• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ: ಮೋದಿ ಅವರಿಗಿರುವ ಮಹಾಸಿಂಹಾಸನಾಧೀಶ್ವರ ಯೋಗದ ಫಲ ಏನು?

By ಕಬ್ಯಾಡಿ ಜಯರಾಮಾಚಾರ್ಯ
|
   Lok Sabha Elections 2019: ನರೇಂದ್ರ ಮೋದಿ ಹಾಗು ಇತರ ರಾಜಕೀಯ ನಾಯಕರ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ

   ಎಲ್ಲರಿಗೂ ನಮಸ್ಕಾರ. ಈಗ ನಾನು ಹೇಳುತ್ತಿರುವುದು ಶ್ರೀವಿಕಾರಿನಾಮ ಸಂವತ್ಸರದ ಫಲಾಫಲ. ಈ ಸಂವತ್ಸರಕ್ಕೆ ಶನಿಯು ರಾಜನಾಗಿರುತ್ತಾನೆ. ಈ ಬಾರಿ ರವಿ ಮಂತ್ರಿ ಆಗಿದ್ದಾನೆ. ಇದು ಚಾಂದ್ರಮಾನ ಯುಗಾದಿಯ ಪ್ರಕಾರ. ಇನ್ನು ಸೌರಮಾನ ಯುಗಾದಿ ಪ್ರಕಾರ ರವಿ ರಾಜನಾಗುತ್ತಾನೆ. ಚಂದ್ರ ಮಂತ್ರಿ ಆಗುತ್ತಾನೆ.

   ಈ ಬಾರಿ ಸೈನ್ಯಾಧಿಪತಿ ಶನಿ, ಅರ್ಘಾಧಿಪತಿ ಶನಿ, ಮೇಘಾಧಿಪತಿ ಶನಿ, ಸಸ್ಯ ಮತ್ತು ನೀರಸಾಧಿಪತಿ ಕುಜ. ರಸಾಧಿಪ ಗುರು. ಧಾನ್ಯಾಧಿಪತಿ ಚಂದ್ರ. ಕ್ಷತ್ರಾಧಿಪ ಕುಜ. ಆಶಾಧಿಪ ಶನಿ. ವ್ಯವಹಾರಾಧಿಪ ಗುರು. ವ್ಯಾಪಾರಾಧಿಪ ಶನಿ. ಒಂದು ಸಂವತ್ಸರದಲ್ಲಿ ಬರುವ ಹನ್ನೆರಡು ಸಂಕ್ರಾಂತಿ (ಆ ಪೈಕಿ ಮಕರ ಸಂಕ್ರಾಂತಿಗೆ ಪ್ರಾಶಸ್ತ್ಯ) ಆಧಾರದಲ್ಲಿ ಅಧಿಪತಿಗಳ ನಿರ್ಣಯ ಆಗುತ್ತದೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಪಾಪಿ ಗ್ರಹಗಳ ಮೇಲುಸ್ತುವಾರಿಯಲ್ಲೇ ಈ ಸಂವತ್ಸರದ ಆಗುಹೋಗುಗಳು ಸಂಭವಿಸಲಿವೆ. ಆದ್ದರಿಂದ ಇಡೀ ವಿಶ್ವಕ್ಕೆ, ಅದರಲ್ಲೂ ಭರತ ಖಂಡಕ್ಕೆ ಹವಾಮಾನ ವೈಪರೀತ್ಯ, ಆರ್ಥಿಕವಾದ ಏರುಪೇರು, ಸಾಮಾಜಿಕವಾದ ತೊಂದರೆ-ತೊಡಕುಗಳು, ಅಕ್ಕಪಕ್ಕ ದೇಶಗಳಿಂದ ತೊಂದರೆ ಇತ್ಯಾದಿ ಅಶುಭ ಫಲಗಳು ಸಂಭವಿಸಲಿವೆ. ಇದರಿಂದ ಆಂತರಿಕ, ಬಾಹ್ಯ ವ್ಯಾಪಾರ-ವಹಿವಾಟುಗಳಿಗೂ ಸಮಸ್ಯೆಗಳಾಗಲಿವೆ.

   ಇದರ ಜತೆಗೆ ಮಳೆ-ಬೆಳೆಗಳು ಏರುಪೇರಾಗಲಿವೆ. ಕ್ಷಾಮ- ಡಾಮರ ತಲೆದೋರಲಿದೆ. ಬೆಳೆ ನಾಶವಾಗುವುದರಿಂದ ಬೇಳೆ ಕಾಳುಗಳ ಬೆಲೆಯಲ್ಲಿ ವಿಪರೀತ ಏರಿಕೆ ಆಗಲಿದೆ. ರತ್ನ ಇತ್ಯಾದಿ ಬೆಲೆ ಬಾಳುವ ಲೋಹಗಳ ದರ ಏರಿಕೆ ಆಗಲಿದೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೂ ಈ ಸಂವತ್ಸರದ ನಕಾರಾತ್ಮಕ ಪ್ರಭಾವ ಆಗಲಿದೆ.

   ಜ್ಯೋತಿಷ್ಯ ವಿಶ್ಲೇಷಣೆ: ಈ 'ಪ್ರತಿಷ್ಠಿತ' ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು?

   ಇವೆಲ್ಲ ಒತ್ತಟ್ಟಿಗೆ ಇರಲಿ. ಈ ವರ್ಷದ ಮೇ ತಿಂಗಳಲ್ಲಿ ದೇಶದಲ್ಲಿ ನಡೆಯುವ ಲೋಕಸಭಾ ಚುನಾವಣೆ ಫಲಿತಾಂಶ ಬರಲಿದೆ. ಏಪ್ರಿಲ್ ಹನ್ನೊಂದರಿಂದ ಮೇ ಹತ್ತೊಂಬತ್ತರ ತನಕ ಮತದಾನ ನಡೆದು, ಮೇ ಇಪ್ಪತ್ಮೂರನೇ ತಾರೀಕು ಫಲಿತಾಂಶ ಪ್ರಕಟ ಆಗಲಿದೆ. ಈ ಚುನಾವಣೆ ಮೇಲೂ ಸಂವತ್ಸರದ ದುಷ್ಪ್ರಭಾವಗಳು, ತೊಂದರೆ- ತಾಪತ್ರಯಗಳು ಎದುರಾಗಲಿವೆ.

   ಈ ದೇಶದ ಬಹುಸಂಖ್ಯಾತ (ಹೆಚ್ಚಿನ) ಜನರಿಗೆ ಮಾನಸಿಕವಾದ ಕಿರಿಕಿರಿ, ಹಿಂಸೆ ಇರುತ್ತದೆ. ಇದೆಲ್ಲ ಇದ್ದರೂ ಸೌರಮಾನದ ಪ್ರಕಾರ ರವಿ ಅಧಿಪತಿ ಆಗುತ್ತಾನೆ. ರವಿಯು ಅಧಿಕಾರಕಾರಕ ಆದ್ದರಿಂದ ರಾಜಕೀಯ ಪ್ರಭುತ್ವ ಎಂಬುದು ಸುಸೂತ್ರವಾದ ವ್ಯಕ್ತಿಯ ಕೈಲಿ ಇರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜಕೀಯ ನೇತಾರರ ಜಾತಕ ವಿಮರ್ಶಿಸುತ್ತಾ ಯಾರಿಗೆ ಅಧಿಕಾರ ದಕ್ಕೀತು ಎಂಬುದನ್ನು ನೋಡೋಣ.

   ನರೇಂದ್ರ ಮೋದಿ ಅವರದು ವಿಶಿಷ್ಟ ಜಾತಕ

   ನರೇಂದ್ರ ಮೋದಿ ಅವರದು ವಿಶಿಷ್ಟ ಜಾತಕ

   ಇವರದು ಅನೂರಾಧ ನಕ್ಷತ್ರ, ವೃಶ್ಚಿಕ ರಾಶಿ. ತುಂಬ ವಿಶಿಷ್ಟವಾದ ಜಾತಕ. ಲಗ್ನದಲ್ಲಿ ಕುಜ ಇದ್ದು, ರುಚಕ ಯೋಗ, ಲಗ್ನದಲ್ಲೇ ಕುಜ-ಚಂದ್ರ ಇರುವುದರಿಂದ ಶಶಿ-ಮಂಗಳ ಯೋಗ, ಇದರ ಜತೆಗೆ ಗಜಕೇಸರಿ ಯೋಗ, ಇನ್ನು ನೀಚಭಂಗ ರಾಜಯೋಗ ಫಲ, ಏಕಾದಶದಲ್ಲಿ ರವಿ ಬುಧರಿದ್ದು, ರವಿ- ಬುಧ ನೈಪುಣ್ಯ ಫಲ ಅರ್ಥಾತ್ ಬುದ್ಧಿಮಾಥುರ್ಯ ಯೋಗ ಇದೆ. ಇವೆಲ್ಲಕ್ಕೂ ಮುಖ್ಯವಾಗಿ ಮಹಾ ಸಿಂಹಾಸನಾಧೀಶ್ವರ ಯೋಗ ಇದೆ. ಜತೆಜತೆಗೆ ಶ್ರೀನಾಥ ಯೋಗ, ಶ್ರೀಕಂಠ ಯೋಗ, ವಿರಿಂಚಿ ಯೋಗ, ಕಾಹಲ ಯೋಗ, ಮಹಾ ಅಮಲ ಯೋಗ ಹೀಗೆ ಹತ್ತಾರು ಮಹಾಪುರುಷ ಯೋಗ ಫಲ ಮತ್ತು ಮಹಾ ಸಾಮ್ರಾಟ ಯೋಗ ಫಲ ಇರುವ ಅದ್ಭುತವಾದ ಜಾತಕ ಇದು. ಈ ಎಲ್ಲಾ ಯೋಗಗಳಿಗೂ ಅದರದೇ ಪ್ರತ್ಯೇಕ ಶುಭ ಫಲಗಳಿವೆ. ಆದರೂ ಒಟ್ಟಾರೆಯಾಗಿ ಹೇಳಬೇಕೆಂದರೆ, ನರೇಂದ್ರ ಮೋದಿ ಅವರು ಜನ ನಾಯಕರಾಗಿ ಇರುತ್ತಾರೆ. ವಿಶೇಷ ಜನಾನುರಾಗಿ ಆಗುತ್ತಾರೆ. ರಾಜಕಾರಣದಲ್ಲಿ ಅವರು ಬಯಸಿದ್ದೆಲ್ಲವನ್ನೂ ಪಡೆಯುತ್ತಾರೆ. ರಾಷ್ಟ್ರಕ್ಕೆ ಆರ್ಥಿಕ ಸದೃಢತೆ ಕೊಡುತ್ತಾರೆ. ಇವರ ಆಡಳಿತದಲ್ಲಿ ಸ್ಥಿರತೆ ಇರುತ್ತದೆ. ವಿಶ್ವ ಮಾನ್ಯ ಪಡೆಯುತ್ತಾರೆ. ದೇಶ-ವಿದೇಶಗಳಲ್ಲಿ ಮನ್ನಣೆ ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಅಪಾಯದ ಹೊರತಾಗಿಯೂ ಪೂರ್ಣಾಯು ಯೋಗ ಇರುತ್ತದೆ. ಸೌರಮಾನ ಯುಗಾದಿ ಪ್ರಕಾರ ರವಿ ರಾಜನಾಗುತ್ತಾನೆ. ಆ ಪ್ರಕಾರ ಪ್ರಭುತ್ವವಾದಿಯೊಬ್ಬರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಆ ಕಾರಣಕ್ಕೆ ಈ ಬಾರಿ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶ ಇವರಿಗೆ ಹೆಚ್ಚಿದೆ.

   ರಾಹುಲ್ ಗಾಂಧಿ ಅವರ ದಶಾ-ಭುಕ್ತಿ ಶುಭವಾಗಿಲ್ಲ

   ರಾಹುಲ್ ಗಾಂಧಿ ಅವರ ದಶಾ-ಭುಕ್ತಿ ಶುಭವಾಗಿಲ್ಲ

   ರಾಹುಲ್ ಗಾಂಧಿ ಅವರದು ಜ್ಯೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿ. ಇಲ್ಲಿ ಗಮನಿಸಬೇಕಾದಂಥ ವಿಷಯ ಏನೆಂದರೆ, ಗೋಚಾರ ಪ್ರಕಾರವಾಗಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರದೂ ಒಂದೇ ಫಲ. ಆದರೆ ಜನ್ಮ ಜಾತಕ ರೀತಿಯಾಗಿ ಮೋದಿ ಅವರ ಜಾತಕದಲ್ಲಿ ಇರುವ ಮಹಾಯೋಗಗಳ ಸಮೀಪಕ್ಕೂ ಬಾರದಂಥ ಜಾತಕ ಇದು. ರಾಹುಲ್ ಅವರಿಗೆ ಸದ್ಯಕ್ಕೆ ಚಂದ್ರ ದಶೆ ಬುಧ ಭುಕ್ತಿ ನಡೆಯುತ್ತಿದೆ. ಚಂದ್ರ ಹಾಗೂ ಬುಧ ಪರಸ್ಪರ ಶತ್ರುಗಳು. ಇವರ ಜಾತಕದಲ್ಲಿ ಬುಧನು ಪಂಚಮದಲ್ಲಿ ಇರುವುದರಿಂದ ಅಂಥ ಒಳ್ಳೆ ಫಲ ನೀಡುವುದಿಲ್ಲ. ನರೇಂದ್ರ ಮೋದಿ ಅವರಿಗೆ ಈಗ ನಡೆಯುತ್ತಿರುವ ದಶಾ ಭುಕ್ತಿಯ ಅನುಕೂಲದ ಪ್ರಯೋಜನ ಇವರಿಗೆ ಇಲ್ಲ. ರಾಹುಲ್ ಗಾಂಧಿ ಅವರಿಗೆ ಲೋಕಸಭೆಗೆ ಗೆದ್ದ ಅಭ್ಯರ್ಥಿಗಳ ಬೆಂಬಲ ಸಿಗುವ ಸಾಧ್ಯತೆ ಕಡಿಮೆ. ಆದ್ದರಿಂದ ಅವರಿಗೆ ಉನ್ನತ ಹುದ್ದೆ ದೊರೆಯುವ ಸಂಭವ ಕಡಿಮೆಯಿದೆ. ರಾಹುಲ್ ಗಾಂಧಿ ಅವರ ಒಟ್ಟಾರೆ ಜಾತಕ ವಿಮರ್ಶೆ ಮಾಡಿದರೆ ಪ್ರಧಾನಿ ಆಗುವ ಯೋಗವೇ ಅವರಿಗೆ ಕಡಿಮೆ ಇದೆ. ಮಹಾ ಸಿಂಹಾಸನಾಧೀಶ ಯೋಗಗಳು ರಾಹುಲ್ ಗಾಂಧಿ ಅವರ ಜಾತಕದಲ್ಲೇ ಇಲ್ಲ. ಹಾಗಂತ ಶಕ್ತಿಹೀನವಾದ ಜಾತಕ ಅಂತಲ್ಲ.

   ದೇವೇಗೌಡರಿಗೆ ಸದ್ಯದ ಸನ್ನಿವೇಶದಲ್ಲಿ ಮಹಾ ಯೋಗಗಳಿಲ್ಲ

   ದೇವೇಗೌಡರಿಗೆ ಸದ್ಯದ ಸನ್ನಿವೇಶದಲ್ಲಿ ಮಹಾ ಯೋಗಗಳಿಲ್ಲ

   ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳಲು ಯೋಗ್ಯತೆ ಇರುವಂಥ ವ್ಯಕ್ತಿ ದೇವೇಗೌಡರು. ಆದರೆ ಅವರ ವಯಸ್ಸಿನ ಕಾರಣಕ್ಕೆ ಹಾಗೂ ಈ ಬಾರಿ ಅವರೆದುರು ಸ್ಪರ್ಧೆಗೆ ಇಳಿದಿರುವ ಅಭ್ಯರ್ಥಿಗೆ ಹೆಚ್ಚಿನ ಬಲ ಇರುವುದರಿಂದ ತುಸು ಬಲ ಕ್ಷೀಣಿಸಿದಂತಾಗುತ್ತದೆ. ಇವರ ಜನ್ಮ ಜಾತಕದಲ್ಲೂ ಗಜಕೇಸರಿ ಯೋಗ, ಶಶಿಮಂಗಳ ಯೋಗ, ಶುಕ್ರ ಬಲಿಷ್ಠನಾಗಿದ್ದಾನೆ. ದಶಮ ಕೇಂದ್ರದಲ್ಲಿ ಬುಧ ಗ್ರಹ ಇದೆ. ಹೀಗೆ ಜನ್ಮ ಜಾತಕದಲ್ಲಿ ಶುಭ ಯೋಗಗಳು ಇದ್ದರೂ ಅವರಿಗೂ ಈಗ ಚಂದ್ರ ದಶಾ ಬುಧ ಭುಕ್ತಿ ನಡೆಯುತ್ತಿದೆ. ಈ ಅವಧಿ ಅಷ್ಟು ಅನುಕೂಲಕರವಲ್ಲ. ಇನ್ನು ದೇವೇಗೌಡರದು ಪೂರ್ವಾಭಾದ್ರಾ ನಕ್ಷತ್ರ ಕುಂಭ ರಾಶಿ. ಗೋಚಾರ ರೀತಿಯಾಗಿ ನೋಡಿದರೆ ಚುನಾವಣೆ ನಡೆಯುವ ಸಮಯದಲ್ಲಿ ಅವರ ಗ್ರಹ ಗತಿ ಚೆನ್ನಾಗಿದೆ. ಚುನಾವಣೆ ಮಧ್ಯಂತರದ ತನಕ ಏಕಾದಶದಲ್ಲಿ ಶನಿ- ಗುರು, ಆ ನಂತರ ಏಕಾದಶದಲ್ಲಿ ಶನಿ, ದಶಮ ಕೇಂದ್ರದಲ್ಲಿ ಗುರು ಇರುತ್ತಾರೆ. ಹೀಗೆ ಇರುವುದರಿಂದ ಗೋಚಾರದಲ್ಲಿ ಚೆನ್ನಾಗಿದ್ದರೂ ಮತ್ತೆ ಪ್ರಧಾನಿ ಆಗುವ ಮಟ್ಟದ ಯೋಗಗಳು ಅವರ ಜಾತಕದಲ್ಲಿ ಇಲ್ಲ.

   ಪ್ರಿಯಾಂಕಾ ಗಾಂಧಿ ವಾದ್ರಾಗೆ ಗಟ್ಟಿ ಯೋಗಗಳಿಲ್ಲ

   ಪ್ರಿಯಾಂಕಾ ಗಾಂಧಿ ವಾದ್ರಾಗೆ ಗಟ್ಟಿ ಯೋಗಗಳಿಲ್ಲ

   ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜಾತಕ ವಿಮರ್ಶೆ ಮಾಡುವುದಾದರೆ, ಸಪ್ತಮದಲ್ಲಿ ಗುರು ಸ್ವಕ್ಷೇತ್ರದಲ್ಲಿ ಇದ್ದು, ಹಂಸಕ ಯೋಗವಿದೆ. ರವಿ-ಬುಧ ನೈಪುಣ್ಯ ಯೋಗ, ದಶಮ ಕೇಂದ್ರದಲ್ಲಿ ಬಲಿಷ್ಠ ಕುಜ, ಭಾಗ್ಯ ಸ್ಥಾನದಲ್ಲಿ ಶುಕ್ರ ಇದ್ದಾನೆ. ಹೀಗೆ ಶುಭ ಯೋಗಗಳೇ ಇದ್ದರೂ ನರೇಂದ್ರ ಮೋದಿ ಅವರ ಜಾತಕದ ಜತೆ ತುಲನಾತ್ಮಕವಾಗಿ ನೋಡುವಾಗ ಅಷ್ಟು ಗಟ್ಟಿ ಯೋಗಗಳಿಲ್ಲ. ಗೋಚಾರ ರೀತಿ ನೋಡಿದರೂ ಇವರಿಗೂ ಏರುಪೇರುಗಳನ್ನು ಕಾಣಬೇಕಾದ ಸ್ಥಿತಿ ಏರ್ಪಡುತ್ತದೆ. ಅಂದಹಾಗೆ ಪ್ರಿಯಾಂಕಾ ಗಾಂಧಿ ಅವರದೂ ಅನೂರಾಧಾ ನಕ್ಷತ್ರ ವೃಶ್ಚಿಕ ರಾಶಿ. ನರೇಂದ್ರ ಮೋದಿ ಅವರದು ಇದೇ ನಕ್ಷತ್ರ, ರಾಶಿ. ಗೋಚಾರ ರೀತಿಯಾಗಿ ಇಬ್ಬರದೂ ಒಂದೇ ರೀತಿಯಲ್ಲಿ ಇದ್ದರೂ ಜನ್ಮ ಜಾತಕದ ಯೋಗಗಳ ಪ್ರಕಾರ ಹೋಲಿಕೆ ಕೂಡ ಮಾಡಲಾಗದಂಥ ಅದ್ಭುತ ಯೋಗ ಫಲಗಳು ನರೇಂದ್ರ ಮೋದಿ ಜನ್ಮ ಜಾತಕದಲ್ಲಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ಈಗ ಶುಕ್ರಾ ದಶಾ ಶನಿ ಭುಕ್ತಿ ನಡೆಯುತ್ತಿದೆ. ಅದು ಅಷ್ಟು ಅನುಕೂಲಕರ ಅಲ್ಲ. ಲಗ್ನಾತ್ ವ್ಯಯ ಭಾವದಲ್ಲಿ ಶನಿ ಇರುವುದರಿಂದ ಸದ್ಯಕ್ಕೆ ರಾಜಕಾರಣದಲ್ಲಿ ಅಂದುಕೊಂಡ ಮಟ್ಟಿಗಿನ ಯಶಸ್ಸು ಇವರಿಗೆ ದೊರಕುವುದಿಲ್ಲ. ಮುಂದೆ ಭವಿಷ್ಯದಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತಮವಾಗಿದೆ.

   ಮಾಯಾವತಿಗೆ ಅಗತ್ಯ ಬೆಂಬಲ ಸಿಗುವುದಿಲ್ಲ

   ಮಾಯಾವತಿಗೆ ಅಗತ್ಯ ಬೆಂಬಲ ಸಿಗುವುದಿಲ್ಲ

   ಮಾಯಾವತಿ ಅವರ ಜಾತಕ ಹೇಗಿದೆ ಅಂತ ನೋಡುವುದಾದರೆ, ಲಗ್ನದಲ್ಲಿ ಗುರು, ಷಷ್ಠದಲ್ಲಿ ರವಿ-ಬುಧ ನೈಪುಣ್ಯ ಯೋಗ, ಚತುರ್ಥದಲ್ಲಿ ಶನಿ-ಕುಜ ಇತ್ಯಾದಿ ಯೋಗಫಲಗಳಿವೆ. ಅವರಿಗೆ ಸದ್ಯದ ಸ್ಥಿತಿಯಲ್ಲಿ ಗುರು- ಶನಿ ಗ್ರಹಗಳು ವ್ಯಯ ಭಾವದಲ್ಲಿ ಇವೆ. ಅಂದಹಾಗೆ ಮಾಯಾವತಿ ಅವರದು ಧನಿಷ್ಠಾ ನಕ್ಷತ್ರ, ಮಕರ ರಾಶಿ. ಅ ಕಾರಣಕ್ಕೆ ಗೋಚಾರ ರೀತಿಯಾಗಿಯೇ ಪ್ರಧಾನಿ ಹುದ್ದೆಗೆ ಏರುವಂಥ ಶುಭ ಫಲಗಳು ಇವರ ಜಾತಕದಲ್ಲಿ ಇಲ್ಲ. ದೇಶದ ಅತಿ ಮುಖ್ಯ ಹುದ್ದೆಗೆ ಇವರ ಹೆಸರನ್ನು ಸೂಚಿಸುವುದಕ್ಕೆ ಬೇಕಾದಷ್ಟು ಬೆಂಬಲ ದೊರೆಯುವುದಿಲ್ಲ.

   ಮಮತಾ ಬ್ಯಾನರ್ಜಿಗೆ ಗೋಚಾರ, ದಶಾಭುಕ್ತಿ ಸರಿಯಿಲ್ಲ

   ಮಮತಾ ಬ್ಯಾನರ್ಜಿಗೆ ಗೋಚಾರ, ದಶಾಭುಕ್ತಿ ಸರಿಯಿಲ್ಲ

   ಪ್ರಧಾನಿ ಹುದ್ದೆ ರೇಸಿನಲ್ಲಿ ಇರುವ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಮಮತಾ ಬ್ಯಾನರ್ಜಿ. ಅವರದು ಕೃತ್ತಿಕಾ ನಕ್ಷತ್ರ ವೃಷಭ ರಾಶಿ. ಇವರಿಗೆ ಚುನಾವಣಾ ಮಧ್ಯಂತರ ಕಾಲದ ತನಕ ಗುರು ಅಷ್ಟಮದಲ್ಲಿರುತ್ತಾನೆ. ಚುನಾವಣೆ ಮುಗಿಯುವ ತನಕ ಶನಿಯು ಅಷ್ಟಮದಲ್ಲಿ ಇರುತ್ತಾನೆ. ಇವರಿಗೆ ಗೋಚಾರದಾ ಸಮಸ್ಯೆ, ದಶಾ-ಭುಕ್ತಿಗಳ ಸಮಸ್ಯೆ ಇರುವುದರಿಂದ ನಿರೀಕ್ಷಿತವಾದ ಫಲಿತಾಂಶ ದೊರೆಯುವುದಿಲ್ಲ. ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ರಾಜ್ಯವಾದ ಪಶ್ಚಿಮ ಬಂಗಾಲದಲ್ಲೇ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಅಲ್ಲಿ ಸ್ಥಾನಮಾನ ಉಳಿಸಿಕೊಳ್ಳುವುದೇ ಸವಾಲಾಗಬಹುದು.

   ಅಖಿಲೇಶ್ ಯಾದವ್ ಜನ್ಮ ಜಾತಕ, ಗೋಚಾರ ಎರಡೂ ಸರಿಯಿಲ್ಲ

   ಅಖಿಲೇಶ್ ಯಾದವ್ ಜನ್ಮ ಜಾತಕ, ಗೋಚಾರ ಎರಡೂ ಸರಿಯಿಲ್ಲ

   ಅಖಿಲೇಶ್ ಯಾದವ್ ಅವರ ಜಾತಕ ನೋಡುವುದಾದರೆ, ಅವರದು ಮಿಥುನ ರಾಶಿ. ಲೋಕಸಭೆ ಚುನಾವಣೆ ಮಧ್ಯಂತರ ಕಾಲದ ನಂತರ ಗುರುವೂ ಅನುಕೂಲನಾಗಿ ಇರುವುದಿಲ್ಲ. ಶನಿಯೂ ಅನುಕೂಲನಾಗಿ ಇರುವುದಿಲ್ಲ. ಜತೆಗೆ ಈಗ ಕೇತು ದಶೆ ನಡೆಯುತ್ತಾ ಇದೆ. ಮುಂದಿನ ಮೂರು ವರ್ಷದ ತನಕ ಇವರಿಗೆ ಕೇತು ದಶೆಯೇ ನಡೆಯುತ್ತದೆ. ಅಖಿಲೇಶ್ ಯಾದವ್ ರ ಜನ್ಮ ಜಾತಕ ಹಾಗೂ ಗೋಚಾರ ಫಲ ಎರಡೂ ಬಗೆಯಲ್ಲೂ ಉತ್ತಮವಾಗಿಲ್ಲ. ಅಖಿಲೇಶ್ ಯಾದವ್ ನಿರೀಕ್ಷಿಸಿದಂಥ ಬಲ ಸಿಗುವುದಿಲ್ಲ. ಇವರೂ ವಿಶೇಷವಾದ ಸ್ಪರ್ಧೆ ಒಡ್ಡಲಾರರು. ಇವರೆಲ್ಲ ಒಂದು ಸೇರಿದರೂ ಒಟ್ಟಾರೆಯಾಗಿ ಶಕ್ತಿಯಾಗಿ ಮೂಡಬಲ್ಲಂಥ ಸಾಧ್ಯವಿಲ್ಲ. ಯಾರಿಗೂ ಜನ್ಮ ಜಾತಕದಲ್ಲಿ ಅಂಥ ಬಲಿಷ್ಠ ಬಲವಿಲ್ಲ. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಪರ್ಧೆ ಕೊಡುವಂಥ ಗ್ರಹ ಬಲ ಯಾರಿಗೂ ಇಲ್ಲ. ನನಗೆ ನಾನಾ ಮೂಲಗಳಿಂದ ದೊರೆತ ಮಾಹಿತಿ ಆಧಾರದಲ್ಲಿ ಜಾತಕ ರಚಿಸಿ, ಈ ಫಲ ಹೇಳಿದ್ದೇನೆ. ಜ್ಯೋತಿಷಿಯಾಗಿ ನನ್ನ ಅಧ್ಯಯನದ ಆಧಾರದಲ್ಲಿ ಇವನ್ನು ತಿಳಿಸಿದ್ದೇನೆ. ಮಹಾಸಿಂಹಾಸನಾಧೀಶ್ವರ ಯೋಗ ಇರುವುದರಿಂದ ತಾನಾಗಿಯೇ ಇಳಿಯದ ಹೊರತು ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಇಳಿಸುವುದು ಕಷ್ಟ. ಜತೆಗೆ ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಗೆ ಅನುಕೂಲವಾದ ಗ್ರಹ ಸ್ಥಿತಿಯ ಬೆಂಬಲ ಇದೆ.

   ಜ್ಯೋತಿಷಿ ಕಬ್ಯಾಡಿ ಜಯರಾಮಾಚಾರ್ಯ ಅವರ ವೈಯಕ್ತಿಕ ಭೇಟಿಗಾಗಿ ಸಂಫರ್ಕ ಸಂಖ್ಯೆ 9535616938

   English summary
   Vikarainama Samvatsar varsha phal from Lok sabha elections to economy. Here is the prediction by well known astrologer Kabiyadi Jayarama Acharya on the basis of vedic astrology. Horoscope analysis of Narendra Modi, HD Deve Gowda, Rahul Gandhi, Priyanka Gandhi, Mayawati, Akhilesh Yadav, Mamata Banerjee in Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X