ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015 ವರ್ಷ ಭವಿಷ್ಯ : ಜುಲೈ ನಂತರ ಕರ್ಕ ರಾಶಿಗೆ ಸೂಪರ್

By ನಾಗನೂರಮಠ ಎಸ್.ಎಸ್.
|
Google Oneindia Kannada News

ಪುನರ್ವಸು ನಕ್ಷತ್ರದ 4ನೇ ಚರಣ, ಪುಷ್ಯ, ಮತ್ತು ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರದು ಕರ್ಕ ರಾಶಿ. ಇವರಿಗೆ ಹಿ, ಹು, ಹೆ, ಹೊ, ಡ, ಡಿ, ಡೆ, ಡೂ ಎಂಬುದಾಗಿ ಜನ್ಮನಾಮ ಇಡಬೇಕಾಗುತ್ತದೆ.

ಈ ರಾಶಿಯವರಿಗೆ 2015ನೇ ಹೊಸ ವರ್ಷವು ಜುಲೈ ನಂತರ ಸೂಪರ್ ಎನ್ನಬಹುದು. ಅಲ್ಲಿಯವರೆಗೂ ಅಂದರೆ ವರ್ಷದ ಮೊದಲಾರ್ಧ ಸಹನೆ, ತಾಳ್ಮೆಯನ್ನು ಹೆಚ್ಚಿಸಿಕೊಳ್ಳಬೇಕು. ಕೆಲಸದಲ್ಲಿನ ಕಿರಿಕಿರಿಗೆ ಬೆದರದೆ ಧೈರ್ಯವಾಗಿರಬೇಕು. ಹೆಚ್ಚಿನ ಹಣ ಖರ್ಚು ಮಾಡದೇ ಉಳಿಸಿಕೊಂಡು ಅತ್ಯವಶ್ಯಕವಿದ್ದರೆ ಮಾತ್ರ ದುಡ್ಡು ಬಿಚ್ಚಬೇಕು. ನಂಬಿಕೆ, ವಿಶ್ವಾಸವಿಲ್ಲದವರ ವ್ಯವಹಾರಗಳಿಗೆ ಮತ್ತು ಅವರಿವರಿಗೆ ಜಾಮೀನಾಗಿ ಜವಾಬ್ದಾರಿ ಹೊರುವುದೇನು ಬೇಕಾಗಿಲ್ಲ.

ಅತೀ ಕಷ್ಟವಿದ್ದಾಗ ಮಾತ್ರ ನಿಮಗೆ ಸಹಾಯ ಮಾಡುವವರಲ್ಲಿ ಹಸ್ತ ಚಾಚಿ. ಏಕೆಂದರೆ ಹಣಕಾಸು ಸ್ಥಿತಿ ಈ ವರ್ಷ ಅಷ್ಟಕ್ಕಷ್ಟೇ ಇದೆ. ಸಾಲ ತೀರಿಸಲು ಖರ್ಚು ಕಮ್ಮಿ ಮಾಡಿಕೊಳ್ಳಿ. ಕೊಟ್ಟವರ ಹಣವನ್ನು ಮೊದಲು ಮರಳಿ ಕೊಡುವುದೇ ನಿಮ್ಮ ಏಕೈಕ ಗುರಿಯಾಗಬೇಕು. ಏಕೆಂದರೆ ಸಾಲ ಕೊಟ್ಟವರ ತೊಂದರೆ ಒಮ್ಮೊಮ್ಮೆ ಮಾನ, ಮರ್ಯಾದೆ ಹರಾಜಿಗಿಡಬಹುದು. [ನಾಗಗಳಂತೆ ವ್ಯಕ್ತಿತ್ವವಿರುವ ಆಶ್ಲೇಷಾ ನಕ್ಷತ್ರದವರು]

Yearly prediction 2015 for Cancer

ಜುಲೈ ನಂತರ ಎಲ್ಲ ಸಂಕಷ್ಟಗಳು ಪರಿಹರಿದಂತಾಗಿ ಹಣದ ಹರಿದಾಟ ಸರಾಗವಾಗುತ್ತದೆ. ಆದರೆ ಕಷ್ಟಪಟ್ಟು ದುಡಿದ ಹಣವನ್ನು ಮುಖ್ಯವಾದ ಯೋಜನೆಗಳಿಗೆಂದೇ ಮೀಸಲಿಡಬೇಕು. ವ್ಯವಹಾರದಲ್ಲಿ ಈ ಸಮಯ ಲಾಭದ ಲಕ್ಷಣಗಳು ಗೋಚರವಾಗುವುದರಿಂದ ಬುದ್ಧಿವಂತಿಕೆಯಿಂದ ವಹಿವಾಟು ಮಾಡಲಾರಂಭಿಸಬೇಕು. ಕಂಕಣ ಕಟ್ಟಿಸಿಕೊಳ್ಳಬೇಕು, ಕಟ್ಟಬೇಕು ಎನ್ನುವವರಿಗೆ ಶುಭಕರ. ಇದೆಲ್ಲಾ ಗುರುವಿನ ಚಲನೆಯ ಫಲಾಫಲ. ವರ್ಷದ ಉತ್ತರಾರ್ಧ ಗುರುಬಲ ಬರುವುದು ಚಿಂತೆ ಬೇಡ.

ಆದರೆ ಶನಿಗೋಚಾರ ಮಾತ್ರ ಪೀಡಾದಾಯಕವೆನ್ನಬಹುದು. ವೃಶ್ಚಿಕದಲ್ಲಿರುವ ಶನಿಯು ಕರ್ಕ ರಾಶಿಯವರಿಗೆ ಪಂಚಮನಾಗಿ ಕಟುಕನಾದಂತೆಯೇ ಸರಿ. ಇಡೀ ವರ್ಷವಷ್ಟೇ ಅಲ್ಲ. ಒಟ್ಟು 3 ವರ್ಷ ಶನಿಯು ಕರ್ಕ ರಾಶಿಯವರಿಗೆ ಪಂಚಮನಾಗಿ ಹಿಂಡಿ ಹಿಪ್ಪಿ ಮಾಡಲಿದ್ದಾನೆ. ಮನೆಯವರ ಮತ್ತು ಕುಟುಂಬ ಸದಸ್ಯರಿಂದ ನೋವು, ಚಿಂತೆ ಹೆಚ್ಚಳಗೊಳ್ಳುತ್ತದೆ. ಇದರಿಂದ ಮನಸ್ಸು ಉದ್ವೇಗಗೊಂಡು ಮನೆಯಿಂದ ದೂರವಿರಬೇಕು ಎಂದು ಮನಸ್ಸು ವಾಲಲಾರಂಭಿಸುತ್ತದೆ. [ಸಾತ್ವಿಕ ಸ್ವಭಾವದ ತ್ಯಾಗಮಯಿ ಪುಷ್ಯ ನಕ್ಷತ್ರದವರು]

ದುಷ್ಟರಿಂದ ದೂರವಿರಿ : ಆದರೆ, ಸಾಮೇರು ಹೇಳೋದು "ಜಂಗಮವಾಣಿ". ಜುಲೈ ನಂತರ ತುಂಬಾ ಶುಭಕರ ಗುರು ಬಲವಿದೆ. ಆ ಆಸೆ ಇಟ್ಟುಕೊಳ್ಳಿ. ಶನಿ ಗೋಚಾರ ಸ್ವಲ್ಪ ಮಾನಸಿಕ ಗೊಂದಲ ಹೆಚ್ಚಿಸಬಹುದಷ್ಟೇ. ಆದರೆ ಮನಸ್ಸು ಗಟ್ಟಿ ಮಾಡಿಕೊಂಡು ಧೈರ್ಯದಿಂದ ಜೀವನವನ್ನೆದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವ ಸಮಯವಿದು. ಕೆಲವೊಮ್ಮೆ ಕೆಟ್ಟ ಕೆಲಸಗಳನ್ನು ಮತ್ತು ನೀಚ ಜನರನ್ನು ಸಂಪರ್ಕ ಮಾಡಲು ಆಸೆಯಾಗುತ್ತದೆ. ಆದರೆ ಸುತಾರಾಂ ಅಂಥ ಕೆಲಸ ಮಾಡುವುದು ಬೇಡ. ಹಾಗೇನಾದರೂ ಮಾಡಿದರೆ ಬೆಂಕಿಯಿಂದ ಬಾಣಲೆಗೆ ನೀವೇ ಬಿದ್ದಂತೆ. ಏಕೆಂದರೆ ಕೆಟ್ಟವರು ಮೊದಲೇ ಹಾಳಾಗಿರುತ್ತಾರೆ. ನಿಮ್ಮನ್ನು ಹಾಳು ಮಾಡುವುದು ಅವರಿಗೇನೂ ದೊಡ್ಡ ವಿಷಯವಲ್ಲ. ಆದ್ದರಿಂದ ದುಷ್ಟರಿಂದ ದೂರವಿದ್ದರೆ ನಿಮಗೇ ಲೇಸು.

ತಪ್ಪು ಮಾಡದಿದ್ದರೂ ಕೆಲವೊಂದು ಇಕ್ಕಟ್ಟಿನ ಪ್ರಸಂಗಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಜಾಣ್ಮೆಯಿಂದ ಪಾರಾಗಿ. ಇದರಿಂದ ಗೌರವಕ್ಕೆ ಧಕ್ಕೆ ಬರಬಹುದು. ಹೀಗಾಗಿ ತೊಂದರೆ, ಕಿರಿಕಿರಿಯಾಗುವಂತಹ ಕೆಲಸ ಕಾರ್ಯಗಳಲ್ಲಿ ಭಾಗವಹಿಸಬೇಡಿ. ಅತಿಯಾಗಿ ಯಾರನ್ನೂ ದ್ವೇಷಿಸಬೇಡಿ. ನಿಮ್ಮ ಕೆಲಸ ಮತ್ತು ನೀವು ಇಷ್ಟೇ ಜಗತ್ತು ಎಂದುಕೊಂಡು ಪರರ ಬಗ್ಗೆ ಸುಖಾಸುಮ್ಮನೆ ತಲೆ ಕೆಡಿಸಿಕೊಳ್ಳಬೇಡಿ. "ಮಾಡಿದ್ರೇನು, ಏನಾಯ್ತದೆ ಸಾಮೀ" ಎಂದರೆ "ಕತ್ತೆಗೆ ಲತ್ತೆ ಪೆಟ್ಟು, ಜಾಣನಿಗೆ ಮಾತಿನ ಪೆಟ್ಟು" ಅಂತವ್ರೆ ಸಾಮೇರು. [ಸ್ತನ ಕ್ಯಾನ್ಸರ್ ರಾಜಧಾನಿ]

ಯಾರೋ ಹೇಳಿದ್ದಾರೆಂದು ಲಾಭವಾಗುತ್ತದೆಯೆಂದು ಅಲ್ಲಿಲ್ಲಿ ಹಣ ಹೂಡುವುದೇನು ಬೇಡ ಈವಾಗ. ಯಾಕೆಂದರೆ ಅತಿಯಾಸೆ ಗತಿಗೇಡು ಎಂಬಂತಾಗಬಹುದು. ವಿದ್ಯಾಭ್ಯಾಸದಲ್ಲಂತೂ ಹೆಚ್ಚಿನ ಗಮನ ಕೊಡಲೇಬೇಕು. ಆದಷ್ಟು ಬೆಳಗಿನ ಸಮಯದಲ್ಲೇ ಅಭ್ಯಾಸ ಮಾಡುವುದು ಸೂಕ್ತ. ವಾಹನದಲ್ಲಿ ಓಡಾಡುವಾಗ ಮತ್ತು ಓಡಿಸುವಾಗ ಜಾಗೃತೆ ಇರಲಿ. ಬೇಜವಾಬ್ದಾರಿಯುತವಾಗಿ ವಾಹನ ಓಡಿಸುವುದಾಗಲಿ ಅಥವಾ ಅಂಥವರ ವಾಹನದಲ್ಲಿ ಓಡಾಡುವುದನ್ನು ಬಿಟ್ಟಾಕಿ.

ಯಾವುದು ಶುಭಕರ : ಕೆಂಪನೆಯ ಮತ್ತು ಬಿಳಿ ಬಣ್ಣದ ವಸ್ತು ಮತ್ತು ಬಟ್ಟೆಗಳನ್ನು ಹೆಚ್ಚಾಗಿ ಬಳಸುವುದು ಒಳ್ಳೆಯದು. ಶಂಭೋಲಿಂಗನಿಂದ ಮಾತ್ರ ನಿಮಗೆ ತುಂಬಾ ಶುಭಕರವೆನ್ನುವುದು ತಿಳಿದುಕೊಂಡು ಅವನ ಆರಾಧನೆ ಮಾಡುವುದು ಅವಶ್ಯ. 2, 11, 20, 29ನೇ ತಾರೀಖುಗಳಲ್ಲಿ ಮುಖ್ಯವಾದ ಕೆಲಸಗಳನ್ನು ಹಮ್ಮಿಕೊಳ್ಳಿ. ರವಿವಾರ ಮತ್ತು ಸೋಮವಾರ ನಿಮಗಿಷ್ಟವಾಗುವ ದಿನಗಳು. ಈ ದಿನಗಳಲ್ಲಿ ನೀವು ತುಂಬಾ ಸಂತಸದಿಂದಿರುತ್ತೀರಿ. ಹೀಗಾಗಿ ಕೆಲಸದಲ್ಲಿ ಹೆಚ್ಚಿನ ಶ್ರಮ ವಹಿಸಿ. 1, 2, 4, 7 ನಿಮಗೆ ಸಹಾಯ ಮಾಡುವ ಸಂಖ್ಯೆಗಳು.

ವೃಶ್ಚಿಕ, ಮೀನ, ತುಲಾ ರಾಶಿಯವರೆಂದರೆ ನಿಮಗಿಷ್ಟ. ಇವರೊಂದಿಗೆ ಇದ್ದಾಗ ಹೆಚ್ಚಿನ ಖುಷಿ ನಿಮ್ಮಲ್ಲಿ. ಅವರಿಗೂ ಕೂಡ ನಿಮ್ಮಿಂದ ಸಂತೋಷನೇ. ಆದರೆ ಮೇಷ, ಸಿಂಹ, ಧನಸ್ಸು ಮತ್ತು ಮಿಥುನ ರಾಶಿಯವರನ್ನು ಕಂಡರೆ ನಿಮಗಾಗಲ್ಲ. ಅವರಿಗೂ ನೀವಾಗಲ್ಲ. ಆದ್ದರಿಂದ ಅವರೊಂದಿಗೆ ಹೆಚ್ಚಿಗೆ ಒಡನಾಟ ಬೇಡ. ಎಷ್ಟು ಬೇಕೋ ಅಷ್ಟೊಂದು ಸಲುಗೆ ಇದ್ದರೆ ಅವರಿಗೂ ಒಳ್ಳೆಯದು ನಿಮಗೂ ಒಳ್ಳೆಯದು.

ಚಿಕ್ಕಪುಟ್ಟ ವಿಷಯಗಳಿಗೂ ಕೋಪಗೊಂಡು ಜಗಳಕ್ಕೆ ನಿಲ್ಲುವುದನ್ನು ಮತ್ತು ಮತ್ತೊಬ್ಬರಿಗೆ ಹೆಸರು ಇಡುವುದನ್ನು ಬಿಡಬೇಕು. ಈ ಗುಣಗಳಿಂದ ನೀವು ಎಲ್ಲರಿಗೂ ಕೆಟ್ಟವರಾಗಬಹುದು. ಮೊದಲೇ ಸೂಕ್ಷ್ಮ ಸ್ವಭಾವದವರಾದ ನೀವು ಯಾವಾಗಲೂ ಕೆಲಸವೊಂದರಲ್ಲಿ ನಿರತರಾಗಿಯೇ ಇರುತ್ತೀರಿ. ಇದನ್ನೇ ಚುರುಕಾಗಿ ಮುಂದುವರಿಸಿಕೊಂಡು ಹೋಗಿ. ಲೆಕ್ಕದಲ್ಲಿ ಪಕ್ಕಾ ಆಗಿರುವ ನಿಮಗೆ ಹಣದ ವಿಷಯದಲ್ಲಿ ಮಾತ್ರ ಬೇಸರವಿದ್ದದ್ದೇ. ಆದರೆ ಧೃತಿಗೆಡದೇ ಜುಲೈವರೆಗೂ ಕಾಯಿರಿ. ಆದರೆ ಶನಿಶಾಂತಿ ಮತ್ತು ಗುರುಶಾಂತಿ ಮಾಡಿಸುವುದು ಒಳ್ಳೆದು.

ಮನೆಯಲ್ಲಿ ಸಹೋದರ ಮತ್ತು ಸಹೋದರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ ಅಥವಾ ಅವರು ಹೇಳಿದಂಗೆ ಕೇಳಿಕೊಂಡು ಇರೋದು ಸೂಕ್ತ. ಪ್ರತಿದಿನ ಶಂಭೋಲಿಂಗನಾರಾಧನೆ ಮಾಡುವುದು ಅವಶ್ಯ. ಒಟ್ಟಿನಲ್ಲಿ ಹೊಸ ವರ್ಷವು ಕರ್ಕ ರಾಶಿಯವರಿಗೆ ಶೇ.10ರಷ್ಟು ಒಳ್ಳೆಯದಿದೆ ಎನ್ನಬಹುದು. ಬಂದಿರುವ ಈ ಸುವರ್ಷವನ್ನು ಸಂತಸದಿಂದ ಸ್ವಾಗತಿಸಿ. ಹೊಸ ವರ್ಷದ ಶುಭಾಶಯಗಳೊಂದಿಗೆ ಶುಭವಾಗಲಿ.

English summary
Yearly horoscope 2015 for Cancer zodiac sign. First half of the year this zodiac people have to be careful while dealing with money or relatives. Better stay away from investing. But, second half is good. Save money for the future now itself, says astrologer S.S. Naganurmath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X