• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತೆ ಕತೆ ಸಣ್ಣ ಕತೆ, ಕತೆಗಳ ಜತೆ ಮಾತುಕತೆ

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಕತೆಗಳೇ ಹಾಗೆ !

ಅವನ್ನು ಹೀಗೇ ಅಂತ ಹೇಳೋಕಾಗಲ್ಲ. ಹೇಗೆ ಬೇಕಾದರೂ ಇರಬಹುದು. ಪ್ರೇಯಸಿಯ ಮುನಿಸಿನ ಹಾಗೆ. ಇರುವೆಗಳ ಹೆಜ್ಜೆಯ ಹಾಗೆ. ಹುಯ್ಯೋ ಎಂದು ಮಳೆ ಸುರಿವಾಗ ವಟರ್‌ಗುಟ್ಟುವ ಕಪ್ಪೆಯ ಹಾಗೆ. ನೋಡನೋಡುತ್ತಿರುವಂತೆಯೇ ಅದೃಶ್ಯವಾಗುವ ಹುಲ್ಲಿನ ಮೇಲೆ ಕುಳಿತ ಮಂಜಿನ ಹನಿಗಳ ಹಾಗೆ. ಯಾಕಂದ್ರೆ ಕತೆಗಳೇ ಹಾಗೆ. ಅವು ನದಿಯಂತೆ, ಎಲ್ಲಿ ಹುಟ್ತಾವೆ ಅಂತಾನೇ ಗೊತ್ತಾಗೊಲ್ಲ. ಎಲ್ಲೆಲ್ಲಿಗೆ ಹೋಗ್ತಾವೆ ಅಂತಾನೂ ಗೊತ್ತಾಗೊಲ್ಲ. ಕತೆಗಳು ಕತೆಗಳ ಹಾಗೆ. ಅಂಥ ಕೆಲವು ಕತೆಗಳನ್ನು ನಿಮಗೆ ಹೇಳಬೇಕು.

*

ನೀವು ದುಂಬಿಯನ್ನು ನೋಡಿದ್ದೀರಲ್ಲ. ಅದರ ದೇಹ ದೊಡ್ಡದು. ದೇಹಕ್ಕೆ ಹೋಲಿಸಿದರೆ ರೆಕ್ಕೆ ಅಂಥ ಬಲಿಷ್ಠ ಅಲ್ಲ. ಥರ್ಮೋಡೈನಮಿಕ್ಸ್‌ ನಿಯಮ ಅಥವಾ ವಿಮಾನ ನೆಗೆಯುವ ನಿಯಮದ ಪ್ರಕಾರ ಅದು ಹಾರುತ್ತಿದೆ. ಅದಕ್ಕೆ ಕಾರಣ ಏನಿರಬಹುದು ? ಈ ತನಕ ದುಂಬಿ ಥರ್ಮೋ ಡೈನಮಿಕ್ಸ್‌ ನಿಯಮ ಓದಿಲ್ಲ.

*

‘ಊಟ ಮಾಡೋದು ಹೇಗೆ ?’ ಎಂದು ಗುರು ಶಿಷ್ಯನಿಗೆ ಹೇಳುತ್ತಿದ್ದ. ಊಟ ಮಾಡುವ ಬಗ್ಗೆ ಗುರು ಉಪನ್ಯಾಸ ಮಾಡುತ್ತಲೇ ಇದ್ದ. ಶಿಷ್ಯ ಊಟ ಮಾಡಿ ಕೈ ತೊಳೆದು ಬಂದು ಉಪನ್ಯಾಸ ಕೇಳಲಾರಂಭಿಸಿದ.

*

ರಬ್ಬಿ ಎಂಬ ಗುರು ಇದ್ದ. ಜನರ ಪ್ರಶ್ನೆಗಳಿಗೆ ಉತ್ತರಿಸುವುದೇ ಅವನ ಕೆಲಸ. ಅವನ ಸಲಹೆ ಪಡೆಯಲು ಜನ ಬರುತ್ತಿದ್ದರು. ಉತ್ತರಿಸುವಂತೆ ಪೀಡಿಸುತ್ತಿದ್ದರು. ಅವನಿಗೊಂದು ಯೋಜನೆ ಹೊಳೆಯಿತು. ಮನೆ ಮುಂದೆ ಬೋರ್ಡನ್ನು ತಗುಲಿ ಹಾಕಿದ. ‘ಒಂದು ಪ್ರಶ್ನೆಗೆ ನೂರು ರೂ. ಕೊಟ್ಟರೆ ಉತ್ತರ’ ಎಂದು ಬರೆದ. ಈ ಬೋರ್ಡನ್ನು ಕಂಡ ವ್ಯಾಪಾರಿಯಾಬ್ಬ ರಬ್ಬಿ ಬಳಿ ಬಂದು ನೂರು ರೂ. ಕೊಟ್ಟು ‘ಇಷ್ಟೊಂದು ಹಣ ಜಾಸ್ತಿ ಎನಿಸುವುದಿಲ್ಲವೇ ?’ ಎಂದು ಕೇಳಿದ. ಅದಕ್ಕೆ ರಬ್ಬಿ ಹೇಳಿದ. ‘ಹೌದು. ನಾನು ನಿನ್ನ ಒಂದು ಪ್ರಶ್ನೆಗೆ ಉತ್ತರಿಸಿದ್ದೇನೆ. ಮುಂದಿನ ಪ್ರಶ್ನೆಗೆ ಮತ್ತೆ ನೂರು ರೂ. ನೀಡಬೇಕಾಗುವುದು. ಇಲ್ಲದಿದ್ದರೆ ಎಲ್ಲ ಪ್ರಶ್ನೆಗೆ ಉತ್ತರ ನಿನ್ನಲ್ಲೇ ಇದೆ. ಅದಕ್ಕೆ ಹಣ ಕೊಡಬೇಕಿಲ್ಲ.’ ಅಂದಿನಿಂದ ರಬ್ಬಿಯನ್ನು ಯಾರೂ ಉತ್ತರಕ್ಕಾಗಿ ಪೀಡಿಸಲಿಲ್ಲ.

*

ಒಬ್ಬ ಶಿಷ್ಯ ಇದ್ದ. ಆತನಿಗೆ ಸಮಾಧಾನವೇ ಇರಲಿಲ್ಲ. ಎಲ್ಲಿಗೆ ಹೋದರೂ ಕೊರಗು. ಯಾರನ್ನು ನೋಡಿದರೂ ಕಿರಿಕಿರಿ. ಎಲ್ಲರನ್ನೂ ಟೀಕಿಸುವುದು ಅವನ ಕಾಯಕ. ಒಂದು ದಿನ ಆತ ಸತ್ತ. ‘ಸಮಾಧಿ ಕೊಳಕಾಗಿದೆ. ಇಲ್ಲಿ ಚಳಿ’ ಎಂದು ಆತ ಕೊರಗಿದ.

*

ಪ್ರವಾಸಿಯಾಬ್ಬ ಊರಿಂದೂರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸನ್ಯಾಸಿಯಾಬ್ಬನ ಆಶ್ರಮ ಕಾಣಿಸಿತು. ಅಲ್ಲೇನಿದೆಯೆಂದು ನೋಡಲು ಪ್ರವಾಸಿ ಆಶ್ರಮದೊಳಗೆ ಹೊಕ್ಕ. ಅಲ್ಲಿ ಸನ್ಯಾಸಿಯ ಹೊರತಾಗಿ ಏನೂ ಕಾಣಲಿಲ್ಲ. ಒಂದೇ ಒಂದು ಪೀಠೋಪಕರಣವೂ ಇರಲಿಲ್ಲ. ಪ್ರವಾಸಿಗೆ ಇದು ವಿಚಿತ್ರವಾಗಿ ಕಂಡಿತು. ‘ಏನು ಸ್ವಾಮೀಜಿ, ನಿಮ್ಮ ಆಶ್ರಮದಲ್ಲಿ ಒಂದು ಕುರ್ಚಿ ಸಹ ಇಲ್ಲವಲ್ಲ. ಹೇಗೆ ಬದುಕುತ್ತೀರಿ ಇಲ್ಲಿ ?’ ಎಂದು ಪ್ರವಾಸಿ ಕೇಳಿದ. ಅದಕ್ಕೆ ಸ್ವಾಮೀಜಿ ‘ನಿನ್ನ ಕುರ್ಚಿ ಎಲ್ಲಿದೆ ಹೇಳು ?’ ಎಂದ. ‘ಹಾಂ ಹಾಂ...ನನ್ನದಾ ? ನಾನು ಪ್ರವಾಸಿ’ ಎಂದ. ಅದಕ್ಕೆ ಸ್ವಾಮೀಜಿ ಹೇಳಿದ - ‘ನಾವೂ ಅಷ್ಟೇ. ನಾವೂ ಪ್ರವಾಸಿಗರು. ಒಂದಲ್ಲ ಒಂದು ದಿನ ಈ ಜಗದಿಂದ ಪ್ರವಾಸ ಹೋಗಲೇಬೇಕು.’

*

ಒಂದು ದಿನ ತನ್ನ ರಾಜ್ಯದ ಗಡಿಯಲ್ಲಿ ನೆಲೆಸಿರುವ ಗುಡೋ ಎಂಬ ಗುರುವನ್ನು ಬರುವಂತೆ ಆದೇಶಿಸಿದ. ‘ಗುಡೋ, ನಿಮಗೆ ಎಲ್ಲವೂ ಅರ್ಥವಾಗುವುದಂತೆ. ಬುದ್ಧಿವಂತರು ಹಾಗೂ ದಡ್ಡರು ಸಾಯುವಾಗ ಹೇಗಿರುತ್ತಾರೆ ? ಸತ್ತ ಬಳಿಕ ಅವರು ಹೇಗಿರುತ್ತಾರೆ ? ನನಗೆ ತಿಳಿದುಕೊಳ್ಳುವ ಆಸೆ.’ ಎಂದ ರಾಜ.

ಗುಡೋ: ನಾನು ಹೇಗೆ ಹೇಳಲಿ.

ರಾಜ: ನಿನಗೆ ಎಲ್ಲ ಗೊತ್ತು. ನೀನು ಗುರು.

ಗುಡೋ: ಆದರೆ ನಾನು ಇನ್ನೂ ಸತ್ತಿಲ್ಲವಲ್ಲಾ ?

*

ಇಬ್ಬರು ರಬ್ಬಿ ಗುರುಗಳು ನಾಜಿ ಜರ್ಮನಿಯಲ್ಲಿ ತಿರುಗಾಡುತ್ತಿದ್ದರು. ಅವರ ವೇಷ ಭೂಷಣ ಕಂಡು ವೈರಿಗಳಿರಬೇಕೆಂದು ಭಾವಿಸಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ಒಬ್ಬ ರಬ್ಬಿ ಭಯಭೀತನಾಗಿ ದೇವರನ್ನು ಪ್ರಾರ್ಥಿಸತೊಡಗಿದ. ಮತ್ತೊಬ್ಬ ರಬ್ಬಿ ಖುಷಿಯಿಂದ ನಿದ್ದೆ ಮಾಡತೊಡಗಿದ.

ಮೊದಲ ರಬ್ಬಿ: ನೀನ್ಯಾಕೆ ನಿದ್ದೆ ಮಾಡುತ್ತೀಯಾ ? ಆದು ಹೇಗೆ ಬರುತ್ತದೆ ?

ಎರಡನೆ ರಬ್ಬಿ : ನಾನು ನನ್ನ ಶಕ್ತಿಯನ್ನು ಉಳಿಸುತ್ತಿದ್ದೇನೆ. ಅದು ಮುಂದೆ ಬೇಕಾಗಬಹುದು.

ಮೊದಲ ರಬ್ಬಿ : ನಿನಗೆ ಭಯವಾಗುವುದಿಲ್ಲವಾ ? ನಮಗೇನಾದೀತೆಂದು ಯೋಚಿಸಿದ್ದೀಯಾ ?

ಎರಡನೇ ರಬ್ಬಿ : ಜೈಲಿಗೆ ಹಾಕುವ ತನಕ ಭಯವಿತ್ತು. ಈಗ ಆ ಭಯ ಇಲ್ಲ. ಈ ಜೈಲಿನ ಭದ್ರ ಕೋಣೆಯಾಳಗೆ ಯಾರೂ ನಮಗೆ ಏನೂ ಮಾಡಲಾರರು. ಜಗತ್ತಿನಲ್ಲಿ ಜೈಲಿನಲ್ಲಿರುವಷ್ಟು ಪ್ರಶಾಂತತೆ, ಸುಭದ್ರತೆ ಬೇರೆಲ್ಲಿದೆ ? ಈಗ ನನಗೆ ಭಯ ಇಲ್ಲ. ಬದುಕುವ ಆಸೆ ಹೆಚ್ಚುತ್ತಿದೆ.

*

ಒಬ್ಬ ವಿಪರೀತ ಕೆಲಸ ಮಾಡುತ್ತಿದ್ದ . ದಿನಕ್ಕೆ 22 ತಾಸು ಕೆಲಸ ಮಾಡುತ್ತಿದ್ದ. ನಿದ್ದೆಯನ್ನೇ ಮಾಡುತ್ತಿರಲಿಲ್ಲ. ಯಾರೋ ಅವನನ್ನು ಕೇಳಿದರು - ‘ಯಾಕೆ ಈ ಪರಿ ದುಡಿಯುತ್ತೀಯಾ ? ಇಂದಲ್ಲ ನಾಳೆ ನಾವೆಲ್ಲ ಸಾಯುತ್ತೇವೆ. ದುಡಿದಿದ್ದನ್ನು ಅನುಭವಿಸಬಾರದೆ ?’ ಅದಕ್ಕೆ ಆತ ಹೇಳಿದ - A Life That Ends With Death Is Life Not Worth Living.

*

ಶಿಷ್ಯನೊಬ್ಬ ಎದೆನೋವು, ಎದೆನೋವು ಎಂದು ಬಡಿದುಕೊಳ್ಳುತ್ತಿದ್ದ. ಗುರುಗಳೆಲ್ಲ ಓಡಿ ಬಂದರು. ಎದೆ ನೋವಿಗೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಒಬ್ಬೊಬ್ಬರು ಮನಸ್ಸಿಗೆ ಬಂದಂತೆ ಉಪದೇಶಿಸತೊಡಗಿದರು. ಶಿಷ್ಯ ಎದೆ ಬಡಿದುಕೊಳ್ಳುತ್ತಿದ್ದ. ಗುರುಗಳು ಉಪದೇಶಿಸುತ್ತಿದ್ದರು. ಎದೆನೋವು ತಾಳಲಾರದೇ ಶಿಷ್ಯ ಸತ್ತ. ಆತನಿಗೆ ಹಾಗೆ ಮಾಡಿದ್ದರೆ ಬದುಕುತ್ತಿದ್ದ. ಹೀಗೆ ಮಾಡಿದರೆ ಬದುಕುತ್ತಿದ್ದ ಎಂದು ಗುರುಗಳು ತಮ್ಮ ತಮ್ಮಲ್ಲೇ ಚರ್ಚಿಸತೊಡಗಿದರು.

*

ಶತ್ರು ದೇಶವನ್ನು ಮಣಿಸಿದ ನಂತರ ಸೇನಾ ಪಡೆಯ ಮುಖ್ಯಸ್ಥ ಊರಿಗೆ ಊರನ್ನೇ ನೆಲ ಸಮ ಮಾಡತೊಡಗಿದ. ಕ್ರೌರ್ಯ, ಅಟ್ಟ ಹಾಸ ಪ್ರದರ್ಶಿಸತೊಡಗಿದ. ಊರ ಕೊನೆಯಲ್ಲಿ ಒಂದು ಗುಡಿಸಲು ಕಾಣಿಸಿತು. ತನ್ನ ಸೇನೆಯಾಂದಿಗೆ ದಂಡನಾಯಕ ಬಂದ. ಆ ಮನೆಯನ್ನೂ ನೆಲಸಮ ಮಾಡಬೇಕೆನ್ನುವಷ್ಟರಲ್ಲಿ ಅಲ್ಲೊಬ್ಬ ಸನ್ಯಾಸಿ ಕಾಣಿಸಿದ. ದಂಡ ನಾಯಕ ಆತನ ಮುಂದೆ ಹೋಗಿ ಕೂಗಿದ - ‘ ನಾನ್ಯಾರು ಗೊತ್ತಾ ? ಕಣ್ಣು ಮುಚ್ಚುವುದರೊಳಗೆ ಈ ಖಡ್ಗದಿಂದ ನಿನ್ನ ಹೊಟ್ಟೆಯನ್ನು ಸೀಳಬಲ್ಲೆ ನಾನು.’ ಅದಕ್ಕೆ ಸನ್ಯಾಸಿ ‘ನಾನ್ಯಾರು ಗೊತ್ತ ? ಕಣ್ಣು ಮುಚ್ಚುವುದರೊಳಗೆ ಖಡ್ಗದಿಂದ ಸೀಳಲು ಹೊಟ್ಟೆಯನ್ನು ಕೊಡಬಲ್ಲೆ ನಾನು.’ ದಂಡ ನಾಯಕ ಹೊರಟ.

*

ಪ್ರಸಿದ್ಧ ಕಲಾವಿದ ಜೇನ್‌ ಕಾಕ್ಟಿಯನ್ನು ಸಂದರ್ಶಿಸಲು ಪತ್ರಕರ್ತ ಅವನ ಮನೆಗೆ ಹೋದ. ಮನೆ ತುಂಬಾ ಪುಸ್ತಕ. ಪೇಂಟಿಂಗ್‌, ಪ್ರಸಿದ್ಧ ಚಿತ್ರಕಾರರ ಕಲಾಕೃತಿಗಳು ಚೆಲ್ಲಾಪಿಲ್ಲಿ ಬಿದ್ದಿದ್ದವು. ಕಾಕ್ಟಿಗೆ ಅವೆಲ್ಲವನ್ನೂ ಕಂಡರೆ ಬಹಳ ಪ್ರೀತಿ. ಸಂದರ್ಶನದ ಮಧ್ಯೆ ಪತ್ರಕರ್ತ ಕೇಳಿದ- ‘ನಿಮ್ಮ ಮನೆಗೆ ಬೆಂಕಿ ಬಿತ್ತು ಎಂದು ಭಾವಿಸಿ. ಯಾವುದಾದರೂ ಒಂದು ವಸ್ತುವನ್ನು ಮಾತ್ರ ಎತ್ತಿಕೊಳ್ಳಲು ಸಾಧ್ಯ ಅಂತಾದ್ರೆ ಯಾವುದನ್ನು ಎತ್ತಿಕೊಳ್ಳುತ್ತೀರೀ ? ’ ಕಾಕ್ಟಿ ಹೇಳಿದ- ಬೆಂಕಿಯನ್ನು.

*

‘ನಿನಗ್ಯಾಕೆ ಮದುವೆಯಾಗಲು ಒಳ್ಳೆಯ ಹೆಂಗಸು ಸಿಗಲಿಲ್ಲ’ ಗುಡೋನನ್ನು ಶಿಷ್ಯರು ಕೇಳಿದರು. ಅದಕ್ಕೆ ಗುಡೋ ಹೇಳಿದ - ನಾನು ಯುವಕನಾಗಿದ್ದಾಗ ಪರಿಪೂರ್ಣ ಹೆಂಗಸನ್ನು ಮದುವೆಯಾಗಲು ಬಯಸಿದೆ. ಒಬ್ಬಳು ಸಿಕ್ಕಿದಳು. ನೋಡಲು ಸುಂದರವಾಗಿದ್ದಳು. ಆಧ್ಯಾತ್ಮಿಕ ಮನೋಭಾವದವಳು. ಆದರೆ ಪ್ರಾಪಂಚಿಕ ಜ್ಞಾನ ಇಲ್ಲ. ಹೀಗಾಗಿ ಮದುವೆಯಾಗಲಿಲ್ಲ. ಇನ್ನೊಬ್ಬಳು ಸಿಕ್ಕಳು. ಅವಳಿಗೆ ಪ್ರಾಪಂಚಿಕ, ಆಧ್ಯಾತ್ಮಿಕ ಜ್ಞಾನವಿತ್ತು. ನೋಡಲು ಸುಂದರವಾಗಿರಲಿಲ್ಲ. ಹೀಗಾಗಿ ಮದುವೆಯಾಗಲಿಲ್ಲ. ಕೊನೆಗೊಬ್ಬಳು ಸಿಕ್ಕಳು. ಅವಳು ಸುಂದರವಾಗಿದ್ದಳು. ಪ್ರಾಪಂಚಿಕ ಆಧ್ಯಾತ್ಮಿಕ ಜ್ಞಾನವಿತ್ತು. ಆದರೆ...’ ‘ಹೇಳಿ ಗುರುಗಳೇ ಆಕೆಯನ್ನೇಕೆ ಮದುವೆಯಾಗಲಿಲ್ಲ ?’ ಅದಕ್ಕೆ ಗುಡೋ ಹೇಳಿದ. ‘ಆಕೆಯನ್ನು ನಾನು ಮೆಚ್ಚಿದೆ. ಆಕೆ ನನ್ನನ್ನು ಮೆಚ್ಚಲಿಲ್ಲ.’

*

‘ಜೀವನವಿಡೀ ಪ್ರಾಣಿ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ನನ್ನ ಬದುಕಿನ ಗತಿಯೇ ಇದರಿಂದ ಬದಲಾಯಿತು’ ಎಂದ ಯೋಗಿ. ಅದಕ್ಕೆ ಗುಡೋ ಹೇಳಿದ- ‘ನೀವು ಹೇಳೋದು ನಿಜ. ಒಮ್ಮೆ ಒಂದು ದೊಡ್ಡ ಮೀನು ನನ್ನನ್ನು ಉಳಿಸಿತು. ಈಗ ನಾನೇನಾದರೂ ಬದುಕಿದ್ದರೆ ಅದಕ್ಕೆ ಆ ಮೀನೇ ಕಾರಣ.’ ಯೋಗಿಗೆ ಬಹಳ ಆಶ್ಚರ್ಯವಾಯಿತು. ಅರೇ, ನಾನು ಅರಿಯದ ಸತ್ಯವನ್ನು ಈತ ಕಂಡುಕೊಂಡಿದ್ದಾನಲ್ಲ ಎನಿಸಿತು. ಆ ಮೀನಿನ ಬಗ್ಗೆ ತಿಳಿಸುವಂತೆ ಯೋಗಿ ಒತ್ತಾಯಿಸಲಾರಂಭಿಸಿದ. ಅದಕ್ಕೆ ಗುಡೋ, ‘ನೀನು ನನಗೆ ನಿನ್ನೆಲ್ಲ ವಿದ್ಯೆಯನ್ನು ಧಾರೆಯೆರೆದರೆ ಹೇಳುತ್ತೇನೆ’ ಎಂದ. ಯೋಗಿ ಒಪ್ಪಿ , ತಾನು ಪ್ರಾಣಿ ಪಕ್ಷಿಗಳ ಬಗ್ಗೆ ಜೀವನವಿಡೀ ಕಲಿತಿದ್ದನ್ನು ಧಾರೆಯೆರೆದ. ‘ಈಗ ಮೀನಿನ ಬಗ್ಗೆ ಹೇಳು’ ಎಂದ. ಗುಡೋ ಹೇಳಿದ- ‘ಬಹಳ ಸರಳ. ನಾನು ಅಂದು ಹಸಿವಿನಿಂದ ಸತ್ತೇ ಹೋಗುತ್ತಿದ್ದೆ. ತಿನ್ನಲು ಏನೇನೂ ಸಿಗಲಿಲ್ಲ. ಅದನ್ನು ತಿಂದು ಹಸಿವನ್ನು ನಿವಾರಿಸಿಕೊಂಡು ಬದುಕಿದೆ.’

*

ತಂದೆ, ಮಗ ಇಬ್ಬರೂ ಒಂದೇ ಮನೆಯಲ್ಲಿದ್ದರು. ಮಗನಿಗೆ ಮದುವೆಯಾಯಿತು. ಹೆಂಡತಿ ಬಂದವಳೇ ಗಂಡನ ಬಳಿ ಆತನ ತಂದೆಯ ಬಗ್ಗೆ ಚಾಡಿ ಹೇಳಲು ಆರಂಭಿಸಿದಳು. ಈ ಮುದಿ ಗೂಬೆಯ ಹೊಟ್ಟೆಯನ್ನು ನಾನೇಕೆ ಹೊರೆಯಬೇಕು ಎಂದು ಗಂಡನಿಗೂ ಅನಿಸಲಾರಂಭಿಸಿತು. ಒಂದು ದೊಡ್ಡ ಮರದ ಪೆಟ್ಟಿಗೆ ತಂದು ಅದರೊಳಗೆ ತಂದೆಯನ್ನು ಇಟ್ಟು ಬಿಸಾಡಬೇಕೆಂದು ಊರ ಹೊರಗಿನ ಕಣಿವೆಗೆ ತಂದ. ಪೆಟ್ಟಿಗೆಯಾಳಗಿನ ತಂದೆ ಹೇಳಿದ- ‘ಮಗನೇ ನೀನು ನನ್ನನ್ನು ಪೆಟ್ಟಿಗೆ ಇಲ್ಲದೇ ಬಿಸಾಕಬಹುದು. ಆದರೆ ಪೆಟ್ಟಿಗೆ ನಿನ್ನಲ್ಲಿಯೇ ಇರಲಿ. ನಿನ್ನ ಮಕ್ಕಳಿಗೆ ಉಪಯೋಗಕ್ಕೆ ಬಂದೀತು.’

*

‘ಬೇರೆಯವರಿಗಾಗಿ ಕಾಳಜಿ ವಹಿಸುವ ಮಗು’ವನ್ನು ಆಯ್ಕೆ ಮಾಡಲು ಗುಡೋನನ್ನು ಶಾಲೆಗೆ ಆಹ್ವಾನಿಸಲಾಯಿತು. ಗುಡೋ ಒಬ್ಬ ಮಗುವನ್ನು ಆಯ್ಕೆ ಮಾಡಿದ. ಮಗುವಿನ ನೆರೆಮನೆಯಾತ ತೊಂಬತ್ತು ವರ್ಷದ ಮುದುಕ. ಹೆಂಡತಿ ಸತ್ತಿದ್ದಕ್ಕೆ ಗೊಳೋ ಎಂದು ಅಳುತ್ತಿದ್ದ. ಈ ಮಗು ಹೋಗಿ ಅವನ ತೊಡೆ ಮೇಲೆ ಕುಳಿತಿತು. ಮನೆಗೆ ಬಂದಾಗ ಮಗುವನ್ನು ತಾಯಿ ಕೇಳಿದಳು- ‘ಆ ಮುದುಕನನ್ನು ಏನೆಂದು ಹೇಳಿ ಸಂತೈಸಿದೆ?’ ಅದಕ್ಕೆ ಮಗು ಹೇಳಿತು- ‘ಹೆಂಡತಿ ಕಳೆದುಕೊಂಡಿದ್ದಕ್ಕಾಗಿ ಆತ ಅಳುತ್ತಿದ್ದ . ಆತ ಜೋರಾಗಿ ಕಿರುಚಲು ನಾನು ಅವನ ತೊಡೆ ಚಿವುಟುತ್ತಿದ್ದೆ.’

*

ಕತೆಗಳು ಹೇಗೆ ಹೇಳಿ? ಹೀಗೇನೇ. ಅಂದ್ರೆ ಹಾಗೇನೆ. ಕತೆಗಳ ಥರಾನೆ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more