ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಡು ಕಟ್ಟುವ ಗೀಜಗ, ಕಿತ್ತೆಸೆವ ಈ ಜಗ

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಗೀಜಗ ಗೂಡನ್ನು ಹೆಣೆಯುತ್ತಿತ್ತು. ತನ್ನದಾದ ಒಂದು ಪುಟ್ಟ ಸಂಸಾರವನ್ನು ಹೂಡಲು . ಹೊಸ ಬದುಕನ್ನು ಆರಂಭಿಸಲು. ಅದೆಲ್ಲಿಂದ ತಂದಿತೋ ಅಷ್ಟೊಂದು ಕಸ ಕಡ್ಡಿಗಳನ್ನು ? ಹೇಗೆ ಆರಿಸಿತೋ ಒಂದೇ ನಮೂನೆಯ ಎಳೆಗಳನ್ನು ? ಅಂತೂ ಕಟ್ಟಿತು ಪುಟ್ಟ ಗೂಡೊಂದನ್ನು. ಮರದ ಟೊಂಗೆಯ ತುದಿಗೆ ಜಾಲಿಯಾಗಿ ತೂಗಾಡುವ ಗೂಡ ಅದು. ಗಾಳಿ, ಮಳೆಗೆ ಜಗ್ಗದ ಎರಡಂತಸ್ತಿನ ಮಜಬೂತು ಗೂಡು.

ಗೂಡು ಹೆಣೆಯುವುದರಲ್ಲಿ ಗೀಜಗನಿಗೆ ಎಷ್ಟೊಂದು ಶ್ರದ್ಧೆ, ಆಸಕ್ತಿ. ನಿಜಕ್ಕೂ ಆಶ್ಚರ್ಯವಾಗುತ್ತದೆ. ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅದಮ್ಯ ಆಸೆ ಆ ಹಕ್ಕಿಗೆ. ಹಾಗೆಯೇ ಭವಿಷ್ಯ ರೂಪಿಸುವ ಕಾಳಜಿ.

ಗೀಜಗನ ತಲ್ಲೀನತೆಗೆ ಒಂದು ಸಲಾಮು. ಒಂದು ದಿನದಲ್ಲಿ ಅದೆಂಥ ಆಕರ್ಷಕವಾದ, ನವಿರಾದ, ನಳನಳಿಸುವ ಗೂಡನ್ನು ಅದು ಕಟ್ಟಿಬಿಡುತ್ತದೆ ? ಕೊಕ್ಕೆಯಂಥ ತನ್ನ ಚುಂಚಿನಲ್ಲಿ ಸಟಸಟನೆ ನೇಯುವುದನ್ನು ನೋಡಿದರೆ ಯಾವುದೋ ಯಂತ್ರಕ್ಕೆ ಸಾಟಿಯಿಲ್ಲದಂತೆ ಕೆಲಸ ಮಾಡುತ್ತಿರುವಂತೆ ಭಾಸವಾಗುತ್ತದೆ.

The beautiful Oropendola netsಗೀಜಗ ಹೇಗೆ ಗೂಡು ನೇಯುತ್ತದೆಂಬ ಬಗ್ಗೆ ಅಮೆರಿಕದಲ್ಲಿ ಕೆಲವರು ಸಂಶೋಧನೆ ಕೈಗೆತ್ತಿಕೊಂಡಿದ್ದಾಗಿ ಪತ್ರಿಕೆಗಳಲ್ಲಿ ಓದಿದ ನೆನಪು. ಹಲವು ತಿಂಗಳುಗಳ ಕಾಲ ಸಂಶೋಧನೆ ನಡೆಸಿದ ಬಳಿಕವೂ ಗೀಜಗನ ಕಸರತ್ತನ್ನು ಭೇದಿಸುವುದು ಅವರಿಗೆ ಸಾಧ್ಯವಾಗಲಿಲ್ಲವಂತೆ. ಅದು ಗೂಡು ನೇಯಲು ಅನುಸರಿಸುವ ಹೆಣೆಯುವ ವಿಧಾನ ಇನ್ನೂ ಗೊತ್ತಾಗಿಲ್ಲ. ತಮಾಷೆಯೆಂದರೆ ಸಂಶೋಧನೆ ಇನ್ನೂ ಮುಂದುವರೆಯುತ್ತಿದೆ. ಅದಾದ ಬಳಿಕ ಗೀಜಗ ಅವೆಷ್ಟು ಗೂಡುಗಳನ್ನು ನೇಯಿತೋ ಏನೋ ಗೂಡು ಕಟ್ಟಲು ಬೇಕಾದ ಒಂದೇ ಗಾತ್ರದ ಸಾವಿವಾರು ಹುಲ್ಲು ಎಳೆ, ಕಸಕಸಡ್ಡಿಗಳನ್ನು ಅದು ಹೇಗೆ ಆರಿಸಿತೋ ? ಗೂಡು ಕಟ್ಟುವ ಕಾಯಕದಲ್ಲಿ ಒಂದೊಂದು ಎಳೆಯೂ ಕಲಾತ್ಮಕವಾಗಿ ಬಿಗಿದುಕೊಳ್ಳುತ್ತದೆ. ಜೀವನಕ್ಕೆ ಶಿಸ್ತು, ಬದ್ಧತೆಯನ್ನು ರೂಪಿಸುವ ಅಪೂರ್ವ ಆಶಯ ತೆರೆದುಕೊಂಡಂತೆ ಕಾಣುತ್ತದೆ. ಬದುಕು ತೆರೆದುಕೊಳ್ಳುವ ಹಲವು ಆಯಾಮಗಳಿಗೆ ಅಸ್ತಿತ್ವದ ಒಂದು ಶಾಶ್ವತತೆಯನ್ನು ಕಲ್ಪಿಸಿಕೊಡುವ ಮುತುವರ್ಜಿ ಎದ್ದು ತೋರುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಬದುಕನ್ನು ಯರ್ರಾಬಿರ್ರಿಯಾಗಿ ಬಾಳದೇ ಒಂದು ಚೌಕಟ್ಟಿನಲ್ಲಿ ಹಿಡಿದಿಟ್ಟು ಅದರ ಬುನಾದಿಯಲ್ಲಿ ಅರಳಿ, ಕ್ಷಣಕ್ಷಣವನ್ನು ಪ್ರೀತಿಸುವ ಗಂಭೀರಭಾವ ವ್ಯಕ್ತವಾಗುತ್ತದೆ.

ಗೀಜಗನ ಗೂಡು ಹಲವು ಯೋಚನೆಗಳಿಗೆ ಮನಸ್ಸನ್ನು ಹಚ್ಚುತ್ತಿರುವಾಗ ಅದೇ ಸಂಕುಲಕ್ಕೆ ಸೇರಿದ ಗುಬ್ಬಿ, ಕಾಡು ಗುಬ್ಬಿ, ಕಾಗೆ, ಕೋಗಿಲೆ, ಮರ ಕುಟುಕ, ಪಾರಿವಾಳಗಳ ಮನೆಗಳ ಮೇಲೆ ಒಮ್ಮೆ ದೃಷ್ಟಿ ಹಾಯಿಸಿ.

ಈ ಮರ ಕುಟುಕ ಅಸ್ತಿತ್ವದ ಬಗ್ಗೆ ಅಪಾರ ನಂಬಿಕೆ ಇರುವ ಪಕ್ಷಿಯಾಗಿ ತೋರುವುದಕ್ಕೆ ಕಾರಣ ಅದು ಕಟ್ಟುವ ಮನೆ ಭದ್ರವಾಗಿರಬೇಕೆಂಬ ಬಯಕೆ. ಕಬ್ಬಿಣದಂಥ ಕಠಿಣವಾದ ಮರವನ್ನೂ ಮೊಳೆಯಂಥ ಕೊಕ್ಕಿನಿಂದ ಒಂದೇ ಸಮನೆ ಕುಕ್ಕಿ ಕುಕ್ಕಿ ಗೂಡು ಕೊರೆಯುವ ಈ ಹಕ್ಕಿಯ ಮನಸ್ಸಿಗೂ ಜೀವನವಿಡೀ ದುಡಿದ ಹಣಕ್ಕೆ ಬ್ಯಾಂಕ್‌ ಸಾಲವನ್ನೋ, ಹೆಂಡತಿ ಬಳೆಯನ್ನೋ ಸೇರಿಸಿ ಮನೆಯನ್ನು ಕಟ್ಟುವ ಮಧ್ಯಮವರ್ಗದ ಜನರ ಮನದ ಹಿಂದಿರುವ ಆಲೋಚನೆಗೂ ಏನೂ ವ್ಯತ್ಯಾಸವಿಲ್ಲ.

ಈ ಕಾಗೆಗೋ ಭಾರೀ ವ್ಯವಹಾರ ಬುದ್ಧಿ. ಗೂಡನ್ನು ಮಜಬೂತಾಗಿ ಕಟ್ಟುವುದಿಲ್ಲ. ಒಟ್ಟೂ ಸೇರಿಸಿದರೆ ನೂರಿನ್ನೂರು ಕಡ್ಡಿಗಳಾಗಬಹುದಾದಷ್ಟು ದೊಡ್ಡ ಗೂಡು. ಆ ಗೂಡಿಗೊಂದು ಶಿಸ್ತಿಲ್ಲ. ಸೊಬಗಿಲ್ಲ. ಮನಸ್ಸಿಗೆ ಬಂದಂತೆ ಸರಕಾರ ಕೊಳೆಗೇರಿ ನಿವಾಸಿಗಳಿಗೆ ಕಟ್ಟಿಕೊಡುವ ಮನೆಗಳಂತೆ. ಗಾಳಿ ಮಳೆ ಬಂದರೆ ಗೂಡು ತತ್ತರ ತತ್ತರ !

A Crow netಗೀಜಗನ ಗೂಡಿನಂಥ ಕೌಶಲವಿಲ್ಲ. ಮರ ಕುಟುಕನ ಗೂಡಿನ ಹಾಗೆ ಗಟ್ಟುಮುಟ್ಟಾಗಿ ಇಲ್ಲ. ಕಾಗೆಯ ವ್ಯವಹಾರ ಬುದ್ಧಿ ವ್ಯಕ್ತವಾಗುವುದು ಅದು ಕಟ್ಟುವ ಮನೆಯ ಮಾಟದಿಂದ ಅಲ್ಲ , ಸಂಖ್ಯೆಗಳಿಂದ. ಒಂದು ಕಾಗೆ ಕನಿಷ್ಠ ಆರು ಗೂಡನ್ನಾದರೂ ಹೊಂದಿರುತ್ತದೆ. ಸಾಮಾನ್ಯವಾಗಿ ತಾನು ಹೋಗುವ ಕಡೆಗಳಲ್ಲಿ ಒಂದು ಗೂಡನ್ನಾದರೂ ಹೊಂದಿರಲು ಬಯಸುತ್ತದೆ. ನಗರವನ್ನು ಉದ್ದ- ಅಗಲವಾಗಿ ನುಂಗುತ್ತಾ ಕಂಡ ಕಂಡಲ್ಲಿ ಸೈಟು ಖರೀದಿಸುತ್ತಾ , ಅಲ್ಲಿ ಮನೆಗಳನ್ನು ಕಟ್ಟಿಸುವವರ ಮನಸ್ಸಿನ ಹಿಂದಿರುವ ಆಲೋಚನೆಗೂ ಕಾಗೆಯ ಈ ಲೆಕ್ಕಾಚಾರಕ್ಕೂ ಹೆಚ್ಚು ಅಂತರವಿಲ್ಲ. ಮಕ್ಕಳಿಲ್ಲದ ದಂಪತಿಗಳನ್ನು ನೋಡಿ. ನಾಲ್ಕೈದು ಮನೆಗಳಿರುತ್ತವೆ. ಒಂದೆರಡು ಸೈಟುಗಳಿರುತ್ತವೆ. ಮನುಷ್ಯನಿಗೆ ಬೇಕಾಗಿರುವುದು ಆರಡಿ ಉದ್ದ, ಮೂರಡಿ ಅಗಲದ ತುಂಡು ಭೂಮಿ. ಆದರೆ ಈ ದಾಹ ಅಥವಾ ಕಾಗೆ ಬುದ್ಧಿ ಮಾತ್ರ ಬಿಟ್ಟು ಹೋಗೊಲ್ಲ.

ಗುಬ್ಬಿ ಗೂಡು ಈಗ ಇದ್ದ ಹಾಗೆ ಇರಲಿ. ನಗರಗಳಲ್ಲಿ ಕೆಲವು ಮನೆಗಳಲ್ಲಿ ಗುಬ್ಬಿಗಾಗಿ ಕಟ್ಟಿಕೊಡುವ ಗೂಡುಗಳಲ್ಲಿ ಹತ್ತಿಯ ಮೆತ್ತೆ. ಅಕ್ಕಿಕಾಳುಗಳನ್ನು ನೋಡಿದಾಗ, ಗುಬ್ಬಿ ತನ್ನ ಸಹಜ, ನೈಸರ್ಗಿಕ ಜೀವನ ವಿಧಾನವನ್ನು ಬಿಟ್ಟು ಮಾಡರ್ನ್‌ ಆಗುತ್ತಿದೆಯೇನೋ ಅನಿಸುತ್ತದೆ. ಏಕೆಂದರೆ ಸಿರಿವಂತರ ಮನೆಗಳಲ್ಲಿರುವ ನಾಯಿಗಳೆಲ್ಲ ಮಾಡರ್ನ್‌ ಆಗಿಬಿಟ್ಟಿವೆ. ಅವು ಗುಳಿಗೆ ನುಂಗುತ್ತಿವೆ, ಔಷಧ- ಟಾನಿಕ್‌ ಕುಡಿಯುತ್ತವೆ. ತಮಗಾಗಿಯೇ ವಿಶೇಷ ಬ್ರ್ಯಾಂಡ್‌ಗಳ ತಿನಿಸುಗಳನ್ನು ಮಾಡಿಸಿಕೊಂಡಿವೆ. ನಾಯಿ ಡಾಕ್ಟರ್‌, ನಾಯಿ ಸೋಪು, ಬಿಸ್ಕತ್‌, ನಾಯಿ ಶಾಂಪು, ನಾಯಿ ಹಾಸಿಗೆ, ನಾಯಿ ನೆಕ್ಲೇಸ್‌... ಎಲ್ಲವೂ ಬಂದಿವೆ. ಮಾತುಕತೆಯೂ ಇಂಗ್ಲಿಷ್‌ನಲ್ಲಿಯೇ. English has gone to dogs. ಶಾಪಿಂಗ್‌ಗೆ ಹೋಗುವಾಗ, ವಾಕಿಂಗ್‌ಗೆ ಹೋಗುವಾಗ ನಾಯಿ ಸಂಗಾತಿ. ಪತ್ರಿಕೆಗಳಲ್ಲಿ ದೊಡ್ಡವರ ಫೋಟೋಗಳನ್ನು ನೋಡಿ. ಅವರ ಜತೆ ಗಂಡ/ ಹೆಂಡತಿ ನಿಂತಿರದಿದ್ದರೆ ಪಕ್ಕದಲ್ಲಿ ನಾಯಿಯಾದರೂ ಇರುತ್ತದೆ. ಎಷ್ಟೋ ಮನೆಗಳಲ್ಲಿ ಮನುಷ್ಯರೂ ಕರುಬುವಂತಹ ಐಷಾರಾಮಿ ಜೀವನವನ್ನು ನಾಯಿಗಳು ಸಾಗಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇದು ತಪ್ಪಲ್ಲ. ನಮ್ಮ ಪ್ರಯಾರಿಟಿ ಬದಲಾದ ಬಗ್ಗೆ ಹೇಳಲೇಬೇಕಾಗಿದೆ.

ಕಾನ್ವೆಂಟ್‌ಗೆ ಹೋಗುವ ಹುಡುಗಿಯರ ಹಾಗೆ ನಡೆಯುವ ಸಿರಿವಂತರ ಮನೆಯ ನಾಯಿ, ಹೋದೆಡೆಯಲ್ಲೆಲ್ಲಾ ಮನೆಗಳನ್ನು ಕಟ್ಟಿಕೊಳ್ಳುವ ಕಾಗೆ, ಸುಂದರ ಗೂಡು ಕಟ್ಟಿಕೊಂಡು ಬದುಕಿಗೊಂದು ಅರ್ಥ ಬರೆವ ಗೀಜಗದ ಬಗ್ಗೆ ಯೋಚಿಸಿದಷ್ಟೂ ಸೋಜಿಗ ತೆರೆದುಕೊಳ್ಳುತ್ತಾ , ಅಚ್ಚರಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಲೋಕದ ಯಾವ ಕುತಂತ್ರವನ್ನೂ ಅರಿಯದ ಜೀವಿಗಳು ತಮ್ಮ ಪಾಡಿಗೆ ಜೀವನ ಸಾಗಿಸುವ ಹಿಂದಿನ ಮರ್ಮದ ರೋಚಕತೆ ವಿಸ್ಮಯಕಾರಿ . ಹೀಗಾಗಿ ಹಾರುವ ಚಿಟ್ಟೆಯ ಹೆಜ್ಜೆಗಳನ್ನು ಹುಡುಕುವ ಮನಸ್ಸು , ಈಜುವ ಮೀನಿನ ನೆರಳನ್ನು ಅರಸುತ್ತದೆ. ಹಾರುವ ಹಕ್ಕಿಯ ಹಾಡಿಗೆ ಕಿವಿ ತೆರೆದುಕೊಳ್ಳುತ್ತದೆ.

ಈ ಚಿಂತನೆ ಬೊಗಸೆಯಲ್ಲಿ ಎತ್ತಿಕೊಡುವ ಸಮಾಧಾನವೇ ಅದ್ಭುತ. ಇದರಲ್ಲಿ ಒಂದು ಉತ್ತಮವಾದ ಪುಸ್ತಕವನ್ನು ಓದಿದ ಸಂತೃಪ್ತಿಯಿರುತ್ತದೆ. ನಾವು ಅತಿಯಾಗಿ ಮೆಚ್ಚುವ ಹೆಣ್ಣು ಹೃದಯದೊಂದಿಗೆ ಸಂವಾದಿಸುತ್ತಾ ನಕ್ಕ ಖುಷಿಯಿರುತ್ತದೆ.

ಜಗತ್ತಿನ ಯಾವ ಜಂಜಡಗಳಿಗೂ ತಮ್ಮನ್ನು ಒಡ್ಡಿಕೊಳ್ಳದ ಪ್ರಾಣಿ- ಪಕ್ಷಿಗಳ ಹಾಗೆ ಕೆಲವು ವ್ಯಕ್ತಿಗಳೂ ಅಂಥದೇ ಜೀವನವನ್ನು ಸವೆಸುತ್ತಿರುವುದನ್ನು ನೋಡಿದರೆ, ಗೀಜಗ ಕಂಡ ಆಧ್ಯಾತ್ಮದ ಕಲ್ಪನೆಯನ್ನು ಅನುಷ್ಠಾನಕ್ಕೆ ತರಬಹುದೆನಿಸುತ್ತದೆ. ಅಂಥ ವ್ಯಕ್ತಿಗಳಿಗೆ ತಮ್ಮ ಪಕ್ಕದಲ್ಲಿ ಏನಾಯಿತೆಂದೂ ಸಹ ತಿಳಿದಿರುವುದಿಲ್ಲ. ಅವರು ಜಗತ್ತಿನ ಬಗ್ಗೆ ಚಿಂತಿಸುತ್ತಿರುತ್ತಾರೆ. ಬೋಸ್ನಿಯಾದಲ್ಲಿ ಹರಿದ ರಕ್ತಕ್ಕೆ ಸಂಕಟ ಪಡುತ್ತಿರುತ್ತಾರೆ. ಕಾವೇರಿಯಲ್ಲಿ ಹರಿದ ನೀರಿಗೆ ಕಚ್ಚಾಡುವವರನ್ನು ಕಂಡು ಮರುಕ ಪಡುತ್ತಿರುತ್ತಾರೆ. ಇವರು ಪತ್ರಿಕೆಗಳ ಮುಖಪುಟದಲ್ಲಿ ಕಂಗೊಳಿಸುವುದಿಲ್ಲ. ದಪ್ಪಕ್ಷರಗಳಲ್ಲಿ ಕಣ್ಣು ಕುಕ್ಕುವುದಿಲ್ಲ. ಅಂದು ತಾವು ಮಾಡಲೇಬೇಕಾದ ಕಾಯಕ ಮುಗಿಸಿ ದಿನವನ್ನು ಕಟ್ಟಿಬಿಡುತ್ತಾರೆ.

ಒಂದು ದಿನ ಯಾರೋ ಆ ಸುಂದರವಾದ ಗೀಜಗನ ಗೂಡನ್ನು ಕೀಳಲಾರಂಭಿಸಿದರು. ಒಳಗಿದ್ದ ಮರಿ ಚಡಪಡಿಸಿ ಗೂಡಿನಿಂದ ಹಾರಿತು. ತಾಯಿಗೆ ಈ ವರ್ತಮಾನ ತಿಳಿಸಲು ಮರಿ ಗೀಜಗ ಧಾವಂತದಲ್ಲಿ ನೆಗೆಯಿತು. ಇಬ್ಬರೂ ಬರುವುದರೊಳಗೆ ಗೂಡು ಕಣ್ಮರೆಯಾಗಿತ್ತು.

ಯಾರೋ ದುರಾತ್ಮರು ಆ ಗೂಡನ್ನು ಕಿತ್ತು ತಮ್ಮ ಮನೆಯಲ್ಲಿ ಶೋಕಿಗೆ ನೇತು ಹಾಕಿದ್ದರು. ಆ ಗೂಡಿಗೆ ಸಿಂಪಡಿಸಿದ ಔಷಧಕ್ಕೆ ಸೊಳ್ಳೆಗಳು ಆಕರ್ಷಿತವಾಗಿ ಮುತ್ತಿಕೊಂಡು ಹೊರಬರಲಾಗದೇ ಚಡಪಡಿಸುತ್ತಾ ನರಳಿ ಸಾಯುವುದನ್ನು ನೋಡಿ ಸೊಳ್ಳೆಯಿಲ್ಲದ ರಾತ್ರಿಯಲ್ಲಿ ಸುಖ ನಿದ್ದೆ ಹೋಗುತ್ತಿದ್ದರು. ಗೂಡಿಲ್ಲದ ಗೀಜಗ ಮಳೆಯಲ್ಲಿ ಮರಿಯಾಂದಿಗೆ ತೊಯ್ಯುತ್ತಿತ್ತು. ಮರುದಿನ ಗೂಡು ಕಟ್ಟಲು ಬೇಕಾದ ಹುಲ್ಲು ಕಸಗಳಿಗಾಗಿ ಕನಸನ್ನು ಹೆಣೆಯುತ್ತಿತ್ತು. ಎರಡು ದಿನಗಳಲ್ಲಿ ಎಲ್ಲಿಂದಲೋ ಹೆಕ್ಕಿ ತಂದ ಕಾಳುಗಳು ಗೂಡನ್ನು ಕೀಳುವಾಗ ಬಿದ್ದು ಹೋಗಿದ್ದರಿಂದ ನಾಳಿನ ಕೂಳಿಗಾಗಿ ಮನಸ್ಸು ವ್ಯಥೆ ಪಡುತ್ತಿತ್ತು. ಆದರೂ ಗೀಜನ ಮನ ಮರಿಗೊಂದು ಗೂಡು ಕಟ್ಟುವ ಕನಸನ್ನು ನೇಯುತ್ತಿತ್ತು.

ಗೀಜಗನ ಗೂಡಿಗೆ ಇನ್ನು ಸೊಳ್ಳೆ ಮುತ್ತಿಕೊಳ್ಳದಷ್ಟು ಅದು ಅವುಗಳಿಂದಲೇ ತುಂಬಿದ ಮೇಲೆ ಆ ದುರಾತ್ಮರು ಗೂಡನ್ನು ಕಸದ ಬುಟ್ಟಿಗೆ ಬಿಸಾಕಿದರು. ಸುಮಾರು ಎಂಟು ಮರಿಗಳು ಆಡಿ, ನಲಿದು, ಕಳೆದ ಕ್ಷಣಗಳನ್ನು ಆ ಗೂಡು ಹೊತ್ತುಕೊಂಡಿತ್ತು. ಆ ನೆನಪುಗಳು ಗೂಡನ್ನು ಆವರಿಸಿಕೊಂಡಿದ್ದವು. ತಾಯಿ ಗೀಜಗ ತರುವ ಒಂದೊಂದು ಕಾಳಿಗೆ ಮರಿ ಹಕ್ಕಿಗಳು ಬಾಯಿ ಬಾಯಿ ಬಿಡುವ ಅಪೂರ್ವ ಕ್ಷಣಗಳು ಆ ಗೂಡಿನಲ್ಲಿ ಜಮಾಯಿಸಿದ್ದವು. ಅವೆಲ್ಲವೂ ಸೊಳ್ಳೆಗಳ ಮುತ್ತಿಗೆಯಲ್ಲಿ ಕರಗಿ, ದುರಾತ್ಮನ ಸುಖನಿದ್ದೆಗಾಗಿ ಕರಗಿ ಕಸದ ಬುಟ್ಟಿಯಲ್ಲಿ ಅಂತ್ಯಕಂಡಿತು.

ಯಾವುದೋ ಅರಮನೆಯನ್ನು ನೋಡಿದಾಗ ಇತಿಹಾಸಗಳು ತಟಕ್ಕನೆ ಬಿಚ್ಚಿಕೊಳ್ಳುವಂತೆ, ಮಣ್ಣು ಪಾಲಾದ ಆ ಗೂಡಿನ ಒಂದೊಂದು ಎಳೆ ಸಿಕ್ಕಾಗಲೂ ಒಂದು ಅದ್ಭುತ ಕ್ಷಣದ ತುಣುಕು ಸಿಕ್ಕಂತಾಗುತ್ತದೆ. ಈ ಸೃಷ್ಟಿಯ ನಿರುಪದ್ರವಿ ಜೀವಿ ಬರೆದ ಅಲಿಖಿತ ಇತಿಹಾಸದ ಪುಟಗಳು ತೆರೆ ತೆರೆದುಕೊಂಡಂತೆನಿಸುತ್ತದೆ. ಕಣ್ಣೆದುರಿಗೆ ಬಿತ್ತಿದ ಬೀಜ ಮೊಳಕೆಯಾಡೆದು ಕಾಯಿ ಬಿಟ್ಟಾಗ ಆಗುವ ಸಂತಸವನ್ನು ಅನುಭವಿಸುತ್ತಿರುವಾಗ, ಅದನ್ನು ಯಾರೋ ಕಚಕ್ಕನೆ ಕಡಿದಾಗ ಆಗುವ ಸಂಕಟ ಮನಸ್ಸನ್ನು ಮುತ್ತಿಕೊಳ್ಳುತ್ತದೆ. ಮರಿಯಾಂದಿಗೆ ಮಳೆಯಲ್ಲಿ ನೆನೆಯುವ ಗೀಜನಿಗೆ ನೆರವಾಗುವುದು ಯಾವ ರೀತಿಯಿಂದಲೂ ಸಾಧ್ಯವಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ನಮ್ಮ ಸಹಾಯವನ್ನು ಅಪೇಕ್ಷಿಸುವುದಿಲ್ಲ ಬಿಡಿ.

ವನ್ಯ ಜೀವನ ಸಪ್ತಾಹವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಈ ಜಗದಲ್ಲಿರುವ ಗೀಜಗನಂಥ ಪಕ್ಷಿಗಳ ಮೊರೆ ಯಾರಿಗಾದರೂ ಕೇಳಿಸೀತೆ ?

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X