• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫುಟ್ಬಾಲ್‌ನಲ್ಲಿ ಮಾಹಿತಿ ಕಳಿಸಿದ ಬೇಹುಗಾರ ಫುಟ್‌ಪಾತಿಗೆ!

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಎರಡು ಸಂದರ್ಭಗಳಲ್ಲಿ ಮನುಷ್ಯನಿಗೆ ಅತೀವ ದುಃಖವಾಗುತ್ತದೆ- ದೇಶಕ್ಕಾಗಿ ಹೋರಾಡಿ, ಪ್ರಾಣ ತ್ಯಾಗಕ್ಕೂ ಮುಂದಾಗಿ, ಕೊನೆಗೆ ರಾಷ್ಟ್ರಕ್ಕಾಗಿ ಹೋರಾಡಿದವರ ಹೆಸರನ್ನು ಅಮೃತ ಶಿಲೆಯಲ್ಲಿ ಕೆತ್ತುವಾಗ ಬಿಟ್ಟು ಹೋದರೆ ತೀರಾ ದುಃಖವಾಗುತ್ತದೆ. ಅಮೃತಶಿಲೆಯಲ್ಲಿ ಕೆತ್ತಿದ್ದಾರೆನ್ನಿ. ಆದರೆ ಅದನ್ನು ತಪ್ಪಾಗಿ ( ವಿಶ್ವೇಶ್ವರಭಟ್‌ ಬದಲಿಗೆ ಹೆಗಡೆ ) ಕೆತ್ತಿದಾಗಲೂ ಬಹಳ ದುಃಖವಾಗುತ್ತದೆ.

ಈ ಎರಡೂ ವರ್ಗಗಳಿಗೆ ಸೇರುವವರು ಭಾರತೀಯ ಸೇನೆಯಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡುವ ಬೇಹುಗಾರರು!

ಇವರಿಗೆ ಮುಖವೂ ಇಲ್ಲ. ಗುರುತೂ ಪರಿಚಯವೂ ಇಲ್ಲ. ಇವರದ್ದೇ ಆದ ವ್ಯಕ್ತಿತ್ವವೂ ಇಲ್ಲ. ಹೇಳಿಕೊಳ್ಳಲು ಒಂದು ನಿಜವಾದ ಹೆಸರೂ ಇಲ್ಲ. ರಾಷ್ಟ್ರಕ್ಕಾಗಿ ಅಪರಿಮಿತ, ಅಪ್ರತಿಮ ಸೇವೆಯನ್ನು ಮಾಡಿಯೂ ಅನಾಮಧೇಯರಾಗಿಯೇ ಉಳಿವ ಹತಭಾಗ್ಯರಿವರು. ಮನೆ ಮಂದಿ, ಬಂಧು ಬಾಂಧವರ ಕಣ್ಣಲ್ಲಿಯೂ ತಿರಬೋಕಿಗಳಂತೆ ನಟಿಸುತ್ತಾ ದೇಶ ಸೇವೆಯ ಕೈಂಕರ್ಯಕ್ಕಾಗಿ ಅಜ್ಞಾತರಾಗಿಯೇ ಉಳಿವ ಭಾಗ್ಯಗೇಡಿಗಳಿವರು. ಶತ್ರು ದೇಶದಲ್ಲಿ ಆಯಕಟ್ಟಿನ ಜಾಗಗಳಲ್ಲಿ ಗುಮನಗುಸುಕರಾಗಿ ಕೆಲಸ ಮಾಡುತ್ತಾ ಅಲ್ಲಿನ ವಿದ್ಯಮಾನಗಳನ್ನೆಲ್ಲ ತನ್ನ ದೇಶಕ್ಕೆ ಮುಗಮ್ಮಾಗಿ ರವಾನೆ ಮಾಡುತ್ತಾ ದೇಶ Vigilance Soldiers never get recognition in the societyರಕ್ಷಣೆಯ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವವರು. ಕೊನೆಗೊಂದು ದಿನ ಶತ್ರು ಸೈನಿಕರ ಕೈಗೆ ಸಿಕ್ಕಿ ಹಾಕಿಕೊಂಡು ಪಡಬಾರದ ಯಾತನೆ, ಕಿರುಕುಳ, ಚಿತ್ರಹಿಂಸೆ ಅನುಭವಿಸಿ, ಹತ್ತಾರು ವರ್ಷಗಳ ಕಾಲ ಅಲ್ಲಿನ ಜೈಲಿನಲ್ಲಿ ಜೀವವನ್ನು ಸವೆಸಿ ದೈನೇಸಿಯಾಗಿ ಸ್ವದೇಶಕ್ಕೆ ಮರಳು ಯಾರಿಂದಲೂ ಪುಗಸಟ್ಟೆ ಶಹಬ್ಬಾಸ್‌ ಅಂತಾನೂ ಅನಿಸಿಕೊಳ್ಳದೇ, ಇಷ್ಟು ದಿನ ಎಲ್ಲಿ ತಲೆ ಮರೆಸಿಕೊಂಡಿದ್ದೆ ಎಂಬ ಕುಕ್ಕು ಪ್ರಶ್ನೆಗಳನ್ನು ಕೇಳಿಸಿಕೊಂಡು ಸಾರ್ವಜನಿಕವಾಗಿ ನಿಂದೆ, ಅವಮಾನಕ್ಕೊಳಗಾಗಿ, ಒಮ್ಮೊಮ್ಮೆ ಕುಟುಂಬದಿಂದಲೂ ತಿರಸ್ಕೃತರಾಗುವ ನತದೃಷ್ಟರಿವರು. ಇವರ ನೋವಿನ ಖಾತಿ ಕಿರ್ದಿ ಒಂದು ಕಣ್ಣೀರಿಗೆ, ತಪನೆಗೆ ದುಃಖಪಾತಕ್ಕೆ ಮುಗಿಯುವುದಿಲ್ಲ. ಅದು ಎಂದೂ ಬತ್ತಲಾರದ ದುಃಖ ಸಾಗರ. ಎಂದೂ ಮಲಗದ ರೋದಾಗ್ನಿ.

ಲಾಹೋರ್‌ನಲ್ಲಿ ಬೇಹುಗಾರನಾಗಿ ಕೆಲಸ ಮಾಡುವಾಗ ಪಾಕ್‌ ಸೈನಿಕರ ಕೈಗೆ (1970) ಸಿಕ್ಕಿ ಬಿದ್ದು ಹನ್ನೆರಡು ವರ್ಷ ಕಾಲ ಅಲ್ಲಿನ ಜೈಲಿನಲ್ಲಿ ಹೀನಾತಿ ಹೀನ ಶಿಕ್ಷೆ, ಹಿಂಸೆಯನ್ನು ಅನುಭವಿಸಿ ( 1984) ಕೊನೆಗೆ ಭಾರತಕ್ಕೆ ಬಂದು ಈಗ ದಯನೀಯ ಸ್ಥಿತಿಯಲ್ಲಿ ಜೀವನ ದೂಡುತ್ತಿರುವ ಮೋಹನ್‌ಲಾಲ್‌ ಭಾಸ್ಕರ್‌ underthe shadow of bayonets and bars, An Indian Spy in Pakistan ಎಂಬ ಕೃತಿಯಲ್ಲಿ ತಾನು ಅನುಭವಿಸಿದ ಹಿಂಸೆ ಮಾನಸಿಕ ವೇದನೆಯನ್ನು ಹಸಿ ಹಸಿಯಾಗಿ ನಮೂದಿಸಿದ್ದಾನೆ. ಬೇಹುಗಾರಿಕೆ ಮಹತ್ವ, ರೋಚಕತೆ, ಅಪಾಯ, ಮಗ್ಗಲುಗಳನ್ನು ಭಾಸ್ಕರ್‌ ನಿವೇದಿಸಿರುವುದು ಎಂಥ ಕಲ್ಲು ಹೃದಯದಲ್ಲೂ ಹಿಡಿ ಕನಿಕರ ಒಸರುವಂತೆ ಮಾಡುತ್ತದೆ. ಈ ಕೃತಿಗೆ ಮುನ್ನುಡಿ ಬರೆದ ಖುಷವಂತ್‌ ಸಿಂಗ್‌, ‘ಈ ಜೀವನದಲ್ಲಿ ಕಟ್ಟಕಡೆಗೆ ಆರಿಸಿಕೊಳ್ಳಬಹುದಾದ ವೃತ್ತಿಯೆಂದರೆ ಬೇಹುಗಾರಿಕೆ. ಬೇಹುಗಾರನಾಗಿ ಕಟ್ಟಕಡೆಗೆ ಕಾಲಿಡಬಹುದಾದ ದೇಶವೆಂದರೆ ಪಾಕಿಸ್ತಾನ’ ಎಂದು ಹೇಳಿರುವುದು ವೃತ್ತಿಯ ಭೀಕರತೆಯನ್ನು ತೆರೆದಿಟ್ಟಿದೆ.

ಮೊದಲ ಬಾರಿಗೆ ಭಾಸ್ಕರ್‌ ಬೇಹುಗಾರನ ಕಸುಬಿಗೆ ಇಳಿದಾಗ ಗಡಿಯಾಳಗೆ ನುಸುಳುವಾಗ ಗುಂಡಿಗೆಯಾಳಗೆ ಸಾವಿರಾರು ಡವಡವ. ಗಡಿಯಲ್ಲಿನ ಸೈನಿಕರಿಗೆ ನೂರೆಂಟು ಕಣ್ಣು. ಕಣ್ತಪ್ಪಿಸಿ ನುಸುಳುವುದು ಸಣ್ಣ ಮಾತೇನಲ್ಲ. ಕೈಗೆ ಸಿಕ್ಕಿ ಬಿದ್ದರೆ ಮುಗೀತು. ನರಕಯಾತನೆ. ಭಾಸ್ಕರ್‌ ಗಡಿ ಸಮೀಪ ಬರುತ್ತಿದ್ದಂತೆಯೇ ಜೋಳಿಗೆಯಲ್ಲಿ ತುಂಬಿಕೊಂಡು ತಂದಿದ್ದ ಹತ್ತಾರು ಹಾವುಗಳನ್ನು ಬಿಟ್ಟ. ಪೊದೆಯಾಳಗೆ ಅವಿತು ತದೇಕ ಚಿತ್ತದಿಂದ ಮುಂದಾಗುವುದನ್ನು ಗಮನಿಸುತ್ತಾ ಕುಳಿತ. ಹಾವನ್ನು ಕಂಡಿದ್ದೇ ತಡ ಸೈನಿಕ ತರಗಾ ಬರಗಾ ಆದ. ಅಲ್ಲಿಂದ ಕಾಲ್ಕಿತ್ತ. ಅದೇ ಸರಿಯಾದ ಟೈಮು ಎಂದು ಭಾಸ್ಕರ್‌ ನುಗ್ಗಿಬಿಟ್ಟ. ಯಾರಿಗೂ ಗೊತ್ತಾಗಲಿಲ್ಲ. ಪಾಕಿಸ್ತಾನದ ಅಣು ವಿಜ್ಞಾನಿ ಅಬ್ದುಲ್‌ ಖಾದಿರ್‌ ಖಾನ್‌ ಅವರ ಚಲನ ವಲನ ಚಟುವಟಿಕೆಗಳನ್ನು ತಿಳಿಸುವುದು ಭಾಸ್ಕರ್‌ಗೆ ಒಪ್ಪಿಸಿದ ಕೆಲಸವಾಗಿತ್ತು. ವಿಷಯ ಸಂಗ್ರಹಿಸುವುದು ಎಷ್ಟು ಕಷ್ಟವೋ ಅದನ್ನು ಕಳುಹಿಸುವುದೂ ಕೂಡ. ಪಾಕ್‌ನ ಕಹುತಾ ಪ್ರದೇಶದಲ್ಲಿ ನಡೆಯುತ್ತಿದ್ದ ಅಣ್ವಸ್ತ್ರ ತಯಾರಿಕೆ ಸಂಬಂಧಿ ಸಣ್ಣ ಪುಟ್ಟ ಮಾಹಿತಿಯನ್ನು ಕಳಿಸುತ್ತಿದ್ದ. 1968ರ ಜೂನ್‌ನಲ್ಲಿ ಮೊದಲ ಬಾರಿಗೆ ಪಾಕ್‌ ವಿಜ್ಞಾನಿಗಳು ಅಣುವನ್ನು ಬೇಧಿಸಿದ್ದನ್ನೇ ಭಾಸ್ಕರ್‌ ವರದಿ ಮಾಡಿದ್ದ. ಈ ಘಟನೆಯ ಎಲ್ಲ ಮಾಹಿತಿಯನ್ನು ಮೈಕ್ರೋ ಫಿಲ್ಮ್‌ ಮಾಡಿ ಖಾದಿರ್‌ ಖಾನ್‌ನ ವೈಯಕ್ತಿಕ ಹಿನ್ನೆಲೆಯನ್ನು ಸಂಗ್ರಹಿಸಿ ಅವನ್ನೆಲ್ಲ ಫುಟ್‌ಬಾಲ್‌ನಲ್ಲಿ ಹಾಕಿ ಕಾಲಿನಲ್ಲಿ ಒದ್ದು, ಭಾರತೀಯ ದೂತಾವಾಸದ ಅಧಿಕಾರಿ ಮನೆಯ ಹಿತ್ತಲಿನಲ್ಲಿ ಬೀಳುವಂತೆ ಮಾಡಿ ಅವನ ಮೂಲಕ ಭಾರತಕ್ಕೆ ರವಾನಿಸಿದ್ದ !

ಇನ್ನೊಂದು ಸಂದರ್ಭದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ತಯಾರಿಕೆಯ ಪ್ರಯೋಗ ಶಾಲೆಯಲ್ಲಿ ಕಾವಲುಗಾರನಾಗಿ ಸುಮಾರು ನಾಲ್ಕು ತಿಂಗಳು ಅಲ್ಲಿನ ಪ್ರತಿಯಾಂದು ಚೂರು ಚೂರು ಸುದ್ದಿಯನ್ನು ಈತ ಕಳಿಸುತ್ತಿದ್ದ. ಇಂಥ ಆಯಕಟ್ಟಿನ ಜಾಗಕ್ಕೆ ತೂರಿ ಕೊಂಡಿದ್ದೇ ಒಂದು ಯಮ ಸಾಹಸ. ಇರುವೆ ಹೆಜ್ಜೆಯನ್ನೂ ದಾಖಲಿಸುವ, ಜಿರಳೆಯ ನಡೆಯನ್ನೂ ಗಮನಿಸುವ ಈ ಜಾಗದಲ್ಲಿ ಭಾಸ್ಕರ್‌ ಕಣ್ಕಟ್ಟಿ ಕುಳಿತುಕೊಂಡಿದ್ದಿದೆಯಲ್ಲ ಅದೊಂದು ಅತಿಭಯಂಕರ ಸಾಹಸ. ಅಭಿಮನ್ಯು ಚಕ್ರವ್ಯೂಹ ಭೇದಿಸಿದ್ದಕ್ಕೆ ಸಮ.

ಗಡಿಯಾಳಗೆ ನುಸುಳಬೇಕಾದಾಗಲೆಲ್ಲ ಭಾಸ್ಕರ್‌ ಹಾವನ್ನು ಬಿಡುತ್ತಿದ್ದ. ಒಮ್ಮೆ ಹೀಗೇ ಬಿಟ್ಟ ಹಾವು ಇವನಿಗೇ ಕಚ್ಚಿ ಬಿಟ್ಟಿತ್ತು. ಗಡಿ ಪ್ರದೇಶದಲ್ಲಿದ್ದ ಸಾನ್ಸಿ ಬುಡಕಟ್ಟು ಜನಾಂಗದವರು ಹೊತ್ತೊಯ್ದು ಗಿಡ ಮೂಲಿಕೆ ಔಷಧ ಕೊಟ್ಟು ಬದುಕಿಸಿದ್ದರು. ಇನ್ನೊಮ್ಮೆ ದನಗಾಹಿಯ ವೇಷದಲ್ಲಿ, ದನದ ವ್ಯಾಪಾರಿಯ ಪೋಸಿನಲ್ಲಿ ತಿರುಗಾಡುತ್ತಾ ಗಡಿಯಾಳಗೆ ನುಸುಳಿದ್ದ. ಪಾಕ್‌ ಗಡಿಯಾಚೆ ಮಿಲಿಟರಿ ಚಟುವಟಿಕೆ ತೀವ್ರವಾಗಿದ್ದ ಸಂದರ್ಭದಲ್ಲಿಯೂ ಭಾಸ್ಕರ್‌ ಗಡಿ ದಾಟುವುದಕ್ಕೆ ಹೆದರುತ್ತಿರಲಿಲ್ಲ. ಸೈನಿಕರ ಒಂದು ಸಣ್ಣ ನಡೆಯಲ್ಲಿನ ದೋಷದ ಲಾಭ ಪಡೆದು ಶತ್ರು ಪಾಳಯ ಸೇರಿ ಅಲ್ಲಿಂದ ಮಹತ್ವದ ಸಂದೇಶಗಳನ್ನು ರವಾನಿಸುತ್ತಿದ್ದ. ಜೀವದ ಹಂಗಿಲ್ಲದ, ಅಳುಕಿಲ್ಲದ ಸರದಾರ ಎಂದೇ ಎಲ್ಲರೂ ಕರೆಯುತ್ತಿದ್ದರು. ‘ಬಣ್ಣ ಬದಲಿಸುವ ಗೋಸುಂಬೆ’ ಎಂದು ಸ್ನೇಹಿತರು ಅವನನ್ನು ಕಿಚಾಯಿಸುತ್ತಿದ್ದರು. ಹೆಜ್ಜೆ ವಾಸನೆ ಅಳಿಸುವ ವೇಗದಲ್ಲಿ ಈತ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಕಾಲು ಕೀಳುತ್ತಿದ್ದ. ಇಂಥ ಭಾಸ್ಕರ್‌ ಕೇವಲ ಮೂರು ವರ್ಷಗಳಲ್ಲಿ ಹದಿನಾರು ಬಾರಿ ಪಾಕಿಸ್ತಾನದ ಗಡಿಯಾಳಗೆ ಹೋಗಿ ಸುರಕ್ಷಿತವಾಗಿ ವಾಪಸ್‌ ಬಂದಿದ್ದ. ಅಂದ್ರೆ ಅದೆಂಥ ಕಸುಬಿ ಆಗಿದ್ದಿರಬಹುದು ಎಂದು ಊಹಿಸಿ.

ಹದಿನೇಳನೇ ಬಾರಿ ಹೋದವನು ಮೊದಲಿನಂತೆ ವಾಪಸು ಬರಲಿಲ್ಲ ! ವಾಪಸು ಬಂದಿದ್ದು ಹನ್ನೆರಡು ವರ್ಷಗಳ ನಂತರ. ಭಾಸ್ಕರ್‌ನ ಕಳ್ಳ ಹೆಜ್ಜೆಯ ವಾಸನೆ ಅದ್ಹೇಗೋ ಅಲ್ಲಿನ ಸೈನಿಕರಿಗೆ ಬಡಿಯಿತು. ಅವನ ಹಿಂದೆ ಬಿದ್ದರು. ಅವರ ಸಂದೇಹ ನಿಜವಾಗಿತ್ತು. ಲಾಹೋರಿನ ಜಮೀನ್ದಾರಾ ಹೋಟೆಲ್‌ನಲ್ಲಿ ಸಾಂಬಾರು ವ್ಯಾಪಾರಿಯ ಸೋಗಿನಲ್ಲಿದ್ದ ಭಾಸ್ಕರ್‌ನ ಕೈ ಚೀಲ, ಜೋಳಿಗೆ, ಪೆಟ್ಟಿಗೆಗಳಲ್ಲಿ ಮಿಲಿಟರಿಗೆ ಸಂಬಂಧ ಪಟ್ಟ ಅಮೂಲ್ಯ ಕಾಗದ ಪತ್ರಗಳಿದ್ದವು. ಒಂದು ದಿನ ಆಗಿದ್ದರೆ ಅವುಗಳೆಲ್ಲ ಭಾರತದೊಳಗೆ ಹೋಗುತ್ತಿದ್ದವು.

ಭಾಸ್ಕರ್‌ನನ್ನು ಸೈನಿಕರು ಅಮಾನುಷವಾಗಿ ಹಿಂಸಿಸಿದ್ದರು. ಯಕ್ಕಾಮಕ್ಕಾ ಚಚ್ಚಿದ್ದರು. ಭಾಸ್ಕರ್‌ ಜೀವಚ್ಛವವಾಗಿ ಬಿದ್ದಿದ್ದ. ಆತನ ಎಲ್ಲ ಬೆರಳುಗಳ ಉಗುರುಗಳನ್ನು ಪಕ್ಕಡ್‌ ಹಾಕಿ ಎಳೆದು ತೆಗೆದಿದ್ದರು ! ಹನ್ನೆರಡು ವರ್ಷ ಪಾಕಿಸ್ತಾನದ ಜೈಲಿನಲ್ಲಿ ಘನಘೋರ ಯಾತನೆಯನ್ನು ಅನುಭವಿಸುವ ಹೊತ್ತಿಗೆ ಆತ ಹಿಪ್ಪೆಹಿಜಲಿಯಾಗಿ ಹೈರಾಣಾಗಿ ಹೋಗಿದ್ದ. ವಾರಕ್ಕೊಮ್ಮೆ ಈತನಿಗೆ ನಾಲ್ಕು ಬಾರಿಸಲೆಂದೇ ಇಬ್ಬರನ್ನು ನೇಮಿಸಲಾಗಿತ್ತು. ಅವೆಲ್ಲ ಹೊಡೆತಗಳನ್ನು ತಿಂದ. ಮಾನಸಿಕ ವೇದನೆಗಳನ್ನು ಅನುಭವಿಸಿದ. ಬಾಯಿಗೆ ಬಂದಂತೆ ಬೈಸಿಕೊಂಡ. ನಿತ್ಯವೂ ಅವಮಾನಕ್ಕೊಳಗಾದ. ಜೈಲಿನಲ್ಲಿದ್ದಾಗ ಮಗ ಕಾಯಿಲೆ ಬಿದ್ದು ಸತ್ತಿದ್ದು ಗೊತ್ತಾಗಲಿಲ್ಲ. ಕಣ್ಣು ಮುಂದೆಯೇ ಬಾಬಾ ಅಲಿ, ನವಾಜ್‌ , ಮಹಮ್ಮದ್‌ದೀನ್‌ ಹಾಗೂ ಮಹಮ್ಮದ್‌ ಸಫ್ದರ್‌ ಸೈನಿಕರ ಹಿಂಸೆಯನ್ನು ತಾಳಲಾರದೇ ನರಳಿ ನರಳಿ ಕೊನೆಯುಸಿರೆಳೆದ ದೃಶ್ಯ, ಗೋಡೆಗೆ ತಗುಲಿ ಹಾಕಿದ ಪಟದಂತೆ ನಿಚ್ಚಳವಾಗಿತ್ತು. ಜೀವನವೆಲ್ಲ ಆ ಕತ್ತಲು ಕೋಣೆಯಲ್ಲಿ ಕಳೆದು ಹೋಗಬಹುದು. ಹೋಗಲಿ ಅದನ್ನೂ ಸಹ ಅನುಭವಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಬಂದ. ಅದೃಷ್ಟ ಚೆನ್ನಾಗಿತ್ತು. ಹನ್ನೆರಡು ವರ್ಷಗಳ ನಂತರ ಬಿಡುಗಡೆಯಾಯಿತು.

ವಾಪಸ್‌ ಬಂದಾಗ ಎಲ್ಲ ಅಯೋಮಯ. ಸಂಸಾರವೆಂಬುದು ಬೋರಲು ಬಿದ್ದಿತ್ತು. ಪಾಕ್‌ಗೆ ಹೋಗುವಾಗ ಮೂರು ತಿಂಗಳ ಬಸುರಿ ಹೆಂಡತಿ ಯಾರದೋ ಮನೆಯಲ್ಲಿ ಮುಸುರೆ ತೊಳೆಯುತ್ತಿದ್ದಳು. ವೃದ್ಧ ತಂದೆ ತಾಯಿ ಮಗನ ನೆನಪಲ್ಲಿ ನಿತ್ರಾಣಗೊಂಡಿದ್ದರು. ಬಡತನ ಅವರನ್ನು ಜರ್ಝರಿತಗೊಳಿಸಿತ್ತು.

ಅದೆಲ್ಲ ಇರಲಿ, ಭಾಸ್ಕರ್‌ ಸೇನಾ ಶಿಬಿರದತ್ತ ಹೆಜ್ಜೆ ಹಾಕುತ್ತಿದ್ದರೆ ಬಾಗಿಲಲ್ಲೇ ಕಾದಿತ್ತು ಆಘಾತ. ‘ನೀನ್ಯಾರು’ ಎಂಬ ಪ್ರಶ್ನೆ. ಎಷ್ಟೇ ಹೇಳಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ನೇಮಿಸಿಕೊಂಡ ಅಧಿಕಾರಿಯೂ ನಿವೃತ್ತನಾಗಿ ಗೂಡು ಸೇರಿದ್ದ. ಪರಿಚಯದ ಒಂದಿಬ್ಬರು ಬೇರೆಡೆ ವರ್ಗವಾಗಿ ಹೋಗಿದ್ದರು. ಇಡೀ ಸೇನಾ ಪಾಳೆಯದಲ್ಲಿ ಆಜ್ಞಾತನಾಗಿ, ತಬ್ಬಲಿಯಾಗಿ, ಅಬ್ಬೇಪಾರಿಯಾಗಿ ನಿಂತಿದ್ದ. ಮಾತಾಡಿಸುವುದಿರಲಿ, ಯಾರೂ ಅವನನ್ನು ಗುರುತು ಹಿಡಿಯುವವರೂ ಇರಲಿಲ್ಲ.

ಒಂದು ಪಕ್ಷ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದರೆ ವರ್ಷಕ್ಕೆ ಐವತ್ತು ಸಾವಿರ ರೂಗಳನ್ನು ಕುಟುಂಬ ನಿರ್ವಹಣೆಗೆ ಕೊಡುವುದಾಗಿ ಮೇಲಧಿಕಾರಿಗಳು ಹೇಳಿದ್ದರು. ಒಂದೆರಡು ವರ್ಷ ಹೆಂಡತಿ ಸತತವಾಗಿ ಅಲೆದರೂ ಪ್ರಯೋಜನವಾಗಲಿಲ್ಲ. ಆಕೆಯನ್ನು ದರಕರಿಸುವವರು ಯಾರೂ ಇರಲಿಲ್ಲ. ಕೊನೆಗೆ ಆಕೆ ದಿಲ್ಲಿಗೆ ಹೋಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಮುಂದೆ ಅಳಲು ತೋಡಿಕೊಂಡಳು. ಅದಾಗಿ ಆರು ತಿಂಗಳ ನಂತರ ಎರಡು ಸಾವಿರ ರೂ ಬಂತು. ಅದೇ ಮೊದಲು ಅದೇ ಕೊನೆ. ಕೊನೆಗೆ ಭಾಸ್ಕರನ ಹೆಂಡತಿ ಆಸೆ ಬಿಟ್ಟಳು. ಈ ಮಧ್ಯೆ ಭಾಸ್ಕರ್‌ ಬದುಕಿದ್ದಾನೋ ಸತ್ತಿದ್ದಾನೋ ಎಂಬುದನ್ನು ಸಹ ಯಾವ ಅಧಿಕಾರಿಯೂ ಸಹ ಹೇಳುತ್ತಿರಲಿಲ್ಲ. ಪದೇ ಪದೇ ಬಂದು ಭಾಸ್ಕರ್‌ನ ಬಗ್ಗೆ ಕೇಳಿದರೆ ಅವನ ಜೀವಕ್ಕೇ ಅಪಾಯ ಎಂದು ಗದರಿದರು. ಆಕೆ ಕೊನೆಗೆ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದಳು.

ತನಗೆ ನ್ಯಾಯಯುತವಾಗಿ ಬರಬೇಕಾದ ಸಂಬಳದ ಬಗ್ಗೆ ಭಾಸ್ಕರ್‌ ಕಳೆದ ಇಪ್ಪತ್ತು ವರ್ಷಗಳಿಂದ ಹೋರಾಡುತ್ತಲೇ ಇದ್ದಾನೆ. ಪಾಕ್‌ ಜೈಲಿನಲ್ಲಿ ಶತ್ರುಗಳ ಹಿಂಸೆಗಿಂತ ದೇಶಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದಕ್ಕಾಗಿ ತನ್ನ ದೇಶದವರು ನಿತ್ಯ ಕೊಡುತ್ತಿರುವ ಅಗೌರವ, ಹಿಂಸೆ, ಮೂದಲಿಕೆ ಭಾಸ್ಕರ್‌ನನ್ನು ಕಿತ್ತು ತಿನ್ನುತ್ತಿದೆ. ಈ ಮಧ್ಯೆ ಒಡಲಿನಲ್ಲಿ ಬುದುಗುಟ್ಟುವ ಕಥೆಯನ್ನಿಟ್ಟುಕೊಂಡು ಭಾಸ್ಕರ್‌ ಪುಸ್ತಕ ಬರೆದ. ಸರಕಾರ ಈತನಕ ಕೊಟ್ಟಿದ್ದಕ್ಕಿಂತ ಹೆಚ್ಚು ಹಣ ಪುಸ್ತಕ ಬರೆದಿದ್ದರಿಂದ ಬಂತು. ಹೇಗೋ ಜೀವನ ಸಾಗಿತು.

ಇವೆಲ್ಲ ದೇಶ ಸೇವೆಗೆ ಸಂದ ಗೌರವ !

ಭಾಸ್ಕರ್‌ಗೆ ಪಶ್ಚಾತ್ತಾಪವಿಲ್ಲ. ಯಾರ ಬಗ್ಗೆ ಕೂಡ ಬೇಸರ ಇಲ್ಲ. ವ್ಯವಸ್ಥೆಯ ಬಗ್ಗೆ ಆಕ್ರೋಶವೂ ಇಲ್ಲ. ಆದರೆ ತಾನು ಅಂದು ಮಾಡಿದ ಕೆಲಸದ ಬಗ್ಗೆ ಅಪಾರ ಹೆಮ್ಮೆಯಿದೆ. ಅದಮ್ಯ ಗೌರವವಿದೆ. ದೇಶಸೇವೆಗೆ ತೊಡಗಿಸಿಕೊಂಡಿದ್ದಕ್ಕೆ ಜೀವನ ಧನ್ಯತೆಯ ಭಾವವಿದೆ.

ಇದರ ಮುಂದೆ ಎಲ್ಲವೂ ಕ್ಷುಲ್ಲಕ. ಹೀಗಾಗಿ ಭಾಸ್ಕರ್‌ನಂತಹ ಅಸಂಖ್ಯ ಬೇಹುಗಾರರು ಇಂದಿಗೂ ಯಾರಿಗೂ ಗೊತ್ತಾಗದಂತೆ ಇದ್ದಾರೆ !

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more