• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನ ಮುದುಡಿಕೊಳ್ಳಲು ಕಾಶ್ಮೀರ, ತಾಲಿಬಾನು ಬೇಕಿಲ್ಲ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಮನಸ್ಸು ಮುನಿಸಿಕೊಂಡು ಮುಚುಕೋತಿಯಂತೆ ಮುರುಟಿ ಕೂರಲು ತೀರಾತೀರ ಸಣ್ಣ ವಿಷಯ ಸಾಕು. ಅದಕ್ಕೆ ಕಾಶ್ಮೀರ, ತಾಲಿಬಾನ್‌, ಪೋಟಾ...ದಂಥ ವಿಷಯವೇ ಬೇಕಿಲ್ಲ. ಆಫೀಸಿಗೆ ಹೊರಟು ನಿಂತಾಗ ಅಂಗಿ ಬಟನ್‌ ಕಿತ್ತು ಹೋದರೆ, ಪ್ಯಾಂಟಿನ ಜಿಪ್‌ ಮೇಲೇರದಿದ್ದರೆ, ಹೆಂಡತಿ ಅಂಗಿಗೆ ಇಸ್ತ್ರಿ ಮಾಡಿರದಿದ್ದರೆ, ಕಾಫಿಗೆ ಸಕ್ಕರೆ, ಚಟ್ನಿಗೆ ಉಪ್ಪು ಹೆಚ್ಚು ಅಥವಾ ಕಮ್ಮಿಯಾದರೆ, ಆಟೊದವನು ಎಂಟಾಣೆ ಹೆಚ್ಚಿಗೆ ಕೇಳಿದರೆ, ನಮುಸ್ಕಾರ ಸಾರ್‌ ಅಂದರೂ ಬಾಸ್‌ ಸ್ವಾಟೆ ತಿರುವಿಕೊಂಡು ಹೋದರೆ, ನಾಲ್ಕಾಣೆ ಚಿಲ್ಲರೆ ಕೊಡಲಿಲ್ಲವೆಂದು ಕಂಡಕ್ಟರ್‌ ಕುಲಗೋತ್ರ ವಿಚಾರಿಸಿದರೆ, ಯಾವತ್ತೂ ಬಸ್‌ ಸ್ಟಾಪಿನಲ್ಲಿ ಕಾಣುತ್ತಿದ್ದ ಹುಡುಗಿ ಆ ದಿನ ಕಾಣದಿದ್ದರೆ, ಹೆಂಡತಿಯನ್ನು ಪೇಟೆಯಲ್ಲಿ ತಿರುಗಿಸಿ ಸಿನಿಮಾ ತೋರಿಸಿ ಹೋಟ್ಲಿಗೆ ಕರಕೊಂಡು ಹೋಗಿ ಊಟ ಮಾಡಿಸಿ ಕೊನೆಗೊಂದು ಪಾನ್‌ಬೀಡಾ ಕೊಡಿಸಲು ಮರೆತಾಗ ‘ಭಲೆ ಜುಗ್ಗ’ ಅಂತ ಬೈಸಿಕೊಂಡರೆ, ಟಿವಿ, ಫ್ರಿಜ್ಜು, ವಾಷಿಂಗ್‌ಮಶೀನು ಕೊಡಿಸಿದ ನಂತರವೂ ಮನೆಯಲ್ಲಿ ಮೆಂತ್ಯ ಇಲ್ಲವೆಂದು ಹೆಂಡತಿ ಹಂಗಿಸಿದರೆ, ಮನಸ್ಸು ತಪತಪ ಕುದ್ದು ಹೋಗುತ್ತದೆ.

ಹಾಗೆ ನೋಡಿದರೆ ಇವ್ಯಾವುವೂ ಸಮಸ್ಯೆಗಳೇ ಅಲ್ಲ. ಆದರೆ ಆ ಕ್ಷಣಕ್ಕೆ ಇವು ಪೆಡಂಭೂತದಂತೆ ಕಾಣುತ್ತವೆ. ಬ್ರಹ್ಮರಾಕ್ಷಸನಂತೆ ಕಾಡುತ್ತವೆ. ಮನಸ್ಸು ತನ್ನೆಲ್ಲ ವಿಕೃತಿಗಳನ್ನು ವಾಂತಿ ಮಾಡಿಕೊಳ್ಳುವುದು ಈ ಸಂದರ್ಭದಲ್ಲಿಯೇ.

Small Matters, Big Differenceಗಂಡ ಮನೆಗೆ ಬಂದಾಗ ಹೆಂಡತಿ ನಗುತ್ತಾ ಫೋನಿನಲ್ಲಿ ಮಾತಾಡುವುದನ್ನು ಕೇಳಿ ಆಕೆಯ ಮೇಲೆ ಸಂಶಯ ತಾಳಿ ಮದುವೆಯನ್ನು ಮುರಕೊಂಡವರಿದ್ದಾರೆ. ದಿನವೆಲ್ಲ ದುಡಿದು ದಣಿದು ಬಂದ ಹೆಂಡತಿ ಸಾರಾಯಿಗೆ ನಾಲ್ಕು ರೂ. ಕೊಡಲಿಲ್ಲವೆಂದು ಆಕೆಗೆ ಬೆಂಕಿಯಿಟ್ಟ ಗಂಡಂದಿರಿದ್ದಾರೆ. ಪತಿಯ ಗೊರಕೆಯನ್ನು ತಾಳಲಾರದೇ ತಾಳಿ ಮುರಕೊಂಡು ಬಂದ ಹೆಂಡತಿಯರಿದ್ದಾರೆ. ಸಾಯಂಕಾಲದ ಪಾನಗೋಷ್ಠಿಗಾಗಿ ಮಗಳನ್ನು ಮಲಗಲು ಗಳಿಸಿದ ತಂದೆಗಳಿದ್ದಾರೆ. ನಾಲ್ಕೆರಡ್ಲೆ ಎಷ್ಟು ಎಂದು ಕೇಳಿದಾಗ ತಪ್ಪು ಉತ್ತರ ಹೇಳಿದ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿ ಪ್ರಾಣ ತಿನ್ನುವ ಶಿಕ್ಷಕರಿದ್ದಾರೆ. ಪಕ್ಕದಮನೆ ಆಕಳು ತನ್ನ ಅಂಗಳದಲ್ಲಿ ಸೆಗಣಿ ಹಾಕಿತೆಂದು ಜೀವನವಿಡೀ ಹೊಡೆದಾಡಿ ಸತ್ತವರಿದ್ದಾರೆ.

ಮನಸ್ಸು ಶಟಗೊಂಡು ಕುಳಿತುಕೊಳ್ಳಲು ಒಂದೇ ಒಂದು ಪಿಳ್ಳೆ ಕಾರಣ ಸಾಕು. ಬೆಳಗ್ಗೆ ಯಾವುದೋ ಮಗ್ಗುಲಿನಿಂದ ಎದ್ದು ಹೆಂಡತಿಯನ್ನು ವಿಚಾರಿಸಿಕೊಳ್ಳುವ ಬದಲು ಮನೆಗೆಲಸದವಳನ್ನು ಮಾತಾಡಿಸಿದರೆ ಆ ದಿನವೆಲ್ಲ ಹೆಂಡತಿ ಕೆಂಪುಕೆಂಡ, ಕಣ್ಣು ಅಗ್ನಿಕುಂಡ. ‘ಮದ್ವೆಯಾಗಿ ಎರಡು ವರ್ಷ ಆಯ್ತು. ಒಂದೇ ಒಂದು ಸಿನಿಮಾ ತೋರಿಸಿದ್ರಾ’ ಅಂತ ಹೆಂಡತಿ ಕೇಳಿದಾಗ, ‘ಈಕೆಗೆ ಸೀರೆ ಕೊಡಿಸಿದೆ, ಊಟಿಗೆ ಕರೆದುಕೊಂಡು ಹೋದೆ. ಆದರೂ ಸಮಾಧಾನವೇ ಇಲ್ಲವಲ್ಲ’ ಅಂದುಕೊಳ್ಳುತ್ತಾನೆ ಗಂಡ. ಇಲ್ಲಿ ಇಬ್ಬರದೂ ತಪ್ಪಿಲ್ಲ. ಗಂಡ ಇಷ್ಟೆಲ್ಲ ಕೊಡಿಸಿದ್ದು ಸುಳ್ಳಲ್ಲ. ಹಾಗಂತ ಹೆಂಡತಿಗೆ ಎರಡು ವರ್ಷ ಆದರೂ ಸಿನಿಮಾ ತೋರಿಸದಿರುವುದೂ ಸುಳ್ಳಲ್ಲ. ಕೇಳಿದರೆ ಟೈಮಿಲ್ಲ ಅಂತಾನೆ. ಸ್ಕೂಟರ್‌ ಕೆಟ್ಟು ನಿಂತರೆ ರಿಪೇರಿಗೆ ಅಧಂ ದಿನ ರಜಾ ಹಾಕುವ ಗಂಡ, ಸಿನಿಮಾ ಅಂದ್ರೆ ಟೈಮಿಲ್ಲ ಅಂತಾನೆ ಎಂದು ಹೆಂಡತಿಗೆ ಅನಿಸಿದರೆ ಅಚ್ಚರಿ ಇಲ್ಲ. ಇದೇ ರಂಪ, ಕೊನೆಗೆ ರಾದ್ಧಾಂತಕ್ಕೆ ಹೋಗಿ ನಿಲ್ಲುತ್ತದೆ. ನೋಡಿ, ಏಕಾಂತದಲ್ಲಿ ಕೊನೆಗೊಳ್ಳಬೇಕಾಗಿದ್ದುದು ರಾದ್ಧಾಂತದಲ್ಲಿ ಮುಗಿಯುತ್ತದೆ.

ಮನಸ್ಸು ಅಂಗಾತ ಬಿದ್ದು ನರಳಾಡಲು ಇಂಥ ಸಣ್ಣ ಸಣ್ಣ ಸಂಗತಿಗಳೇ ಸಾಕು. ಬದುಕಿನ ಇಂಥ ಅಂಶಗಳು ನಮ್ಮ ಬದುಕನ್ನು ಹೇಗೆ ಕಾಡುತ್ತವೆ ಹಾಗೂ ಇದರಿಂದ ಬಚಾವಾಗುವ ಪರಿ ಎಂತು ಎಂಬುದನ್ನು ಡೇನಿಯಲ್‌ ಗಿಬ್ಸನ್‌ Small matters, Big difference ಎಂಬ ಪುಸ್ತಕದಲ್ಲಿ ಸ್ವಾರಸ್ಯವಾಗಿ ಬಣ್ಣಿಸಿದ್ದಾನೆ. ‘ನಮುಸ್ಕಾರ ಸಾರ್‌ ಎಂದರೂ ವಾಪಸು ನಮಸ್ಕಾರ ಹೇಳಲಿಲ್ಲ ನೋಡು ಅಂವ. ಎಂಥ ಸೋಕ್ಕು? ಇವ್ನಿಗೆ ಮಾಡಿಸ್ತೀನಿ’ ಅಂತ ಹೇಳುವುದನ್ನು ಕೇಳುತ್ತೇವೆ. ಆದರೆ ನಾನು ನಮುಸ್ಕಾರ ಎಂದು ಹೇಳಿದ್ದು ಅವನಿಗೆ ಕೇಳಿರಲಿಕ್ಕಿಲ್ಲ ಅಥವಾ ಅವನು ನೋಡಿರಲಿಕ್ಕಿಲ್ಲ ಎಂದು ಯೋಚಿಸುವುದಿಲ್ಲ. ಎಂದೂ ಹೀಗೇ ವರ್ತಿಸಿದವನು ಇಂದು ಹೀಗೇಕೆ ವರ್ತಿಸಿದ ಅಂದ್ರೆ ಯಾವುದೋ ಯೋಚನೆಯಲ್ಲಿ ಮುಳುಗಿರಬಹುದು, ಅವನದೇನೂ ತಪ್ಪಿಲ್ಲ ಬಿಡು ಎಂದು ಭಾವಿಸುವುದಿಲ್ಲ. ಅವನಿಗೆ ಕೊಬ್ಬು, ಸೊಕ್ಕು ಎಂಬ ತೀರ್ಮಾನಕ್ಕೆ ಬರುತ್ತೇವೆ. ಮರುದಿನ ಎದುರಿಗೆ ಸಿಕ್ಕಾಗ ಮುಖ ಕಿವುಚಿಕೊಂಡು ಹೋಗುತ್ತೇವೆ. ಆತ ಈ ನಡವಳಿಕೆಯನ್ನು ಸರಿಯಾಗಿ ಅರ್ಥೈಸಿಕೊಂಡರೆ ಒಳ್ಳೆಯದಾಯಿತು. ಇಲ್ಲದಿದ್ದರೆ ಇಬ್ಬರ ಮಧ್ಯೆ ಏರಾಪೇರಿ. ಸಂಬಂಧ ತೀನತೇರ.

‘ಆತ ಎದುರಿಗೆ ಸಿಕ್ಕರೆ ಮಾತಾಡಿಸುವುದಿಲ್ಲ. ಹಲೋ ಎನ್ನುವುದಿಲ್ಲ. ಅಷ್ಟು ಸೊಕ್ಕು ಅವನಿಗೆ’ ಎಂದು ಅನೇಕರು ಹೇಳುವುದನ್ನು ಕೇಳುತ್ತೇವೆ. ಈ ಮಾತು ಮೊದಲು ಅನ್ವಯಿಸುವುದು ತಮಗೇ ಎಂದು ಯೋಚಿಸುವುದಿಲ್ಲ. ಆತ wish ಮಾಡಲಿಲ್ಲ ಅಂತಿಟ್ಟುಕೊಳ್ಳೋಣ. ನಾವು ಮಾಡಬಹುದಲ್ಲ ? ನಾವು wish ಮಾಡಿದಾಗಲೂ ಆತ ಸ್ವಾಟೆ ತಿರುವಿಕೊಂಡು ಹೋದರೆ, wish ಮಾಡಿದ್ದನ್ನು ನೋಡಿಯೂ ಕೇಳಿಯೂ ಬುದ್ಧ್ಯಾಪೂರ್ವಕವಾಗಿ ಅಲಕ್ಷಿಸಿದರೆ ಅವನೊಂದಿಗೆ ಎಂಥ ಸಂಬಂಧ ಮುಂದುವರಿಸಬೇಕೆಂಬುದನ್ನು ವಿಚಾರಿಸೋಣ. ಒಂದು ಹಾವಭಾವ, ಸಣ್ಣ ನಡಾವಳಿ ಸಂಬಂಧವನ್ನು ನಿರ್ದೇಶಿಸುವುದು ಬೇಡ ಎಂದು ಯೋಚಿಸುವುದಿಲ್ಲ.

ಕೆಲವು ಸ್ನೇಹಿತರಿಗೆ ಹೀಗೇ ಹೇಳಿ. ಅವರೇನು ಹೇಳ್ತಾರೆ ಗೊತ್ತಾ? ‘ಅವನ ಬಗ್ಗೆ ನಾನೇಕೆ ಅಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕು? ಪದೇ ಪದೇ ಅವನ ಮೇಲೆ ಬೀಳಲು ನನಗೇನಾಗಿದೆ? ಅವನಿಗೆ ಅಷ್ಟು ಕೊಬ್ಬಿದ್ದರೆ ನನಗೂ ಅದಕ್ಕಿಂತ ನೂರುಪಟ್ಟು ಹೆಚ್ಚಿದೆ’ ಅಂತಾರೆ. ಅದಕ್ಕೂ ಮುಂದುವರಿದರೆ ಅವನ ಜತೆ ಸಂಬಂಧ ಮುಂದುವರೆಸುವ ದರ್ದು ಇಲ್ಲ ಅಂತಾರೆ. ವಿನಾ ಕಾರಣ ಒಂದು ಸಂಬಂಧ ಉಸಿರುಗಟ್ಟಿ ಸಾಯುತ್ತದೆ. ಇಷ್ಟೊಂದು ಸಲೀಸಾಗಿ ಸಾಯುವಷ್ಟು ಯಾವುದೇ ಸಂಬಂಧವೂ ತಿಳಿಯಾಗಿರುವುದಿಲ್ಲ. ದುರ್ದೈವವೆಂದರೆ ಬಹುತೇಕ ಸಂಬಂಧಗಳು ಈ ಕಾರಣದಿಂದಲೇ ಮುರಿದು ಬೀಳುತ್ತವೆ.

ತವರಿಗೆ ಹೋದ ಹೆಂಡತಿಗೆ ಗಂಡ ಫೋನ್‌ ಮಾಡುತ್ತಾನೆ. ಆಕೆ ಹೊರಗೆ ಹೋಗಿರುತ್ತಾಳೆ. ಗಂಡ ಕುದಿಯುತ್ತಾನೆ. ತನ್ನನ್ನು ಬಿಟ್ಟು ಮಜಾ ಮಾಡುತ್ತಿದ್ದಾಳೆಂದು ಭಾವಿಸುತ್ತಾನೆ. ಹೆಂಡತಿಗೆ ಗಂಡ ಫೋನ್‌ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಗಂಡನಿಗೆ ಫೋನ್‌ ಮಾಡುತ್ತಾಳೆ. ಗಂಡ ಮೀಟಿಂಗ್‌ನಲ್ಲಿದ್ದಾನೆ ಅಂತಾರೆ. ಅನಂತರ ಪ್ರಯತ್ನಿಸಿದಾಗ ಅರ್ಧಗಂಟೆ ಎಂಗೇಜ್‌. ಪುನಃ ಪ್ರಯತ್ನಿಸಿದಾಗಲೂ ಎಂಗೇಜ್‌. ಎಷ್ಟೋ ಪ್ರಯತ್ನಿಸಿದರೂ ಲೈನ್‌ ಸಿಗುವುದೇ ಇಲ್ಲ. ಕೊನೆಗೊಂದು ಸಲ ಇಬ್ಬರೂ ಫೋನಿನಲ್ಲಿ ಮುಖಾಮುಖಿಯಾಗುತ್ತಾರೆ. ಆಗ ಬರೀ ಕೋಪತಾಪ ಪ್ರದರ್ಶನ. ಈ ಮಾತು ಹೆಂಡತಿಗಷ್ಟೇ ಅಲ್ಲ. ಗೆಳತಿ, ಪ್ರೇಯಸಿ, ಮಾಜಿ ಪ್ರೇಯಸಿಗೂ ಅನ್ವಯ. ನಮ್ಮ ಬಹುತೇಕ ಸಮಯ ಇಂಥ ವಿನಾಕಾರಣ ಕೋಪಶಮನಕ್ಕೆ ಖರ್ಚಾಗುತ್ತದೆ. ಮನಸ್ಸು ಹೊಳ್ಳಾಮಳ್ಳಾ ಮುರುಟಿಕೊಂಡು ಕುಳಿತುಕೊಳ್ಳುತ್ತದೆ. ಹೆಂಡತಿ ಸಿನಿಮಾಕ್ಕೆ ಹೋಗೋಣ ಎಂದರೆ ಥಟ್ಟನೆ ಗಂಡ ಕರೆದುಕೊಂಡು ಹೋಗುವುದಿಲ್ಲ. ಆಕೆ ಕನಿಷ್ಠ ನಾಲ್ಕು ಸಲ ಪೀಡಿಸಬೇಕು. ಎರಡು ಸಲ ಕೋಪ ಮಾಡಿಕೊಂಡು ಊಟ ಬಿಟ್ಟು ಕೂರಬೇಕು. ಆಗಲೇ ಥಿಯೇಟರ್‌ ಹಾದಿ ಹಿಡಿಯುತ್ತೇವೆ. ಸಿನಿಮಾ ನೋಡಿ ಬಂದ ನಂತರವೂ ಅದರ ರಂಜನೆಗಿಂತ ಹೆಂಡತಿಯ ಸಿಟ್ಟಿನ ಕಮಟು ವಾಸನೆಯೇ ಜೋರಾಗಿ ಹೊಡೆಯುತ್ತಿರುತ್ತದೆ. ಹೆಂಡತಿಗೆ ಸಿನಿಮಾಕ್ಕೆ ಹೋಗಬೇಕೆನಿಸಿದರೆ ಸಿನಿಮಾಕ್ಕೆ ಕರಕೊಂಡು ಹೋಗಬೇಕೇ ಹೊರತು, ಐಸ್‌ಕ್ರೀಂ ಕೊಡಿಸಬಾರದು. ಸೀರೆ ಅಂಗಡಿಗೆ ಹೋಗಬೇಕೆಂದು ಆಕೆ ಬಯಸಿದರೆ, ಬಳೆ ಕೊಡಿಸಬಾರದು. ಬಹುತೇಕ ಗಂಡಂದಿರು ಇದನ್ನೇ ಮಾಡುತ್ತಾರೆ. ಆಕೆ ಬಿಂದಿ ಬೇಕೆಂದು ಹೇಳುತ್ತಿದ್ದರೆ ಪರ್ಸ್‌ ಕೊಡಿಸುತ್ತಾರೆ. ಕೊನೆಗೆ ಬಳೆ, ಗೆಜ್ಜೆ, ಚಪ್ಪಲಿ, ಸೀರೆ ಕೊಡಿಸುತ್ತಾರೆ. ಆರೆ ಆಕೆಗೆ ಬೇಕಿರುವುದು ಬಿಂದಿ! ಕೊಡಿಸಿದ್ದೆಲ್ಲ ಬೇಡ ಅಂತಲ್ಲ. ಇಷ್ಟೆಲ್ಲ ಕೊಡಿಸಿದ ನಂತರವೂ ಆಕೆ ಬಿಂದಿ ಅಂತಾಳೆ. ಆಗ ಗಂಡ ‘ಎಷ್ಟು ಕೊಡಿಸಿದ್ರೂ ನಿಂಗೆ ಸಮಾಧಾನವೇ ಇಲ್ಲ’ ಅಂತ ರೇಗುತ್ತಾನೆ. ಎಲ್ಲಾ ಮಾಡಿ ಎಲ್ಲಾ ಮುಟ್ಟಿದರೂ ಪುಗಸಟ್ಟೆ ಜಗಳ !

ಹೆಂಡತಿ ಬೇಡಿಕೆ ಅರ್ಜಿ ಸಲ್ಲಿಸದಿದ್ದರೂ ಇನ್ನು ಕೆಲವು ಗಂಡಸರು ಆಕೆಯನ್ನು ಖುಷಿಪಡಿಸಲು ಸಾಮಾನುಗಳನ್ನು ತರುತ್ತಾರೆ. ದಿಲ್ಲಿಗೆ ಹೋದಾಗ ಸ್ವೆಟರ್‌, ಹೈದರಾಬಾದಿಗೆ ಹೋದಾಗ ಮುತ್ತು, ಮದರಾಸಿನಿಂದ ಕಂಚಿ ಸೀರೆ, ವಿಜಾಪುರದಿಂದ ಬರುವಾಗ ಇಳಕಲ್‌ ಸೀರೆ ತರುತ್ತಾರೆ. ಒಮ್ಮೊಮ್ಮೆ ತಮ್ಮೂರಿನಲ್ಲಿ ಸಿಗುವುದಕ್ಕಿಂತ ಹೆಚ್ಚು ಹಣ ಕೊಟ್ಟು ಖರೀದಿಸುವುದೂ ಉಂಟು. ಆದರೆ ಪಕ್ಕದ ಬೀದೀಲಿ ಡಿಸ್ಕೌಂಟ್‌ ಸೀರೆ ಮಾರಾಟವಿದ್ದರೆ ಹೆಂಡತಿಯನ್ನು ಕರೆದುಕೊಂಡು ಹೋಗುವುದಿಲ್ಲ. ಗಂಡ ತಂದ ಸೀರೆಗಿಂತ ಆ ಸೀರೆಗಳ ಮೇಲೆ ಕಣ್ಣು ನೆಟ್ಟಿರುತ್ತದೆ. ಕಾರಣ ಪಕ್ಕದ ಮನೆಯಾಕೆ ಅಂಥ ಸೀರೆಯನ್ನು ಕಡಿಮೆ ಬೆಲೆಗೆ ಖರೀದಿಸಿರುತ್ತಾಳೆ. ಡಿಸ್ಕೌಂಟ್‌ ಸೀರೆ ಮಾರಾಟಕ್ಕೆ ಹೋಗೋದು ಬೇಡ ಅಂತ ಹೇಳಿ, ‘ದಿಲ್ಲಿಯಿಂದ ಬರುವಾಗ ಸ್ವೆಟರ್‌ ತನ್ನಿ ಅಂತ ಯಾರು ಹೇಳಿದರು. ಅಮ್ಮ ಕೊಟ್ಟ ಇಳಕಲ್‌ ಸೀರೆ ಇರಲಿಲ್ವಾ ಅದನ್ಯಾಕೆ ತರಬೇಕಿತ್ತು’ ಅಂತ ಗುದುಮುತ್ತಾಳೆ. ಆತ ಆಟೊದವನ ಜತೆ ಜಗಳವಾಡಿ ಚಾಂದಿನಿಚೌಕ್‌ಗೆ ಡಬ್ಬಲ್‌ ಹಣ ಕೊಟ್ಟು ರೈಲು ತಪ್ಪಿಹೋಗಬಹುದೆಂಬ ಧಾವಂತದಲ್ಲಿ ಓಡೋಡಿ ಹೋಗಿ ಹೆಂಡತಿಗೆಂದು ತುಪ್ಪಳದ ಸ್ವೆಟರ್‌ ತಂದರೆ, ಹೀಗನ್ನೋದಾ?

ಮನೆಯಲ್ಲಿ ಮತ್ತೊಂದು ಪುಗಸಟ್ಟೆ ಜಗಳ. ಇದು ಎಲ್ಲಾ ಇದ್ದೂ ಆಗೋ ಜಗಳ. ಕದನ ವಿರಾಮ ನೆಲೆಸಲು ಎರಡು ದಿನ ಬೇಕು. ಇಲ್ಲದಿರುವುದಕ್ಕೆ ಕೊರಗುವುದು ತಪ್ಪಲ್ಲ. ಇರುವುದಕ್ಕೆ ಕೊರಗುವುದೂ ತಪ್ಪುವುದಿಲ್ಲ. ಎಲ್ಲ ಇದ್ದೂ ಕೊರಗುವ, ಮನಸ್ಸನ್ನು ಕಲ್ಲವಿಲಗೊಳಿಸಿಕೊಂಡವರನ್ನು ಕಂಡಾಗ ಅಯ್ಯೋ ಎನಿಸುತ್ತದೆ.

ಒಮ್ಮೆ ಮುಲ್ಲಾ ನಸ್ರುದ್ದೀನ್‌ನ ಬಳಿಗೆ ಹೆಂಗಸೊಬ್ಬಳು ಬಂದಳು. ತನ್ನ ಕಷ್ಟಗಲೆಲ್ಲವನ್ನೂ ತೋಡಿಕೊಂಡಳು. ‘ಮುಲ್ಲಾ , ನಂಗೆ ಇಪ್ಪತ್ತು ನೆಕ್ಲೆಸ್‌, ನಾಲ್ಕು ಕಂಠೀಹಾರ, ಐದು ಹವಳ ಸರ, ಒಂದು ವಜ್ರದೋಲೆ, ಇಪ್ಪತ್ತು ಜತೆ ಬಳೆ, ಕಾಲು ಚೈನು, ವಂಕಿ...ಎಲ್ಲಾ ಇವೆ. ಈಚೀಲದ ತುಂಬಾ ಅವೇ ತುಂಬಿವೆ. ಈ ಜಗತ್ತು ಕೊಡಬಹುದಾದ ಎಲ್ಲ ವಸ್ತುಗಳು ನನ್ನಲ್ಲಿವೆ. ಆದರೂ ನಾನು ದುಃಖಿ. ನನಗೆ ಸಹಾಯ ಮಾಡು’. ಮುಲ್ಲಾ ಆಕೆಯನ್ನು ದಿಟ್ಟಿಸಿದ. ಏಕಾಏಕಿ ಆಕೆಯಿಂದ ಚಿನ್ನದ ಒಡವೆಗಳಿದ್ದ ಚೀಲವನ್ನು ಕಸಿದುಕೊಂಡು ಮುಲ್ಲಾ ಪರಾರಿಯಾಗಿಬಿಟ್ಟ. ಆ ಹೆಂಗಸು ‘ಅಯ್ಯೋ ಕಳ್ಳ ! ನನ್ನ ಒಡವೆಗಳನ್ನು ಎಗರಿಸಿಕೊಂಡು ಓಡುತ್ತಿದ್ದಾನೆ. ಮೋಸ... ಮೋಸ..’ ಎಂದು ಕೂಗುತ್ತಾ ಅವನ ಹಿಂದೆಯೇ ಓಡಲಾರಂಭಿಸಿದಳು. ಮುಂದೆ ಮುಂದೆ ಮುಲ್ಲಾ... ಹಿಂದೆ ಹಿಂದೆ ಹೆಂಗಸು. ಕೊನೆಗೆ ಈಕೆ ‘ಮುಲ್ಲಾ ನಸ್ರುದ್ದೀನ್‌ ನನ್ನೆಲ್ಲ ಒಡವೆಗಳನ್ನು ದೋಚಿದ. ಗಳಿಸಿದ್ದೆಲ್ಲವೂ ಹೋಯಿತು. ನನ್ನ ಸರ್ವಸ್ವವೂ ಹೊರಟುಹೋಯಿತು’ ಎಂದು ಬೊಬ್ಬೆ ಹಾಕುತ್ತಿದ್ದರೆ ಜನ ಹಿಂಬಾಲಿಸಿದರು. ಅನಂತರ ಮುಲ್ಲಾ ಆಕೆಯ ಬಳಿಯೇ ಬಂದ. ಆಕೆಗೆ ಒಡವೆಗಳನ್ನೆಲ್ಲ ಒಪ್ಪಿಸಿದ. ಆಕೆಗೆ ಹೋದ ಜೀವ ಬಂದಂತಾಯಿತು. ಅವಳನ್ನು ಕಂಡು ಮುಲ್ಲಾ ಹೇಳಿದ- ‘ಈ ಒಡವೆಗಳೆಲ್ಲ ನಿನ್ನ ಬಳಿಯೇ ಇದ್ದವು. ಆದರೆ ನಿನಗೆ ಅವು ಸರ್ವಸ್ವ ಅನಿಸಲಿಲ್ಲ. ಅವೆಲ್ಲವನ್ನೂ ಇಟ್ಟುಕೊಂಡು ಜೀವನದಲ್ಲಿ ಸಮಾಧಾನವೇ ಇಲ್ಲ, ನೆಮ್ಮದಿಯೇ ಇಲ್ಲ ಅಂತ ಕೊರಗುತ್ತಿದ್ದೆ. ನಿನ್ನ ಬಳಿ ಎಷ್ಟು ಸುಖ, ನೆಮ್ಮದಿ ಇತ್ತು ಅಂತ ಈಗ ಗೊತ್ತಾಗಿರಬೇಕಲ್ಲ ?’ ಆಕೆ ಹೌದೆಂದು ಗೋಣಾಡಿಸಿದಳು.

ನಮ್ಮೆಲ್ಲರ ಜೀವನವೂ ಹೀಗೇ. ಎಲ್ಲವೂ ಇರುತ್ತವೆ. ಆದರೆ ಏನೂ ಇಲ್ಲದವರಂತೆ, ಯಾವುದಕ್ಕೋ ಕನವರಿಸುತ್ತಾ, ಬೇಕೆಂದೇ ನಮಗೆ ಹಿಂಸೆ ಕೊಟ್ಟುಕೊಳ್ಳುತ್ತಾ ನಮ್ಮ ಜೀವನವನ್ನು ಗಾಳಮೇಳಾಗಿಸಿ ಬದುಕನ್ನು ಕೊಳೆಗೇರಿ ಮಾಡಿಕೊಳ್ಳುತ್ತೇವೆ. ಸುಂದರಳಾದ, ಮನ ಅರಿಯುವ ಹೆಂಡತಿ, ಮಕ್ಕಳು, ನೌಕರಿ, ವಾಸಕ್ಕೊಂದು (ಬಾಡಿಗೆ) ಮನೆ... ಎಲ್ಲ ಇದ್ದರೂ ಮನಸ್ಸನ್ನು ಕೆಡಿಸಿಕೊಂಡು ಕುಳಿತಿರುತ್ತೇವೆ.

ಇನ್ನು ಮನಸ್ಸನ್ನು ಕೆಡಿಸಿಕೊಳ್ಳಲಿಕ್ಕೆ ಕಾಶ್ಮೀರ, ತಾಲೀಬಾನು ಇದ್ದೆ ಇದೆ ಬಿಡಿ.

(ಸ್ನೇಹಸೇತು- ‘ವಿಜಯ ಕರ್ನಾಟಕ’)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more