• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಗಳದಲ್ಲಿ ನಿಲ್ಲುವ ನಾಯಿ, ಹೃದಯದಲ್ಲೇಕೆ ನೆಲೆಸುತ್ತದೆ ?

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಇದು ಅಂತಿಂಥ ಪ್ರೀತಿಯಲ್ಲ. ಈ ಪ್ರೀತಿಯಲ್ಲಿ ಸರ್ವಸ್ವವನ್ನೂ ಕಾಣುವವರಿದ್ದಾರೆ. ಪ್ರೀತಿಯನ್ನು ನಿತ್ಯ ಪರಿಪಾಲಿಸುವವರು, ಈ ಪ್ರೀತಿಗೆ ಸದಾ ಪರಿತಪಿಸುವವರಿದ್ದಾರೆ. ಇದಕ್ಕಾಗಿ ಸಕಲವನ್ನೂ ತ್ಯಜಿಸಿ ಹುಚ್ಚರಾದವರಿದ್ದಾರೆ. ಒಂದು ರೀತಿಯಲ್ಲಿ ಇದು ಮಾನವ ಪ್ರೇಮವನ್ನೂ ಮೀರಿದ್ದು. ಮನುಷ್ಯನ ಕಕ್ಕುಲಾತಿ, ಕಿಲಕಿಲತೆಯ ಸಾಕಾರರೂಪ. ಇದು ಒಂಥರಾ ಹುಚ್ಚುಕೋಡಿ ಪ್ರೇಮ.

ಇದನ್ನು ಶ್ವಾನ ಪ್ರೇಮ ಅಂತಿಟ್ಕೊಳೋಣ !

ಮನೆಯ ಅಂಗಳದಲ್ಲಿ, ಹೃದಯದ ಪಡಸಾಲೆಯಲ್ಲಿ ಬಿಟ್ಟುಕೊಳ್ಳುವ ನಾಯಿ ಇದೆಯಲ್ಲ ಅದು ನಿಧಾನವಾಗಿ ನಮ್ಮ ಮೈ ಮನಗಳನ್ನು ಆವರಿಸಿ, ಒಬ್ಬ ಗೆಳೆಯನಂತೆ, ಗೆಳತಿಯಂತೆ, ಕೊರಳ ಸಂಗಾತಿಯಂತೆ ಮನೆಯ ಪ್ರೀತಿ ಪಾತ್ರ ವ್ಯಕ್ತಿಯಂತೆ ನಮ್ಮೊಳಗೆ ಪಸರಿಸಿ, ನಮ್ಮ ಜೀವ, ಜೀವನದ ಒಂದು ಭಾಗದಂತೆ ಆಕ್ರಮಿಸಿ ಕೊನೆಗೊಂದು ದಿನ ಹೇಳದೇ ಕೇಳದೇ ಈ ಜಗತ್ತಿನಿಂದ ಹೊರಟು ನಮ್ಮೊಳಗೊಂದು ಶೂನ್ಯ ವಿರಹ, ವೇದನೆ, ಅಗಲಿಕೆಯನ್ನು ಸೃಷ್ಟಿಸುವ ಪರಿ ಇದೆಯಲ್ಲ ಅದು ಬಟಾ ಭಯಂಕರ. ಅದಕ್ಕಾಗಿ ಹತ್ತಾರು ವರ್ಷಗಳಿಂದ ಸಾಕಿದ ನಾಯಿಯಾಂದು ಸತ್ತು ಹೋದರೆ ಮನೆ ಮಂದಿಯೆಲ್ಲ ಊಟ ತಿಂಡಿ ಬಿಟ್ಟು ಮಂಕು ಹಿಡಿದವರಂತೆ ಕುಳಿತಿರುತ್ತಾರೆ. ದಿನವಿಡೀ, ತಿಂಗಳುಗಟ್ಟಲೆ ರೋದಿಸುತ್ತಾ ಈ ಜೀವನವೇ ಮುಗಿದು ಹೋಯಿತು ಎಂಬಂತೆ ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಾರೆ. ಮಗ, ಮಗಳ ಸಾವನ್ನು ಅನುಭವಿಸಿದಂತೆ ಸಾಕು ನಾಯಿಯಾಂದು ಸತ್ತರೆ ಕರುಳು ಕಿತ್ತು ಬರುವ ದುಃಖ ಮುಂದಿಟ್ಟುಕೊಂಡು ಸಂಕಟಪಡುತ್ತಿರುತ್ತಾರೆ. ಮನೆ ನಾಯಿಯ ಸಾವಿನ ಶೋಕ ಬಾಧೆ ತಾಳಲಾರದೆ ಹುಚ್ಚರಾದವರಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ, ಮನೆ ಮಠ ಕಳೆದುಕೊಂಡವರಿದ್ದಾರೆ.

My Dogಪಿತಾಂಪುರದ ಮಹಾರಾಣಿ ಚಂದ್ರಮೋಹನ ದೇವಿಯದೊಂದು ಕತೆ. ಈಕೆಗೆ ನಾಯಿಗಳೆಂದರೆ ಪಂಚ ಪ್ರಾಣ. ಮದುವೆ ಸಂದರ್ಭದಲ್ಲಿ ಈಕೆಯ ತಂದೆ ರಷಿಯನ್‌ ಟೆರ್ರಿಯರ್‌, ಕಾಕರ್‌ ಸ್ಪೇನಿಯಲ್‌, ಬ್ರಿಯಾರ್ಡ್‌ ತಳಿಯ ನಾಯಿಗಳನ್ನು ಉಡುಗೊರೆಯಾಗಿ ನೀಡಿದ್ದ. ಮದುವೆಯ ನಂತರ ಮಹಾರಾಜನ ಜತೆ ಹಾಯಾಗಿರುವುದನ್ನು ಬಿಟ್ಟು ಈಕೆ ಈ ನಾಯಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಮೊದಲ ಮೊದಲು ರಾಜನಿಗೆ ಕಿರಿಕಿರಿಯೆನಿಸಿದರೂ ಏನೂ ಹೇಳುತ್ತಿರಲಿಲ್ಲ. ಕೊನೆ ಕೊನೆಗೆ ಈಕೆಯ ಶ್ವಾನಪ್ರೇಮ ರಾಜಕಾರ್ಯಗಳಿಗೆ ಅಡ್ಡಿಯುಂಟುಮಾಡುತ್ತಿತ್ತು. ಎಲ್ಲಿಯೇ ಹೋಗಲಿ ಮಹಾರಾಣಿಯ ಹಿಂಬದಿ ನಾಯಿ ಮುಂಡೇವು ಬರಲೇಬೇಕು. ರಾಜನನ್ನು ಭೇಟಿ ಮಾಡಲು ಬರುವ ಗಣ್ಯರ ಮುಂದೆ ಕೂಡ ಶ್ವಾನ ಪುರಾಣ. ಚಂದ್ರಮೋಹನ ದೇವಿಗೆ ಬರಬರುತ್ತಾ ನಾಯಿಯೇ ಸರ್ವಸ್ವವಾಗಿಬಿಟ್ಟಿತು. ಪಲ್ಲಂಗದ ಮೇಲೆ ಪಕ್ಕದಲ್ಲಿ ರಾಜನಿಲ್ಲದಿದ್ದರೂ ಪರವಾಗಿಲ್ಲ , ನಾಯಿಗಳು ಇರಲೇಬೇಕಾಗಿತ್ತು. ಅವುಗಳಿಗೆ ಬಗೆ ಬಗೆಯ ಉಡುಪು, ಸಾಬೂನು, ತಿಂಡಿ, ಆಟಿಕೆಗಳು. ಇವೆಲ್ಲವೂ ಪ್ಯಾರಿಸ್‌ನಿಂದ ಬರುತ್ತಿದ್ದವು. ಅರಮನೆಯಲ್ಲಿ ಮನುಷ್ಯರಿಗೆ ಸಿಗದ ಮರ್ಯಾದೆ, ಮೇಜವಾನಿಕೆ, ಮೋಜುವಾನಿಕೆಗಳು ಈ ನಾಯಿಗಳಿಗೆ ಸಿಗುತ್ತಿದ್ದವು. ರಾಣಿ ಎಲ್ಲಿ ಹೋದರೂ ಇವುಗಳು ಹಿಂಬಾಲಿಸಬೇಕು. ಅವುಗಳಿಗಾಗಿ ಅಚ್ಚುಕಟ್ಟಾಗಿ ನಿರ್ಮಿಸಿದ ಪಲ್ಲಂಗವಿರುವ, ಶೌಚಾಲಯ ಸೇರಿದಂತೆ ಸಕಲ ಸೌಲಭ್ಯಗಳಿರುವ ಸಂಚಾರಿ ಅರಮನೆ (Dog Float).

ಇವೆಲ್ಲವನ್ನೂ ರಾಜ ಎಷ್ಟು ದಿನ ಅಂತ ನೋಡುತ್ತಾ ಸುಮ್ಮನಿರುತ್ತಾನೆ ? ಸಹನೆಯ ಕೊಡ ತುಂಬತೊಡಗಿತ್ತು. ನಾಯಿಗಳನ್ನು ಪ್ರೀತಿಸುವ ಭರದಲ್ಲಿ ರಾಣಿ ಆತನನ್ನು ಪಕ್ಕಕ್ಕಿಟ್ಟಿದ್ದಳು. ಆಕೆಯ ಈ ಶ್ವಾನ ಪ್ರೇಮ ಅವನನ್ನು ಅನೇಕ ಸಲ ಮುಜುಗರಕ್ಕೀಡು ಮಾಡಿದ್ದವು. ನಾಯಿ ವಿಚಾರವಾಗಿ ಅವರಿಬ್ಬರ ಮಧ್ಯೆ ಕೈಸರ್‌ ಮೈಸರ್‌ ಜಗಳಗಳಾಗಿದ್ದವು.

ಒಂದು ದಿನ ರಾಜ ಈ ನಾಯಿಗಳನ್ನು ಕೊಲ್ಲುವ ಸಂಚು ಹೂಡಿದ !

ಅಡುಗೆಭಟ್ಟರನ್ನು ಗುಟ್ಟಾಗಿ ಕರೆದು ಆಹಾರದಲ್ಲಿ ವಿಷ ಬೆರೆಸಿ ಸಾಯಿಸುವಂತೆ ಹೇಳಿದ. ಅಡುಗೆ ಭಟ್ಟರು ನಡುಗಿಬಿಟ್ಟರು. ಅವರಿಗೆ ತಾವು ಮಾಡುವ ಕೆಲಸದ ಪರಿಣಾಮಗಳೇನಾಗಬಹುದೆಂಬ ಅರಿವಿತ್ತು. ಆದರೆ ರಾಜನ ಆದೇಶ ಮೀರುವುದು ಹೇಗೆ ? ಸರಿ, ಆ ರಾತ್ರಿ ಊಟಕ್ಕೆ ವಿಷ ಹಾಕಿದ್ದೇ ತಡ ಬೆಳಗಾಗುವ ಹೊತ್ತಿಗೆ ಮೂರೂ ನಾಯಿಗಳು ಸತ್ತು ಹೋದವು. ಇವು ಸತ್ತಿದ್ದೇ ರಾಣಿ ನೆಲ ಮುಗಿಲು ಒಂದು ಮಾಡುವಂತೆ ಬೊಬ್ಬೆ ಹಾಕಿದಳು. ಅರಮನೆಯೆಂಬುದು ಸೈತಾನನ ಪಡಖಾನೆಯಂತಾಯಿತು. ಆಕೆಯ ದುಃಖ, ಸಂಕಟಕ್ಕೆ ಪಾರವೇ ಇರಲಿಲ್ಲ. ಸತ್ತ ಕ್ಷಣದಿಂದ ತುತ್ತು ಅನ್ನ, ತೊಟ್ಟು ನೀರನ್ನೂ ಸೇವಿಸಲಿಲ್ಲ. ಬಾಗಿಲ ಚಿಲಕ ಹಾಕಿ ಒಳ ಸೇರಿದವಳು ಎರಡು ದಿನ ಹೊರಬರಲೇ ಇಲ್ಲ.

ಮೂರನೇ ದಿನ ಬಂದಳು. ಶವವಾಗಿ !

ಶೋಕ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಳು. ‘ನಾಯಿಗಳಿಲ್ಲದ ತನ್ನ ಬಾಳು ನಾಯಿಪಾಡು’ ಎಂದು ಆಕೆ ಬರೆದಿಟ್ಟಿದ್ದಳು.

ಹೈದರಾಬಾದಿನ ನಿಜಾಮರ ಆಸ್ಥಾನದಲ್ಲಿ ಬೂದಿಗುಪ್ಪಾಲು ರಾಮೇಶ್ವರ ರಾವ್‌ ಎಂಬ ಸಲಹೆಗಾರನಿದ್ದ. ಆಸ್ಥಾನದ ಪರಿಸರದಿಂದಲೋ ಸ್ವಭಾವ ಜನ್ಯ ಗುಣಗಳಿಂದಲೋ ಏನೋ ಆತನಿಗೂ ನಾಯಿಗಳೆಂದರೆ ತುಂಬಾ ತುಂಬಾ ಇಷ್ಟ. ಈತನ ಬಳಿ ‘ಸೇಂಟ್‌ ಬರ್ನಾರ್ಡ್‌’ ತಳಿಯ ನಾಯಿಯಾಂದಿತ್ತು. ಸ್ವಿಜರ್‌ಲ್ಯಾಂಡ್‌ ಹಾಗೂ ಇಟಲಿ ನಡುವಿನ ಆಲ್ಫ್‌ ಪರ್ವತ ಶ್ರೇಣಿಗಳಲ್ಲಿ ಸಾವಿರಾರು ಪರ್ವತಾರೋಹಿಗಳನ್ನು ರಕ್ಷಿಸಿದ ಖ್ಯಾತಿ ಈ ತಳಿಯದು. ಈ ನಾಯಿ ಹೊರಕ್ಕೆ ಬಿದ್ದರೆ ಸಾಕು ಹೋರಾಟಗಾರನ ಧಿಮಾಕು. ಮನೆಯಾಳಗೆ ಬಂದರೆ ಕುಂಯ್‌ ಕುಂಯ್‌ ಕುನ್ನಿಮರಿ. ಮನುಷ್ಯರ ಮೈ ಸದಾ ತಾಕುತ್ತಿರಬೇಕು. ಮನೆ ಯಜಮಾನ ಮೈ ಹೊಸೆದರೆ ಪರಮಾನಂದ. ಒಂದು ದಿನ ಆತ ನಾಯಿಯಾಂದಿಗೆ ಹೋಗುತ್ತಿದ್ದಾಗ ಅಚಾನಕ್‌ ಆಗಿ ಅದು ತಪ್ಪಿಸಿಕೊಂಡಿತು. ಎಲ್ಲಿ ಹುಡುಕಿದರೂ ಸಿಗಲೇ ಇಲ್ಲ. ಎಲ್ಲೋ ಸತ್ತು ಹೋಗಿರಬೇಕು ಅಥವಾ ಯಾರೋ ಎತ್ತಿಕೊಂಡು ಹೋಗಿರಬೇಕು ಎಂದು ಭಾವಿಸಿದ ರಾವ್‌ ಕೆಲದಿನ ಸುಮ್ಮನಾದ. ಮಕ್ಕಳಿಲ್ಲದ ಸಂಸಾರದಲ್ಲಿ ನಾಯಿ ಅವನಿಗೆ ಒಂದಷ್ಟು ಸಮಾಧಾನ ಕೊಟ್ಟಿತ್ತು.

ಅದೇ ಈಗ ಇಲ್ಲ. ಹತ್ತಾರು ವರ್ಷಗಳ ನಂತರ ಆತ ಆಸ್ಥಾನದ ಸೇವೆಯಿಂದ ನಿವೃತ್ತನಾದ. ಹೆಂಡತಿಯೂ ಸತ್ತು ಹೋಗಿದ್ದಳು. ಈಗ ಇವನಿಗೆ ಶುರುವಾಯಿತು ಶ್ವಾನ ವಿರಹ. ತನ್ನ ನಾಯಿಯೇಕೆ ಬದುಕಿರಬಾರದೆನಿಸಿತು. ನಾಯಿಯ ಗುಣಲಕ್ಷಣ, ಚರ್ಯೆ, ತಳಿ ಇತ್ಯಾದಿ ವಿವರಗಳನ್ನು ಕೊಟ್ಟು ಈ ನಾಯಿಯೆನ್ನು ತಂದುಕೊಟ್ಟವರಿಗೆ ತನ್ನೆಲ್ಲಾ ಆಸ್ತಿಯನ್ನು ಕೊಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ. ಸಿನಿಮೀಯ ಎಂಬಂತೆ ವಾರಂಗಲ್‌ ಜಿಲ್ಲೆಯ ಹನುಮಕೊಂಡ ಸಮೀಪದ ರೈತನೊಬ್ಬ ಈ ಜಾಹೀರಾತು ನೋಡಿದ.

ಹತ್ತು ವರ್ಷಗಳ ಹಿಂದೆ ರೈತ ಹೈದರಾಬಾದ್‌ಗೆ ಹೋದಾಗ ಮಳೆಯಲ್ಲಿ ತೊಪ್ಪೆಯಾಗಿ ನೆನೆಯುತ್ತಾ ಬಿದ್ದಿದ್ದ ನಾಯಿಯನ್ನು ಕಂಡ. ಇದ್ದಿಲ ಅಂಗಡಿಯ ಮುಂದೆ ತಾನೂ ತೊಯ್ದು ಚಳಿ ಕಾಯಿಸುತ್ತಾ ಕೂತಿದ್ದಾಗ ನಾಯಿಯೂ ಅಲ್ಲಿಗೆ ಬಂದಿತ್ತು. ವಾರಸುದಾರರು ಯಾರೂ ಇಲ್ಲದ್ದರಿಂದ ಮುದ್ದಿನಿಂದ ಸಾಕಿದ. ಶೀತ ಪ್ರದೇಶದಲ್ಲಿ ಬದುಕುವ ಈ ತಳಿಯ ನಾಯಿ ಹನುಮಕೊಂಡದ ಬಿರುಬಿಸಿಲಿಗೆ ಒಗ್ಗಿಕೊಂಡಿತ್ತು. ಈತನ ಸಂಸಾರದ ಒಬ್ಬ ಸದಸ್ಯನಂತಾಗಿತ್ತು. ನಾಯಿಯನ್ನು ಕಂಡರೆ ಈ ರೈತನಿಗೆ ಇಷ್ಟವಾದರೂ ಅವುಗಳಿಗಾಗಿ ರೋದಿಸುವ ಅಳುಮುಂಜಿಯಲ್ಲ.

ಸರಿ, ಜಾಹೀರಾತು ನೋಡಿದವನೇ ರಾವ್‌ ಮನೆ ಹುಡುಕಿಕೊಂಡು ನಾಯಿಯಾಂದಿಗೆ ಹೈದರಾಬಾದ್‌ಗೆ ಹೊರಟ. ಈ ರೈತನಿಗೆ ಹತ್ತಾರು ವರ್ಷಗಳಿಂದ ಸಾಕಿದ ನಾಯಿಯನ್ನು ಅದರ ಮೂಲ ಒಡೆಯನಿಗೆ ಕೊಟ್ಟು ಆತ ಕೊಡುವ ಬಹುಮಾನ ಪಡೆಯುವ ಮಹದಾಸೆ.

ಮನೆಯ ಅಂಗಳದಲ್ಲಿ ನಿಂತ ತನ್ನ ನಾಯಿ ಕಂಡು ರಾವ್‌ಗೆ ಅಚ್ಚರಿ. ಕಳೆದು ಹೋದ ಅಮೂಲ್ಯ ವಸ್ತು ಸಿಕ್ಕಿದ ಮಹದಾನಂದ. ನಾಯಿಯನ್ನು ಹಿಡಿದು ಬಿಗಿದಪ್ಪಿ ಮುದ್ದಿಸಿದ. ಖುಷಿಯಿಂದ ಕಣ್ಣೀರುಗರೆದ.

ಆದರೆ ನಾಯಿ ಮಾತ್ರ ಮನೆಯಾಳಗೆ ಅಡಿಯಿಡುತ್ತಿಲ್ಲ. ಗೊಂಚಲು ಹಾಕಿ ಹಿಡಿದ ರೈತನ ಕಾಲನ್ನು ಬಿಡುತ್ತಿಲ್ಲ. ನಾಯಿಯನ್ನು ಅಲ್ಲಿಯೇ ಬಿಟ್ಟು ನಾಲ್ಕು ದಿನಗಳ ನಂತರ ಬರುವುದಾಗಿ ರೈತ ಮನೆಯ ಹಾದಿ ಹಿಡಿದರೆ, ಈ ನಾಯಿಯದು ಒಂದೇ ಸಮನೆ ಅಳು. ದಿನವಿಡೀ ಕಣ್ಣೀರು. ಸಾಕಿದ ಒಡೆಯನ ಅಗಲಿಕೆಯ ಆರ್ತನಾದ. ಊಟ, ನೀರು ಸೇವಿಸದೇ ಉಪವಾಸ ಮುಷ್ಕರ. ರಾವ್‌ಗೆ ತಲೆಕೆಟ್ಟು ಹೋಯಿತು. ಎಲ್ಲಿಯಾದರೂ ಇರಲಿ, ಆದರೆ ಅದು ಚೆನ್ನಾಗಿರಲಿ ಎಂದು ಭಾವಿಸಿ ಹನುಮಕೊಂಡಕ್ಕೆ ಹೋಗಿ ತನ್ನ ನಾಯಿಯನ್ನು ಒಲ್ಲದ ಮನಸ್ಸಿನಿಂದ ಬಿಟ್ಟು ಬಂದ. ರಾವ್‌ ಮನೆಯಲ್ಲಿನಾಯಿ ಸಕಲ ಸೌಲಭ್ಯಗಳನ್ನು, ಪೇಟೆಯ ಶೋಕಿಗಳನ್ನೂ ಬದಿಗೊತ್ತಿ ಸಾಕಿ ಸಲಹಿದ ಧಣಿಯ ಮೇಲಿನ ಪ್ರೀತಿಯಿಂದ ಅವನ ಗುಡಿಸಲಿನತ್ತ ಹೆಜ್ಜೆ ಹಾಕಿತು.

ಇತ್ತೀಚೆಗೆ ಜನತಾದಳ ನಾಯಕ ಭೈರೇಗೌಡ ಸತ್ತು ಶವವಾಗಿ ಮಲಗಿದ್ದರೆ ಅವರ ಸಾಕು ನಾಯಿ ಬ್ಲೆಂಡಾ ಅಕ್ಷರಶಃ ಕಣ್ಣೀರು ಹಾಕುತ್ತಾ ಯಜಮಾನನ ಕಳೇಬರದ ಮುಂದೆ ಕುಳಿತ ದೃಶ್ಯ ಹೃದಯ ಕಲುಕುವಂಥದು. ಧಣಿಯ ಸಾವಿನ ನಂತರ ಮಂಕಾಗಿ ಕುಳಿತ ಬ್ಲೆಂಡಾ ಅಂತ್ಯ ಸಂಸ್ಕಾರದ ಸಮಯದಲ್ಲಿ ಚಿತೆಯ ಮುಂದೆ ಕುಕ್ಕರುಗಾಲಲ್ಲಿ ಕುಳಿತು ಆಕಾಶಕ್ಕೆ ಮುಖ ಹಾಕಿ ಗೋಳೋ ಎಂದು ಅಳುತ್ತಿತ್ತು. ಐದು ದಿನಗಳಾದರೂ ಆಹಾರ ಸೇವಿಸದ ಬ್ಲೆಂಡಾಗೆ ಮಾತ್ರ ಧಣಿಯ ಸಾವು ‘ತುಂಬಲಾರದ ನಷ್ಟ’ ವಾಗಿತ್ತು.

ಬೆಂಗಳೂರಿನ ಅಶೋಕ ಪಿಲ್ಲರ್‌ ಸನಿಹ ‘ಚಂದ್ರಿಕ’ ಎಂಬ ಹೆಸರಿನ ದೊಡ್ಡ ಮನೆಯಿದೆ. ಅಲ್ಲಿ ಸಾಕಿದ ನಾಯಿಗಳ ಮಧುರ ಸ್ಮೃತಿಗಾಗಿ, ಪ್ರೀತಿಯ ಕುರುಹಾಗಿ ಕಟ್ಟಿಸಿದ ಸಮಾಧಿಗಳು ಕಾಣುತ್ತವೆ. ಇಳಿವಯಸ್ಸಿನ ಮನೆಯಾಡತಿ ತಾರಾ ರಾವ್‌ ತಮ್ಮ ಜೀವದಂತೆ ಸಾಕಿದ ನಾಯಿಗಳ ನೆನಪಿನ ದ್ಯೋತಕವಾಗಿ ಈ ಸಮಾಧಿ ಅವರ ಮನದಲ್ಲಿ ಸಾವಿರ ಪ್ರತಿಬಿಂಬಗಳನ್ನು ಮೂಡಿಸುತ್ತವೆ. ಮಕ್ಕಳಿಲ್ಲದ ಅವರ ಪಾಲಿಗೆ ನಾಯಿಯೇ ಜೀವಸೆಲೆಯಾಗಿತ್ತು.

ಮೈಸೂರಿನ ಮಾನಸಗಂಗೋತ್ರಿಯ ಆವರಣ, ಜಯಲಕ್ಷ್ಮೀ ವಿಲಾಸ ಅರಮನೆಯತ್ತ ಕಣ್ಣು ಹಾಯಿಸಿ. ಬಬಿ, ಕೋಕಿ, ಟಾಮ್‌, ಮಿಕ್ಕಿ, ಫಿಫಿ, ಅಲೆಗ್ಸಾಂಡರ್‌, ಮಿಟ್ಜಿ, ಮಮ್ಮಿ ಎಂದು ಬರೆದಿರುವ ಎಂಟು ಸ್ಮಾರಕಗಳು ಕಾಣುತ್ತವೆ. ಅವು ಚಾಮರಾಜ ಒಡೆಯರ ಮೊದಲ ಮಗಳು ರಾಜಕುಮಾರಿ ಜಯಲಕ್ಷ್ಮೀ ಅಮ್ಮಣ್ಣಿ ತಾವು ಸಾಕಿದ ನಾಯಿಗಳ ಸ್ಮರಣಾರ್ಥ ಕಟ್ಟಿಸಿದ ಸಮಾಧಿಗಳು, ಶಾಸನಗಳು ! ಪ್ರತಿ ದಿನ ಜಯಲಕ್ಷ್ಮಮ್ಮಣ್ಣಿ ಈ ಸ್ಮಾರಕದ ಮುಂದೆ ನಿಂತು ಅವನ್ನು ಚುಂಬಿಸಿ ಹೋಗುತ್ತಿದ್ದರಂತೆ.

ಯಜಮಾನ ಪ್ರವಾಸಕ್ಕೆ ಹೋದಾಗ ವಿರಹ ತಾಳಲಾರದೆ ವಾಸನೆ ಹಿಡಿದು ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಓಡಿ ಹೋದ ನಾಯಿ, ಯಜಮಾನನ ಸಾವಿಗೆ ದುಃಖಿಸಿ ಊಟ ತಿಂಡಿ ಬಿಟ್ಟು ಉಪವಾಸ ಬಿದ್ದು ಸತ್ತ ನಾಯಿ, ಹಿಂಬದಿ ಕಾಲುಗಳೆರಡನ್ನೂ ಎತ್ತಿ ಯಜಮಾನನನ್ನು ಛೇಡಿಸುವ ಸೀಲಿಹ್ಯಾಮ್‌ ಟೆರ್ರಿಯರ್‌ ತಳಿ ನಾಯಿ, ಏನು ಹಾಕಿದರೂ ತಿಂದು ಬಿದ್ದುಕೊಂಡು ನಿಯತ್ತಾಗಿರುವ ನಮ್ಮ ನಿಮ್ಮ ಮನೆ ಕಂಟ್ರಿ ನಾಯಿ.... ನಮ್ಮ ಸುತ್ತ ನಮಗೆ ಗೊತ್ತಾಗದಂತೆ ಅದೆಂಥ ಸುಂದರ ಪರಿಸರ ನಿರ್ಮಿಸುತ್ತವೆ ನೋಡಿ.

ಇದೆಂಥಾ ಪ್ರೇಮವಯ್ಯಾ ?

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more