• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿ ಅಂದ್ರೆ ಸುಂದರ ಕತೆ, ಅದರ ವಾಚ್ಯರೂಪವೇ ಮದುವೆ !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಮದುವೆ ಅಂದ್ರೆ ಏನು ಅಂತ ಕೇಳಿ. ನೀವು ಎಷ್ಟು ಜನರನ್ನು ಕೇಳ್ತೀರೋ ಅಷ್ಟೇ ಉತ್ತರ ಸಿಕ್ಕೀತು. ಧಾರವಾಡದ ಕಾರ್ಯಕ್ರಮವೊಂದರಲ್ಲಿ ಶಿವರಾಮ ಕಾರಂತರನ್ನು ನಿಮ್ಮ ದೃಷ್ಟೀಲಿ ಮದುವೆ ಅಂದ್ರೆ ಏನು ಅಂತ ಕೇಳಿದ್ದರು. ಅದಕ್ಕೆ ಕಾರಂತರು ‘ದೃಷ್ಟಿ ಇಲ್ಲದವರು ಮಾಡೋ ಸಾಹಸ’ ಅಂತ ಹೇಳಿದ್ರು !

ಮದುವೆಯಲ್ಲಿ ನಡೆಯುವಷ್ಟು ವಿಚಿತ್ರ ಬೇರೆ ಯಾವ ಸಂಬಂಧಗಳಲ್ಲೂ ಆಗಲಿಕ್ಕಿಲ್ಲ. ಕಾರಣ ಎಲ್ಲ ಸಂಬಂಧಗಳಿಗೂ ಮದುವೆಯೇ ಕಾರಣ ತಾನೆ? It is better to be laughed at for not being married than to be unable to laugh because you are ಎಂದು ಅಖಂಡ ಬ್ರಹ್ಮಚಾರಿ ಪತ್ರಕರ್ತ ವೈಎನ್ಕೆ ಆಗಾಗ ಹೇಳುತ್ತಿದ್ದರು. ‘ಪ್ರೀತಿ ಅಂದ್ರೆ ಸುಂದರ ಕತೆ. ಅದರ ವಾಚ್ಯರೂಪವೇ ಮದುವೆ’ ಅಂತಾನೂ ಅವರು ಹೇಳುತ್ತಿದ್ದ ಇನ್ನೊಂದು ಮಾತು- A woman always remembers where and when she got married ; a man sometimes forgets why ! ಮದುವೆ ಅಂತ ಬಂದಾಗ ಹಿಂದೊಮ್ಮೆ ವಕ್ರತುಂಡೋಕ್ತಿಯಲ್ಲಿ ಬರೆದದ್ದು ನೆನಪಾಗುತ್ತದೆ. ‘ಎಲ್ಲರೂ ಜೀವನದಲ್ಲಿ ಮದುವೆಯಾಗಲೇಬೇಕು. ಇಲ್ಲದಿದ್ದರೆ ಪ್ರತಿಯಾಂದಕ್ಕೂ ಸರಕಾರವನ್ನೇ ದೂಷಿಸಬೇಕಾಗುತ್ತದೆ’. ದುಡ್ಡಿಗಾಗಿ ಮದುವೆಯಾಗುವವರನ್ನು ಕಂಡಾಗ, ‘ದುಡ್ಡಿಗಾಗಿ ಮದುವೆ ಆಗಬಾರದು. ಅದಕ್ಕಿಂತ ಕಡಿಮೆ ಅಪಾಯದಲ್ಲಿ ಸಾಲ ಸಿಗುತ್ತದೆ’ ಎಂಬ ವಕ್ರತುಂಡೋಕ್ತಿಯನ್ನು ನೆನೆಯಬಹುದು. ಮದುವೆ ಕುರಿತು ಮತ್ತೊಬ್ಬ ಅಖಂಡ ಬ್ರಹ್ಮಚಾರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹೇಳಿದ ಮಾತನ್ನು ನೆನೆಯುವುದಾದರೆ- Marriage is a case of two people agreeing to change each others habits. Marriage is worlds most expensive way of discovering your faults. ಲಖನೌದಲ್ಲಿ ತಮ್ಮನ್ನು ಭೇಟಿ ಮಾಡಿದ ಮಹಿಳಾಮಣಿಗಳನ್ನುದ್ದೇಶಿಸಿ ಅವರು ಹೇಳಿದ್ದರು- the bachelors make mistakes than married man, But they dont make blunders. ಪತ್ರಕರ್ತರು ವಾಜಪೇಯಿಯವರನ್ನು ನಿಮಗೇಕೆ ಇಷ್ಟು ಸಲಹೆಗಾರರು ಎಂದು ಕೇಳಿದಾಗ, Any man who has to ask for advice probably isnt married ಎಂದು ಚಟಾಕಿ ಹಾರಿಸಿದ್ದರು- ಇದೇ ಸಂದರ್ಭದಲ್ಲಿ ಅವರ ವಾಕ್‌ಚಾತುರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದಾಗಲೂ ವಾಜಪೇಯಿ ಅದಕ್ಕೆ ಮದುವೆಯೇ ಕಾರಣವೆಂದು ಹೇಳಿದ್ದರು- ‘ The only thing marriage brings out in a lot of men is silence. ಹೀಗಾಗಿ ನಾನು ಭಾಷಣಕಾರನಾದೆ’.

Marriages are made in heavenಯಾರಿಗೂ ಅರ್ಥವಾಗದ, ಆದ್ರೆ ಎಲ್ಲರೂ ಆಗುವ ಕ್ರಿಯೆಗೆ ಮದುವೆ ಅಂತಾರೆ ಎಂದು ಎಂಟು ಬಾರಿ ಮದುವೆಯಾದ, ಏಳುಬಾರಿ ವಿಚ್ಛೇದನ ಪಡೆದ ಹಾಲಿವುಡ್‌ ನಟಿ ಎಲಿಜಬೆತ್‌ ಟೇಲರ್‌ ಹೇಳಿದ್ದಳು. ಆಕೆಯನ್ನು ಯಾವ ಗಂಡಸೂ ಒಪ್ಪದಿರಬಹುದು (ಒಪ್ಪಿದ್ದರೆ ಆಕೆಗೆ ಏಳು ಬಾರಿ ವಿಚ್ಛೇದನ ಪಡೆಯುವ ಅವಕಾಶ ಬರುತ್ತಿರಲಿಲ್ಲ.) ಆದರೆ ಆಕೆಯ ಈ ಮಾತನ್ನು ಎಲ್ಲ ಗಂಡಸರೂ ಒಪ್ಪುತ್ತಾರೆ. ಎಲಿಜಬೆತ್‌ ಟೇಲರ್‌ಳನ್ನು ಪತ್ರಕರ್ತರು ಕೇಳಿದರು- ‘ನಿಮ್ಮ ದೃಷ್ಟೀಲಿ ಮದುವೆ ಅಂದ್ರೆ ಏನು?’ ಅದಕ್ಕೆ ಆಕೆ ಹೇಳಿದಳು- ‘ಮದುವೆ ಅಂದರೆ ತ್ಯಾಗ’. ಅದಕ್ಕೇ ತಾನೆ ಆಕೆ ಏಳು ಗಂಡಂದಿರನ್ನು ತ್ಯಾಗ ಮಾಡಿರುವುದು? ಇನ್ನೊಂದು ಸಂದರ್ಭದಲ್ಲಿ ಆಕೆಯನ್ನು ಮದುವೆ ಅಂದ್ರೆ ಏನೆಂದು ಕೇಳಿದಾಗ ‘ಡೈವೋರ್ಸು’ ಅಂತ ನಾಚಿಕೆಬಿಟ್ಟು ಹೇಳಿದ್ದಳು.

ಪಿ.ಜಿ.ವುಡ್‌ಹೌಸ್‌ ಕಾದಂಬರಿಯಲ್ಲಿ ಒಂದು ಪ್ರಸಂಗ. ನರಪೇತಲ ಗಂಡ, ಘಟವಾಣಿ ಹೆಂಡತಿ. ಆಕೆ ಹಾಕಿದ ಗೆರೆಯನ್ನು ದಾಟಲಾರದ ಗಂಡನನ್ನು ಕಚೇರಿಯಲ್ಲಿ ಆತನ ಸ್ನೇಹಿತ ಕೇಳುತ್ತಾನೆ- ‘ನಿನ್ನ ದೃಷ್ಟೀಲಿ ಮದುವೆ ಅಂದ್ರೆ ಏನು?’ ಅದಕ್ಕೆ ನರಪೇತಲ ಗಂಡ ಹೇಳ್ತಾನೆ- ‘ನನ್ನ ಹೆಂಡ್ತೀನ ಕೇಳಿ ಹೇಳ್ತೇನೆ’. ಇದನ್ನು ಕೇಳಿದ ಬೀchi ಅವರು ‘ಅಯ್ಯೋ, ಆ ನರಪೇತಲನದೇನು ಬಂತು ಮಹಾ? ಎಲ್ಲರದ್ದೂ ಅದೇ ಗತಿ ಅಲ್ವೇನ್ರೀ? ಅದಕ್ಕಾಗಿಯೇ ಮದ್ವೆ ಬಗ್ಗೆ ಗಂಡು ದನೀನೇ ಕೇಳಿಬರೊಲ್ಲ’ ಅಂತ ಹೇಳಿದ್ದರು.

ತನಗಿಂತ ಐದು ವರ್ಷ ಹಿರಿಯಳಾದವಳನ್ನು ಮದುವೆಯಾದ ಸಚಿನ್‌ ತೆಂಡೂಲ್ಕರ್‌, ತನಗಿಂತ ಐವತ್ತೆರಡು ವರ್ಷ ಚಿಕ್ಕವಳನ್ನು ವರಿಸಿದ ರೂಪರ್ಟ್‌ ಮುರ್ಡೋಕ್‌, ತನ್ನ ತಂಗಿಯನ್ನೇ ವರಿಸಿದ ಬ್ರೆಜಿಲ್‌ನ ಫುಟ್ಬಾಲ್‌ ಆಟಗಾರ ಕಿರಿಜಾವೋ ಮಿಲ್ಲರ್‌, ಅಕ್ಕನ ವರಿಸಿದ ನೈಜೀರಿಯಾದ ಉದ್ಯಮಿ ಲಿಯೋ ರಿಚರ್ಡ್‌ ಬೆನ್‌, ಐವರು ಗಂಡಂದಿರೊಂದಿಗೆ ಸಹಜೀವನ ನಡೆಸುತ್ತಿರುವ ಫ್ರೆಂಚ್‌ ಲೇಖಕಿ ನೆಬುಲಾ, ಏಳು ಹೆಂಡತಿಯರೊಂದಿಗೆ ಸಮೃದ್ಧ ಸಂಸಾರ ನಡೆಸುತ್ತಿರುವ ರಾಜಕೋಟದ ತೇಜಬಹದ್ದೂರ್‌ ಸಿಂಗ್‌, ತಲಾ ಎರಡು ಬಾರಿ ವಿಚ್ಚೇದನ ಪಡೆದ ನಾಲ್ವರು ಹೆಂಗಸರೊಂದಿಗೆ ಸುಖಿ ಜೀವನ ಕಂಡುಕೊಂಡಿರುವ ಬಾಂಗ್ಲಾದ ರಾಜಕಾರಣಿ ಮಹತೀರ್‌ ಸೈಯದ್‌ ಬಾಷಾ, ಮೂರು ತಿಂಗಳ ಮಗುವಿದ್ದಾಗಲೇ ಶಿಶು ವಿವಾಹವಾಗುವ ಮಧ್ಯಪ್ರದೇಶದ ಬುಡಕಟ್ಟು ಜನಾಂಗದ ಅಸಂಖ್ಯ ಮಂದಿ, ಕನ್ಯತ್ವ ಕಳೆದುಕೊಂಡ ಹುಡುಗಿಯನ್ನೇ ನೋಡಿ ಮದುವೆಯಾಗುವ ಅರುಣಾಚಲದ ಗುಡ್ಡಗಾಡು ಜನರು, ಖಾಸಾ ತಮ್ಮನನ್ನೇ ಮದುವೆಯಾದ ಪಂಜಾಬಿನ ಗುರುದಾಸಪುರದ ಕನ್ವಲ್ಜಿತ್‌ ಸಿಂಗ್‌ ಅರುಹಿ, ಅಪ್ಪನ ಎರಡನೆ ಹೆಂಡತಿಯನ್ನು ಕೈಹಿಡಿದ ತಮಿಳುನಾಡಿನ ಸ್ವಾಮಿನಾಥನ್‌ ರಘುವೈ, ಕಣ್ಣು, ಕಿವಿ, ಬಾಯಿ, ಕಾಲು, ಕೈ ಊನವಾದ ಹುಡುಗಿಯ ಜೊತೆ ಹಸೆಮಣೆಗೇರಿದ ಪುಣೆಯ ಜಯಂತ ಅಳವೇಕರ್‌, ಪರಸ್ಪರ ಮೈ ಮುಟ್ಟಿಕೊಳ್ಳದೇ ನಾಲ್ಕು ವರ್ಷ ಗಂಡ- ಹೆಂಡತಿಯಂತೆ ಜೀವಿಸಿದ ರಾಜಕುಮಾರ ಚಾರ್ಲ್ಸ್‌- ಡಯಾನಾ, ಕುಡುಕ, ಸರ್ವಚಟಪ್ರಿಯರಾದ ಗಂಡಂದಿರ ಜತೆ ನಿತ್ಯ ಜೀವ ಸವೆಸುವ ಕೋಟ್ಯಂತರ ಹೆಂಗಸರು... ಇವರನ್ನೆಲ್ಲ ನೋಡಿದರೆ ಮದುವೆ ಎಂಬ ಮೂರಕ್ಷರ ಸಾವಿರಾರು ಅಕ್ಷರಗಳ ಕಲ್ಪನೆಯನ್ನು ಕಣ್ಮುಂದೆ ನಿಲ್ಲಿಸುತ್ತದೆ. ಮದುವೆಯೆಂಬ ಸಂಬಂಧ ಎಲ್ಲ ಸಂಬಂಧಗಳ ತಾಯಿ (mother of all relations) ಯಂತೆ ಗೋಚರಿಸುತ್ತದೆ. ಮದುವೆ ಅಂದ್ರೆ ಸಂಬಂಧವಾ? ಆಕರ್ಷಣೆಯಾ? ಅನುಕೂಲವಾ? ಪ್ರೀತಿಯಾ? ಸಂಸ್ಥೆಯಾ? ಒಡನಾಟವಾ? ಮೈತ್ರಿಯಾ? ಗೆಳೆತನವಾ? ಹಾಗಾದರೆ ಏನು ಎಂಬ ಪ್ರಶ್ನೆಯನ್ನು ಉತ್ತರವಿಲ್ಲದೇ ಸದಾ ಕೆದಕುತ್ತಲೇ ಇರುತ್ತದೆ. ಈ ಪೈಕಿ ಯಾವುದಾದರೂ ಒಂದಂತೂ ಆಗಿರಲಿಕ್ಕಿಲ್ಲ. ಹಾಗಾದರೆ ಎಲ್ಲವುಗಳ ಮಿಶ್ರಣವಾ? ಇದ್ದರೂ ಇರಬಹುದು.

ದಿಲ್ಲಿಯ ‘ದಿ ಪಯೋನಿಯರ್‌’ ಪತ್ರಿಕೆಯಲ್ಲಿ ವರದಿಗಾರನಾಗಿರುವ ಅಭಿನವ ಪಾಂಡೆ ಮೊನ್ನೆ ವಿಚಿತ್ರ ಮದುವೆ ಕುರಿತು ಹೇಳುತ್ತಿದ್ದ. ಬಹುಶಃ ಇಂಥ ಮದುವೆ ಇದಕ್ಕಿಂತ ಮೊದಲು ಆಗಿರುವ ಬಗ್ಗೆ ಸಣ್ಣ ಅನುಮಾನವಿದೆ. ಲಖನೌ ಸಮೀಪದ ಹಳ್ಳಿಯಲ್ಲಿ ಯುವಕನೊಬ್ಬ ಒಂದೇ ಮಂಟಪದಲ್ಲಿ ಏಕಕಾಲಕ್ಕೆ ಅಕ್ಕ ತಂಗಿಯರಿಬ್ಬರಿಗೆ ತಾಳಿಕಟ್ಟಿದ ಕತೆಯಿದು. ಅಕ್ಕ ರಾಗಿಣಿ ಚೆಲುವೆ. ತಂಗಿ ಪ್ರೀತಿ ಕೂಡ ಸುಂದರಿ. ಆದರೆ ಹುಟ್ಟಾ ಕುಂಟಿ. ಪೊಲಿಯೋ ಪೀಡಿತೆಯಾಗಿರುವ ಆಕೆಗೆ ನಡೆದಾಡಲು ಆಗುತ್ತಿಲ್ಲ. ಅಕ್ಕ ತಂಗಿಯರಿಬ್ಬರೂ ಒಟ್ಟಿಗೇ ಬೆಳೆದವರು. ಪ್ರೀತಿಯನ್ನು ಕೈಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಳು. ಒಂದು ದಿನ ತುಸು ದೊಡ್ಡವಳಾದ ಬಳಿಕ, ನಡೆದಾಡಲು ಸಾಧ್ಯವೇ ಇಲ್ಲವೆಂದಾಗ ತಂಗಿಯನ್ನು ಸೊಂಟದ ಮೇಲೆ, ಬೆನ್ನ ಹಿಂದೆ ಇಳಿಬಿಟ್ಟುಕೊಂಡು ರಾಗಿಣಿ ಶಾಲೆಗೆ ಕರೆದೊಯ್ಯುತ್ತಿದ್ದಳು. ಕುಂಟಿ ತಂಗಿಯೇ ಸರ್ವಸ್ವ. ಆಕೆಗೆ ಉಡುಪು ತೊಡಿಸುವುದು, ಸ್ನಾನ ಮಾಡಿಸುವುದು, ಊಟ ಉಣಿಸುವುದು ರಾಗಿಣಿಯ ಕೆಲಸವಾಗಿತ್ತು. ಒಂದು ದಿನ ಸಹ ತಂಗಿ ಸೇವೆ ಮಾಡುವಾಗ ಮೂಗು ಮುರಿಯಲಿಲ್ಲ. ತಂಗಿಯಿಲ್ಲದ ಜೀವನ ನಶ್ವರ ಎಂದು ಆಕೆ ಬಯಸಿದ್ದಳು. ಪ್ರೀತಿಗೂ ಅಷ್ಟೆ. ರಜೆಯಲ್ಲೊಮ್ಮೆ ಅಕ್ಕ ತಾತನ ಮನೆಗೆ ಹೋದಾಗ ಎರಡು ದಿನ ಬೇಸರದಿಂದ ‘ಉಪವಾಸ ಸತ್ಯಾಗ್ರಹ’ ಮಾಡಿದ್ದಳು. ಇವರಿಬ್ಬರನ್ನು ಕಂಡು ಎಲ್ಲರೂ ಇದೊಂದು ಬೇರ್ಪಡಿಸಲಾಗದ ಜೋಡಿ ಎಂದೇ ಕರೆಯುತ್ತಿದ್ದರು.

ಆದರೆ ಆ ದಿನ ಬಂದಿತು !

ರಾಗಿಣಿಗೆ ಮದುವೆ ನಿಕ್ಕಿಯಾಯಿತು. ಲಖನೌದಲ್ಲಿ ಕೈತುಂಬಾ ದುಡಿಯುವ ಕಂಪ್ಯೂಟರ್‌ ಎಂಜಿನಿಯರ್‌ ಆಕೆಯನ್ನು ಮದುವೆಯಾಗಲು ಮುಂದೆ ಬಂದ. ನಿಶ್ಚಿತಾರ್ಥ ಸಹ ಮುಗಿಯಿತು.

ಇದ್ದಕ್ಕಿದ್ದಂತೆ ಪ್ರೀತಿ ಖಿನ್ನಳಾದಳು. ಮುಖದಲ್ಲಿನ ಹಾಸು ನಗೆ ಮಾಯವಾಯಿತು. ಏನೋ ಕಳವಳ, ದುಗುಡ. ರಾತ್ರಿ ನಿದ್ದೆಯಲ್ಲಿ ಗುನುಗಲಾರಂಭಿಸಿದಳು. ಕೊನೆಕೊನೆಗೆ ಅದು ಆರ್ತನಾದಕ್ಕೆ ತಿರುಗಿತು. ಒಂದು ದಿನ ಅಕ್ಕನ ಮುಂದೆ ಮನಸ್ಸಿನ ಕವಾಟವನ್ನು ತೆರೆದಳು. ‘ನೀನು ಮದುವೆಯಾಗಿ ಹೋದರೆ ನನ್ನ ಜೀವನ ಮುಗಿಯಿತು. ನನಗೆ ಆತ್ಮಹತ್ಯೆಯಾಂದೇ ದಾರಿ. ನೀನಿಲ್ಲದೇ ನನ್ನ ಜೀವನವಿಲ್ಲ. ನಿನ್ನ ಬಿಟ್ಟು ನಾನಿರಲಾರೆ. ಇದಕ್ಕೂ ಮೇಲಾಗಿ ಮದುವೆಯಾದರೆ ಪರವಾಗಿಲ್ಲ. ಆದರೆ ನನ್ನನ್ನು ಮರೆತುಬಿಡು’. ತಂಗಿಯ ಸಂಕಟವೇನೆಂಬುದು ರಾಗಿಣಿಗೆ ಅರ್ಥವಾಯಿತು. ಈ ಸ್ಥಿತಿಯಲ್ಲಿ ತಂಗಿಯನ್ನು ಬಿಟ್ಟು ಮದುವೆಯಾಗಿ ಗಂಡನ ಮನೆಗೆ ಹೋದರೆ ತಾನೂ ಸುಖದಿಂದ ಇರುವುದಿಲ್ಲವೆಂದು ಅಕ್ಕನಿಗೆ ಮನವರಿಕೆಯಾಗಿತ್ತು.

ಮದುವೆಯ ದಿನ ಬಂದೇ ಬಿಟ್ಟಿತು.

ರಾಗಿಣಿ ಮದುವೆ ಮಂಟಪದ ಹಿಂದೆ ಕರೆದು ಮದುಮಗನಿಗೆ ಈ ಮದುವೆ ಸಾಧ್ಯವಿಲ್ಲವೆಂದಳು. ಮದುಮಗ ರಾಗಿಣಿಯ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮದುವೆ ಮರಿದುಬಿದ್ದಿತು !

ಎರಡು ವರ್ಷ ಅಕ್ಕ- ತಂಗಿಯರಿಬ್ಬರೂ ಕೋಣೆ ಸೇರಿದರು. ಯಾರಿಗೂ ಮುಖ ತೋರಿಸದ ಪರಿಸ್ಥಿತಿ. ಈ ಮಧ್ಯೆ ಅಕ್ಕ ತಂಗಿಗೆ ಒಂದು ವಚನ ಕೊಟ್ಟಿದ್ದಳು- ಏನೇ ಆಗಲಿ ನಿನ್ನ ಕೈಬಿಡುವುದಿಲ್ಲ. ಅವರಿಬ್ಬರು ಒಂದು ನಿರ್ಧಾರಕ್ಕೆ ಬಂದಿದ್ದರು. ನಮ್ಮಿಬ್ಬರನ್ನು ಪತ್ನಿಯರನ್ನಾಗಿ ಸ್ವೀಕರಿಸುವವನನ್ನು ಮಾತ್ರ ಮದುವೆಯಾಗಬೇಕು. ತಮ್ಮ ಈ ನಿಲುವನ್ನು ತಂದೆಯ ಮುಂದೆ ಹೇಳಿದಾಗ ಆತನಿಗೆ ವಿಚಿತ್ರವೆನಿಸಿದರೂ, ಅಂಥ ಮಹಾನುಭಾವ ಎಲ್ಲಿದ್ದಾನೆ ಅನಿಸಿದರೂ ಮಕ್ಕಳ ಅನ್ಯೋನ್ಯ ಸಂಬಂಧ ಕಂಡು ಆತನಿಗೆ ಸಂತಸವಾಯಿತು. ಆತ ಸಮ್ಮತಿಸಿದ. ತನ್ನ ಮಕ್ಕಳ ಮನೋಭಿಲಾಷೆಯನ್ನು ಬಂಧುಗಳು, ಸ್ನೇಹಿತರಿಗೂ ತಿಳಿಸಿದ. ಅದು ಅಲ್ಲಲ್ಲಿ ಚರ್ಚೆಗೂ ಗ್ರಾಸವಾಯಿತು. ಇದರ ಪರಿಣಾಮವಾಗಿ ಅಮರನಾಥ ಬಂದ. ಇಬ್ಬರನ್ನೂ ಮದುವೆಯಾಗಲು ಮುಂದೆ ಬಂದ. ಈ ಮದುವೆಗೆ ಹಾಕಿದ್ದ ಒಂದೇ ಒಂದು ತಾಕೀತು ಅಂದರೆ- ಒಂದು ಪೈಸೆ ವರದಕ್ಷಿಣೆಯನ್ನು ಸಹ ಕೊಡುವುದಿಲ್ಲ. ಅಮರನಾಥ ಒಪ್ಪಿದ.

ಅಕ್ಕತಂಗಿ ಏಕಕಾಲದಲ್ಲಿ ಒಬ್ಬನನ್ನು ಒಪ್ಪಿಕೊಂಡರು, ಅಪ್ಪಿಕೊಂಡರು !

ಸುರಸುಂದರ ಯುವಕ ಹಪ್ಪುಹಪ್ಪು ಕುರೂಪಿ ಹುಡುಗಿಯನ್ನು ಕೈಹಿಡಿದಾಗ, ಜಮ್ಮನೆ ಚೆಲುವೆ ಪೆಕರನಂಥ ಹುಡುಗನ ಬಲೆಗೆ ಬಿದ್ದಾಗ, ಯಾವುದೇ ರೀತಿಯಿಂದಲೂ ಜೋಡಿಯಾಗಬಲ್ಲರು ಎಂದೆನಿಸದವರು ಮದುವೆಯಲ್ಲಿ ಒಟ್ಟಾದಾಗ, ಯಾವುದೋ ದೇಶದಲ್ಲಿ ಹುಟ್ಟಿದವಳು ಕುಗ್ರಾಮದ ಹುಡುಗನ ಜತೆಯಾಗಿ ಇಲ್ಲಿಯವಳಾಗಿ ಜೀವನ ನಡೆಸುವುದನ್ನು ಕಂಡಾಗ ಮದುವೆ ಸ್ವರ್ಗದಲ್ಲಿ ನಡೆದಿರುತ್ತದೆಯೆಂಬ ಮಾತನ್ನು ನಂಬದೇ ದಾರಿಯಿಲ್ಲ. ಹಾಗೇ ಒಬ್ಬಳೇ ಹೆಂಗಸಿನ ಜತೆಗೆ ಐವತ್ತು- ಅರವತ್ತು ವರ್ಷ ಸಂಸಾರ ನಡೆಸಿದವರನ್ನು ಕಂಡಾಗ ಆ ಮದುವೆ ‘ಸ್ವರ್ಗ’ದಲ್ಲೇ ನಡೆದಿರುತ್ತದೆಂಬುದಕ್ಕೆ ಸಣ್ಣ ಗುಮಾನಿಯೂ ಹುಟ್ಟಿಕೊಳ್ಳುತ್ತದೆ.

ಅದೇನೇ ಇರಲಿ, ಪ್ರೀತಿ ಕುರುಡು ಇರಬಹುದು. ಆದರೆ ಮದುವೆ ಮಾತ್ರ ಎಲ್ಲರ ಕಣ್ಣು ತೆರೆಯಿಸುತ್ತದೆ.

ಮದುವೆ ಸೀಸನ್ನು ಈ ಚಳಿಗಾಲದಲ್ಲಿ ಮುನ್ನಡೆದು ಬರುತ್ತಿರುವಾಗ ಈ ವಿಚಿತ್ರ ಮದುವೆಗಳೆಲ್ಲ ನೆನಪಿಗೆ ಬಂದವು.

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more