keyboard_backspace

ಬಿಡಿಎ ಆಯುಕ್ತರ ಏಟಿಗೆ- ಬ್ರೋಕರ್ ಜಾಲ ತಲ್ಲಣ: ಕೆಎಎಸ್ ಅಧಿಕಾರಿಗಳಿಗೆ ಬಂಧನ ಭೀತಿ !

Google Oneindia Kannada News

ಬೆಂಗಳೂರು, ಜನವರಿ 18: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಅಕ್ರಮ ಪರಭಾರೆ ಹಗರಣದಲ್ಲಿ ಈವರೆಗೂ ಬೆಳಕಿಗೆ ಬಂದಿರುವುದು ಅಣು ಮಾತ್ರ. ಸಾವಿರಾರು ಕೋಟಿ ರೂಪಾಯಿ ಹಗರಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸಿದ ಐವರು ಅಧಿಕಾರಗಳು ಸೇರಿದಂತೆ ಬ್ರೋಕರ್ ಗಳ ಜತೆ ಶಾಮೀಲಾಗಿರುವ ಸಂಗತಿ ಹೊರ ಬಿದ್ದಿದೆ. ಈ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಅಧಿಕಾರಿಗಳಿಗೆ ಬಂಧನ ಭೀತಿ ಎದುರಾಗುತ್ತಿದ್ದಂತೆ ಬ್ರೋಕರ್ ಗಳು ಊರು ತೊರೆದಿದ್ದಾರೆ.

ದಲಿತರಿಗೆ ಪುನರ್‌ ವಸತಿ ಕಲ್ಪಿಸುವ ವೇಷದಲ್ಲಿ ಹುಟ್ಟಿಕೊಂಡ ದಲಿತ ಕಲ್ಯಾಣ ಸಂಸ್ಥೆಗಳು ಬಿಡಿಎ ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡು ಅನ್ಯರಿಗೆ ಮಾರಾಟ ಮಾಡಿ ಎಸಗಿರುವ ಸಾವಿರಾರು ಕೋಟಿ ಹಗರಣದ ವಸ್ತುಸ್ಥಿತಿ. ಬಡವರು ಸೂರು ಕಟ್ಟಿಕೊಳ್ಳಲು ನಿವೇಶನ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಯಾದ ಬಿಡಿಎ ಬ್ರೋಕರ್ ಗಳ ಅಭಿವೃದ್ಧಿ ಪ್ರಾಧಿಕಾರವಾಗಿ ಬದಲಾಗಿತ್ತು. ಬಿಡಿಎ ಅಕ್ರಮಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಸಿಬಿ ಪೊಲೀಸರು ಕೂಡ ಹಲವು ಕೇಸು ದಾಖಲಿಸಿದ್ದು, ತನಿಖೆ ಹಂತದಲ್ಲಿವೆ. ಆದರೆ, ಬಿಡಿಎಯನ್ನು ಬ್ರೋಕರ್ ಗಿರಿಗೆ ಬಿಸಿ ಮುಟ್ಟಿರಲಿಲ್ಲ. ಹಾಲಿ ಬಿಡಿಎ ಆಯುಕ್ತರಾಗಿರುವ ಡಾ. ಎಚ್‌. ಆರ್. ಮಹದೇವ್ ಬಿಡಿಎ ನಿವೇಶನಗಳ ಅಕ್ರಮ ಪರಭಾರೆ ಹಗರಣವನ್ನು ಪೊಲೀಸರ ತನಿಖೆಗೆ ಒಳಪಡಿಸಿ ಸಾವಿರಾರು ಕೋಟಿ ಮೌಲ್ಯದ ಹಗರಣ ಬಯಲಿಗೆ ಎಳೆದಿದ್ದಾರೆ. ಬ್ರೋಕರ್ ಮುಕ್ತ ಬಿಡಿಎ ಮಾಡಲು ಮುಂದಾಗಿದ್ದಾರೆ. ಆಯುಕ್ತರ ದಿಟ್ಟ ನಿರ್ಧಾರದಿಂದ ಸಾವಿರಾರು ಕೋಟ ರೂಪಾಯಿ ಬಿಡಿಎ ಅಕ್ರಮ ನಿವೇಶನ ಪರಭಾರೆ ಹಗರಣ ಹೊರಬಿದ್ದಿದೆ.

ಸರಣಿ ಬಂಧನ ಭೀತಿ :

ಸರಣಿ ಬಂಧನ ಭೀತಿ :

ಸದ್ಯ ಶೇಷಾದ್ರಿಪುರಂ ಪೊಲೀಸರು ತನಿಖೆ ನಡೆಸುತ್ತಿರುವ ಬಿಡಿಎ ನಿವೇಶನ ಅಕ್ರಮ ಪರಭಾರೆ ಹಗರಣ ಸಂಬಂಧ ಬಿಡಿಎ ಉಪ ಕಾರ್ಯದರ್ಶಿ ಶಿವೇಗೌಡ, ಅಧಿಕಾರಿಗಳಾದ ಕಮಲಮ್ಮ, ಸಂಪತ್, ಪವಿತ್ರಾ, ಖಾಸಗಿ ಏಜೆಂಟ್ ಇಂದರ್ ಕುಮಾರ್ ವಿರುದ್ಧ ಮೊದಲು ಎಫ್‌ಐಆರ್ ದಾಖಲಾಗಿತ್ತು. ಪೊಲೀಸರ ತನಿಖೆ ವೇಳೆ ರಾಮ, ಲಕ್ಷ್ಮಣ ಸೇರಿದಂತೆ ಹಲವು ಆರೋಪಿಗಳ ಹೆಸರು ಕೇಳಿ ಬಂದಿತ್ತು. ಉಪ ಕಾರ್ಯದರ್ಶಿಗಳಾಗಿ ಬಿಡಿಎನಲ್ಲಿ ಕಾರ್ಯ ನಿರ್ವಹಿಸಿದ ಐವರು ಅಧಿಕಾರಿಗಳು ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿರುವ ಅಂಶ ಪೊಲೀಸ್ ತನಿಖೆಯಲ್ಲಿ ಹೊರ ಬಿದ್ದಿದೆ. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲು ಶೇಷಾದ್ರಿಪುರಂ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ನಿರಾಶ್ರಿತ ದಲಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಹುಟ್ಟಿಕೊಂಡ ದಲಿತ ಕಲ್ಯಾಣ ಸಂಘಟನೆಗಳನ್ನು ಹುಟ್ಟಿಹಾಕಿ ಬಿಡಿಎ ನೂರಾರು ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡು ಅಕ್ರಮ ಪರಭಾರೆ ಮಾಡಲಾಗಿದೆ. ದಲಿತರಿಗೆ ಉಚಿತ ನಿವೇಶನ ಕೊಡುವ ನೆಪದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಿಡಿಎ ವತಿಯಿಂದ ನಿವೇಶನ ಮಂಜೂರು ಮಾಡಿಸಿ ಮಾರಾಟ ಮಾಡುವ ಈ ಅಕ್ರಮ ದಂಧೆ ಹಲವು ವರ್ಷಗಳಿಂದ ಸದ್ದಿಲ್ಲದೇ ನಡೆದುಕೊಂಡು ಬಂದಿದೆ. ಬಿಡಿಎ ಉಪ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಸಿದ ಅಧಿಕಾರಿಗಳೇ ಈ ಅಕ್ರಮದಲ್ಲಿ ಕೈ ಜೋಡಿಸಿರುವ ಸಂಗತಿ ಹೊರ ಬಿದ್ದಿದೆ. ಈ ಹಗರಣದಲ್ಲಿ ಬಿಡಿಎ ಉಪ ಕಾರ್ಯದರ್ಶಿ- 3 ಆಗಿ ಕಾರ್ಯ ನಿರ್ವಹಿಸಿರುವ ಅನೀಲ್ ಕುಮಾರ್ ಬ್ರೋಕರ್ ಗಳ ಜತೆ ಸೇರಿಕೊಂಡು ಬಿಡಿಎ ನಿವೇಶನಗಳನ್ನು ಮನಸೋ ಇಚ್ಛೆ ಪರಭಾರೆ ಮಾಡಿ ನೂರಾರು ಕೋಟಿ ನಷ್ಟ ವುಂಟು ಮಾಡಿರುವುದು ಪೊಲೀಸರ ತನಿಖೆಯಲ್ಲಿ ಇದು ಬಯಲಾಗಿದೆ. ಉಪ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಇತರೆ ಅಧಿಕಾರಿಗಳಾದ ಚಿದಾನಂದ, ಬಸವರಾಜ್, ಭಾಸ್ಕರ್ ಮತ್ತಿತರ ಅಧಿಕಾರಿಗಳ ಹೆಸರು ಈ ಅಕ್ರಮದಲ್ಲಿ ಕೇಳಿ ಬಂದಿದೆ. ಈ ಅಧಿಕಾರಿಗಳ ಜತೆ ಬಿಡಿಎ ಕೆಳ ಹಂತದ ಅಧಿಕಾರಿಗಳ ಹೆಸರು ಹಗರಣದಲ್ಲಿ ತಳಕು ಹಾಕಿಕೊಂಡಿದೆ.

ಸಾವಿರಾರು ಕೋಟಿ ನಷ್ಟ :

ಸಾವಿರಾರು ಕೋಟಿ ನಷ್ಟ :

ಒಂದು ದಲಿತರ ಕಲ್ಯಾಣ ಕೇಂದ್ರ ಮತ್ತು ಅನಾಥ ಮಕ್ಕಳ ಅಭಿವೃದ್ಧಿ ಸಂಸ್ಥೆಗೆ ದಲಿತರ ಪುನರ್ ವಸತಿಗಾಗಿ ಮಂಜೂರಾಗಿರುವ ಬಿಡಿಎ 120 ಕ್ಕೂ ಹೆಚ್ಚು ನಿವೇಶನಗಳನ್ನು ಕಾನೂನು ಬಾಹಿರವಾಗಿ ಪರಭಾರೆ ಮಾಡಲಾಗಿದೆ. ಇದೆ ರೀತಿ ಹಲವು ದಲಿತರ ಪುನರ್ ವಸತಿ ಹೆಸರಿನಲ್ಲಿ ಬಿಡಿಎ ನಿಂದ ನೂರಾರು ನಿವೇಶನ ಮಂಜೂರು ಮಾಡಿಸಿಕೊಳ್ಳಲಾಗಿದೆ. ದಲಿತರಿಗೆ ಉಚಿತವಾಗಿ ನಿವೇಶನ ಕೊಡಿಸುವ ಹೆಸರಿನಲ್ಲಿ ಅವರ ಆಧಾರ್, ವೋಟರ್ ಐಡಿ ಇತರೆ ದಾಖಲೆಗಳನ್ನು ಪಡೆದು ಅವರಿಂದ ಮಹಜರ್ ವರದಿಗೆ ಸಹಿ ಪಡೆದು ಅಕ್ರಮ ಎಸಗಲಾಗಿದೆ. ಬ್ರೋಕರ್ ಗಳ ಜತೆ ಶಾಮೀಲಾಗಿ ಅಧಿಕಾರಿಗಳು ಕೂಡ ಹಂಚಿಕೆ ಪಟ್ಟಿಯಲ್ಲಿ ಇಲ್ಲದವರಿಗೆ ಬಿಡಿಎ ನಿವೇಶನ ಮಂಜೂರು ಮಾಡಿಸಿದ್ದಾರೆ. ದಲಿತರಿಗೆ ಪುನರ್ ವಸತಿ ಕಲ್ಪಿಸುವ ಹೆಸರಿನಲ್ಲಿ ಮಂಜೂರಾದ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಬಿಡಿಎಗೆ ಸಾವಿರಾರು ಕೋಟಿ ನಷ್ಟ ವುಂಟು ಮಾಡಿದ್ದಾರೆ. ಅಚ್ಚರಿ ಏನೆಂದರೆ, ಅಧಿಕಾರಿಗಳು ಹಾಗೂ ಬ್ರೋಕರ್ ಗಳು ಅಕ್ರಮ ಕೂಟ ಕಟ್ಟಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಮೂಲೆ ನಿವೇಶನ, ಅನುಮೋದಿತ ನಕ್ಷೆಯಲ್ಲಿ ಇಲ್ಲದ ನಿವೇಶಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಅಕ್ರಮ ಲಾಭ ಮಾಡಿಕೊಂಡಿರುವ ಸಂಗತಿ ಹೊರ ಬಿದ್ದಿದೆ.

ನಿವೇಶನ ಮಾರಾಟ:

ನಿವೇಶನ ಮಾರಾಟ:

ಹೊಸಕೆರೆಹಳ್ಳಿಯಲ್ಲಿ ಸ್ಲಂ ತೆರವಿನಿಂದ ರಸ್ತೆ ಬದಿ ಜೀವನ ಮಾಡುತ್ತಿರುವ ಸ್ಲಂ ನಿವಾಸಿಗಳ ಹೆಸರಿನಲ್ಲಿ ಆಧಾರ್ ಮತ್ತು ವೋಟರ್ ಐಡಿಗಳನ್ನು ಸಂಗ್ರಹಿಸಿ ಅವರ ಹೆಸರಿನಲ್ಲಿ ನಿವೇಶನ ಮಂಜೂರು ಮಾಡಿಸಿಕೊಳ್ಳಲಾಗಿದೆ. ವಾಸ್ತವದಲ್ಲಿ ಅರ್ಹ ಫಲಾನುಭವಿಗಳಿಗೆ ಒಬ್ಬರಿಗೂ ನಿವೇಶನ ನೀಡಿಲ್ಲ. ಸಾಮಾನ್ಯವಾಗಿ ದಲಿತರಿಗೆ ಪುನರ್ ವಸತಿ ಉದ್ದೇಶಕ್ಕಾಗಿ ಬಿಡಿಎ ನಿಯಮದ ಪ್ರಕಾರ 30 x 20 ಅಳತೆ ನಿವೇಶನ ಮಂಜೂರು ಮಾಡಬೇಕು. ಆದರೆ, ಅಧಿಕಾರಿಗಳ ಹಾಗೂ ಬ್ರೋಕರ್ ಗಳ ಅಕ್ರಮ ಕೂಟದಿಂಧ 30x 50 ಅಳತೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಮೂಲೆ ನಿವೇಶನ ಮಂಜೂರಾತಿಗೆ ಅವಕಾಶವೇ ಇಲ್ಲ. ಆದರೆ ಅಂತಹ ನಿವೇಶನಗಳನ್ನು ಕೂಡ ದಲಿತರಿಗೆ ಪುನರ್ ವಸತಿ ಕಲ್ಪಿಸುವ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಬಿಡಿಎಗೆ ನಷ್ಟವುಂಟು ಮಾಡಲಾಗಿದೆ. ಹಲವು ವರ್ಷಗಳಿಂದಲೂ ಈ ಅಕ್ರಮ ಲೀಲಾಜಾಲವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಕುರಿತು ಸದ್ಯ ಶೇಷಾದ್ರಿಪುರಂ ಪೊಲೀಸರು ತನಿಖೆ ನಡೆಸುತ್ತಿದ್ದು, ನಿವೇಶನಗಳ ಅಕ್ರಮ ಪರಭಾರೆಯಲ್ಲಿ ಶಾಮೀಲಾಗಿರುವ ಬಿಡಿಎ ಅಧಿಕಾರಿಗಳಿಗೆ ಕಂಟಕ ಎದುರಾಗಿದೆ. ಬಂಧನದ ಭೀತಿ ಹಿನ್ನೆಲೆಯಲ್ಲಿ ಬ್ರೋಕರ್ ಗಳು ಬೆಂಗಳೂರು ಖಾಲಿ ಮಾಡಿದ್ದಾರೆ.

ಬಿಡಿಎ ಆಯುಕ್ತರ ಕ್ರಮ:

ಬಿಡಿಎ ಆಯುಕ್ತರ ಕ್ರಮ:

ಇಂತಹ ಅಕ್ರಮಗಳ ಜಾಲಕ್ಕೆ ಸಿಲುಕಿ ಬಿಡಿಎ ತನ್ನ ನೌಕರರಿಗೆ ವೇತನ ನೀಡಲು ದುಡ್ಡಿಲ್ಲದೇ ಆಸ್ತಿಯನ್ನು ಅಡವಿಟ್ಟು ಸಾಲ ತೆಗೆದುಕೊಂಡ ಪ್ರಸಂಗ ಎದುರಿಸಿದೆ. ಇದೇ ಮೊದಲ ಭಾರಿಗೆ ಬಿಡಿಎ ಆಯುಕ್ತರಾದ ಎಚ್‌.ಆರ್. ಮಹದೇವ ಅವರು ಬಿಡಿಎ ಅಕ್ರಮವನ್ನು ಪೊಲೀಸ್ ತನಿಖೆಗೆ ಒಪ್ಪಿಸಿ ಅಕ್ರಮ ಆಸ್ತಿಯನ್ನು ವಾಪಸು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಆಯುಕ್ತರ ಈ ನಡೆಯಿಂದ ಸಾವಿರಾರು ಕೋಟಿ ರೂಪಾಯಿ ಆಸ್ತಿಯನ್ನು ಬಿಡಿಎ ವಶಪಡಿಸಿಕೊಳ್ಳಲು ತಯಾರಿ ನಡೆಸಿದೆ. ಬ್ರೋಕರ್ ಗಳ ಜಾಲಕ್ಕೆ ಸಿಲುಕಿ ನಲುಗಿ ಹೋಗಿರುವ ಬಿಡಿಎ ನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಅದರ ಮೊದಲ ಭಾಗವಾಗಿ ಬಿಡಿಎ ಬ್ರೋಕರ್ ಗಳ ಜಾಲವನ್ನು ಕತ್ತರಿಸುತ್ತಿದ್ದಾರೆ. ಎರಡನೇ ಹಂತದಲ್ಲಿ ನಾನಾ ರೂಪದಲ್ಲಿ ಅಕ್ರಮವಾಗಿ ಪರಭಾರೆಯಾಗಿರುವ ಬಿಡಿಎ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಆಯುಕ್ತರು ಸಿದ್ಧತೆ ನಡೆಸಿದ್ದು, ಕಟ್ಟು ನಿಟ್ಟಾಗಿ ಕ್ರಮ ಜರುಗಿಸಿದಲ್ಲಿ 20 ಸಾವಿರ ಕೋಟಿ ಕ್ರೋಢೀಕರಣವಾಗಲಿದೆ ಎಂದು ಬಿಡಿಎ ಉನ್ನತ ಮೂಲಗಳು ತಿಳಿಸಿವೆ. ಬಿಡಿಎ ಆಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸರ್ಕಾರ ಬಿಡಲಿದೆಯೇ ಎಂಬ ಪ್ರಶ್ನೆ ಈಗಾಗಲೇ ಅಧಿಕಾರಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Recommended Video

ಬೆಳಗಾವಿ: ದಿ. ಸುರೇಶ್‌ ಅಂಗಡಿ ಮನೆಗೆ ಭೇಟಿಕೊಟ್ಟ ಅಮಿತ್‌ ಶಾ | Oneindia Kannada
ಹಗರಣದ ಹಿನ್ನೆಲೆ:

ಹಗರಣದ ಹಿನ್ನೆಲೆ:

ಬಿಡಿಎನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ನಿವೇಶನ ಅಕ್ರಮ ಪರಭಾರೆ ಆರೋಪ ಕುರಿತು ಬಿಡಿಎ ಜಾಗೃತ ದಳದ ಪೊಲೀಸ್ ಅಧಿಕಾರಿ ರವಿಕುಮಾರ್ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಿಡಿಎ ಉಪ ಕಾರ್ಯದರ್ಶಿ ಶೀವೇಗೌಡ, ಕಮಲಮ್ಮ, ಸಂಪತ್, ಪವಿತ್ರಾ, ಏಜೆಂಟ್ ಇಂದ್ರ ಕುಮಾರ್ ವಿರುದ್ಧ ದೂರು ನೀಡಿದ್ದರು. ಏಜೆಂಟ್ ಇಂದರ್ ಕುಮಾರ್ ಕಚೇರಿಯಲ್ಲಿ ಬಿಡಿಎಗೆ ಸಂಬಂಧಿಸಿದ ಸೀಲ್, ದಾಖಲೆಗಳು ಇದ್ದು, ಇವು ಬಳಿಸಿಕೊಂಡು ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ಪರಭಾರೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ಸಾಕ್ಷಿಗಳನ್ನು ಸಂಗ್ರಹಿಸಿ ಬಿಡಿಎ ಜಾಗೃತ ದಳಕ್ಕೆ ನೀಡಿದ್ದರು. ಇದನ್ನು ಆಂತರಿಕ ತನಿಖೆ ನಡೆಸಿದ ಬಿಡಿಎ ಜಾಗೃತ ದಳದ ಅಧಿಕಾರಿಗಳು ಅಕ್ರಮ ನಡೆದಿರುವ ಬಗ್ಗೆ ವರದಿ ನೀಡಿದ್ದರು. ದೂರಿನ ಅನ್ವಯ ಶೇಷಾದ್ರಿಪುರಂ ಪೊಲೀಸರು ಬಿಡಿಎ ಏಜೆಂಟ್ ಇಂದರ್ ಕುಮಾರ್ ಅವರ ಕಚೇರಿ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು.

English summary
BDA site allotment scam- KAS officials and brokers are facing fear of arrest in the scam at the Bangalore Development Authority, know more-
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X