keyboard_backspace

ವಿಶೇಷ ವರದಿ: ಜಾಂಬವಂತರ ಅಡ್ಡವಾದ ಬಿಳಿಗಿರಿರಂಗನಾಥ ಬೆಟ್ಟ!

Google Oneindia Kannada News

ಚಾಮರಾಜನಗರ, ಅಕ್ಟೋಬರ್ 16: ಚಾಮರಾಜನಗರ ಜಿಲ್ಲೆ ಹೆಚ್ಚಿನ ಅರಣ್ಯ ಪ್ರದೇಶಗಳನ್ನು ಹೊಂದಿದ್ದು, ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗೂ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಬೆಟ್ಟಗಳು ಹುಲಿ ಸಂರಕ್ಷಿತ ಪ್ರದೇಶವಾಗಿ ಗಮನ ಸೆಳೆಯುತ್ತಿವೆ.

ಪ್ರವಾಸಿಗರು ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟಕ್ಕೊಂದು ಸುತ್ತು ಹೊಡೆದು ಸುಂದರ ಪರಿಸರ, ಅದರ ನಡುವೆ ಕಾಣಸಿಗುವ ಹಲವು ಪ್ರಾಣಿಗಳನ್ನು ನೋಡಿಕೊಂಡು ಹೋಗುವುದು ಮಾಮೂಲಿಯಾಗಿದೆ. ಕೆಲವರಂತು ಅರಣ್ಯದೊಳಗೆ ಅಪರೂಪದ ಪ್ರಾಣಿಗಳು ಯಾವುದಾದರೂ ನೋಡಲು ಸಿಗುತ್ತವೆಯಾ ಎಂದು ಕಾಯುವುದುಂಟು. ಆದರೆ ಎಲ್ಲ ಸಂದರ್ಭಗಳಲ್ಲಿ ಎಲ್ಲ ಪ್ರಾಣಿಗಳನ್ನು ನೋಡುವುದು ಕಷ್ಟಸಾಧ್ಯ. ಕೆಲವು ಪ್ರಾಣಿಗಳು ಅರಣ್ಯದಲ್ಲಿದ್ದರೂ ಯಾರ ಕಣ್ಣಿಗೂ ಬೀಳದೆ ಗಿಡಮರಗಳ ನಡುವೆ ಬೆಚ್ಚಗಿರುತ್ತವೆ.

ಆಗಾಗ್ಗೆ ದರ್ಶನ ನೀಡುವ ಕಾಡು ಪ್ರಾಣಿಗಳು

ಆಗಾಗ್ಗೆ ದರ್ಶನ ನೀಡುವ ಕಾಡು ಪ್ರಾಣಿಗಳು

ಚಾಮರಾಜನಗರ ಜಿಲ್ಲೆಯ ಅರಣ್ಯಗಳಲ್ಲಿ ಕಾಡಾನೆ, ಹುಲಿ, ಚಿರತೆ, ಕಾಡುಕೋಣ ಸೇರಿದಂತೆ ಕೆಲವು ಪ್ರಾಣಿಗಳು ಆಗಾಗ್ಗೆ ಜನರಿಗೆ ದರ್ಶನ ನೀಡುತ್ತಿರುತ್ತವೆ. ಇನ್ನು ಕೆಲವೊಮ್ಮೆ ಸಫಾರಿ ಮಾಡಿದರೂ ಪ್ರಾಣಿಗಳು ನೋಡಲು ಸಿಗದೆ ತಪ್ಪಿಸಿಕೊಳ್ಳುವ ನಿದರ್ಶನವಿದೆ. ಹೀಗಿರುವಾಗ ಅರಣ್ಯದಲ್ಲಿ ಅಪರೂಪದ ಜಾಂಬವಂತ (ಕರಡಿ) ಎದುರಾದರೆ ಹೇಗಾಗಬೇಡ? ಇದೀಗ ಬಿಳಿಗಿರಿರಂಗನ ಬೆಟ್ಟದಲ್ಲಿ ಜಾಂಬವಂತರು ಪ್ರತ್ಯಕ್ಷವಾಗಿರುವುದು ಪ್ರಾಣಿಪ್ರಿಯರಲ್ಲಿ ಸಂತಸ ತಂದಿದೆ. ಜಿಲ್ಲೆಯಲ್ಲಿ ಆಗಾಗ್ಗೆ ಜಾಂಬವಂತರು ಕಾಣಿಸಿಕೊಳ್ಳುತ್ತಿರುತ್ತಾರೆ. ಒಂದೆರಡು ವರ್ಷಗಳ ಹಿಂದೆ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದರು. ಜನರನ್ನು ನೋಡಿ ಮರವೇರಿ ಅಡಗಿಕೊಂಡಿದ್ದರು. ಅದು ಬಹಳ ದೊಡ್ಡ ಸುದ್ದಿಯಾಗಿತ್ತು.

ಬಿಳಿಗಿರಿರಂಗನಬೆಟ್ಟದಲ್ಲಿ ಕಂಡ ಜಾಂಬವಂತರು

ಬಿಳಿಗಿರಿರಂಗನಬೆಟ್ಟದಲ್ಲಿ ಕಂಡ ಜಾಂಬವಂತರು

ಇದೀಗ ಬಿಳಿಗಿರಿರಂಗಬೆಟ್ಟದ ಅರಣ್ಯದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಜಾಂಬವಂತರ ಆವಾಸ ತಾಣವಾಯಿತಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ಬಿಳಿಗಿರಿರಂಗನಬೆಟ್ಟದಲ್ಲಿ ಜಾಂಬವಂತರ ಸಂತತಿ ಮೊದಲಿಗಿಂತ ಹೆಚ್ಚಾಗಿದೆ ಎಂಬುದು ಅವರು ಆಗಾಗ್ಗೆ ಜನರ ಮುಂದೆ ಪ್ರತ್ಯಕ್ಷವಾಗುವ ಮೂಲಕ ತೋರ್ಪಡಿಸುತ್ತಿದೆ. ಹಾಗೆ ನೋಡಿದರೆ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ಜಾಂಬವಂತರು ಅಸ್ತಿತ್ವ ಕಂಡುಕೊಂಡಿರುವುದು ಖುಷಿಯ ಸಂಗತಿಯಾಗಿದೆ. ಇತ್ತೀಚೆಗೆ ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ. ಗುಡಿ ಸಫಾರಿ ಜೋನ್‌ನಲ್ಲಿ ಪ್ರವಾಸಿಗರು ಸಫಾರಿ ಮಾಡುವ ವೇಳೆ ಮಳೆಯ ನಡುವೆ ಸಫಾರಿ ರಸ್ತೆಯಲ್ಲಿ ಮೂರು ಜಾಂಬವಂತರು ಮಳೆಯಲ್ಲಿ ನೆನೆಯುತ್ತಾ ಖುಷಿ, ಖುಷಿಯಾಗಿ ವಿಹರಿಸುತ್ತಿದ್ದ ದೃಶ್ಯವನ್ನು ಸಫಾರಿಗೆ ತೆರಳಿದವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು.

ಸಫಾರಿಗೆ ತೆರಳಿದವರಿಗೆ ಸಾರ್ಥಕ ಭಾವ

ಸಫಾರಿಗೆ ತೆರಳಿದವರಿಗೆ ಸಾರ್ಥಕ ಭಾವ

ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಮೂಲಕ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಾಂಬವಂತರು ತಮ್ಮ ಬದುಕು ಕಟ್ಟಿಕೊಂಡು ಸಂತತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸಾರಿ ಹೇಳಿದಂತಿದೆ. ಇಷ್ಟೇ ಅಲ್ಲ ಜಾಂಬವಂತರು ಅರಣ್ಯದಲ್ಲಿದ್ದರೂ ಅವು ಸಾಮಾನ್ಯವಾಗಿ ಯಾರ ಕಣ್ಣಿಗೂ ಬೀಳುವುದಿಲ್ಲ. ಆದರೆ ಸಫಾರಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಲ್ಲದೆ, ಸಫಾರಿಗೆ ತೆರಳಿದವರಿಗೆ ಸಾರ್ಥಕ ಭಾವ ಮೂಡಿದೆ. ಜತೆಗೆ ಒಂದೇ ಕಡೆ ಮೂವರು ಜಾಂಬವಂತರು ಕಾಣಿಸಿದ್ದು ಖುಷಿಯನ್ನು ತಂದಿದೆ.

ಜಾಂಬವಂತನಿಗೆ ಮಂಡಿಯೂರಿದ ಹುಲಿರಾಯ!

ಜಾಂಬವಂತನಿಗೆ ಮಂಡಿಯೂರಿದ ಹುಲಿರಾಯ!

ಇನ್ನೊಂದೆಡೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಿಗುಡಿ ಸಮೀಪ ಹುಲಿಯೊಂದು ಜಾಂಬವಂತನ ಮುಂದೆ ಮುಂಡಿಯೂರಿ ಕುಳಿತ ದೃಶ್ಯವನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ. ಮಸಣಗುಡಿ ಸಮೀಪದ ಸಫಾರಿ ರಸ್ತೆಯಲ್ಲಿ ಹುಲಿಯೊಂದು ತನ್ನ ಎದುರಿಗೆ ಬಂದ ಜಾಂಬವಂತನ ಕಂಡು ತನ್ನ ಮೇಲೆ ದಾಳಿ ನಡೆಸಬಹುದೆಂದು ಅರಿತು ಅದರ ಮುಂದೆ ಸುಮ್ಮನೆ ಕುಳಿತುಬಿಟ್ಟಿದೆ. ಇದು ಮೇಲ್ನೋಟಕ್ಕೆ ಮಂಡಿಯೂರಿ ಕುಳಿತಂತೆ ಭಾಸವಾಗಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಇದೊಂದು ಅಪರೂಪದ ದೃಶ್ಯವಾಗಿದೆ. ಸಫಾರಿ ರಸ್ತೆಯಲ್ಲಿ ಜಾಂಬವಂತ ಬಂದಿದ್ದು ಇದೇ ವೇಳೆ ಅಲ್ಲಿಯೇ ಇದ್ದ ಹುಲಿ ಒಮ್ಮೆಗೆ ಗಾಬರಿಯಾಗಿದೆ. ಆದರೆ ಅದು ಬೇಟೆಯಾಡದೆ ಮೌನಕ್ಕೆ ಶರಣಾಗಿದೆ. ಜಾಂಬವಂತ ತೆರಳಿದ ನಂತರ ಹುಲಿ ತನ್ನ ಪಾಡಿಗೆ ತಾನು ಮುಂದೆ ಸಾಗಿದೆ.

English summary
Animals lovers are happy to see Jambavantas in Biligirirangana Hills of Chamarajanagar district.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X