• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಡಿ ಸಂತೋಷ, ಮಣ ದುಃಖ, ಬದುಕಂದ್ರೆ ಇಷ್ಟೇನಾ ?

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಆತ ತನ್ನ ಅಸಹಾಯಕತೆ, ದೈನೇಸಿ ಸ್ಥಿತಿ ಕಂಡು ಹೋಟೆಲು ರೂಮಿನಲ್ಲಿ ಕುಳಿತು ಅಳುತ್ತಿದ್ದ. ಪತ್ರಿಕೆಯಲ್ಲಿ ಪ್ರಿಂಟಾದ ತನ್ನ ಚಿತ್ರ ಅವನಲ್ಲಿ ಅಂಥ ಒಂದು ಅಶ್ರುಧಾರೆ ಹುಟ್ಟಿಸಿತ್ತು. ಆತ ಎಂದೂ ಆ ಪರಿ ಅತ್ತಿರಲಿಕ್ಕಿಲ್ಲ. ತನ್ನ ಸ್ಥಿತಿ ಕಂಡು ಮರುಗಿರಲಿಕ್ಕಿಲ್ಲ. ಅಂದು ಏನೆನಿಸಿತೋ ಏನೋ? ಆತ ತನ್ನೊಳಗಿದ್ದ ಕಂಬನಿಯನ್ನು ಹಿಡಿದಿಟ್ಟುಕೊಳ್ಳಲಾಗದೇ ಪುಟ್ಟ ಮಗುವಿನಂತೆ ಬಿಕ್ಕುತ್ತಿದ್ದ.

ಇಡೀ ಜಗತ್ತು ಆತನನ್ನು ಪ್ರೀತಿಯಿಂದ, ಗೌರವದಿಂದ ‘ಸರ್‌’ ಎಂದು ಕರೆಯುತ್ತದೆ. ಆತನ ಮುಂದಿನ ಹೆಸರು ಎಡ್ಮಂಡ್‌ ಹಿಲರಿ!

ವಿಶ್ವದಲ್ಲಿಯೇ ಅತಿ ಉತ್ತುಂಗ ಶಿಖರ ಹಿಮಾಲಯದ ನೆತ್ತಿಯ ಮೇಲೆ ಮೊದಲ ಬಾರಿಗೆ ಕಾಲಿಟ್ಟು, ಕುಣಿದಾಡಿ, ಸಂಭ್ರಮಿಸಿ ಬಂದ ಅಸಾಧಾರಣ ಪರ್ವತಾರೋಹಿ, ಬರೋಬ್ಬರಿ ಐವತ್ತು ವರ್ಷಗಳ ನಂತರ, ಅಂದಿನ ಸಾಧನೆಗಾಗಿ ಸನ್ಮಾನಕ್ಕೆಂದು ಕರೆದರೆ ಆರು ಮೆಟ್ಟಿಲುಗಳಿರುವ ವೇದಿಕೆಯನ್ನೇರಲಾಗದೇ ಸುಸ್ತು ಹೊಡೆದು ನಿಂತಿದ್ದ. ಅಂದು ಕಾರ್ಯಕ್ರಮ ಸಂಘಟಕರು ಹಿಲರಿಯ ಎರಡೂ ಕೈಗಳನ್ನು ಹಿಡಿದು ಅನಾಮತ್ತು ಎತ್ತಿ ವೇದಿಕೆ ಮೇಲೆ ಕುಳ್ಳಿರಿಸಿದ್ದರು. ಹಿಮಾಲಯ ಪರ್ವತ ಏರಿದ ಸಾಹಸಿಗೆ ಮೊದಲ ಬಾರಿಗೆ ತನ್ನ ಜೀವನ ಇಲ್ಲಿಗೆ ಮುಗಿದೇಹೋಯಿತು ಎಂದೆನಿಸಿತು.

Margaret Thatcherಮರುದಿನ ಎಲ್ಲ ಪತ್ರಿಕೆಗಳು ವೇದಿಕೆಯೇರಲಾಗದೇ ಪರಿತಪಿಸುವ ಹಿಲರಿ ಚಿತ್ರವನ್ನು ಮುಖಪುಟದಲ್ಲಿ ಪ್ರಿಂಟು ಮಾಡಿದ್ದವು. ಹಿಲರಿ ಆ ಚಿತ್ರಗಳ ಮುಂದೆ ‘ಗಳಗಳ’ವನ್ನು ಕರೆದಿದ್ದ. ಅವನ ಸ್ಥಿತಿ ಕಂಡು ಸಂತೈಸುತ್ತಿದ್ದ ಆತನ ಸಹಾಯಕನಿಗೆ ‘ನನ್ನನ್ನು ಹೀಗೇ ಅಳಲು ಬಿಡು. ನಾನು ಅಳಬೇಕು’ ಎಂದು ಹಿಲರಿ ಅಗ್ದಿ ಮುಗ್ಧನಾಗಿ ಬಡಡಿಸುತ್ತಿದ್ದ. ಆತ ತೊಟ್ಟಿದ್ದ ಟೀ-ಶರ್ಟು ಎದೆಗೆ ಅಂಟಿಕೊಂಡಿತ್ತು. ಅದರ ಮೇಲೆ ಹಿಮಾಲಯ ಪರ್ವತ ಶ್ರೇಣಿಗಳ ಚಿತ್ರವಿತ್ತು !

ಆತನಿಗೆ ಹೇಗಾಗಿರಬೇಡ ? ಇಡೀ ವಿಶ್ವವೇ ತನ್ನನ್ನು ಗುರುತಿಸಿದ್ದು, ಗೌರವಿಸಿದ್ದು ಹಿಮಾಲಯ ಏರಿದ ಸಾಹಸಿ ಎಂಬ ಕಾರಣಕ್ಕೆ. ಅದೇ ನನಗೆ ಇಂದು ಆರು ಮೆಟ್ಟಿಲ ವೇದಿಕೆಯೇರಲು ಆಗುತ್ತಿಲ್ಲ. ಅದೂ ಆ ಪರ್ವತವೇರಿದ ಸಾಹಸಿ ಎಂದು ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ. ಅಂದು ಆ ಶೃಂಗದ ಮೇಲೆ ನಡೆದಾಡಿದ್ದು ನಾನೇನಾ? ಅಂದು ಬೀಗಿ ಬಲಿತು, ಸಂತಸದಿಂದ ನಲಿದಾಡಿದ್ದು ನಾನೇನಾ? ಅಂದು ತನ್ನ ತಲೆ ಮೇಲೆ ಕುಳ್ಳಿರಿಸಿಕೊಂಡಿದ್ದು ಈ ಹಿಮಾಲಯವೇನಾ? ಹಿಲರಿ ಗೊಂದಲದ ಪರ್ವತದ ಮುಂದೆ ಕುಳಿತು ರೋದಿಸುತ್ತಿದ್ದ. ಆ ಕ್ಷಣದಿಂದಲೇ ಆತನ ಜೀವನದಲ್ಲೊಂದು ವಿಚಿತ್ರ ಭಾವ ಹೊಕ್ಕಿಬಿಟ್ಟಿತು. ಆತ ಮೊದಲಿನಂತೆ ಇರಲಿಲ್ಲ. ಇರುವುದು ಸಾಧ್ಯವೂ ಇರಲಿಲ್ಲ.

ಬದುಕು ಹೀಗೆ ಹೇಳದೇ ಕೇಳದೇ ಹಳ್ಳಕ್ಕೆ ಬೀಳುವುದಿದೆಯಲ್ಲ, ಅದನ್ನು ಅಸಹಾಯಕರಾಗಿ ಅನುಭವಿಸುವುದಿದೆಯಲ್ಲ ಅದು ನಿಜಕ್ಕೂ ಘನಘೋರ. ಅದು ಬದುಕಿಯೂ ನರಳುತ್ತಾ ಸತ್ತ ಸ್ಥಿತಿ. ಆತ್ಮೀಯ ಸಂಗಾತಿಯಂತೆ, ಕೊರಳ ಗೆಳೆಯನಂತೆ, ನಲುಮೆಯ ನೊಗದ ಜತೆಗಾರನಂತೆ ಕೈಹಿಡಿದು ಕರೆದುಕೊಂಡು ಹೋಗುತ್ತಿದ್ದ ಜೀವನ ಹೀಗೇ ಏಕಧಂ ನಡುನೀರಿನಲ್ಲಿ ಬಿಡುವವರಂತೆ ಕೈಬಿಟ್ಟು ಏನೂ ಆಗಿಲ್ಲವೇನೋ ಎಂಬಂತೆ ಸುಮ್ಮನೆ ನಡೆದು ಹೋಗುವುದಿದೆಯಲ್ಲ ಅದು ಘಾತುಕತನದ ಪರಮಾವಧಿ. ನಮ್ಮ ಬದುಕೇ ನಮ್ಮ ವಿರೋಧಿ ಸ್ಥಾನದಲ್ಲಿ ನಿಂತು ಹಲ್ಲು ಮಸೆಯುವುದು, ಮೀಸೆ ತಿರುವುವುದು, ತೋಳೇರಿಸಿ ತೊಡೆ ತಟ್ಟುವುದು, ನಮ್ಮ ಹತಾಶೆ ಕಂಡು ಗಹಗಹಿಸಿ ನಗುವುದೊಂದು ದುರಂತ. ಅವನ ಬದುಕೇ ಅವನನ್ನು ಅಟಕಾಯಿಸಿಕೊಂಡು ಹೊಡೆಯಿತು ಅಂತಾರಲ್ಲ ಹಾಗೆ.

ಅಂದು ಹಿಲರಿಗಾದದ್ದೂ ಅದೇ! ಹೋಟೆಲು ರೂಮಿನಲ್ಲಿ ಆತ ರೋದಿಸುತ್ತಿದ್ದರೆ ಹಿಮಾಲಯದಂಥ ಅವನ ವ್ಯಕ್ತಿತ್ವ, ಅಹಂ ಅವನ ಮುಂದೆ ಅಪ್ಪಚ್ಚಿಯಾಗಿ ಬಿದ್ದಿತ್ತು. ಆತ ಇಲ್ಲಿಂದ ಹೊರಡುವಾಗ ಕೊನೆಗೊಂದು ಮಾತು ಹೇಳಿ ಹೋದ- ‘‘ಸಾಧನೆಗಳು ದಾಖಲೆ ಪುಸ್ತಕಕ್ಕಾಗಿ. ಅವು ಅಲ್ಲಿ ಶಾಶ್ವತ. ಬದುಕು ಯಾವತ್ತಿದ್ದರೂ ನಶ್ವರ. ನಾವು ನಮ್ಮ ಬದುಕಿನೊಂದಿಗೇ ಸಾಯಬೇಕು, ಸಾಧನೆಗಳನ್ನು ಬಿಟ್ಟು.’’

ಬ್ರಿಟನ್‌ನ ಪ್ರಧಾನಿ ಮಾರ್ಗರೇಟ್‌ ಥ್ಯಾಚರ್‌ ಗೊತ್ತಲ್ಲ. Iron Lady- ಉಕ್ಕಿನ ಮಹಿಳೆ ಎಂದೇ ಈಕೆಗೆ ರೆಕ್ಕೆಪುಕ್ಕ. ಆಕೆ ಹನ್ನೊಂದು ವರ್ಷ ‘ಅನಭಿಷಿಕ್ತ ರಾಣಿ’ಯಂತೆ ಇಂಗ್ಲಿಷು ಸಾಮ್ರಾಜ್ಯ ಆಳಿದಳು. ಮ್ಯಾಗಿ ಮುಂದೆ ಮಾತನಾಡಲು ಪ್ರತಿಪಕ್ಷದ ನಾಯಕರೂ ಸಹ ಹಿಂದೆ ಮುಂದೆ ನೋಡುತ್ತಿದ್ದರು. ಮಾತು ಕೃತಿಯಲ್ಲಿ ಅಸಾಧಾರಣ ಪ್ರೌಢಿಮೆ ಸಾಧಿಸಿದ ಈಕೆ, ಜನಪ್ರಿಯತೆಯ ಶ್ರೇಣಿಯಲ್ಲಿ ವಿನ್‌ಸ್ಟನ್‌ ಚರ್ಚಿಲ್‌ಗೆ ಸಮವಾಗಿದ್ದಳು. ಬೀದಿಯಲ್ಲಿ ನಿಂತು ಆಕೆ ಹೆಸರು ಹೇಳಿ ಪ್ರತಿಭಟನೆ ಮಾಡುವ, ಧಿಕ್ಕಾರ ಕೂಗುವ ನಾಯಕರು ಆಕೆಯ ಮುಂದೆ ಮಾತು ಮರೆತು ಹೋದವರಂತೆ ಮಂಕಾಗಿ ಕುಳಿತಿರುತ್ತಿದ್ದರು. ಹೌಸ್‌ ಆಫ್‌ ಕಾಮನ್ಸ್‌ನಲ್ಲಿ, ಲಾರ್ಡ್ಸ್‌ನಲ್ಲಿ. ಮ್ಯಾಗಿ ಮಾತಿಗೆ ನಿಂತರೆ ಪಕ್ಕದ ಥೇಮ್ಸ್‌ ನದಿಯ ಜುಳುಜುಳು ಕೇಳಿಸುವಷ್ಟು ನಿಶ್ಯಬ್ದವಿರುತ್ತಿತ್ತು. ಯಾರೂ ಎದುರಾಡುತ್ತಿರಲಿಲ್ಲ.

ಇಂದು ಅದೇ ಮ್ಯಾಗಿಗೆ ಮಾತಾಡಲು ಆಗುತ್ತಿಲ್ಲ. ದೇಹ ಸೊರಗಿದೆ. ಕಿವಿ ಕೇಳಿಸುತ್ತಿಲ್ಲ. ಮುಖ ಸುಕ್ಕಾಗಿ ನುಕ್ಕುಗಟ್ಟಿದೆ. ಮನಸ್ಸಿನಲ್ಲಿ ದಟ್ಟವಾಗಿ ಮರೆವು ಆವರಿಸಿದೆ. ಎದುರಿಗೆ ಮಗಳು ಬಂದರೂ ಗುರುತಿಸಲಾಗದಂಥ ಮರೆವು. ಕಣ್ಣಿಗೆಲ್ಲ ಮಬ್ಬು.

ಐವತ್ತು ವರ್ಷ ಜತೆಯಾಗಿದ್ದ, ಮಾರ್ಗದರ್ಶಕನಾಗಿದ್ದ, ಗೆಳೆಯನಂತಿದ್ದ ಪತಿ ಡೆನಿಸ್‌ ಐದು ವಾರಗಳ ಹಿಂದೆ ತೀರಿಕೊಂಡ. ಗಂಡನ ನಿಧನ ಮ್ಯಾಗಿಯಲ್ಲೊಂದು ನಿರ್ಲಿಪ್ತತೆ ಸೃಷ್ಟಿಸಿತು. ಈಗ ಬಿಟ್ಟುಬಿಡದೇ ಕಾಡುವ ಏಕಾಂಗಿತನ, ಅಗಲಿಕೆ. ಮನಸ್ಸಿಗೆ, ದೇಹಕ್ಕೆ ಆಗಾಗ ಬಿದ್ದ ಆಘಾತಗಳಿಂದ ಆಕೆ ಅಷ್ಟಷ್ಟೇ ತತ್ತರಿಸಿದ್ದಾಳೆ. ಮ್ಯಾಗಿಯನ್ನು ನೋಡಲು ಬರುವ ಅನೇಕ ವರ್ಷಗಳ ಸ್ನೇಹಿತರನ್ನು ಸಹ ಆಕೆಗೆ ಗುರುತಿಸಲು ಆಗುತ್ತಿಲ್ಲ. ನಲವತ್ತು ವರ್ಷಗಳಿಂದ ಆಕೆಯಾಂದಿಗಿದ್ದ ಮ್ಯಾಕ್‌ಡಾಗಲ್‌ ಎಂಬ ಪರಿಚಾರಕ ಮ್ಯಾಗಿಯ ಸ್ಥಿತಿ ಕಂಡು ಮಮ್ಮಲ ಮರುಗಿದ. ಆಕೆಯ ಆತ್ಮವಿಶ್ವಾಸ, ಛಲ ಕಂಡು ಕರುಬುತ್ತಿದ್ದವರು, ಆಕೆಯ ಧೈರ್ಯಕ್ಕೆ ಸಟ್ಟ ಸಲಾಮು ಹೊಡೆಯುತ್ತಿದ್ದವರು ಇಂದಿನ ಸ್ಥಿತಿ ಕಂಡು ಒಂದು ಕ್ಷಣ ಸ್ತಂಭೀಭೂತರಾಗುತ್ತಾರೆ.

ಬ್ರಿಟನ್‌ನ ಏಕಮಾತ್ರ‘ಪುರುಷ ಪ್ರಧಾನಿ’ ಎಂಬ ಅಭಿದಾನಕ್ಕೆ ಪಾತ್ರಳಾದ ಮ್ಯಾಗಿಯನ್ನು ನೋಡಿದರೆ, ಅವಳ ಬದುಕೇ ಅವಳನ್ನು ದಾರುಣವಾಗಿ ಪೀಡಿಸಿ ಕಳಿಸುತ್ತಿದೆಯೆನಿಸುತ್ತದೆ. ಒಂದು ಕಾಲಕ್ಕೆ ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಕರೆಯಿಸಿಕೊಳ್ಳುತ್ತಿದ್ದ ಮ್ಯಾಗಿ, ಈಗ ನಿಕೃಷ್ಟ, ಹತಭಾಗ್ಯ ಬದುಕನ್ನು ಸವೆಸುತ್ತಿದ್ದಾಳೆ. ಉಕ್ಕಿನ ಮಹಿಳೆಯ ಮೈಮನಕ್ಕೆಲ್ಲ ಲೇಪ ತುಕ್ಕು! ಈಗಿನ ಪ್ರಧಾನಿ ಟೋನಿಬ್ಲೇರ್‌ ಮೊನ್ನೆ ಮಲಗಿದ ಹಾಸಿಗೆ ಬಳಿ ಹೋಗಿ ಆಕೆಯ ತಲೆ, ಹಣೆ ಸವರಿ ಬಂದ. ಮ್ಯಾಗಿಗೆ ಗೊತ್ತೇ ಆಗಲಿಲ್ಲ.

ಬದುಕು ಈ ಪಾಟಿ ಕಠೋರವಾದರೆ ಹೇಗೆ? ಇದಕ್ಕೆ ಉತ್ತರಿಸಬೇಕಾದವರು ಯಾರೆಂಬ ಪ್ರಶ್ನೆ ಮೂಡುತ್ತಿರುವಾಗಲೇ ಇನ್ನೊಂದು ಪುರಾತನ ಕತೆ ನೆನಪಾಗುತ್ತದೆ.

ಈತನ ಹೆಸರು ರಾವ್‌ ಬಹದ್ದೂರ್‌ ಮೋಹಸಿಂಗ್‌ ಓಬೇರಾಯ್‌. ಅವನದು rags to riches ಅಂತಾರಲ್ಲ ಆ ರೀತಿ ಬದುಕು. ಓಬೇರಾಯ್‌ ಹೋಟೆಲ್‌ ಮಾಲೀಕ. ಊಟಕ್ಕೆ ತತ್ವಾರವಾಗುವಂಥ ಬಡತನ. ಕೈಗೆ ಉದ್ಯೋಗವಿಲ್ಲ. ಹೆಂಡತಿ ಒಡವೆ ಮಾರಾಟ ಮಾಡಿ, ಆಕೆಯನ್ನು ತವರಿನಲ್ಲಿ ಬಿಟ್ಟು ಆತ ಶಿಮ್ಲಾಕ್ಕೆ ಓಡಿಹೋದ. ಅಲ್ಲಿ ಊಟ ತಿಂಡಿಯಿಲ್ಲದೇ ದಿನವಿಡೀ ಅಲೆದ. ಯಾವುದಾದರೂ ಕೆಲಸ ಕೊಡುವಂತೆ ಹೋಟೆಲೊಂದರ ಮುಂದೆ ಬಿಕನಾಸಿಯಂತೆ ಗೋಗರೆದ. ಈತನ ವರಾತ ತಾಳಲಾರದೇ ವೇಟರ್‌ ಕೆಲಸವನ್ನು ಆ ಹೋಟೆಲ್‌ ಮಾಲೀಕ ಕೊಟ್ಟ. ನೆಲೆಯೂರಲು ಅಂತೂ ಜಾಗ ಸಿಕ್ಕಿತು. ತಾನೂ ಇಂಥದೇ ಹೋಟೆಲ್‌ನ ಮಾಲೀಕನಾಗಬೇಕು, ದೇಶದ ಎಲ್ಲ ಪ್ರಮುಖ ಊರುಗಳಲ್ಲಿ ಹೋಟೆಲ್‌ನ್ನು ಶುರು ಮಾಡಬೇಕು, ಸಾಧ್ಯವಾದರೆ ವಿದೇಶಗಳಲ್ಲೂ ಎಂದು ಓಬೇರಾಯ್‌ ಕನಸು ಕಾಣುತ್ತಿದ್ದ. ಒಬ್ಬ ಸಾಮಾನ್ಯ ವೇಟರ್‌ ಆಗಿ ತನ್ನ ಹಡಾಂಗಕ್ಕೆ ಮೀರಿದ ಕನಸು ಕಾಣುತ್ತಿದ್ದೇನೆಂದು ಅವನಿಗೆ ಅನಿಸುತ್ತಿರಲಿಲ್ಲ.

ಕೆಲಸ ಮಾಡುತ್ತಿದ್ದ ಹೋಟೆಲ್‌ನ ಮಾಲೀಕ ಏಕಾಏಕಿ ತೀರಿಹೋದ. ಆತನಿಗೆ ತನ್ನ ಹೋಟೆಲ್‌ನ್ನು ಓಬೇರಾಯ್‌ಗೇ ಕೊಡಬೇಕೆಂಬ ಮನಸ್ಸಿತ್ತು. ಓಬೇರಾಯ್‌ ಸಾಲ ಮಾಡಿ, ಈ ಹೋಟೆಲ್‌ನ್ನು ಖರೀದಿಸಿದ. ಅದು ಅವನ ಜೀವನ ಗತಿಯನ್ನೇ ಬದಲಿಸಿತು. ಅನಂತರ ಆತ ಮುಟ್ಟಿದ್ದೆಲ್ಲ ಚಿನ್ನವಾಯಿತು. ಆತ ಒಂದಾದ ನಂತರ ಒಂದು ಹೋಟೆಲ್‌ನ್ನು ಖರೀದಿಸುತ್ತಾ ಹೋದ. ಪ್ರತಿ ಖರೀದಿಯೂ ಮುಂದಿನ ಖರೀದಿಗೆ ವೇದಿಕೆಯಾಯಿತು. ದೇಶದ ಯಾವುದೇ ಊರಿಗೆ ಹೋದರೂ ಅಲ್ಲೊಂದು ತನ್ನ ಹೆಸರಲ್ಲಿ ಪಂಚತಾರಾ ಹೋಟೆಲ್‌. ಓಬೇರಾಯ್‌ ಹೆಸರು ಐಷಾರಾಮಿ ಹೋಟೆಲ್‌ಗೆ ಪರ್ಯಾಯವಾಯಿತು. ಇಷ್ಟಕ್ಕೆ ನಿಲ್ಲಲಿಲ್ಲ. ಇಂಗ್ಲೆಂಡ್‌, ಅಮೆರಿಕ, ಶ್ರೀಲಂಕಾ ಸೇರಿದಂತೆ ಒಂಬತ್ತು ದೇಶಗಳಲ್ಲೂ ಪಂಚತಾರಾ ಹೋಟೆಲ್‌ನ್ನು ಆತ ಕಟ್ಟಿದ. ಹೋಟೆಲ್‌ನ ಮ್ಯಾನೇಜ್‌ಮೆಂಟ್‌ ಕಾಲೇಜು ತೆರೆದ. ಓಬೇರಾಯ್‌ಗೆ ಪದ್ಮಶ್ರೀ, ಪದ್ಮಭೂಷಣ, ರಾಜ್ಯಸಭಾ ಸದಸ್ಯತ್ವ ಅಯಾಚಿತವಾಗಿ ಬಂದವು.

ಇಲ್ಲಿ ತನಕ ಎಲ್ಲವೂ ಸರಿಯಾಗಿಯೇ ಇತ್ತು.

ಓಬೇರಾಯ್‌ನ ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಅಪಘಾತದಲ್ಲಿ ಸತ್ತ. ಪ್ರೀತಿಯಿಂದ ಸಾಕಿದ ಮಗಳು ತೀರಿಹೋದಳು. ಜೀವಸೆಲೆಯಂತಿದ್ದ ಹೆಂಡತಿ ಕ್ಯಾನ್ಸರ್‌ಗೆ ತುತ್ತಾಗಿ ಅಸುನೀಗಿದಳು. ಸಾಮ್ರಾಜ್ಯ ವಿಸ್ತರಿಸುತ್ತಿದ್ದರೂ ಖಾಸಗಿ ಜೀವನ ಕಲ್ಲವಿಲಗೊಂಡಿತು. ತನ್ನ ತೊಂಬತ್ನಾಲ್ಕನೇ ವಯಸ್ಸಿನಲ್ಲಿ ಈ ಓಬೇರಾಯ್‌ ಸುಮಾರು ಹದಿನೈದು ಸಾವಿರ ಕೋಟಿ ರೂಪಾಯಿ ಆಸ್ತಿಪಾಸ್ತಿ ಇಟ್ಟುಕೊಂಡು, ದಿಲ್ಲಿ ಹೊರವಲಯದಲ್ಲಿನ ತೋಟದ ಮನೆಯಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದ. ಒಬ್ಬ ಸಹಾಯಕನ ಹೊರತಾಗಿ ಅಲ್ಲಿ ಯಾವ ನರಪಿಳ್ಳೆಯೂ ಇರಲಿಲ್ಲ. ಬಿಪಿ, ಶುಗರ್‌ ಮೈಗೆ ಅಂಟಿಕೊಂಡಿತ್ತು. ದಿನವೂ ಇಂಜೆಕ್ಷನ್‌ ಚುಚ್ಚಿಸಿಕೊಂಡು ಮೈಕೈಯೆಲ್ಲ ರಂಧ್ರಗಳಾಗಿದ್ದವು. ಹೃದಯ, ಕಣ್ಣು, ಕಿಡ್ನಿ ಆಪರೇಶನ್‌ನಿಂದ ದೇಹದ ಮೇಲೆ ಕುಯ್ದ ಗುರುತು. ಮೂಲತಃ ಹೋಟೆಲ್‌ ಮಾಲೀಕನಾದ್ದರಿಂದ ಬಗೆಬಗೆ ತಿಂಡಿ ತಿಂದು ಊದಿಕೊಂಡಿದ್ದ ಓಬೇರಾಯ್‌ಗೆ ದಿನಕ್ಕೆ ಮುನ್ನೂರು ಗ್ರಾಮ್‌ಗಿಂತ ಹೆಚ್ಚು ಆಹಾರ ಸೇವಿಸದಂತೆ ಡಾಕ್ಟರು ತಾಕೀತು ಹಾಕಿದರು. ಈ ದಢೂತಿ ಆಸಾಮಿಯನ್ನು ಕೆಲ ವರ್ಷಗಳ ಹಿಂದೆ ದಿಲ್ಲಿಯಲ್ಲಿ ಕಂಡಾಗ ಮೇಲೇಳಲಾರದಂತೆ ಅಂಗಾತ ಮಲಗಿಕೊಂಡಿದ್ದ. ಆತನ ದೇಹದ ಯಾವ ಭಾಗವೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಉಸಿರು ಮಾತ್ರ ಸುಮ್ಮನೆ ಏರಿ ಇಳಿಯುತ್ತಿತ್ತು. ಇದ್ದ ಒಬ್ಬ ಮಗನಿಗೆ ಸಾಮ್ರಾಜ್ಯ ನೋಡಿಕೊಳ್ಳುವ ಕೆಲಸ. ಅಪ್ಪನನ್ನು ನೋಡುವ ವ್ಯವಧಾನವೂ ಇಲ್ಲ.

ಇತ್ತ ಓಬೇರಾಯ್‌ ಶರಶಯ್ಯೆಯಲ್ಲಿ ಮಲಗಿದ ಭೀಷ್ಮನಂತಿದ್ದ ! ಒಂದಲ್ಲ, ಎರಡಲ್ಲ, ಸುಮಾರು ಆರು ವರ್ಷ. ಕೊನೆಕೊನೆಗೆ ಆತನಿಗೆ ಹಾಸಿಗೆಯಿಂದ ಮೇಲೇಳಲು ಸಹ ಆಗುತ್ತಿರಲಿಲ್ಲ. ಒಂದು ರಾತ್ರಿ ಅಲ್ಲಿಯೇ ಪ್ರಾಣಬಿಟ್ಟ. ಬದುಕು ಒಂದು ಕೆಟ್ಟ ಅಸಹನೀಯ ಷರಾ ಬರೆದು ಬಿಸಾಕಿತು. ಆತ ಎಲ್ಲಾ ಇದ್ದೂ ಏನೂ ಇಲ್ಲದವನಂತೆ ಈ ಲೋಕದಿಂದ ಎದ್ದುಹೋದ.

ಬದುಕೆಂದರೆ ಇಷ್ಟೇನಾ?

ಜೀವನವಿಡೀ ನಮ್ಮ ಕಣ್ಮುಂದೆ ನಲಿದಾಡಿದವರು, ಎತ್ತರದಲ್ಲಿದ್ದವರು, ಶ್ರೀಮಂತಿಕೆ, ಪ್ರಸಿದ್ಧಿಯಲ್ಲಿ ಮೇಲಿದವರೆಲ್ಲ ಹೀಗೆ ದಾರುಣವಾಗಿ, ನಿಸ್ಸಹಾಯಕರಾಗಿ ಅಂತ್ಯ ಅನುಭವಿಸುವುದನ್ನು ಕಂಡಾಗ ಅನಿಸೋದು

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more