• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಭ್ರಷ್ಟ ವ್ಯವಸ್ಥೆಯ ಅವತಾರವಲ್ಲವೇ ಕೃಷ್ಣ ?

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಡಿಸೆಂಬರ್‌ ಬಂದರೆ ಸಾಕು, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ನಿಧಾನವಾಗಿ ತಾಯ್ನಾಡಿನತ್ತ ಹೆಜ್ಜೆ ಹಾಕುತ್ತಾರೆ. ಅಲ್ಲಿ ಕ್ರಿಸ್‌ಮಸ್‌ ರಜೆಯಾದರೆ ಇವರಿಗೆ ತಾಯ್ನಾಡಿಗೆ ಬಂದ ಸಂಭ್ರಮದ ಹಬ್ಬ. ಆದರೆ ಬರುವಾಗ ಇರುವ ಈ ಸಂತಸದ ಹಬ್ಬ, ಬಂದ ನಂತರ ಇರುವುದಿಲ್ಲ. ಅಮೆರಿಕದಿಂದ ಬರುವ ಯಾವುದೇ ಭಾರತೀಯನ ಹೆಗಲ ಮೇಲೆ ಕೈಹಾಕಿ ಕೊರಳಿಗೆ ಮುಖ ಮಾಡಿ ಕೇಳಿ- ‘ಇನ್ನು ಎಷ್ಟು ವರ್ಷ ಅಂತ ಅಮೆರಿಕ ಜೀವನಾ? ಇಲ್ಲಿಗೆ ಬಂದು ನೆಲೆಸುವುದು ಯಾವಾಗ? ನಿನ್ನ ದೇಶಕ್ಕೆ ವಾಪಸು ಬರಬೇಕು ಅಂತ ಅನಿಸುವುದಿಲ್ಲವಾ?’

ಯಾರೂ ಕೂಡ ಈ ಪ್ರಶ್ನೆಗೆ ನೇರ ಉತ್ತರ ಕೊಡಲಿಕ್ಕಿಲ್ಲ. ಯಾಕೆಂದರೆ ಅವರಿಗೆ ವಾಪಸ್‌ ಬರಬೇಕೆಂದು ಅನಿಸುವುದಿಲ್ಲ. ಯಾಕೆಂದರೆ ವಾಪಸ್‌ ಬರುವಂಥ ಪರಿಸರ ಇಲ್ಲಿ ಇಲ್ಲ. ಅವರು ಇಲ್ಲಿ ಬಂದು ಪುನಃ ನೆಲೆಸುವುದು ಸಾಧ್ಯವೇ ಇಲ್ಲ ಎನ್ನುವಂಥ ವಾತಾವರಣ ಅವರಿಗೆ ಕಾಣುತ್ತಿದೆ.

ಭಾರತಕ್ಕೆ ಬಂದ ತಕ್ಷಣ ಅಮೆರಿಕದ ಐಷಾರಾಮಿ ಜೀವನ ಸಿಗದಿರಬಹುದು. ಅಲ್ಲಿನ ಶುದ್ಧ ಗಾಳಿ, ನೀರು, ಪರಿಸರ ದೊರಕದಿರಬಹುದು. ಅಲ್ಲಿನಂತೆ ಗುಂಡಿ ಅಮುಕಿದರೆ ಎಲ್ಲವೂ ಅವರ ಮುಂದೆ ಮಂಡಿಯೂರಿ ಕುಳಿತುಕೊಳ್ಳದಿರಬಹುದು. ಯಾರೂ ಕೂಡ ಇಡೀ ಅಮೆರಿಕ ಎದ್ದು ಬಂದು ಇಲ್ಲಿ ಹಾಸಿಕೊಂಡು ಮಲಗಬೇಕೆಂದು ನಿರೀಕ್ಷಿಸುವುದಿಲ್ಲ. ಆದರೆ ಎಲ್ಲೋ ಒಂದು ಕಡೆ, ಕನಿಷ್ಠಪಕ್ಷ ಕಗ್ಗತ್ತಲು ತುಂಬಿರುವ ದೀರ್ಘ ಸುರಂಗದ ತುದಿಯಲ್ಲಾದರೂ ಸಣ್ಣ ಮಿಣುಕುದೀಪವಾದರೂ ಕಾಣಬೇಕೆಂದು ನಿರೀಕ್ಷಿಸುವುದು ತಪ್ಪಲ್ಲ. ಅದೂ ಕಾಣದಿದ್ದರೆ ನಿರೀಕ್ಷೆಯನ್ನಿಟ್ಟುಕೊಂಡು ಪ್ರಯೋಜನವಾದರೂ ಏನು? ಅಮೆರಿಕದಿಂದ ಬರುವ ಅಸಂಖ್ಯ ಭಾರತೀಯರು ಈ ಮಿಣುಕು ದೀಪವನ್ನು ಹುಡುಕಿ ಅದು ಸಿಗದೆ ಪುನಃ ಅಲ್ಲಿಗೇ ಮರಳುತ್ತಾರೆ. ಹಿಂದಾಗಡೆಯಿಂದ ನಾವು ಅವರಿಗೆ ‘ದೇಶ ಮರೆತವರು’ ಎಂದು ಮೂದಲಿಸುತ್ತೇವೆ.

S.M. Krishnaಆದರೆ ನಿಜಕ್ಕೂ ಇಲ್ಲಿ ಅವರು ವಾಪಸು ಬಂದು ನೆಲೆಸುವಂಥ ವಾತಾವರಣವನ್ನು ನಾವು ಸೃಷ್ಟಿಸಿದ್ದೇವಾ? ಅದಿರಲಿ, ನಾವಾದರೂ ನೆಮ್ಮದಿಯಿಂದ, ಅಭಿಮಾನದಿಂದ ನೆಲೆಸುವಂಥ ಸಮಾಜವನ್ನು ಸೃಷ್ಟಿಸಿದ್ದೇವಾ? ಈ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸುವವರು ಯಾರೂ ಸಿಗಲಿಕ್ಕಿಲ್ಲ.

ನಮ್ಮ ಸಮಾಜ ಜೀವನದ ಎಲ್ಲ ಸಮಸ್ಯೆಗಳು ಆರಂಭವಾಗುವುದು ಭ್ರಷ್ಟಾಚಾರದಿಂದ. ಇದು ಕಾಲಿಡದ ಜಾಗವೇ ಇಲ್ಲ. ಪ್ರತಿಯಾಬ್ಬರೂ ಇದರ ಬಗ್ಗೆ ಮಾತಾಡುತ್ತಾರೆ. ಏರಿದ ದನಿಯಲ್ಲಿ ಭಾಷಣ ಮಾಡುತ್ತಾರೆ. ವಿಚಿತ್ರವೆಂದರೆ ಅಷ್ಟೇ ಮಾಡಿ ಸುಮ್ಮನಾಗುತ್ತಾರೆ. ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಕಿಡಿ ಕಾರುತ್ತಾರೆ. ಆಕ್ರೋಶ ವ್ಯಕ್ತಪಡಿಸುತ್ತಾರೆ. ದುರ್ದೈವವೆಂದರೆ ಅಷ್ಟೇ ಮಾಡಿ ಸುಮ್ಮನಾಗುತ್ತಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಎಲ್ಲಿಂದ ಆರಂಭಿಸಬೇಕೆಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಹೇಗೆ ಆರಂಭಿಸಬೇಕೆಂಬುದೂ ಗೊತ್ತಿಲ್ಲ. ಇದರ ವಿರುದ್ಧ ಹೋರಾಡದಿದ್ದರೆ ಅದು ತೊಲಗುವುದಿಲ್ಲವೆಂಬುದು ಗೊತ್ತು. ಎಷ್ಟೇ ಹೋರಾಡಿದರೂ ಅದು ತೊಲಗುವುದಿಲ್ಲವೆಂಬುದು ಈಗ ಖಾತ್ರಿಯಾಗಿದೆ. ಯಾರೆ ಬರಲಿ, ಭ್ರಷ್ಟಾಚಾರ ಹೋಗುವುದಿಲ್ಲ ; ಯಾರು ಹೋದರೂ ಭ್ರಷ್ಟಾಚಾರ ಹೋಗುವುದಿಲ್ಲ ಎಂಬುದು ನಮಗೆ ಮನವರಿಕೆಯಾಗಿದೆ. ಹೀಗಾಗಿ ಈ ಪಿಡುಗಿನ ವಿರುದ್ಧ ಹೋರಾಟ ಆಕ್ರೋಶದಿಂದ ಆರಂಭವಾಗಿ ಅಲ್ಲಿಗೇ ಮುಗಿಯುತ್ತದೆ. ಹಾಗಂತ ಇದರ ವಿರುದ್ಧ ಯಾರೂ ಪರಿಣಾಮಕಾರಿಯಾಗಿ ಹೋರಾಡಿಲ್ಲ ಅಂತ ಅಲ್ಲ. ಹಲವಾರು ಮಂದಿ ಖಡ್ಗ ಝಳಪಿಸಿದ್ದಾರೆ. ಆದರೆ ಅವರೆಲ್ಲ ಈಗ ಸುಸ್ತಾಗಿ ಮನೆ ಸೇರಿದ್ದಾರೆ. ಅವರನ್ನು ನೋಡಿ ನಾವು ನಮ್ಮಷ್ಟಕ್ಕೆ ‘ಭಲೇ’ ಎಂದೆವೇ ಹೊರತು ಅವರೊಂದಿಗೆ ಕೈಜೋಡಿಸಲಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನೇ ಸಂಶಯದಿಂದ ಕಂಡೆವೇ ಹೊರತು ಅವನಿಗೆ ಬೆನ್ನು ತಟ್ಟಲಿಲ್ಲ. ಇಂಥ ಹೋರಾಟವನ್ನು ಈತ ಕೈಗೆತ್ತಿಕೊಂಡಿದ್ದಾನೆಂದರೆ ‘ಏನೋ ಇರಬೇಕೆಂದು’ ಗುಮಾನಿ ಪಟ್ಟವೇ ಹೊರತು ಅವನ ಆಕ್ರೋಶದ ಬಿಸಿಯುಸಿರನ್ನು ತಟ್ಟಿಸಿಕೊಳ್ಳಲಿಲ್ಲ. ‘ಈ ಭ್ರಷ್ಟಾಚಾರ ಇದೆಯಲ್ಲ ಅದು ಮನುಷ್ಯ ಹುಟ್ಟಿದಾಗಲೇ ಹುಟ್ಟಿತು. ಮನುಷ್ಯ ಇರೋತನಕಾ ಇರುತ್ತದೆ ಕಣ್ರಿ. ಹೀಗಾಗಿ ಹೋರಾಡಿ ಪ್ರಯೋಜನ ಇಲ್ಲಾರಿ. ಶುದ್ಧಹಸ್ತರು ಸಿಗೊಲ್ಲ. ಕಡಿಮೆ ಭ್ರಷ್ಟರನ್ನು ಆರಿಸಿಕೊಳ್ಳಬೇಕಿದೆ’ ಎಂಬ ಮಾತುಗಳನ್ನು ಜಗಿಯುವವರು ಎಲ್ಲೆಡೆ ಸಿಗುತ್ತಾರೆ.

‘ಭ್ರಷ್ಟಾಚಾರ ಅಂದ್ರೆ ಕ್ಯಾನ್ಸರ್‌ ಇದ್ದ ಹಾಗೆ. ಅದನ್ನು ಕಿತ್ತೆಸೆಯಲಿಕ್ಕೆ ಆಗುವುದಿಲ್ಲ. ಮೈಯಾಳಗೆ ಕ್ಯಾನ್ಸರ್‌ ಇಟ್ಟುಕೊಂಡು ಜೀವಿಸುವುದಿಲ್ಲವಾ? ಹಾಗೇ ಭ್ರಷ್ಟಾಚಾರವನ್ನು ಸಹಿಸಿಕೊಂಡು ಜೀವಿಸಿದರೆ ತಪ್ಪೇನು? ಹಾಗೇ ಭಾವಿಸಿದರೆ ಅದೊಂದು ಸಮಸ್ಯೆ ಅಂತ ಅನಿಸುವುದಿಲ್ಲ’ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಅಂದರೆ ಭ್ರಷ್ಟಾಚಾರವನ್ನು ನಾವು ಹೆಚ್ಚೂಕಮ್ಮಿ ಒಪ್ಪಿಕೊಂಡಿದ್ದೇವೆ. ಈ ಕಾರಣದಿಂದ ಈ ‘ಮಾರಿ’ಯ ವಿರುದ್ಧ ಯಾರಾದರೂ ದನಿಯೆತ್ತಿದರೆ ನಮಗೆ ವಿಚಿತ್ರವಾಗಿ ಕಾಣುತ್ತಾರೆ. ಹೀಗಾಗಿ ನಾವು ಗುಮಾನಿಯಿಂದ ನೋಡುತ್ತೇವೆ. ಅದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ದುಡ್ಡು ತಿಂದವರ ಬಗ್ಗೆ ಗೊತ್ತಿರುತ್ತದೆ. ಆದರೆ ಯಾರೂ ಏನೂ ಮಾಡೊಲ್ಲ. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಕಟ್ಟಿಸಿರುವ ಮನೆ, ಮಹಲು, ಬೃಹತ್‌ ಇಮಾರತುಗಳನ್ನು ನೋಡಿ. ಯಾರೂ ಕೂಡ ಅವರನ್ನು ಪ್ರಶ್ನಿಸುವುದಿಲ್ಲ. ಪುಡಿಗಾಸೂ ಇಲ್ಲದವನೊಬ್ಬ ಮಂತ್ರಿಯಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿದರೆ ಈ ಪಾಟಿ ದುಡ್ಡು ನಿನಗೆ ಹೇಗೆ ಬಂತು ಅಂತ ಯಾರೂ ಕೇಳುವುದಿಲ್ಲ. ಅಂದರೆ ಭ್ರಷ್ಟಾಚಾರವನ್ನು ನಾವು ಸಂಪೂರ್ಣವಾಗಿ ಒಪ್ಪಿಕೊಂಡಂತಾಯಿತು. ಅಲ್ಲವೇ? ಒಂದು ಸಲ ಮಂತ್ರಿಯಾದವನು ಕೋಟಿಗಳಲ್ಲಿ ತುಂಬಿಕೊಂಡರೆ, ಹತ್ತಾರು ವರ್ಷ ಕುರ್ಚಿಗೆ ತಗುಲಿಕೊಂಡವನು ಎಷ್ಟು ಕಟ್ಟಿಕೊಂಡು ಹೋಗಬಹುದು ಯೋಚಿಸಿ. ಈ ಯಾವ ಸಂಗತಿಗಳೂ ನಮಗೆ ಗೊತ್ತಿಲ್ಲ ಎಂದಲ್ಲ. ಗೊತ್ತಿದೆ. ಆದರೆ ‘ಎಲ್ಲರೂ ದುಡ್ಡು ತಿಂತಾರೆ, ತಿನ್ನದವರು ಯಾರು ಹೇಳಿ’ ಎಂದು ನಮಗೆ ನಾವು convince ಮಾಡಿಕೊಂಡಿರುವುದರಿಂದ ಇದು ಕೂಡ ನಮಗೆ ಸಮಸ್ಯೆಯೆಂದು ಅನಿಸುವುದಿಲ್ಲ.

ಭ್ರಷ್ಟಾಚಾರ ನಮ್ಮನ್ನು ಯಾವ ಪ್ರಮಾಣದಲ್ಲಿ ಆವಾಹಿಸಿದೆಯೆಂದರೆ ಯಾರಾದರೂ ಸಾವಿರ, ಲಕ್ಷ ರೂ. ತಿಂದರೆ ನಮಗೆ ಏನೇನೂ ಅನಿಸುವುದಿಲ್ಲ. ಹೋಗಿ ಹೋಗಿ ಲಕ್ಷ ರೂ. ತಿನ್ನೋದಾ ಅಂತ ಹೇಳುವುದನ್ನು ಕೇಳುತ್ತೇವೆ. ತಿನ್ನೋದಕ್ಕೂ ಒಂದು ಯೋಗ್ಯತೆ ಬೇಡವಾ ಎನ್ನುವುದನ್ನೂ ಕೇಳುತ್ತೇವೆ. ಬೋಫೋರ್ಸ್‌ ಪ್ರಕರಣದ 64 ಕೋಟಿ ರೂ. ಹರ್ಷದ್‌ ಮೆಹ್ತಾ ಪ್ರಣೀತ ಷೇರು ಕರ್ಮಕಾಂಡದ ಮುಂದೆ ಏನೇನೂ ಅಲ್ಲ. ಮೂರೂವರೆ ಸಾವಿರ ಕೋಟಿ ರೂ. ತಿಂದ ಹರ್ಷದ್‌ ಮೆಹ್ತಾ , ಮೂವತ್ತೆರಡು ಕೋಟಿ ಸ್ವಾಹಾ ಮಾಡಿದ ಅಬ್ದುಲ್‌ ಕರೀಂ ಲಾಲಾ ತೆಲಗಿ ಮುಂದೆ ಸುಬಗ ಸಂಭಾವಿತನಂತೆ ಕಾಣುತ್ತಾನೆ.

ತೆಲಗಿ ಇಡೀ ರಾಷ್ಟ್ರಕ್ಕೆ ಸಾವಿರಾರು ಕೋಟಿ ರೂ. ವಂಚಿಸಿದ್ದಾನೆ. ಈ ವಂಚನೆಗೆ ನೂರಾರು ಜನರ ಸಹಾಯವಿರಲೇಬೇಕು. ಅದರಲ್ಲಿ ನನ್ನ ಸಂಪುಟ ಸಹೋದ್ಯೋಗಿಗಳು, ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿದ್ದಿರಬಹುದು, ಛಾಪಕೂಪ ಅನೇಕ ರಾಜ್ಯ, ವಿದೇಶಗಳಲ್ಲೂ ಹಬ್ಬಿರುವುದರಿಂದ ಬಡಪಾಯಿ ಪೊಲೀಸರಿಗೆ ವಂಚನೆಯನ್ನು ಭೇದಿಸುವುದು ಅಸಾಧ್ಯ ಎಂಬುದು ನಮ್ಮ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೂ ಅವರು ಇಡೀ ಪ್ರಕರಣದ ಬಗ್ಗೆ ಮಾತಾಡುತ್ತಿಲ್ಲ. ಈ ಕರ್ಮಕಾಂಡದಲ್ಲಿ ಯಾರ್ಯಾರು ಇದ್ದಾರೆಂಬುದನ್ನು ಬಹಿರಂಗಪಡಿಸಲು ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಎಂದು ಇಡೀ ದೇಶವೇ ಒತ್ತಾಯಿಸುತ್ತಿದೆ. ಕೃಷ್ಣ ಅವರಿಗೆ ಮಾತ್ರ ಏನೂ ಕಾಣಿಸುತ್ತಿಲ್ಲ. ಈ ದಿವ್ಯ ಮೌನ ಯಾರಲ್ಲೂ ತೊಟ್ಟು ಅಸಹನೆಯನ್ನೂ ಮೂಡಿಸುತ್ತಿಲ್ಲ. ಈ ಸಂಗತಿ ಕೃಷ್ಣ ಅವರಿಗೆ ಗೊತ್ತು. ಭ್ರಷ್ಟಾಚಾರವನ್ನು ಜನರೂ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆಂಬುದು ಅವರಿಗೂ ಗೊತ್ತು . ಎಲ್ಲ ಗೊತ್ತಿದ್ದೂ ಏನೂ ಗೊತ್ತಾಗದಂಥ ಸ್ಥಿತಿಯಲ್ಲಿ ಇದ್ದೇವೆಂಬುದೂ ಗೊತ್ತು. ಇಂಥ ಸ್ಥಿತಿಯಲ್ಲಿ ಇರುವುದು ಹೇಗೆಂಬುದು ಗೊತ್ತಿರುವುದರಿಂದ ಕೃಷ್ಣ ಅವರು ತನಿಖೆಯನ್ನು ಸಿಬಿಐಗೆ ಒಪ್ಪಿಸುತ್ತಿಲ್ಲ. ಏಕೆಂದರೆ ಕರ್ಮಕಾಂಡ ಬಯಲಾಗುವುದು ಕೃಷ್ಣ ಅವರಿಗೆ ಬೇಕಿಲ್ಲ.

ಭ್ರಷ್ಟಾಚಾರದ ಬಗ್ಗೆ ನಮ್ಮ ನಂಬಿಕೆ (ಯಾರು ತಿನ್ನೊಲ್ಲ ಹೇಳಿ, ಎಲ್ಲರೂ ತಿಂತಾರೆ) ಅವರಿಗೆ ಗೊತ್ತಿರುವುದರಿಂದ ಅವರು ಏನೂ ಮಾಡುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ಎಲ್ಲಿಂದ ಆರಂಭಿಸಬೇಕೆಂದು ನಮಗೆ ಗೊತ್ತಿಲ್ಲದಿರುವುದರಿಂದ ನಾವೂ ಏನೂ ಮಾಡುತ್ತಿಲ್ಲ. ಹೀಗಾಗಿ ಎಲ್ಲರೂ ಸುಮ್ಮನಿದ್ದಾರೆ. ಈ ಗಾಢ ಮೌನದಲ್ಲಿ ಗೊರಕೆ ಹೊಡೆಯುತ್ತಿರುವ ಪ್ರತಿಪಕ್ಷದವರನ್ನು ಎಬ್ಬಿಸಲು ಸಂಕೋಚ. ಅವರ ನಿದ್ದೆಗೆ ಎಲ್ಲಿ ಭಂಗ ಬಂದೀತೋ ಎಂಬ ಮುಜುಗರ.

ಸರಕಾರದ ಮುಖ್ಯಸ್ಥನಾಗಿರುವ ಮುಖ್ಯಮಂತ್ರಿ ನಂಬರ್‌ ಒನ್‌ ಎಂದು ಕರೆಯಿಸಿಕೊಳ್ಳಬೇಕೆಂದರೆ, ತಾವೊಬ್ಬರೇ ಅಲ್ಲ, ಇಡೀ ಸಂಪುಟದ ಸಹೋದ್ಯೋಗಿಗಳು ದಕ್ಷರೂ, ಯೋಗ್ಯರೂ ಆಗಿರಬೇಕು ತಾನೆ? ಹಸಿಹಸಿ ಸುಳ್ಳು ಹೇಳುವವರು, ಅಪ್ರಾಮಾಣಿಕರು, ಕಚೇರಿಗೆ ಬರದವರು, ದರ್ಪ ಮೆರೆಯುವವರು, ನಿದ್ದೆ ಹೊಡೆಯುವವರು ಹಾಗೂ ನಿಷ್ಪ್ರಯೋಜಕರನ್ನು ಕಟ್ಟಿಕೊಂಡು ಕೃಷ್ಣ ನಾಲ್ಕೂ ಚಿಲ್ಲರೆ ವರ್ಷ ಆಳಿದ್ದೇ ಸಾಧನೆಯೆಂದು ಬೀಗುವುದಿದೆಯಲ್ಲ, ಇದೂ ಕೂಡ ನಾವು ಮನಸಾರೆ ಒಪ್ಪಿಕೊಂಡ ಭ್ರಷ್ಟ ವ್ಯವಸ್ಥೆಯ ಒಂದು ಅವತಾರವಲ್ಲದೆ ಮತ್ತೇನು? ಸರಕಾರದ ಯಾವ ಅಂಗ ಭ್ರಷ್ಟಾಚಾರದಿಂದ ಮುಕ್ತವಾಗಿದೆಯೆಂದು ಮುಖ್ಯಮಂತ್ರಿಗಳು ಆತ್ಮಸಾಕ್ಷಿಯಾಗಿ ಹೇಳಬಲ್ಲರು?

ನಮ್ಮ ನಂಬಿಕೆ (ಯಾರು ತಿನ್ನೊಲ್ಲ ಹೇಳಿ..) ಮೇಲೆ ಸವಾರಿ ಮಾಡುವತನಕ ಕೃಷ್ಣ ಅವರಿಗೆ ಅಪಾಯವಿಲ್ಲ. ಅವರು ಐದು ವರ್ಷ ಮುಗಿಸುತ್ತಾರೆ. ತೆಲಗಿ ಕರ್ಮಕಾಂಡವನ್ನು ಸಿಬಿಐಗೂ ಒಪ್ಪಿಸುವುದಿಲ್ಲ. ನಿಷ್ಪ್ರಯೋಜಕರ ತಂಡ ಕಟ್ಟಿಕೊಂಡು ಸರಕಾರ ನಡೆಸುತ್ತಾರೆ. ದಂಡಪಿಂಡಗಳ ಪಡೆಗೆ ‘ದಂಡ’ನಾಯಕರಾಗುತ್ತಾರೆ.

ಆದರೆ ನಾವು ಮಾತ್ರ ಭ್ರಷ್ಟ ವ್ಯವಸ್ಥೆಗೆ ಒಗ್ಗಿಕೊಳ್ಳಲಾಗದ ಅಮೆರಿಕದಿಂದ ಬರುವ ಭಾರತೀಯರನ್ನು ‘ದೇಶ ಮರೆತವರು’ ಎಂದು ಮೂದಲಿಸುತ್ತಲೇ ಇರುತ್ತೇವೆ.

ಬಹಳ ಚೆನ್ನಾಗಿದೆ ಅಲ್ಲವೇ ಕೃಷ್ಣ ?

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more