ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಜನವರಿ 23ರವರೆಗೆ ಧನು ರಾಶಿಯಲ್ಲಿ ಶನಿ ಸಂಚಾರ, ದ್ವಾದಶ ರಾಶಿಗಳ ಫಲ ಏನು?

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

2017ರ ಅಕ್ಟೋಬರ್ ನಲ್ಲಿ ಧನುಸ್ಸು ರಾಶಿಗೆ ಪ್ರವೇಶ ಮಾಡಿರುವ ಶನಿ ಗ್ರಹ 2020ರ ಜನವರಿ ತನಕ ಅದೇ ರಾಶಿಯಲ್ಲಿ ಇರುತ್ತದೆ. ಕಳೆದ ಒಂದು ವರ್ಷದಲ್ಲಿ ಶನಿ ಗ್ರಹ ಸಂಚಾರ ತಂದ ಶುಭಾಶುಭ ಫಲಗಳೇನು ಎಂದು ತಿಳಿದುಕೊಳ್ಳಿ. ಇನ್ನು ಬಾಕಿ ಇರುವ ಅವಧಿಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ವಹಿಸಿ. ಒಂದು ವರ್ಷದ ಹಳೆ ಲೇಖನವಾದರೂ ಮತ್ತೊಮ್ಮೆ ಓದಿಕೊಳ್ಳುವುದಕ್ಕೆ ಖಂಡಿತಾ ಅಡ್ಡಿ ಇಲ್ಲ.

****

ಅಕ್ಟೋಬರ್ 26ಕ್ಕೆ ಶನಿ ಗ್ರಹ ಧನುಸ್ಸು ರಾಶಿ ಪ್ರವೇಶಿಸಿದೆ. ಈ ಬದಲಾವಣೆಯಿಂದ ಆಗುವ ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಶನಿ ಗ್ರಹ ಬದಲಾವಣೆಯಿಂದ ನಿಮ್ಮ ರಾಶಿಯ ಮೇಲೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳಿ. ಅಂದಹಾಗೆ ಜ್ಯೋತಿಷಿ ಹತ್ತಿರ ಬರುವ ವ್ಯಕ್ತಿಯ ಪ್ರಶ್ನೆಗಳ ಪೈಕಿ ನಮಗೆ ಶನಿ, ಗುರು ಹೇಗಿದೆ ಅಂತ ಹೇಳಿ ಸ್ವಾಮಿ ಎಂಬುದು ಸಾಮಾನ್ಯವಾದ ಪ್ರಶ್ನೆ ಆಗಿಯೇ ಇರುತ್ತದೆ. ವಿದ್ಯಾವಂತ ಸಮಾಜದಿಂದ ಆರಂಭಿಸಿ ಅವಿದ್ಯಾವಂತರ ತನಕ ನವಗ್ರಹಗಳಲ್ಲಿ ನಿತ್ಯ ಜೀವನದ ಮೇಲೆ ಪ್ರಭಾವ ಬೀರುವಂಥ ಗ್ರಹಗಳು ಗುರು, ಶನಿ ಎಂದು ಅರಿತಿದ್ದಾರೆ.

ಶನೈಶ್ಚರನನ್ನು ನಾವು ಕೆಡುಕು ಮಾಡುವ ಗ್ರಹವಾಗಿ ಅಥವಾ ಅತ್ಯಂತ ಕಷ್ಟಗಳನ್ನು ನೀಡುವ ಗ್ರಹವಾಗಿ ನೋಡಿದ್ದೇ ಹೆಚ್ಚು. ಆದರೆ ನಿಜ ಸಂಗತಿ ಏನೆಂದರೆ, ಶನೈಶ್ಚರ ಗ್ರಹದಷ್ಟು ಒಳಿತನ್ನು ಇನ್ನ್ಯಾವ ಗ್ರಹ ಸಹ ಮಾಡಲಾಗದು. ಇಂಥ ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡಲು ಎರಡೂವರೆ ವರ್ಷ ಬೇಕಾಗುತ್ತದೆ.

ನಮ್ಮ ರಾಶಿಯ ಹಿಂದಿನ ರಾಶಿಗೆ ಶನಿ ಗ್ರಹ ಬಂದಾಗ ಅಲ್ಲಿ ಎರಡೂವರೆ ವರ್ಷ, ನಮ್ಮ ರಾಶಿಯಲ್ಲಿ ಎರಡೂವರೆ ವರ್ಷ ಹಾಗೂ ನಮ್ಮ ಮುಂದಿನ ರಾಶಿಯಲ್ಲಿ ಎರಡೂವರೆ ವರ್ಷ ಒಟ್ಟು ಏಳೂವರೆ ವರ್ಷ ಕಾಲ ನಾವು ಶನೈಶ್ಚರ ಗ್ರಹದ ಪ್ರಭಾವಳಿಯಲ್ಲಿ ಇರುತ್ತೇವೆ. ಈ ಏಳೂವರೆ ವರ್ಷವನ್ನೇ ಹಿಂದಿಯಲ್ಲಿ ಸಾಡೇ ಸಾತ್ ಎಂದು ಕರೆಯುವುದು.

ಇನ್ನು ನಮ್ಮ ರಾಶಿಯಿಂದ ನಾಲ್ಕನೇ ರಾಶಿಗೆ ಶನಿ ಸಂಚಾರ ಆದಾಗ ಅರ್ಧಾಷ್ಟಮ, ಐದನೇ ಮನೆಗೆ ಶನಿ ಸಂಚಾರ ಆದಾಗ ಪಂಚಮ ಶನಿ ಹಾಗೂ ಎಂಟನೆ ಮನೆಯ ಸಂಚಾರದ ವೇಳೆ ಅಷ್ಟಮ ಶನಿ ಎನ್ನುತ್ತಾರೆ.ಸಾಡೇ ಸಾತ್, ಅರ್ಧಾಷ್ಟಮ, ಪಂಚಮ, ಅಷ್ಟಮ ಅಥವಾ ಶನಿ ದೆಶೆ ಯಾವುದೇ ಇರಲಿ ಈ ಎಲ್ಲ ಸಮಯದಲ್ಲಿಯೂ ಶನೈಶ್ಚರ ಕೇವಲ ಕಷ್ಟಗಳನ್ನೇ ನೀಡುತ್ತಾನೆ ಎಂದರ್ಥವಲ್ಲ! ನಾವು ಶನಿ ಗ್ರಹದ ಪ್ರಭಾವಳಿಯಲ್ಲಿ ಇರುತ್ತೇವೆ ಎಂದಷ್ಟೇ ತಿಳಿಯಬೇಕು.

ಇನ್ನು ಒಳಿತು, ಕೆಡಕುಗಳು ವ್ಯಕ್ತಿಗತ ಜಾತಕಗಳಲ್ಲಿ ಶನಿಗ್ರಹದ ಸ್ಥಾನದ ಮೇಲೆ ಅವಲಂಬಿತವಾಗಿರುತ್ತದೆ. ಪ್ರಮುಖವಾಗಿ ವೃಷಭ, ಸಿಂಹ, ಕನ್ಯಾ, ವೃಶ್ಚಿಕ, ಧನು, ಮಕರ ಈ ಆರು ರಾಶಿಯವರು ಎಚ್ಚರದಿಂದ ಇರುವುದು ಒಳಿತು. ಇನ್ನು ಮೇಷ, ಕರ್ಕ, ತುಲಾ ಈ ಮೂರು ರಾಶಿಯವರಿಗೆ ಸಂತಸದ ಕಾಲ ಕುಂಭ, ಮೀನ ರಾಶಿಗಳಿಗೆ ವಿಶೇಷ ಸಮಸ್ಯೆಗಳಿಲ್ಲ.

ಮೇಷ: ಅತ್ಯಂತ ಸಂತೋಷದ ಸಮಯ

ಮೇಷ: ಅತ್ಯಂತ ಸಂತೋಷದ ಸಮಯ

ಈ ವರೆಗೆ ಎದುರಿಸಿದ್ದ ಸಮಸ್ಯೆ ಕರಗಿ ಖುಷಿ ಪಡುವ ಕಾಲವಿದು. ಶನಿ ಗ್ರಹದ ಧನು ರಾಶಿ ಸಂಚಾರದಿಂದ ಅತ್ಯಂತ ಸಂತೋಷ ಸಮಯ ಕಾಣುತ್ತೀರಿ. ಶನೈಶ್ಚರನ ಅನುಗ್ರಹದ ಪ್ರಮುಖ ಪಾಲು ಮೇಷ ರಾಶಿಯವರಿಗೆ ಸಿಗುತ್ತದೆ. ಅದಕ್ಕೆ ಕಾರಣವೂ ಇದೆ. ಈ ತನಕ ಅನುಭವಿಸಿದ ಎಲ್ಲ ಆರೋಗ್ಯ ಸಮಸ್ಯೆ, ವ್ಯಾವಹಾರಿಕ ಹಿನ್ನಡೆ, ಉದ್ಯೋಗ ತಾಪತ್ರಯದ ಅಂತ್ಯವಾಗುತ್ತದೆ. ಅದರಲ್ಲಿಯೂ ಯಾವ ವೈದ್ಯರಿಗೆ ತೋರಿಸಿದರೂ ಯಾವ ವಿಧದ ಔಷಧಿ ಮಾಡಿದರೂ ಗುಣವಾಗದ ಆರೋಗ್ಯ ಬಾಧೆಗಳು ಇದ್ದಲ್ಲಿ ಖಂಡಿತಾ ವಾಸಿಯಾಗುತ್ತದೆ. ಬೆನ್ನು, ಸೊಂಟದ ಭಾಗ ನೋವು, ಮೊಣಕಾಲಿನ ನೋವು, ಕೂರಲೂ ಆಗದೆ- ನಿಲ್ಲಲೂ ಆಗದೆ ವ್ಯಥೆ ಪಡುತ್ತಿರುವವರು ಶೀಘ್ರ ಗುಣಮುಖರಾಗುತ್ತಾರೆ. ಹೃದಯ ಸಂಬಂಧಿ ಕಾಯಿಲೆ ಇದ್ದವರ ಆರೋಗ್ಯವೂ ಸುಧಾರಿಸುತ್ತಾ ಬರುತ್ತದೆ.

ವೃಷಭ: ಜಾಗ್ರತೆ ಮುಖ್ಯ

ವೃಷಭ: ಜಾಗ್ರತೆ ಮುಖ್ಯ

ತುಂಬ ಎಚ್ಚರದಿಂದ ಇರಬೇಕಾದವರು ವೃಷಭ ರಾಶಿಯವರು ! ಅರೋಗ್ಯ ವಿಚಾರವಾಗಿ ಅತ್ಯಂತ ಜಾಗರೂಕರಾಗಿರಬೇಕು. ಸಮಯಕ್ಕೆ ಸರಿಯಾಗಿ, ಕ್ರಮಬದ್ಧವಾದ ಹಾಗೂ ಪೌಷ್ಟಿಕವಾದ ಆಹಾರ ಸೇವನೆ ಪ್ರಾರಂಭಿಸಬೇಕು. ವ್ಯಾಯಾಮ, ಪ್ರಾಣಾಯಾಮ ಮತ್ತು ಯೋಗಾಸನ ಇತ್ಯಾದಿಗಳನ್ನು ರೂಢಿ ಮಾಡಿಕೊಂಡಲ್ಲಿ ಮುಂದಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಅರ್ಧ ಪರಿಹಾರ ಮಾಡಿಕೊಂಡಂತೆಯೇ ಸರಿ. ಜಾತಕದಲ್ಲಿ ದಶಾ- ಭುಕ್ತಿ ಗಳು ಉತ್ತಮವಾಗಿ ಇದ್ದಲ್ಲಿ ಇನ್ನೂ ತಡ ಆಗಬಹುದು. ಆದರೂ ಸಮಸ್ಯೆ ಬರುವ ತನಕ ಕಾದು, ಬಂದ ಮೇಲೆ ಪರಿಹಾರಕ್ಕಾಗಿ ಒದ್ದಾಡುವುದಕಿಂತ ಎಚ್ಚರ ವಹಿಸುವುದು ಬುದ್ಧಿವಂತಿಕೆ ಎನಿಸಿಕೊಳ್ಳುತ್ತದೆ.

ಮಿಥುನ: ವಿದೇಶ ಪ್ರಯಾಣಗಳು ಮುಂದಕ್ಕೆ

ಮಿಥುನ: ವಿದೇಶ ಪ್ರಯಾಣಗಳು ಮುಂದಕ್ಕೆ

ನಿಮಗೆ ಹೆಚ್ಚು ವ್ಯತ್ಯಾಸಗಳಿಲ್ಲ. ದೂರ ಪ್ರಯಾಣಗಳು ಕಡಿಮೆ ಆಗಬಹುದು. ವಿದೇಶ ಪ್ರಯಾಣಗಳು ಸಹ ಮುಂದಕ್ಕೆ ಹೋಗಬಹುದು. ಆದರೂ ವಿದೇಶಕ್ಕೆ ಹೋಗಲೇಬೇಕು ಎಂದಿದ್ದರೆ ಶನಿ ಮಕರ ರಾಶಿ ಪ್ರವೇಶಿಸುವ ಮುಂಚೆ ಮುಗಿಸಿಕೊಂಡರೆ ಒಳಿತು. ಏಕೆಂದರೆ ಆಗ ನಿಮಗೆ ಅಷ್ಟಮ ಶನಿ ಪ್ರಭಾವ ಇರುತ್ತದೆ. ವಿದೇಶದಲ್ಲಿ ಉಳಿದುಕೊಳ್ಳುವುದು ಪ್ರಮಾದಕರ. ಸ್ನೇಹಿತರ ಜೊತೆಗೆ ವ್ಯವಹಾರ ಮಾಡುವಾಗ ಬಹಳ ಎಚ್ಚರವಾಗಿರಿ. ಯಾವುದೇ ಕಾರಣಕ್ಕೂ ಬಾಳಸಂಗಾತಿಯೊಂದಿಗೆ ಜಗಳ ಬೇಡ. ಅನುಸರಿಸಿಕೊಂಡು ಹೋಗುವುದನ್ನು ಹಿಂದಿಗಿಂತಲೂ ಹೆಚ್ಚು ಮಾಡಿಕೊಂಡರೆ ಒಳ್ಳೆಯದು. ಹಣ ಬರುತ್ತದೆ. ಆದರೆ ಸಾಲ ಕೊಡುವುದಕ್ಕೆ ಹೋಗಬೇಡಿ. ನ್ಯಾಯಾಲಯದ ವ್ಯಾಜ್ಯಗಳನ್ನು ಕೂಡ ಆದಷ್ಟು ಬೇಗ ಮುಗಿಸಿಕೊಳ್ಳಿ.

ಕರ್ಕಾಟಕ: ಕಷ್ಟಗಳು ನಿಧಾನವಾಗಿ ಪರಿಹಾರ

ಕರ್ಕಾಟಕ: ಕಷ್ಟಗಳು ನಿಧಾನವಾಗಿ ಪರಿಹಾರ

ನೆಮ್ಮದಿಯ ನಿಟ್ಟುಸಿರು ಬಿಡಬಹುದಾದ ಇನ್ನೊಂದು ರಾಶಿ ಕರ್ಕಾಟಕ. ವ್ಯಾವಹಾರಿಕವಾಗಿ ಸತತ ಕಷ್ಟಪಟ್ಟು, ಸಾಲ- ಸೋಲಗಳಲ್ಲಿ ಸಿಲುಕಿ ಒದ್ದಾಡಿದ್ದ ನೀವು ಈಗ ನಿಧಾನವಾಗಿ ಬಿಡುಗಡೆ ಹೊಂದುತ್ತೀರಿ. ಮಾಡದ ತಪ್ಪಿಗೆ ಕೆಲವರು ಶಿಕ್ಷೆ ಅನುಭವಿಸಿ ನಷ್ಟ ಹೊಂದಿದರೆ, ಮತ್ತೆ ಕೆಲವರು ಹೊಸದಾದ ವ್ಯವಹಾರಗಳು ಉತ್ತಮ ಲಾಭ ಕೊಡುತ್ತವೆ ಎಂದು ಹೋಗಿ ಅವಮಾನಗಳನ್ನು ಅನುಭವಿಸಿದವರೇ ಹೆಚ್ಚು! ಕರ್ಕ ರಾಶಿಯವರಿಗೆ ಸದ್ಯಕ್ಕೆ ಗುರು ಬಲವಿಲ್ಲ. ಮುಂದಿನ ವರ್ಷ ಅಕ್ಟೋಬರ್ ವರೆಗೆ ಗುರು ಬಲ ಬರುವುದೂ ಇಲ್ಲ. ಆದುದರಿಂದ ಆರನೇ ಮನೆ ಶನಿಯು ಸಮಯ ಸರಿದಂತೆ ಸಮಸ್ಯೆಗಳನ್ನು ನಿಧಾನವಾಗಿ ಪರಿಹಾರ ಮಾಡುತ್ತಾನೆ.

ಸಿಂಹ : ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಿ

ಸಿಂಹ : ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಿ

ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲಿಯೂ ವ್ಯಾವಹಾರಿಕವಾಗಿ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಿ ಇಡಬೇಕು. ಇನ್ನೊಂದು ವರ್ಷ ಗುರು ಬಲ ಇರುವುದಿಲ್ಲ. ಹೊಸದಾದ ಮಿತ್ರರು ಸಿಗುತ್ತಾರೆ. ಹಳೆ ಮಿತ್ರರೇ ಹೊಸದೊಂದು ವ್ಯಾಪಾರ- ವ್ಯವಹಾರ ಮಾಡೋಣ, ಜೊತೆ ಇರು, ಸ್ವಲ್ಪ ಬಂಡವಾಳ ಹಾಕು ಎನ್ನುತ್ತಾರೆ. ಸಾಲ ಮಾಡಿ, ನಿಮ್ಮ ಉಳಿತಾಯದ ಹಣ ಅಥವಾ ನಿಮ್ಮ ಸ್ಥಿರಾಸ್ತಿಗಳನ್ನು ಅಡಮಾನ ಇಟ್ಟು ಅಥವಾ ಮಾರಾಟ ಮಾಡಿ ದುಡ್ಡು ತಂದು ಬಂಡವಾಳ ಹೂಡಿದರೆ ಮಾತ್ರ ಎಲ್ಲ ಕಳೆದುಕೊಳ್ಳಬೇಕಾಗಬಹುದು. ಇನ್ನು ಹೊಸ ಉದ್ಯೋಗ ಹುಡುಕಲು ಇರುವ ಉದ್ಯೋಗಕ್ಕೆ ರಾಜೀನಾಮೆ ಕೊಡದಿರಿ. ಇರುವ ಸ್ಥಳದಲ್ಲಿಯೇ ಇನ್ನೆರಡು ವರ್ಷ ಕಳೆಯಿರಿ. ಸರಕಾರಿ ಉದ್ಯೋಗಿಗಳಿಗೆ ಮನಸ್ಸಿಲ್ಲದ ಜಾಗಗಳಿಗೆ ವರ್ಗಾವಣೆ ಆಗಬಹುದು. ಯಾರಿಗೇ ಆಗಲಿ ಜಾಮೀನಾಗಿ ನಿಂತು ಸಾಲ ಕೊಡಿಸಬೇಡಿ.

ಕನ್ಯಾ: ಹೆಚ್ಚಿನ ಒತ್ತಡದ ಕೆಲಸ ಬೇಡ

ಕನ್ಯಾ: ಹೆಚ್ಚಿನ ಒತ್ತಡದ ಕೆಲಸ ಬೇಡ

ಚತುರ್ಥ ಶನಿ ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಆದರೆ ದ್ವಿತೀಯದಲ್ಲಿ ಇರುವ ಗುರುವಿನ ಅನುಗ್ರಹದಿಂದ ತೀರಾ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಇಲ್ಲ. ಆದರೂ ಹೆಚ್ಚಿನ ಒತ್ತಡದಲ್ಲಿ ಕೆಲಸಗಳನ್ನು ಮಾಡಲು ಹೋಗದಿರಿ. ತಿಂದ ಆಹಾರ ಜೀರ್ಣವಾಗದೆ ಸಮಸ್ಯೆಯಾಗುತ್ತದೆ. ಅತಿಯಾದ ಕೂದಲು ಉದುರುವಿಕೆ, ನಿದ್ರಾಹೀನತೆ ಸಮಸ್ಯೆ ಕಂಡುಬಂದರೆ ಆಯುರ್ವೇದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡಿ. ಪರಿಹಾರಗಳಿಗೆ ಅದೇ ಔಷಧೀಯ ಪದ್ಧತಿಯನ್ನು ಅನುಸರಿಸಿ. ನೆನಪಿಡಿ, ಅಯುರ್ವೇದ ನಿಧಾನ ಆದರೂ ತ್ವರಿತ ಹಾಗೂ ದೀರ್ಘಾವಧಿಯ ಉಪಶಮನ ನೀಡುತ್ತದೆ. ಆಹಾರ ಸೇವನೆ ಹಾಗೂ ನಿದ್ರೆ ಈ ಎರಡನ್ನೂ ಸರಿಯಾಗಿ ಮಾಡಿದರೆ ನಿಮ್ಮ ಅರ್ಧ ಸಮಸ್ಯೆ ಪರಿಹಾರ.

ತುಲಾ: ಶನಿ ಕಾಟವಿಲ್ಲದೇ ಸುಖದಿಂದ ಇರಬಹುದು

ತುಲಾ: ಶನಿ ಕಾಟವಿಲ್ಲದೇ ಸುಖದಿಂದ ಇರಬಹುದು

ಬದಲಾವಣೆ ಗಾಳಿ ಖಂಡಿತಾ ನಿಮಗೆ ಬೀಸುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಒಂದು ವಿಚಾರ ಸತ್ಯ, ನೀವು ಏಳೂವರೆ ವರ್ಷದಷ್ಟು ದೀರ್ಘಾವಧಿಯ ಶನಿ ಪ್ರಭಾವವನ್ನು ಕಳೆದಿದ್ದೀರಿ. ಜೀವನದ ದೊಡ್ಡ ದೊಡ್ಡ ನೀತಿ ಪಾಠಗಳನ್ನು ತಂದೆಯ ಸ್ಥಾನದಲ್ಲಿ ನಿಂತು ನಿಮಗೆ ಅನುಭವಕ್ಕೆ ಬರುವಂತೆ ಮಾಡಿದ್ದು ಶನಿ ಗ್ರಹ. ಯಾರನ್ನು ನಂಬಬೇಕು? ನಂಬಿದರೂ ಎಷ್ಟು ನಂಬಬೇಕು? ಎಂಬ ವಿಚಾರಗಳನ್ನು ಈಗ ನೀವು ಇತರರಿಗೆ ಪಾಠ ಮಾಡುವಷ್ಟು ಕಲಿತಿದ್ದೀರಿ! ಕಷ್ಟದ ಸಮಯದಲ್ಲಿ ಬಯ್ದುಕೊಂಡಿದ್ದರೂ ನಿಮ್ಮ ಕಣ್ಣು ತೆರೆಸಿದ್ದಕ್ಕೆ ಈಗ ಶನೈಶ್ಚರನಿಗೆ ನೀವು ಖಂಡಿತ ನಮಸ್ಕರಿಸುತ್ತೀರಿ. ಸ್ವಾಮಿ ನೀನು ಬರದೇ ಇದ್ದಿದ್ದರೆ ನಾನು ಇನ್ನು ಮೂರ್ಖನಾಗಿಯೇ ಇರುತ್ತಿದ್ದೆ ಎಂದು ಹೊಗಳುತ್ತೀರಿ. ಇನ್ನು ಮುಂದೆ ಶನಿ ಕಾಟವಿಲ್ಲದೇ ಸುಖದಿಂದ ಇರಬಹುದು.

ವೃಶ್ಚಿಕ: ಸಾಡೇ ಸಾತ್ ನ ಅಂತಿಮ ಘಟ್ಟ

ವೃಶ್ಚಿಕ: ಸಾಡೇ ಸಾತ್ ನ ಅಂತಿಮ ಘಟ್ಟ

ಸಾಡೇ ಸಾತ್ ನ ಕೊನೆ ಎರಡು -ಎರಡೂವರೆ ವರುಷ ನೀವು ಕಳೆಯಬೇಕಿದೆ. ಈ ತನಕ ಅಂದರೆ ಐದು ವರುಷಗಳಲ್ಲಿ ನೀವು ಕಷ್ಟಗಳನ್ನೇ ಹೆಚ್ಚು ನೋಡಿದ್ದರೆ ಮಾತ್ರ ಈ ಮುಂದಿನ ಸಮಯ ಶನಿ ಗ್ರಹದಿಂದ ತೊಂದರೆ ಆಗುವುದಿಲ್ಲ. ಕೆಲವರಿಗೆ ಮಾತ್ರ ಕುಟುಂಬದಲ್ಲಿ ಕಲಹ ಅಥವಾ ಧನ ಹಾನಿ ಆದರೂ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಸಾಮಾನ್ಯವಾಗಿ ಸಾಡೇ ಸಾತ್ ನ ಕೊನೆ ದಿನಗಳು ಗುರುಬಲ ಇಲ್ಲದಿದ್ದರೂ ಉತ್ತಮವಾಗಿಯೇ ಇರುತ್ತದೆ. ಆದರೆ ಇದೂ ಎಲ್ಲರಿಗೂ ಅನ್ವಯಿಸುವುದಿಲ್ಲ. ನಿಮಗೆ ದ್ವಾದಶದಲ್ಲಿರುವ ಗುರುವಿನಿಂದ ಖರ್ಚುಗಳು ವಿಪರೀತ ಹೆಚ್ಚಾಗುತ್ತವೆ. ಕಬ್ಬಿಣ, ಸಿಮೆಂಟ್ ಇತ್ಯಾದಿ ವ್ಯಾಪಾರಿಗಳು ಸ್ವಲ್ಪ ಲಾಭ ಕಾಣಬಹುದು.

ಧನು: ಜನ್ಮ ರಾಶಿ ಶನಿಯಿಂದ ಆಲಸ್ಯ

ಧನು: ಜನ್ಮ ರಾಶಿ ಶನಿಯಿಂದ ಆಲಸ್ಯ

ನಿಮ್ಮ ರಾಶಿಯಲ್ಲಿಯೇ ಶನಿ ಇರುವುದರಿಂದ ಅದನ್ನು ಜನ್ಮ ಶನಿ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಶರೀರದಲ್ಲಿ ಆಲಸ್ಯ ಹೆಚ್ಚಾಗುತ್ತದೆ. ಯಾವುದೇ ಕೆಲಸಗಳನ್ನೂ ಈ ಮೊದಲು ಮಾಡುತ್ತಿದ್ದಷ್ಟು ಶೀಘ್ರವಾಗಿ ಮಾಡಲು ಆಗುವುದಿಲ್ಲ. ಎಲ್ಲ ಮಾಡಬೇಕಾದ ಕೆಲಸಗಳನ್ನು ಮುಂದೂಡುವ ಮನಸಾಗುತ್ತದೆ. ಅಷ್ಟೇ ಅಲ್ಲ, ಜನ್ಮ ಶನಿ ರೋಗಕಾರಕ ಆಗುವುದರಿಂದ ಸ್ವಲ್ಪ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೆಲವರಿಗೆ ಅನಾರೋಗ್ಯದಿಂದಾಗಿಯೇ ಉದ್ಯೋಗದಲ್ಲಿ ಹೆಚ್ಚಿನ ರಜಾ ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ಸಹಾಯ ಮಾಡುತ್ತೇನೆ ಎಂದವರು ಕೈಗೆ ಸಿಗದೇ ಕಣ್ಣಿಗೂ ಕಾಣದಂತೆ ನಾಪತ್ತೆ ಆಗಿಬಿಡುತ್ತಾರೆ. ಆದರೆ ಹನ್ನೊಂದನೇ ಮನೆಯ ಗುರುವಿನ ಅನುಗ್ರಹದಿಂದ ಇನ್ನೊಂದು ವರ್ಷ ಶನಿಯ ದುಷ್ಪ್ರಭಾವ ಅಷ್ಟಾಗಿ ಕಾಡುವುದಿಲ್ಲ.

ಮಕರ: ಕೆಲಸ ಬಿಡುವ ಯೋಚನೆ ಬೇಡ

ಮಕರ: ಕೆಲಸ ಬಿಡುವ ಯೋಚನೆ ಬೇಡ

ಸಾಡೇ ಸಾತ್ ಆರಂಭವಾಗಿರುವುದರಿಂದ ಅಂಥ ಒಳ್ಳೆ ಕಾಲವಲ್ಲ. ಹೊಸ ವರ್ಷದ ಹೊತ್ತಿಗೆ ಕಷ್ಟಗಳ ಬಲೆಯಲ್ಲಿ ಸಿಲುಕುವ ಸಾಧ್ಯತೆಗಳು ಹೆಚ್ಚು ಇವೆ. ಇಲ್ಲಿ ಬಲೆ ಎಂದು ಹೇಳಲು ಕಾರಣ ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ. ಉದ್ಯೋಗಕ್ಕೆ ರಾಜೀನಾಮೆ ಕೊಡದೇ, ಹೊಸದೊಂದು ವ್ಯಾಪಾರ ಆರಂಭಿಸದೇ ಹಾಸಿಗೆ ಇದ್ದಷ್ಟೇ ಕಾಲು ಚಾಚಿಕೊಂಡು ನಿತ್ಯ ಜೀವನ ಸಾಗಿಸಿದರೆ ಅರ್ಧ ಸಮಸ್ಯೆ ಪರಿಹಾರವಾದಂತೆಯೇ ಸರಿ. ಆದರೆ ಸಾಡೇ ಸಾತ್ ನ ಪ್ರಭಾವದಿಂದಾಗಿ ಮೋಸಗಾರರ ಹಾಗೂ ಸುಳ್ಳು ಹೇಳುವವರ ಸಾಂಗತ್ಯ ಅರಿವಿಲ್ಲದಂತೆಯೇ ಆಗಿಬಿಡುತ್ತದೆ. ಕೆಟ್ಟವರ ಸಹವಾಸ ಗಾಣಕ್ಕೆ ಕೈ ಕೊಟ್ಟಂತೆ, ಹಿಂಪಡೆಯೋದು ಕಷ್ಟ. ಆದುದರಿಂದ ಬಹಳ ಎಚ್ಚರವಾಗಿರಬೇಕು. ಆಸ್ತಿಗಾಗಿ ಅಥವಾ ದೊಡ್ಡ ಪ್ರಕರಣಗಳಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತ ಬಯಸುವವರು ಎಚ್ಚೆತ್ತುಕೊಳ್ಳಬೇಕು.

ಕುಂಭ: ಗುರು- ಶನಿ ಇಬ್ಬರ ಅನುಗ್ರಹವೂ ಇದೆ

ಕುಂಭ: ಗುರು- ಶನಿ ಇಬ್ಬರ ಅನುಗ್ರಹವೂ ಇದೆ

ಶನಿ ಗ್ರಹ ಹನ್ನೊಂದನೇ ಮನೆಗೆ ಪ್ರವೇಶ, ಗುರು ಗ್ರಹ ಒಂಬತ್ತನೇ ಮನೆಯಲ್ಲಿರುವುದು ತುಂಬ ಪ್ರಶಸ್ತವಾದ ಕಾಲ. ರಾಶ್ಯಾಧಿಪತಿ ಲಾಭಕ್ಕೆ ಬಂದಾಗ ನಿಮ್ಮ ಕೆಲಸ ಕಾರ್ಯಗಳೆಲ್ಲವೂ ಸಾಂಗವಾಗಿ ಮುಗಿಯುತ್ತದೆ. ಇದರ ಜತೆಗೆ ಗುರುವೂ ಅನುಕೂಲವಾಗಿದ್ದಾನೆ. ಗಮನಿಸಬೇಕಾದ ಅಂಶ ಎಂದರೆ ಶನಿ ಗ್ರಹದಿಂದಾಗಿ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಸಂತಸ ನೀಡುವ ಕೆಲ ಘಟನೆಗಳು ಈ ವರ್ಷಾಂತ್ಯ ಅಥವಾ ಮುಂದಿನ ವರುಷ ಕಾಣಬಹುದು. ಪ್ರಯತ್ನಿಸಿ, ಪಡೆದರೆ ಮಾತ್ರ ಮಾನಸಿಕ ನೆಮ್ಮದಿ ಖಂಡಿತಾ ಸಿಗುತ್ತದೆ. ಎರಡು ಪ್ರಮುಖ ಗ್ರಹಗಳು ತುಂಬ ಅನುಕೂಲಕರವಾಗಿದ್ದಾಗ ವಿದೇಶ ಪ್ರಯಾಣ, ಗೃಹ ನಿರ್ಮಾಣ, ಹೂಡಿಕೆ ಮಾಡುವುದರ ಬಗ್ಗೆ ಯೋಚಿಸಿ. ಇಂಥ ಸಮಯ ಮತ್ತೆ ಮತ್ತೆ ಬರುವುದಿಲ್ಲ.

ಮೀನ: ರಾಜಕೀಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಎಚ್ಚರ

ಮೀನ: ರಾಜಕೀಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಎಚ್ಚರ

ಶನಿ ಗ್ರಹ ಕರ್ಮಸ್ಥಾನದಲ್ಲಿ ಬರುವುದರಿಂದ ಸ್ವಲ್ಪ ಪ್ರಯತ್ನಿಸಿದರೂ ರಾಜಕೀಯದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಆಗುತ್ತದೆ. ಬಾಣಂತಿ ತಾಯಂದಿರಿಗೆ ಎದೆ ಹಾಲಿನ ಕೊರತೆ ಆಗಿ, ಮಗುವಿಗೆ ಬೇರೆ ವ್ಯವಸ್ಥೆ ಮಾಡ ಬೇಕಾಗಬಹುದು. ಗಮನಿಸಬೇಕಾದ ಅಂಶ ಎಂದರೆ ನಿಮ್ಮಲ್ಲಿ ಸ್ವಸಾಮರ್ಥ್ಯ ಹೆಚ್ಚುತ್ತದೆ. ನಾಯಕನ ಗುಣಗಳು ಆ ಭಾವಗಳು ತಾನಾಗಿಯೇ ನಿಮ್ಮಲ್ಲಿ ಹೆಚ್ಚಾಗುತ್ತದೆ. ನಿಮ್ಮನ್ನು ಗುರುತಿಸುವ ಹಾಗೂ ಗಮನಿಸುವ ವ್ಯಕ್ತಿಗಳು ಹೆಚ್ಚಾಗಬಹುದು. ಆದರೆ ನೀವು ಇದೇ ಸಮಯದಲ್ಲಿ ಚಿಕ್ಕ ತಪ್ಪು ಮಾಡಿದವರಿಗೂ ದೊಡ್ಡದಾಗಿ ಶಿಕ್ಷಿಸುತ್ತೀರಿ! ಆದರೆ ಅಷ್ಟಮ ಗುರು ಆರೋಗ್ಯ ವಿಚಾರದಲ್ಲಿ ನಾನಾ ಚಿಂತೆ ಕೊಡುತ್ತದೆ. ಇದರ ಜತೆಗೆ ಉದ್ಯೋಗ- ವ್ಯಾಪಾರ ನಷ್ಟವಾಗುವ ಸಾಧ್ಯತೆ ಇದೆ. ವಿದೇಶ ಪ್ರಯಾಣಕ್ಕೆ ಯೋಜನೆ ರೂಪಿಸುತ್ತಿದ್ದರೆ, ಮದುವೆ ಪ್ರಯತ್ನ ಮಾಡುತ್ತಿದ್ದರೆ ಅಡೆ ತಡೆ ಎದುರಾಗುತ್ತದೆ.

ಪರಿಹಾರಗಳು

ಪರಿಹಾರಗಳು

ಹವನ ಪರಿಹಾರ: 10,000 ಸಂಖ್ಯೆಯಲ್ಲಿ ವೇದೋಕ್ತ ಶನಿ ಮಂತ್ರದಿಂದ ಜಪ ಮಾಡಿಸಿ ನಂತರ ಅದರ ಹತ್ತೇ ಒಂದು ಭಾಗದಷ್ಟು ಪ್ರಮಾಣದಲ್ಲಿ ಕೃಸರಾನ್ನ ದ್ರವ್ಯ ಹಾಗೂ ಶಮೀ ಸಮಿಧ, ಆಜ್ಯದಲ್ಲಿ ಶನಿ ಶಾಂತಿ ಹವನ ಮಾಡಬೇಕು. ಆ ನಂತರ ಹವನ ದಶಾಂಶ ತರ್ಪಣ, ಅದೇ ದಶಾಂಶ ಪ್ರಮಾಣದಲ್ಲಿ ಪ್ರೋಕ್ಷಣೆ ಹಾಗೂ ಅಭಿಮಂತ್ರಿತ ತೀರ್ಥ ಪ್ರಾಶನ ಮಾಡಿ.
ದಾನ: ಕಬ್ಬಿಣದ ಪಾತ್ರೆಯಲ್ಲಿ ಕರಿ ಎಳ್ಳು ಹಾಗೂ ಶುದ್ಧವಾದ ಎಳ್ಳೆಣ್ಣೆ ದಾನ ಮಾಡಿ.
ಸ್ತೋತ್ರ ಪಠಣ: ನಿತ್ಯ ಶನಿ ಅಷ್ಟೋತ್ತರ ಹಾಗೂ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ
ವ್ರತ: ಶನೈಶ್ಚರ ವ್ರತ ಹಾಗೂ ಲಕ್ಷ್ಮೀ ಸತ್ಯನಾರಾಯಣ ವ್ರತ ಶ್ರದ್ಧೆಯಿಂದ ಮಾಡಿ
ರತ್ನ ಧಾರಣೆ: ಅಭಿಮಂತ್ರಿತ ವ್ಯಾಘ್ರ ನೇತ್ರ ರತ್ನಗಳ ಮಾಲೆ ಹಾಗೂ ಜಲ ರತ್ನವನ್ನು ಉಂಗುರದಲ್ಲಿ ಧಾರಣೆ

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಭೇಟಿಗೆ

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಭೇಟಿಗೆ

ಯಾವುದೇ ಪರಿಹಾರ ಸಂಬಂಧಿ ವಿಚಾರಗಳಿಗೆ ವೈಯಕ್ತಿಕವಾಗಿ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ಭೇಟಿಯಾಗಲು ಮುಂಚಿತವಾಗಿ ಸಮಯ ನಿಗದಿಪಡಿಸಿಕೊಳ್ಳಿ. ಸಂಪರ್ಕ ಸಂಖ್ಯೆ-9845682380.

English summary
Saturn transit impact on zodiac signs : Lord Shani does good and bad to the people depending upon the movement of the planets. Bottom line is we should believe him and face the situation however it comes with courage. So, let's see what is the impact of Shani on each zodiac sign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X