ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಡೇಸಾತಿ 50 : ಗೋಸುಂಬೆ ತರಹ ಆಡಿದರೆ...

By ನಾಗನೂರಮಠ ಎಸ್.ಎಸ್.
|
Google Oneindia Kannada News

"ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬಾರದು" ಎಂಬ ಮಾತು ಇತ್ತೀಚೆಗೆ ಎಲ್ಲರೂ ಮರೆತಿದ್ದಾರೆ ಎನ್ನಬಹುದು. ಏಕೆಂದರೆ ನಮಗೆ ಹುಟ್ಟಿದಾಗಿನಿಂದಲೇ ತಾಯಿ ಬೇಕು. ಮದುವೆ ಮಂಟಪದಲ್ಲೂ ಸಹ ತಾಯಿ ಸಹಾಯ, ಬೆಂಬಲ ಬೇಕು. ಆದರೆ, ಜೀವನಕ್ಕೆ ಜೊತೆಗಾತಿ ಬಂದಳೆಂದರೆ ಕೆಲವರು ತಾಯಿಯನ್ನು ಮನೆಯಾಳಾಗಿ ನೋಡಲಾರಂಭಿಸುತ್ತಾರೆ.

ಈಗಲೂ ನಮ್ಮ ಸುತ್ತಮುತ್ತ ಇಂತಹ ಸಾಕಷ್ಟು ಜನರಿದ್ದಾರೆ. ಆದರೆ ಅವರೇನೂ ಅವಿದ್ಯಾವಂತರಲ್ಲ ಎನ್ನುವುದು ಮಾತ್ರ ವಿಪರ್ಯಾಸದ ಸಂಗತಿ. ಆದರೆ ತಾವು ಮಾಡುವ ಇಂತಹ ಘನಂದಾರಿ ಕೆಲಸವನ್ನು ಮತ್ತೊಬ್ಬರಿಗೆ ಹೇಳಿಕೊಳ್ಳದಷ್ಟು ದುಷ್ಟ ಬುದ್ಧಿಯವರು ಅವರು. ಇಂತಹ ಗುಣಗಳನ್ನವರನ್ನೇ "ಕೆಟ್ಟವರು", "ಕೆಟ್ಟು ಹೋಗಿರುವವರು" ಎಂದು ಎಲ್ಲರೂ ಕರೆಯುತ್ತಾರೆ. ಈ ಮಾತು ಇಲ್ಲೇಕೆ ಬಂತು ಎಂದರೆ ಸಾಮಾನ್ಯವಾಗಿ 30 ರಿಂದ 50 ವರ್ಷ ವಯಸ್ಸಿನವರಿಗೆ ಸಾಡೇಸಾತಿ ಬಂದಾಗ ಕೆಲವರಿಗೆ ತುತ್ತು ಕೂಳಿಗೂ ಮತ್ತೊಬ್ಬರ ಮೇಲೆ ಅವಲಂಬನೆಯಾಗುವಂತಹ ಪರಿಸ್ಥಿತಿ ಬರಬಹುದು.

ಹೌದು, ಈ ವಯಸ್ಸೇ ಹಾಗಿರುತ್ತದೆ. ಜೀವನದ ಮಧ್ಯಭಾಗದಲ್ಲಿರುವವರಿಗೆ ಈ ಹಿಂದೆ ನಿಷ್ಕಾಳಜಿ ಮಾಡಿದ್ದರ ಫಲವಾಗಿ ವಯೋಸಹಜ ರೋಗಗಳು ಅವರ ದೇಹವನ್ನು ನುಜ್ಜುಗುಜ್ಜು ಮಾಡಲಾರಂಭಿಸುತ್ತವೆ. ಕೆಲವರಿಗೆ ಕುಟುಂಬದಲ್ಲಿನ ಇತರ ಸದಸ್ಯರಿಂದ ಕೆಲಸಕ್ಕೆ ಬಾರದಿರೋರು ಎನ್ನಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಶನಿದೇವನ ಸಾಡೇಸಾತಿ ಪ್ರಭಾವದಿಂದ ಜೀವನದ ಏರುಪೇರುಗಳಿಂದ ಹಾಗೆನ್ನಿಸಿಕೊಳ್ಳಬೇಕಾಗುತ್ತದೆ. ಎಲ್ಲವೂ, ಎಲ್ಲರೂ ಇದ್ದೂ ಏನೂ ಇಲ್ಲದಂತೆ ಇರುವಂಗಾಗಿರುತ್ತದೆ. ಇನ್ನು ಶನಿದೇವನು ಜನ್ಮಜಾತಕದಲ್ಲಿ ಶತ್ರು ಅಥವಾ ನೀಚ ಕ್ಷೇತ್ರದಲ್ಲಿ ಇದ್ದರಂತೂ ಮುಗೀತು ಕಥೆ. ಅದನ್ನು ಬಿಡಿಸಿ ಹೇಳುವ ಹಾಗೇನೆ ಇಲ್ಲ. ಆ ರೀತಿ ಪರಿಸ್ಥಿತಿ ಇವರಿಗೆ ಬರುತ್ತದೆ. [19ರಿಂದ 30 ವರ್ಷದವರ ಸಾಡೇಸಾತಿ]

Sade Sati for people between 30 to 50 years

ಈ ವಯಸ್ಸಿನಲ್ಲಿ ಬರುವ ಸಾಡೇಸಾತಿಯು 2ನೇ ಹಂತದ್ದಾಗಿರುತ್ತದೆ. 1ನೇ ಹಂತದ ಸಾಡೇಸಾತಿಯಲ್ಲಿ ಅಷ್ಟೇನೂ ಪೆಟ್ಟು ತಿನ್ನದವರು ಈ ಹಂತದಲ್ಲಿ ಪೆಟ್ಟಿನ ಮೇಲೆ ಪೆಟ್ಟು ತಿಂದು ಜೀವನವನ್ನು ಅಚ್ಚುಕಟ್ಟಾಗಿ ನಡೆಸಲು ಕಲಿತುಕೊಳ್ಳುತ್ತಾರೆ. ಕಲಿತುಕೊಳ್ಳಲೇಬೇಕು. ಇಲ್ಲಾಂದ್ರೆ ಅನ್ನ, ನೀರು ಇಲ್ಲದೆ ಉಪವಾಸ ಬೀಳಬೇಕಾಗುತ್ತದೆ. ಜೀವನದಲ್ಲಿ ಯಾವುದೇ ಚಿಕ್ಕ ಹೆಜ್ಜೆಗಳನ್ನು ಹೊಸದಾಗಿ ಇಡಬೇಕಾದರೂ ಕೂಡ ಶನಿದೇವನ ಭಯ ಮನದಲ್ಲಿ ಆವರಿಸಿಕೊಳ್ಳುತ್ತದೆ. ಅಷ್ಟೊಂದು ಶನಿದೇವನ ಕಾಡಾಟ ಇವರ ಅನುಭವಕ್ಕೆ ಬರುತ್ತದೆ.

"ಸಾಮಿ ನಂಗೂನೂ ಸಾಡೇಸಾತಿ ಶುರುವಾಗೈತೆ, ಏನೋ ನೀವ್ ಹೇಳ್‌ದಂಗ್ ಆಯ್ತಾ ಇಲ್ಲವಲ್ಲಾ" ಎನ್ನುತ್ತಿರುತ್ತಾರೆ ಕೆಲ ಅವಿದ್ಯಾವಂತ ಸಂಶಯದ ಪಿಶಾಚಿಗಳು. ಅಂಥವರಿಗೆ ಶನಿದೇವನು ತನ್ನ ಗೋಚಾರದಲ್ಲಿ ಕಡೆಯ ಆರು ತಿಂಗಳಿನಲ್ಲಿ ಮಾತ್ರ ಭಾರಿ ಪ್ರಭಾವ ಬೀರುತ್ತಾನೆ ಎಂಬುದೇ ಗೊತ್ತಿರುವುದಿಲ್ಲ. ಏಕೆಂದರೆ ಶನಿದೇವನು ತುಂಬಾ ನಿಧಾನವಾಗಿ ತನ್ನ ಮುಷ್ಟಿ ಬಿಗಿ ಮಾಡುತ್ತಾನೆ. ಆದರೆ ವಜ್ರಮುಷ್ಟಿಯಂತಹ ತನ್ನ ಬಿಗಿಬಂಧನವನ್ನು ಸಡಿಲ ಮಾಡುವುದು ಶನಿದೇವನಿಗೆ ಗೊತ್ತಿಲ್ಲ!

ಇನ್ನು, ಈ ವಯಸ್ಸಿನ ಕೆಲಸಗಾರರಿಗೆ ಒಂದೇ ರೀತಿ ಕೆಲಸ ಮಾಡಿ ಸಾಕಾಗಿ ಹೋಗಿರುತ್ತದೆ. ಅದಕ್ಕಾಗಿ ಸ್ವಂತದ್ದೇನಾದರೂ ಮಾಡಬಹುದೇನೋ ಎಂದುಕೊಂಡು ವರ್ಷಗಳಿಂದ ಕಷ್ಟಪಟ್ಟು ಗಳಿಸಿದ್ದ ದುಡ್ಡನ್ನೇ ಬಂಡವಾಳ ಮಾಡಿಕೊಂಡು ಹೊಸದನ್ನೇನೋ ಮಾಡಲು ಪ್ರಯತ್ನಿಸುತ್ತಾರೆ. ಆದರೆ ತಮ್ಮ ಸಾಡೇಸಾತಿ ಸಮಯದ ಬಗ್ಗೆ ಅವರಿಗೇನಾದರೂ ಗೊತ್ತಿಲ್ಲದಿದ್ದರೆ ಆ ಹಣವೆಲ್ಲಾ "ನೀರಿನಲ್ಲಿ ಹೋಮ" ಮಾಡಿದಂತಾಗುತ್ತದೆ. ಆದ್ದರಿಂದಲೇ ಸಾಡೇಸಾತಿ ಸಮಯವನ್ನು ಮೊದಲೆ ನೋಟ್ ಮಾಡಿಟ್ಟುಕೊಳ್ಳಬೇಕು ಎಂದು ಸಾಕಷ್ಟು ಬಾರಿ ಹೇಳುತ್ತಿರುವುದು.

ಇಷ್ಟಲ್ಲದೇ ತಮ್ಮ ಜನ್ಮ ಜಾತಕದ ಮೂಲಕ ಮಾಡಬೇಕಾದ ಹೊಸ ವ್ಯವಹಾರವನ್ನೂ ಕೂಡ ತಿಳಿದವರ ಬಳಿ ಕೇಳಿ ತಿಳಿದುಕೊಳ್ಳಬೇಕು. ಏಕೆಂದರೆ ಸಹಜವಾಗಿ ಜೀವನದಲ್ಲಿ ಈ ಹಂತವು ಸ್ವಂತ ಕಾರಿನಲ್ಲಿ ಕುಟುಂಬ ಸಮೇತ ಓಡಾಡುವ ಸಮಯ. ಆದ್ದರಿಂದ ಸಂಸಾರ ಸುಖವನ್ನು ಅನುಭವಿಸಬೇಕೆನ್ನುವವರು ಈ ರೀತಿ ಮಾಡಬೇಕು. ಇಲ್ಲಾಂದ್ರೆ ತಾವೊಂದು ಊರು, ಹೆಂಡತಿ-ಮಕ್ಕಳೊಂದೂರು ಎಂದುಕೊಂಡು ತಮ್ಮ ಸಂಸಾರದ ಸುಖವನ್ನು ಬೇರೆಯವರು ಅನುಭವಿಸುವಂತೆ ಮಾಡಿಕೊಳ್ಳಬಾರದು.

ಇನ್ನು ವಿದೇಶಿಯರ ಬಗ್ಗೆ ಹೊಗಳುವ ಕೆಲವರಿಗೆ, ಅವರಂಗೆನೇ ಸಾಯುವ ಮೊದಲೇ ನಿಮ್ಮ ಗೋರಿಯ ಮೇಲಿನ ಫಲಕವನ್ನು ಬರೆಸಿರಿ ಎಂದರೆ ಕುಂಡಿಗೆ ಕಾಲು ಹಚ್ಚುತ್ತಾರೆ. ಆದ್ದರಿಂದ ಯಾವುದೇ ಆಚರಣೆಗಳನ್ನು ವಿರೋಧಿಸಬೇಕಾದರೆ ಮೊದಲು ಧೈರ್ಯವಿರಬೇಕು.

ಕೆಲವರು ಇಂಗ್ಲೀಷ್ ಮಾತನಾಡಲು ಬರುತ್ತಿರುವುದೇ ತಮ್ಮಲ್ಲಿರುವ ದೊಡ್ಡ ಬ್ರಹ್ಮವಿದ್ಯೆ ಎಂದುಕೊಂಡು ತಲೆಮೇಲೆ ಕೊಂಬು ಮೂಡಿಸಿಕೊಂಡು ನಮ್ಮ ದೇಶಿ ಸಂಸ್ಕೃತಿಯನ್ನು ಮೂದಲಿಸುತ್ತಿರುತ್ತಾರೆ. ನಮ್ಮ ಹೊಸಪೇಟೆ ಕಡೆಯಲ್ಲಿರುವ ಹಂಪಿ ವಿರುಪಾಪುರ ಗಡ್ಡೆಯಲ್ಲಿ ಕಳ್ಳೆಕಾಯಿ ಮಾರುವವರೂ ಕೂಡ ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುತ್ತಾರೆ. ಆದ್ದರಿಂದ ಗೋಸುಂಬೆ ತರಹ ಆಡಿದರೆ ಮುಸುಡಿ ತೋರಿಸೋಕೆ ಆಗಲ್ಲ ಹಂಗೆ ಮಾಡುತ್ತಾನೆ ನಮ್ಮ ಶನಿದೇವರು ಎನ್ನಬೇಕಾಗುತ್ತದೆ. ಯಾಕೆಂದರೆ ಶನಿದೇವರಾಟವನ್ನು ಯಾರೂ ನಿಲ್ಲಿಸಲಾಗುವುದಿಲ್ಲ. ಸಾವನ್ನು ನಿರೀಕ್ಷಿಸುತ್ತ ಮುಕ್ತಿಗಾಗಿ ಪರಿತಪಿಸಬೇಕಾಗುತ್ತದೆ ಅಂಥವರು.

ಈಗಂತೂ ಕೆಲವರು ಜೀವನಕ್ಕೆ ಬುದ್ಧಿ ಮತ್ತು ಕಾಸು ಅಷ್ಟೇ ಸಾಕು ಎಂದು ತಿಳಿದುಕೊಂಡಿದ್ದಾರೆ. ಆದರೆ ದುರ್ಬುದ್ಧಿಯಿಂದ ಅನ್ಯಾಯದ ಹಾದಿ ತುಳಿದು ಗಳಿಸಿದ ಕಾಸಿನಿಂದ ಜೀವನ ಮಾಡಿ ಪಾಪದ ಕೂಪದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ನಮ್ಮದೊಂದೇ ಜೀವವಿದ್ದರೆ ನಾವು ಹೆಂಗೆ ಬೇಕಾದರೂ ಜೀವನ ಮಾಡಬಹುದು. ಆದರೆ ನಮ್ಮ ಕುಟುಂಬವೂ ನಮ್ಮೊಂದಿಗಿರುವುದರಿಂದ ದೇವರ ಸನ್ನಿಧಾನಕ್ಕೆ ಒಂದಿಲ್ಲೊಂದು ದಿನ ಹೋಗಲೇಬೇಕಾಗುತ್ತದೆ ಕನಿಷ್ಠ ಪಕ್ಷ ನಮ್ಮ ಕುಟುಂಬದವರ ಸುಖ, ಸಂತೋಷಕ್ಕಾಗಿ.

"ಇದೆಲ್ಲಾ ಎಂಥದ್ದು ಹೇಳೋದು ಮಾರಾಯ್ರೆ ನೀವು" ಎಂದು ಅನಾಥ ಬೇವರ್ಸಿಯರ ತರಹ ಬೇಜವಾಬ್ದಾರಿ ನಾಸ್ತಿಕತೆಯ ಮಾತನಾಡಿದರೆ, ಇಂತಹ ಗುಣಗಳಿರುವುದರಿಂದಲೇ ದೇವರು ನಿಮ್ಮ ಸುಖ, ಸಂತೋಷ, ನೆಮ್ಮದಿ ಎಲ್ಲವನ್ನೂ ಕಸಿದುಕೊಂಡಿದ್ದಾನೆ ಎನ್ನುತ್ತಾರೆ ಆಸ್ತಿಕರು. ಏಕೆಂದರೆ "ಹಣವೆಂದರೆ ಹೆಣವೂ ಬಾಯಿ ತೆಗೆಯುತ್ತದೆ" ಹೀಗೆಂದು ಹಣಕ್ಕಾಗಿ ಹೆಣದ ಸಮಾನರಾಗಬೇಕಾ ಎಂಬುದನ್ನು ಯೋಚಿಸಿಕೊಳ್ಳಬೇಕು ನಾಸ್ತಿಕತೆಯ ಮಾತನಾಡುವ ಮೂಢರು.

ಇನ್ನು, ಕೆಲವರಿರುತ್ತಾರೆ. ಆ ದೇಶ, ಈ ದೇಶ ಎಂದು ವಿವಿಧ ದೇಶಗಳ ಹೆಸರು ಹೇಳುತ್ತ ವಿದೇಶಕ್ಕೆ ಹೋಗಿದ್ದೆ ಎಂದು ಹಲವಾರು ಬಾರಿ ಹಲವರ ಬಳಿ ಹೇಳಿಕೊಳ್ಳುತ್ತಿರುತ್ತಾರೆ. ಯಾರೂ ಇವರನ್ನು ಕೇಳದಿದ್ದರೂ ಇವರೇ ಮುದ್ದಾಂ ಆಗಿಯೇ ಹೇಳುತ್ತಿರುತ್ತಾರೆ. ಇಂಥವರ ಜಂಭದ ಮಾತು ಕೇಳಬೇಕು ಒಮ್ಮೆ. ತಾವೊಬ್ಬರೇ ಈ ತರಹ ದೇಶ ಸುತ್ತುತ್ತಿದ್ದಾರೆ ಎಂದು ನಂಬುವ ಹಾಗೆ ಹೇಳುತ್ತಿರುತ್ತಾರೆ. ಆದರೆ "ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ" ಎಂಬಂತಿರಬಾರದು. ಯಾಕೆಂದರೆ ಹಿಂಗೆ ಯಾರಾದರೂ ಮಾಡುತ್ತಾರೆ. ಆದರೆ, ಸ್ವಂತ ದುಡಿಮೆಯ ಖರ್ಚಿನಲ್ಲಿ ಹೋಗಿಬಂದು ಹೇಳಿದರೆ ಅದೇನೂ ತಪ್ಪಲ್ಲ. ಇರಲಿ, ಇದರರ್ಥವಾಗದಿದ್ದವರಿಗೆ "ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ" ಎಂಬ ಸಹಜ ಮಾತು ಮನದಲ್ಲಿ ಮೂಡುತ್ತದೆ ಎಲ್ಲರಿಗೂ.

"ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ ಏಕೆ?" ಎಂಬುದು ಮುಂದಿನ ಲೇಖನದಲ್ಲಿ (ಒನ್‌ಇಂಡಿಯಾ)

ವಾಸ್ತು ಟಿಪ್ಸ್ : ಮನೆಯಲ್ಲಿ ದೇವರ ಪೂಜೆ ಮಾಡುವಾಗ ಮುಂಬಾಗಿಲು ತೆರೆದಿರಬೇಕು. ಹಿಂಬಾಗಿಲು ಮುಚ್ಚಿರಬೇಕು.

ಶನಿಕೃಪೆಗೆ : ಮನೆಯಲ್ಲಿ ದಿನನಿತ್ಯ ಶಿವಲಿಂಗ ಪೂಜೆ ನಡೆಯುತ್ತಿದ್ದರೆ ಶನಿದೇವರು ಸಂಪ್ರೀತನಾಗಿ ಆ ಮನೆಯಲ್ಲಿ ಕಾಲಿರಿಸಲ್ಲ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 50 : Impact of Sade Sati on zodiac signs. Let's see how Lord Shani troubles people between 30 to 50 years. Never neglect your old and ailing parents. Also do not take risk of changing job frequently during this period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X