• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?

By ಶಂಕರ್ ಭಟ್
|

ಇದೇ ತಿಂಗಳು, ಜೂನ್ 21ನೇ ತಾರೀಕು ಭಾನುವಾರ ಖಂಡಗ್ರಾಸ ಸೂರ್ಯಗ್ರಹಣ ಇದೆ. ಜ್ಯೇಷ್ಠ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಮೃಗಶಿರ ನಕ್ಷತ್ರ, ಮಿಥುನ ರಾಶಿಯಲ್ಲಿ ಇರುವ ಈ ರಾಹುಗ್ರಸ್ತ ಸೂರ್ಯಗ್ರಹಣವನ್ನು ಚೂಡಾಮಣಿ ಗ್ರಹಣ ಅಂತಲೂ ಕರೆಯಲಾಗುತ್ತದೆ. ನಿಮಗೆ ನೆನಪಿರಲಿ, ಸೂರ್ಯ ಗ್ರಹಣ ಯಾವಾಗಲೂ ಅಮಾವಾಸ್ಯೆಯಂದು, ಚಂದ್ರಗ್ರಹಣ ಪೌರ್ಣಮಿಯಂದು ಸಂಭವಿಸುತ್ತದೆ.

   Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada

   ಗ್ರಹಣಗಳು ಸಂಭವಿಸುತ್ತಲೇ ಇರುತ್ತವೆ. ಅದರ ಬಗ್ಗೆ ಯಾವುದೇ ಆತಂಕ ಬೇಡ. ಈ ಗ್ರಹಣ ಭಾರತದಲ್ಲಿ ಗೋಚರ ಆಗಲಿದೆ. ಆ ಕಾರಣಕ್ಕೆ ದ್ವಾದಶ ರಾಶಿಯವರ ಪೈಕಿ ಯಾರ್ಯಾರಿಗೆ ಶುಭಾಶುಭ ಫಲಗಳು ಎಂದು ತಿಳಿಸಿಕೊಡುವ ಲೇಖನ ಇದು. ಅದಕ್ಕೂ ಮುನ್ನ ಯಾವ ರಾಶಿಗಳಿಗೆ ಶುಭ, ಅಶುಭ ಹಾಗೂ ಮಿಶ್ರ ಫಲ ಎಂಬುದನ್ನು ತಿಳಿಯೋಣ.

   ಜೂನ್ 21 ಖಂಡಗ್ರಾಸ ಸೂರ್ಯಗ್ರಹಣ: ಮನುಕುಲಕ್ಕೆ ಮಾರಕವೇ? ಇಲ್ಲಿದೆ ಭವಿಷ್ಯ

   ಶುಭ ಫಲಗಳು: ಮೇಷ, ಸಿಂಹ, ಕನ್ಯಾ, ಮಕರ

   ಅಶುಭ ಫಲಗಳು: ಮಿಥುನ, ಕರ್ಕಾಟಕ, ವೃಶ್ಚಿಕ, ಮೀನ

   ಮಿಶ್ರ ಫಲಗಳು: ವೃಷಭ, ತುಲಾ, ಧನುಸ್ಸು, ಕುಂಭ

   ಜೂನ್ 21ನೇ ತಾರೀಕಿನಂದು ಭಾರತೀಯ ಕಾಲಮಾನ ಬೆಳಗ್ಗೆ 10.05ಕ್ಕೆ ಗ್ರಹಣ ಸ್ಪರ್ಶ ಕಾಲವಾದರೆ, ಬೆಳಗ್ಗೆ 11.39ಕ್ಕೆ ಗ್ರಹಣದ ಮಧ್ಯ ಕಾಲ. ಮಧ್ಯಾಹ್ನ 1.25ಕ್ಕೆ ಮೋಕ್ಷ ಕಾಲ. ಮೃಗಶಿರಾ, ಆರಿದ್ರಾ, ಚಿತ್ತಾ, ಧನಿಷ್ಠಾ, ರೋಹಿಣಿ ಹಾಗೂ ಧನು, ಕನ್ಯಾ, ಮಕರ ಹಾಗೂ ವೃಷಭ ರಾಶಿಯವರಿಗೂ ಗ್ರಹಣ ಶಾಂತಿ ಆಗುವುದರಿಂದ ಶುಭ ಫಲ ದೊರೆಯುತ್ತದೆ.

   ಈಗ ದ್ವಾದಶ ರಾಶಿಗಳ ಮೇಲೆ ಸೂರ್ಯ ಗ್ರಹಣದ ಪರಿಣಾಮ ಏನು ಹಾಗೂ ಪರಿಣಾಮ ಏನು ಎಂಬುದರ ವಿವರ ಇಲ್ಲಿದೆ.

   ಮೇಷ

   ಮೇಷ

   ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಗ್ರಹಣ ಸಂಭವಿಸಿದೆ. ಈ ವರೆಗೆ ಯಾರ್ಯಾರಿಗೆ ಸೋದರ- ಸೋದರಿಯರ ಜತೆಗೆ ಭಿನ್ನಾಭಿಪ್ರಾಯ ಇದ್ದಲ್ಲಿ, ಮನಸ್ತಾಪ ಮಾಡಿಕೊಂಡಿದ್ದಲ್ಲಿ ಅದು ದೂರವಾಗಲಿದೆ. ಬಾಂಧವ್ಯ ಗಟ್ಟಿಯಾಗಲಿದೆ. ಇನ್ನು ಪಿತ್ರಾರ್ಜಿತ ಆಸ್ತಿ ವಿಚಾರಗಳು ವ್ಯಾಜ್ಯಗಳು ಇದ್ದಲ್ಲಿ ಬಗೆಹರಿಯಲಿವೆ. ಸಾಲವನ್ನು ನೀಡಿ, ಹಣಕಾಸು ಬಾಕಿ ಬರಬೇಕಿದ್ದಲ್ಲಿ ಬರಲಿದೆ. ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಈ ಗ್ರಹಣಕ್ಕೆ ಒಟ್ಟಾರೆ 48 ದಿನಗಳ ಕಾಲ ಪ್ರಭಾವ ಇರಲಿದೆ. ಆದ್ದರಿಂದ ನಿಮ್ಮ ಜಾತಕದಲ್ಲಿ ರಾಹು ಮತ್ತು ರವಿ ಗ್ರಹದ ಸ್ಥಿತಿಯನ್ನು ಸಹ ಗಮನಿಸಬೇಕಾಗುತ್ತದೆ. ಅದರ ಜತೆಗೆ ನಿಮ್ಮ ರಾಶ್ಯಾಧಿಪತಿ ಅನುಗ್ರಹವೂ ಮುಖ್ಯವಾಗುತ್ತದೆ.

   ವೃಷಭ

   ವೃಷಭ

   ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಗ್ರಹಣ ಸಂಭವಿಸಲಿದ್ದು, ಹಣಕಾಸು ವಿಚಾರದಲ್ಲಿ ಶುಭ ಹಾಗೂ ಅಶುಭ ಫಲಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಬರಬೇಕಾದ ಬಾಕಿ ಹಣ ತಡವಾಗಬಹುದು. ಹೊಸ ಯೋಜನೆಗಳು ಇದ್ದಲ್ಲಿ ಅದಕ್ಕೆ ಹಣಕಾಸು ಹೊಂದಿಸಲು ಕಷ್ಟವಾಗಲಿದೆ. ಈ ಅವಧಿಯಲ್ಲಿ ದುಡ್ಡಿನ ವಿಚಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೊಸಬರ ಜತೆ ಆರ್ಥಿಕ ವ್ಯವಹಾರಗಳನ್ನು ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ನೀವಾಗಿಯೇ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆ ಇರುತ್ತದೆ. ಆ ಕಾರಣಕ್ಕೆ ಯಾವುದೇ ನಿರ್ಧಾರವನ್ನು ಆತುರದಲ್ಲಿ ಮಾಡಬೇಡಿ.

    ಮಿಥುನ

   ಮಿಥುನ

   ನಿಮ್ಮ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿದ್ದು, ಉಳಿದೆಲ್ಲ ರಾಶಿಗಳಿಗಿಂತ ಬಹಳ ಎಚ್ಚರಿಕೆಯಿಂದ ಇರಬೇಕಾದವರು ನೀವು. ಏಕೆಂದರೆ ಜನ್ಮ ರಾಶಿಯಲ್ಲಿ ಗ್ರಹಣ ನಡೆಯಲಿದ್ದು, ಜತೆಗೆ ಎಂಟನೇ ಮನೆಯಲ್ಲಿ ಗುರು, ಶನಿ ಎರಡೂ ಗ್ರಹಗಳು ಇರುವುದರಿಂದ ಹೆಚ್ಚು ಸಮಸ್ಯೆಗಳು ಎದುರಾಗಬಹುದು. ಆರೋಗ್ಯ ಸಮಸ್ಯೆಗಳು, ವಾಹನ ಚಾಲನೆ ವೇಳೆ ಬಿದ್ದು ಸಣ್ಣ- ಪುಟ್ಟ ಗಾಯ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇತ್ಯಾದಿ ಅಶುಭ ಫಲಗಳು ಕಾಣುವ ಸಾಧ್ಯತೆ ಇದೆ. ಆದ್ದರಿಂದ ಸೂಕ್ತ ಶಾಂತಿ- ದಾನಗಳನ್ನು ಮಾಡುವುದು ಅಗತ್ಯ. ಈ ವಿಚಾರ ಆಯಾ ವ್ಯಕ್ತಿಯ ನಂಬಿಕೆಗೆ ಬಿಟ್ಟಿದ್ದು. ಆದರೆ ಶಾಂತಿ- ದಾನಗಳನ್ನು ಮಾಡಿಸಿಕೊಂಡರೆ ಕ್ಷೇಮ.

    ಕರ್ಕಾಟಕ

   ಕರ್ಕಾಟಕ

   ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ವ್ಯಯ ಅಂದರೆ ಖರ್ಚಿನ ಪ್ರಮಾಣ ಜಾಸ್ತಿ ಆಗುತ್ತದೆ. ನಷ್ಟ ಆಗುವ ಸಾಧ್ಯತೆಗಳು ಹೆಚ್ಚು. ಮುಖ್ಯ ದಾಖಲೆ- ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಇನ್ನು ದೊಡ್ಡ ಮಟ್ಟದ ಹೂಡಿಕೆ ಹಾಗೂ ಹೂಡಿಕೆ ನಿರ್ಧಾರಗಳನ್ನು ತಾತ್ಕಾಲಿಕವಾಗಿ ಮಾಡಬಾರದು. ಅತಿಯಾದ ಬಡ್ಡಿ ಅಥವಾ ಲಾಭದ ಆಸೆಗೆ ಹಣ ಕಳೆದುಕೊಳ್ಳುವ ಯೋಗ ಇದೆ. ಆದ್ದರಿಂದ ಈ ಅವಧಿಯಲ್ಲಿ ಖರ್ಚು- ವೆಚ್ಚದ ಬಗ್ಗೆ ನಿಗಾ ಇರಲಿ. ಇಷ್ಟೆಲ್ಲ ಎಚ್ಚರಿಕೆಯಿಂದ ಇದ್ದರೂ ಆರೋಗ್ಯ ವಿಚಾರಕ್ಕಾದರೂ ಖರ್ಚು ಮಾಡಬೇಕಾದ ಸನ್ನಿವೇಶ ಕೆಲವರಿಗೆ ಎದುರಾಗಬಹುದು.

    ಸಿಂಹ

   ಸಿಂಹ

   ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಅಂದರೆ ಅದು ಲಾಭ ಸ್ಥಾನ. ಇಲ್ಲಿ ನಡೆಯುವ ಈ ಗ್ರಹಣದಿಂದ ವ್ಯಾಪಾರ- ವ್ಯವಹಾರದಲ್ಲಿ ಲಾಭ ಆಗಲಿದೆ. ನಿಮಗೆ ಬರಬೇಕಾದ ಲಾಭದ ಪಾಲು ಸಿಗಲಿದೆ. ದೀರ್ಘಾವಧಿ ಹೂಡಿಕೆಗಳು ಉತ್ತಮ ರಿಟರ್ನ್ಸ್ ನೀಡುವ ಸಾಧ್ಯತೆ ಇದೆ. ಇನ್ನು ಸರ್ಕಾರದ ಕೆಲಸ- ಕಾರ್ಯಗಳು, ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲೂ ಲಾಭ ಪಡೆಯುವ ಅವಕಾಶಗಳು ಇರುತ್ತವೆ. ಆದರೆ ಗುರು ಅನುಗ್ರಹ ಬಹಳ ಮುಖ್ಯ ಆಗುತ್ತದೆ. ಆಗ ಪೂರ್ಣ ಪ್ರಮಾಣದಲ್ಲಿ ಗ್ರಹಣ ಸಂಭವಿಸುವುದರ ಶುಭ ಫಲ ದೊರೆಯಲಿದೆ.

   ಕನ್ಯಾ

   ಕನ್ಯಾ

   ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಇದು ಕರ್ಮ ಸ್ಥಾನ. ಪಂಚಮ ಶನಿಯ ಪ್ರಭಾವದಿಂದ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಮಸ್ಯೆ ಎದುರಿಸುತ್ತಿದ್ದಲ್ಲಿ ಅದರಿಂದ ಬಿಡುಗಡೆ ಪಡೆಯುವುದಕ್ಕೆ ದಾರಿ ಗೋಚರವಾಗುತ್ತದೆ. ಇನ್ನು ಕೆಲವರಿಗೆ ಹೊಸ ಉದ್ಯೋಗಾವಕಾಶ ಬರಬಹುದು. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪೂರ್ವಾಪರ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಬೇಕು. ಏಕೆಂದರೆ, ಈ ಸಂದರ್ಭದಲ್ಲಿ ನಾನಾ ಭರವಸೆಗಳನ್ನು ನೀಡಿ, ಕೆಲಸಕ್ಕೆ ಸೇರುವಂತೆ ಮಾಡಿದ ಮೇಲೆ ಕೊಟ್ಟ ಮಾತು ಉಳಿಸಿಕೊಳ್ಳದಿರಬಹುದು. ಆಗ ನಿಮ್ಮ ಪರಿಸ್ಥಿತಿ ಕಷ್ಟವಾಗುತ್ತದೆ.

    ತುಲಾ

   ತುಲಾ

   ನಿಮ್ಮ್ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದ್ದು, ತಂದೆಯ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇದೇ ವೇಳೆ ಅದೃಷ್ಟ ಸ್ಥಾನವೂ ಹೌದು. ಅನಿರೀಕ್ಷಿತವಾದ ಲಾಭ ಬಂದು, ಇನ್ನಷ್ಟು ಹೂಡಿಕೆ ಮಾಡುವುದಕ್ಕೆ ಹುರುಪು ಬರಬಹುದು. ಅದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಲಾಭ- ನಷ್ಟ ಎರಡನ್ನೂ ಕಾಣುವಂತಾಗುತ್ತದೆ. ಇದನ್ನೇ ಮಿಶ್ರ ಫಲ ಎನ್ನಲಾಗುತ್ತದೆ. ಆದ್ದರಿಂದ ಸಮಚಿತ್ತದಿಂದ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಜೂಜು, ಸಟ್ಟಾ ವ್ಯವಹಾರಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

    ವೃಶ್ಚಿಕ

   ವೃಶ್ಚಿಕ

   ಮಿಥುನ ರಾಶಿಯವರನ್ನು ಹೊರತುಪಡಿಸಿದರೆ ಎಚ್ಚರಿಕೆಯಿಂದ ಇರಬೇಕಾದವರು ನೀವು. ಏಕೆಂದರೆ ಎಂಟನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಆಯುಷ್ಯ ಸ್ಥಾನ ಅದು. ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಆಹಾರ ಪಥ್ಯ, ವ್ಯಾಯಾಮ ಹಾಗೂ ಶಿಸ್ತು ಪಾಲಿಸಿ. ಇಲ್ಲದಿದ್ದಲ್ಲಿ ಕೆಲವು ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಉದ್ಯೋಗ ಬಿಡುವಂಥ ಆಲೋಚನೆ ಬರಬಹುದು. ಅಲ್ಲಿನ ವಾತಾವರಣ ಹಾಳಾಗಬಹುದು. ಆ ಕಡೆಗೆ ಗಮನ ನೀಡದಿರಿ. ತಾತ್ಕಾಲಿಕವಾಗಿ ಮೌನ ವಹಿಸುವುದು ಸೂಕ್ತ.

    ಧನುಸ್ಸು

   ಧನುಸ್ಸು

   ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಕಳತ್ರ ಸ್ಥಾನ ಇದು. ಸಂಗಾತಿ ಜತೆಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳಿ. ಯಾವುದೇ ಮುಚ್ಚು- ಮರೆ ಮಾಡಬೇಡಿ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಮಿಶ್ರ ಫಲ ಕಂಡುಬರುತ್ತದೆ. ಲಾಭದ ಪ್ರಮಾಣ ಕಡಿಮೆ ಆಗಬಹುದು. ಪಾರ್ಟನರ್ ಜತೆಗೆ ಹಣಕಾಸಿನ ವಿಷಯಕ್ಕೆ ಭಿನ್ನಾಭಿಪ್ರಾಯ ತಲೆದೋರಬಹುದು. ಆದ್ದರಿಂದ ಮುಕ್ತ ಮನಸ್ಸಿನಿಂದ ಇರಬೇಕು. ಯಾವುದೇ ಅನುಮಾನಗಳು ಉದ್ಭವಿಸಿದಲ್ಲಿ ಅದನ್ನು ಮಾತನಾಡಿ, ಬಗೆಹರಿಸಿಕೊಳ್ಳಬೇಕು. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರು ಕಾಗದ- ಪತ್ರಗಳ ಕಡೆಗೆ ಗಮನ ನೀಡಿ.

   ಮಕರ

   ಮಕರ

   ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಇದರಿಂದ ಶತ್ರು ಬಾಧೆಗಳು ಇದ್ದಲ್ಲಿ ನಿವಾರಣೆ ಆಗಲಿದೆ. ಇನ್ನು ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಕೂಡ ನಿವಾರಣೆ ಆಗಲಿದೆ. ಕೋರ್ಟ್ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ನಿಮ್ಮ ಪರವಾಗಿ ಬೆಳವಣಿಗೆಗಳು ನಡೆಯಲಿವೆ. ಭೂಮಿ ವ್ಯವಹಾರದಲ್ಲಿ ಹಣಕಾಸಿನ ವಿಚಾರಕ್ಕೆ ಗೊಂದಲಗಳು ಇದ್ದಲ್ಲಿ ಪರಿಹರಿಸಿಕೊಳ್ಳುವುದಕ್ಕೆ ಸೂಕ್ತ ವೇದಿಕೆ ನಿಮಗೆ ದೊರೆಯಲಿದೆ. ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರ, ಲಾಟರಿಯಂಥದ್ದರಿಂದ ಧನಾಗಮ ಆಗುವ ಸಾಧ್ಯತೆ ಇದೆ. ಆದರೆ ಸಾಡೇಸಾತ್ ಶನಿ ಇರುವುದರಿಂದ ದುರಾಲೋಚನೆಗಳಿಂದ ದೂರ ಇರಿ.

    ಕುಂಭ

   ಕುಂಭ

   ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ಯಾವುದೇ ಔಷಧ ಸೇವನೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಶೈಕ್ಷಣಿಕವಾಗಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಅಗತ್ಯವೇ ಇಲ್ಲದ ವಸ್ತುಗಳ ಖರೀದಿಗೆ ಕೈ ಹಾಕಬೇಡಿ. ಕ್ರೆಡಿಟ್ ಕಾರ್ಡ್ ಬಳಸುವವರು ಖರ್ಚಿನ ಮೇಲೆ ಮಿತಿ ಹಾಕಿಕೊಳ್ಳಿ. ಈಗ ಸಾಲ ಮಾಡಿದರೆ ಅದನ್ನು ತೀರಿಸುವುದು ಕಷ್ಟವಾಗಬಹುದು. ಇದರಿಂದ ಅವಮಾನದ ಪಾಲಾಗುತ್ತೀರಿ.

    ಮೀನ

   ಮೀನ

   ನಿಮ್ಮ ರಾಶಿಯಿಂದ ನಾಲ್ಕನೇ ಸ್ಥಾನದಲ್ಲಿ ಗ್ರಹಣ ನಡೆಯುತ್ತಿದ್ದು, ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಅದರ ಜತೆಗೆ ಮಧುಮೇಹ, ಸ್ಥೂಲಕಾಯ, ರಕ್ತದೊತ್ತಡ, ಮಾನಸಿಕ ಒತ್ತಡದಂಥ ಸಮಸ್ಯೆಗಳಿಂದ ಬಳಲುತ್ತಿರುವವರು ಆಹಾರ ಪಥ್ಯ, ಔಷಧ, ನಿತ್ಯದ ವ್ಯಾಯಾಮಗಳನ್ನು ತಪ್ಪಿಸಬೇಡಿ. ವಾಹನ ಚಾಲನೆ ವೇಳೆ ಎಚ್ಚರಿಕೆ ವಹಿಸಬೇಕು. ಬೆಂಕಿ ಮುಂದೆ ಕೆಲಸ ಮಾಡುವಾಗ ಏಕಾಗ್ರತೆ ತುಂಬ ಮುಖ್ಯ. ತಲೆ ಸುತ್ತು ಬರಬಹುದು. ಮೂರ್ಛೆ ರೋಗದ ಸಮಸ್ಯೆ ಇರುವವರಿಗೆ ಉಲ್ಬಣ ಆಗಬಹುದು. ಆದ್ದರಿಂದ ಶಾಂತಿ- ದಾನ ಮಾಡಿದರೆ ಉತ್ತಮ.

    ಪರಿಹಾರ ಏನು ಮಾಡಿಕೊಳ್ಳಬೇಕು?

   ಪರಿಹಾರ ಏನು ಮಾಡಿಕೊಳ್ಳಬೇಕು?

   ಧರ್ಮಗ್ರಂಥಗಳ ಪ್ರಕಾರ, ಒಂದು ಸಣ್ಣ ಕಾಳಿನ ಗಾತ್ರದ ಬಂಗಾರವನ್ನಾದರೂ ದಾನ ಮಾಡಬೇಕು ಅಂತ ಇದೆ. ಆದರೆ ಇದು ನಿಮ್ಮ ನಿರ್ಧಾರಕ್ಕೆ ಬಿಟ್ಟ ವಿಚಾರ. ಇನ್ನು ಉದ್ದು, ಗೋಧಿ, ಕೆಂಪು ವಸ್ತ್ರ, ಆಯಾ ರಾಶಿಗಳ ಅಧಿಪತಿ ಯಾರು ಎಂದು ನೋಡಿಕೊಂಡು ಆ ಗ್ರಹದ ಧಾನ್ಯವನ್ನು ವೀಳ್ಯದೆಲೆ, ಅಡಿಕೆ ದಕ್ಷಿಣೆ ಸಹಿತ ದಾನ ಮಾಡಬೇಕು. ಜತೆಗೆ ಆಯಾ ಗ್ರಹಕ್ಕೆ ಇಂಥ ಬಣ್ಣದ ವಸ್ತ್ರವನ್ನು ದಾನ ಮಾಡಬೇಕು ಅಂತಿದೆ. ಅದನ್ನು ಮಾಡಿ. ಜತೆಗೆ ದೇವತಾರಾಧನೆ ಮುಖ್ಯ. ಗ್ರಹಣ ಕಾಲದಲ್ಲಿ ಆಚರಣೆ ಮಾಡಬೇಕಾದ ಕರ್ಮಗಳನ್ನು ಅನುಸರಿಸಿ.

   English summary
   Solar eclipse or Surya Grahan 21st june 2020 impact on rashi or zodiac signs: Let's take a look at what changes will follow .
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X