keyboard_backspace

ಭಾರತದಲ್ಲಿ ಓಮಿಕ್ರಾನ್ ಬಗ್ಗೆ ಭಯ ಬೇಕಿಲ್ಲ, ಮಾರ್ಗಸೂಚಿ ಮರೆಯುವಂತಿಲ್ಲ!

Google Oneindia Kannada News

ನವದೆಹಲಿ, ಡಿಸೆಂಬರ್ 3: ಜಾಗತಿಕ ಮಟ್ಟದಲ್ಲಿ ಭಯ ಹುಟ್ಟಿಸಿದ್ದ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ 46 ವರ್ಷ ಹಾಗೂ 66 ವರ್ಷದ ಇಬ್ಬರು ಪ್ರಯಾಣಿಕರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದರ ನಂತರ ಇಬ್ಬರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರವಾನಿಸಲಾಗಿತ್ತು. ಜೀನೋಮ್ ಸೀಕ್ವೆನ್ಸಿಂಗ್ ನಡೆಸಿದ ಸಂದರ್ಭದಲ್ಲಿ ಇಬ್ಬರ ಮಾದರಿಯಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ಓಮಿಕ್ರಾನ್ ಕೇಸ್: ಯಾರಿಗೂ ತೀವ್ರತೆ ಇಲ್ಲ, ಆತಂಕ ಬೇಡರಾಜ್ಯದಲ್ಲಿ ಓಮಿಕ್ರಾನ್ ಕೇಸ್: ಯಾರಿಗೂ ತೀವ್ರತೆ ಇಲ್ಲ, ಆತಂಕ ಬೇಡ

ಭಾರತದಲ್ಲಿ ಮೊದಲ ಎರಡು ಓಮಿಕ್ರಾನ್ ರೂಪಾಂತರ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಕೊವಿಡ್-19 ನಿಯಮಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರುವಂತಿಲ್ಲ. ಸ್ವಲ್ಪ ಯಾಮಾರಿದರೂ ಸೋಂಕು ಸಾರ್ವಜನಿಕ ವಲಯದಲ್ಲಿ ಹರಡುವ ಅಪಾಯ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೆಲವು ಸಲಹೆಗಳನ್ನು ನೀಡಿದೆ. ಓಮಿಕ್ರಾನ್ ರೂಪಾಂತರ ಸೋಂಕಿತ ಪ್ರಕರಣ ಹಾಗೂ ಕೇಂದ್ರ ಸರ್ಕಾರ ನೀಡಿರುವ ಸಲಹೆಗಳ ಆದಿಯಾಗಿ ಸುತ್ತಲಿನ ಬೆಳವಣಿಗೆಗಳ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

Central Govt Says to Dont Panic after India Reported 2 Omicron Positive Cases

ಭಾರತದಲ್ಲಿ ಓಮಿಕ್ರಾನ್ ಮತ್ತು ಸುತ್ತಲಿನ ಬೆಳವಣಿಗೆಗಳು:

* ಕಳೆದ ನವೆಂಬರ್ 20ರಂದು ದಕ್ಷಿಣ ಆಫ್ರಿಕಾದಿಂದ ಪ್ರಯಾಣ ಆರಂಭಿಸಿದ 66 ವರ್ಷದ ವ್ಯಕ್ತಿಯು ಎರಡೂ ಡೋಸ್ ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡಿದ್ದರು. ಯಾವುದೇ ಸೋಂಕಿನ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಯನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ತಕ್ಷಣ ಸೋಂಕಿತನನ್ನು ಐಸೋಲೇಟ್ ಮಾಡಲಾಗಿತ್ತು. ಖಾಸಗಿ ಪ್ರಯೋಗಾಲಯದಿಂದ ನೆಗೆಟಿವ್ ವರದಿ ಪಡೆದುಕೊಂಡಿದ್ದ ವ್ಯಕ್ತಿಯು ಒಂದು ವಾರದ ನಂತರ ದುಬೈಗೆ ಪ್ರಯಾಣ ಬೆಳೆಸಿದ್ದರು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 24 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 240 ಜನರಲ್ಲಿ ಸೋಂಕಿನ ನೆಗೆಟಿವ್ ವರದಿ ಬಂದಿದೆ.

* ಓಮಿಕ್ರಾನ್ ರೂಪಾಂತರ ಸೋಂಕು ತಗುಲಿದ ಎರಡನೇ ವ್ಯಕ್ತಿ ಬೆಂಗಳೂರು ಮೂಲದ 46 ವರ್ಷದ ವೈದ್ಯರಾಗಿದ್ದಾರೆ. ನವೆಂಬರ್ 21ರಂದು ಸೋಂಕಿನ ಲಕ್ಷಣಗಳು ಗೋಚರಿಸಿದ ಹಿನ್ನೆಲೆ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ಸೋಂಕು ತಗುಲಿರುವುದು ಖಾತ್ರಿಯಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಅವರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರವಾನಿಸಲಾಗಿದ್ದು, ಮೂರು ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈ ಹಂತದಲ್ಲಿ ಇವರ ಲಸಿಕೆ ಪಡೆಯುವಿಕೆ ಬಗ್ಗೆ ಸ್ಪಷ್ಟ ಮಾಹಿತಿಯೂ ಸಿಕ್ಕಿರಲಿಲ್ಲ.

* ನವೆಂಬರ್ 22 ರಿಂದ 25ರ ನಡುವೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಇಬ್ಬರಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಐದು ಮಂದಿ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದ್ದು, ಅವರಲ್ಲಿ ಓಮಿಕ್ರಾನ್ ರೂಪಾಂತರ ಅಂಟಿಕೊಂಡಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಾರೆ 13 ಪ್ರಾಥಮಿಕ ಹಾಗೂ 205 ದ್ವಿತೀಯ ಸಂಪರ್ಕಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

* ಭಾರತದಲ್ಲಿ ಕೊರೊನಾವೈರಸ್ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣ ವರದಿಯಾಗುತ್ತಿದ್ದಂತೆ, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಕೊವಿಡ್-19 ನಿಯಮಗಳನ್ನು ಪಾಲಿಸುವಂತೆ ಉಲ್ಲೇಖಿಸಲಾಗಿದೆ. ಜನ ನಿಬಿಡ ಪ್ರದೇಶಗಳಿಂದ ಅಂತರ ಕಾಯ್ದುಕೊಳ್ಳುವುದು, ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲಿಸುವುದು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದರ ಮೂಲಕ ಓಮಿಕ್ರಾನ್ ಸೇರಿದಂತೆ ಎಲ್ಲ ಕೊವಿಡ್-19 ತಳಿಗಳಿಂದ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.

* ಭಾರತಕ್ಕೆ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ಯುರೋಪಿಯನ್ ರಾಷ್ಟ್ರಗಳು ಹಾಗೂ ದಕ್ಷಿಣ ಆಫ್ರಿಕಾದ ಹಲವು ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಪರೀಕ್ಷೆಯ ವರದಿಯು ನೆಗೆಟಿವ್ ಬಂದ ನಂತರವಷ್ಟೇ ಅಂಥ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಿಂದ ಹೊರ ಹೋಗಲು ಅನುಮತಿಸಲಾಗುತ್ತಿದೆ.

* ಓಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳ ಪಟ್ಟಿಯಿಂದ ಹೊರತಾದ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೊಂಚ ವಿನಾಯಿತಿ ನೀಡಲಾಗುತ್ತಿದೆ. ಅಂಥ ರಾಷ್ಟ್ರಗಳಿಂದ ಆಗಮಿಸುವ ವಿಮಾನಗಳಲ್ಲಿ ರಾಂಡಮ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಯ ವರದಿ ಬರುವುದಕ್ಕೂ ಮೊದಲೇ ವಿಮಾನ ನಿಲ್ದಾಣದಿಂದ ಹೋಗುವುದಕ್ಕೆ ಅನುಮತಿಸಲಾಗುತ್ತಿದೆ. ಆದರೆ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸಬೇಕು. ಆ ಮೂಲಕ ಒಂದು ವೇಳೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟರೆ, ಅಂಥವರನ್ನು ಪತ್ತೆ ಮಾಡಲು ಸರ್ಕಾರಕ್ಕೆ ಇದರಿಂದ ಸಹಾಯವಾಗುತ್ತದೆ.

* ಮಹಾರಾಷ್ಟ್ರದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಓಮಿಕ್ರಾನ್ ಪ್ರಯಾಣ ನಿರ್ಬಂಧಗಳನ್ನು ಜಾರಿಗೊಳಿಸುವುದಕ್ಕೂ ಮೊದಲೇ ಮುಂಬೈಗೆ ಆಗಮಿಸಿದ ನಾಲ್ವರಲ್ಲಿ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಇಬ್ಬರು ಲಂಡನ್ ಪ್ರಯಾಣಿಕರಾಗಿದ್ದರೆ, ಒಬ್ಬರು ಮಾರಿಷಸ್ ಹಾಗೂ ಒಬ್ಬರು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದರು ಎಂದು ಗೊತ್ತಾಗಿದೆ.

* ಮಹಾರಾಷ್ಟ್ರ ಮತ್ತು ದೆಹಲಿ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಒಟ್ಟು 12 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಆರು, ದೆಹಲಿಯಲ್ಲಿ ಆರು ಜನರಲ್ಲಿ ಸೋಂಕು ದೃಢಪಟ್ಟಿದ್ದು, ಚಂಡೀಗಢದಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ. ಈ ಎಲ್ಲಾ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಸೋಂಕಿತರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರವಾನಿಸಲಾಗಿದೆ.

* ಓಮಿಕ್ರಾನ್ ಎಂಬುದು "ಕಾಳಜಿ ರೂಪಾಂತರ" ಪ್ರಬೇಧಕ್ಕೆ ಸೇರಿದ ತಳಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಈ ಹೊಸ ರೂಪಾಂತರದಲ್ಲಿ 50ಕ್ಕೂ ಹೆಚ್ಚು ತಳಿಗಳು ಇರುವುದು ಪತ್ತೆಯಾಗಿದ್ದು, ಈ ಪೈಕಿ 30 ತಳಿಗಳು ಹೆಚ್ಚು ಹರಡುವಿಕೆಯ ಪ್ರೊಟೀನ್ ಅನ್ನು ಹೊಂದಿರುವುದು ಗೊತ್ತಾಗಿದೆ. ಇದರಿಂದ ಓಮಿಕ್ರಾನ್ ಸೋಂಕು ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಅಪಾಯಕಾರಿ ಹಾಗೂ ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.

* ಒಮಿಕ್ರಾನ್ ಹೆಚ್ಚು ಮಾರಕವಾಗಿದೆಯೇ ಮತ್ತು ಪ್ರಸ್ತುತ ಲಸಿಕೆಗಳು ರಕ್ಷಣೆ ನೀಡುತ್ತವೆಯೇ ಎಂದು ಸಂಶೋಧಕರು ಇನ್ನೂ ಪರಿಶೀಲಿಸುತ್ತಿದ್ದಾರೆ. ಫೈಜರ್ ಹೊಸ ಲಸಿಕೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಗ್ಲಾಕ್ಸೊ ಸ್ಮಿತ್‌ಕ್ಲೈನ್‌ನ ಔಷಧವು ಪರಿಣಾಮಕಾರಿಯಾಗಿದೆ. ಆಸ್ಟ್ರಾಜೆನಿಕಾ ಲಸಿಕೆ ಆಗಿರುವ ಕೊವಿಶೀಲ್ಡ್ ಅನ್ನು ಉತ್ಪಾದಿಸುತ್ತಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅದರ್ ಪೂನಾವಾಲಾ ಲಸಿಕೆ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಅಧ್ಯಯನಗಳ ಫಲಿತಾಂಶಗಳ ಆಧಾರದ ಮೇಲೆ ಅದರ ಹೊಸ ಆವೃತ್ತಿಯನ್ನು ಅಭಿವೃದ್ಧಿಪಡಿಸಬಹುದು ಎಂದು ಅವರು ಹೇಳಿದ್ದಾರೆ.

English summary
Central Govt Says to Don't Panic after India Reported 2 Omicron Positive Cases: Here Read Major 10 Points.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X