ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನ ಸಂಧ್ಯೆಯ ನಿರ್ಲಿಪ್ತತೆಗೆ ಯಾವ ಹೆಸರಿಡಲಿ?

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಇದು ಕೊತ್ತ ಕೋಪವಾ, ಹಸಿ ಹತಾಶೆಯಾ, ವ್ಯರ್ಥ ಪ್ರಲಾಪವಾ, ಅಹಮ್ಮಾ, ಕಾರ್ಯಶೂನ್ಯತೆಯಾ, ವೈರಾಗ್ಯವಾ... ಏನು ಅಂತಾನೆ ಗೊತ್ತಾಗೊಲ್ಲ.

ಕೆಲವರು ಬದುಕಿನ ಒಂದು ಘಟ್ಟ ಸಮೀಪಿಸುತ್ತಿದ್ದಂತೆ ತಾವು ಜೀವನದಾರಭ್ಯ ಪ್ರೀತಿಸಿದ್ದನ್ನು, ಪೋಷಿಸಿದ್ದನ್ನು ದ್ವೇಷಿಸಲಾರಂಭಿಸುತ್ತ್ತಾರೆ. ಯಾವ ಗುರಿ ಸಾಧನೆಗಾಗಿ, ಉದ್ದೇಶ ಈಡೇರಿಕೆಗಾಗಿ ಹೋರಾಡಿದ್ದರೋ ಅದರಿಂದ ವಿಮುಖರಾಗಿ, ತಮ್ಮ ಈವರೆಗಿನ ಕಾಳಜಿ, ಶ್ರದ್ಧೆಯಲ್ಲಿನ ಎಲ್ಲ ಮೋಹಗಳನ್ನು ಕಳಚಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅವರಿಗೆ ತಮ್ಮ ಹೋರಾಟ ಬೊಕ್ಕಲು ಬುರುಡೆಯಂತೆ ಕಾಣುತ್ತದೆ. ತಾವು ತುಳಿದ ಹಾದಿಯೇ ಮರೆತುಹೋಗಿರುತ್ತದೆ. ಯಾವುದನ್ನು ಇಟ್ಟುಕೊಂಡು ಜೀವನದಲ್ಲಿ ಮೇಲೇರುತ್ತಾ ಬಂದರೋ ಅದನ್ನೇ ಮರೆತು ನಿರ್ಲಿಪ್ತರಾಗಲು ತವಕಿಸುತ್ತಿರುತ್ತಾರೆ. ಅವರಿಗೆ ತಾವು ಈ ತನಕ ಮಾಡಿದ್ದೆಲ್ಲ ಬರೀ ಓಳು ಅನಿಸಲಾರಂಭಿಸುತ್ತದೆ. ಇದನ್ನು ಅನುಭೂತಿ ಎನ್ನೋಣವಾ ಅಥವಾ ಸಾಕ್ಷಾತ್ಕ್ಕಾರ ಎನ್ನೋಣವಾ? ಇದೊಂದು ಜೀವನ ದರ್ಶನವಾ? ಬದುಕು ಕಲಿಸಿದ ಪಾಠವಾ? ಬದುಕು ಎಲ್ಲ ಅನುಭವ, ಸ್ವಾದಗಳನ್ನು ಅನುಭವಿಸಿ ಕೊನೆಗೆ ಬಂದು ನಿಲ್ಲುವುದು ಇದೇ ಸ್ಟಾಪಿನಲ್ಲಾ ?

ಇತ್ತೀಚೆಗೆ ಸಾಗರಕ್ಕೆ ಹೋದಾಗ ಈ ನೆಲದ ‘ಹೆಮ್ಮೆಯ ಚೇತನ’ದ ಜತೆ ಕೆಲ ಸಮಯ ಕಳೆಯುವ ಅವಕಾಶ ಸಿಕ್ಕಿತ್ತ್ತು. ಇಂಥವರು ಪತ್ರಿಕೆಗೆ ಬರೆದರೆ ಚೆನ್ನಾಗಿರುತ್ತದೆ, ವಾರಕ್ಕೊಂದು ಅಂಕಣ ಬರೆಯಲಾಗದಿದ್ದರೂ ತಿಂಗಳಿಗೊಮ್ಮೆ ಅತಿಥಿ ಅಂಕಣಕಾರರಾಗಿ ಬಂದು ಹೋದರೆ ಓದುಗರಿಗೆ ಎಷ್ಟೊಂದು ಖುಷಿಯಾಗಬಹುದೆಂಬ ಉತ್ಸಾಹದಲ್ಲಿ ಈ ಪ್ರಸ್ತಾಪವನ್ನು ಮುಂದಿಟ್ಟರೆ ಅವರು ಹೇಳಿದ ಮಾತುಗಳನ್ನು ಕೇಳಿ ದಂಗಾದೆ. ‘‘ಬರೆಯಲೇಬಾರದು ನೋಡಿ. ನಾನು ಈ ತನಕ ಬರೆದಿದ್ದೆಲ್ಲ ಪ್ರಯೋಜನಕ್ಕೆ ಬಾರದವು ಅಂತ ಅನಿಸುತ್ತಿದೆ. ಅದರಿಂದ ಯಾರಿಗೇನು ಪ್ರಯೋಜನವಾಗಿದೆ ಹೇಳಿ? ನಾವು ನಮ್ಮ ತೃಪ್ತಿಗಾಗಿ ಬರೆಯುತ್ತೇವೆ. ಸಾಹಿತ್ಯದ ಉದ್ದೇಶ ಅದೊಂದೇ ಅಲ್ಲ. ಬರವಣಿಗೆಯಿದೆಯಲ್ಲ ಅದು ವಿಚಿತ್ರ. ಈಗ ನಮಗೆ ಸರಿ ಕಂಡಿದ್ದು, ಕೆಲ ಕಾಲದ ನಂತರ ಬೋಗಸ್‌ ಅಂತ ಅನಿಸಲು ಶುರುವಾಗುತ್ತದೆ. ಇಷ್ಟು ವರ್ಷ ಬರೆದಿದ್ದು ಮೋಸ ಅಂತ ಅನಿಸುತ್ತದೆ. ಹೀಗಾಗಿ ನಾನು ಏನನ್ನೂ ಬರೆಯುತ್ತಿಲ್ಲ. ಬರೆಯೋದಿಲ್ಲ’ ಅಂದು ಬಿಟ್ಟರು. ಕೆಲಕ್ಷಣ ನಮ್ಮಿಬ್ಬರ ಮಧ್ಯೆ ಗಾಢಮೌನ. ಪುನಃ ಅವರೇ ಮುಂದುವರಿಸಿದರು. ‘ನೋಡಿ, ನಾವು ಯಾವ ವಿಷಯದ ಬಗ್ಗೆ ಕೂಡ ನಮ್ಮ ವಿಚಾರವನ್ನು ವ್ಯಕ್ತಪಡಿಸಿದರೂ, ಯಾವತ್ತೂ ನಮ್ಮ ವಿಚಾರ ಪರಿಪೂರ್ಣ ಆಗಿರೊಲ್ಲ. ಪರಿಪೂರ್ಣವಾಗಿರದ ವಿಚಾರ ಸತ್ಯವೂ ಆಗಿರೊಲ್ಲ. ಕೆಲಸಮಯದ ನಂತರ ನಮ್ಮ ವಿಚಾರಗಳೇ ನಮಗೆ ಬಾಲಿಶ ಎನಿಸಲಾರಂಭಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ವಿಚಾರವೇ ಬೇರೆ, ಸತ್ಯವೇ ಬೇರೆ. ಇವೆರಡೂ ಒಟ್ಟಾಗುವುದು ಅಪರೂಪ. ಈ ಎಲ್ಲ ಕಾರಣಗಳಿಂದ ಈಗ ನಾನು ಏನನ್ನೂ ಬರೆಯುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಏನನ್ನೂ ಬರೆಯದಿರುವುದೇ ನಾನು ಮಾಡುವ ಉಪಕಾರ ಎಂದೆನಿಸುತ್ತದೆ’ ಅಂದರು. ಹತ್ತಾರು ಪುಸ್ತಕ ತಂದ, ನೂರಾರು ಲೇಖನ ಬರೆದ, ಸಾವಿರಾರು ವೇದಿಕೆಗಳಲ್ಲಿ ಮಾತನಾಡಿದ ಈ ಮಹಾಶಯರು ತಾವು ನಡೆದು ಬಂದ ದಾರಿಯನ್ನೇ ಒಂದು ರೀತಿಯಲ್ಲಿ ದ್ವೇಷಿಸಲಾರಂಭಿಸಿದ್ದರು. ಅವರು ತಮ್ಮ ಬರಹ, ಮಾತು, ವಿಚಾರಗಳೆಲ್ಲ ಬಾಲಿಶ, ಗೊಡ್ಡು ಎಂಬ ನಿರ್ಧಾರಕ್ಕೆ ಬಂದಂತಿತ್ತು. ತಮ್ಮ ‘ಪ್ರೀತಿ’ಯನ್ನೇ ಪಕ್ಕಕ್ಕೆ ಇಟ್ಟು ಅದು ಇದ್ದಿದ್ದನ್ನು ಮರೆಯಲು ಯತ್ನಿಸುತ್ತಿದ್ದರು.

ಭೀಷ್ಮ ನಾರಾಯಣ ಸಿಂಗ್‌ ಎಂಬ ಗಣಿತಜ್ಞನಿದ್ದ. ಮೂಲತಃ ಬಿಹಾರದವನು. ಈತನನ್ನು ಶ್ರೀನಿವಾಸ ರಾಮಾನುಜನ್‌ ಮಟ್ಟದ ಗಣಿತಜ್ಞ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದರು. ಟ್ರಿಗ್ನೋಮೆಟ್ರಿಯ ಹೊಸ ವಿಸ್ತಾರದ ಬಗ್ಗೆ ಈತನ ಸಂಶೋಧನೆ ಅಮೆರಿಕದ ವಿಜ್ಞಾನಿಗಳಲ್ಲಿ ಆಸಕ್ತಿ ಕೆರಳಿಸಿತ್ತ್ತು. ಅಮೆರಿಕದಲ್ಲಿ ಈತನಿಗೆ ವಿಶೇಷ ಗೌರವ. ಈತನ ಗಣಿತ ಸಂಶೋಧನೆ, ಆವಿಷ್ಕಾರಗಳು ಈವರೆಗಿನ ಎಲ್ಲ ನಿಯಮಗಳನ್ನು ಬುಡಮೇಲು ಮಾಡಿದ್ದವು. ಅಂಥ ಭೀಷ್ಮ ನಾರಾಯಣ ಸಿಂಗ್‌ ಒಂದು ದಿನ ಏಕಾಏಕಿ ಮಾನಸಿಕ ರೋಗಿಯಂತೆ ವರ್ತಿಸಲಾರಂಭಿಸಿದ. ಊಟ, ತಿಂಡಿ ಬಿಟ್ಟು ಶೂನ್ಯದತ್ತ ದೃಷ್ಟಿ ನೆಟ್ಟು ವಾರಗಟ್ಟಲೆ ಕುಳಿತುಬಿಡುತ್ತಿದ್ದ. ಕೊನೆಗೆ ಈತನನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ತಂದು ಸೇರಿಸಲಾಯಿತು. ಇಲ್ಲಿ ಆತ ಸುಮಾರು ಒಂದು ತಿಂಗಳು ಇದ್ದ. ರಾಜ್ಯ ಸರಕಾರ ಆತನನ್ನು ಎಲ್ಲ ಸೌಲಭ್ಯ ಕೊಟ್ಟು ತನ್ನ ಖರ್ಚಿನಲ್ಲಿ ಚಿಕಿತ್ಸೆ ನೀಡುವಂತೆ ಆದೇಶಿಸಿತು. ಭೀಷ್ಮ ನಾರಾಯಣ ಸಿಂಗ್‌ ಸರಿಹೋದನೋ, ಈಗ ಆತ ಎಲ್ಲಿದ್ದಾನೋ ಗೊತ್ತಿಲ್ಲ. ಆತನನ್ನು ಬೆಂಗಳೂರಿಗೆ ಕರೆತರುವುದಕ್ಕಿಂತ ಮೊದಲು ಒಂದು ಘನಘೋರ ಕೆಲಸ ಮಾಡಿದ್ದ - ಹನ್ನೆರಡು ವರ್ಷಗಳ ಕಾಲ ಮಾಡಿದ ಸಂಶೋಧನೆಯ ಫಲವಾಗಿ ಮೂಡಿ ಬಂದ ಸುಮಾರು ಆರು ಸಾವಿರ ಪುಟಗಳನ್ನು ಒಂದೊಂದಾಗಿ ಬೆಂಕಿ ಹಚ್ಚಿ ಸುಟ್ಟಿದ್ದ ! ಕೆದರಿದ ಕೋಳಿಗೂಡಿನಂಥ ಅವನ ಕೋಣೆಯಾಳಗೆ ಬರೀ ಬೂದಿ! ಆತ ಬರೆದಿಟ್ಟ ಪತ್ರ ನೋಡಿ ಅವನ ಸಹೋದ್ಯೋಗಿಗಳು ಕಂಗಾಲಾದರು - ‘ನನ್ನ ಸಂಶೋಧನೆಯಿಂದ ಯಾರಿಗೆ ಲಾಭ? ನನ್ನ ಬದುಕಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನು ಅಧ್ಯಯನ ಮಾಡುವವರಿಗೂ. ಯೋಚಿಸಲು ಕುಳಿತರೆ ದಿನಕ್ಕೆ ನಾಲ್ಕು ಹೊಸ ಥಿಯರಮ್‌ ಹೊಳೆಯುತ್ತವೆ. ಒಂದು ಗಣಿತದ ಸಮಸ್ಯೆಗೆ ಏಳೆಂಟು ಪರಿಹಾರಗಳು ಹೊಳೆಯುತ್ತವೆ. ಗಣಿತದ ಹಳೆ ನಿಯಮಗಳೆಲ್ಲ ವಿಚಿತ್ರವಾಗಿ, ಸಪ್ಪೆಯಾಗಿ ಕಾಣುತ್ತವೆ. ಯೋಚಿಸಿದಂತೆಲ್ಲ ಸತ್ಯವೇ ಕಾಣುವುದಿಲ್ಲ ಅಥವಾ ತರಹೇವಾರಿ ಸತ್ಯಗಳು ಗೋಚರಿಸುತ್ತವೆ. ಯೋಚನೆಗಳು ಯಾವತ್ತೂ ಪರಿಹಾರವಾಗಲಾರವು. ನನ್ನ ಸಂಶೋಧನೆಯನ್ನು ಹಾಗೆ ಕರೆಯಲು ಮನಸ್ಸಾಗುತ್ತಿಲ್ಲ. ನಾನು ಹೊಸದೇನನ್ನೂ ಶೋಧಿಸಿಲ್ಲ. ಇರುವುದನ್ನೇ ತೋರಿಸಿದ್ದೇನೆ. ಆದ್ದರಿಂದ ನನ್ನ ಈ ಕೃತಿಗಳಿಂದ ಏನು ಪ್ರಯೋಜನ?’

ಒಂದೇ ಸಲಕ್ಕೆ ಹನ್ನೆರಡು ವರ್ಷಗಳ ಸಂಶೋಧನೆಯ ಫಲ ಬೆಂಕಿಗೆ ಆಹುತಿಯಾಗಿತ್ತು !

ಓಶೋ ರಜನೀಶ್‌ ಗೊತ್ತಲ್ಲ. ಈತನ ಆರು ನೂರು ಪುಸ್ತಕಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ. ಈ ಪೈಕಿ ಬಹುತೇಕ ಪುಸ್ತಕಗಳು ಈತನ ಪ್ರವಚನ, ಉಪನ್ಯಾಸಗಳ ಪೂರ್ಣಪಾಠಗಳು. ಒಬ್ಬನ ಹೆಸರಿನಲ್ಲಿ ಇಷ್ಟೊಂದು ಪುಸ್ತಕಗಳು ಇರುವ ಇನ್ನೊಂದು ಉದಾಹರಣೆ ಸಿಗಲಿಕ್ಕಿಲ್ಲ. ರಜನೀಶ್‌ ಹೇಳದ ವಿಷಯಗಳೇ ಇಲ್ಲ. ಈ ಒಂದು ಸಂಗತಿಯನ್ನು ಆತ ಪ್ರಸ್ತಾಪಿಸಿಲ್ಲ ಅನ್ನೋ ಹಾಗಿಲ್ಲ. ಬದುಕಿನ ಎಲ್ಲ ಮುಖಗಳು, ಅಂಶಗಳ ಕುರಿತು ಆತ ಪ್ರಸ್ತಾಪಿಸಿದ್ದಾನೆ. ಆತನ ಕೆಲವು ವಿಚಾರಗಳಂತೂ ಪಕ್ಕಾ ಒರಿಜಿನಲ್ಲು. ಎಲ್ಲೂ ಓದಿರದ ಸಂಗತಿಗಳು. ಕಾಮಸೂತ್ರದಿಂದ ಹಿಡಿದು ಕನಕಾಂಬರದ ತನಕ ಆತ ಎಲ್ಲವುಗಳ ಬಗ್ಗೆ ಕುತೂಹಲ ಹುಟ್ಟುವಂತೆ ಅಧಿಕಾರವಾಣಿಯಿಂದ ಬರೆದಿದ್ದಾನೆ. ಇಂಥ ರಜನೀಶನ ಮೂಲ ಸಿದ್ಧಾಂತ ಏನಪ್ಪಾ ಅಂದ್ರೆ - ಓದಬೇಡಿ, ಯೋಚಿಸಬೇಡಿ. ವಿಚಾರ ನಿಮ್ಮ ಶತ್ರು. ಅಧ್ಯಯನ ನಿಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ. ನನ್ನದು ನಿಷ್ಫಲ ಸಿದ್ಧಾಂತ.’ ಕೊನೆಯ ದಿನಗಳಲ್ಲಿ ರಜನೀಶ್‌ ಹೆಚ್ಚು ಮಾತಾಡುತ್ತಿರಲಿಲ್ಲ. ಮೌನವನ್ನೇ ಇಷ್ಟಪಡುತ್ತಿದ್ದ. ನಾನೇ ನನ್ನ ಸಂದೇಶ ಎಂದು ಸುಮ್ಮನಾಗಿಬಿಡುತ್ತಿದ್ದ. ಅವನ ಪುಸ್ತಕ ಓದಿಕೊಂಡವರು ಅವನ ಮುಂದೆ ಬಂದು ಚರ್ಚೆಗೆ ಕುಳಿತುಕೊಂಡರೆ ಆ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ‘ಬೇರೆ ವಿಷಯವೇನಾದರೂ ಇದ್ದರೆ ಮಾತಾಡಿ. ನಾನು ಮಾತಾಡಿದ್ದು ನನ್ನ ವಿಚಾರಗಳಲ್ಲ. ಅವು ಆ ಕ್ಷಣಕ್ಕೆ ಅನಿಸಿದ ಕ್ಷಣಿಕ’ ಎಂದು ಮುಖ ತಿರುಗಿಸಿಬಿಡುತ್ತಿದ್ದ. ಅವನ ಪ್ರವಚನಗಳನ್ನು ಆಧರಿಸಿದ ಹೊಸ ಪುಸ್ತಕ ಪ್ರಕಟಣೆಗೆ ಆತ ಅನುಮತಿ ನೀಡುತ್ತಿರಲಿಲ್ಲ. ರಜನೀಶನ ಅನೇಕ ಪುಸ್ತಕಗಳು ಅವನ ನಿಧನದ ನಂತರ ಪ್ರಕಟವಾಗಿವೆ.

ಮಧುರ, ರೋಮಾಂಚಕ ಹಾಡುಗಳನ್ನು ತನ್ನ ಮೋಡಿ ಕಂಠದಿಂದ ಮೊಗೆದು ಕೊಟ್ಟ ಕಿಶೋರ್‌ಕುಮಾರ್‌ ತನ್ನ ಹಾಡುಗಳ ವಿಷಯಕ್ಕೆ ಬಂದರೆ ಪರಮ ತಿಕ್ಕಲನಂತೆ ವರ್ತಿಸುತ್ತಿದ್ದ. ಫಿಲಂಫೇರ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭೇಟಿಯಾದ ಪತ್ರಕರ್ತನೊಬ್ಬ ‘ಕಳೆದ ಐದು ವರ್ಷಗಳಿಂದ ನಿಮ್ಮ ಆತ್ಮಕತೆ ಬರೆಯಲು ಅನುಮತಿ ನೀಡುವಂತೆ ಬೇಡಿಕೊಳ್ಳುತ್ತಿದ್ದೇನೆ. ನೀವು ಏನನ್ನೂ ಹೇಳುತ್ತಿಲ್ಲ. ನಿಮ್ಮ ಜತೆ ಕುಳಿತು ಮಾತಾಡಲು ಅವಕಾಶ ಕೊಟ್ಟರೆ ನಾನು ನೋಟ್ಸ್‌ ಮಾಡಿಕೊಳುತ್ತೇನೆ’ ಎಂಬ ಕೋರಿಕೆ ಮುಂದಿಟ್ಟ. ಕಿಶೋರ್‌ಕುಮಾರನಿಗೆ ಏನನಿಸಿತೋ ಏನೋ? ‘ನಾನೇನು ಮಹಾತ್ಮಾ ಗಾಂಧೀನಾ? ರಾಜ್‌ಕಪೂರಾ? ಆತ್ಮಕತೆ ಬರೀತಾನಂತೆ. ನಾನೂ ನಿನ್ನಂಥ ಆಸಾಮಿ. ನಾಲ್ಕು ಹಾಡು ಹಾಡಿದರೆ ಮಹಾನ್‌ ಆಗೊಲ್ಲ. ಇವೆಲ್ಲ ಭ್ರಮೆಗಳು. ಪತ್ರಕರ್ತರಿಗೆ ಬುದ್ಧೀನೇ ಇಲ್ಲ. ಎಲ್ಲರ ಮುಂದೆ ಕಾಗದ, ಪೆನ್ನು ಹಿಡಿದು ನಿಲ್ಲುತ್ತೀರಿ. ಯಾವ ಅಣಿಮುತ್ತು ಉದುರಿಸುತ್ತಾರೆ ಅಂತ ಈ ಬಡಿವಾರ?’ ಎಂದು ದಬಾಯಿಸಿಬಿಟ್ಟ.

ಒಮ್ಮೆ ಕ್ಯಾಸೆಟ್ಟು ಕಂಪನಿಯ ಮುಖ್ಯಸ್ಥನೊಬ್ಬ ಕಿಶೋರ್‌ಕುಮಾರ್‌ ಬ ಳಿ ಬಂದು ಆತನ ಆಯ್ದ ಹಾಡುಗಳ ಹತ್ತು ಕ್ಯಾಸೆಟ್‌ಗಳನ್ನು ತಂದುಕೊಟ್ಟ. ಕಿ.ಕು.ಗೆ ಏನನಿಸಿತೋ ಗೊತ್ತಿಲ್ಲ. ಅವೆಲ್ಲವನ್ನೂ ಜೋರಾಗಿ ಎಸೆದುಬಿಟ್ಟ. ಕೆಲವನ್ನು ಕಾಲಿನಿಂದ ಜಜ್ಜಿ ಪುಡಿಪುಡಿ ಮಾಡಿದ. ಆತನ ಈ ವಿಚಿತ್ರ ವರ್ತನೆ ಕಂಡ ಕ್ಯಾಸೆಟ್‌ ಕಂಪನಿ ಮಾಲೀಕ ತಬ್ಬಿಬ್ಬಾಗಿಬಿಟ್ಟ. ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ‘ನಾನು ಸಾವಿರಾರು ಹಾಡುಗಳನ್ನು ಹಾಡಿರಹುದು. ಅವು ಯಾವವೂ ನನ್ನವಲ್ಲ. ಒಮ್ಮೆ ನನ್ನ ಕಂಠದಿಂದ ಹೊರಬಿದ್ದ ಬಳಿಕ ಅವು ನನ್ನವಲ್ಲ. ನನ್ನ ಕಂಠ ಎಂದಿಗೂ ನಾನಲ್ಲ. ಹೀಗಿರುವಾಗ ಅವು ನನ್ನವೇ ಎಂದು ನಾನೇಕೆ ಬೀಗಬೇಕು?’ ಎಂದುಬಿಟ್ಟ. ಕೊನೆಕೊನೆಯಲ್ಲಿ ಕಿ.ಕು.ಗೆ ತನ್ನ ಹಾಡುಗಳಲ್ಲಿ ಯಾವುದೇ ಮೋಹ ಇರಲಿಲ್ಲ. ಟೇಪ್‌, ರೇಡಿಯೋದಲ್ಲಿ ಆತನ ದನಿ ಉಲಿಯುತ್ತಿದ್ದರೆ ಬಂದ್‌ ಮಾಡುವಂತೆ ಸೂಚಿಸುತ್ತಿದ್ದ.

ಮೊನ್ನೆ ಚೆನ್ನೈನಿಂದ ಎಸ್‌. ದಿವಾಕರ್‌ ಫೋನ್‌ ಮಾಡಿ, ಗೇಬ್ರಿಯಲ್‌ ಗಾರ್ಸಿಯಾ ಮಾರ್‌ಕ್ವೆಜ್‌ ಸಾನ್ನಿಧ್ಯದಲ್ಲಿ ಶ್ರೀಲಂಕಾ ಮೂಲದ ಅಮೆರಿಕನ್‌ ಇಂದ್ರನ್‌ ಅಮೃತನಾಯಗಂ ಕೆಲವು ಕ್ಷಣ ಕಳೆದಿದ್ದನ್ನು ಹೇಳುತ್ತಾ , ಹತ್ತಾರು ಫೋಟೋಗಳನ್ನು ಕಳುಹಿಸಿದ್ದರು. ಮಾರ್‌ಕ್ವೆಜ್‌ ಇತ್ತೀಚೆಗೆ ಯಾರನ್ನೂ ಭೇಟಿ ಮಾಡುತ್ತಿಲ್ಲ. ಏನನ್ನೂ ಬರೆಯುತ್ತಿಲ್ಲ. ಪತ್ರಿಕೆಯವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಯಾರೇ ಯಾವ ವೇದಿಕೆಗೆ ಕರೆದರೂ ಹೋಗುತ್ತಿಲ್ಲ. ಅದಿರಲಿ, ಆತ ಬರೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಮಾರ್‌ಕ್ವೆಜ್‌ ಹೋಗಲಿಲ್ಲ. ಈಗ ಮಾತುಕತೆ, ಬರಹ, ಅಧ್ಯಯನ, ಭಾಷಣ, ಭೇಟಿ ಎಲ್ಲವನ್ನೂ ಆತ ತೊರೆದು ಅಂತರಮುಖಿಯಾಗಿದ್ದಾನೆ. ಆತ ತನ್ನ ಸುತ್ತ ಯಾರನ್ನೂ ಬಿಟ್ಟುಕೊಳ್ಳುತ್ತಿಲ್ಲ. ಮೊನ್ನೆ ಆತನ ಚಿತ್ರ ‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾದಾಗ ಕೆಲವು ಓದುಗರೇ ‘ಆತ ಇನ್ನೂ ಬದುಕಿದ್ದಾನೆ ಎಂಬುದೇ ಗೊತ್ತಿರಲಿಲ್ಲ’ ಎಂದು ಹೇಳಿದರು. ಮಾರ್‌ಕ್ವೆಜ್‌ ಅಷ್ಟೊಂದು ನೇಪಥ್ಯಕ್ಕೆ ಸರಿದಿದ್ದಾನೆ. ಆತನಿಗೂ ತನ್ನ ಬರಹ, ಪುಸ್ತಕ, ಓದು... ಬೋಗಸ್‌ ಅಂತ ಅನಿಸುತ್ತಿದೆಯಾ?

ಕೆಲವು ಸಾಹಿತಿಗಳು, ಚಿಂತಕರು ಸತ್ತ ನಂತರ ಅವರ ಖಾಸಗಿ ಕೋಣೆಯನ್ನು ತಡಕಾಡಿದರೆ ಹತ್ತಾರು ಪುಸ್ತಕಗಳಿಗಾಗುವಷ್ಟು ಹಸ್ತಪ್ರತಿಗಳು ಸಿಗುತ್ತವೆ. ಕೆಲವರಂತೂ ತಾವು ಬರೆದಿದ್ದೆಲ್ಲವನ್ನೂ ಯಾರಿಗೂ ಗೊತ್ತಾಗದಂತೆ ಸುಟ್ಟು ಆತ್ಮತೃಪ್ತಿ ಹೊಂದುತ್ತಾರೆ. ಬ್ರಿಟನ್‌ನ ಖ್ಯಾತ ಪತ್ರಕರ್ತ, ಬದುಕಿದ್ದಾಗಲೇ ದಂತಕತೆಯಾದ ಹೆರಾಲ್ಡ್‌ ಇವಾನ್ಸ್‌ ಈ ಜಾತಿಗೆ ಸೇರಿದವ. ಪತ್ರಿಕೋದ್ಯಮದ ಬಗ್ಗೆ ಅಮೂಲ್ಯ ಪುಸ್ತಕಗಳನ್ನು ಬರೆದ ಇವಾನ್ಸ್‌, ‘ದಿ ಟೈಮ್ಸ್‌’ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಬರೆದ ಲೇಖನಗಳೆಲ್ಲವನ್ನೂ ಪ್ರಕಟಿಸಬೇಕೆಂದುಕೊಂಡಿದ್ದ. ತನ್ನ ಆತ್ಮ ಕಥೆಯನ್ನು ಬರೆದು ಮುಗಿಸಿದ್ದ. ಒಂದು ದಿನ ಅವೆಲ್ಲವನ್ನೂ ಗಂಟುಕಟ್ಟಿ ಮನೆ ಹೊರಗಿನ ತೊಟ್ಟಿಗೆ ಎಸೆದು ಬಂದುಬಿಟ್ಟ ! ಕೆಲ ವರ್ಷಗಳ ನಂತರ ಅದು ಯಾರದೋ ಕಣ್ಣಿಗೆ ಬಿದ್ದು ಪ್ರಕಟಣೆ ಕಂಡಿತೆನ್ನಿ.

ಕೆಲವರು ಊಟ, ತಿಂಡಿ, ಬಟ್ಟೆಬರೆಗೆ ಪಡಪೋಸಿ ಮಾಡಿಕೊಂಡು ದುಡ್ಡನ್ನು ಉಳಿಸಿ ಪುಸ್ತಕ ಖರೀದಿಸಿಟ್ಟುಕೊಳ್ಳುತ್ತಾರೆ. ಕೊನೆಗೊಂದು ದಿನ ಇವೆಲ್ಲ ನಿಷ್ಪ್ರಯೋಜಕವೆನಿಸಿ ಪ್ರೀತಿಯಿಂದ ಬದುಕಿನುದ್ದಕ್ಕೂ ಎದೆಗವುಚಿಕೊಂಡು ಬಂದ ಪುಸ್ತಕಗಳನ್ನೆಲ್ಲ ರದ್ದಿ ಅಂಗಡಿಯಲ್ಲಿ ತೂಕಕ್ಕೆ ಹಾಕಿ ಬಂದುಬಿಡುತ್ತಾರೆ !

ಇದಕ್ಕೆ ಏನನ್ನೋದು?

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X