ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಜೀವಿಗಳಿಗೆ ಶನಿ ಪ್ರಭಾವ ಶುರುವಾದ್ರೆ ಗೋವಿಂದ!

By ನಾಗನೂರಮಠ ಎಸ್.ಎಸ್.
|
Google Oneindia Kannada News

"ಆ ಭಗವಂತ ಕಣ್ಣು ಬಿಡಬೇಕಲ್ಲ...", "ಆ ದೇವರ ದಯೆ...", "ಅವನ ದಯೆಯಿಂದ ಎಲ್ಲಾ ಚೆನ್ನಾಗಿದೆ..." "ಅವನು ನಮ್ಮನ್ನು ಚೆನ್ನಾಗಿಟ್ಟಿದ್ದಾನೆ..." ಎಂದು ಒಂದಿಷ್ಟು ಜನ ಕಣ್ಣಿಗೆ ಕಾಣದ ದೇವರನ್ನು ನೆನಪಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಇನ್ನು ಕೆಲವರು "ದೇವರ ಬಂದಂಗೆ ಬಂದ್ರೀ ಸಾಮೇರ ನೀವು... ಭಗವಂತನೇ ನಿಮ್ಮನ್ನು ಕಳಿಸಿರಬೇಕು..." ಎಂದು ಹೇಳುತ್ತಿರುತ್ತಾರೆ. ಒಟ್ಟಿನಲ್ಲಿ ದೇವರ ಬಗ್ಗೆ ನಂಬಿಕೆ, ಭಕ್ತಿ ಎಲ್ಲ ಧರ್ಮದವರಲ್ಲಿಯೂ ಬೇರೆ ಬೇರೆ ರೀತಿಯಲ್ಲೇ ಇದೆ.

ಆದರೆ, ಇದೂವರೆಗೆ ದೇವರು ಹಿಂಗೇನೆ ಇದ್ದಾನೆ ಎಂದು ಯಾವ ಧರ್ಮದವರೂ ನೋಡಿಲ್ಲ. ಅವನನ್ನು ಕಂಡವರು ಈಗಿಲ್ಲ. ಕಾಣಬೇಕೆನ್ನುವವರೂ ಈಗಿಲ್ಲ. ಒಟ್ಟಿನಲ್ಲಿ ದೇವರ ಕುರಿತು ನಂಬಿಕೆಯ ಮೇಲೆ ಜೀವನ ಸಾಗಿಸಿ ಅವನ ಕರೆ ಬಂದಾಗ ಇಲ್ಲಿಂದ ನಾವು ಹೊರಡಬೇಕು ಅಷ್ಟೇ. ನಮ್ಮ "ಜೀವ"ದ ಆಯುಷ್ಯ ಮುಗಿಯುವವರೆಗೂ ಆದಷ್ಟು ಸುಖದಿಂದಿರಬೇಕೆಂದು ಬಯಸುತ್ತೇವೆ. ಆದರೆ, ಮೈಕೈ ಗಟ್ಟಿಯಾಗಿದ್ದಾಗ ಹಾಗೂ ಜೀವನ ಸುಖವಿದ್ದಾಗಲೇ ಬಾಳಿನ ಪಯಣ ಮುಗಿಸಬೇಕೆನ್ನುವವರೇ ಬಹಳಷ್ಟು ಜನ ಈಗ ನಮ್ಮಲ್ಲಿದ್ದಾರೆ.

ಆದರೆ, ನಮಗೆ ಜೀವನದಿಂದ ಮುಕ್ತಿ ದೊರೆಯಬೇಕೆಂದರೂ ಕೂಡ ಶನಿದೇವನ ಅಣತಿ ಆಗಬೇಕು. ಈ ಬಗ್ಗೆ ಮೊದಲೇ ನೀವು ಓದಿದ್ದೀರಿ. "ಓದಿಲ್ಲಾ ಸಾಮೇರ" ಅಂದ್ರೆ ಇನ್ನೊಮ್ಮೆ ಓದಿಕೊಳ್ಳಿ.

Sade Sati : Shani troubles Senior citizen too

ಶನಿದೇವನ ಏಳರಾಟದ ಮೂರನೇ ಹಂತದವರೆಗೂ ಅಥವಾ ಈ ಹಂತದಲ್ಲಿ ಬದುಕುಳಿಯುವವರು ಅದೃಷ್ಟವಂತರು ಎನ್ನಬಹುದು. ಆದರೂ ಕೆಲವರು ವಯಸ್ಸಾದ ಮೇಲೆ ಇರಬಾರದಪ್ಪಾ, ಗಟ್ಟಿಮುಟ್ಟಿದ್ದಾಗಲೇ ಈ ಲೋಕಕ್ಕೆ ಗುಡಬೈ ಹೇಳಬೇಕು "ಪಾಪಿ ಚಿರಾಯು" ಅನ್ನಿಸಿಕೊಳ್ಳಬಾರದು ಎಂದು ಮುದಿವಯಸ್ಸಿಗೆ ಅಂಜುತ್ತಾರೆ. ಹಿಂಗ್ಯಾಕೆ ಅವರೆನ್ನುತ್ತಾರೆನ್ನುವುದು ಕೂಡ ನೈಜ ವಿಷಯವೇ ಆಗಿದೆ.

ಏಕೆಂದರೆ ವಯಸ್ಸಾದವರು ಅನುಭವಿಸುವ ಪಡಿಪಾಟಲು ಅವರಿಗೆ ನೋಡಲಾಗುವುದಿಲ್ಲ. ಆ ರೀತಿ ಬದುಕೋಕು ಅವರಿಗಿಷ್ಟವಿರಲ್ಲ. ಶಂಭೋಲಿಂಗನು ಬೇಗ ಕರೆದುಕೊಂಡರೆ ಒಳ್ಳೆಯದು ಎಂದು ವಯಸ್ಸಾದ ಮೇಲೆ ಆಗುವ ಸಂಕಷ್ಟಗಳನ್ನು ನೋಡಿ ಹೆದರಿ ಈ ರೀತಿ ಕೆಲವು ಜನ ಹೇಳುತ್ತಿರುತ್ತಾರೆ. ವಯಸ್ಸಾದವರು ಅನುಭವಿಸುವ ಸಂಕಷ್ಟಗಳನ್ನು ಈಗ ಆರ್ಥಿಕವಾಗಿ ಮತ್ತು ದೈಹಿಕವಾಗಿ ಗಟ್ಟಿಮುಟ್ಟಾಗಿದ್ದವರು ಯಾವುದಾದರೂ ವೃದ್ಧಾಶ್ರಮ ಅಥವಾ ಬೆಗ್ಗರ‍್ಸ್ ಕಾಲೋನಿಗೆ ಹೋಗಿ ಕಣ್ಣಾರೆ ನೋಡಿದರೆ ಗೊತ್ತಾಗುತ್ತದೆ. ಹೇಳಿದರೆ ಅದರ ಮಹತ್ವ ಗೊತ್ತಾಗುವುದಿಲ್ಲ. [ಸೀನಿಯರ್ ಸಿಟಿಜನ್ ಮೇಲೆ ಶನಿರಾಯರ ಪ್ರಭಾವ]

ಸಾಮಾನ್ಯವಾಗಿ 70ರಿಂದ 90ರ ಇಳಿವಯಸ್ಸಿನವರ ದಿನನಿತ್ಯದ ಬದುಕಿಗೆ ಎಸ್ಕಾರ್ಟ್‌ವೊಬ್ಬರು ಬೇಕಾಗಿರುತ್ತಾರೆ. ಹಣವಂತರು ಈ ವ್ಯವಸ್ಥೆ ಮಾಡಿಕೊಳ್ಳಬಹುದು. ಬಡವರಾಗಿದ್ದರೆ ಮನೆಯಲ್ಲಿ ಯಾವುದಾದರೊಂದು ಹಳೆಯ ಪಲ್ಲಂಗದ ಮೇಲೆ ಅವರನ್ನು ಮನೆ ಮಂದಿ ಮಲಗಿಸಿರುತ್ತಾರೆ. ಮಲಗಿದ ವೃದ್ಧರು ನರಳುತ್ತಿದ್ದಾಗ ಅದನ್ನು ಕೇಳಿಸಿಕೊಂಡರೂ ಕೂಡ ಕೇಳಿಸಿದಂತೆಯೇ ಅಲ್ಲೇ ಓಡಾಡುತ್ತಿರುತ್ತಾರೆ! ಇದನ್ನು ಅನುಭವಿಸುವ ಮಲಗಿದ ವೃದ್ಧರಿಗೆ ಹೇಗಾಗಿರಬೇಡ? ಜೋರಾಗಿ ಸಿಟ್ಟಿನಿಂದ ಕೂಗಾಡಲು ಅವರಿಗೆ ಶಕ್ತಿ ಇರಲ್ಲ, ಎದ್ದು ಬಂದು ನಾಲ್ಕು ಬಿಗಿಬೇಕೆಂದರೆ ದೇಹ ಮಾತು ಕೇಳಲ್ಲ, ಕಣ್ಣು ಮಂಜಾಗಿರುತ್ತದೆ, ಕಿವಿ ಮಂದವಾಗಿರುತ್ತದೆ, ಎಲ್ಲವನ್ನೂ ತಿನ್ನಬೇಕೆಂದು ನಾಲಿಗೆ ಬಯಸುತ್ತದೆ. ಆದರೆ ಹಲ್ಲಿಲ್ಲದ ಬಾಯಲ್ಲಿ ತಿನ್ನುವುದೆಂಗೇ ಎಂಬ ನಿರಾಶೆ ಬೇರೆ ಮನದಲ್ಲಿ ಕಾಡುತ್ತದೆ. ವಯಸ್ಸಿನಲ್ಲಿದ್ದಾಗ ಹೆಂಗೆಂಗೋ ಮಾಡಿ ಗಳಿಸಿದ್ದ ಹಣವನ್ನು ಎಣಿಸಲೂ ಕೂಡ ಬರುವುದಿಲ್ಲ ಈಗ.

ಇಂತಹ ಪರಿಸ್ಥಿತಿಯಲ್ಲಿರುವ ವೃದ್ಧರಿಗೆ ಶನಿದೇವನ ಏಳರಾಟವೂ ಶುರುವಾಯಿತೆಂದರೆ ಅವರ ಬಾಳು ನರಕಯಾತನೆಯಾಗುತ್ತದೆ. ಈ ವಯಸ್ಸಿನವರಿಗೂ ಕೂಡ ಶನಿದೇವನು ಬಂದನೆಂದರೆ ಜೀವನದಲ್ಲಿ ಹಿಂದೆ ಮಾಡಿದ ಪಾಪ-ಪುಣ್ಯಗಳ ಲೆಕ್ಕಾಚಾರ ಹಿಡಿದುಕೊಂಡೇ ಬಂದಿರುತ್ತಾನೆ. ಪಾಪ-ಪುಣ್ಯಗಳನ್ನು ವಿಭಜಿಸಿ ಅದರಂತೆ ಸರಿಯಾಗಿ ಪಾಠ ಕಲಿಸಲಾರಂಭಿಸುತ್ತಾನೆ. ಕೆಲ ವಯಸ್ಸಾದವರನ್ನು ನೀವು ನೋಡಿರಬಹುದು. ರಕ್ತವಿಲ್ಲದೇ ಅವರ ಮೈಯೆಲ್ಲಾ ಸುಕ್ಕುಗಟ್ಟಿರುತ್ತದೆ. ಬೆನ್ನು ಬಾಗಿಸಿಕೊಂಡೇ ಊರುಗೋಲು ಹಿಡಿದುಕೊಂಡು ನಡೆಯುತ್ತಿರುತ್ತಾರೆ. ಮೈಯಲ್ಲಿದ್ದ ರಕ್ತದ ಕೆಂಪು ಬಣ್ಣ ದಟ್ಟ ಕಪ್ಪಾಗಿರುತ್ತದೆ ಬೈಕ್‌ನ ಸುಟ್ಟ ಎಂಜಿನ್ ಆಯಿಲ್ ತರಹ.

ಅವರಿಗೇನಾದರೂ ಹುಷಾರಿಲ್ಲವೆಂದು ಆಸ್ಪತ್ರೆಗೆ ಕರೆದುಕೊಂಡು ಹೋದರೆ, ವೈದ್ಯರು ಇದ್ದಷ್ಟು ದಿನ ಆರೈಕೆ ಮಾಡಿಕೊಳ್ಳಿ ಎಂದು ಮನೆಗೆ ಸಾಗಹಾಕುತ್ತಾರೆ. ಆ ಸಮಯದಲ್ಲಿ ಎಷ್ಟು ಹಣವಿದ್ದರೇನು ಬಂತು? ದೇಹವೇ ಹಣ್ಣಾದ ಮೇಲೆ. ಆ ದೇಹದಲ್ಲಿ ಜೀವವೊಂದೇ ಉಳಿದಿರುತ್ತದೆ, ದೇಹವೆಲ್ಲವೂ ಕ್ಷೀಣಗೊಂಡಿರುತ್ತದೆ. ಆದರೆ ಜೀವ ಹೋಗಬೇಕೆಂದರೆ ಆ ಶಂಭೋಲಿಂಗನ ಅನುಮತಿಗಾಗಿ ಕಾಯಬೇಕು. ಆ ಶಂಭೋಲಿಂಗನು ಶನಿದೇವನ ಪರ‍್ಮಿಶನ್ ತೆಗೆದುಕೊಂಡು ಸಾವಿನ ಮನೆಗೆ ಕರೆದುಕೊಳ್ಳುತ್ತಾನೆ. ಶನಿದೇವನು ಲೆಕ್ಕ ಚುಕ್ತಾ ಆಗುವವರೆಗೂ ಇಲ್ಲಿಂದ ಎಬ್ಬಿಸೋದಿಲ್ಲ.

ಇನ್ನು, "ಈ ವಯಸ್ಸಿನಲ್ಲಿ ಆಗುವ ತೊಂದರೆಗಳೆಲ್ಲಾ ವಯಸ್ಸಿನ ಸಹಜ ಗುಣ ಸಾಮೇರ, ಇದೆಲ್ಲಾ ಏನೂ ಶನಿಕಾಟವಲ್ಲ" ಎಂದು ಕೆಲ ಶನಿವಿರೋಧಿಗಳು ಮಾತನಾಡುತ್ತಾರೆ. ಆದರೆ ಶನಿದೇವನು ಅಂಥವರಿಗೆ ಇಲ್ಲಿ ಹೇಳಿದ್ದಕ್ಕಿಂತ ಹೆಚ್ಚಿನ ಸಮಸ್ಯೆಗಳಲ್ಲಿ ಸಿಲುಕಿಸಿ, ತೊಳೆಯಲು, ಬಳಿಯಲು ಇಲ್ಲದಂತವರಾಗಿಸಿ ಕೆಟ್ಟ ವಾಸನೆಯಲ್ಲೇ ಮಲಗಿಸಿ ಜೀವನದ ಅಂತ್ಯ ಕಾಣಿಸುವುದರಲ್ಲಿ ಶಕ್ಯವೇ ಇಲ್ಲ ಎನ್ನಬಹುದು. ಇಂಥ ಕೊಂಕು ಮಾತನಾಡುವವರಿಗೆ ದಾನದ ಗುಣ ಇರಲ್ಲ, ಮಾನವೀಯತೆ ಇರಲ್ಲ, ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣವಿರಲ್ಲ. ಆದರೆ ಮಾತು ನೋಡಿದರೆ "ಕಾಲಿಗೆ ಗೆಜ್ಜೆ ಕಟ್ಟಿಕೊಂಡವರ ತರಹ" ಇರತ್ತೆ. ಈ ಜಗತ್ತಿನಲ್ಲಿ ಇವರೇ ಶಾಶ್ವತವಾಗಿ ನೆಲೆಸಲು ಬಂದಿದ್ದಾರೆ ಎಂದುಕೊಂಡಿರುತ್ತಾರೆ.

ಅದಿರಲಿ, "ವಿಶ್ವ" ಎನ್ನೋ ಒಬ್ಬ ದೊಡ್ಡ ವ್ಯಕ್ತಿಯೆನಿಸಿಕೊಂಡವರು ಅಕಸ್ಮಾತ್ ಆಗಿ ಆಕ್ಸಿಡೆಂಟ್‌ನಲ್ಲಿ ಹೋದರೆಂದುಕೊಳ್ಳಿ, ಆವಾಗ ಆ ದೊಡ್ಡ ಮನುಷ್ಯನ ಮನೆಯಲ್ಲಿ ಸೇರಿರುವ ಎಲ್ಲರೂ "ಪಿಎಮ್ ಆಯ್ತಾ", "ಬಾಡಿ ಬಂತಾ" ಎನ್ನುತ್ತಾರೆ ಹೊರತು "ವಿಶ್ವ" ಬಂದ್ನಾ ಎನ್ನಲ್ಲ. ಇದರಲ್ಲೇ ಅರ್ಥ ಮಾಡಿಕೊಳ್ಳಬಹುದು. ಶನಿದೇವರಿಗೆ ಯಾರ‍್ಯಾರ ಆಟ ಹೆಂಗೆ ಮುಗಿಸುವುದೂ ಗೊತ್ತು ಎಂಬುದರ ಬಗ್ಗೆ.

ಇನ್ನು ಇಳಿ ವಯಸ್ಸಿನವರಿಗೆ ಶನಿದೇವನ ಕ್ರೂರ ಶಿಕ್ಷೆಯ ಬಗ್ಗೆ ಹೇಳಲಾರಂಭಿಸಿದರೆ "ಆ ಪರಿಸ್ಥಿತಿ ನಮಗ್ ಕನಸ-ಮನಸಲೂ ಬರಬಾರದ್ರಪ್ಪೋ ಎನ್ನುತ್ತಾರೆ" ಕೆಲ ಪುಕ್ಕರು. ಯಾವುದಕ್ಕೂ ಶನಿದೇವನ ಕೃಪಾಕಟಾಕ್ಷ ಪಡೆದುಕೊಂಡವರಿಗೆ, ಅವನು ಯಾವುದೇ ವಯಸ್ಸಿನಲ್ಲಿ ಬಂದರೂ ಆದಷ್ಟು ಹೆಚ್ಚು ತೊಂದರೆ ನೀಡದೇ ನೋವಿನಲ್ಲೂ ಸುಖ ನೀಡುವುದು ಗ್ಯಾರಂಟಿ. ಇದಕ್ಕಾಗಿಯೇ ಈ ಮೊದಲಿನಿಂದಲೂ ಹೇಳುತ್ತಿರುವುದು ಜನ್ಮಜಾತಕದ ಮೂಲಕ ಶನಿದೇವನ ಏಳರಾಟದ ಸಮಯ ಗೊತ್ತು ಮಾಡಿಟ್ಟುಕೊಳ್ಳಬೇಕು ಎಂದು. ಏಳರಾಟದ ಸಮಯ ಗೊತ್ತಾದಲ್ಲಿ ಸೂಕ್ತವಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಈ ಭಾಗ್ಯ ಕೆಲ ಪುಣ್ಯವಂತರಿಗೆ ಮಾತ್ರ ಎನ್ನಬಹುದು.

"90ರಿಂದ 120 ವಯಸ್ಸಿನವರ ಶನಿ ಪ್ರಭಾವ" ಎಂಬುದು ಮುಂದಿನ ಲೇಖನದಲ್ಲಿ (ಒನ್‌ಇಂಡಿಯಾ)

ವಾಸ್ತು ಟಿಪ್ಸ್ : ಕಿರು ಅಪಘಾತವಾದಾಗ ಧರಿಸಿದ ಬಟ್ಟೆಗಳನ್ನು ಮರುಬಳಕೆ ಮಾಡಬಾರದು.

ಶನಿಕೃಪೆಗೆ : ಶನಿವಾರದ ಬೆಳಗಿನ ಹೊತ್ತಿನಲ್ಲಿ ಈಶ್ವರ ದೇವಸ್ಥಾನಕ್ಕೆ ಹೋಗಬೇಕು. ಸಂಜೆ ಹನುಮನ ದೇವಸ್ಥಾನಕ್ಕೆ ಹೋಗಬಹುದು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 53 : Impact of Sade Sati on zodiac signs. Lord Shani will not leave old age people also. Though they face usual health problems, senior citizen have to be doubly careful and worship Shani regularly for their healthy life. It can be foreseen by studying horoscope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X