• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರ ಪತ್ರಗಳಲ್ಲಿ ಎಂದೂ ಬತ್ತದ ಮಕರಂದವಿತ್ತು !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಆತನ ಕಾಗದಕ್ಕೆ ಎದುರು ನೋಡದ ದಿನಗಳೇ ಇರಲಿಕ್ಕಿಲ್ಲ, ಭಾನುವಾರವೊಂದನ್ನು ಬಿಟ್ಟು . ಆತನ ಪತ್ರಕ್ಕಾಗಿ ಮನಸ್ಸು ವಿಚಿತ್ರವಾಗಿ ಕಾತರಿಸುತ್ತದೆ. ಪತ್ರ ಬರದಿದ್ದರೆ ಚಡಪಡಿಕೆ. ಏನೋ ಕಳೆದುಕೊಂಡ ಅನುಭವ.

ಮೂರು ತಿಂಗಳ ಹಿಂದೆ ಒಂದು ಕಾಗದ ಬರೆದಿದ್ದ. ತನ್ನ ಮನದ ಅಂಗಳದಲ್ಲಿ ಬಿರಿದ ಕಾಮನೆಗಳಿಗೆ ಕಮಾನುಕಟ್ಟಿದ ಬಗ್ಗೆ ಬರೆದಿದ್ದ. ಮಲೆನಾಡಿನ ತನ್ನ ಹಳ್ಳಿ, ಗ್ರಾಮ್ಯ ಸೊಗಡನ್ನು ಕಳೆದುಕೊಂಡು ಹೇಗೆ ಪಟ್ಟಣದ ಕೃತ್ರಿಮ ರೂಪವನ್ನು ಅನುಕರಿಸುತ್ತಿದೆಯೆಂಬುದನ್ನು ವಿಷಾದದಿಂದ ಬರೆದಿದ್ದ.

The beautiful world of Pen Palsಅವನು ತನ್ನ ಪತ್ರದಲ್ಲಿ ವೈಯಕ್ತಿಕ ವಿಷಯವನ್ನು ಬರೆದಿದ್ದೇ ಕಡಿಮೆ. ಅವರಿಗೆ ನಮಸ್ಕಾರ ತಿಳಿಸು, ಇವರಿಗೆ ಶುಭಾಶಯ, ಸಿಹಿಮುತ್ತು ತಿಳಿಸು ಎಂದೆಲ್ಲ ಬರೆದಿದ್ದೇ ಇಲ್ಲ. ತನ್ನ ಆರೋಗ್ಯದ ಬಗ್ಗೆ ಹೇಳಿದ್ದು ಇಲ್ಲವೇ ಇಲ್ಲ. ಹಾಗೇ ನನ್ನ ಆರೋಗ್ಯ ಅಥವಾ ಕ್ಷೇಮದ ಬಗ್ಗೆ ಕೂಡ.

ಮಾವಿನ ಚಿಗುರಿನ ಬಗ್ಗೆ ಬರೆದ ಎಂಟು ಪುಟಗಳ ಆ ಪತ್ರ ಇಂದಿಗೂ ನನ್ನಲ್ಲಿ ಹೊಸ ಕಲ್ಪನೆಯನ್ನು ಬಿತ್ತುತ್ತಿದೆ. ಓದುತ್ತಾ ಹೋದ ಹಾಗೆ ಮನಸ್ಸು ಆಧ್ಯಾತ್ಮವಾಗುತ್ತದೆ. ಬಹುಶಃ ಆ ಪತ್ರವನ್ನು ನಾನು ಏನಿಲ್ಲವೆಂದರೂ ಅನೇಕ ಬಾರಿ ಓದಿರಬಹುದು ಎನ್ನುವುದಕ್ಕಿಂತ ಅಷ್ಟು ಬಾರಿ ‘ಉರು’ ಹೊಡೆದಿರಬಹುದು. ಆದರೂ ತಿಂಗಳಿಗೊಮ್ಮೆ ಆ ಪತ್ರದ ಮೇಲೆ ಕಣ್ಣನ್ನು ಹಾಯಿಸದಿದ್ದರೆ... ಏನೋ ಕಳಕೊಂಡ ಅನುಭವ.

ಪ್ರಿತೀಶ್‌ ನಂದಿಯ ಗಡ್ಡ. ಖುಷ್‌ವಂತ್‌ಸಿಂಗ್‌ ತೆವಲು, ಲಂಕೇಶ್‌ ಬರಹ- ವಿರೋಧಾಭಾಸ, ಜಯಲಲಿತಾ ತುಘಲಕ್‌ ದರ್ಬಾರು, ಬೋಸ್ನಿಯಾ- ಸೋಮಾಲಿಯಾ ನರಮೇಧ, ಉದಾರೀಕರಣದ ಉಗ್ರ ಪರಿಣಾಮ, ಕಾವೇರಜ್ಜಿಯ ಮಡಿವಂತಿಕೆ, ಕಾಗೆ, ನಾಟಿಗದ್ದೆ, ಕಳಲೆ ಹುಳಿ... ಬಗ್ಗೆ ಆತ ಬರೆದ ಪತ್ರಗಳನ್ನೆಲ್ಲಾ ಸೇರಿಸಿದರೆ ಬೃಹತ್‌ ಗಾತ್ರದ ಪುಸ್ತಕವೇ ಆದೀತು. ಆತ ಪತ್ರದಲ್ಲಿ ಪ್ರಸ್ತಾಪಿಸದ ವಿಷಯಗಳಿರಲಿಕ್ಕಿಲ್ಲ. ತನ್ನ ದಿನನಿತ್ಯದ ಕೆಲಸದ ನಡುವೆಯೂ ಪುರುಸೊತ್ತು ಮಾಡಿಕೊಂಡು ಹೇಗೆ ಬರೆಯುತ್ತಿದ್ದನೋ ಏನೋ. ಅದನ್ನು ಓದಲು ಪುರುಸೊತ್ತು ಮಾಡಿಕೊಳ್ಳುತ್ತಿದ್ದೆ.

‘ಹದಿನೈದು ಇಪ್ಪತ್ತು ವರ್ಷಗಳ ಹಿಂದೆ, ಹೆಂಗಸರು ಬಸಿರಾದಾಗ, ತಾವು ಬಸಿರಾಗಿದ್ದೇವೆಂದು ಅವರು ಹಡೆಯುವ ತನಕ ಹೊರಗೆ ಬೀಳುತ್ತಿರಲಿಲ್ಲ. ಎಷ್ಟು ತಿಂಗಳೇ ನಿನಗೆ ಎಂದು ಕೇಳಿದರೆ, ಕೈ ಬೆರಳಿನಲ್ಲಿ ಸನ್ನೆ ಮಾಡಿ ಹೇಳುತ್ತಿದ್ದರು. ಬಸಿರನ್ನು ಬಚ್ಚಿಡಲು ಸಾಧ್ಯವಾಗುವಂತಿದ್ದರೆ ಅವರು ಅದನ್ನೂ ಮಾಡುತ್ತಿದ್ದರೇನೋ? ಆದರೆ ಕಾಲ ಬದಲಾಗಿದೆ. ಬಸುರಿ ಹೆಂಗಸರನ್ನು ನೋಡಿದರೆ ಯಾರಾದರೂ ಹೇಳಬಹುದು, ಕಾಲ ಬದಲಾಗಿದೆಯೆಂದು, ಎಷ್ಟು ಬದಲಾಗಿದೆಯೆಂದರೆ ಬಸ್ಸಿನಲ್ಲಿ ಗಂಡಸರು ಜಾಗ ಬಿಡದಿದ್ದರೆ, I am carrying, ನಾನು ಐದು ತಿಂಗಳ ಬಸುರಿ. ನನ್ನ ಹೊಟ್ಟೆ ನೋಡಿದರೆ ಗೊತ್ತಾಗೊಲ್ವ. ಸೀಟು ಬಿಡಬೇಕೆಂದು ಅನ್ನಿಸಲ್ವ ನಿಮಗೆ ಎಂದು ರಂಪ ಮಾಡಿ ಸೀಟು ಗಿಟ್ಟಿಸಿಕೊಳ್ಳುವಷ್ಟು’.

ತನ್ನೂರಿನಲ್ಲಾದ ಬದಲಾವಣೆಗಳನ್ನು ಆತ ಗ್ರಹಿಸಿದ್ದು ಹೀಗೆ.

ಕೃಷಿ ಪದ್ಧತಿಯನ್ನು ಕುರಿತು ಆತ ಎಂಟು ಕಂತುಗಳಲ್ಲಿ ಬರೆದ ಪತ್ರ , ವಿಶ್ವವಿದ್ಯಾಲಯದ ಯಾವುದೇ ಸಂಶೋಧನಾ ಪ್ರಬಂಧಕ್ಕೆ ಕಡಿಮೆ ಇಲ್ಲ. ಈ ಕಾಗದಗಳ ಕಂತೆಯನ್ನು ಕನ್ನಡದ ವಾರಪತ್ರಿಕೆಯ ಸಂಪಾದಕರಿಗೊಮ್ಮೆ ತೋರಿಸಿದಾಗ, ಪ್ರಕಟಣೆಗೆ ಕೊಡುವಂತೆ ಗೋಗರೆದಿದ್ದರು. ಖಾಸಗಿ ಪತ್ರವಾದ್ದರಿಂದ ಬರೆದವನ ಅನುಮತಿ ಕೇಳುವುದಾಗಿ ಹೇಳಬೇಕಾಯಿತು. ಅದಕ್ಕೆ ಆತ, ತಾನೇಕೆ ಪತ್ರಿಕೆಗಳಲ್ಲಿ ಬರೆಯುವುದನ್ನು ಇಷ್ಟಪಡುವುದಿಲ್ಲ ಎಂದು ಹನ್ನೆರಡು ಪುಟಗಳ (ಪುಟ್ಟ?!) ಪತ್ರ ಬರೆದ. (ಈ ಪತ್ರದ ವಿವರವನ್ನು ಯಾವಾಗಲಾದರೂ ಬರೆಯಬಹುದು)

ಈ ಮಹಾಶಯ ಅಮೆರಿಕದಿಂದ ಬರೆದ ಕಾಗದ ಮುಂದಿದೆ. ಆತ ಅಲ್ಲಿಗೆ ಹೋಗಿದ್ದೇ ಗೊತ್ತಿರಲಿಲ್ಲ. ಪತ್ರ ನೋಡಿ ದಿಗ್ಭ್ರಮೆಯಾಯಿತು. ಪತ್ರದ ಗಾತ್ರ ನೋಡಿ ಆಶ್ಚರ್ಯವಾಯಿತು.

‘ನಾನು ಅಮೆರಿಕೆಗೆ ಬಂದಿಳಿದು ತಿಂಗಳಾಯಿತು. ಇಂಗ್ಲಿಷ್‌ ನೀರು ಗಂಟಲಲ್ಲಿ ಇಳಿಯುತ್ತಿಲ್ಲ. ನಾನು ಈಗ ಸಾಕಷ್ಟು ಬದಲಾಗಿದ್ದೇನೆ. ಎಷ್ಟು ಬದಲಾಗಿದ್ದೇನೆಂದರೆ- ನಿನಗೆ ದೀರ್ಘವಾಗಿ ಪತ್ರ ಬರೆಯುವಷ್ಟು ಟೈಮ್‌ ಸಿಗುತ್ತಿಲ್ಲ.’

ಆತನ (ದೀರ್ಘ?!) ನೋಡಿ ಹೌಹಾರಿದೆ. ಅಮೆರಿಕದ ಬೀದಿಗಳಲ್ಲಿ ಕಳೆದುಹೋಗುತ್ತಿರುವ ಆತನ ಪುಟ್ಟ?! ಪತ್ರದ ನಿರೀಕ್ಷೆಯಲ್ಲಿದ್ದೇನೆ.

ಮೊನ್ನೆ ಸಹೋದರನಿಂದ ಪತ್ರ ಬಂದಿತು. ಆತ ಅಮೆರಿಕಕ್ಕೆ ಹೋಗಿ ನಾಲ್ಕು ವರ್ಷಗಳಾದವು. ಬರೆದಿದ್ದು ಎರಡು ಪತ್ರ !!

ಈ ಸಲ ಬರೆದ ಪತ್ರದ ಕೊನೆಯಲ್ಲಿ ಒಂದು ಸಾಲನ್ನು ಸೇರಿಸಿದ್ದ- ‘ನನಗೆ ಟೈಮ್‌ ಇಲ್ಲದ್ದರಿಂದ ಎಲ್ಲರಿಗೂ ಬರೆಯಲು ಆಗಿಲ್ಲ. ಈ ಪತ್ರವನ್ನು ಝೆರಾಕ್ಸ್‌ ಮಾಡಿಸಿ ಅಕ್ಕ, ತಂಗಿ ಹಾಗೂ ನೆಂಟರಿಷ್ಟರಿಗೆ ಕಳಿಸು’.

ಎಂಥ ಕಾಲ ಬಂತಪ್ಪ?

ಗುಲ್ಬರ್ಗದ ಮಿತ್ರ ಬರೆಯದೇ ಎರಡು ವರ್ಷಗಳಾದವು. ಮೈಸೂರಿನಲ್ಲಿ ಆತ ಓದುವಾಗ ಅಲ್ಲಿನ ಜನಜೀವನ, ಜನ, ಬೀದಿ, ಭಾಷೆ, ಕುಕ್ಕರಹಳ್ಳಿಕೆರೆ, ಗಂಗೋತ್ರಿ, ಹುಡುಗಿಯರು ಮುಂತಾದವುಗಳ ಬಗ್ಗೆ ಬರೆದಿರುವುದು ಮೈಸೂರಿಗರಲ್ಲೂ ಅಚ್ಚರಿ ಹುಟ್ಟಿಸಬಹುದು.

ವೈಟ್‌ಫೀಲ್ಡ್‌ನ ಸ್ನೇಹಿತ ಒಂದು ದಿನವೂ ತಪ್ಪದೇ ಎರಡು ವರ್ಷಗಳ ಕಾಲ ಪತ್ರ ಬರೆದ. ಕಳೆದ ಆರು ವರ್ಷಗಳಿಂದ ಎಲ್ಲಿದ್ದಾನೆಂದೇ ಗೊತ್ತಿರಲಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ, ‘ನಾನಿನ್ನೂ ಬದುಕಿದ್ದೇನೆ. ಈಗ ಪತ್ರ ಬರೆಯುವ ಆಸಕ್ತಿ ಇಲ್ಲ. ಒಂದಲ್ಲ ಒಂದು ದಿನ ನಿನಗೆ ನೂರು ಪುಟದ ಪತ್ರ ಬರೆಯುತ್ತೇನೆ’ ಎಂದು ಕಾರ್ಡಿನಲ್ಲಿ ಬರೆದ.

ಸಾಮಾನ್ಯವಾಗಿ ಪತ್ರ ಬರೆಯುವುದರಲ್ಲಿ ತೊಡಗುವುದು ಹೈಸ್ಕೂಲ್‌ ಅಥವಾ ಕಾಲೇಜ್‌ ಸೇರಿದಾಗ. ಹಣಕ್ಕಾಗಿ ಬರೆಯುವುದು ಹಾಗೂ ಆ ಏಕಮಾತ್ರ ಉದ್ದೇಶಕ್ಕಾಗಿಯೇ ಪತ್ರ ಬರೆಯುವವರು ಕಮ್ಮಿಯೇನಿಲ್ಲ. ಪತ್ರ, ಕೃಷಿ ಹುಲುಸಾಗುವುದು ಪ್ರೇಮಪಾಶಕ್ಕೆ ಸಿಲುಕಿದಾಗ. ಪ್ರೇಮಪತ್ರ ಬರೆಯದ ಪ್ರೇಮಿಗಳು ಇರಲಿಕ್ಕಿಲ್ಲ. ಆದರೆ ಇಂದಿನ ಪ್ರೇಮಿಗಳ ಪ್ರೇಮಪತ್ರ ನೋಡಿ. (ಅನ್ಯರ ಪತ್ರ ಓದುವುದು ಸಭ್ಯ ನಡತೆ ಅಲ್ಲ) ಎಷ್ಟೊಂದು ನೀರಸ. ಬತ್ತಿಹೋದ ಭಾವನೆ, ಸಂವೇದನೆ ಕಳಕೊಂಡ ಭಾಷೆ. ಸರಕಾರಿ ಸುತ್ತೋಲೆ ಓದಿದಂತೆ ಅನಿಸುವುದುಂಟು.

ಪ್ರೇಮಿಗಳ ಪತ್ರವೇ ಇಷ್ಟು ನೀರಸವಾದರೆ ಅವರು ಮದುವೆಯಾಗಿ, ಮುಂದೆ ಹೆಂಡತಿ ಹಡೆಯಲು ತವರಿಗೆ ಹೋದಾಗ ಗಂಡ ಅವಳಿಗೆ ಬರೆಯುವ ಪತ್ರ ಎಷ್ಟು ನೀರಸವಾಗಿರಬಹುದೆಂಬುದನ್ನು ಊಹಿಸಿ. ಕೆಲವು ಗಂಡಂದಿರು ಹೆಂಡತಿಗೆ ಬರೆಯುವ ಪತ್ರ ಷೋಕಾಸ್‌ ನೋಟೀಸ್‌ ತರಹ ಇರುತ್ತದೆ. ಪ್ರೇಮಿಗಳಿದ್ದಾಗಲೇ ಬರೆಯದವರು, ಮದುವೆಯ ನಂತರ ಬರೆಯುವುದನ್ನು ನಿರೀಕ್ಷಿಸುವಂತಿಲ್ಲ. ಪ್ರೇಮಿಗಳಿದ್ದಾಗ ಬರೆಯುವ ಹಾಗೆ, ಮದುವೆಯಾದ ನಂತರವೂ ಹೆಂಡತಿಗೆ ಬರೆಯುವ ಗಂಡಂದಿರು ಅಪರೂಪ. ಅಂಥ ಗಂಡನನ್ನು ಪಡೆದಾಕೆ ನಿಜಕ್ಕೂ ಧನ್ಯೆ.

ಪತ್ರ- ಒಂದು ಖಾಸಗಿ ಬರವಣಿಗೆ. ಭಾವನೆಗಳ ಅಭಿವ್ಯಕ್ತಿಗೆ ಇಂತ ಮಾಧ್ಯಮ ಇನ್ನೊಂದಿಲ್ಲ. ಸ್ನೇಹ- ಸಂಬಂಧವನ್ನು ಬೆಸೆಯಲು ಇದಕ್ಕಿರುವ ಅಗಾಧ ಶಕ್ತಿ ಹಾಗೂ ಮಹಿಮೆ ಬೆರಗು ಹುಟ್ಟಿಸುವಂಥದ್ದು. ಮುಖ ಪರಿಚಯವಿಲ್ಲದ ಅದೆಷ್ಟೋ ಲಕ್ಷಾಂತರ ಮಂದಿ ದೇಶ, ಭಾಷೆ, ಸಂಸ್ಕೃತಿಯ ಪರಿಚಯವಿಲ್ಲದೇ ಪತ್ರ- ವ್ಯವಹಾರದಿಂದಲೇ (ಪೆನ್‌- ಪಾಲ್ಸ್‌) ಗಾಢಸ್ನೇಹಿತರಾದ ಪರಿ ಆಶ್ಚರ್ಯಕರ. ಕಲ್ಕತ್ತದ ಮೋಹಿತಾಸೇನ್‌ ಎಂಬ ಹುಡುಗಿ ಕಳೆದ ಮೂರು ವರ್ಷಗಳಿಂದ ಬರೆದ ಪತ್ರಗಳಲ್ಲಿ ನಕ್ಷತ್ರದಿಂದ ಹಿಡಿದು ನಳಪಾಕದವರೆಗೆ ಬರೆದಿರುವುದನ್ನು ನೋಡಿದರೆ ಆಕೆಯ ಜೀವನಾಸಕ್ತಿಯನ್ನು ಗಮನಿಸಿರಬಹುದು. ಆಕೆ ಕನ್ನಡದಲ್ಲಿಯೇ ಬರೆಯುತ್ತಾಳೆ. ಮೊನ್ನೆ ಅವಳು ತನ್ನ ಮದುವೆಯ ಆಮಂತ್ರಣವನ್ನು ಶುದ್ಧ ಕನ್ನಡದಲ್ಲಿಯೇ ಬರೆದಿದ್ದಳು !

ವಿಮಾನವೇರಿದ ಕಪ್ಪೆಯ ಮನಸ್ಸಿನಲ್ಲಿ ಹಾದು ಹೋದ ಯೋಚನೆಗಳನ್ನು ಮೋಹಿತಾ ವಿವರಿಸಿದ್ದಳು. ಈ ಪತ್ರ ಮನೆಯನ್ನು ‘ಶಿಫ್ಟ್‌’ ಮಾಡುವಾಗ ಕಳೆದುಹೋಯಿತು.

ಈಗ ಬರೆಯೋಣವೆಂದರೆ ಅಂಥ ಸ್ನೇಹಿತರೂ ಇಲ್ಲ. ಬರೆಯಲು ಸಮಯವೂ ಇಲ್ಲ. ಕೆಲವು ಸ್ನೇಹಿತರಿದ್ದಾರೆ. ಅವರಿಗೆ ಬರೆದರೆ ಈ ಭಾವನೆ- ಭಾಷೆಗಳೆಲ್ಲ ಅರ್ಥವೇ ಆಗೊಲ್ಲ. ಅವರಿಗೆ ರುಚಿಸುವುದು ಸರಕಾರಿ ಸುತ್ತೋಲೆ ಭಾಷೆ. ಹೀಗಾಗಿ ಅಪ್ಪ- ಮಗನಿಗೆ, ಮಗ- ಅಪ್ಪನಿಗೆ, ಗಂಡ- ಹೆಂಡತಿಗೆ, ಹೆಂಡತಿ- ಗಂಡನಿಗೆ, ಗೆಳೆಯ- ಗೆಳೆಯ/ ಗೆಳತಿಗೆ ಬರೆದ ಪತ್ರ ಜಾಹೀರಾತಿನಂತೆ ಸಂಕ್ಷಿಪ್ತ. ಗೆಜೆಟ್‌ ಭಾಷೆಯಂತೆ ನಿಸ್ಸತ್ವ. ಹೀಗಿರುವಾಗ ಆತ್ಮೀಯತೆ ಅರಳುವುದು ಹೇಗೆ?

ನೆಹರು ಸೆರೆಮನೆಯಲ್ಲಿದ್ದಾಗ ಇಂದಿರಾಗೆ ಬರೆದ ಕಾಗದಗಳನ್ನು ಸಂಗ್ರಹಿಸಿ ಪ್ರಕಟಿಸಿದ ಪುಸ್ತಕದ ಪುಟಗಳನ್ನು ತೆರೆದಂತೆ ಭಾರತ ದರ್ಶನದ ದಿವ್ಯ ಅನುಭವವಾಗುವುದು. ಇಂದಿರಾ ಓದುತ್ತಿದ್ದಾಗ, ನೆಹರೂ ಈ ಪತ್ರಗಳನ್ನು ಬರೆದದ್ದು. ಭಾರತದ ಚರಿತ್ರೆ, ಸಂಸ್ಕೃತಿ, ಐತಿಹ್ಯ, ಇತಿಹಾಸ, ಪುರಾಣ, ಅರ್ಥ ವ್ಯವಸ್ಥೆ , ಸಾಮಾಜಿಕ ಜೀವನ ಮುಂತಾದವುಗಳ ಬಗ್ಗೆ ನೆಹರು ತಮ್ಮ ಮಗಳಿಗೆ ಬರೆದ ಸಾಲುಗಲಲ್ಲಿ ಈ ಭೂಮಿಯ ವಾಸನೆ ಅಡಗಿದೆ. ಬರಹದಲ್ಲಿ ಅನುಭವ ಹಣ್ಣಾಗಿ, ಜೀವ ರಸಾಯನವಾದ ಸೋಜಿಗವನ್ನು ಕಾಣಬಹುದು. ರಾಷ್ಟ್ರ ರಾಜಕಾರಣದಲ್ಲಿ ಅಷ್ಟೊಂದು ಗಾಢವಾಗಿ ನಿರತರಾಗಿದ್ದರೂ, ಮಗಳಿಗೆ ಬರೆಯಲು ನೆಹರು ಪುರುಸೊತ್ತು ಮಾಡಿಕೊಳ್ಳುತ್ತಿದ್ದರು. ಅವರ ಪತ್ರಗಳಲ್ಲಿ ವೈಯಕ್ತಿಕತೆಗೂ ಮೀರಿದ ಕಾಳಜಿಯಿತ್ತು.

ಮಗಳಿಗೆ ಬರೆದ ಪತ್ರದಲ್ಲಿ ‘ಖಾಸಗಿತನ’ಕ್ಕಿಂತ ಈ ಮಣ್ಣಿನ ಗುಣವನ್ನು ಪೂಜಿಸುವ ಜವಾಬ್ದಾರಿ, ಹಂಬಲ ಹಾಗೂ ಉತ್ಸುಕತೆ ಅವರಲ್ಲಿತ್ತು. ಅವರು ಕಾಗದದಲ್ಲಿ ಪ್ರಸ್ತಾಪಿಸಿದ ಸಂಗತಿಗಳು ಸಾರ್ವತ್ರಿಕ ಮೌಲ್ಯವನ್ನು ಪಡೆದುಕೊಂಡಿದ್ದು ಈ ಗುಣದಿಂದಲೇ. ಈ ಜವಾಬ್ದಾರಿ ಮತ್ತು ಹಂಬಲವನ್ನು ತೋರುವ ಎಷ್ಟು ತಂದೆ- ತಾಯಿ ತಮ್ಮ ಪತ್ರದಲ್ಲಿ ಮಕ್ಕಳಿಗೆ ಖಾಸಗಿತನ ಮೀರಿದ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ?

ಇದಕ್ಕೆ ಕಾರಣ ಪತ್ರ ಬರಹ ಒತ್ತಾಸೆಯ ಕ್ರಿಯೆಯಾಗದೇ ಒತ್ತಾಯದ ಪರಿಶ್ರಮದ ಬರವಣಿಗೆ ಆಗಿ ಪರಿಗಣಿತವಾದ್ದರಿಂದ. ಅದಕ್ಕಾಗಿ ನಮ್ಮಲ್ಲಿ ಪತ್ರ ಸಾಹಿತ್ಯ ಇನ್ನೂ ‘ಖಾಸಗಿ’ ಮುಸುಕಿನಿಂದ ಹೊರಬಂದು ಸಾರ್ವತ್ರಿಕವಾಗಿಲ್ಲದಿರುವುದು.

.... ಪುನಃ ನೆನಪಾಗುವುದು ಆ ಮಲೆನಾಡಿನ ಮಿತ್ರನ ತೊಟ್ಟಿಕ್ಕುವ ಪತ್ರ ಬರಹ, ಮೋಹಿತಾ ಸೇನ್‌ಳ ಆಗಸಕ್ಕೆ ಹರಿಯಬಿಡುವ ವಿಚಿತ್ರ ಕಲ್ಪನೆಗಳು, ವೈಟ್‌ಫೀಲ್ಡ್‌ ಸ್ನೇಹಿತನ ಅನುಭವಾಮೃತ...

ಅಮೆರಿಕದ ಜೀವನದ ಮಧ್ಯೆ ಕಾಗದಕ್ಕಿಳಿಯದ ಮಲೆನಾಡಿನ ಸ್ನೇಹಿತನ ಲಂಗೋಟಿಯಂಥ ಕಾರ್ಡು ಗಾಬರಿ ಹುಟ್ಟಿಸುವ ತವಕದಲ್ಲಿ...

ನೆಹರು ಇಂದಿರಾಗೆ ಬರೆದ ಪತ್ರ ಓದುತ್ತಿದ್ದಂತೆ ಜ್ಞಾನ ಭಂಡಾರ ತೆರೆದುಕೊಂಡ ಅನುಭವ.

ಈ ಇ- ಮೇಲ್‌ ಎಂಬ ‘ಮಾರಿ’ ಬಂದ ನಂತರ ಪತ್ರ ಬರೆಯುವ ಪ್ರೀತಿಯೇ ಹೊರಟುಹೋಗಿದೆ. ಪ್ರೇಯಸಿಗೆ ಉದುರು ಉದುರು ಅಗ್ದಿ ಪಸಂದಾದ ನಾಲ್ಕು ಸಾಲು ಬರೆಯಲು ಏನೇನೋ ಬಡಿವಾರ. ಮೈಯ ಪಕಳೆಗಳಿಗೆಲ್ಲ ಬಿಗಿತ. ಒಂದು ಅಚ್ಚುಮೆಚ್ಚಿನ ಕ್ರಿಯೆಯನ್ನು ಇ- ಮೇಲ್‌ ನೇರಾನೇರ ಆಪೋಷಣೆಗೆ ತೆಗೆದುಕೊಂಡಿದೆ. ಪತ್ರಕ್ಕೆ ಮುತ್ತಂತಿದ್ದ ಕೈಬರಹ ಕೂಡ ಎದ್ದು ಹೊರಟುಹೋಗಿದೆ. ಅಲ್ಲಿ ಕಂಪ್ಯೂಟರ್‌ ಅಕ್ಷರಗಳು ಬಂದು ಕುಳಿತಿವೆ.

ಇದೊಂದು ಸಂಸ್ಕಾರ, ಸಂಸ್ಕೃತಿಯ ಅವನತಿ ಅಂದರೆ ಪತ್ರ ಸಾಹಿತ್ಯದ ಬಗ್ಗೆ ಅತಿಶಯೋಕ್ತಿಯಾಗಲಿಕ್ಕಿಲ್ಲ ಅಂತ ಹೇಳುತ್ತಾ ಇತಿ ನಿಮ್ಮ ವಿಶ್ವಾಸಿ.... !

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more