. ಈ ಗುಪ್ತಾ ಸಣ್ಣ ಆಸಾಮಿಯಲ್ಲ. ಮಹಾಸಂಘಟಕ. ಒಂದು ದಿನ ಒಂಭತ್ತು ಮಂದಿ ಜೊತೆ ಸೇರಿ ಸಂಪೂರ್ಣಾನಂದನ ಸಂಪುಟದಿಂದ ಹೊರ ಬಂದ. ಅವರಲೊಬ್ಬ ಚರಣ್‌ಸಿಂಗ್‌. ಆದರೆ ಚರಣ್‌ಸಿಂಗ್‌ ರಾಜೀನಾಮೆ ಕೊಡಲಿಲ್ಲ. ಸಂಪೂರ್ಣಾನಂದ ಸರಕಾರ ಪತನವಾಗುವ ಕಾಲ ಸನ್ನಿಹಿತವಾದರೆ ಆಗ ತನ್ನ ರಾಜೀನಾಮೆಗೆ ಬೆಲೆ ರುವುದೆಂದು ಕಾಯುತ್ತಾ ಕುಳಿತ.

ಆ ಸಮಯ ಬಂದೇ ಬಿಟ್ಟಿತು. ಗುಪ್ತಾನಿಗೆ ಸರಕಾರ ರಚಿಸಲಿಕ್ಕೆ ಕೇವಲ ಒಂದೇ ಒಂದು ‘ತಲೆ’ ಬೇಕಿತ್ತು. ಅವನೆಡೆಗೆ ಬರುವವರೆಲ್ಲ ಬಂದಿದ್ದರು. ಚರಣ್‌ ಸಿಂಗ್‌ ಮಾತ್ರ ಬಾಕಿ ಉಳಿದಿದ್ದ. ಈತ ಬಂದರೆ ಗುಪ್ತಾನ ನಾಯಕಕ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುತಿತ್ತು. ಆದರೆ ಚರಣ್‌ಸಿಂಗ್‌ಭಲೇ ಕಿಲಾಡಿ. ತನ್ನನ್ನು ಮುಖ್ಯಮಂತ್ರಿ ಮಾಡುವುದಾದರೆ ಮಾತ್ರ ರಾಜೀನಾಮೆ ಕೊಟ್ಟು ರುವುದಾಗಿ ಹೇಳಿದ. ಅದಕ್ಕೆ ಗುಪ್ತಾ ಒಪ್ಪಿದ. ಆದರೆ ಯಾವಾಗ ಚರಣ್‌ ಸಿಂಗ್‌ ರಾಜೀನಾಮೆ ಕೊಟ್ಟು ಹೊರಬಂದನೋ ಗುಪ್ತಾ ಕೈ ಎತ್ತಿಬಿಟ್ಟ !

ಈ ಗುಪ್ತಾನಿಗೆ ಪಾಠ ಕಲಿಸಬೇಕೆಂದು ಚರಣ್‌ಸಿಂಗ್‌ ಅಲ್ಲೇ ನಿರ್ಧಾರ ಹೊಸೆದ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ. ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆ ಎದುರಾದಾಗ ಪುನಃ ಚರಣ್‌ಸಿಂಗ್‌-ಗುಪ್ತಾ ನಡುವೆ ಜಿದ್ದಾಜಿದ್ದಿ. ಆದರೆ ಗುಪ್ತಾ ಅದ್ಹೇಗೋ ಇಂದಿರಾಗಾಂಧಿ ಮನವೊಲಿಸಿ ಮುಖ್ಯಮಂತ್ರಿಯಾಗಿಬಿಟ್ಟ. ಈತ ಪಟ್ಟಕ್ಕೇರಿದ ಕೇವಲ 18 ದಿನಗಳ ನಂತರ ಚರಣ್‌ ಸಿಂಗ್‌ ತನ್ನ ಬೆಂಲಿಗರೊಂದಿಗೆ ಪಕ್ಷಾಂತರ ಮಾಡಿ ಸರಕಾರ ಬೀಳಿಸಿದ. ಸಂಯುಕ್ತ ವಿಧಾಯಕ ದಳದಿಂದ ತಾನೇ ಮುಖ್ಯಮಂತ್ರಿಯಾದ.

ಎರಡು ಸಲ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚರಣ್‌ ಸಿಂಗ್‌, ಪ್ರತಿ ಸಲ ಅಧಿಕಾರ ಎಂಬುದು ಸಿಗುತ್ತದೆಯೆಂಬ ವಾಸನೆ ಹೊಡೆದರೆ ಸಾಕು ಎಂಥ ಕೆಲಸಕ್ಕಾದರೂ ಮುಂದಾಗುತ್ತಿದ್ದ. ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಗೃಹಸಚಿವನಾಗಿದ್ದ ಚರಣ್‌ ಸಿಂಗ್‌ ಇಂದಿರಾಗಾಂಧಿ ಬಂಧನಕ್ಕೆ ಮುಂದಾದ. ಇಂದಿರೆಯ ಬಂಧನದ ಪರಿಣಾಮದ ಸ್ಪಷ್ಟ ಅರಿವಿದ್ದ ಪ್ರಧಾನಿ ಮೊರಾರ್ಜಿ ಮೊದಮೊದಲು ಹಿಂದೇಟು ಹಾಕಿದ. ಆದರೆ ಚರಣ್‌ ಸಿಂಗ್‌ ಕೇಳಲಿಲ್ಲ. ಇಂದಿರೆಯನ್ನು ಬಂಧಿಸಿದ. ಅನಂತರ ಮೊರಾರ್ಜಿ ಜತೆ ಜಗಳಕ್ಕೆ ಬಿದ್ದು ಸರಕಾರ ಮೂರಾಬಟ್ಟೆಯಾದಾಗ, ತನ್ನನ್ನು ಬೆಂಲಿಸುವಂತೆ ಇಂದಿರೆಯ ಒಳಮನೆಗೆ ಹೋಗಿ ಕಾಲು ಹಿಡಕೊಂಡ. ಆಕೆಯನ್ನು ಬಂಧಿಸಿ ಕಾಂಗ್ರೆಸ್‌ನಲ್ಲಿದ್ದಾಗ ಆಕೆ ಎಸಗಿದ ದ್ರೋಹ(?)ಕ್ಕೆ ಪ್ರತೀಕಾರ ತೀರಿಸಿಕೊಂಡ ಚರಣ್‌ ಸಿಂಗ್‌ ಅಧಿಕಾರ ಮಾರು ದೂರವಿದೆಯೆಂದು ಅನಿಸಿದಾಗ ಆಕೆ ಮನೆಮುಂದೆ ಬೀಡುಬಿಟ್ಟ. ಯಾವಾಗ ಈ ಕೆಲಸಕ್ಕೆ ಆತ ಬರುತ್ತಿದ್ದಾನೆಂಬುದು ಇಂದಿರೆಗೆ ಗೊತ್ತಾಯಿತೋ, ಆಕೆ ಈತನನ್ನು ಜವಾನ ಕುಳಿತುಳ್ಳುವ ಹೊರಗಿನ ಕೋಣೆಯಲ್ಲಿ ಬರೋಬ್ಬರಿ ಎರಡೂವರೆ ಗಂಟೆ ಕುಳ್ಳಿರಿಸಿದ್ದಳು, ಒಂದು ಕಪ್‌ ಚಹವನ್ನು ಸಹ ಕೊಡದೇ. ಇನ್ನೇನು ಈಗ ಕರೆದೇ ಬಿಡಹುದೆಂಬ ನಿರೀಕ್ಷೆಯಲ್ಲಿ ಚರಣ್‌ಸಿಂಗ್‌ ಕುಕ್ಕರಗಾಲಲ್ಲಿ ಕುಳಿತಿದ್ದ.

ಪಂಡಿತ್‌ ಸಂಪೂರ್ಣಾನಂದ ಕಾರ್ಯಕ್ರಮವೊಂದರಲ್ಲಿ ತನ್ನ ಹೆಸರನ್ನು ಪ್ರಸ್ತಾಪಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಅವನ ಮೇಲೆ ಎಗರಿಬಿದ್ದು, ಅವನ ಸರಕಾರ ಕೆಡವಲು ಮುಂದಾದ ಚರಣ್‌ ಸಿಂಗ್‌ನ ಪ್ರತಿಷ್ಠೆ, ಸ್ವಯಂ ಗೌರವ, ಇಂದಿರೆಯ ಮನೆಮುಂದೆ ಚಕ್ಳಮಕ್ಳ ಹಾಕಿ ಉಡುಗಿ ಕುಳಿತಿತ್ತು. ಆ ನಡುರಾತ್ರಿ ಆತ ಅಲ್ಲಿಯೇ ಕುಳಿತಿದ್ದ. ಮರುದಿನ ಆಕೆ ಮತ್ತೆ ಎರಡು ತಾಸು ಕುಳ್ಳಿರಿಸಿದಳು ! ಕೂತುಕೊಂಡ. ಅವನೊಳಗಿದ್ದ ಇನ್ನೊಬ್ಬ ಚರಣ್‌ ಸಿಂಗ್‌ನ ಬಾಯಿಮುಚ್ಚಿಸಿದ್ದ ! ಮಹಾಗರ್ವಿಷ್ಠ ಜಾತಿ ಎಂದೇ ಖ್ಯಾತ ನಾದ ಚರಣ್‌ ಸಿಂಗ್‌, ಯಾರ ಮುಂದೂ ತಲೆಗ್ಗಿಸದ ಚರಣ್‌ ಸಿಂಗ್‌, ಎದೆಯುಬ್ಬಿಸಿ ದಿಲ್‌ದಾರು ದರ್ಪದಲ್ಲಿ ಯಾರನ್ನೂ ದರಕರಿಸದ ಚರಣ್‌ಸಿಂಗ್‌, ಚಿಟಿಕೆ ಹೊಡೆದು ಎಂಥ ಕೆಲಸವನ್ನಾದರೂ ಮಾಡಿಸಿಕೊಳ್ಳುತ್ತಿದ್ದ ಚತುರ ಚರಣ್‌ ಸಿಂಗ್‌ ಇಂದಿರೆಯ ಚರಣದಲ್ಲಿ ಜಮೆಯಾಗಿದ್ದ.

ಚರಣ್‌ಸಿಂಗ್‌ ಮೀರತ್‌, ಮುಜಫರ್‌ನಗರಕ್ಕೆ ಹೋದರೆ ಅಲ್ಲಿನ ಜನ ಇವನ ಮೇಲೆ ಐವತ್ತು, ನೂರರ ನೋಟುಗಳನ್ನು ಚೆಲ್ಲುತ್ತಿದ್ದರು. ಆತ ಬೀದಿಯಲ್ಲಿ ನಡೆದು ಹೋಗುತ್ತಿದ್ದರೆ ಜನರು ನೆಲಕ್ಕೆ ಹಣೆ ಹಚ್ಚಿ ನಮಸ್ಕರಿಸುತ್ತಿದ್ದರು. ಅವನ ಮುಂದೆ ಯಾರೂ ಕುಳಿತುಕೊಳ್ಳುತ್ತಿರಲಿಲ್ಲ. ಈ ಎರಡು ಊರಿನಿಂದ ಯಾರೇ ಬರಲಿ, ಅವರಿಗೆ ರಾಜಾತಿಥ್ಯ. ಅದೇ ಬೇರೆ ಊರುಗಳಿಂದ ರುವ ಜನರನ್ನು ಈ ಚರಣ್‌ ಸಿಂಗ್‌ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದ.

ಜಗಜೀವನರಾಂ, ದೇವಿಲಾಲ್‌, ಮೊರಾರ್ಜಿ, ರಾಜ್‌ ನಾರಾಯಣ್‌ ಮುಂತಾದ ನಾಯಕರನ್ನು ವಾಕರಿಕೆ ಹುಟ್ಟಿಸುವಂತೆ ಹೊಗಳುತ್ತಿದ್ದ ಈತ, ಅವರು ಮರೆಯಾದ ಕೂಡಲೇ ಅವರ ಜಾತಿ ಹೆಸರಿನಿಂದ ಸಂಬೋಧಿಸಿ ಹೀಯಾಳಿಸುತ್ತಿದ್ದ. ಜತೆಗಾರ ನಾಯಕರ ಉಪಪತ್ನಿ, ಎರಡನೆ ಪತ್ನಿ, ಇಟ್ಟುಕೊಂಡವಳ ಹೆಸರಿನಿಂದ ಕರೆಯುತ್ತಿದ್ದ. ರಾಜ್‌ ನಾರಾಯಣನನ್ನು ಆತ ಯಾವತ್ತೂ ‘ಕಮಲಾದೇವಿ’ ಅಂತಲೇ ಸಂಬೋಧಿಸುತ್ತಿದ್ದ. ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ಮಾರುದ್ದ ಭಾಷಣ ಬಿಗಿಯುತ್ತಿದ್ದ ಈತ, ತನ್ನ ಮನೆಯಲ್ಲಿದ್ದ ಹೆಂಗಸರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ಸಿಟ್ಟು ಬಂತೆಂದರೆ ಮೈಯೆಲ್ಲ ಕೆಂಡ. ತನಗಾಗದವರಿಗೆ ಈತ ಬರೆ ಕೊಟ್ಟು ಶಿಕ್ಷೆ ವಿಧಿಸಿ ಸಂತಸಪಡುತ್ತಿದ್ದ ಎಂದು ಅವನ ವಿರೋಧಿಗಳು ಹೇಳುತ್ತಿದ್ದರು.

ನೆಹರು ಅವರ ವಿದೇಶಿ ನೀತಿ ಸೇರಿದಂತೆ ಎಲ್ಲ ನೀತಿಯನ್ನು ಟೀಕಿಸುತ್ತಿದ್ದ ಚರಣ್‌ ಸಿಂಗ್‌, ಕ್ರಮೇಣ ತಿದ್ದುಪಡಿ ಮಾಡಿಕೊಂಡು ಹೊಗಳಲು ಶುರುಮಾಡಿದ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಖಂಡತುಂಡಾಗಿ ಟೀಕಿಸುತ್ತಿದ್ದ ಈತ ತನ್ನ ಮಗ ಅಜಿತ್‌ನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ಕಳಿಸಿದ್ದ. ಈ ವಿಷಯವನ್ನು ಪತ್ರಕರ್ತರು ಕೇಳಿದಾಗ, ‘‘ನೆಹರು ಸ್ವತಃ ಪಾಶ್ಚಿಮಾತ್ಯ ಸಂಸ್ಕೃತಿಯ ಆರಾಧಕರಾಗಿದ್ದರು. ನಾಯಕರು ಹೀಗಿರಬಾರದು. ಆದರೆ ಅವರ ಮಕ್ಕಳು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಹಾಗೆ ಇದ್ದೀನಾ? ಹೀಗಿರುವಾಗ ನನ್ನ ಮಗನ ಪ್ರಶ್ನೆ ಇಲ್ಲಿ ಅಪ್ರಸ್ತುತ ’ ಅಂತ ನಾಚಿಕೆಬಿಟ್ಟು ಹೇಳಿದ್ದ.

ಸಾರ್ವಜನಿಕವಾಗಿ ಹೇಳಿದ್ದಕ್ಕೆ ವಿರುದ್ಧವಾಗಿ ಖಾಸಗಿಯಾಗಿ, ಖಾಸಗಿಯಾಗಿ ಹೇಳಿದ್ದಕ್ಕೆ ವಿರುದ್ಧವಾಗಿ ಸಾರ್ವಜನಿಕವಾಗಿ ನಡೆದುಕೊಂಡ ಚರಣ್‌ ಸಿಂಗ್‌ ಕುರಿತು ಮಾತು ಬಂದಾಗ ನಮ್ಮೊಳಗಿನ ‘ಇನ್ನೊಬ್ಬ’ ಅಷ್ಟು ಹೊತ್ತು ಅದೆಲ್ಲಿ ಇರ್ಕ್ತುೃಾನೋ ಏನೋ, ಏಕಾಏಕಿ ‘ಚರಣ್‌ ಸಿಂಗ್‌ ಈ ರಾಷ್ಟ್ರ ಕಂಡ ಮಹಾನ್‌ ರೆತ ಮುಖಂಡ, ಧುರೀಣ ದಿಗ್ಗಜ, ಅಪ್ರತಿಮ ಹೋರಾಟಗಾರ’ ಎಂದೆಲ್ಲ ಬಡಡಿಸುತ್ತಾನೆ.

ಈಗ ಹೇಳಿ, ನಿಮ್ಮೊಳಗೆ ಅದೆಷ್ಟು ಮಂದಿ ಇದ್ದಾರೆ? ಇರುವುದು ನಿಜ ತಾನೆ?

ಅದಕ್ಕಾಗಿಯೇ ನಾವು ಹೀಗೆ, ನಮಗೆ ಬೇಕಾದಂತೆ ಇದ್ದೇವೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more