• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನ್ನೆರಡು ರಾಶಿಗಳ ಮದುವೆ, ಲವ್ ಭವಿಷ್ಯ 2018

By ಪಂಡಿತ್ ಶಂಕರ್ ಭಟ್
|

2018ರ ವರ್ಷ ಪ್ರೇಮಿಗಳ ಪಾಲಿಗೆ ಹೇಗಿರಲಿದೆ? ಒಂದೇ ಫ್ರೇಮಿನಲ್ಲಿ ಜತೆಜತೆಯಾಗಿ ಕಾಣಿಸಿಕೊಳ್ಳಬೇಕೆಂಬ ಹುಡುಗ-ಹುಡುಗಿಯರ ಆಸೆ ಈಡೇರುತ್ತದಾ? ಎಷ್ಟು ಪ್ರೇಮಿಗಳು ಈ ವರ್ಷವೇ ಮದುವೆಯಾಗೋಣ ಅಂದುಕೊಂಡಿದ್ದೀರಿ? ಇನ್ನೆಷ್ಟು ಮಂದಿ ಈ ವರ್ಷ ಮನೆಯಲ್ಲಿ ಪ್ರೀತಿಯ ಹುಡುಗ ಅಥವಾ ಹುಡುಗಿಯ ವಿಚಾರ ತಿಳಿಸಬೇಕು ಅಂದುಕೊಂಡಿದ್ದೀರಿ?

ಇರಲಿ, ಎಲ್ಲರಿಗೂ ಅವರಿಷ್ಟ ಪಟ್ಟ ಪ್ರೀತಿ ಸಿಗಲಿ ಎಂಬುದು ಹಾರೈಕೆ. ಆದರೆ ಅದು ಸಾಧ್ಯವೇ? ಯಾವುದಕ್ಕೂ ನಿಮ್ಮ ಗ್ರಹಚಾರ ಹೇಗಿದೆ ಅಂತ ತಿಳಿದುಕೊಂಡು ಬಿಡ್ರಲಾ. ಏನಾದರೂ ಮುಂಜಾಗ್ರತೆ ತೆಗೆದುಕೊಳ್ಳುವ ಅಗತ್ಯವಿದ್ದರೂ ಎಚ್ಚರವಾಗಿ. ಹುಂಬತನ ಬೇಡ. ದೊಡ್ಡವರ ವಿರೋಧ ಕಟ್ಟಿಕೊಂಡರೂ ಪರವಾಗಿಲ್ಲ ಎಂಬ ಧೋರಣೆಯಂತೂ ಖಂಡಿತಾ ಬೇಡ.

ಪ್ರಮೋಷನ್ ಸಿಗುತ್ತಾ, ಸಂಬಳ ಜಾಸ್ತಿ ಆಗುತ್ತಾ?: 12 ರಾಶಿ ಉದ್ಯೋಗ ಭವಿಷ್ಯಪ್ರಮೋಷನ್ ಸಿಗುತ್ತಾ, ಸಂಬಳ ಜಾಸ್ತಿ ಆಗುತ್ತಾ?: 12 ರಾಶಿ ಉದ್ಯೋಗ ಭವಿಷ್ಯ

ನಿಮ್ಮ ರಾಶಿಗೆ ಹೊಸ ವರ್ಷದ ಪರಿಣಾಮ ಏನು ಎಂದು ತಿಳಿಸುವ ಲೇಖನ ಇದು. ಪ್ರಿಯತಮೆಯ ನೆನಪಿನಲ್ಲಿ ಬಿಸಿ ಕಾಫಿಯೆನ್ನುವುದೂ ಮರೆತು ಕೈ ಸುಟ್ಟುಕೊಳ್ಳುತ್ತಿರುವ ಯುವಕರೇ, ಪ್ರಿಯತಮನ ನೆನಪಿನಲ್ಲಿ ಒಲೆ ಮೇಲಿಟ್ಟಿರುವ ಹಾಲಿನ ವಿಷಯವನ್ನೇ ಮರೆತ ಯುವತಿಯರೇ ಈ ಲೇಖನ ನಿಮಗಾಗಿ, ನಿಮ್ಮಂಥವರೆಲ್ಲರಿಗಾಗಿ.

ಮೇಷದಿಂದ ಮೀನದವರೆಗೆ ಹನ್ನೆರಡು ರಾಶಿಗಳ ಪ್ರೇಮ ಹಾಗೂ ವಿವಾಹಿತರ ಭವಿಷ್ಯ ಇಲ್ಲಿದೆ.

ಮೇಷ

ಮೇಷ

ಮನೆಯಲ್ಲಿನ ಅಡಚಣೆಗಳಿಂದ ವೈವಾಹಿಕ ಜೀವನದಲ್ಲಿ ಸ್ವಲ್ಪ ನಸೆನಸೆ. ಬಾಳಸಂಗಾತಿಯೊಂದಿಗೆ ಸಣ್ಣ ಸೈಜಿನ ಯುದ್ಧ. ಯಾವುದೇ ಜಗಳವಾದರೂ ರಾಜೀ-ಸಂಧಾನ ಆಗುತ್ತದೆ. ರೊಮ್ಯಾಂಟಿಕ್ ಆಗಿ ಇರಬೇಕೆನ್ನುವ ನಿಮ್ಮ ಪ್ರಯತ್ನಗಳೆಲ್ಲ ವರ್ಷದ ಮೊದಲಾರ್ಧದಲ್ಲಿ ಫೇಲ್ ಆಗಲಿದೆ. ದ್ವಿತೀಯಾರ್ಧದಲ್ಲಿ ಹಬ್ಬದಾಚರಣೆ.

ನಿಮ್ಮ ಅನುಮಾನದ ಕಾರಣಕ್ಕೆ ಸಂಗಾತಿಗಳ ಮೂಡ್ ಹಾಳು ಮಾಡಬೇಡಿ. ಪ್ರೇಮಿಗಳ ಮಧ್ಯೆ ಮೋಡ ಕವಿದ ವಾತಾವರಣ. ಕತ್ತಲೆ. ಕೆಲಸ- ಗುರಿ ಎಂಬ ರೇಸಿಗೆ ಬಿದ್ದು ಪ್ರೀತಿ-ಪ್ರೇಮ ಕ್ರಿಕೆಟ್ ನ ಟ್ವೆಲ್ತ್ ಮ್ಯಾನ್ ಇದ್ದಂತಾಗುತ್ತದೆ. ಸಿಕ್ಕಾಪಟ್ಟೆ ಆಕ್ರಮಣಕಾರಿ ಧೋರಣೆಯಿಂದ ವೈಯಕ್ತಿಕ ಸಂಬಂಧಗಳಿಗೆ ಪೆಟ್ಟು.

ವೃಷಭ

ವೃಷಭ

ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಜತೆಯಲ್ಲಿರುವವರ ಮಧ್ಯೆ ಲವ್ವು ಉದಯಿಸುವ ಸಮಯ. ವಿವಾಹಿತರಿಗೆ ಮನೆಯಲ್ಲಿ ಫೈಟೇ ಫೈಟು. ನಿಮ್ಮದೇ ಬೇಜವಾಬ್ದಾರಿ ಹಾಗೂ ವರ್ತನೆಯಿಂದ ಮನೆಯು ಗೊಂದಲಪುರವಾಗುತ್ತದೆ. ಜತೆಗೆ ಹಣಕಾಸಿನ ಪ್ರಾಬ್ಲಮ್ಮು ಸೇರಿ ನೂರಾ ನಲವತ್ನಾಲ್ಕನೇ ಸೆಕ್ಷನ್ ಜಾರಿ.

ಈಗಾಗಲೇ ಪ್ರೀತಿಯಲ್ಲಿರುವ ಯುವಕ- ಯುವತಿಯರಿಗೆ ಮನೆಗಳಲ್ಲಿ ವಿರೋಧ ಪಕ್ಷದ ಸವಾಲು. ಪ್ರೀತಿ ಅಥವಾ ವಿವಾಹದ ಹೊರತಾದ ಸಂಬಂಧ ಮಾಡಿಕೊಳ್ಳಬೇಡಿ, ಹುಷಾರು. ಪರಸ್ಪರ ಅಕ್ಕರೆ- ಪ್ರೀತಿ ಇಲ್ಲದಿರುವುದು ಮನಸ್ಸು ಬೇಲಿ ಹಾರಲು ಕಾರಣ ಆಗಬಹುದು. ಈ ವರ್ಷದ ಕೊನೆಗೆ ಸಂಬಂಧ ಸರಿಪಡಿಸಿಕೊಳ್ಳಲು ಒಂದು ಬೆಳ್ಳಿ ಗೆರೆ ಕಾಣಿಸುತ್ತದೆ. ಸ್ನೇಹಿತರ- ಹಿತೈಷಿಗಳ ಸಂಧಾನದಲ್ಲಿ ಗೊಂದಲಕ್ಕೆ ಶುಭಂ ಬೀಳುತ್ತದೆ.

ಮಿಥುನ

ಮಿಥುನ

ಪ್ರೀತಿ-ಪ್ರೇಮ, ಸಂಬಂಧ ಇವ್ಯಾವೂ ಬೇಡ ಅತ್ಲಾಗೆ ಎಂದು ಮುನಿಸಿಕೊಂಡ ಮುನಿಸ್ವಾಮಿ ಆಗಲಿದ್ದೀರಿ. ಈಗಾಗಲೇ ಪ್ರೀತಿ-ಪ್ರೇಮ-ಪ್ರಣಯ ಎಂದು ಹಂತ ದಾಟಿದವರಿಗೆ ವಿವಾಹ ಜೀವನದ ಕಡೆಗೆ ಸೆಳೆತವಿದೆ. ಆದರೆ ಸಂಬಂಧ ಗಟ್ಟಿ ಮಾಡಿಕೊಳ್ಳುವುದು ಬಹಳ ಕಷ್ಟವಿದೆ. ಒರಟು ಮಾತಾಡುವುದು ಬಿಡಿ. ಇದರಿಂದ ಪ್ರಣಯ ಜೀವನದ ಆರೋಗ್ಯ ಚೇತರಿಸಿಕೊಳ್ಳುತ್ತದೆ.

ವರ್ಷದ ದ್ವಿತೀಯಾರ್ಧವು ವಿವಾಹಿತರಿಗೆ ಸಂಕಷ್ಟದ ಸಮಯ. ಇಬ್ಬರ ಮಧ್ಯೆ ದಂಗಲ್ ದಂಗಲ್. ತುಂಬ ಸೊಗಸಾಗಿ, ಮುದ್ದಾಗಿದ್ದ ಸಂಬಂಧದಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ. ನೀವು ಹಳೆಯದನ್ನು ನೆನಪಿಸಿಕೊಂಡು ಅದಕ್ಕೆ ಮತ್ತಷ್ಟು ಸೀಮೆ ಎಣ್ಣೆ ಹಾಕಬೇಡಿ. ವರ್ಷದ ಕೊನೆಗೊಂದು ಪ್ರಣಯ ಸಂಬಂಧ ಚಿಗಿಯುತ್ತದೆ. ಆದರೆ ಪ್ರಬುದ್ಧತೆ ಇಲ್ಲ ಅಂದರೆ, ಪರಿಸ್ಥಿತಿ ಗಂಭೀರವಾಗುತ್ತದೆ.

ಕರ್ಕಾಟಕ

ಕರ್ಕಾಟಕ

ಒಂಟಿಯಾಗಿದ್ದೀರಿ ಎಂದರೆ ನಿಮ್ಮ ಮನದಲ್ಲೊಂದು ಪ್ರೇಮ ಪ್ರವೇಶ. ಹೊಸದಾಗಿ ಶುರುವಾದ ಸಂಬಂಧದಲ್ಲಿ ಇಬ್ಬರಿಗೂ ಸಂತಸ ಮೂಡುವ ಸಮಯ. ಈ ಸಂದರ್ಭದಲ್ಲಿ ಸಂಬಂಧ ಕೂಡ ಫೆವಿ ಕ್ವಿಕ್ ನಂತೆ ಅಂಟಿಕೊಂಡರೆ ಬಿಡುವುದಿಲ್ಲ ಎಂಬಷ್ಟು ಗಾಢವಾಗುತ್ತದೆ. ಆದರೆ ಲಿವ್ ಇನ್ ಸಂಬಂಧದಂತೆ ಇರೋಣ ಎಂಬ ಒಪ್ಪಂದ ಬೇಡ.

'ನಾನು' ಬಿಟ್ಟರೆ ವಿವಾಹಿತರು ನೆಮ್ಮದಿಯಾಗಿರಲು ಸಾಧ್ಯ. ನಿಮ್ಮೊಳಗಿರುವ ಅಹಂಕಾರ ಬಿಡದಿದ್ದರೆ ಪಾರ್ಟಿ- ಸಿನಿಮಾಗೆಲ್ಲ ಒಬ್ಬೊಬ್ಬರೇ ಹೋಗಬೇಕಾದೀತು. ಮದುವೆ ಬಗ್ಗೆ ಯೋಚಿಸುತ್ತಿರುವ ಜೋಡಿಗಳು ಸೂಕ್ತ ಸಮಯಕ್ಕೆ ಕಾಯುವುದೇ ಉತ್ತಮ. ಮಾನಸಿಕವಾಗಿ ಇಬ್ಬರೂ ಸಿದ್ಧರಾದ ಮೇಲೆ ಚಿರೋಟಿ ಊಟ. ರಾಶಿರಾಶಿ ಕೆಲಸಗಳಿವೆ, ಡೆಡ್ ಲೈನ್ ನಲ್ಲಿ ಅದನ್ನು ಮುಗಿಸಿ. ಕೆಲಸ ಬದಲಾಯಿಸುವವರ ಪಾಲಿಗೆ ಪ್ರಣಯ ಸಂಬಂಧವೊಂದು ಕೊನೆಯಾಗಲಿದೆ.

ಸಿಂಹ

ಸಿಂಹ

ಬಾಯಲ್ಲಿ ಜೇನು ಸುರಿಸುವ ಮಾತನಾಡುವ ಮೂಲಕ ಸಂಗಾತಿಯ ಮನ ಗೆಲ್ಲುತ್ತೀರಿ. ಸಂಬಂಧ ದಷ್ಟಪುಷ್ಟವಾಗುತ್ತದೆ. ಮದುವೆ ಆದವರ ಜೀವನದಲ್ಲಿ ಅಂಗಡಿ, ಸಾಸಿವೆ- ಉಪ್ಪಿನ ಜತೆಗೆ ಒಂದಿಷ್ಟು ಸಿಹಿ ಕೂಡ ಬೆರೆಯುತ್ತದೆ. ಕೆಲ ಸಾರಿ ಸವಾಲು ಎದುರಾಗಬಹುದು. ಸಂಗಾತಿಯ ಜನ್ಮದಿನ ಮರೆತರೆ, ವೆಡ್ಡಿಂಗ್ ಆನಿವರ್ಸರಿ ದಿನ ಮಿಸ್ ಹೊಡೆದರೆ ಕಷ್ಟವಿದೆ.

ಸಣ್ಣ ಸಂದಿಯಿಂದ ಬರುತ್ತಿರುವ ನೀರು ಎಂದು ನಿರ್ಲಕ್ಷ್ಯ ಮಾಡಿದಂತೆ ಚಿಕ್ಕ ಪುಟ್ಟ ಅಸಮಾಧಾನ ಎಂದು ತಿರಸ್ಕರಿಸಿದರೆ ಮುಂದಿದೆ ಮುದುಕಿ ಹಬ್ಬ. ಇನ್ನು ಕೆಲಸ ಮಾಡುವ ಜಾಗದಲ್ಲಿ ಸ್ನೇಹವೊಂದು ಗಾಢವಾಗುತ್ತಿದ್ದರೆ ಅದು ಇನ್ನಷ್ಟು ಚಿಗಿತು ಮದುವೆಯವರೆಗೂ ಮುಂದುವರಿಯುವ ಯೋಗ ಇದೆ. ವರ್ಷದ ಕೊನೆಗೆ ಮನೆಯೇ ನಂದಗೋಕುಲ. ಗಂಡ- ಹೆಂಡತಿಯ ಮಧ್ಯೆ ಪ್ರೀತಿಯ ರಸ್ತೆಯಲ್ಲಿ ಬಿದ್ದ ಗುಂಡಿಗಳ ನವೀಕರಣ. ಅದಕ್ಕೆ ನೀವು ಪ್ರಯತ್ನ ಮಾಡಬೇಕು. ಎದುರಿನವರೇ ಮೊದಲು ಪ್ರಯತ್ನಿಸಲಿ ಎಂಬ ಧೋರಣೆ ಬೇಡ.

ಕನ್ಯಾ

ಕನ್ಯಾ

ವೈವಾಹಿಕ ಜೀವನದಲ್ಲಿ ವಸಂತ ಋತು. ಮನೆಯಲ್ಲಿ ಸಂತಸದ ವಾತಾವರಣ. ಹೊಸ ಸಂಬಂಧಕ್ಕೆ ಜಿಗಿಯುವ ಮನಸ್ಥಿತಿಯವರಿದ್ದರೆ ಈಗಿನ ಸಿಹಿ ಸಮಯ ಕಳೆದುಕೊಂಡಿರಿ ಅಂತಲೇ. ನೀವು ಸುಖವಾಗಿ, ಸಂತೋಷವಾಗಿ ಇರಬೇಕು ಎಂಬುದು ಮೊದಲ ಹಾಗೂ ಏಕೈಕ ಆದ್ಯತೆಯಾಗಿರುತ್ತದೆ. ನಿಮ್ಮ ಬಾಳ ಸಂಗಾತಿಯಿಂದ ಅದು ಸಾಧ್ಯವಾಗುತ್ತದೆ.

ಕೌಟುಂಬಿಕ ಜೀವನದೊಳಗೆ ಕಾಸು ಹರಿದುಬರುವ ಸಮಯ. ಹಣಕಾಸಿನ ಕೊರತೆ ಏನೂ ಆಗಲ್ಲ. ಜತೆಗೆ ಸಿನಿಮಾ, ಹೋಟೆಲ್ ಅಂತ ಚೆನ್ನಾಗಿ ಸುತ್ತಾಡ್ತೀರಿ. ವರ್ಷದ ಮೊದಲಾರ್ಧದಲ್ಲಿ ಪ್ರೇಮಿಗಳೇ ಪ್ರೇಮ ಜೀವನ ಆಹಾ ಓಹೋ ಎಂಬಂತಿರುತ್ತದೆ. ದ್ವಿತೀಯಾರ್ಧದಲ್ಲಿ ಮದುವೆಗೆ ಮುನ್ನುಡಿಯಾಗುತ್ತದೆ. ಆದರೆ ಸಂಗಾತಿಗೆ ಉಸಿರುಗಟ್ಟಿಸುವಂತೆ ತಬ್ಬಿ ಹಿಡಿಯಬೇಡಿ. ಅಂದರೆ ಅವರದು ವೈಯಕ್ತಿಕ ಜೀವನಕ್ಕೆ ಅವಕಾಶ ಕೊಡಿಯಾವುದನ್ನೂ ಹೇರಬೇಡಿ.

ತುಲಾ

ತುಲಾ

ಬಹಳ ಕಾಲದಿಂದ ಒಳ್ಳೆ ಸ್ನೇಹಿತರಾಗಿದ್ದೀವಿ, ಇದೀಗ ಸ್ನೇಹ ಮಾಗಿ ಪ್ರೀತಿಯ ಹಣ್ಣಾಗಿದೆ ಅಂದುಕೊಂಡವರಿಗೆ ಇದು ಪ್ರೇಮ ನಿವೇದನೆಗೆ ಪರ್ ಫೆಕ್ಟ್ ಟೈಮ್. ಆದರೆ ವೈವಾಹಿಕ ಸಂಬಂಧದಲ್ಲಿ ಗೋಡೆಯ ಸುಣ್ಣದ ಚಕ್ಕಳ ಉದುರುತ್ತಿದೆ ಎಂಬ ಗಮನವಿರಲಿ. ಇದನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ಕಳೆದುಕೊಳ್ಳುತ್ತಿರುವುದು ಏನೇನು ಎಂದು ಆ ನಂತರ ಲೆಕ್ಕ ಹಾಕಬೇಕಾಗುತ್ತದೆ.

ಕೆಲವರು ಈ ವರ್ಷ ಮನೆಯಿಂದ ಕೆಲ ಕಾಲ ದೂರ ಇರುತ್ತೀರಿ. ಬಾಂಧವ್ಯದಲ್ಲಿ ಬೆಸುಗೆ ಆಗುತ್ತಿಲ್ಲ ಅಂದರೆ ಹಿರಿಯರು ನೆರವಿಗೆ ಬರುತ್ತಾರೆ.ನೆರೆಯವರ ಜತೆಗಿನ ಸ್ನೇಹ, ಸಹೋದ್ಯೋಗಿಗಳ ಜತೆಗಿನ ಸಂಬಂಧವೊಂದು ಮುಂದಿನ ಹಂತಕ್ಕೆ ಏರಬಹುದು. ಆದರೆ ಅದು ದೀರ್ಘಾವಧಿಯವರೆಗೆ ಎಳೆದುಕೊಂಡು ಹೋಗುವಂಥ ಬಂಡಿಯಲ್ಲ.

ವೃಶ್ಚಿಕ

ವೃಶ್ಚಿಕ

ಪ್ರೀತಿ-ಪ್ರೇಮದಲ್ಲೂ ಹಣ ಕಾಸಿನ ಅಡೆತಡೆ ಹಾಗೂ ಮಿತಿ ಹೇರಿರುವುದು ಅನುಭವಕ್ಕೆ ಬರುತ್ತದೆ. ಆ ಕಾರಣಕ್ಕೆ ಮನೆಯಿಂದ ಬೇರೆ ಸ್ಥಳಕ್ಕೆ ಅಥವಾ ವಿದೇಶಕ್ಕೆ ಹೋಗಬೇಕಾದ ಸಂದರ್ಭ ಬರಬಹುದು. ಒಂಟಿಯಾಗಿರುವವರು ಏನನ್ನೂ ಯೋಚಿಸದೆ ಲವ್ ಮಾಡಲೇಬೇಕೆಂದು ದಿಟ್ಟ ನಿರ್ಧಾರ ಮಾಡುತ್ತೀರಿ. ಆ ಕಾರಣಕ್ಕೆ ಏಕ ಕಾಲಕ್ಕೆ ಒಂದಕ್ಕಿಂತ ಹೆಚ್ಚು ಸಂಬಂಧ ನಿಭಾಯಿಸುವ ಪ್ರಯತ್ನ ಮಾಡ್ತೀರಿ.

ಮನೆಯ ಹಿರಿಯರಿಗೆ ವಿಷಯ ಗೊತ್ತಾಗುತ್ತದೆ. ಆ ನಂತರ ನಿಮ್ಮ ಇಮೇಜ್ ಗೆ ಹೊಡೆತ ಬೀಳುತ್ತದೆ. ವರ್ಷದ ಕೊನೆಗೆ ಮನೆಯಲ್ಲಿ ಇದೇ ವಿಚಾರ ಬಿಸಿಬಿಸಿ ವಿಷಯವಾಗಿ ನೆಮ್ಮದಿ ಹಾಳು ಮಾಡುತ್ತದೆ. ಆದರೆ ಅಂತಿಮವಾಗಿ ಮದುವೆಯಲ್ಲಿ ಕೊನೆಯಾಗುತ್ತದೆ. ಸಂತಾನ, ಬಡ್ತಿ ಎಲ್ಲ ವರ್ಷದ ಕೊನೆಗೆ ಸಿಗುವಂತಿದೆ. ದಂಪತಿ ಮದ್ಯದ ಒಲವು ಮತ್ತಷ್ಟು, ಮಗದಷ್ಟು ಮೊಗೆದಷ್ಟೂ ಹೆಚ್ಚಾಗುತ್ತದೆ.

ಧನು

ಧನು

ದೀರ್ಘಾವಧಿಯ ಪ್ರಣಯ ಕಾಲವಿದು. ಮನೆಯಲ್ಲಿ ಸಂತಸದ ವಾತಾವರಣ. ವರ್ಷದ ಮೊದಲಾರ್ಧದಲ್ಲಿ ಜೋಡಿ ಹಕ್ಕಿಗಳಿಗೆ ಖುಷಿಯೋ ಖುಷಿ. ಈ ಓಘಕ್ಕೆ ಬ್ರೇಕ್ ಹಾಕುವಂತೆ ವರ್ಷದ ಮಧ್ಯದಲ್ಲಿ ಕೆಲವು ಘಟನೆಗಳು ಸಂಭವಿಸುತ್ತವೆ. ಜಗಳ-ಕದನಗಳೇ ನಡೆದು ಪ್ರೇಮ ಸಂಬಂಧಕ್ಕೆ ಫುಲ್ ಸ್ಟಾಪ್ ಬೀಳುತ್ತದೆ. ಆದ್ದರಿಂದ ಜಗಳ-ವಾದ ಎಲ್ಲ ಬಿಟ್ಟುಬಿಡಿ. ಒಂದಿಷ್ಟು ಪ್ರಬುದ್ಧತೆಯಿಂದ ವರ್ತಿಸಿ.

ಈಗಲೇ ಸಂಪಾದಿಸಬೇಕು. ಜಾಸ್ತಿ ಕೆಲಸ ಮಾಡಬೇಕು ಎಂಬ ಹುಕಿಗೆ ಬಿದ್ದು ಸಂಗಾತಿ ಕಡೆಗೆ ಫೋಕಸ್ ಕಡಿಮೆ ಆಗುತ್ತದೆ. ಇತ್ತೀಚೆಗೆ ನನ್ನ ಮೇಲೆ ಪ್ರೀತಿಯೇ ಇಲ್ಲ ಎಂಬ ಕಂಪ್ಲೇಂಟ್ ಕೇಳಿಬರುತ್ತದೆ. ಜತೆಗೆ ನಿಮ್ಮ ಸಂಗಾತಿಯೂ ಒಂದಿಷ್ಟು ಬಿಡುವಿಲ್ಲದ ಕೆಲಸದಲ್ಲಿ ತೊಡಗಿ ಪ್ರೀತಿ ಎಂಬ ನದಿಯೇ ಬತ್ತಿ ಹೋದಂತೆ ಭಾಸವಾಗುತ್ತದೆ. ವರ್ಷದ ಕೊನೆಗೆ ಮನೆ ಖಾಲಿ ಮಾಡಬೇಕು, ಖರ್ಚು ಹೆಚ್ಚಾಯಿತು, ಅನಾರೋಗ್ಯ ಅಂತ ಬೇರೆ ಒಂದಿಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮಕರ

ಮಕರ

ನೀವು ಈ ವರ್ಷ ಅಧ್ಯಾತ್ಮ ಮತ್ತೊಂದು ಅಂತ ಪ್ರೀತಿಯಿಂದಲೇ ಮಾರು ದೂರ ಹೋಗುವ ಸಮಯ. ವಿವಾಹ-ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತೀರಿ. ಇದರಿಂದ ಸಂಗಾತಿ ಜತೆಗೆ ಘರ್ಷಣೆ ಆಗುತ್ತದೆ. ವರ್ಷದ ಮಧ್ಯದಲ್ಲಿ ವೈಯಕ್ತಿಕ ಸಂಬಂಧದಲ್ಲಿ ಬಿರುಕೋ ಬಿರುಕು ಕಾಣಿಸಿಕೊಳ್ಳುತ್ತದೆ. ವಿಪರೀತ ಪ್ರಯಾಣ, ಕೆಲಸ ಅಂತ ಹಚ್ಚಿಕೊಂಡು ಮದುವೆಯ ಬಂಡಿ ಪ್ರೀತಿ ಎಂಬ ತೈಲವಿಲ್ಲದೆ ಕಂಗಾಲಾಗುತ್ತದೆ.

ನಿಮ್ಮ ಸಹೋದ್ಯೋಗಿಗಳ ಜತೆಗಿನ ಸಂವಹನ ಚೆನ್ನಾಗಿರುತ್ತದೆ. ಹೊಸ ವ್ಯಾಪಾರ ಮಾಡೋಣ, ಒಂದಿಷ್ಟು ದುಡ್ಡು ಮಾಡೋಣ ಅಂತಲೇ ಮನಸ್ಸು ಹರಿದಾಡುತ್ತದೆ. ವೈಯಕ್ತಿಕ ಜೀವನದಲ್ಲಿ ಸಾರ ಕಳೆದುಕೊಂಡಂತಾಗುತ್ತದೆ. ಪ್ರೇಮ ಜೀವನವೂ ನೀರಸ ಆಗುತ್ತದೆ. ಪ್ರಣಯಕ್ಕೆ ಅವಕಾಶವೇ ಸಿಗುವುದಿಲ್ಲ.

ಕುಂಭ

ಕುಂಭ

ಹೊಸ ಸಂಬಂಧಗಳ ಕಡೆಗೆ ಮನಸ್ಸು ಹರಿಯುತ್ತದೆ. ಸ್ನೇಹಿತರು ಅಥವಾ ಸಹೋದ್ಯೋಗಿಗಳ ಮಧ್ಯೆ ಪರಸ್ಪರ ಆಕರ್ಷಣೆ ಹೆಚ್ಚಾಗುತ್ತದೆ. ಅದು ಪ್ರೀತಿಗೆ ತಿರುಗುವ ಸಾಧ್ಯತೆಗಳಿವೆ. ವೈಯಕ್ತಿಕ ಜೀವನದಲ್ಲಿ ಸುಖ ಕಾಣುತ್ತೀರಿ. ವಿದೇಶದ ಉದ್ಯೋಗಕ್ಕೆ ತೆರಳಬೇಕು ಎಂಬ ಉದ್ದೇಶ ಇರುವವರಿಗೆ ಇದು ಸಕಾಲ. ಉದ್ಯೋಗ ಜೀವನದಲ್ಲಿ ಪ್ರಗತಿ ಇದೆ. ವಿದೇಶಿ ಮೂಲದ ವ್ಯಕ್ತಿಯೊಂದಿಗೆ ಪ್ರಣಯ ಜೀವನ ನಡೆಸುವ ಸಾಧ್ಯತೆಯಿದೆ.

ವೈವಾಹಿಕ ಜೀವನ ಸ್ಥಿರವಾಗಿರುತ್ತದೆ. ವರ್ಷದ ಮಧ್ಯದಲ್ಲಿ ಎಚ್ಚರವಾಗಿರಿ. ಸಂಬಂಧದ ಮಧ್ಯೆ ಕಂದಕ ಕಾಣಿಸುತ್ತದೆ. ಸಂಬಂಧದಲ್ಲಿರುವ ಜೋಡಿಗಳು, ವಿವಾಹಿತರು ನಾಟಕ, ಸಾಹಿತ್ಯ ಕಮ್ಮಟ, ಪ್ರವಾಸ ಅಂತ ಚೆನ್ನಾಗಿ ಸುತ್ತಾಡುತ್ತೀರಿ. ಈ ನೆನಪಿನಲ್ಲಿ ಜೀವನ ಮತ್ತಷ್ಟು ಖುಷಿ ಎನಿಸುತ್ತದೆ.

ಮೀನ

ಮೀನ

ವೈಯಕ್ತಿಕ ಜೀವನ ಜಂಜಾಟ-ಫೈಟಿಂಗ್ ಗಳು ವಿವಾಹಿತರು ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ. ಭಾವನಾತ್ಮಕ ತಾಕಲಾಟಕ್ಕೆ ಸಿಲುಕಿ ಅಯ್ಯಯ್ಯೋ ಎಂದು ಕೂಗುವಂತಾಗುತ್ತದೆ. ಶಕ್ತಿಯೆಲ್ಲ ಬಸಿದು ಅಪೌಷ್ಟಿಕ ಪ್ರೇಮಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತೀರಿ. ಭಿನ್ನಾಭಿಪ್ರಾಯ ಹಾಗೂ ಜಗಳದ ಕಾರಣಕ್ಕೆ ಪ್ರಣಯ ಜೀವನಕ್ಕೆ ತಡೆ ಎದುರಾಗುತ್ತದೆ. ವರ್ಷದ ಕೊನೆಯ ಕೆಲವು ತಿಂಗಳಲ್ಲಿ ಸರಿ ಹೋಗುತ್ತದೆ.

ಏಕಕಾಲಕ್ಕೆ ಹಲವು ಕೆಲಸ ಬದಲಿಸುವಂತಾಗುತ್ತದೆ. ಈ ಗೊಂದಲಕ್ಕೆ ಬಿದ್ದು ಸಂಗಾತಿಗೆ ಸಮಯ ಕೊಡಲಾಗುವುದಿಲ್ಲ. ಅವರಿಗೆ ನೀವು ಗೌರವ ಕೊಡುತ್ತಿಲ್ಲ ಎಂಬ ತಕರಾರು ಕೇಳಿಬರುತ್ತದೆ. ಇನ್ನು ಒಂಟಿಯಾಗಿರುವವರಿಗೆ ಸರಿಯಾದ ಪ್ರೀತಿ ಸಿಗುವುದಿಲ್ಲ. ಇದೇ ಬೇಸರದಲ್ಲಿ ಒಂಟಿಯಾಗಿ ಎಲ್ಲೆಂದರಲ್ಲಿ ಸುತ್ತುತ್ತೀರಿ. ಅನುಮಾನಗಳಿಂದ ಮನಸ್ಸು ಹಾಳು ಮಾಡಿಕೊಳ್ಳದಿರಿ. ವಿವಾಹಿತರ ಪ್ರಣಯ ಜೀವನ ಆಹಾ ಓಹೋ ಎಂಬಂತೆ ಇರಲಿದೆ.

English summary
Love, marriage yearly Predictions for 12 zodiac signs : Love, marriage predictions in Kannada language for 2018 by renowned Karnataka astrologer Pandit Shankar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X