• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ಯಾ ರಾಶಿಯ ವರ್ಷಫಲ ಮತ್ತು ಪರಿಹಾರೋಪಾಯಗಳು

By ನಾಗನೂರಮಠ ಎಸ್ಎಸ್
|

ಉಗ್ರನರಸಿಂಹರೆಂದೇ ಖ್ಯಾತಿ ಪಡೆದ ಸಿಂಹ ರಾಶಿಯವರ ವರ್ಷ ಫಲದ ಬಗ್ಗೆ ತಿಳಿದುಕೊಂಡ ಕನ್ಯಾ ರಾಶಿಯವರು ಈಗ ತಮ್ಮ ವರ್ಷಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಸಮಯವಿದು. ಅಂತೂ ಇಂತೂ ಸಾಡೇಸಾತಿಯ ಸುದೀರ್ಘ ಹೊಡೆತದಿಂದ ಪಾರಾಗಿ ಬಂದ ಈ ರಾಶಿಯವರು ಈಗ ಸಲೀಸಾಗಿ ಉಸಿರಾಡುತ್ತಿದ್ದಾರೆ ಎನ್ನಬಹುದು.

ಸಾಡೇಸಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕನ್ಯಾ ರಾಶಿಯವರ ಬಳಿ ಕೇಳಿ ತಿಳಿದುಕೊಳ್ಳಬಹುದು ಉಳಿದ ರಾಶಿಗಳವರು. ಹೆಂಗಿರತ್ತೇ ಶನಿದೇವನ ಹೊಡೆತ ಎಂದು. ಯಾಕೆಂದರೆ ಈಗಷ್ಟೇ ಸಾಡೇಸಾತಿಯ ಹೊಡೆತದಿಂದ ಪಾರಾಗಿ ಬಂದಿದ್ದಾರೆ ಈ ರಾಶಿಯವರು. ಆದರೆ ಕನ್ಯಾ ರಾಶಿಯವರು ಚಿಂತಿಸಬೇಕಿಲ್ಲ. ಇನ್ನು ಶನಿದೇವನು ನಿಮಗೆ ಅನುಕೂಲ ಮಾಡಿಕೊಡಲಿದ್ದಾನೆ ಇನ್ನೆರಡು ವರ್ಷ.

ಇದೇ ರೀತಿ ಈ ವರ್ಷದ ಆಗಸ್ಟ್ ತಿಂಗಳವರೆಗೆ ತುಂಬಾ ಸುಖಮಯ ಸಮಯವೆನ್ನಬಹುದು. ಮುಖ್ಯವಾದ ಕೆಲಸಗಳನ್ನು ಯೋಜನಾಬದ್ಧವಾಗಿ ಮಾಡಿಕೊಂಡವರಿಗೆ ಲಾಭ ಕಟ್ಟಿಟ್ಟ ಬುತ್ತಿ. ಯಾವುದಕ್ಕೂ ಸ್ವಲ್ಪ ಲೀವರ್ ಬಗ್ಗೆ ಚಿಂತೆ ಇರಲಿ. ಅಲ್ಲಿ ಇಲ್ಲಿ ಸಿಕ್ಕ ಸಿಕ್ಕದ್ದನ್ನು ತಿನ್ನದೇ ಪೌಷ್ಠಿಕ ಮತ್ತು ಸ್ವಚ್ಛತೆ ಇರುವ ಸ್ಥಳಗಳಲ್ಲಿ ಹೊಟ್ಟೆ ತುಂಬಿಸಿಕೊಳ್ಳಿ. ಅಪ್ಪಿತಪ್ಪಿಯೂ ಬೀದಿ ಬದಿಯ ವ್ಯಾಪಾರಿಗಳಲ್ಲಿ ತಿಂಡಿ ತಿನಿಸುಗಳನ್ನು ತಿನ್ನಬೇಡಿ. ತಿಂದರೆ ಆಗುವ ತೊಂದರೆಗಳಿಗೆ ಮತ್ತು ಆಸ್ಪತ್ರೆ ಬಿಲ್ ಕಟ್ಟಲು ಅವರು ಬರಲ್ಲ ನಿಮ್ಮ ಮನೆಯವರು ಬರಬೇಕು ನೆನಪಿರಲಿ. [ನಕ್ಷತ್ರ ಸರಣಿ : ಪಾರದರ್ಶಕ ವ್ಯಕ್ತಿತ್ವದ ಚಿತ್ರಾ ನಕ್ಷತ್ರದವರು]

ಇನ್ನು, ಮೊದಲೇ ಕನ್ಯೆಯ ಚಿಹ್ನೆ ಹೊಂದಿರುವ ಕನ್ಯಾ ರಾಶಿಯವರು ಅಕ್ಷರಶಃ ನಾಚಿಕೆ ಸ್ಬಭಾವದವರು. ಕನ್ಯೆಯು ಹೇಗೆ ನಯ ನಾಜೂಕಿನಿಂದ ಇರುತ್ತಾಳೋ ಅದೇ ತರಹ ಈ ರಾಶಿಯವರ ಗುಣ ಮತ್ತು ಸ್ವಭಾವ. ಇದು ಕೆಲವರಿಗೆ ದಬ್ಬಾಳಿಕೆ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ಈ ಎರಡು ವರ್ಷ ಚಂಡಿಯಂಗೆ ಇರುವುದನ್ನು ಕಲಿಯಬೇಕು. ದುಷ್ಟರೆಂದು ಗೊತ್ತಾದರೆ ಕೂಡಲೇ ಚಂಡಿಯ ಅವತಾರ ತೋರಿಸಬೇಕು. ಆವಾಗ ಗೊತ್ತಾಗುತ್ತದೆ ಅವರಿಗೆ ಕನ್ಯಾ ರಾಶಿಯವರು ಹಂಗೂ ಸೈ ಹಿಂಗೂ ಸೈ ಎಂದು.

ಬುಧ ಅಧಿಪತಿಯಾಗಿರುವುದರಿಂದ ಬರೀ ಹಣದ ಬಗ್ಗೆನೇ ಚಿಂತಿಸುವ ಇವರು ಈ ವರ್ಷ ಹಳದಿ ಮತ್ತು ಹಸಿರು ಬಣ್ಣದ ವಸ್ತುಗಳನ್ನು ಮತ್ತು ವಸ್ತ್ರಗಳನ್ನು ಹೆಚ್ಚಾಗಿ ಬಳಸಬೇಕು. ಸೋಮವಾರ ಮತ್ತು ಬುಧವಾರ ಹೆಚ್ಚು ಶುಭಫಲಗಳು ಸಿಗುವುದರಿಂದ ಮುಖ್ಯವಾದ ಕೆಲಸ ಕಾರ್ಯಗಳನ್ನು ಅಂದೇ ಮಾಡಿಕೊಳ್ಳಬೇಕು ಪೂರ್ವನಿಯೋಜಿಸಿಕೊಂಡು. [ಕನ್ಯಾ ರಾಶಿಗೆ ಸಾಡೇಸಾತಿ ಕೊನೆ ಹಂತ]

ಯಾರೊಂದಿಗೆ ವ್ಯವಹಾರ : ಕರ್ಕ ರಾಶಿಯವರೊಂದಿಗೆ ಅಪ್ಪಿತಪ್ಪಿಯೂ ವ್ಯವಹಾರ ಇಟ್ಟುಕೊಳ್ಳಬಾರದು. ಸ್ನೇಹವಿದ್ದರಂತೂ ಎಚ್ಚರಿಕೆಯಿಂದಲೇ ಇರಬೇಕು. ಆದರೆ, ಮೇಷ, ಮಿಥುನ ಮತ್ತು ಸಿಂಹ ರಾಶಿಯವರು ಹೆಚ್ಚಿನ ಸಹಕಾರ ಮನೋಭಾವ ಹೊಂದಿರುತ್ತಾರೆ ನಿಮ್ಮೊಂದಿಗೆ. ಹೀಗಾಗಿ ಅವರೊಂದಿಗೆ ನಿರ್ಭಯದಿಂದ ಇದ್ದರೆ ತೊಂದರೆ ಏನೂ ಇಲ್ಲ.

ಯಾಕೆಂದರೆ ಈಗಿನ ಈ ಕಾಲದಲ್ಲಿ ನಂಬಿಕಸ್ಥರನ್ನು ಹುಡುಕುವುದೇ ಕಷ್ಟವಿರುವಾಗ ನಂಬಿಕಸ್ಥರು ಮತ್ತು ನಿಯತ್ತಿನವರು ಎಂದು ಗೊತ್ತಾದರೆ ಅವರೊಂದಿಗೆ ನಮ್ಮ ಲಾಭಕ್ಕಾಗಿ ವ್ಯವಹಾರ ಇಟ್ಟುಕೊಂಡರೆ ತಪ್ಪೇನಿಲ್ಲ. ಆದರೂ ಶನಿದೇವನು ಎರಡು ವರ್ಷದವರೆಗೆ ಈ ರಾಶಿಯವರಿಗೆ ಕೃಪಾಕಟಾಕ್ಷ ಕೊಡುವುದರಿಂದ ಭಯ ಬಿಟ್ಟಾಕಿ, ನಿರ್ಭೀತಿಯಿಂದ ಜೀವನವನ್ನು ನಡೆಸಿಕೊಂಡು ಹೋಗಬೇಕು.

ಬೇರೆಯವರ ತಪ್ಪುಗಳನ್ನು ಹುಡುಕುತ್ತ ಅವರಿಗೆ ಮತ್ತು ಅವರಿವರಿಗೆ ಹೇಳುವುದನ್ನು ಇನ್ಮೇಲೆ ಬಿಡಬೇಕು. ಏನಿದ್ದರೂ ವ್ಯಾವಹಾರಿಕವಾಗಿ ಇರುವುದನ್ನು ಕಲಿತುಕೊಂಡು ನೆಗೆಟಿವ್ ಥಿಂಕಿಂಗ್ ಗಳನ್ನು ಬಿಡಬೇಕು. ನೆಗೆಟಿವ್ ಥಿಂಕಿಂಗ್ ಗಳಿಂದಲೇ ಹೆದರಿಕೆ, ಭಯ ಮತ್ತು ಚಿಂತೆಗಳು ಹೆಚ್ಚುತ್ತವೆ ಗೊತ್ತಿರಲಿ. ಬೆಳಗ್ಗೆ ಎದ್ದ ತಕ್ಷಣವೇ ಇದ್ದ ಹುರುಪು ದಿನಂಪೂರ್ತಿ ಹೆಚ್ಚಿಸಿಕೊಳ್ಳುತ್ತ ಕ್ರೀಡಾಮನೋಭಾವದಿಂದ ದಿನವಿಡೀ ಇದ್ದರೆ ರಾತ್ರಿ ಕಣ್ತುಂಬ ನಿದ್ದೆ ಬಂದು ದೇಹವೂ ಆರೋಗ್ಯಯುತವಾಗಿರುತ್ತದೆ. [ಕನ್ಯಾ ರಾಶಿಯವರಿಗೆ ಹೆಗಲಿನಿಂದ ಇಳಿಯುತ್ತಿರುವ ಶನಿರಾಜ]

ಗಣೇಶನ ಸ್ಟಿಕ್ಕರ್ ಬೇಡವೇ ಬೇಡ : ಗಣಪನನ್ನು ಹೆಚ್ಚಾಗಿ ಹಚ್ಚಿಕೊಳ್ಳುವ ಈ ರಾಶಿಯವರು ಕನಿಷ್ಠ ಗಣಪನ ಪೆಂಡೆಂಟ್ ಅಥವಾ ಲಾಕೆಟ್ ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಕೆಲವರಂತೂ ತಮ್ಮ ವಸ್ತುಗಳಿಗೆ ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಗಣಪನನ್ನು ಇಟ್ಟಿರುತ್ತಾರೆ ಅಥವಾ ಸ್ಟೀಕರ್ ಅಂಟಿಸಿರುತ್ತಾರೆ. ಇದು ತಪ್ಪು. ಗಣಪನನ್ನು ದೇವಸ್ಥಾನದಲ್ಲಿ ಮತ್ತು ಮನೆಯ ದೇವರ ಕೋಣೆಯಲ್ಲಿ ಮಾತ್ರ ಪೂಜಿಸಬೇಕು. ಸಿಕ್ಕ ಸಿಕ್ಕಲ್ಲಿ ಹಚ್ಚಿ ಅವನನ್ನು ಅನಾಥನನ್ನಾಗಿಸಬಾರದು.

ನನಗೆ ಕಬಾಬ್ ಅಂದ್ರೆ ಇಷ್ಟ ಎಂದುಕೊಂಡು ಅದರ ಚಿತ್ರಗಳನ್ನು ಎಲ್ಲೆಡೆ ಹಚ್ಚುತ್ತೀರಾ? ಅಥವಾ ಅದನ್ನು ಯಾವಾಗಲೂ ಜೊತೆಯಲ್ಲಿ ಇಟ್ಟುಕೊಂಡಿರುತ್ತಾರಾ? ಇಲ್ಲವಲ್ಲಾ ತಾನೇ? ಹೀಗೆಯೆ ಗಣಪನನ್ನು ಗೌರವಯುತವಾಗಿ ಸೂಕ್ತ ಸ್ಥಳದಲ್ಲಿ ಮಾತ್ರ ಪೂಜಿಸಬೇಕು. ಗೌರವ ಕೊಟ್ಟು ಗೌರವ ಪಡೆದುಕೊಳ್ಳಬೇಕು. ಕೆಲವರು ಗಾಡಿಯ ಮೇಲೆ ಗಣಪನ ಚಿತ್ರಗಳನ್ನು ಹಚ್ಚಿರುತ್ತಾರೆ. ಹಚ್ಚಿದರೆ ತಪ್ಪೇನಿಲ್ಲ. ಆದರೆ ಆ ಚಿತ್ರವನ್ನು ನಿರಂತರ ಸ್ವಚ್ಛ ಮಾಡುವವರು ಯಾರು?

ಮನೆಯಲ್ಲಿನ ಅಥವಾ ದೇವಸ್ಥಾನದಲ್ಲಿನ ಗಣಪನನ್ನು ನಿತ್ಯ ಪೂಜಿಸಲಾಗುತ್ತದೆ. ಆದರೆ ಸ್ಟಿಕ್ಕರ್ ನಲ್ಲಿಯ ಗಣಪನನ್ನು ಮಡಿವಂತಿಕೆಯಿಂದ ಪೂಜಿಸುವವರು ಯಾರು ಹೇಳಿ ನೋಡೋಣ. ಅಲ್ಲಾ ಸಾಮೀ, ದೇವರು ಮನಸ್ಸಿನಲ್ಲಿದ್ದಾನೆ, ಪೂಜೆ ಮಾಡುವ ಅವಶ್ಯಕತೆ ಏನಿದೆ ಎನ್ನುವವರಿಗೆ, ಸಾಮೇರು, ಹಾಗಾದ್ರೆ ಮನಸ್ಸಿನಲ್ಲಿಯೇ ಗಣಪನ ಚಿತ್ರ ನೋಡು, ಅಲ್ಲಿ ಇಲ್ಲಿ ಸಿಕ್ಕ ಸಿಕ್ಕಲ್ಲಿ ಚಿತ್ರಗಳನ್ನು ಹಚ್ಚುವುದು ಬೇಡ ಎನ್ನುತ್ತಾರೆ. ಕೆಲವರು ನಮ್ಮ ಧರ್ಮದವರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡು ಇಂಥವುಗಳನ್ನು ಪ್ರಿಂಟ್ ಮಾಡಿ ತಾವು ಶ್ರೀಮಂತರಾಗುತ್ತಾರೆ. ಇದು ಗೊತ್ತಿರಲಿ ಎನ್ನುತ್ತಾರೆ ಸಾಮೇರು. [ಸಾಡೇಸಾತಿ ಎಂದರೇನು, ಏನಿದರ ಮರ್ಮ?]

ಅದೃಷ್ಟದ ಸಂಖ್ಯೆಗಳು : ಸಂಖ್ಯೆಯಲ್ಲಿ ಅದೃಷ್ಟ ಹುಡುಕುವವರಿಗೆ 2, 3, 5, 6, 7 ನಂಬರ್ ಮೇಲೆ ನಂಬಿಕೆ ಇಡಬಹುದು. ತಿಂಗಳಿನ 5, 14 ಮತ್ತು 23ನೇ ತಾರೀಖಿನ ದಿನಗಳಂದು ಆಗುವ ಶುಭಫಲಗಳನ್ನು ನೋಟ್ ಮಾಡಿಟ್ಟುಕೊಂಡು ಮುಂದಿನ ದಿನಗಳಲ್ಲಿ ಅವುಗಳನ್ನು ಫಾಲೋ ಮಾಡಬಹುದು. ಹೆಚ್ಚಾಗಿ ಹೊಂದಾಣಿಕೆ ಸ್ವಭಾವ ಹೊಂದಿರುವ ಈ ರಾಶಿಯವರು, ಕಲೆಯಲ್ಲೂ ವಿಶಿಷ್ಟ ಆಸಕ್ತಿ ಹೊಂದಿರುತ್ತಾರೆ. ಹೀಗಾಗಿ ಸ್ವಲ್ಪ ಬುದ್ಧಿಯಲ್ಲಿ ಒಂದೇ ತರನಾಗಿದ್ದರೆ ಗುಣದಲ್ಲಿ ಮಾತ್ರ ದ್ವಿಗುಣ ಹೊಂದಿರುತ್ತಾರೆ. ಅಂದರೆ ಚಂಚಲತೆ ಜಾಸ್ತಿ. ಒಬ್ಬರು ಮುಂಜಾನೆ ಇಷ್ಟವಾದರೆ ಸಂಜೆಯಷ್ಟೊತ್ತಿಗೆ ಅವರನ್ನೇ ವೈರಿಗಳಂತೆ ನೋಡಲಾರಂಭಿಸುತ್ತಾರೆ. ದಕ್ಷಿಣ ದಿಕ್ಕಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟರೆ ಒಳ್ಳೆಯದು.

ಶನಿಬಲ ಅಪಾರವಾಗಿರುವುದರಿಂದ ಧೈರ್ಯದಿಂದ ಮುನ್ನುಗ್ಗಿ ಹಿಡಿದ ಕೆಲಸಗಳನ್ನು ಹಠದಿಂದ ಮಾಡಿ ಮುಗಿಸಿಕೊಳ್ಳಬೇಕು. ಈ ಸಮಯ ಮತ್ತೆ ಬರಲ್ಲ. ಹಗಲಿರುಳು ಕೆಲಸ ಮಾಡಿ ಸಾಕಷ್ಟು ಆಸ್ತಿ-ಪಾಸ್ತಿ ಸಂಪಾದಿಸಿಕೊಳ್ಳುವ ಸಮಯವಿದು. ಇದನ್ನು ಅರಿತುಕೊಂಡು ಈ ರಾಶಿಯವರು ಬಾಳ್ವೆ ಮಾಡಲು ಕಲಿಯಬೇಕು. ಆದರೆ, ನಿಮಗೆ ಬಂದಿರುವ ಈ ಉತ್ತಮ ಸಮಯವನ್ನು ಎಲ್ಲರೊಂದಿಗೆ ಹೇಳುತ್ತ ತಿರುಗದೇ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತ ಹೋಗಬೇಕು. ತಾನಾಗಿಯೇ ಗೊತ್ತಾಗುತ್ತದೆ ಉಳಿದವರಿಗೆ ನಿಮ್ಮ ಟೈಮ್ ಎಷ್ಟು ಚೆನ್ನಾಗಿದೆ ಎಂದು. ಆವಾಗ ತಾವಾಗಿಯೇ ಬರುತ್ತಾರೆ. ಸಕ್ಕರೆ ಇದ್ದಲ್ಲಿ ಇರುವೆ ಹೇಗೆ ಮುತ್ತಿಕೊಳ್ಳುತ್ತದೆಯೋ ಹಾಗೆ.

ಪರಿಹಾರೋಪಾಯಗಳು : ಪ್ರತಿ ಗುರುವಾರ ಗುರುಗಳ ಸನ್ನಿಧಿಗೆ ಭೇಟಿ ನೀಡಬೇಕು. ಉದಾಹರಣೆಗೆ ಗುರುರಾಘವೇಂದ್ರರು, ಸಾಯಿಬಾಬಾ ಮತ್ತಿತರರ ಸಾಧುಸಂತರು ಅಥವಾ ಸಾಮೇರ ಹತ್ತಿರ. ಶಂಭೋಲಿಂಗನಿಗೆ ಗುರುವಾರದಂದು ಸಾಧ್ಯವಾದರೆ ಅಥವಾ ಅನುಕೂಲ ಮಾಡಿಕೊಂಡು ರುದ್ರಾಭಿಷೇಕ ಮಾಡಿಸಿ. ಈ ಎರಡು ವರ್ಷ ಗುಂಡು-ತುಂಡು ಟಚ್ ಮಾಡಬೇಡಿ. ಗುರುಮಂತ್ರ ಹೆಚ್ಚು ಜಪಿಸುವುದನ್ನು ಕಲಿತುಕೊಳ್ಳಿ. ಗೊತ್ತಿಲ್ಲದಿದ್ದರೆ ಸಾಮೇರಿಗೆ ಕೇಳಿ ಹೇಳಿ ಕೊಡುತ್ತೇನೆ.

ಮುಂದಿನ ಲೇಖನದಲ್ಲಿ : ತುಲಾ ರಾಶಿಯವರು ವರ್ಷಭವಿಷ್ಯ ಮತ್ತು ಪರಿಹಾರೋಪಾಯಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yearly horoscope 2016 for Virgo zodiac sign. Astrologer SS Naganurmath explains what lies ahead of Virgo people. These people have just passed through Sade Sati and most difficult part of their life. So, they know to lead a comfortable life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more