• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಲ್ಲೇ ಬದುಕು ಕಟ್ಟಿಕೊಂಡವನಿಗೆ ದೊರೆತಿದ್ದು ಗುಂಡೇಟು !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಸತ್ಯೇಂದ್ರ ದುಬೆ ಕೊಲೆಯಾಗಿದ್ದಾನೆ!

ಕಣ್ಣಾರೆ ಕಂಡಿದ್ದನ್ನು ಹೇಳಿದ್ದಕ್ಕೆ, ನೇರಾನೇರ ನಡೆದ ಭ್ರಷ್ಟಾಚಾರವನ್ನು ಒಡಲಾಳದಲ್ಲಿ ಇಟ್ಟುಕೊಳ್ಳಲಾಗದೇ ಬಹಿರಂಗಪಡಿಸಿದ್ದಕ್ಕೆ ಹಾಗೂ ಕಟು ಸತ್ಯವನ್ನು ಹೇಳಿದ್ದಕ್ಕೆ.

‘ಮಾಡಬಾರದ ತಪ್ಪು’ ಮಾಡಿದ್ದಕ್ಕೆ ದುಬೆ ಕೊಲೆಯಾಗಿದ್ದಾನೆ !

ಸತ್ಯೇಂದ್ರ ದುಬೆ ಕೊಲೆಯಲ್ಲಿ ದೇಶ ಒಬ್ಬ ಪ್ರಾಮಾಣಿಕ, ನಿಷ್ಠಾವಂತನನ್ನು ಕಳೆದುಕೊಂಡಿದೆ. ಅದಕ್ಕಿಂತ ಹೆಚ್ಚಾಗಿ ಒಬ್ಬ ರಾಷ್ಟ್ರಪ್ರೇಮಿಯನ್ನು ಕಳೆದುಕೊಂಡಿದೆ.

ಹಾಗಂತ ಯಾರೇ ಸತ್ತಾಗಲೂ ನಾವು ಕಂಬನಿ ಮಿಡಿಯುತ್ತೇವೆ. ಅಷ್ಟೇ ಮಾಡಿ ಸುಮ್ಮನಾಗುತ್ತೇವೆ. ಸತ್ತವರ ಆತ್ಮ ಶಾಂತವಾಗುವುದಕ್ಕೆ ಮೊದಲೇ ನಾವೂ ಶಾಂತರಾಗಿರುತ್ತೇವೆ. ಶಾಂತಿಯಲ್ಲಿ ಹೇಳುವ ಸಮಾಧಾನದ ಮಾತುಗಳು ಕೇಳಲು ಚೆನ್ನಾಗಿರುತ್ತವೆ. ದುಬೆಯ ಮಟ್ಟಿಗೆ ಈಗ ಆಗಿರುವುದೂ ಅದೇ.

Murdered Engineer Satyendra Dubeyಸತ್ಯೇಂದ್ರ ದುಬೆ ಕೊಲೆಯಾಗಿರದಿದ್ದರೆ ಆತನ ಹುಟ್ಟೂರಾದ ಬಿಹಾರದ ಸಿವನ್‌ ಜಿಲ್ಲೆಯ ಶಹಾಪುರವೆಂಬ ಕುಗ್ರಾಮ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಮನೆ ತುಂಬಾ ಮಕ್ಕಳು. ಮನೆ ತುಂಬಾ ಬಡತನ. ತಂದೆಯ ದುಡಿತದಿಂದಲೇ ಬಾಳಬುತ್ತಿ ಬೆಳೆಯಬೇಕು. ಸತ್ಯೇಂದ್ರ ಮೊದಲಿನಿಂದಲೂ ಓದಿನಲ್ಲಿ ಮುಂದು. ಎಷ್ಟೇ ಕಷ್ಟವಾದರೂ ತಂದೆ ಮಗನ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದ. ಪ್ರತಿದಿನ ಹತ್ತಾಲು ಮೈಲು ನಡೆದು ಸತ್ಯೇಂದ್ರ ಹೈಸ್ಕೂಲಿಗೆ ಹೋಗುತ್ತಿದ್ದ. ಬಡತನ ಕಲಿಸುವ ಎಲ್ಲಾ ಒಳ್ಳೆಯ ಪಾಠಗಳನ್ನೂ ಸತ್ಯೇಂದ್ರ ಮೈಗೂಡಿಸಿಕೊಂಡ. ಹೈಸ್ಕೂಲು ಮುಗಿದ ಬಳಿಕ ಆತ ಅಲಹಾಬಾದ್‌ನಲ್ಲಿ ಕಾಲೇಜಿಗೆ ಸೇರಿಕೊಂಡ. ಸ್ನೇಹಿತರ ಮನೆಯಲ್ಲಿ ವಾರಾನ್ನ, ಕೂಲಿನಾಲಿ ಮಾಡಿದ. ಬೆಳಗ್ಗೆ ಮನೆಮನೆಗೆ ಪೇಪರ್‌ ಹಂಚಿದ. ಎಷ್ಟೇ ತೊಂದರೆಗಳಾದರೂ ಓದನ್ನು ಮಾತ್ರ ಬಿಡಲಿಲ್ಲ.

1990ರಲ್ಲಿ ಸತ್ಯೇಂದ್ರಗೆ ಐಐಟಿ ಕಾನ್ಪುರದಲ್ಲಿ ಸೀಟು ಸಿಕ್ಕಿತು. ದೇಶದ ಐಐಟಿಗಳ ಪೈಕಿ ಕಾನ್ಪುರದಲ್ಲಿರುವುದಕ್ಕೆ ಪ್ರತಿಷ್ಠೆಯಲ್ಲಿ ಮತ್ತೊಂದು ಕೋಡು. ದೇಶದ ಮಹಾನ್‌ ಮೇಧಾವಿಗಳ ಪಡಸಾಲೆಯಾಗಿರುವ ಕಾನ್ಪುರ ಐಐಟಿಯಲ್ಲಿ ಸೀಟು ಸಿಗುವುದು ಸಣ್ಣ ಮಾತಲ್ಲ. ಇಲ್ಲಿ ಕಲಿಯುವುದಕ್ಕಾಗಿ ನಾಲ್ಕೈದು ವರ್ಷ ಸಿದ್ಧತೆ ನಡೆಸುತ್ತಾರೆ. ಸಿರಿವಂತರ ಮಕ್ಕಳು ವರ್ಷಾನುಗಟ್ಟಲೆ ತರಬೇತಿ ಪಡೆಯುತ್ತಾರೆ. ಕಾರಣ ಇಷ್ಟೇ, ಇಲ್ಲಿ ಸೀಟು ಸಿಕ್ಕರೆ ಕೋರ್ಸ್‌ ಮುಗಿಯುತ್ತಿದ್ದಂತೆ ಬಹುರಾಷ್ಟ್ರೀಯ ಕಂಪನಿಗಳು ಲಕ್ಷಾಂತರ ಡಾಲರ್‌ ಕೊಟ್ಟು ಎಳೆದುಕೊಳ್ಳುತ್ತವೆ. ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ತಮ್ಮದೇ ಖರ್ಚಿನಲ್ಲಿ ಉನ್ನತ ವ್ಯಾಸಂಗ ಮಾಡಿಸಿ ಮೂಟೆಗಳಲ್ಲಿ ಹಣ ಕೊಟ್ಟು ನೌಕರಿಗಿಟ್ಟುಕೊಳ್ಳುತ್ತಾರೆ. ಇಲ್ಲಿ ಓದಿದರೆ ಜಗತ್ತಿನ ಯಾವುದೇ ವಿಶ್ವವಿದ್ಯಾಲಯದಲ್ಲಿ ಸೀಟು ಗ್ಯಾರಂಟಿ ಎಂದ ಮೇಲೆ ಕೋಟ್ಯಂತರ ರೂಪಾಯಿ ವರದಕ್ಷಿಣೆಯೂ ಗ್ಯಾರಂಟಿ. ಜೀವನದ ಎಲ್ಲಾ ಐಷಾರಾಮಗಳೂ ಗ್ಯಾರಂಟಿ. ಎಲ್ಲಿಯೇ ಹೋದರೂ ವಿಶೇಷ ಮರ್ಯಾದೆ. ಐಐಟಿ- ಕೆ ಎಂಬ ಕಿರೀಟ. ಹೀಗಾಗಿ ಇಲ್ಲಿಗೆ ಸೇರಲು ಎಲ್ಲಿಲ್ಲದ ಹರಸಾಹಸ ಮಾಡುತ್ತಾರೆ. ನಮ್ಮ ಇನ್‌ಫೋಸಿಸ್‌ ನಾರಾಯಣಮೂರ್ತಿ ಇದ್ದಾರಲ್ಲ, ಅವರೂ ಕೂಡ ಇಲ್ಲಿಯೇ ಕಲಿತವರು.

ಪರಿಶ್ರಮ ಹಾಗೂ ಬುದ್ಧಿಬಲದಿಂದ ಸತ್ಯೇಂದ್ರ ಐಐಟಿ- ಕಾನ್ಪುರದಲ್ಲಿ ಕಾಲಿಟ್ಟಿದ್ದ. ಸಿವಿಲ್‌ ಎಂಜಿನಿಯರಿಂಗ್‌ ಅಭ್ಯಸಿಸಿದ. ಅಂತಿಮ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್‌ ಗಳಿಸಿ ಉತ್ತೀರ್ಣನಾದ. ಡಿಗ್ರಿ ಮುಗಿಯುತ್ತಿದ್ದಂತೆ ಅಮೆರಿಕದ ಕಂಪನಿಗಳು ಅಭ್ಯರ್ಥಿಗಳ ಖರೀದಿಗಾಗಿ ಕ್ಯೂ ನಿಂತಿದ್ದವು. ಕೋಟ್ಯಂತರ ರೂಪಾಯಿಗೆ ಸತ್ಯೇಂದ್ರ ಮಾರಿಕೊಳ್ಳಬಹುದಿತ್ತು. ಅವುಗಳೊಡ್ಡುವ ಆಮಿಷಕ್ಕೆ ಬಲಿಯಾಗಿ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಮುಂದಾಗಬಹುದಿತ್ತು.

ಸತ್ಯೇಂದ್ರ ಅವನ್ನೆಲ್ಲ ಪಕ್ಕಕ್ಕೆ ಸರಿಸಿ ಸರಕಾರಿ ಕೆಲಸಕ್ಕೆ ಸೇರಿಕೊಂಡ. ಆತನಿಗೆ ಗೊತ್ತಿತ್ತು ಯಾವುದೇ ಸರಕಾರಿ ನೌಕರಿಗೆ ಸೇರಿಕೊಂಡರೂ ಹದಿನೈದು ಸಾವಿರಕ್ಕಿಂತ ಹೆಚ್ಚು ಸಂಬಳ ಸಿಗುವುದಿಲ್ಲ ಎಂದು. ವರ್ಷಕ್ಕೆ ಐದಾರು ಕೋಟಿ ಕೊಡುವ ಆ ಕಂಪನಿಗಳೆಲ್ಲಿ, ಎರಡು ಲಕ್ಷ ಕೊಡುವ ಈ ಸರಕಾರಿ ಕೆಲಸವೆಲ್ಲಿ ? ಪರವಾಗಿಲ್ಲ. ಕಲಿಯುವಾಗ ಮಾಡಿದ ಸಾಲವನ್ನು ತೀರಿಸುವುದಕ್ಕಾದರೂ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಕಾಲ ದುಡಿಯುವಂತೆ ಸ್ನೇಹಿತರು ಕೊಟ್ಟ ಸಲಹೆಯನ್ನೂ ಧಿಕ್ಕರಿಸಿದ. ಐಐಟಿ ಪಾಸು ಮಾಡಿದವರೆಲ್ಲ ದೇಶಬಿಟ್ಟು ಹೊರಟರೆ, ಇಲ್ಲಿರೋರು ಯಾರೆಂದು ಭಾವಿಸಿದ ದುಬೆ, ಇಂಡಿಯನ್‌ ಇಂಜಿನಿಯರಿಂಗ್‌ ಸರ್ವಿಸ್‌ (ಐಇಎಸ್‌) ಗೆ ಓದುತ್ತಾ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್‌ ಡಿಗ್ರಿ ಕೂಡ ಸಂಪಾದಿಸಿದ. ಸ್ಕಾಲರ್‌ಶಿಪ್‌ ಹಾಗೂ ಬ್ಯಾಂಕುಗಳ ಶೈಕ್ಷಣಕ ಸಾಲದಿಂದ ಇಷ್ಟೆಲ್ಲ ಡಿಗ್ರಿ ಸಂಪಾದಿಸಿದ ದುಬೆ ಐಇಎಸ್‌ನ್ನು ಕೂಡ ಪಾಸು ಮಾಡಿ ಸರಕಾರಿ ಕಚೇರಿಯಾಳಗೆ ಕಾಲಿಟ್ಟ. ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಲ್ಲಿ ಕೆಲಸಕ್ಕೆ ಸೇರಿದ್ದ. ನಂತರ 1997 ಹಾಗೂ 1999ರಲ್ಲಿ ಎರಡು ಬಾರಿ ಐಎಎಸ್‌ ತೇರ್ಗಡೆಯಾಗಿದ್ದರೂ ದುಬೆ ಮೊದಲು ಸೇರಿದ ಸೇವೆಯನ್ನು ಬಿಡಲಿಲ್ಲ. ಕಾರಣ ರಸ್ತೆ ನಿರ್ಮಾಣದಿಂದಲೇ ಭಾರತದ ಪ್ರಗತಿ ಸಾಧ್ಯ ಎಂದು ಆತ ನಂಬಿದ್ದ. ಇದಕ್ಕಾಗಿ ಜೀವನ ಮುಡಿಪಾಗಿಡಲು ಬಯಸಿದ್ದ.

ಈ ಸಮಯದಲ್ಲಿ ಪ್ರಧಾನಿ ವಾಜಪೇಯಿ ಅವರು ದೇಶದ ನಾಲ್ಕು ದಿಕ್ಕುಗಳನ್ನು ಜೋಡಿಸುವ ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಯನ್ನು ಹಮ್ಮಿಕೊಂಡಿದ್ದರು. ಇದು ಪ್ರಧಾನಿ ಅವರ ಕನಸಿನ ಯೋಜನೆ. ಸ್ವತಃ ಅವರ ಕಾರ್ಯಾಲಯವೇ ಈ ಯೋಜನೆಯ ಜಾರಿಯ ಬಗ್ಗೆ ಕಾಳಜಿ ವಹಿಸುತ್ತಿದೆ. ರಸ್ತೆ ನಿರ್ಮಾಣ ಕೈಂಕರ್ಯದ ಅನುಷ್ಠಾನದ ಹೊಣೆ ಹೊತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಡೆಪ್ಯುಟೇಶನ್‌ ಮೇಲೆ ಅವನನ್ನು ಕಳುಹಿಸಲಾಯಿತು. ಔರಂಗಾಬಾದ್‌- ಬಾರಚ್ಛಟಿ- ಮೊಹಾನಿಯ ಮಾರ್ಗದ ಉಸ್ತುವಾರಿಯನ್ನು ದುಬೆಗೆ ವಹಿಸಲಾಯಿತು.

ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಹೆದ್ದಾರಿ ನಿರ್ಮಾಣದಲ್ಲಿ ಎಲ್ಲವೂ ಸುರಳೀತವಾಗಿರಲಿಲ್ಲ. ದೇಶದ ಎಲ್ಲ ಭಾಗಗಳಲ್ಲಿ ಈ ಯೋಜನೆ ತೀವ್ರಗತಿಯಲ್ಲಿ ಪ್ರಗತಿಯಲ್ಲಿದ್ದರೆ, ಬಿಹಾರದಲ್ಲಿ ಕೆಲವೆಡೆ ಇನ್ನೂ ಆರಂಭವೇ ಆಗಿಲ್ಲ. ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರಬೇಕಾದ ಹೆದ್ದಾರಿಯ ತುಂಬಾ ಈಗಲೇ ಹೊಪ್ಪಳಿಕೆಯೆದ್ದ ಚರ್ಮದಂತೆ ಬಾಯಿ ತೆರೆದ ರಸ್ತೆಗಳು. ಈ ತನಕ ಒಂದೂ ಕಾಮಗಾರಿಯನ್ನು ಮಾಡದವರಿಗೆ, ಅನನುಭವಿಗಳಿಗೆ, ಫೋರ್ಜರಿ ದಾಖಲೆ ಸಲ್ಲಿಸಿದವರಿಗೆ, ನಕಲಿ ಪ್ರಮಾಣ ಪತ್ರ ಕೊಟ್ಟವರಿಗೆ ರಸ್ತೆ ಗುತ್ತಿಗೆಯನ್ನು ನೀಡಿರುವ ವಿಷಯ ದುಬೆಗೆ ಗೊತ್ತಾಯಿತು. ನೂರಾರು ಕಿ.ಮಿ. ಗುತ್ತಿಗೆ ಪಡೆದ ದೊಡ್ಡ ಗುತ್ತಿಗೆದಾರರು ತಮ್ಮ ಕಮಿಶನ್‌ ಇಟ್ಟುಕೊಂಡು ಸಣ್ಣ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ಕೊಟ್ಟ ಅನೇಕ ಪ್ರಕರಣಗಳನ್ನು ದುಬೆ ಬಹಿರಂಗಪಡಿಸಿದ. ಕಾನೂನಿನ ಪ್ರಕಾರ ಹೀಗೆ ಮಾಡುವಂತಿಲ್ಲ. ಆದರೆ ಬಿಹಾರದಲ್ಲಿ ಕಾನೂನನ್ನು ಉಲ್ಲಂಘಿಸುವ ಮೂಲಕವೇ ಆಚರಿಸುವುದು ತಾನೇ? ಮೊದಲ ಬಾರಿಗೆ ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಾಗ ಏನೂ ಪ್ರಯೋಜನವಾಗಲಿಲ್ಲ. ಕಾರಣ ಅವರೂ ‘ರೋಡ್‌ ಮಾಫಿಯಾ’ಗಳೊಂದಿಗೆ ಶಾಮೀಲಾಗಿದ್ದರು.

ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿರುವುದು ದುಬೆಗೆ ಸಾಧ್ಯವಾಗಲಿಲ್ಲ. ನೇರವಾಗಿ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದ. ಹೆದ್ದಾರಿ ಕರ್ಮಕಾಂಡದ ಪ್ರತಿಯಾಂದು ಸಂಗತಿಯನ್ನು ಎಳೆಎಳೆಯಾಗಿ ಬಹಿರಂಗಗೊಳಿಸಿದ. ಹಣ ಎಲ್ಲಿ ಸೋರುತ್ತಿದೆ, ಹೇಗೆ ಸೋರುತ್ತಿದೆ, ಯಾರ್ಯಾರು ಕಾರಣರು, ಇದನ್ನು ತಡೆಯುವುದು ಹೇಗೆ ಎಂದು ಸವಿಸ್ತಾರವಾಗಿ ಬರೆದ. ಪ್ರಧಾನಿಗೆ ಬರೆದ ಹತ್ತು ಪುಟಗಳ ಪತ್ರದ ಕೊನೆಯಲ್ಲಿ ‘ದಯವಿಟ್ಟು ಏನಾದರೂ ಕಠಿಣ ಕ್ರಮ ಕೈಗೊಳ್ಳಿ. ಸ್ವಾತಂತ್ರ್ಯಾ ನಂತರ ದೇಶ ಕಂಡ ಮಹತ್ವಾಕಾಂಕ್ಷೆಯ ಯೋಜನೆಯಿದು. ಇದು ಭ್ರಷ್ಟರ ಹುನ್ನಾರದಿಂದ ಕಳಪೆಯಾಗಲು ಬಿಡಬಾರದು. ಈ ಸಂಗತಿಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಆದರೆ ನನ್ನ ಹೆಸರನ್ನು ಮಾತ್ರ ದಯವಿಟ್ಟು ಬಹಿರಂಗಪಡಿಸಬೇಡಿ’ ಎಂದು ವಿನೀತನಾಗಿ ಕೊನೆಗೊಳಿಸಿದ್ದ. ಕಳ್ಳ ಅರ್ಜಿ ಅಥವಾ ಬೇನಾಮಿ ಪತ್ರ ಎಂದು ಭಾವಿಸಿ, ಯಾರೋ ಆಗದವರು ದುರುದ್ದೇಶದಿಂದ ಕಳುಹಿಸಿದ ಪತ್ರ ಎಂದು ಭಾವಿಸಬಾರದೆಂದು ಕೊನೆಯಲ್ಲಿ ದುಬೆ ತನ್ನ ಸಂಕ್ಷಿಪ್ತ ಬಯೋಡೇಟಾವನ್ನು ಲಗತ್ತಿಸಿದ್ದ.

ಅದೇ ಅವನಿಗೆ ಮುಳುವಾಯಿತು.

ದುಬೆಯ ಹೆಸರನ್ನು ಗೌಪ್ಯವಾಗಿಡುವ ಬದಲು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ಕಳುಹಿಸಿಕೊಟ್ಟರು. ಅವರು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಕಳುಹಿಸಿದರು. ಅದು ಹದಿನೆಂಟು ಅಧಿಕಾರಿಗಳ ಟೇಬಲ್‌ ಸುತ್ತಿ, ಕೊನೆಗೆ ದುಬೆ ಕೆಲಸ ಮಾಡುತ್ತಿರುವ ಕಚೇರಿಯ ಮುಖ್ಯಸ್ಥನವರೆಗೂ ಬಂತು.

ಶುರುವಾಯಿತು ಬಿಸಿ, ಬೆದರಿಕೆ.

ಕೊಲೆ ಬೆದರಿಕೆ ಕರೆಗಳು ದುಬೆಯನ್ನು ಹಿಂಸಿಸಲಾರಂಭಿಸಿದವು. ಪ್ರಧಾನಿಗೆ, ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದು, ತನ್ನ ಹೆಸರನ್ನು ಗೌಪ್ಯವಾಗಿಡಬೇಕೆಂದು ಬಿನ್ನವಿಸಿದರೂ ಬಹಿರಂಗಗೊಳಿಸುವುದರಿಂದ ಬದುಕು ಹೈರಾಣಾಗಿದೆಯೆಂದು ಗೋಳು ತೋಡಿಕೊಂಡ. ಏನೂ ಪ್ರಯೋಜನವಾಗಲಿಲ್ಲ. ದುಬೆಯ ಸುತ್ತ ರೋಡ್‌ ಮಾಫಿಯಾಗಳು ಸುತ್ತುವರಿಯಲಾರಂಭಿಸಿದ್ದರು. ಸಾವು ಕಳ್ಳ ಹೆಜ್ಜೆಯಲ್ಲಿ ಧಾವಿಸುತ್ತಿತ್ತು !

ಮೊನ್ನೆ ನವೆಂಬರ್‌ 27ರಂದು ಅಪರಿಚಿತ ಬಂದೂಕುಧಾರಿಗಳು ಬಿಹಾರದ ಗಯಾದಲ್ಲಿ ದುಬೆ ಮೇಲೆ ಒಂದೇ ಸಮನೆ ಗುಂಡಿನ ಮಳೆಗರೆದರು. ಮಿಸುಕಾಡುವುದರೊಳಗೆ ದುಬೆ ರಕ್ತದ ಮಡುವಿನಲ್ಲಿ ತಣ್ಣಗೆ ಮಲಗಿದ್ದ. ಆತನ ನಿಷ್ಠೆ, ಪ್ರಾಮಾಣಿಕತೆ, ಆದರ್ಶಗಳು ಸಣ್ಣಗೆ ಕನಲಿದವು. ಕೇವಲ ಮೂವತ್ತೊಂದು ವರ್ಷದ ಕನಸಿನ ಕುಡಿಯನ್ನು ದುರುಳರು ಕತ್ತರಿಸಿ ಹಾಕಿಬಿಟ್ಟರು ! ಕರ್ತವ್ಯ, ಕೆಲಸ, ಸತ್ಯ ಎಂದೆಲ್ಲ ಬಡಬಡಿಸುತ್ತಿದ್ದ ಸತ್ಯೇಂದ್ರ ಹೆಣವಾಗಿಬಿಟ್ಟ.

ಪ್ರಧಾನಿಯವರೇ, ನಿಮ್ಮ ಕನಸಿನ ಯೋಜನೆಯನ್ನು ಸಾಕಾರಗೊಳಿಸಲು ವೈಯಕ್ತಿಕ ಸುಖ, ಲಾಭ ಎಲ್ಲವನ್ನೂ ತೊರೆದ ಸತ್ಯೇಂದ್ರ ಇಂಥ ಶಿಕ್ಷೆಗೆ ಯೋಗ್ಯನಾಗಿದ್ದನಾ? ಅವನ ಆದರ್ಶಗಳಿಗೆ ನಾವು ಈ ರೀತಿಯ ಶಹಬ್ಬಾಸ್‌ಗಿರಿ ಕೊಡುವುದು ಸರೀನಾ? ದೇಶದ ಬಗ್ಗೆ ಹಂಬಲ, ಕಾಂಕ್ಷೆ, ಕನಸು, ಚಿತ್ರಣಗಳನ್ನು ಕಣ್ತುಂಬಾ, ಮೈತುಂಬಾ ತುಂಬಿಕೊಂಡಿದ್ದ ಸತ್ಯೇಂದ್ರನ ಸುತ್ತ ಅಪಾಯವೆಂಬುದು ಗೊತ್ತಿದದೂ ಅವನನ್ನು ಕೈಯಾರೆ ಬಲಿಕೊಟ್ಟಿದ್ದು ಪಾಪಕೃತ್ಯವಲ್ಲವೇ? ಈಗ ಪಾತಕಿಗಳ ಶೋಧಕ್ಕಾಗಿ ಸಿಬಿಐ ತನಿಖೆಗೆ ಆದೇಶಿಸಿದ್ದೀರಿ, ಸತ್ಯೇಂದ್ರ ಸತ್ತು ತಿಂಗಳಾಗುತ್ತಾ ಬಂತು. ಹಂತಕರ ಸುಳಿವು ಸಿಕ್ಕಿಲ್ಲ. ಅವರು ಸಿಗಲಿ ಬಿಡಲಿ, ಸತ್ಯೇಂದ್ರ ವಾಪಸು ಬರುವುದಿಲ್ಲ. ಒಬ್ಬ ದಕ್ಷ, ಧೀಮಂತ, ಛಲವಂತ ಅಧಿಕಾರಿಯನ್ನು ನಮಗೆ ಉಳಿಸಿಕೊಳ್ಳಲಾಗಲಿಲ್ಲ.

ಐಐಟಿ ಸೇರಿದಂತೆ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಕಲಿತವರೆಲ್ಲ ವಿದೇಶಗಳ ಕಡೆಗೆ ಮುಖ ಮಾಡುತ್ತಾರೆ. ನಮ್ಮ ಪ್ರತಿಭೆಗಳೆಲ್ಲ ಪಲಾಯನವಾದವು ಎಂದು ಬೊಬ್ಬೆ ಹೊಡೆಯುತ್ತೇವೆ. ಆದರೆ ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಬುದ್ಧಿವಂತರನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ನೋಡಿ. ವಿದೇಶಗಳಲ್ಲಿರುವ ಸಾವಿರಾರರು ಐಐಟಿ ಪದವೀಧರರು ದುಬೆಗೆ ಒದಗಿದ ಪರಿಸ್ಥಿತಿ ಕಂಡು ವಿಹ್ವಲರಾಗಿ ಕುಳಿತಿದ್ದಾರೆ. ತಾಯ್ನಾಡಿನಲ್ಲಿ ನೆಲೆಸಲು ಮುಂದಾಗುವ ಅಸಂಖ್ಯ ಅನಿವಾಸಿ ಭಾರತೀಯರು ದುಬೆ ಹತ್ಯೆಯಿಂದ ಗಕ್ಕನೆ ನಿಂತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮಾತಾಡುವುದು, ಹೋರಾಡುವುದು ಪರಮ ಪಾಪ ಎಂದಾದರೆ ಈ ದೇಶದಲ್ಲಿರುವ ಅಸಂಖ್ಯ ದುಬೆಗಳು ಎಲ್ಲಿಗೆ ಹೋಗಬೇಕು?

ಎಲ್ಲೆಡೆ ಕೇಳಿಬರುತ್ತಿರುವುದು ಸಾಂತ್ವನ.

ಅದನ್ನು ತೆಗೆದುಕೊಂಡು ಏನು ಮಾಡುವುದು?

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more