keyboard_backspace

ಮುಷ್ಕರ ಹಿಂದಿನ ರೋಚಕ ಸತ್ಯಗಳನ್ನು ಬಿಚ್ಚಿಟ್ಟ ಬಿಎಂಟಿಸಿ ನಿರ್ವಾಹಕ

Google Oneindia Kannada News

ಬೆಂಗಳೂರು, ಏಪ್ರಿಲ್ 13: ಸಾರಿಗೆ ನೌಕರರೇ ಮುಷ್ಕರ ನಿಲ್ಲಿಸಿ.. ಕೆಲಸಕ್ಕೆ ಹಾಜರಾಗಿ.. ನಾಡಿನ ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ತೋರಿದ ಪ್ರೀತಿ ಉಳಿಸಿಕೊಳ್ಳೋಣ. ಸರ್ಕಾರ ಕೂಡ ಅಷ್ಟೇ ನೌಕರರ ಮೇಲೆ ಕ್ರೌರ್ಯ ತೋರದೇ ನ್ಯಾಯಯುತ ಬೇಡಿಕೆ ಈಡೇರಿಸಲಿ. ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯಲ್ಲಿ ನಿಷ್ಠಾವಂತ ಕಂಡಕ್ಟರ್ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸ್ ಅವರು ತನ್ನ ಸಹೋದ್ಯೋಗಿಗಳಿಗೆ ಅರ್ಪಿಸಿರುವ ಹೃದಯದ ಪತ್ರದ ಒಕ್ಕಣೆಯಿದು.

ಕಳೆದ ಒಂದು ವಾರದಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಅನಿರ್ಧಿಷ್ಟ ಅವಧಿಗೆ ಮುಂದುವರೆದಿದೆ. ಇದರಿಂದ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರ ನಡುವೆ ಸಂಸ್ಥೆಯ ವಾಸ್ತವ, ನೌಕರರ ಬದುಕು, ಹೋರಾಟ, ಜನರ ಸಂಕಷ್ಟದ ಮೇಲೆ ಬೆಳಕು ಚೆಲ್ಲಿ ನಿರ್ವಾಹಕ ಶ್ರೀನಿವಾಸ್ ಅವರು ಒನ್ಇಂಡಿಯಾ ಕನ್ನಡ ಸುದ್ದಿ ಸಂಸ್ಥೆಗೆ ಲೇಖನ ಕಳುಹಿಸಿದ್ದಾರೆ.

ನಾನಿದ್ದಾಗ ಸಾರಿಗೆ ಇಲಾಖೆಯಲ್ಲಿ ಹಣವಿತ್ತು, ಈಗೆಲ್ಲಿ ಹೋಯಿತು?: ಎಚ್‌ಡಿಕೆನಾನಿದ್ದಾಗ ಸಾರಿಗೆ ಇಲಾಖೆಯಲ್ಲಿ ಹಣವಿತ್ತು, ಈಗೆಲ್ಲಿ ಹೋಯಿತು?: ಎಚ್‌ಡಿಕೆ

ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಜನೋಪಯೋಗಿ ಮಾಹಿತಿಯನ್ನು ಸಾರ್ವಜನಿಕಗೊಳಿಸಿ ಪಾರದರ್ಶಕ ಆಡಳಿತಕ್ಕೆ ಬುನಾದಿ ಹಾಡಿರುವ ಶ್ರೀನಿವಾಸ್ ಇಡೀ ಬಿಎಂಟಿಸಿ ಗೆ ಚಿರಪರಿಚಿತ ವ್ಯಕ್ತಿತ್ವ. ಅವರು ಮುಷ್ಕರ ನಿರತ ನೌಕರರಿಗಾಗಿ ಬರೆದಿರುವ ಲೇಖನದ ಸಮಗ್ರ ವಿವರ ಇಲ್ಲಿದೆ.

BMTC conductor Srinivas heart breaking letter to transport employees

ಐವತ್ತು ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಬಿಎಂಟಿಸಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಲಕ್ಷಾಂತರ ಕಾರ್ಮಿಕರ ಶ್ರಮ, ಬಲಿದಾನ, ಪ್ರಾಮಾಣಿಕ ಅಧಿಕಾರಿಗಳ ಬೆವರು ಹರಿಸಿದ್ದಾರೆ. ಹೀಗಾಗಿ ಇಂದು ಬಿಎಂಟಿಸಿ ಹೆಮ್ಮರವಾಗಿ ಬೆಳೆದಿದೆ. ನಾನು ಸಂಸ್ಥೆಗೆ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಸಂಸ್ಥೆಯಲ್ಲಿದ್ದ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಸಂಪನ್ಮೂಲ ಅಧಿಕಾರಿಯಾಗಿದ್ದ ಆಲೂರು ಗೋಪಿನಾಥ್ ರವರನ್ನು ನೆನಪು ಮಾಡಿಕೊಳ್ಳಲೇ ಬೇಕು. ಅಂದು ಅವರು ನಮಗೆ ನೀಡಿದ ತರಬೇತಿ ಹಾಗೂ ಅವರಿಗಿದ್ದ ಉತ್ಸಾಸ ತರಬೇತಿಯಲ್ಲಿ ಹೇಳಿದ ಒಂದು ಮಾತು "ಸಾರಿಗೆ ಸಂಸ್ಥೆ ಒಂದು ಕಾಮಧೇನು" ಈ ಕಾಮಧೇನುವನ್ನು ರಕ್ಷಿಸಿ ಪೋಷಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಸಾರಿಗೆ ಸಿಬ್ಬಂದಿಗಳ ಮೇಲಿದೆ. ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಲಕ್ಷಾಂತರ ಜನರಿಗೆ ಅನ್ನ ನೀಡುವ ಸಂಸ್ಥೆಯಾಗಬೇಕು.

ಆಲೂರು ಗೋಪಿನಾಥ್ ನಿವೃತ್ತಿ ಹೊಂದಿ ಪ್ರಸ್ತುತ ಸಾರಿಗೆ ಸಂಸ್ಥೆಯ ಸುದ್ದಿಗಳನ್ನು ನೋಡುತ್ತಿರಬಹುದು. ಅವರು ಹೇಳಿದಂತೆ ನನ್ನ 25 ವರ್ಷಗಳ ನಿರತಂತರ ಸೇವಾ ಅವಧಿಯಲ್ಲಿ ಪ್ರಾಮಾಣಿಕ ನೌಕರರು ನಿಷ್ಟೆಯಿಂದ ದುಡಿದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಲಕ್ಷಾಂತರ ಜನರಿಗೆ ಅನ್ನ ನೀಡುವ ಸಂಸ್ಥೆಯಾಗಿ ಬೆಳೆಸಿದ್ದೇವೆ ಹಾಗೂ ಕನ್ನಡ ನಾಡಿನ ಜನತೆಯ ಪ್ರೀತಿ ವಾತ್ಸಲ್ಯಕ್ಕೆ ಪಾತ್ರವಾಗಿದ್ದೇವೆ. ಆದರೆ, ಏಪ್ರಿಲ್ 6 ರಿಂದ ಸಾರಿಗೆ ನೌಕರರು ಮುಷ್ಕರ ಹೂಡಿದ್ದು ಅನಿವಾರ್ಯ ಆಗಿತ್ತು. ಇಡೀ ರಾಜ್ಯದ ಜತೆಗೆ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿ ಏ. 07 ರಂದು ನಡೆಸಿದ ಮುಷ್ಕರ ಸಂಪೂರ್ಣ ಯಶಸ್ವಿ ಆಯಿತು. ಅದು ಒಂದು ದಿನಕ್ಕೆ ಸೀಮಿತವಾಗಬೇಕಿತ್ತು. ಅದು ಮುಂದುವರೆಯಬಾರದಿತ್ತು. ಏಕೆಂದರೆ ಈ ನಾಡಿನ ಜನತೆ ನಮ್ಮ ಮೇಲೆ ಇಟ್ಟಿರುವ ಪ್ರೀತಿ ವಾತ್ಸಲ್ಯ ಹಾಗೂ ನಂಬಿಕೆಗೆ ದ್ರೋಹ ಬಗೆಯಬಾರದಿತ್ತು.

BMTC conductor Srinivas heart breaking letter to transport employees

ನನ್ನ ವೃತ್ತಿ ಜೀವನದಲ್ಲಿ ಹಲವಾರು ಮುಷ್ಕರಗಳನ್ನು ಕಂಡಿದ್ದೇನೆ. ಮುಷ್ಕರಗಳಿಂದ ಸಾರಿಗೆ ನೌಕರರು ಅನುಭವಿಸಿದ ಯಾತನೆಯನ್ನು ಹತ್ತಿರದಿಂದ ಕಂಡಿದ್ದೇನೆ. ವರ್ಗಾವಣೆ, ವಜಾದಂತ ಶಿಕ್ಷೆಗಳಿಂದ ಸಾರಿಗೆ ಸಂಸ್ಥೆಯ ನೌಕರರು ಬಸವಳಿದು ಹೋಗಿದ್ದಾರೆ. ಎಷ್ಟೋ ಸಿಬ್ಬಂದಿಗಳು ತಮ್ಮ ಕುಟುಂಬಗಳನ್ನೇ ತ್ಯಜಿಸಿದ್ದಾರೆ. ಮುಷ್ಕರಕ್ಕಾಗಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಸಾರಿಗೆ ನೌಕರರೆ, ತಮಗೂ ನೆನಪು ಇರಬಹುದು. ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಾರಿಗೆ ನೌಕರರ ಸಿಬ್ಬಂದಿ ಮಕ್ಕಳು ಇಂಜಿನಿಯರ್, ಡಾಕ್ಟರ್, ಐ.ಎ.ಎಸ್, ಐ.ಪಿ.ಎಸ್, ವಿದೇಶಗಳಲ್ಲಿ ವೃತ್ತಿ, ಚಲನಚಿತ್ರಗಳಲ್ಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಸಾಧ್ಯವಾಗಿದ್ದು ನಮ್ಮ ಕನ್ನಡ ನಾಡಿನ ಅನ್ನದಾತ ಪ್ರಯಾಣಿಕ ಪ್ರಭುಗಳು ನೀಡಿದ ಟಿಕೆಟ್ ಹಣದಿಂದ ಎಂಬ ಸತ್ಯವನ್ನು ಯಾರೂ ಮರೆಯಬಾರದು. ಬಿಎಂಟಿಸಿ ಬೆಂಗಳೂರು ನಗರದಲ್ಲಿ 1250 ಎಕರೆ ಜಮೀನು ಹೊಂದಿದೆ. ಇದು ಸಾಧ್ಯವಾಗಿದ್ದು ಕೂಡ ನಮ್ಮ ಪ್ರಯಾಣಿಕ ಪ್ರಭುಗಳು ನೀಡಿರುವ ಹಣದಿಂದ ಎಂಬುದನ್ನು ಮರೆಯಬೇಡಿ.

ಸಾರಿಗೆ ಮುಷ್ಕರ : ಬಿಎಂಟಿಸಿ ಪಾಸು ಖರೀದಿ ಮಾಡಿದವರಿಗೆ ಮಹಾ ಮೋಸ !ಸಾರಿಗೆ ಮುಷ್ಕರ : ಬಿಎಂಟಿಸಿ ಪಾಸು ಖರೀದಿ ಮಾಡಿದವರಿಗೆ ಮಹಾ ಮೋಸ !

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒಂದು ದಿನ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ಆವರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿರುವಾಗ ತುರ್ತು ಸೇವೆ ಕೊಡುವ ನಮ್ಮ ಸಾರಿಗೆ ನೌಕರರು ಯಾಕೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವ ಅಗತ್ಯವೇನಿತ್ತು ? ಮುಷ್ಕರಗಳಿಂದ ಹಲವು ಕಾರ್ಖಾನೆಗಳು ಮುಚ್ಚಿವೆ. ಸಂಸ್ಥೆಗಳು ಅಸ್ತಿತ್ವ ಕಳೆದುಕೊಂಡಿವೆ. ಇದರಿಂದ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗಿವೆ. ಕನಿಷ್ಠ ಅನ್ನ, ಬಟ್ಟೆ, ನಿದ್ದೆ ಮಾಡುವಷ್ಟು ನೆಮ್ಮದಿ ನೀಡಿರುವ ನಮ್ಮ ಸಂಸ್ಥೆಗಳ ಭವಿಷ್ಯವನ್ನು ನಾವೇ ಹಾಳು ಮಾಡಬೇಕಾ ?

BMTC conductor Srinivas heart breaking letter to transport employees

ಕನ್ನಡ ನಾಡಿನ ಜನತೆ ನಮಗೆ ಅಭೂತ ಪೂರ್ವ ಬೆಲೆ ಕಟ್ಟಲಾಗದಂತಹ ಪ್ರೀತಿ ವಾತ್ಸಲ್ಯ ತೋರಿದ್ದಾರೆ. ನಮ್ಮ ಸೇವೆಯ ಬಗ್ಗೆ ಸಂಪೂರ್ಣ ನಂಬಿಕೆಯನ್ನು ಇಟ್ಟಿರುವಾಗ ಸರ್ಕಾರ ಕೊಡುವ ಕವಡೆ ಕಾಸಿಗಾಗಿ ಕನ್ನಡ ನಾಡಿನ ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಪ್ರೀತಿ ವಾತ್ಸಲ್ಯ ಕಳೆದುಕೊಳ್ಳಲು ಇಷ್ಟಪಡುತ್ತೀರಾ? ಇಡೀ ವಿಶ್ವವೇ ಬೆಚ್ಚಿ ಬೆರಗಾಗುವಂತಹ ಸೇವೆ ನೀಡಿ ದೇಶಕ್ಕೆ ಮಾದರಿ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿ ನೂರಾರು ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಕಾರಣ ಕರ್ತರಾದ ಸಾರಿಗೆ ಸಿಬ್ಬಂದಿಗಳೇ ಹಠ ಬೇಡ ಮುಷ್ಕರ ಕೊನೆಗಾಣಿಸಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಿ. ಈ ನಾಡಿನ ಜನತೆ ತಮ್ಮ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ ವಾತ್ಸಲ್ಯ ಕಳೆದುಕೊಳ್ಳಬೇಡಿ. ಒಮ್ಮೆ ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ ವಾತ್ಸಲ್ಯ ಕಳೆದುಕೊಂಡರೆ ಅದನ್ನು ಮತ್ತೆ ಪಡೆಯುವುದು ಸಾಧ್ಯವಿಲ್ಲ. ಒಮ್ಮೆ ಯೋಚಿಸಿ.

ಲಕ್ಷಾಂತರ ಪ್ರಯಾಣಿಕರು ನಮ್ಮ ಸೇವೆಯ ಮೇಲೆ ನಂಬಿಕೆ ಇಟ್ಟು ಮಾಸಿಕ ಪಾಸು, ವರ್ಷದ ಪಾಸುಗಳನ್ನು ಮುಂಚಿತವಾಗಿ ಹಣ ನೀಡಿ ಪಡೆದುಕೊಂಡಿದ್ದಾರೆ. ಈ ಪ್ರಯಾಣಿಕರಿಗೆ ಏನೆಂದು ನೀವು ಉತ್ತರಿಸುತ್ತೀರಾ? ಅನ್ನದಾತ ಪ್ರಯಾಣಿಕರ ಮೇಲೆ ನಿಮ್ಮ ಕೋಪ ತೋರಿಸಬೇಡಿ ನಿಮ್ಮ ಕೋಪ ಏನಿದ್ದರು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಇರಬೇಕೆ ಹೊರತು ಅನ್ನದಾತ ಪ್ರಯಾಣಿಕರ ವಿರುದ್ಧ ಅಲ್ಲ. ಈಗಾಗಲೇ ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸುಗಳು, ಮ್ಯಾಕ್ಸಿಕ್ಯಾಬ್ ಲಗ್ಗೆ ಹಾಕಿ ನಮ್ಮ ಸಾರಿಗೆ ಬಸ್ಸುಗಳು ನಿಲ್ಲುವ ಜಾಗದಲ್ಲಿ ನಿಂತಿವೆ. ಮುಂದೊಂದು ದಿನ ಸಾರಿಗೆ ಸಂಸ್ಥೆಯ ಬಸ್ಸುಗಳು ಖಾಸಗಿಯವರ ಪಾಲಾಗುವುದನ್ನು ಅರಗಿಸಿಕೊಳ್ಳಲು ಸಾಧ್ಯವೇ ? ಲಕ್ಷಾಂತರ ಸಾರಿಗೆ ಸಿಬ್ಬಂದಿಗಳ ಪ್ರಾಮಾಣಿಕ ದುಡಿಮೆಯಿಂದ ಕಟ್ಟಿ ಬೆಳೆಸಿದ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ದರ್ಬಾರ್ ಅದಾಗಲೇ ಪ್ರಾರಂಭವಾಗಿದೆ. ಮುಷ್ಕರ ಹೀಗೆ ಮುಂದುವರೆದರೆ ಘಟಕಗಳ ಖಾಸಗಿ ವಾಹನಗಳ ಪ್ರವೇಶ ಅಸಾಧ್ಯವೇನಲ್ಲ ಎಂಬುದನ್ನು ನಾವು ಮೊದಲು ಅರಿಯಬೇಕಿದೆ.

BMTC conductor Srinivas heart breaking letter to transport employees

ಸರ್ಕಾರಕ್ಕೆ ಸಾರಿಗೆ ನೌಕರರ ಪರವಾಗಿ ಪ್ರಶ್ನೆ: ಸಾರಿಗೆ ಸಿಬ್ಬಂದಿಯ ಮುಷ್ಕರಕ್ಕೆ ಹೋಗಲು ಆಡಳಿತ ವರ್ಗ , ಸರ್ಕಾರದ ವೈಫಲ್ಯವೇ ಕಾರಣ. ಸಾರಿಗೆ ಸಂಸ್ಥೆಯ ವೇತನ ಪರಿಷ್ಕರಣೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಇದು ಸಾರಿಗೆ ಇಲಾಖೆ, ಆಡಳಿತ ವರ್ಗ ಹಾಗೂ ಸರ್ಕಾರಕ್ಕೆ ಗೊತ್ತಿಲ್ಲವೇ? ಗೊತ್ತಿದ್ದರೂ ಸಹ ಮುಂಚಿತವಾಗಿ ವೇತನ ಪರಿಷ್ಕರಿಸಿ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡದೆ ಸಿಬ್ಬಂದಿಗಳನ್ನು ಶೋಷಿಸಿ ಮುಷ್ಕರದ ಕಡೆ ದೂಡುತ್ತಿರುವುದು ಎಷ್ಟು ಸರಿ? ನಿಮ್ಮ ಹಠಮಾರಿತನದಿಂದ ಕನ್ನಡ ನಾಡಿನ ಅನ್ನದಾತ ಪ್ರಯಾಣಿಕರು ಸಾರಿಗೆ ಸೇತುವೆಯಾಗಿದ್ದ ನಮ್ಮ ಬಸ್‌ ಗಳಿಂದ ವಂಚಿತರಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೀವು ಇಂದು ಖಾಸಗಿ ಬಸ್ಸುಗಳನ್ನು ಓಡಿಸುತ್ತಿರಬಹುದು. ಆದರೆ ಸರ್ಕಾರಿ ನೀಡಿರುವ ನೂರಾರು ಬಗೆಯ ಪಾಸು ಪ್ರಯಾಣಿಕರಿಗೆ ನೀವು ಏನೆಂದು ಉತ್ತರಿಸುತ್ತಿರಿ. ಶಾಲಾ ವಿದ್ಯಾಥಿಗಳ ಪ್ರಶ್ನೆಗಳಿಗೆ ಏನೆಂದು ಉತ್ತರಿಸುತ್ತೀರಿ ?

ಮುಷ್ಕರದಿಂದಾಗಿ ಖಾಸಗಿ ವಾಹನಗಳು ಸುಲಿಗೆಗೆ ಇಳಿದಿವೆ. ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಮೈಸೂರು ಬ್ಯಾಂಕ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರಲು ಓರ್ವ ಪ್ರಯಾಣಿಕ 20 ರೂಪಾಯಿ ನೀಡಿ ಪ್ರಯಾಣಿಸುವ ಪ್ರಸಂಗ ಉಂಟು ಮಾಡಿರುವುದು ಸರ್ಕಾರದ ಅವೈಜ್ಞಾನಿಕ ನಿರ್ಧಾರಗದಿಂದ ಅಲ್ಲದೇ ಬೇರೇನೂ ಅಲ್ಲ. ಮಾನ್ಯ ಮುಖ್ಯ ಮಂತ್ರಿಗಳೇ, ಸಾರಿಗೆ ಸಿಬ್ಬಂದಿಗಳು ಮುಷ್ಕರವನ್ನು ಹೂಡುವುದಕ್ಕೆ ಸಾರಿಗೆ ಇಲಾಖೆ, ಆಡಳಿತ ವರ್ಗ ಹಾಗೂ ಸರ್ಕಾರದ ವೈಫಲ್ಯಗಳೇ ಕಾರಣ. ಇನ್ನು ಮಾತೆತ್ತಿದರೆ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಸಾರಿಗೆ ಸಂಸ್ಥೆಯು ಒಂದು ಸೇವಾ ಸಂಸ್ಥೆಯಾಗಿ ನೊಂದಾಯಿತವಾಗಿದೆ.

BMTC conductor Srinivas heart breaking letter to transport employees

ಲಾಭ-ನಷ್ಟವಿಲ್ಲದೆ ಸರಿದೂಗಿಸಿಕೊಂಡು ಪ್ರಯಾಣಿಕರಿಗೆ ಸಮಯಬದ್ದ ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವುದು. ಒಂದು ವೇಳೆ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸಿದ್ದರೆ ಅದು ಸಾರಿಗೆ ಇಲಾಖೆ, ಸಾರಿಗೆ ಸಂಸ್ಥೆಯ ಆಡಳಿತ ವರ್ಗ ಹಾಗೂ ಸರ್ಕಾರದ ನೀತಿ/ನಿಯಮಗಳು ಹಾಗೂ ಅನಾವಶ್ಯಕ ಕಾಮಗಾರಿಗಳು, ಕಳಪೆ ವಾಹನಗಳ ಖರೀದಿ, ಮಾಹಿತಿ ತಂತ್ರಜ್ಞಾನದಂತಹ ದುಬಾರಿ ಖರ್ಚಿನ ಹೊರೆಯಿಂದಾಗಿ ಸಂಸ್ಥೆ ನಷ್ಟ ಅನುಭವಿಸುತ್ತಿದೆ. ಯಾವುದೇ ಕಾರಣದಿಂದ ಸಂಸ್ಥೆಯ ನೌಕರರಿಂದ ನಷ್ಟ ಅನುಭವಿಸುತ್ತಿಲ್ಲ. ಬೇಕಾದರೆ 25 ವರ್ಷದ ಆದಾಯ ವೆಚ್ಚದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ.

ಸಾರಿಗೆ ಸಿಬ್ಬಂದಿಗಳು ದಿನದ 24 ಗಂಟೆ ಚಳಿ, ಬಿಸಿಲು, ಮಳೆ ಎನ್ನದೇ ಹಬ್ಬ, ಶುಭ ಸಮಾರಂಭಗಳನ್ನು ಲೆಕ್ಕಿಸದೇ ಪ್ರಾಮಾಣಿಕತೆಯಿಂದ ನಾಡಿನ ಅನ್ನದಾತ ಪ್ರಯಾಣಿಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಈ ಸೇವೆಯಿಂದ ವಿಶ್ವ ಮಟ್ಟದಲ್ಲಿ ನಮ್ಮ ಕನ್ನಡ ನಾಡಿನ ಹೆಮ್ಮೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುರುತಿಸಿಕೊಂಡಿದೆ, ಸರ್ಕಾರಕ್ಕೆ ನಾಡಿಗೆ ಕೀರ್ತಿ ತಂದು ಕೊಟ್ಟಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ನೂರಾರು ನಿಗಮ ಮಂಡಳಿಗಳು ಇವೆ. ಆದರೆ ಸಾರಿಗೆ ಸಿಬ್ಬಂದಿಗಳೇ ಏಕೆ ಮುಷ್ಕರಕ್ಕೆ ಹೋಗುತ್ತಾರೆ? ಬೇರೆ ನಿಗಮ ಮಂಡಳಿಗಳು ಏಕೆ ಮುಷ್ಕರ ಮಾಡುವುದಿಲ್ಲ. ಬೇರೆ ನಿಗಮ ಮಂಡಳಿಗಳಿಗೆ ಕಾಲ ಕಾಲಕ್ಕೆ ಅವರಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತೀರಿ. ಆದರೆ ಸಾರಿಗೆ ಸಿಬ್ಬಂದಿಗಳ ಬಗ್ಗೆ ಅಸಡ್ಡೆ ತೋರುತ್ತೀರಿ. ಪ್ರತಿ 4 ವರ್ಷಕ್ಕೊಮ್ಮೆ ಸಾರಿಗೆ ನೌಕರರಿಗೆ ನೀಡಬೇಕಾದ ವೇತನ ಪರಿಷ್ಕರಣೆಯನ್ನು ನಿಗದಿತ ಸಮಯಕ್ಕೆ ಸರಿಯಾಗಿ ನೀಡಿದ್ದರೆ ಸಾರಿಗೆ ನೌಕರರು ಮುಷ್ಕರ ಹೂಡುವ ಪ್ರಮೇಯವೇ ಇರುತ್ತಿರಲಿಲ್ಲ.

ಸಾರಿಗೆ ನೌಕರರು ಸ್ವಾಭಿಮಾನಿಗಳು, ನಮ್ಮ ದುಡಿಮೆಗೆ ತಕ್ಕಂತಹ ವೇತನ ಪರಿಷ್ಕರಣೆ ಮಾಡಿ. ಮುಷ್ಕರ ಅಂತ್ಯಗೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಸರ್ಕಾರವೂ ಕೂಡ ಹಠಮಾರಿತನ ಕೈಬಿಟ್ಟು ಸಾರಿಗೆ ನೌಕರರ ಮುಖಂಡರೊಡನೆ ಚರ್ಚಿಸಿ ಕನಿಷ್ಟ ಶೇಕಡ 25%ರಷ್ಟು ವೇತನವನ್ನು ಹೆಚ್ಚಿಸಿ 01-01-2020ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಿ ಬಾಕಿಯೊಂದಿಗೆ ನೀಡುವುದು. ಹಾಗೂ ಕಳೆದ 4 ವರ್ಷಗಳಿಂದ ಬೆಂಗಳೂರು ನಗರ ಸಾರಿಗೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ನೀಡಿರುವುದಿಲ್ಲ. ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಮುಷ್ಕರಕ್ಕೆ ಅಂತ್ಯವಾಡಬೇಕೆಂದು ನನ್ನದೊಂದು ಪುಟ್ಟ ಮನವಿ. ಯುಗಾದಿ ಹಬ್ಬ ಆಚರಣೆ ಸಂಭ್ರಮದ ಮೇಲೆ ಮುಷ್ಕರ ನಿರತ ನೌಕರರು ವಾಸ್ತವ ಅರಿತು ಸಿಹಿ ಸುದ್ದಿ ನೀಡುತ್ತೀರಿ ಎಂದು ಭಾವಿಸುತ್ತೇನೆ.

English summary
BMTC conductor Srinivas has requested to transport employees to end the protest and return to service ; know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X