• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನಸ್ಸೆಂಬ ಮಾಯಾವಿಯೇಕೆ ನೆನಪುಗಳ ಮೇಲೆ ಸವಾರಿ ಮಾಡುತ್ತೆ ?

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಹೆಜ್ಜೆಗಳು ಎಂದಿಗೂ ಅಳಿಸುವುದಿಲ್ಲ !

ಅನೇಕ ವರ್ಷಗಳ ಹಿಂದೆ ನಡೆದಾಡಿದ ಹೆಜ್ಜೆಗಳ ಮೇಲೆ ಕದ ತಟ್ಟಿದಂತೆ. ಕತೆಗಳ ಕಪಾಟು ತೆರೆದಂತೆ. ಘಟನೆಗಳಿಗೆ ಘಂಟಸಾಲಾನ ದನಿಯಾದಂತೆ. ಹರಿದು ಹೋದ ನದಿಯ ನೀರಿನ ಹೆಜ್ಜೆ ಹುಡುಕಿದಂತೆ. ಕಳೆದು ಹೋದ ಸ್ಮೃತಿಗಳನ್ನು ಕೆದಕಿ ತೆಗೆದಂತೆ.

ಎಷ್ಟೋ ವರ್ಷಗಳ ಂತರ ಅಂದಿಟ್ಟ ಹೆಜ್ಜೆಗಳ ಮೇಲೆ ಹೆಜ್ಜೆಯಿಡುತ್ತಿದ್ದರೆ ನೆನಪುಗಳು ಜಾತ್ರೆ ಹೊರಟಿರುತ್ತವೆ. ಒಂದೊಂದು ದೃಶ್ಯವೂ ಮೆರವಣಿಗೆಯಲ್ಲಿ ಸಿಂಗರಿಸಿ ನಿಂತು ಜಾಗಟೆ ಬಾರಿಸುತ್ತಿರುತ್ತದೆ. ಕಳೆದು ಹೋದ ದಿನಗಳು ಕೊರಳಿಗೆ ಆತು ಪಿಸುಮಾತಿಗೆ ಪಲ್ಲವಿಯಿಟ್ಟಿರುತ್ತದೆ.

ಮೊನ್ನೆ ಧಾರವಾಡದ ಕರ್ನಾಟಕ ಕಾಲೇಜು ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯದ ಹಸಿರು ಕ್ಯಾಂಪಸ್ಸಿನಲ್ಲಿ ನಡೆಯುತ್ತಿದ್ದರೆ ನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗಿದ್ದೆ. ಮನಸ್ಸು ಹದಿನೇಳು ವರ್ಷಗಳ ಹಿಂದೆ ಜಾರಿತ್ತು. ಅಂದು ನಡೆದಾಡಿದ ಹೆಜ್ಜೆಗಳನ್ನು ಹುಡುಕುತ್ತಿತ್ತು. ಕ್ಯಾಂಪಸ್ಸಿನ ಕಟ್ಟಡಗಳಲ್ಲಿ, ಕ್ಯಾಂಟೀನ್‌ನಲ್ಲಿ, ಗ್ರಂಥಾಲಯದ ಪುಸ್ತಕದೊಳಗಿನ ಹಾಳೆಗಳಲ್ಲಿ, ಕ್ಲಾಸ್‌ ರೂಮಿನ ಬೆಂಚುಗಳಲ್ಲಿ ಹರಟೆ ಕಟ್ಟೆಗಳಲ್ಲಿ, ನಿಡಿದಾದ ಕಾಲುದಾರಿಗಳಲ್ಲಿ, ಸೈಕಲ್‌ ಸ್ಟಾಂಡಿನಲ್ಲಿ, ಹಾಸ್ಟೆಲುಗಳ ಬೆಚ್ಚನೆಯ ರೂಮುಗಳಲ್ಲಿ , ಹಸಿ ಹಸಿ ಯೋಚನೆಗಳಲ್ಲಿ ಮುಸಿ ಮುಸಿ ನಗೆಯಲ್ಲಿ ಕಳೆದು ಹೋದ ದಿನಗಳು ಅಂದು ಒತ್ತಟ್ಟಿಗೆ ಸೇರಿದ್ದವು. ಪತ್ರಿಕೋದ್ಯಮ ವಿಭಾಗದಲ್ಲಿ ಭಾವಿ ಪತ್ರಕರ್ತರೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದಾಗ, ಮನಸ್ಸು ಂದು ಇದೇ ವಿದ್ಯಾರ್ಥಿಯಾಗಿದ್ದಾಗಿನ ಯೋಚನೆ, ಕ್ಷಣಗಳನ್ನು ಅರಸುತ್ತಿತ್ತು. ಕೆಲವೇ ಕೆಲವು ಗಂಟೆಗಳ ಅವಧಿಗೆ ಹೋದರೂ, ಮನಸ್ಸು ಅಲ್ಲಿಯೇ ತಳವೂರುವುದಕ್ಕಾಗಿ ಹಾತೊರೆಯುತ್ತಿತ್ತು. ಕಾರಣ ಹೆಜ್ಜೆಗಳೆಲ್ಲಾ ನಡೆದಾಡುತ್ತಾ ಮನಸ್ಸಿನೊಳಗೆ ಬಂದು ಮುತ್ತಿಕೊಂಡಿದ್ದವು.

ಅಂದು ವಾಜಪೇಯಿಗೆ ಆಗಿದ್ದೂ ಅದೇ. ಗ್ವಾಲಿಯರ್‌ ಶಿಂಧೆ ಛಾವಣಿ ಪ್ರದೇಶದ ಕಮಲ್‌ಸಿಂಹ ಬಾಗ್‌ನ ಚಿಕ್ಕ ಮನೆಯ ಮುಂದೆ ನಿಂತು ಪ್ರಧಾನಿ ವಾಜಪೇಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸುಮಾರು ಅರುವತ್ತು ವರ್ಷಗಳ ನಂತರ ಅಂದು ವಾಜಪೇಯಿ ತಾವು ಹುಟ್ಟಿದ ಮನೆಯ ಮುಂದೆ ನಿಂತಿದ್ದರು. ಬಾಲ್ಯದ ದಿನಗಳನ್ನು ಕಳೆದ ವಠಾರದ ಮೂಲೆಯಲ್ಲಿ ನಿಂತು ಚಿಕ್ಕ ಮಗುವಿನಂತೆ ಉಮ್ಮಳಿಸುತ್ತಾ ಅಳುತ್ತಿದ್ದರು. ಅವರ ಸುತ್ತ ಇದ್ದ ಜನರೆಲ್ಲ ಮೂಕವಿಸ್ಮಿತರಾಗಿ ಗರ ಬಡಿದವರಂತೆ ನಿಂತಿದ್ದರು. ವಠಾರದ ಒಂದು ಪಾರ್ಶ್ವದಲ್ಲಿ ಬಚ್ಚಲುಮನೆಯಿತ್ತು. ಅಲ್ಲಿ ನಿಂತಾಗ ಅವರಿಗೆ ಪುನಃ ನೆನಪಿನ ಉಬ್ಬರ. ತಾಯಿ ಶೀಗೇಪುಡಿ ಸ್ನಾನ ಮಾಡಿಸುತ್ತಿದ್ದ ಅಂದಿನ ದಿನಗಳು ಕಣ್ಣಿಗೆ ಕಟ್ಟಿದಂತಾಗಿ ನೆನಪುಗಳ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ನನ್ನ ಅಪ್ಪ ಇಲ್ಲಿಯೇ ಕುಳಿತುಕೊಳ್ಳುತ್ತಿದ್ದರು, ನಾನು ಇಲ್ಲಿ ಮಲಗುತ್ತಿದ್ದೆ. ಆಟವಾಡುತ್ತಿದ್ದ ಅಂಗಳ ಇದಾಗಿತ್ತು. ಓ ಅಲ್ಲಿ ಆ ಅಂಗಡಿಯಿದೆಯಲ್ಲ, ಅಲ್ಲಿ ಅಪ್ಪ ಸಾಯಂಕಾಲ ಪ್ರವಚನ ಮಾಡುತ್ತಿದ್ದರು. ಅಣ್ಣನ ಮುಂಜಿ ಇಲ್ಲೇ ಆಗಿತ್ತು, ಈ ಗಿರಣಿ ಇರುವ ಜಾಗ ಇದೆಯಲ್ಲ ಅಲ್ಲಿ ನನ್ನಮ್ಮ ಬಿದ್ದು ಪೆಟ್ಟು ಮಾಡಿಕೊಂಡಿದ್ದಳು. ಈ ಅಂಗಳದಲ್ಲಿ ನಾನು ಅವೆಷ್ಟು ಬಾರಿ ಕುಣಿದು ಕುಪ್ಪಳಿಸಿದ್ದೇನೇನೋ ? ಎಂದು ವಾಜಪೇಯಿ ಪುಟ್ಟ ಮಗುವಿನಂತೆ ಅಮಾಯಕರಾಗಿ ಬಣ್ಣಿಸುತ್ತಿದ್ದರು. ತಂದೆಯ ಭಾವಚಿತ್ರದ ಮುಂದೆ ಹತ್ತು ನಿಮಿಷ ನಿಂತು ಧ್ಯಾನಿಸುತ್ತಾ ಬಾಲ್ಯದ ಕ್ಷಣಗಳೊಲಗೆ ಲೀನವಾಗಿದ್ದರು. ‘ಭಾವನಾ ಭಾವನೋಕಿ ಸಾಥ್‌ ಮಿಲಾ, ಜೀವನ್‌ ಬದಲಾ’ ಎಂದು ಪದ್ಯ ಬರೆದರು. ಜತೆಗಿದ್ದವರನ್ನು ಸುತ್ತಲೂ ಕುಳ್ಳಿರಿಸಿಕೊಂಡು ಬಾಯ್ತುಂಬಾ ಹರಟೆ ಹೊಡೆದರು. ತಾವು ಪ್ರಧಾನಿ ಎಂಬುದನ್ನೂ ಮರೆತು ಕೇಕೇ ಹೊಡೆದು ಆನಂದಿಸಿದರು. ನೆನಪಿನ ಕಾರಂಜಿ ಪುಟಿಯುತ್ತಿದ್ದರೆ ಮನಸ್ಸೆಲ್ಲ ತೇವ ತೇವ.

ಇದಾಗಿ ಕೆಲ ದಿನಗಳ ನಂತರ ವಾಜಪೇಯಿ ಉತ್ತರ ಪ್ರದೇಶದ ಬಾಹ ತಹಸೀಲು ಪ್ರದೇಶದ ಯಮುನಾ ತೀರದಲ್ಲಿರುವ ಬಟೇಶ್ವರ ಗ್ರಾಮಕ್ಕೆ ಹೋದಾಗಲೂ ವಾಜಪೇಯಿ ಇದೇ ರೀತಿ ನೆನಪುಗಳನ್ನು ಚಪ್ಪರಿಸುತ್ತಾ , ಆಸ್ವಾದಿಸುತ್ತಾ ಅರ್ಧ ದಿನ ಕಳೆದಿದ್ದರು. ಮಹದೇವ ಮಂದಿರ, ಆಲದ ಮರ, ಪಾರ್ಶ್ವನಾಥ ಬೀದಿ, ಜಗನ್ನಾಥ ಪಡಸಾಲೆ, ಕೀರ್ತಿನಾಥ ವೈದಿಕರ ಸಂಸ್ಕೃತ ಶಾಲೆ, ಹರಿನಾರಾಯಣ ಕೀರ್ತನ ಸಭಾದ ಹೆಬ್ಬಾಗಿಲಿನಲ್ಲಿ ನಿಂತು ತಮ್ಮ ಹೆಜ್ಜೆಗಳನ್ನು ಹುಡುಕುತ್ತಿದ್ದರು. ವಾಜಪೇಯಿ ಅವರ ಪೂರ್ವಿಕರು ಮೂಲತಃ ಈ ಗ್ರಾಮದವರು. ತಮ್ಮ ತಾತನ ಜತೆ ಈ ಊರಿಗೆ ಅವರು ಚಿಕ್ಕವರಾಗಿದ್ದಾಗ ಆಗಾಗ ಬರುತ್ತಿದ್ದರು. ಯಮುನೆಯ ತೀರದಲ್ಲಿ ತಾತನ ಜತೆ ಸ್ನಾನ ಮಾಡುತ್ತಿದ್ದರು. ‘ನೋಡಿ ನಾನು ಅಂದು ಜಾರಿ ಬಿದ್ದ ಬಂಡೆಯ ಸುತ್ತ ಎಷ್ಟೊಂದು ಪಾಚಿ ಕಟ್ಟಿಕೊಂಡಿವೆ. ನನಗೆ ಈ ಪಾಚಿಗಳಿಗಾದಷ್ಟೇ ವರ್ಷವಾಯಿತು. ಅವು ಜಾರುತ್ತವೆ. ಆದರೆ ನಾನು ಜಿಗುಟು. ’ ಎಂದು ಚಟಾಕಿ ಹಾರಿಸಿದ್ದರು. ಬಟೇಶ್ವರ ಗ್ರಾಮದಲ್ಲಿ ಕುಳಿತು ಬನ್ನಿ ಮನದ ಗೋಜಲು ಬಿಜಿಸೋಣ। ಯಮುನಾ ತೀರದ ಮರಳು ಗುಡ್ಡೆಗಳು। ಹುಲ್ಲು ಹಾಸಿನ ದಂಡೆಯ ಮೇಲೆ ।ಗೋಮಯದಿಂದ ಸಾರಿಸಿದ ಅಂಗಳ। ತುಳಸಿ ಗಿಡ, ಗಂಟೆಯ ನಿನಾದ ।ಅಮ್ನ ಬಾಯಿಯಿಂದ ರಾಮಾಯಣದ । ರಸಗವಳ ಸವಿಯೋಣ। ಬನ್ನಿ ಮನದ ಗೋಜಲು ಬಿಡಿಸೋಣ। ಅಂತ ಕವನ ಬರೆದರು.

ಈ ನೆನಪುಗಳ ಪ್ರವಾಹವಿದೆಯಲ್ಲ ಅದರ ಸುಳಿಗೆ ಸಿಲುಕಿದರೆ ಸಾಕು ತತ್ತರ. ಅದು ಬೀಸಿ ಹೋಗುವ ಹೊಡೆತಗಳಿವೆಯಲ್ಲ, ಅವನ್ನು ತಡೆದುಕೊಳ್ಳುವುದು ಕಷ್ಟ. ನೆನಪುಗಳೆಂಬ ಹೆಜ್ಜೆ ಮೇಲೆ ನಿಂತರೆ ಸಾಕು ಮೈಮನಗಳಲ್ಲಿ ರೋಮಾಂಚನದ ರವರವ.

ಮುಷರ್ರಫ್‌ನಂಥ ನಿರ್ದಯಿ ಕೂಡ ಅಂದು ಹೆಗಲಿಗೆ ರಾಷ್ಟ್ರ ಲಾಂಛನ ತೊಟ್ಟಿದ್ದೇನೆಂಬ ಪರಿವೆಯಿಲ್ಲದೇ, ಮಿಲಿಟರಿ ದಂಡನಾಯಕ ಎಂಬುದರ ಗೊಡವೆ ಮರೆತು ಪುಟ್ಟ ಮಗುವಿನಂತೆ ಸಣ್ಣ ದನಿಯಲ್ಲಿ ಬಿಕ್ಕುತ್ತಿದ್ದ. ಕಂಬನಿಗಳು ಫಳ್‌ ಎಂದು ತೊಟ್ಟಿಕ್ಕುತ್ತಿದ್ದವು. ಎರಡು ವರ್ಷಗಳ ಹಿಂದೆ ದಿಲ್ಲಿಗೆ ಬಂದಾಗ ತಾನು ಹುಟ್ಟಿದ್ದ ಮೊಹಲ್ಲಾದ ಶಿಥಿಲ ಕಟ್ಟಡದ ಗೋಡೆಗೊರಗಿ ಯಾರಿಗೂ ಕಾಣಬಾರದೆಂದು ಮುಖ ಕೈ ಹಚ್ಚಿಕೊಂಡು ಅಳುತ್ತಿದ್ದ. ರೆಪ್ಪೆಗೆ ಆವರಿಸಿದ ತೇವ ಕೆನ್ನೆಗೆ ಹರಿದಿತ್ತು. ಹುಟ್ಟಿದ ಮನೆ ಆಡಿದ ಅಂಗಳ, ಓಡಾಡಿದ ಹಜಾರದಲ್ಲಿ ಕೆಲ ಕಾಲ ಮೆಲುಕು ಹಾಕುತ್ತಾ ಕಳೆದ ಮುಷರ್ರಫ್‌ ತಾನೊಬ್ಬ ರಾಷ್ಟ್ರಾಧ್ಯಕ್ಷ ಎಂಬುದನ್ನು ಸಹ ಮರೆತು ಅಲ್ಲಿಯೇ ಇದ್ದ ಮಕ್ಕಳನ್ನು ಗೋಲಿಯಾಟಕ್ಕೆ ಕರೆದ. ಚಿಣ್ಣಿದಾಂಡನ್ನು ಬೀಸಿದ. ತ್ತು..ತ್ತು...ತ್ತು... ಕಬಡ್ಡಿ ಕಬಡ್ಡಿ ಎಂದ. ತನ್ನ ತಾಯಿಯ ವಾರಿಗೆಯ ಹೆಂಗಸರನ್ನು ಕರೆದು ನನ್ನ ಗುರುತು ಪತ್ತೆ ಹಿಡೀತೀರಾ ? ಎಂದು ಕೇಳಿದ ಅಂದಿನ ನೆನಪುಗಳಿಗೆ ಅಲ್ಲಲ್ಲಿ ಮರೆವಿನ ಪೊರೆ ಕಟ್ಟಿಕೊಳ್ಳುತ್ತಿದ್ದರೂ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದ. ತಾಯಿ ಬೇರನ್ನು ಹುಡುಕಲು ಹೆಣಗುತ್ತಿದ್ದ.

ಭಾರತ ಪ್ರವಾಸ ಮುಗಿಸಿ ವಾರಪತ್ರಿಕೆ ವರದಿಗಾರನ ಜತೆ ಕುಳಿತು ನೆನಪುಗಳನ್ನು ಹರಡಿಕೊಂಡು ಗದ್ಗದಿತನಾಗಿದ್ದ. ‘ನನ್ನ ಭಾರತಯಾತ್ರೆ ವಿಫಲವಾಗಿರಬಹುದು. ಮೈತ್ರಿ ಮುಗ್ಗರಿಸಿ ಬಿದ್ದಿರಬಹುದು. ಆದರೆ ನಾನು ಅಮೂಲ್ಯ ನೆನಪುಗಳನ್ನು ಆರಿಸಿಕೊಂಡು ಬಂದೆ. ಹೆಜ್ಜೆಗಳನ್ನು ಎತ್ತಿಕೊಂಡು ಬಂದೆ. ಅದಕ್ಕಿಂತ ಹೆಚ್ಚಿನದನ್ನು ನಾನು ತರಲು ಸಾಧ್ಯವೇ ಇರಲಿಲ್ಲ. ಈ ಕಾರಮಕ್ಕೆ ಈ ಯಾತ್ರೆ ಅವಿಸ್ಮರಣೀಯ’ ಎಂದು ಹೇಳಿದ. ಅದು ನಿಜವೂ ಆಗಿತ್ತು. ಮುಷರ್ರಫ್‌ಗೆ ಮಾತ್ರ ಅಲ್ಲ ಅವೆಷ್ಟೋ ಲಕ್ಷ ಪಾಕಿಸ್ತಾನಿಗಳಿಗೆ ಇಂದಿಗೂ ಭಾರತವೆಂದರೆ ರೋಮಾಂಚನವಾಗುವುದು, ಪುಳಕವೆಂಬ ಸೆಳಕು ಚಕ್ರತೀರ್ಥದಂತೆ ಗಿರಕಿ ಹಾಕುವುದು, ಒಂದು ಮಧುರ ಸ್ಮೃತಿ ಬೀಸಿ ಹೋಗುವುದು ಇದೇ ಕಾರಣಕ್ಕೆ.

ಲಂಡನ್‌ನಲ್ಲಿ ನಡೆದ ಔತಣಕೂಟವೊಂದರಲ್ಲಿ ಭೌತ ವಿಜ್ಞಾನಿ ಸಿ. ವಿ. ರಾಮನ್‌ ಅವರುಭಾಗವಹಿಸಿದ್ದರಂತೆ. ಅದೇ ಕೂಟದಲ್ಲಿ ಆಗ ತಾನೆ ಬ್ರಿಟನ್‌ನ ಪ್ರಧಾನಿಯಾಗಿ ಮಾಜಿ ಆಗಿದ್ದ ವಿನ್‌ಸ್ಟನ್‌ ಚರ್ಚಿಲ್‌ ಕೂಡ ಭಾಗವಹಿಸಿದ್ದರಂತೆ. ರಾಮನ್‌ - ಚರ್ಚಿಲ್‌ ಮುಖಾ ಮುಖಿಯಾದರಂತೆ. ಚರ್ಚಿಲ್‌ ರಾಮನ್‌ ಅವರನ್ನು ವಿಚಾರಿಸುತ್ತಾ ಅವರ ಊರು ಯಾವುದೆಂದು ಕೇಳಿದಾಗ ‘ಇಂಡಿಯಾ, ಕರ್ನಾಟಕ’ ಎಂದು ಹೇಳಿದರಂತೆ. ಕರ್ನಾಟಕದಲ್ಲಿ ಎಲ್ಲಿ ಎಂದು ಕೇಳಿದಾಗ, ರಾಮನ್‌ ‘ಬೆಂಗಳೂರು’ ಎಂದರಂತೆ. ‘ಹೌದಾ, ನಾನೂ ಸಹ ಚಿಕ್ಕಂದಿನಲ್ಲಿ ಬೆಂಗಳೂರಿನಲ್ಲಿಯೇ ಕೆಲ ಕಾಲ ಇದ್ದೆ. ಅಲ್ಲಿ ದಂಡು ಪ್ರದೇಶದಲ್ಲಿ’ ಎಂದು ಚರ್ಚಿಲ್‌ ಬಡಬಡಿಸಿದರಂತೆ. ಅದೆಷ್ಟು ಹೊತ್ತು ರಾಮನ್‌ ಅವರ ಕೈಗಳನ್ನು ಚರ್ಚಿಲ್‌ ಬಿಟ್ಟಿರಲೇ ಇಲ್ಲವಂತೆ. ತಾನು ಕೆಲ ಕಾಲ ಕಳೆದ ಊರಿನ ವ್ಯಕ್ತಿಯಾಬ್ಬ ಸಿಕ್ಕಿದಾಗ ಊರನ್ನೇ ಕಂಡಷ್ಟು ಖುಷಿಯಿಂದ ಬಾಯ್ತುಂಬಾ ಬೆಂಗಳೂರಿನ ಬಗ್ಗೆ ವಿಚಾರಿಸಿಕೊಂಡಿದ್ದರಂತೆ.

ನ್ಯೂಯಾರ್ಕ್‌, ವಾಷಿಂಗ್‌ಟನ್‌, ಲಂಡನ್‌, ಪ್ಯಾರಿಸ್‌ ಅಥವಾ ಮುಂಬಯಿ, ದಿಲ್ಲಿಯ ಗಲ್ಲಿಗಳಲ್ಲಿ ನಿಮ್ಮೂರಿನ ಪರಿಚಿತ ಮುಖ ಕಾಣಲಿ ಅಥವಾ ಅಪರಿಚಿತ ಮುಖದ ಪರಿಚಯವಾಗಲಿ ಅವರು ನಿಮ್ಮ ಮುಖಗಳಲ್ಲಿ ಅವರ ಹೆಜ್ಜೆಗಳನ್ನು ಹುಡುಕಲಾರಂಭಿಸುತ್ತಾರೆ. ನಿಮ್ಮ ಕಣ್ಣುಗಳ ಗುಡ್ಡೆಯಾಳಗೆ ಇಣುಕುತ್ತಾ ಅವರೂರನ್ನು ಶೋಧಿಸಲು ಶುರುವಿಡುತ್ತಾರೆ. ತದೇಕ ಚಿತ್ತದಿಂದ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತಾರೆ.

ಲಂಡನ್‌ನಲ್ಲಿ ಹಾಗೇ ಆಯಿತು. ಅಲ್ಲಿನ ಬೀದಿಗಳಲ್ಲಿ ಅಲೆಮಾರಿಯಂತೆ ಅಲೆಯುತ್ತಿದ್ದಾಗ ಮೈಸೂರಿನ ಗೋಪಾಲಕೃಷ್ಣ ರಾವ್‌ ಅವರ ಪರಿಚಯ ಅಚಾನಕ್‌ ಆಗಿ ಆಯಿತು. ಅವರು ಕಳೆದ ಹತ್ತು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಅದಕ್ಕಿಂತ ಮೊದಲು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದರು. ಲಂಡನ್‌ಗೆ ಹೋದ ಬಳಿಕ ಅವರು ವಾಪಸ್‌ ಬಂದಿಲ್ಲ. ಪರಿಚಯವಾಗುತ್ತಿದ್ದಂತೆ ನಾನೂ ರಾ.ರಾ. ನಗರದಲ್ಲಿರುವುದೆಂದು ಗೊತ್ತಾಗಿದ್ದೇ ತಡ ರಾವ್‌ ನಡವಳಿಕೆಯೇ ಬದಲಾಗಿಬಿಟ್ಟಿತು. ‘ನನ್ನ ಬೇರಿನ ಮೂಲದಿಂದ ಬಂದ ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗದಿದ್ದರೆ ಹೇಗೆ ? ಹೇಗಿದೆ ರಾ. ರಾ. ನಗರ ? ದೇವಸ್ಥಾನ ? ಆಲದ ಮರ ? ಮನೆಗಳು ಜೋರಾಗಿ ಬಂದಿರಬೇಕು ? ನಾನು ಹೋದಾಗ ಅಲ್ಲಿ ಮನೆಗಳೇ ಇರಲಿಲ್ಲ. ನಿಮ್ಮನ್ನು ನೋಡ್ತಾ ಇದ್ರೆ ರಾ. ರಾ. ನಗರಕ್ಕೆ ಹೋಗಿ ಬಂದಷ್ಟು ಖುಷಿಯಾಗ್ತಿದೆ. ಅಲ್ಲಿನ ಗಾಳಿ ನೀರನ್ನು ಸೇವಿಸಿದ ನಿಮ್ಮನ್ನು ನೋಡ್ತಾ ಇದ್ರೆ ಅದೆಷ್ಟು ಸಂತಸವಾಗುತ್ತಿದೆ ಗೊತ್ತಾ ?’ ಅಂತ ಜಿ. ಕೆ. ರಾವ್‌ ಆನಂದ ಬಾಷ್ಪಗಳನ್ನು ತುಂಬಿಕೊಂಡು ಭಾವುಕರಾಗಿ ಮಾತನಾಡುತ್ತಿದ್ದರು.

ಅನೇಕ ವರ್ಷಗಳಿಂದ ವಿದೇಶಗಳಲ್ಲಿರುವ ಸ್ನೇಹಿತರು ತಮ್ಮ ಊರಿನ ಜನರನ್ನು ಕಂಡು ಹುಚ್ಚು ಆನಂದದಿಂದ ಸಂಭ್ರಮಿಸುವುದನ್ನು ನೋಡಬೇಕು. ಗುರುತು, ಪರಿಚಯ, ಸಲುಗೆ, ಒಡನಾಟದ ಹಂಗಿಲ್ಲದೇ ನೆನಪುಗಳು ಸವಾರಿ ಹೊರಟಿರುತ್ತದೆ. ಊರಿಂದ ಬಂದ ನಾಲ್ಕು ಸಾಲಿನ ಪತ್ರದಲ್ಲಿ ಅದೆಷ್ಟೋ ಭಾವನೆಗಳು ! ಊರಿಂದ ತಂದ ಯಾರೋ ಕೊಟ್ಟ ಉಪ್ಪಿನಕಾಯಿಯ ಬಾಟಲಿ ತುಂಬಾ ನೆನಪುಗಳ ಹಾಸು. ಮನೆ ಮೇಲೆ ಏರ್‌ ಇಂಡಿಯಾ ವಿಮಾನ ತನ್ನಷ್ಟಕ್ಕೇ ಹಾರಿಹೋಗಲಿ ಆಗಲೂ ಮನಸ್ಸು ನೆನಪುಗಳ ಬೆನ್ನತ್ತಿ ಹಾರಿ ಹೋಗುತ್ತಿರುತ್ತದೆ.

ಅಮೆರಿಕದಲ್ಲಿ ನೆಲೆಸಿದ್ದ ಸ್ಪಾನಿಶ್‌ ಪತ್ರಕರ್ತ ಸಾಹಿತಿ, ಲಿಯೋ ಡಿ ಪುಜೋ ನೆನಪುಗಳ ಬೆಂಬತ್ತಿ ಹೋಗಿ ಜರಾಗೋಜಾ ಎಂಬ ಊರಿಗೆ ಸನಿಹದಲ್ಲಿರುವ ಹಳ್ಳಿಗೆ ಹೋಗುತ್ತಾನೆ. ಸುಮಾರು ಎಪ್ಪತ್ತೇಳು ವರ್ಷಗಳ ನಂತರ ತಾನು ಹುಟ್ಟಿದ ಊರಿಗೆ ಪುಜೋ ಬಂದಿದ್ದ. ಪುಜೋನ ತಂದೆ ವಾಸಿಸುತ್ತಿದ್ದ ಮನೆ ಶಿಥಿಲಗೊಂಡಿತ್ತು. ಮನೆಯ ಮುಂದೆ ನಿಂತ ಪುಜೋ ಅದೆಷ್ಟು ಭಾವಾವೇಶಕ್ಕೆ ಒಳಗಾಗಿದ್ದ ಅಂದರೆ ಆತನಿಗೆ ಮಾತೇ ಹೊರಡಲಿಲ್ಲ. ಮನೆಯ ಇಂಚಿಂಚು ಜಾಗವನ್ನು ಕೈಯಲ್ಲಿ ಮುಟ್ಟುತ್ತಾ ,ತಡವುತ್ತಾ ಪುಜೋ ಅಲ್ಲಿಯೇ ಉಸಿರುಬಿಟ್ಟಿದ್ದ. ಬಾಲ್ಯದಲ್ಲಿ ತೀರಿಹೋದ ತಾಯಿ, ದಟ್ಟ ದಾರಿದ್ರ್ಯ ತಂದೆಯ ಸ್ತ್ರೀ ವಾಂಛೆ, ತಮ್ಮನ ಅನಾರೋಗ್ಯ, ತಂಗಿಯ ಅಂಗವೈಕಲ್ಯ ಪುಜೋನ ಜ್ಞಾಪಕ ಶಾಲೆಯಲ್ಲಿ ಸರಿದಾಡುತ್ತಿದ್ದರೆ ಮನಸ್ಸು ಫ್ಲಾಶ್‌ಬ್ಯಾಕ್‌ನಲ್ಲಿ ಹೊರಟಿದ್ದರೆ ಆತ ಅಲ್ಲಿಯೇ ಕುಸಿದು ಬಿದ್ದಿದ್ದ. ನೆನಪುಗಳು ಆತನನ್ನು ನುಂಗಿ ಹಾಕಿದ್ದಿರಬೇಕು ! ಮೊನ್ನೆ ಧಾರವಾಡದ ಕ್ಯಾಂಪಸ್ಸಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ನೆನಪಿನ ದೃಶ್ಯಗಳು ದಾರಿಗೆ ಅಡ್ಡವಾಗಿ ನಿಂತಿದ್ದವು.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more