ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015 ವರ್ಷ ಭವಿಷ್ಯ : ತುಲಾ ರಾಶಿಗೆ ಇನ್ನೂ ಬಾಕಿಯಿದೆ!

By ನಾಗನೂರಮಠ ಎಸ್.ಎಸ್.
|
Google Oneindia Kannada News

ಚಿತ್ತ ನಕ್ಷತ್ರದ 3, 4ನೇ ಚರಣ, ಸ್ವಾತಿ ಮತ್ತು ವಿಶಾಖಾ ನಕ್ಷತ್ರದ 1, 2, 3ನೇ ಚರಣದಲ್ಲಿ ಜನಿಸಿದವರದು ತುಲಾ ರಾಶಿ. ರ, ರಿ, ರು, ರೆ, ರೊ, ತ, ತಿ, ತು, ತೆ ಎಂಬಕ್ಷರಗಳಲ್ಲಿ ಈ ರಾಶಿಯವರಿಗೆ ಜನ್ಮನಾಮ ಇಡಬೇಕಾಗುತ್ತದೆ.

ತುಲಾ ರಾಶಿಯವರಿಗೆ 2015ನೇ ಹೊಸ ವರ್ಷದ ಮಧ್ಯಭಾಗದವರೆಗೂ ಈ ಹಿಂದಿನಂತೆಯೇ ಮುಂದುವರೆದುಕೊಂಡು ಹೋಗುತ್ತದೆ. ಜುಲೈ ನಂತರ ಸ್ವಲ್ಪ ಗುರುಬಲದಿಂದ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆದರೆ, 6 ವರ್ಷ ಕಾಲ ಶನಿಮಹಾತ್ಮನ ಚಕ್ರವ್ಯೂಹದಲ್ಲಿ ಸಿಲುಕಿದ್ದೀರಿ. ಇನ್ನು ಮೂರು ವರ್ಷಗಳ ಕಾಲ ಶನಿದೇವನ ಅಧೀನದಲ್ಲೇ ನಿಮ್ಮ ಜೀವನವಿದೆ. ಶನಿಪ್ರಭಾವ ಸಾಕಷ್ಟು ಗೊತ್ತಾಗಿದೆ. ಇನ್ನೂ ಗೊತ್ತು ಮಾಡಿಕೊಳ್ಳೋದು ತುಂಬಾ ಇದೆ. ಏಕೆಂದರೆ ಸಾಡೇಸಾತಿಯ ಕೊನೆಯ ಹಂತವನ್ನು ಮರಣ ಶನಿಯೆಂದು ಕೂಡ ಕರೆಯಲಾಗುತ್ತದೆ. ಅಂದರೆ, ಪಾಪದ ಕೊಡ ತುಂಬಿದವರಿಗೆ ಈಗ ತುಂಬಿ ಬಂತು ಎಂದೇ ಅರ್ಥ.

ಶನಿಕಾಟದ ಕಿರುಪರಿಚಯ ಮಾಡಿಕೊಳ್ಳಬೇಕೆನ್ನುವವರು, ಅಂದರೆ ಧನಸ್ಸು ರಾಶಿಯವರು ಈಗ ತುಲಾ ರಾಶಿಯವರನ್ನು ಕೇಳಿ ತಿಳಿದುಕೊಳ್ಳಬಹುದು. ತೆವಳುತ್ತ ಶನಿಪ್ರಭಾವದಲ್ಲಿಯೇ ಜೀವನ ಸಾಗಿಸುತ್ತಿರುವ ತುಲಾ ರಾಶಿಯವರು ತಮಗಾಗಿರುವ ಮಹಾತ್ಮನ ಪ್ರಹಾರವನ್ನು ವಿವರಿಸಬಹುದು.

ಶಂಭೋಲಿಂಗನ ಕಡೆಗಣಿಸದಿರಿ : ಅಲ್ಲಾ ಸಾಮೀ, "ಯಾರದು ಶಂಭೋಲಿಂಗ? ಅವನಿಗೂ ಶನಿಗೂ ಏನು ಸಂಬಂಧ" ಎಂದು ಕೇಳುವವರಿಗೆ, "ಶನಿಗೆ ಶಂಭೋಲಿಂಗನ ಆಶೀರ್ವಾದವೇ ಇದೆ, ಇದಕ್ಕೆಂದೇ ಅವನಿಗೆ ಶನೈಶ್ಚರ ಎಂದು ಕೂಡ ಕರೆಯಲಾಗುತ್ತದೆ. ಶಂಭೋಲಿಂಗನಿಗೇನಾದರೂ ಅಡ್ಡಾದಿಡ್ಡಿಯಾಗಿ ಅಂದರೆ ಮುಗೀತು. [ಶಿವನೆಂಬ ಅಂತಿಮ ನಿಲ್ದಾಣ]

Yearly horoscope and prediction 2015 for Libra

ಮೊದಲೇ ಉಗ್ರಪ್ರತಾಪಿಯವನು. ಮೂರನೇ ಕಣ್ಣು ಬಿಟ್ಟರೆ ಭಸ್ಮ. ಕೈಯಲ್ಲಿರುವ ತ್ರಿಶೂಲದಿಂದ ಚುಚ್ಚಿದರೆ ಕ್ಷಣದಲ್ಲೇ ಮರಣ. ಕೊರಳಲ್ಲಿ ಸರ್ಪ ಬೇರೆ. ಅದನ್ನು ಬಿಟ್ಟನೆಂದರೆ ದಿಕ್ಕೆಟ್ಟು ಓಡಿ ಓಡಿ ಉಸಿರುಕಟ್ಟಿ ಸಾಯುವ ಸ್ಥಿತಿ. ತಲೆಯಲ್ಲಿ ಗಂಗೆ. ನೀರಿನಲ್ಲಿ ಮುಳುಗಿದರೆ ಮೂರು ದಿನಗಳ ನಂತರವೇ ಮೇಲಕ್ಕೆ ಬರುವುದು. ಮುಕ್ಕಣ್ಣನ ವಾಹನ ಗೂಳಿ ಬೆನ್ನಟ್ಟಿದರೆ ಮುಗೀತು ಕೊಂಬಿನಲ್ಲಿ ನೇತಾಡಬೇಕಾಗುತ್ತದೆ. ವೀರಭದ್ರ ಶಂಭೋಲಿಂಗನ ಪರಮ ಶಿಷ್ಯ. ಅವನು ಬಂದರೆ ಮುಗೀತು ಖಡೇ ಖಡೇ ರುದ್ರ ಎಂದು ಕಾಲ ಕೆಳಗೆ ಹೊಸಕಿ ರುದ್ರನರ್ತನ ಮಾಡಲಾರಂಭಿಸುತ್ತಾನೆ. ಇಷ್ಟೆಲ್ಲ ಶಕ್ತಿವಂತನಾಗಿರುವ ಶಂಭೋಲಿಂಗನ ಬಗ್ಗೆ ಮಾತನಾಡುವವರು ಅವನಿರುವ ಜಾಗೆ ರುದ್ರಭೂಮಿಗೆ ಹೋಗಲು ರೆಡಿಯಾಗಿಯೇ ಇದ್ದಾರಲ್ಲ" ಎನ್ನುತ್ತಾರೆ ಸಾಮೇರು. ಹೇಗೆ ಹೋಗಬೇಕೋ ಎಂಬುದನ್ನು ಆಯ್ಕೆ ಮಾಡಿಕೊಂಡರೆ ಒಳ್ಳೇದು ಎನ್ನುತ್ತಾರೆ ಸಾಮೇರು.

ಇರಲಿ, ಇನ್ನು ತುಲಾ ರಾಶಿಯವರಿಗೆ ಸಾಡೇಸಾತಿಯ ಕೊನೆಯ ಹಂತದ ವಿವರ ತಿಳಿಸುವ ಮುನ್ನ ಗುರು ಗೋಚಾರ ಫಲದ ಬಗ್ಗೆ ವಿವರಿಸುವುದು ಮುಖ್ಯ. ಜುಲೈವರೆಗೂ ಸ್ವಲ್ಪ ಬಿಪಿ ಏರುವಂತಹ ಸನ್ನಿವೇಶ ಹೆಚ್ಚು ಸೃಷ್ಟಿಯಾಗುತ್ತಿರುತ್ತವೆ. ಅದ್ದರಿಂದ ದಿನಿತ್ಯದ ಜೀವನದಲ್ಲಿ ಅತೀ ಹೆಚ್ಚಿನ ಯೋಚನೆಯಲ್ಲಿಯೇ ಮುಳುಗದೆ ಸಂತಸದಿಂದಿರಬೇಕು. ಚಿಕ್ಕಪುಟ್ಟ ವಿಷಯಗಳಿಗೂ ತಲೆಕೆಡಿಸಿಕೊಂಡು ಕೊರಗುತ್ತ ಕುಳಿತುಕೊಳ್ಳುವುದು ಬಿಡಬೇಕು. ಹಣದ ಸಮಸ್ಯೆಯಾಗಿದೆ ಎಂದುಕೊಂಡು ಸಿಕ್ಕ ಸಿಕ್ಕವರಲ್ಲಿ ಜೀವನದ ತೊಂದರೆಗಳನ್ನು ಹೇಳಿಕೊಂಡು ತಿರುಗಬೇಕಿಲ್ಲ. ಏಕೆಂದರೆ ಇದನ್ನೇ ದುಷ್ಟರು ಬಂಡವಾಳ ಮಾಡಿಕೊಂಡು ನಿಮ್ಮನ್ನಾಳಾಗಿಸಿಕೊಳ್ಳಬಹುದು.

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ : ಆರೋಗ್ಯವೇ ಭಾಗ್ಯವೆನ್ನುವ ಮಾತಿನಂತೆ ಈ ಸಮಯದಲ್ಲಿ ಕಾಲಿಗೆ ಸಂಬಂಧಪಟ್ಟಂತೆ ರೋಗ-ರುಜಿನಗಳು ಬರುವುದರಿಂದ ಮೈತೂಕ ಇಳಿಸಿಕೊಳ್ಳಬೇಕು. ಓಡಾಡುವಾಗ ತುಂಬಾ ಹುಷಾರಾಗಿರಬೇಕು. ಅಮವಾಸ್ಯೆ ಮತ್ತು ಶನಿವಾರಗಳಂದು ದುಸ್ಸಾಹಸದ ಕೆಲಸ ಮಾಡಬಾರದು. ದುಷ್ಟರೊಂದಿಗೆ ಅಪ್ಪಿತಪ್ಪಿಯೂ ಕಾಣಿಸಿಕೊಳ್ಳಬಾರದು. ಅವರನ್ನು ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ದೂರವಿಡಬೇಕು. ಇಲ್ಲಾಂದ್ರೆ ಅವರೊಂದಿಗೆ ನೀವು ತಪ್ಪಿನಲ್ಲಿ ಪಾಲುದಾರರಾರಿಗೆ ಕೈಗೆ ಕಬ್ಬಿಣದಾಭರಣ ಹಾಕಿಸಿಕೊಳ್ಳಬೇಕಾಗುತ್ತದೆ ಹುಷಾರು.

ಜುಲೈ ನಂತರ ಗುರುಬಲ ಬರುವುದರಿಂದ ಹಣದ ವಿಷಯದಲ್ಲಿ ನೆಮ್ಮದಿಯ ಉಸಿರಾಟ ಮಾಡಬಹುದು. ಅಲ್ಲಿಯವರೆಗೂ ತಾಳ್ಮೆ ಅಗತ್ಯ. ಹೊಸ ಯೋಜನೆಗಳನ್ನು ಹಾಕಿಕೊಳ್ಳೋದು ಬೇಡ ಇವಾಗ್ಲೇ. ಆ ಸಮಯದಲ್ಲಿ ಕಂಕಣಭಾಗ್ಯಕ್ಕಾಗಿ ಕಾದಿರುವವರಿಗೆ ಶುಭಕರ. ಕೌಟುಂಬಿಕ ನೆಮ್ಮದಿ ಮತ್ತು ಸಂತಸದ ಸಮಯವದು.

ಆದರೆ, ಶನಿಯ ಸಾಡೇಸಾತಿಯು ಹಾಗೆಯೇ ಮುಂದುವರೆಯುತ್ತದೆ. ಸಾಮಾನ್ಯವಾಗಿ ಈ ಹಂತದಲ್ಲಿ ಸೋಮಾರಿತನ, ಆಲಸ್ಯತನ, ಕೆಟ್ಟವರ ಸಹವಾಸ, ದುಶ್ಚಟ ಮುಂತಾದವು ಮುಕುರುತ್ತವೆ. ಆದರೆ, ಇದನ್ನು ಅರ್ಥ ಮಾಡಿಕೊಂಡು ತುಲಾ ರಾಶಿಯವರು ತುಂಬಾ ಚಟುವಟಿಕೆಗಳಿಂದ ಇರಲು ಪ್ರಾರಂಭಿಸಬೇಕು. ಹಣದ ಕೊರತೆ ಇದೆಯೆಂದು ಅವರಿವರ ಬಳಿ ಗುಲಾಮರಂತಿರದೇ ಸ್ವಾಭಿಮಾನ ಬಿಟ್ಟುಕೊಡಬಾರದು.

ವಾಹನ ಚಲಾಯಿಸುವಾಗ ಎಚ್ಚರ : ಚಿಕ್ಕಪುಟ್ಟ ವಿಷಯಕ್ಕೂ ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತದೇ ರಾಜೀ ಸಂಧಾನದಲ್ಲೇ ಮುಗಿಸಿಕೊಳ್ಳಬೇಕು. ಕುಟುಂಬದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಇಲ್ಲಾಂದ್ರೆ ಅವರಿಗೂ ಸುಖವಿಲ್ಲ, ನಿಮಗೂ ಸುಖವಿಲ್ಲ ಎಂಬಂತಾಗುತ್ತದೆ. ಪದೇ ಪದೇ ಆರೋಗ್ಯ ಕೈಕೊಡುವುದು ಮತ್ತು ಸುಮ್ನೆ ಸುಮ್ನೇ ಅಪಘಾತವಾಗುವ ಘಟನೆಗಳು ನಡೆಯುತ್ತಿದ್ದರೆ ಕೂಡಲೇ ಶನಿಶಾಂತಿ ಮಾಡಿಸಿಕೊಳ್ಳಬೇಕು.

ವಾಹನವನ್ನು ಅತೀ ಜಾಗರೂಕತೆಯಿಂದ ಓಡಿಸಬೇಕು. ಒಟ್ಟಿನಲ್ಲಿ ಸಾಡೇಸಾತಿ ಮುಗಿಯುವವರೆಗೂ ಎಷ್ಟು ಜಾಗೃತೆ ವಹಿಸಿದರೂ ಕಮ್ಮೀನೆ. ಆದ್ದರಿಂದ ಮನೆಯವರಿಗೂ ಕೂಡ ಹೇಳಿಡಬೇಕು ನಿಮ್ಮ ಪರಿಸ್ಥಿತಿಯನ್ನು. ಇನ್ನು ಖರ್ಚಿಗಾಗಿ ಪರದಾಡುವ ಸಂದರ್ಭ ಬಂದರೆ, ದುಡಿದ ದುಡ್ಡನ್ನು ಉಳಿತಾಯ ಮಾಡಲಾರಂಭಿಸಬೇಕು.

ಪರರ ಬಗ್ಗೆ ನೀಚಾಸಕ್ತಿ ಬಿಡಬೇಕು. ಒಮ್ಮೊಮ್ಮೆ ಕೆಲವರು ಹುರುದುಂಬಿಸುತ್ತಾರೆ ದುಷ್ಟರು. ಆದರೆ ಅದಕ್ಕೆ ಬಗ್ಗದೇ ನಿಮ್ಮತನ ಬಿಟ್ಟುಕೊಡಬೇಡಿ. ಅವರಿಗೆ ಮಾತ್ರ ನಾನು, ನಾನು ಮಾತ್ರ ಅವರಿಗೆ ಎಂಬುದನ್ನು ಮನದಲ್ಲಿಟ್ಟುಕೊಂಡರೆ ಒಳ್ಳೇದು. ಇನ್ನು ದುಶ್ಚಟಗಳನ್ನು ಬಿಟ್ಟಿಲ್ಲದಿದ್ದರೆ ಈ ವರ್ಷ ಬಿಡಲು ಸುಸಮಯ. ಅದೇ ರೀತಿ ಶಂಭೋಲಿಂಗನ ಆರಾಧನೆ ಹೆಚ್ಚಿನ ಬಲ ನೀಡುತ್ತದೆ. ಸಾಧ್ಯವಾದರೆ ಶನಿವಾರಗಳಂದು ಕರಿ ಎಳ್ಳು ಮೈಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡಿ.

ಅತ್ಯಂತ ಚಾಣಾಕ್ಷ, ವ್ಯಾಪಾರಿ ಬುದ್ಧಿ ಮತ್ತು ಪ್ರಾಮಾಣಿಕರಾಗಿರುವ ತುಲಾ ರಾಶಿಯವರು ಮೊದಲು ಹೊಟ್ಟೆಕಿಚ್ಚಿನ ಗುಣವನ್ನು ಬಿಡಬೇಕು. ಜೊತೆಗೆ ಸ್ವಲ್ಪ ಕುಟಿಲ ಬುದ್ಧಿಯೂ ಒಳಗಿಂದೊಳಗೆ ಇರುತ್ತದೆ ಇವರಿಗೆ. ಈ ದುರ್ಗುಣಗಳನ್ನು ಬಿಟ್ಟರೆ ಜನ ಮೆಚ್ಚುತ್ತಾರೆ. ಇಲ್ಲಾಂದ್ರೆ ಇದೇ ವಿಷಯವಾಗಿ ಚಚ್ಚಿಸಿಕೊಳ್ಳಬೇಕಾಗುತ್ತದೆ.

ತುಂಬಾ ನಯವಾಗಿ ಮಾತನಾಡುವ ಕಲೆಯನ್ನು ಸಿದ್ಧಿಸಿಕೊಂಡಿರುವ ತುಲಾ ರಾಶಿಯವರು, ಒಮ್ಮೆ ನಿರ್ಧಾರ ಮಾಡಿದರೆ ಮುಗೀತು, ಅದು ಮುಗಿಯುವವರೆಗೂ ವಿರಮಿಸಲ್ಲ. ಅಂಥಾ ಹಠವಾದಿಗಳು. ಆದರೆ ಒಳ್ಳೆಯ ಕೆಲಸದಲ್ಲಿ ಮಾತ್ರ ಇಂತಹ ನಿಮ್ಮ ಸಾಹಸವನ್ನು ತೋರಿಸಬೇಕು.

ಅದೃಷ್ಟದ ದಿನಗಳು : ಎಷ್ಟೇ ವಿದ್ಯೆ, ಬುದ್ಧಿಯಿದ್ದರೂ ದೈವಬಲವೂ ಬೇಕಲ್ಲ ಇದಕ್ಕಾಗಿ, ಬಿಳಿ, ನೀಲಿ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನು ಆಯ್ದುಕೊಳ್ಳಬೇಕು. 6, 15, 24 ನೇ ತಾರೀಖಿನ ದಿನಗಳಂದು ಮುಖ್ಯವಾದ ಕೆಲಸಗಳಿಗೆ ಮುಂದಾಗಬೇಕು. ಶುಕ್ರವಾರ ಮತ್ತು ಸೋಮವಾರ ನೀವು ಖುಷಿಯಾಗಿರುವ ದಿನಗಳು. ಪ್ರತಿ ಶುಕ್ರವಾರ ಮತ್ತು ಮಂಗಳವಾರ ವೇಂಕಪ್ಪನ ಪ್ರೀತಿಯ ಪತ್ನಿ ಮಹಾಲಕ್ಷ್ಮೀಯ ದರ್ಶನ ಪಡೆದುಕೊಳ್ಳುವುದು ಸೂಕ್ತ. 4, 6, 7, 9 ಅಂಕಿಗಳಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಿ.

ಮಿಥುನ, ಕರ್ಕ, ಕುಂಭ ರಾಶಿಯವರೊಂದಿಗೆ ನಿಮಗೆ ಅತೀ ಹೆಚ್ಚಿನ ಸಲುಗೆ ಇಷ್ಟವಾದರೆ, ಸಿಂಹ ರಾಶಿಯವರೊಂದಿಗೆ ಕದನಕ್ಕಿಳಿಯಲು ಮನಸ್ಸಾಗುತ್ತಿರುತ್ತದೆ. ಅಂತೂ ಈ ಹೊಸ ವರ್ಷದಲ್ಲಿ ಆರೋಗ್ಯ ಸದೃಢವಾಗಿಟ್ಟುಕೊಳ್ಳಿ. ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ, ಶುಭವಾಗಲಿ.

English summary
Yearly horoscope 2015 for Libra zodiac sign. Sade Sati for Libra people is not yet over. These people may face some hurdles till July. So, they have to careful, postpone important decisions and don't forget to worship Lord Shani and Shiva. The situation will ease from August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X