ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀವಿಕಾರಿ ನಾಮ ಸಂವತ್ಸರದ ಯುಗಾದಿ ವರ್ಷ ಫಲ ತುಲಾದಿಂದ ಮೀನದ ತನಕ

By ಹರಿ ಶಾಸ್ತ್ರಿ ಗುರೂಜಿ
|
Google Oneindia Kannada News

ಶ್ರೀವಿಕಾರಿ ನಾಮ ಸಂವತ್ಸರದ ಯುಗಾದಿ ವರ್ಷ ಫಲ ತಿಳಿಸುವಂಥ ಎರಡನೇ ಕಂತಿನ ಲೇಖನ ಇದು. ಮೊದಲನೇ ಕಂತಿನಲ್ಲಿ ಮೇಷದಿಂದ ಕನ್ಯಾ ರಾಶಿವರೆಗೆ ತಿಳಿಸಲಾಗಿತ್ತು. ಇದೀಗ ಎರಡನೇ ಭಾಗವಾಗಿ ತುಲಾ ರಾಶಿಯಿಂದ ಮೀನ ರಾಶಿ ತನಕ ತಿಳಿಸಲಾಗುತ್ತಿದೆ.

ಈ ಹೊಸ ಸಂವತ್ಸರ, ಹೊಸ ವಿಚಾರ. ಸಮೃದ್ಧಿ, ಸಂತೋಷಕ್ಕೆ ನಾಂದಿ ಆಗಲಿ ಎಂದು ಹಾರೈಸುತ್ತಾ ಯುಗಾದಿ ಫಲವನ್ನು ಇಲ್ಲಿ ತಿಳಿಸುತ್ತಿದ್ದೇನೆ. ಈ ಸಂವತ್ಸರದ ಆರಂಭದಲ್ಲಿ ಅಂದರೆ ಏಪ್ರಿಲ್ ಇಪ್ಪತ್ತೆರಡರ ತನಕ ಧನುಸ್ಸು ರಾಶಿಯಲ್ಲಿ ಗುರು ಸಂಚರಿಸುತ್ತಾನೆ. ಈ ಅವಧಿಯಲ್ಲಿ ಶನಿ ಹಾಗೂ ಕೇತು ಗ್ರಹಗಳು ಕೂಡ ಅದೇ ಮನೆಯಲ್ಲಿ ಇರುತ್ತವೆ.

ಯುಗಾದಿಯ ಶ್ರೀವಿಕಾರಿನಾಮ ಸಂವತ್ಸರದ ರಾಶಿ ಫಲ ಯುಗಾದಿಯ ಶ್ರೀವಿಕಾರಿನಾಮ ಸಂವತ್ಸರದ ರಾಶಿ ಫಲ

ಆ ನಂತರ ಏಪ್ರಿಲ್ ಇಪ್ಪತ್ಮೂರನೇ ತಾರೀಕಿನಿಂದ ನವೆಂಬರ್ ಐದನೇ ತಾರೀಕಿನ ತನಕ ವೃಶ್ಚಿಕ ರಾಶಿಯಲ್ಲೇ ಗುರು ಗ್ರಹ ಸಂಚಾರ ಇರುತ್ತದೆ. ಆ ನಂತರ ಈ ಸಂವತ್ಸರದ ಅಂತ್ಯದ ತನಕ ಧನು ರಾಶಿಯಲ್ಲೇ ಗುರು ಸಂಚಾರ ಇರುತ್ತದೆ. ಇನ್ನು ಮುಂದಿನ ವರ್ಷದ ಜನವರಿ ಇಪ್ಪತ್ನಾಲ್ಕರ ತನಕ ಧನು ರಾಶಿಯಲ್ಲಿ ಸಂಚರಿಸುವ ಶನಿಯು, ಆ ನಂತರ ಮಕರ ರಾಶಿ ಪ್ರವೇಶಿಸಿ, ಸಂವತ್ಸರದ ಅಂತ್ಯದ ತನಕ ಅದೇ ಮನೆಯಲ್ಲಿ ಇರುತ್ತದೆ.

ಶನಿ ಹಾಗೂ ಗುರು ಪ್ರಮುಖ ಗ್ರಹಗಳಾದ್ದರಿಂದ ಅವೆರಡು ಗ್ರಹಗಳ ಸಂಚಾರದ ಆಧಾರದಲ್ಲಿ ಯುಗಾದಿ ಫಲವನ್ನು ಹೇಳುವ ರೂಢಿ ಇದೆ. ಆದರೆ ಯಾವುದೇ ವ್ಯಕ್ತಿಯು ತನ್ನ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿಯೇ ಪ್ರಮುಖ ನಿರ್ಧಾರ ಕೈಗೊಳ್ಳಬೇಕು. ದಶಾ-ಭುಕ್ತಿ ಕಾಲಗಳು ಬಹಳ ಮುಖ್ಯವಾಗುತ್ತವೆ.

 ತುಲಾ ರಾಶಿ: ವಿವಿಧ ರಂಗಗಳಲ್ಲಿ ಯಶಸ್ಸು ದೊರೆಯುತ್ತದೆ

ತುಲಾ ರಾಶಿ: ವಿವಿಧ ರಂಗಗಳಲ್ಲಿ ಯಶಸ್ಸು ದೊರೆಯುತ್ತದೆ

ಯುಗಾದಿ ಅರಂಭದ ಕೆಲ ದಿನ ಸಹೋದರ-ಸಹೋದರಿಯರ ಜತೆ ಹಣ ಕಾಸಿನ ವಿಚಾರವಾಗಿ ಸಣ್ಣ ಪುಟ್ಟ ವೈಮನಸ್ಯಗಳು ತಲೆದೋರಬಹುದು. ಆದರೆ ಅದು ಕೆಲ ದಿನ ಮಾತ್ರ. ಮೇ ತಿಂಗಳು ಆರಂಭವಾಗುತ್ತಿದ್ದಂತೆ ಎಲ್ಲವೂ ಸರಿ ಹೋಗುತ್ತದೆ. ಮನೆಯಲ್ಲಿ ಹಿರಿಯರು ಇದ್ದಲ್ಲಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಉಳಿದಂತೆ ನವೆಂಬರ್ ತನಕ ವೃಶ್ಚಿಕದಲ್ಲಿ ಇರುವ ಗುರು ಹಾಗೂ ಮುಂದಿನ ವರ್ಷದ ಜನವರಿ ಇಪ್ಪತ್ನಾಲ್ಕರ ತನಕ ಧನು ರಾಶಿಯಲ್ಲಿ ಇರುವ ಶನಿ ಗ್ರಹವು ಅತ್ಯುತ್ತಮವಾದ ಫಲಗಳನ್ನು ನೀಡುತ್ತವೆ. ಆಸ್ತಿ, ವಾಹನ ಖರೀದಿ, ವಿದೇಶದಲ್ಲಿ ಹೂಡಿಕೆ ಮಾಡಲು, ಆಭರಣ ಖರೀದಿಗೆ, ಹೊಸ ಉದ್ಯೋಗ ಹುಡುಕುವುದಕ್ಕೆ ಬಹಳ ಉತ್ತಮ ಸಮಯವಾಗಿರುತ್ತದೆ. ವಿವಿಧ ರಂಗಗಳಲ್ಲಿ ಯಶಸ್ಸು ಪಡೆಯುತ್ತೀರಿ. ವಿದೇಶ ಪ್ರಯಾಣದಿಂದ ಹಣಕಾಸು ಅನುಕೂಲ ದೊರೆಯುತ್ತದೆ. ವಿದೇಶದಲ್ಲಿ ಉದ್ಯೋಗ ಅಥವಾ ಉನ್ನತ ವ್ಯಾಸಂಗಕ್ಕೆ ಯತ್ನಿಸುತ್ತಿರುವವರಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣ ಆಗುತ್ತದೆ. ಆದರೆ ಗುರು ಗ್ರಹ ಧನು ಪ್ರವೇಶ ಆದ ಮೇಲೆ ಹಾಗೂ ಶನಿಯು ಮಕರ ರಾಶಿ ಪ್ರವೇಶ ಆದ ಮೇಲೆ ಸ್ವಲ್ಪ ಹಿನ್ನಡೆ ಕಾಣಬೇಕಾಗುತ್ತದೆ. ಮುಖ್ಯವಾಗಿ ಮಾತಿನ ಮೇಲೆ ಹಿಡಿತ ಇರಲಿ. ಗುರು-ಹಿರಿಯರ ಬಗ್ಗೆ ಹಗುರ ಮಾತುಗಳನ್ನು ಆಡಬೇಡಿ. ಯಶಸ್ಸು ತಲೆಗೆ ಏರದಂತೆ ನೋಡಿಕೊಳ್ಳಿ. ಮುಖ್ಯವಾಗಿ ಏಪ್ರಿಲ್ ತಿಂಗಳಲ್ಲಿ ನಿಮ್ಮ ಸನಿಹದಲ್ಲಿ ಇರುವವರೇ ಯಶಸ್ಸಿಗೆ ಅಡ್ಡಿ ಆಗಬಹುದು, ಎಚ್ಚರ!

 ವೃಶ್ಚಿಕ ರಾಶಿ: ಬಡ್ತಿ, ವೇತನ ಹೆಚ್ಚಳ ನಿರೀಕ್ಷೆ ಇರುವವರಿಗೆ ಶುಭ ಸುದ್ದಿ

ವೃಶ್ಚಿಕ ರಾಶಿ: ಬಡ್ತಿ, ವೇತನ ಹೆಚ್ಚಳ ನಿರೀಕ್ಷೆ ಇರುವವರಿಗೆ ಶುಭ ಸುದ್ದಿ

ಬಡ್ತಿ, ವೇತನ ಹೆಚ್ಚಳ, ಉದ್ಯೋಗ ಬದಲಾವಣೆ ನಿರೀಕ್ಷೆಯಲ್ಲಿ ಇರುವವರಿಗೆ ಏಪ್ರಿಲ್ ನಲ್ಲಿ ಉತ್ತಮ ಸುದ್ದಿ ಸಿಗಲಿದೆ. ಇಷ್ಟು ಕಾಲ ಅಂದರೆ ಕಳೆದ ಆರೇಳು ವರ್ಷಗಳಿಂದ ಅಷ್ಟೇನೂ ದೊಡ್ಡ ಮಟ್ಟದ ಯಶಸ್ಸು ದೊರೆಯದೆ ನಿಂತ ನೀರಿನಂತೆ ಇರುವ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ಮೇ ತಿಂಗಳ ಆರಂಭದಲ್ಲಿ ಮತ್ತೆ ಗುರು ಗ್ರಹ ನಿಮ್ಮದೇ ರಾಶಿಗೆ ಪ್ರವೇಶ ಮಾಡುತ್ತದೆ. ಅದರಿಂದ ದೊಡ್ಡ ಮಟ್ಟದ ಸಮಸ್ಯೆಗಳೇನೂ ಇಲ್ಲ. ಆದರೆ ಮುಂದಿನ ವರ್ಷದ ಜನವರಿಯಲ್ಲಿ ನಿಮ್ಮ ಪಾಲಿನ ಸಾಡೇ ಸಾತ್ ಶನಿಯ ಬಿಡುಗಡೆ ಆಗಲಿದೆ. ಆದ್ದರಿಂದ ಶನಿಯ ನಕಾರಾತ್ಮಕ ಪರಿಣಾಮ ಕಡಿಮೆ ಆಗುತ್ತಾ ಸಾಗುತ್ತದೆ. ಸಲ್ಲದ ಚಿಂತೆ, ಅನಾರೋಗ್ಯ, ಸಾಲ ಬಾಧೆ, ಶತ್ರು ಬಾಧೆ ದೂರವಾಗುತ್ತದೆ. ನಿಮಗೆ ಇಷ್ಟವಿಲ್ಲದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೆ ಅಲ್ಲಿಂದ ಬಿಡುಗಡೆ ಆಗುತ್ತದೆ. ಸತಿ-ಪತಿ ದೂರ ಆಗಿದ್ದಲ್ಲಿ ಮತ್ತೆ ಒಂದಾಗುವ ಅವಕಾಶ ದೊರೆಯುತ್ತದೆ. ಈ ವರ್ಷದ ನವೆಂಬರ್ ನಲ್ಲಿ ಗುರುವು ಎರಡನೇ ಮನೆಯಲ್ಲಿ ಸಂಚರಿಸುವಾಗ ಬಾಕಿ ಬರಬೇಕಾದ ಹಣಕಾಸು ವಸೂಲಿ ಆಗುತ್ತದೆ. ಈಗಾಗಲೇ ಮಾಡಿದ್ದ ಹೂಡಿಕೆಗೆ ಅದ್ಬುತವಾದ ಲಾಭ ದೊರೆಯುತ್ತದೆ. ಆದರೆ ಅಮಲು ಪದಾರ್ಥಗಳ ಚಟಕ್ಕೆ ಬೀಳದಂತೆ ಎಚ್ಚರವಹಿಸಿ. ಹೆಚ್ಚಿನ ಬಡ್ಡಿ ಅಸೆಗೆ ತಪ್ಪಾದ ಜಾಗದಲ್ಲಿ ಹೂಡಿಕೆ ಮಾಡಬೇಡಿ. ದುಷ್ಟ ಜನರ ಸಹವಾಸದಿಂದ ಬಹಳ ಎಚ್ಚರಿಕೆಯಿಂದ ಇರಬೇಕು.

ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?

 ಧನುಸ್ಸು ರಾಶಿ: ಪಾಪ ಕರ್ಮಾಸಕ್ತಿ ಹೆಚ್ಚಾಗುತ್ತದೆ

ಧನುಸ್ಸು ರಾಶಿ: ಪಾಪ ಕರ್ಮಾಸಕ್ತಿ ಹೆಚ್ಚಾಗುತ್ತದೆ

ನಿಮ್ಮ ರಾಶಿಗೆ ಯುಗಾದಿಯ ಕೆಲ ದಿನವಷ್ಟೇ ಗುರುವು ಜನ್ಮ ರಾಶಿಗೆ ಬರುತ್ತಾನೆ. ಅ ನಂತರ ನವೆಂಬರ್ ತನಕ ಹನ್ನೆರಡನೇ ಮನೆಯಲ್ಲಿ ಇರುತ್ತಾನೆ. ವಿಪರೀತ ಖರ್ಚು ತರುತ್ತಾನೆ. ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇನ್ನು ನಿಮ್ಮ ಜನ್ಮ ರಾಶಿಯಲ್ಲೇ ಇರುವ ಶನಿಯು ಸಲ್ಲದ ಆಲೋಚನೆಗಳು, ದುಃಖಗಳನ್ನು ನೀಡುತ್ತಾನೆ. ಸಪ್ತಮದಲ್ಲಿ ಇರುವ ರಾಹು ಗ್ರಹವು ದಂಪತಿ ಮಧ್ಯೆ ವಿರಸಕ್ಕೆ ಕೂಡ ಕಾರಣ ಆಗುತ್ತದೆ. ಪಾಪ ಕರ್ಮಾಸಕ್ತಿ ಹೆಚ್ಚಾಗುತ್ತದೆ. ವಿವಾಹೇತರ ಅಥವಾ ಅನೈತಿಕ ಸಂಬಂಧಗಳ ಕಡೆಗೆ ಮನಸ್ಸು ವಾಲುತ್ತದೆ ಅಥವಾ ಅಂಥ ನಯ ವಂಚನೆಗೆ ನಿಮಗೆ ಗೊತ್ತಿದ್ದೂ ಗುರಿ ಆಗುವ ಸಾಧ್ಯತೆ ಇದೆ. ನವೆಂಬರ್ ನಲ್ಲಿ ನಿಮ್ಮದೇ ಜನ್ಮ ರಾಶಿಗೆ ಗುರು, ಮುಂದಿನ ವರ್ಷದ ಜನವರಿಯಲ್ಲಿ ಎರಡನೇ ಮನೆಗೆ ಶನಿಯ ಪ್ರವೇಶ ಆಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಅಕ್ಕ, ಅಮ್ಮ, ಗೆಳತಿ, ತಂಗಿಯ ಸಹಾಯ ನಿಮಗೆ ದೊರೆಯಲಿದೆ. ಆದರೆ ನಿಮ್ಮ ಚಿಂತೆ ದೂರ ಆಗುವುದಿಲ್ಲ. ಸಂಗಾತಿ ಜತೆಗೆ ಮುಕ್ತವಾಗಿ ಮಾತನಾಡಿ. ಯಾವುದೇ ಅನುಮಾನಕ್ಕೆ ಎಡೆ ಮಾಡಿಕೊಡುವಂತೆ ನಡೆದುಕೊಳ್ಳಬೇಡಿ. ಕ್ಷಣಿಕ ಸುಖ ಹಾಗೂ ಸಂತೋಷದ ಬೆನ್ನು ಬಿದ್ದರೆ ಬಹಳ ದುಃಖ ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ಏಪ್ರಿಲ್ ನಿಂದ ನವೆಂಬರ್ ತನಕ ಬಹಳ ಎಚ್ಚರಿಕೆಯಿಂದ ಇರಬೇಕು. ಶನಿ, ಗುರು, ರಾಹು, ಕೇತುಗಳ ಅರಾಧನೆ ಮಾಡಿ.

 ಮಕರ ರಾಶಿ: ಯಾವುದೇ ಕಾರಣಕ್ಕೂ ಉದ್ಯೋಗ ಬದಲಾವಣೆ ಮಾಡಬೇಡಿ

ಮಕರ ರಾಶಿ: ಯಾವುದೇ ಕಾರಣಕ್ಕೂ ಉದ್ಯೋಗ ಬದಲಾವಣೆ ಮಾಡಬೇಡಿ

ಯುಗಾದಿ ಆರಂಭದ ಕೆಲ ದಿನ ಖರ್ಚು ಕೈ ಮೀರಿ ಆಗುತ್ತದೆ. ಆದರೆ ನಂತರ ನವೆಂಬರ್ ತಿಂಗಳ ತನಕ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರ ಆಗುವುದರಿಂದ ಹಲವು ರೀತಿಯಲ್ಲಿ ಹಣಕಾಸು ಅನುಕೂಲಗಳು ಒದಗಿಬರುತ್ತವೆ. ಮುಂದಿನ ಭವಿಷ್ಯಕ್ಕಾಗಿ ಹಣ ಕೂಡಿಡಬೇಕು ಎಂಬುದನ್ನು ಕಡ್ಡಾಯವಾಗಿ ನೆನಪಿನಲ್ಲಿಡಿ. ಆ ನಂತರ ಹನ್ನೆರಡನೇ ಮನೆಗೆ ಗುರು ಪ್ರವೇಶ ಆಗುತ್ತದೆ. ಮುಂದಿನ ವರ್ಷದ ಜನವರಿಯಲ್ಲಿ ಶನಿಯು ಜನ್ಮ ರಾಶಿಗೆ ಪ್ರವೇಶ ಆಗುತ್ತದೆ. ಆಗ ಎಷ್ಟು ಎಚ್ಚರಿಕೆಯಿಂದ ಇರಲು ಸಾಧ್ಯವೋ ಅಷ್ಟು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನಿಮ್ಮ ರಾಶಿಗೆ ವ್ಯಯ ಸ್ಥಾನಾಧಿಪತಿ ಗುರುವು ಅದೇ ಸ್ಥಾನಕ್ಕೆ ಬರುವುದರಿಂದ ಫಲಿತಾಂಶ ತೀಕ್ಷ್ಣವಾಗಿ ಇರುತ್ತದೆ. ಜತೆಗೆ ಜನ್ಮ ರಾಶಿಯ ಶನಿ ಮನಸು, ಬುದ್ಧಿ, ದೇಹಗಳನ್ನು ದುರ್ಬಲ ಮಾಡುತ್ತಾನೆ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ನಿಮ್ಮ ಮೇಲಧಿಕಾರಿಗಳ ಜತೆಗೆ ಜಗಳ ಮಾಡಿಕೊಂಡೋ ಅಥವಾ ಹುಂಬತನ ಮಾಡಿ ಕೆಲಸ ಬಿಟ್ಟರೆ ಬಹಳ ಕಷ್ಟ ಅನುಭವಿಸುತ್ತೀರಿ. ದೈವದ ಮೇಲೆ ಭಕ್ತಿ ಕಡಿಮೆ ಆಗಲಿದೆ. ಗುರು-ಹಿರಿಯರ ಬಗ್ಗೆ ಅಸಡ್ಡೆ ತೋರುವ ಸಾಧ್ಯತೆಗಳಿವೆ. ಹೀಗೆ ಮಾಡಿದರೆ ಮತ್ತಷ್ಟು ಕಷ್ಟ-ನಷ್ಟ ಅನುಭವಿಸುತ್ತೀರಿ. ಆದ್ದರಿಂದ ಮೇಲ್ಕಂಡ ಎಲ್ಲ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಿ. ನರಸಿಂಹ ದೇವರ ಆರಾಧನೆ ಮಾಡಿ. ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿ.

ಏಪ್ರಿಲ್ 2019 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯಏಪ್ರಿಲ್ 2019 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

 ಕುಂಭ ರಾಶಿ: ವಸ್ತು, ವಾಹನ, ಚಿನ್ನಾಭರಣ ಖರೀದಿಗೆ ಅನುಕೂಲ ಕಾಲ

ಕುಂಭ ರಾಶಿ: ವಸ್ತು, ವಾಹನ, ಚಿನ್ನಾಭರಣ ಖರೀದಿಗೆ ಅನುಕೂಲ ಕಾಲ

ಯುಗಾದಿಯ ಆರಂಭದ ಕೆಲ ದಿನ ಹನ್ನೊಂದರ ಗುರು, ಶನಿ, ಕೇತು ನಾನಾ ಬಗೆಯಲ್ಲಿ ಆದಾಯ ತಂದುಕೊಡುತ್ತವೆ. ವಾಹನ, ಒಡವೆ, ಗ್ಯಾಜೆಟ್, ಮನೆ, ಜಮೀನು ಖರೀದಿ, ಅಧಿಕಾರ ಪ್ರಾಪ್ತಿ ಇತ್ಯಾದಿ ಶುಭ ಫಲಗಳನ್ನು ನೀವು ಅನುಭವಿಸುತ್ತೀರಿ. ಮೇ ಆರಂಭದಿಂದ ನವೆಂಬರ್ ತನಕ ಗುರು ದಶಮದಲ್ಲಿ ಸಂಚಾರ ಮಾಡಿದರೂ ಉದ್ಯೋಗ ಸ್ಥಳದಲ್ಲಿ ಮನ್ನಣೆ, ಪದೋನ್ನತಿ, ಗಣ್ಯರ ಸಂಪರ್ಕ ದೊರೆಯಲಿದೆ. ನವೆಂಬರ್ ನಲ್ಲಿ ಮತ್ತೆ ಹನ್ನೊಂದನೇ ಮನೆಗೆ ಬರುವ ಗುರು ಪ್ರವೇಶ ಆಗುತ್ತದೆ. ಅಲ್ಲಿಂದ ಜನವರಿ ತನಕ ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ, ಹೂಡಿಕೆದಾರರಿಗೆ ಬಹಳ ಅತ್ಯುತ್ತಮ ಸಮಯ. ಜನವರಿಯಲ್ಲಿ ಶನಿಯು ಮಕರ ರಾಶಿಯನ್ನು ಪ್ರವೇಶ ಮಾಡುವುದರಿಂದ ಸಾಡೇಸಾತ್ ಆರಂಭ ಆಗುತ್ತದೆ. ದುಡ್ಡು ಕಾಸಿನ ವ್ಯವಹಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಕಾಗದ-ಪತ್ರಗಳಿಗೆ ಸಹಿ ಮಾಡುವಾಗ ಜೋಪಾನದಿಂದ ಇರಬೇಕು. ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ನಿಗಾ ಮಾಡಬೇಕಾಗುತ್ತದೆ. ಮಕ್ಕಳ ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇದ್ದರೆ ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ಸ್ವಲ್ಪ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಸಂವತ್ಸರದ ಕೊನೆಯ ಮೂರು ತಿಂಗಳು ಹೊರತುಪಡಿಸಿ, ಆಗಲೂ ಗುರು ಬಲ ಇರುತ್ತದೆ ತುಂಬ ಚಿಂತೆ ಬೇಡ, ಇಡೀ ಸಂವತ್ಸರ ನಿಮಗೆ ಚೆನ್ನಾಗಿದೆ.

 ಮೀನ ರಾಶಿ: ಶತ್ರು ಹಾಗೂ ಸಾಲ ಬಾಧೆ ನಿವಾರಣೆ

ಮೀನ ರಾಶಿ: ಶತ್ರು ಹಾಗೂ ಸಾಲ ಬಾಧೆ ನಿವಾರಣೆ

ಯುಗಾದಿಯ ಆರಂಭದ ಕೆಲ ದಿನ ಹತ್ತನೇ ಮನೆಯಲ್ಲಿ ಗುರು ಸಂಚಾರ ಆಗುತ್ತದೆ. ನಿಮ್ಮ ಜನ್ಮ ಜಾತಕದಲ್ಲಿ ಗುರು ಯಾವ ಸ್ಥಾನದಲ್ಲಿದ್ದಾನೆ ಎಂಬುದನ್ನು ನೋಡಿಕೊಳ್ಳಿ. ಶುಭ ಸ್ಥಾನದಲ್ಲಿ ಇದ್ದರೆ ಉದ್ಯೋಗದಲ್ಲಿ ಪ್ರಗತಿ, ಬಡ್ತಿ ಇತ್ಯಾದಿ ಶುಭ ಫಲ ಅನುಭವಿಸುತ್ತೀರಿ. ಒಂದು ವೇಳೆ ಅಶುಭ ಸ್ಥಾನದಲ್ಲಿ ಇದ್ದರೆ ಉದ್ಯೋಗ ವಿಚಾರದಲ್ಲಿ ಅಶುಭ ಬೆಳವಣಿಗೆಗಳು ಸಂಭವಿಸುತ್ತವೆ. ಮೇ ತಿಂಗಳಿಂದ ನವೆಂಬರ್ ಆರಂಭದ ತನಕ ಒಂಬತ್ತನೇ ಮನೆಯಲ್ಲಿ ಗುರು ಗ್ರಹ ಸಂಚರಿಸುವುದರಿಂದ ಪಿತ್ರಾರ್ಜಿತ ಆಸ್ತಿ ದೊರೆಯುವ ಸಾಧ್ಯತೆ, ಅದೃಷ್ಟ ಒಲಿದು ಬರಲಿದೆ. ಆ ನಂತರ ಮತ್ತೆ ಹತ್ತನೇ ಮನೆಯಲ್ಲಿ ಜಾತಕದ ಸ್ಥಿತಿ ಆಧಾರದಲ್ಲಿ ಫಲ ದೊರೆಯಲಿದೆ. ಇನ್ನು ಮುಂದಿನ ವರ್ಷದ ಜನವರಿ ತನಕ ಧನು ರಾಶಿಯಲ್ಲಿ ಶನಿ ಸಂಚಾರ ನಡೆಯುವಾಗ ಮೇಲಧಿಕಾರಿಗಳ ಜತೆ ವಿರಸ, ಭಿನ್ನಾಭಿಪ್ರಾಯ, ನಿಮ್ಮ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಆಗುತ್ತದೆ. ಆ ನಂತರ ಶನಿಯು ಹನ್ನೊಂದನೇ ಮನೆಯಲ್ಲಿ ಸಂಚರಿಸುವಾಗ ಆರೋಗ್ಯದಲ್ಲಿ ಚೇತರಿಕೆ, ಶತ್ರು- ಸಾಲ ಬಾಧೆ ನಿವಾರಣೆ, ನೀವು ಪಟ್ಟ ಶ್ರಮವನ್ನು ಗುರುತಿಸುವುದು, ಹಣಕಾಸು ಸ್ಥಿತಿ ಉತ್ತಮ ಆಗುವುದು ಸೇರಿದಂತೆ ಹಲವು ಬಗೆಯಲ್ಲಿ ಅನುಕೂಲಕರ ಸನ್ನಿವೇಶವನ್ನು ಎದುರುಗೊಳ್ಳುತ್ತೀರಿ. ಹತ್ತನೇ ಮನೆ ಗುರು, ಹನ್ನೊಂದನೇ ಮನೆಯಲ್ಲಿನ ಶನಿ ಉತ್ತಮ ಫಲಗಳನ್ನೇ ನೀಡುತ್ತಾರೆ.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
Here is an Ugadi Varsha Phal for Libra to Pisces. Sri Vikari Nama Samvatsar varsha phal in Kannada by well known astrologer Hari Shastri Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X