ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಲಾ ವರ್ಷ ಭವಿಷ್ಯ: ಸಿಕ್ಕಾಪಟ್ಟೆ ಪರೀಕ್ಷೆಗಳು ಮುಂದಿವೆ, ಸಾಹಸ ಬೇಡ

ತುಲಾ ರಾಶಿಯವರು ತಮ್ಮೆದುರಿನ ಸವಾಲುಗಳನ್ನು ಎದುರಿಸುವುದು ಹೇಗೆ ಅಂತ ತಿಳಿದುಕೊಳ್ಳಬೇಕು. ಈ ಹಿಂದೆ ನಿಮಗೆ ಸಿಕ್ಕ ಪ್ರೋತ್ಸಾಹ ಇನ್ನು ಮುಂದೆ ಸಿಗುವುದು ಕಷ್ಟ. ಇದರ ಜತೆಗೆ ಆರೋಗ್ಯದ ಕಡೆಗೂ ನಿಗಾ ಇರಲಿ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ತುಲಾ ರಾಶಿಯವರಿಗೆ ಒಂದು ವಿಧದಲ್ಲಿ ಪರೀಕ್ಷೆಗಳ ಸರಮಾಲೆ ತುಂಬಿರುವ ವರ್ಷ. ಇನ್ನೂ ಸರಿಯಾಗಿ ಹೇಳಬೇಕಾದಲ್ಲಿ ನಿಮ್ಮ ನಿಜವಾದ ಸ್ನೇಹಿತರಾರು ಹಾಗೂ ಸ್ನೇಹಿತನ ಮುಖವಾಡ ತೊಟ್ಟವರಾರು ಎಂದು ತಿಳಿಯುವ ವರ್ಷವಿದು. ಹಿಂದಿನ ವರ್ಷವಿದ್ದ ಅಪಾರ ಬೆಂಬಲ ಹಾಗೂ ಪ್ರೋತ್ಸಾಹ ಈ ವರ್ಷ ಸಿಗುವುದಿಲ್ಲ.

ಹಿಂದಿನ ವರ್ಷ ಇದ್ದ ಉತ್ತಮ ಅವಕಾಶಗಳು ನಿಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಅಂಥ ಅವಕಾಶಗಳನ್ನು ನಿಮಗೆ ನೀಡಿದ ಜನರೇ ಅವರ ಕಾರ್ಯ ಸಿದ್ಧಿಗಾಗಿ ಬೇರೆಡೆ ಹೋಗಿ, ನಿಮಗೆ ಸಹಾಯ ಮಾಡುವವರು ಇಲ್ಲದ ಹಾಗೆ ಆಗಬಹುದು.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

ಇನ್ನು ಪ್ರಾಣಿಗಳಿಂದ ಅದರಲ್ಲಿಯೂ ನಾಯಿಯಿಂದ ದೂರವಿರಿ. ನೀವೇ ಸಾಕಿದ ನಾಯಿ ಆದರೂ ಅದರೊಟ್ಟಿಗೆ ಹುಚ್ಚು ಸಾಹಸ ಮಾಡಲು ಹೋಗದಿರಿ. ವಿದ್ಯಾರ್ಥಿಗಳಿಗೂ ಸ್ವಲ್ಪ ಹಿನ್ನಡೆ ಇದೆ. ಅಂದರೆ ಅದರ ಅರ್ಥ ವಿದ್ಯಾರ್ಥಿಗಳು ಹಿಂದಿನ ವರ್ಷ ಮಾಡಿದ ಪ್ರಯತ್ನಕ್ಕಿಂತ ಎರಡು ಪಟ್ಟು ಹೆಚ್ಚು ಪ್ರಯತ್ನ ಹಾಗೂ ಏಕಾಗ್ರತೆ ಈ ವರ್ಷ ಮಾಡಬೇಕಾಗಿದೆ.

Libra

ಸ್ವಲ್ಪ ಮರೆವು ಕಾಡಬಹುದು. ಈ ವರ್ಷ ನೀವು ಸರಿಯಾಗಿ ನೆನಪಿಟ್ಟುಕೊಳ್ಳ ಬೇಕಾದ ವಿಚಾರ ಎಂದರೆ ಯಾರನ್ನೂ ಎದುರು ಹಾಕಿಕೊಳ್ಳ ಬೇಡಿ. ಎಷ್ಟೇ ಸಿಟ್ಟು ಇದ್ದರೂ ಯಾರೊಂದಿಗೂ ಜಗಳ ಬೇಡ. ಕಾರಣ, ನೀವು ಬೇಡ ಎಂದುಕೊಂಡ ಜನರು ಹಾಗೂ ಬೇಕಿಲ್ಲ ಎನ್ನುವ ವಸ್ತುವೇ ಅನಿವಾರ್ಯವಾಗುವ ಸಾಧ್ಯತೆಗಳು ಹೆಚ್ಚು ಇವೆ.

ಸ್ತ್ರೀಯರು ಆರೋಗ್ಯದ ವಿಚಾರದಲ್ಲಿ ಬಹಳ ಎಚ್ಚರ ವಹಿಸಬೇಕು. ಅವರಿಗೆ ಹೊಟ್ಟೆ, ಕರುಳು ಅಥವಾ ಗರ್ಭಕೋಶದ ಭಾಗಗಳಲ್ಲಿ ನೋವು ಇತ್ಯಾದಿ ಕಾಡಬಹುದು. ಮಾಸಿಕ ಋತು ಚಕ್ರ ಎರುಪೇರಾಗಿ ಹೊಟ್ಟೆನೋವು ಇತ್ಯಾದಿಗಳು ಕಾಡಬಹುದು. ಈ ಎಲ್ಲ ಸಮಸ್ಯೆಗಳನ್ನು ಹೊರಗೆ ಹೇಳಿಕೊಳ್ಳಲಾಗದೆ ಎಲ್ಲೂ ಹೋಗಲಾಗದೆ ನುಡಿದಂತೆ ನಡೆದುಕೊಳ್ಳಲಾಗದೆ ಪರಿತಪಿಸುವ ಸಾಧ್ಯತೆಗಳಿವೆ.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]

ವ್ಯಾಪಾರಿಗಳು ಸಹ ಅತಿಯಾದ ಧನಲಾಭ ಇತ್ಯಾದಿ ನೋಡುವುದು ಕಷ್ಟ. ಹಾಕಿದ ಬಂಡವಾಳ ಹಿಂದೆ ಬಂದರೆ ಸಾಕಾಗಿರುತ್ತದೆ. ಆದುದರಿಂದ ಬುದ್ಧಿವಂತಿಕೆಯಿಂದ ಹೂಡಿಕೆ ಪ್ರಮಾಣವನ್ನೇ ಕಡಿಮೆ ಮಾಡಿದರೆ ಉತ್ತಮ. ವಿದೇಶ ಪ್ರಯಾಣಗಳು ವರ್ಜಿಸಿದರೆ ಅತ್ಯುತ್ತಮ. ಇಲ್ಲದಿದ್ದರೆ ವರ್ಷಾಂತ್ಯದಲ್ಲಿ ಇಟ್ಟುಕೊಂಡರೆ ಮಧ್ಯಮ. ಈ ವರ್ಷದಲ್ಲಿ ನಿಮಗೆ ಯಶಸ್ಸಿನ ಸೂತ್ರ ಅಥವಾ ಕಷ್ಟಗಳಿಂದ ಪಾರಾಗುವ ಉಪಾಯ ಅಂದರೆ ಸಮಾಧಾನವಾಗಿ ಇರುವುದು ಹಾಗೂ ಇರುವುದರಲ್ಲಿಯೇ ತೃಪ್ತಿ ಪಡುವುದು. ಕಿಂಚಿತ್ ಆಸೆಯೂ ನಿಮಗೆ ದುಃಖ ಕೊಡುವುದರಲ್ಲಿ ಸಂಶಯವಿಲ್ಲ.
ಒಟ್ಟಾರೆ ವರ್ಷಫಲ 2/5

ಜನವರಿಯಿಂದ ಏಪ್ರಿಲ್ ವರೆಗೆ

ಜನವರಿಯಿಂದ ಏಪ್ರಿಲ್ ವರೆಗೆ

ಈ ಮೊದಲ ನಾಲ್ಕು ತಿಂಗಳು ಸ್ವಲ್ಪ ಒತ್ತಡದಲ್ಲಿಯೇ ಕಳೆಯುತ್ತೀರಿ. ಇನ್ನೂ ಏನೂ ಸಮಸ್ಯೆಗಳು ಆರಂಭ ಆಗಿಲ್ಲವಲ್ಲ, ನಾನು ಆರಾಮದಾಯಕ ಜೀವನ ನಡೆಸುತ್ತಿದ್ದೇನಲ್ಲ ಎಂಬ ಅನಿಸಿಕೆ ಇಟ್ಟುಕೊಂಡವರು ಹೆದರಬೇಕಿಲ್ಲ. ಆದರೆ ಎಚ್ಚರ ತಪ್ಪದಿದ್ದರೆ ಅಷ್ಟೇ ಸಾಕು. ಯಾವುದೋ ಸ್ನೇಹಿತ ಅಥವಾ ಯಾರೋ ಪರಿಚಿತರು ನಾನಿದ್ದೇನೆ ಎಂದರು ಎಂದು ಈ ಸಮಯದಲ್ಲಿ ನಿಮ್ಮ ಪ್ರಕಾರ ಕಡಿಮೆ ಸಂಬಳ ಕೊಡುತ್ತಿರುವ ಈಗಿರುವ ಕೆಲಸ ಬಿಟ್ಟು ಹೊಸ ಕೆಲಸದತ್ತ ಹುಡುಕುತ್ತಾ ಹೊರಟರೆ ಈಜಲು ಬರದವರನ್ನು ನಡು ನೀರಿನಲ್ಲಿ ಬಿಟ್ಟಂತೆ ಆಗುತ್ತದೆ ನಿಮ್ಮ ಪರಿಸ್ಥಿತಿ. ಕೆಲವರಿಗೆ ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿಯೇ ಮೇಲಧಿಕಾರಿಗಳಿಂದ ಕಿರಿಕಿರಿ, ಅವಮಾನ ಇತ್ಯಾದಿಗಳು ಆಗಬಹುದು. ಆದರೂ ಕೆಲಸಕ್ಕೆ ರಾಜೀನಾಮೆ ಕೊಟ್ಟರೆ ನನಗೇನೂ ತೊಂದರೆ ಇಲ್ಲ, ಬಾಡಿಗೆ ಬರುತ್ತೆ. ತಿಂದು ಉಂಡು ಹಾಯಾಗಿ ಇರುತ್ತೇನೆ ಎಂದರೆ ತೊಂದರೆ ಇಲ್ಲ. ಇಲ್ಲದಿದ್ದರೆ ಈ ವರ್ಷಾಂತ್ಯದ ತನಕ ತಡೆದುಕೊಳ್ಳಲೇಬೇಕು.

ಮೇನಿಂದ ಆಗಸ್ಟ್ ವರೆಗೆ

ಮೇನಿಂದ ಆಗಸ್ಟ್ ವರೆಗೆ

ಈ ನಾಲ್ಕು ತಿಂಗಳು ನಿಮಗೆ ಅಷ್ಟೇನು ತೊಂದರೆ ಆಗಲಿಕ್ಕೆ ಇಲ್ಲ. ಕಾರಣ ಕಷ್ಟಗಳು ನಿಮಗೆ ರೂಢಿ ಆಗಿಬಿಟ್ಟಿರುತ್ತವೆ. ಸಾಲಗಾರರಿಂದಾಗಲೀ ಅಥವಾ ನೀವು ಯಾರಿಗೆ ಆಶ್ವಾಸನೆಗಳನ್ನು ಕೊಟ್ಟಿದ್ದರೋ ಅವರಿಂದ ತಪ್ಪಿಸಿಕೊಳ್ಳುವ ಮಾರ್ಗಗಳು ಹಲವನ್ನು ನೀವು ಈಗಾಗಲೇ ಹುಡುಕಿರುತ್ತೀರಿ. ಏನು ಮಾಡುವುದು ಪರಿಸ್ಥಿತಿಗಳ ಒತ್ತಡ ಹಾಗೆ ಮಾಡಿಸುತ್ತದೆ. ಆದರೆ ಈ ನಾಲ್ಕು ತಿಂಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಪರ್ಯಾಯ ಚಿಕ್ಕ ಪರಿಹಾರಗಳು ಲಭಿಸುತ್ತವೆ. ದಿವ್ಯ ಕ್ಷೇತ್ರಗಳ ದರ್ಶನ ಯೋಗ ಕಂಡು ಬರುತ್ತಿದೆ. ಅದರ ಫಲಶ್ರುತಿಯೋ ಎಂಬಂತೆ ಕಷ್ಟಗಳು ಕರಗುತ್ತವೆ ಎಂಬ ಭರವಸೆಗಳು ಮೂಡುತ್ತವೆ. ಸಾಲ ಮಾಡದೇ ಇರುವುದು ಕಷ್ಟ ಸಾಧ್ಯ ಆದರೂ ಎಷ್ಟು ಬೇಕೋ ಅಷ್ಟೇ ಸಾಲ ಮಾಡಿ, ಹೆಚ್ಚು ಸಾಲ ಆಗದಂತೆ ಎಚ್ಚರ ವಹಿಸಿ. ಇನ್ನು ಸಾಲ ಮಾಡಬೇಕಾದ ಪ್ರಮೇಯವೇ ಬರಲಿಲ್ಲವಾದಲ್ಲಿ ಇನ್ನೂ ಸಂತೋಷ. ಇಲ್ಲಿ ಗಮನಿಸ ಬೇಕಾದ ಅಂಶ ಅಂದರೆ, ಕೆಲವರಿಗೆ ದೈನಂದಿನ ಕಾರ್ಯಗಳಿಗೆ ಅಲ್ಲದೇ ವಸ್ತು, ವಾಹನ ಇತ್ಯಾದಿಗಳ ಖರೀದಿಗಾಗಿ ಅಥವಾ ಭೂಮಿ, ಗೃಹ ನಿರ್ಮಾಣ ಎನ್ನುತ್ತಾ ದೊಡ್ಡ ಪ್ರಮಾಣದ ಸಾಲಗಳನ್ನು ಮಾಡುವ ಯೋಚನೆಗಳು ಬರಬಹುದು. ಅವುಗಳನ್ನು ತಾತ್ಕಾಲಿಕವಾಗಿ ಅಂದರೆ ಈ ನಾಲ್ಕು ತಿಂಗಳು ಮುಂದೂಡಿದರೆ ಅತೀ ಉತ್ತಮ

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

ಈ ನಾಲ್ಕು ತಿಂಗಳು ಮಾತ್ರ ನಿಮಗೆ ನಿಜವಾದ ನೆಮ್ಮದಿ ಕೊಡುವಂತಾಗಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ನೀವು ಸ್ವಲ್ಪ ಹಿಂದಿನ ಉತ್ತಮ ಮಟ್ಟಕ್ಕೆ ಹೋಗುತ್ತೀರಿ. ಸಾಲಗಳು ತೀರುತ್ತಾ ಬರುತ್ತದೆ ಅಥವಾ ಹಲವು ಕಡೆ ಇದ್ದ ಸಾಲಗಳನ್ನು ಎಲ್ಲಾ ಸೇರಿಸಿ ಒಂದೇ ಕಡೆ ಅದರಲ್ಲಿಯೂ ಬ್ಯಾಂಕ್ ನಲ್ಲಿ ಮಾಸಿಕದಲ್ಲಿ ಇಷ್ಟು ಕಟ್ಟ ಬೇಕು ಎಂಬ ನಿಶ್ಚಿತ ಮೊತ್ತಕ್ಕೆ ತಂದುಕೊಂಡು ಸಮಾಧಾನ ಪಡುತ್ತೀರಿ. ಈ ಹಿಂದೆ ನಿಮಗೆ ಸಹಾಯ ಮಾಡಲಾಗದವರಿಗೂ ಈಗ ಸ್ವಲ್ಪ ಸಹಾಯ ಮಾಡುವ ಶಕ್ತಿ ಅಥವಾ ಅವಕಾಶ ಬರುತ್ತದೆ. ಇಷ್ಟಾದರೂ ಈ ನಾಲ್ಕು ತಿಂಗಳಲ್ಲಿ ನೀವು ಎಚ್ಚರಿಕೆ ವಹಿಸಬೇಕಿರುವುದು ನಿಮ್ಮ ಆರೋಗ್ಯದತ್ತ. ಅದರಲ್ಲಿಯೂ ಈ ಮೊದಲ ಎಂಟು ತಿಂಗಳು ಆ ಕಷ್ಟದ ಸಮಯದಲ್ಲಿ ನೀವು ಮಾಡಿಕೊಂಡ ಆಹಾರ ವ್ಯತ್ಯಾಸದ ದುಷ್ಪರಿಣಾಮ ಈ ನಾಲ್ಕು ತಿಂಗಳು ಅನುಭವಿಸ ಬೇಕಾಗುತ್ತದೆ. ಆದುದರಿಂದ ನೀವು ಎಚ್ಚೆತ್ತು ಮೊದಲಿನಿಂದಲೂ ಏನೇ ಸಮಸ್ಯೆಗಳಾಗಲೀ ಆಹಾರ ಸೇವನೆ ವಿಚಾರದಲ್ಲಿ ಕಟ್ಟುನಿಟ್ಟಾಗಿ ಇದ್ದಲ್ಲಿ ಈ ನಾಲ್ಕು ತಿಂಗಳು ಆರೋಗ್ಯ ಬಾಧೆ ಅನುಭವಿಸುವುದು ಕಡಿಮೆ ಆಗುತ್ತದೆ.

 ಪರಿಹಾರ

ಪರಿಹಾರ

ವೈದಿಕ: ಕನಿಷ್ಠ 10 ಸಾವಿರ ಸಂಖ್ಯೆಯಲ್ಲಿ ಗುರುಗ್ರಹದ ವೇದೋಕ್ತ ಮಂತ್ರ ಜಪ, ದಶಾಂಶ ಪದ್ಧತಿಯಲ್ಲಿ ಹವನ ಹಾಗೂ ತರ್ಪಣ ಕಡ್ಡಾಯವಾಗಿ ಮಾಡಿಸಿ
ಕ್ಷೇತ್ರ: ಶ್ರೀ ಕ್ಷೇತ್ರ ಧರ್ಮಸ್ಥಳದ ಹತ್ತಿರ ಬರುವ ಉಜಿರೆ ಸುರ್ಯ ಗ್ರಾಮದಲ್ಲಿ ನೆಲೆಸಿರುವ ಸದಾಶಿವ ರುದ್ರ ದೇವರ ದರ್ಶನ ಮಾಡಿ ಹಾಗೂ ಅಲ್ಲಿ ರುದ್ರಾಭಿಷೇಕ ಮಾಡಿಸಿ
ರತ್ನ: ಜಾತಕದಲ್ಲಿ ಶನಿ ಉತ್ತಮಸ್ಥಿತಿಯಲ್ಲಿ ಇದ್ದಲ್ಲಿ ಉತ್ತಮ ಗುಣಮಟ್ಟದ ನೀಲಿ, ಪುಷ್ಯರಾಗ ರತ್ನವನ್ನು ತ್ರಿದಿನ ಶುದ್ದಿ ಪೂಜೆ ಮಾಡಿಸಿ, ಶನಿವಾರದಂದು ಧರಿಸಿ
ಸ್ತೋತ್ರ: ಪ್ರತಿ ಸೋಮವಾರ ಈಶ್ವರ ದೇಗುಲದಲ್ಲಿ ರುದ್ರಾಭಿಷೇಕ ಮಾಡಿಸಿ ಹಾಗೂ ಗುರುವಾರಗಳಲ್ಲಿ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿ ಅಲ್ಲಿ ಪ್ರದಕ್ಷಿಣೆ, ತೀರ್ಥ- ಪ್ರಸಾದ ಸ್ವೀಕರಿಸಿ. ಅಲ್ಲಿ ಯಥಾ ಶಕ್ತಿ ಕಡಲೆ ಕಾಳು ದಾನ ಮಾಡಿ

English summary
Libra yearly horoscope 2017: You will face lot of challenges Libra zodiac sign. You will come to know your real friends- Predictions by Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X