ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಡೇಸಾತಿ : ಶನಿದೇವನಿಂದಾಗುವ ಲಾಭ ಹೇರಳ

By ನಾಗನೂರಮಠ ಎಸ್.ಎಸ್.
|
Google Oneindia Kannada News

ನಮ್ಮೆಲ್ಲರ ಜೀವನದಲ್ಲಿ ಸಾಡೇಸಾತಿಯಾಗಿ ಬಂದು ಸಾಕಷ್ಟು ಲಾಭ ನೀಡುವ ಶನಿರಾಯನ ಬಗ್ಗೆ ಎಷ್ಟು ಹೊಗಳಿದರೂ ಕಮ್ಮಿನೆ. ಏನಿದು ಮಹಾತ್ಮನಿಗೆ ಹೊಗಳಿಕೆ, ಶನಿದೇವನಿಂದ ಲಾಭವೇ? ಎಂದರೆ, ಯಾವುದೇ ಕಾಸು ಖರ್ಚು ಮಾಡಿಸದೆ ಜೀವನದ ಎಲ್ಲ ಪಾಠಗಳನ್ನು ಮಹಾತ್ಮನು ನಮಗೆ ಪುಗ್ಸಟ್ಟೆ ಕಲಿಸುತ್ತಾನೆ.

ಇನ್ನೊಂದು ಮಜವಾದ ವಿಷಯವೆಂದರೆ, ಶನಿಕಾಟದ (ಈಗ ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಶನಿಕಾಟವಿದೆ) ಸಮಯದಲ್ಲಿ ಶನಿಶಾಂತಿಗಾಗಿ ಖರ್ಚು ಮಾಡಲು ಕೂಡ ಕೆಲವರ ಬಳಿ ಕಾಸಿರಲ್ಲ. ಅವರಿಗೆಲ್ಲ ಪುಗ್ಸಟ್ಟೆನೆ ಆಗಬೇಕು. ಕಾಸು ಇದ್ದರೂ ಪುಕ್ಕಲು ಸ್ವಭಾವದವರಿಗೆ ಖರ್ಚು ಮಾಡೋಕೆ ಮನಸೊಪ್ಪಲ್ಲ. ಯಾಕೆಂದರೆ ಶನಿಯೇ ತನ್ನ ಶಾಂತಿಯಾಗದಂತಿರಲು ಅಡ್ಡಿಯಾಗುತ್ತಿರುತ್ತಾನೆ ಅವರಿಗೆ! ಅದಕ್ಕೆಂದೇ "ಸುಖದ ಜೀವಕ್ಕೆ ಮುಳ್ಳು ಚುಚ್ಚಿಕೊಂಡರು" ಎಂಬಂತೆ ಕೆಲವರು ಶನಿದೇವನನ್ನೇ ಹೀಯಾಳಿಸುತ್ತಿದ್ದಾರೆ.

ಯಾರು ಶನಿದೇವನ ಪ್ರಭಾವ, ದೇವರ ಬಗ್ಗೆ ಅಪನಂಬಿಕೆ ಎನ್ನುತ್ತ ದೈವಭಕ್ತರಿಗೆ ಮೂಢರು, ಮೌಢ್ಯರೆನ್ನುತ್ತಾರೋ ಅವರಿಗೆ ಶನಿದೇವನು ಹೆಗಲೇರಿ ಕುಳಿತಿದ್ದಾನೆ ಎಂದರ್ಥ. ಆವಾಗ, ಸುಖಾಸುಮ್ಮನೇ ಎಲ್ಲರಿಗೂ "ಅಪ್ಪಾ ಅಪ್ಪಾ" ಎನ್ನುತ್ತ ತಮ್ಮಪ್ಪನನ್ನೇ ಮರೆತು, ಏನೇನೋ ಗುನುಗುತ್ತಿರುತ್ತಾರೆ. "ಬೊಗಳೊ ನಾಯಿ ಕಚ್ಚೊಲ್ಲ, ಕಚ್ಚೊ ನಾಯಿ ಬೊಗಳಲ್ಲ" ಎಂದುಕೊಂಡು ದೈವಭಕ್ತರು ಸುಮ್ಮನಿರುತ್ತಾರೆ. ಆದರೆ ಮುಂದೇನೋ ಕಾಯ್ದಿದೆ ಎಂದು ಶನಿಪ್ರಭಾವನ್ನು ಪ್ರಶ್ನಿಸುವವರು ಮಾತ್ರ ಎಚ್ಚರಿಕೆಯಲ್ಲಿರಬೇಕು. [ಶನಿದೇವನನ್ನು ಪೂಜಿಸುವುದು ಹೇಗೆ]

Sade Sati : Lord Shani showers favours too

"ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ" ಎಂಬ ಮಾತೊಂದು ಚಾಲ್ತಿಯಲ್ಲಿದೆ. ಇಷ್ಟೇ ಅಲ್ಲದೆ, ಮಕ್ಕಳ ಭಾಗ್ಯದಿಂದ ವಂಚಿತರಾದವರು "ಮಕ್ಕಳಿಲ್ಲದವಳಿಗೆ ಕಳ್ಳು ಎಲ್ಲಿರತ್ತೆ?" ಎಂಬ ಕೊಂಕು ಮಾತು ಕೂಡ ಕೇಳಿಸಿಕೊಳ್ಳುತ್ತಿರುತ್ತಾರೆ. ಮಕ್ಕಳ ಭಾಗ್ಯಕ್ಕೂ ಕೂಡ ಶನಿದೇವನ ಕೃಪಾಕಟಾಕ್ಷವಿರಬೇಕು. ಆದರೆ ಅದನ್ನು ಜಾತಕದ ಮೂಲಕ ತಿಳಿದುಕೊಂಡು ಅದರಂತೆ ಪರಿಹಾರ ಮಾಡಿಕೊಂಡು ವಂಶವೃಕ್ಷ ಬೆಳೆಸಿಕೊಳ್ಳುವವರು ಬುದ್ಧಿವಂತರು ಎನ್ನಿಸಿಕೊಳ್ಳುತ್ತಾರೆ. ಏಕೆಂದರೆ ಶನಿಪ್ರಭಾವದೊಂದಿಗೆ ದಶಾ, ಭುಕ್ತಿಗಳ ಮಹತ್ವ ಕೂಡ ಇರುತ್ತದೆ. ಎಲ್ಲರಿಗೂ ಒಂದೇ ರೀತಿಯ ದಶಾ, ಭುಕ್ತಿ ಇರೋದಿಲ್ಲ. ದಶಾ ಭುಕ್ತಿಯಿಂದಲೇ ನೌಕರಿ, ಮದುವೆ ಹಾಗೂ ಮಕ್ಕಳ, ಆರೋಗ್ಯಭಾಗ್ಯದ ಬಗ್ಗೆ ಗೊತ್ತಾಗೋದು. ಇದನ್ನರಿಯದೇ ಎಷ್ಟೋ ಜನ ಗಂಡ-ಹೆಂಡತಿಯರು ಜಗಳಾಡಿಕೊಂಡು ಬೇರೆ-ಬೇರೆಯಾಗಿರುತ್ತಾರೆ. "ಕೋಲು ಮುರಿಯಲಿಲ್ಲ, ಹಾವು ಸಾಯಲಿಲ್ಲ" ಎಂಬಂತೆ ಅತಂತ್ರ ಜೀವನ ಮಾಡುತ್ತಿರುತ್ತಾರೆ.

ಬೇರೆ ಗ್ರಹಗಳು ತಮ್ಮ ಗೋಚಾರ ಫಲದಲ್ಲಿ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡುತ್ತವೆ. ನೀವು ಹೇಗಿದ್ದರೂ ಅವರಿಗೆ ಚಿಂತೆಯಿಲ್ಲ. ಆದರೆ ಶನಿದೇವನ ಸಾಡೇಸಾತಿಯಲ್ಲಿ ಒಳ್ಳೆಯವರಿಗೆ ಒಳ್ಳೆಯದೇ ಆಗತ್ತೆ. ಆದರೆ ಕೆಟ್ಟವರಿಗಂತೂ ಕಣ್ಣೀರು ಕೂಳು ಕಟ್ಟಿಟ್ಟ ಬುತ್ತಿ. ಕೆಟ್ಟ ಬುದ್ಧಿ, ಗುಣಗಳಿದ್ದವರಿಗೆ ಜೀವನವೇ ಸಾಕಾಗಿ ಹೋಗುವಂತಾಗುತ್ತದೆ. ಅವರೆಷ್ಟೇ ದೈವಭಕ್ತರಿದ್ದರೂ ಶನಿದೇವನು ಅವರನ್ನು ಬಿಡುವುದಿಲ್ಲ. ಅವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಂತಹ ಲಕ್ಷ್ಮೀಯೂ ಸಹ ಎದ್ದು ಬಿದ್ದು ಓಡುತ್ತಾಳೆ. [ಸಾಡೇಸಾತಿ ಎಂದರೇನು, ಏನಿದರ ಮರ್ಮ]

ಇಷ್ಟೇ ಅಲ್ಲ, ದೇವರ ಪೂಜಾರಿಯಾಗಿದ್ದುಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ಅಂಥವರನ್ನೂ ಶನಿದೇವನು ಬಿಡುವುದಿಲ್ಲ. ಸ್ವತಃ ದೇವರೇ ಅವರ ಹೆಗಲ ಮೇಲೆ ಕೈ ಹಾಕಿದ್ದಾನೆಂದರೂ ಕೂಡ ಶನಿದೇವನ ಕುದೃಷ್ಟಿ ಬೀಳಲಾರಂಭಿಸಿತೆಂದರೆ ಆ ದೇವರೇ ದಿಕ್ಕೆಟ್ಟು ಓಡಲಾರಂಭಿಸುತ್ತಾನೆ. ಇಲ್ಲವಾದರೆ ದೇವರನ್ನೂ ಬಿಡುವುದಿಲ್ಲ ನಮ್ಮ ಶನಿದೇವನು! ಆಗ ಕೆಟ್ಟವರಿಗೆ ಶನಿದೇವನಿಂದ ಕಮೇಲಿನಲ್ಲಿ ಚರ್ಮ ಸುಲಿಸಿಕೊಳ್ಳಬೇಕಾಗುತ್ತದೆ. ಈಗಂತೂ ಶನಿದೇವನು ಮೂವತ್ತು ವರ್ಷಗಳ ನಂತರ ತನ್ನ ಉಚ್ಚ ಕ್ಷೇತ್ರ ತುಲಾ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಯಾರಿಗೆಷ್ಟು ಪಾಲು ಕೊಡಬೇಕೋ, ಅಷ್ಟು ಪಾಲು ಕೊಡುತ್ತಿದ್ದಾನೆ. ಕೆಲವರಿಗೆ ಇನ್ನೂ ಕೊಡುತ್ತಾನೆ. ಕೆಲವರಲ್ಲಿದ್ದದ್ದನ್ನ ಕಸಿದುಕೊಳ್ಳುತ್ತಾನೆ. ಈಗ ಯಾರ‍್ಯಾರಿಗೇ ಏನೇನು ಆಗಬೇಕೋ ಅದು ಆಗೇ ತೀರುತ್ತದೆ. ನೋಡ್ತಾ ಇರೋದಷ್ಟೇ ನಮ್ಮ ಕೆಲಸ.

ನಿಮಗೆ ಗೊತ್ತಿರಬಹುದು, ಒಬ್ಬರಿಗೆ ಅನ್ಯಾಯ ಮಾಡಿದ್ದರೆ ಅವರ ಕುಟುಂಬವೇ ನೊಂದುಕೊಂಡಿರುತ್ತದೆ. ಇದೇ ರೀತಿ ಶನಿಕಾಟದಲ್ಲಿ ಅನ್ಯಾಯ ಮಾಡಿದವರ ಕುಟುಂಬಕ್ಕೇನೆ ತೊಂದರೆಯಾಗುತ್ತದೆ. ಮತ್ತೊಬ್ಬರಿಗೆ ಅನ್ಯಾಯ ಮಾಡಿದ್ದರ ಫಲ ಇಡೀ ಸಂಸಾರವೇ ಉಣ್ಣಬೇಕಾಗುತ್ತದೆ. ಒಂದಿನಿತೂ ತಪ್ಪು ಮಾಡದವರು ಯಾರೂ ಇಲ್ಲ ಈ ಜಗತ್ತಿನಲ್ಲಿ. ಕನಿಷ್ಠ ನಡೆದಾಡುವಾಗಲಾದರೂ ಒಂದಾದರೂ ಇರುವೆ ನಮ್ಮಿಂದ ಸತ್ತಿರುತ್ತದೆ. ಇದೂ ಕೂಡ ತಪ್ಪೇ. ಅರಿತು ಮಾಡುವುದು ಬೇರೆ. ಅರಿಯದೇ ಮಾಡುವುದು ಬೇರೆ. ಆದರೆ ಶನಿದೇವನ ಶಿಕ್ಷೆ ಮಾತ್ರ ತಪ್ಪಲ್ಲ.

"ಜನ ಮೆಚ್ಚಿದರೆ ದೇವರು ಮೆಚ್ಚುವನು" ಎಂಬಂತೆ ಜೀವನದಲ್ಲಿ ಆದಷ್ಟು ಧರ್ಮ, ಸತ್ಯನಿಷ್ಠೆಯಿಂದ ಇರಲು ಕಲಿತರೆ ಶನಿಯಿಂದಾಗುವ ಲಾಭಗಳು ಗೊತ್ತಾಗುತ್ತವೆ. ಆದರೆ "ಹೊರಗೆ ಹೊಳಿ, ಒಳಗೆ ಹುಳಿ" ಎಂಬಂತೆ ಜೀವನಶೈಲಿ ಮಾಡುತ್ತಲಿದ್ದರೆ ಶನಿದೇವನಿಂದ ಲಾಭದ ಮಾತಿರಲಿ, ಇದ್ದದ್ದು ಕೂಡ ದಕ್ಕುವುದಿಲ್ಲ. ಎಲ್ಲರಿಂದ ಒದಿಸಿಕೊಳ್ಳುವುದೇ ನಿತ್ಯಕಾಯಕವಾಗುತ್ತದೆ.

ಹೀಗಾಗಿ ಸತ್ಯವಂತ, ನ್ಯಾಯವಂತರಾಗಿರುವವರು ಶನಿದೇವನ ಪ್ರಭಾವಕ್ಕೆ ಹೆದರಬೇಕಾಗಿಲ್ಲ. ನೀವು ಎಲ್ಲಿದ್ದರೂ, ಹೇಗಿದ್ದರೂ (ಸಾವಿರಾರು ಹಸುಗಳ ಮಧ್ಯೆ ಕರು ತನ್ನ ತಾಯಿಯ ಬಳಿಯೇ ಹಾಲು ಕುಡಿಯಲು ಹೋಗುತ್ತದೆ. ಆ ರೀತಿ) ಶನಿಮಹಾತ್ಮನು ನಿಮ್ಮನ್ನು ಹುಡುಕಿಕೊಂಡು ಬಂದು ಒಳ್ಳೆಯದನ್ನೇ ಮಾಡುತ್ತಾನೆ. ಏಕೆಂದರೆ "ಕರ್ಪೂರ ತಿಪ್ಪೆಯಲ್ಲಿದ್ರೂ ತನ್ನ ವಾಸನೆ ಬಿಡಲ್ಲ" ಎಂಬಂತೆ, ನೀವು ಅನಿವಾರ್ಯವಾಗಿ ಕೆಟ್ಟವರ ಸಂಗಡ ಇರಬೇಕಾಗಿ ಬಂದರೂ ಒಳ್ಳೆಯತನ ಬಿಡಬೇಡಿ. ಶನಿದೇವನಿಂದ ಕಷ್ಟಗಳ ಸರಮಾಲೆ ಬಂದಾಗಲೇ ಎಲ್ಲರಿಗೆ ತಿರುಮಲದ ಎಂಟಡಿ ತಿಮ್ಮಪ್ಪ ನೆನಪಾಗೋದು ಎಂದರೂ ತಪ್ಪೇನಿಲ್ಲ.

"ಸಾಡೇಸಾತಿಯಲ್ಲಿ ಏನೇನು ಮಾಡಬಾರದು" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಮನೆಯಲ್ಲಿ ಅಮವಾಸ್ಯೆಗೊಮ್ಮೆಯಾದರೂ ಸಾಂಬ್ರಾಣಿ ಉರಿಸಬೇಕು.

ಶನಿಕೃಪೆಗೆ : 14-12-2013ರಂದು ಶನಿಪ್ರದೋಷವಿದೆ. ಅಂದು ಸಂಜೆ ಪರಮೇಶ್ವರನ ದರ್ಶನ ಮಾಡಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 45 : Impact of Sade Sati on zodiac signs. Lord Shani always teaches lesson by making people struggle and realise the true value of life good things. So, even you are well off do not forget to do good deeds and help others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X