ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

13ರಿಂದ 19 ವರ್ಷದೊಳಗಿನವವರ ಸಾಡೇಸಾತಿ ಹೀಗೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

"ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ನೋಟ ಚೆಂದ" ಎಂಬ ಮಾತು ಎಲ್ಲರೂ ಕೇಳಿಯೇ ಇರುತ್ತಾರೆ. ಈ ಮಾತು ಈಗೇಕೆ ಎಂದರೆ, ಯಾರ ಮನೆ ಹೆಂಗಾದ್ರೂ ಇರಲಿ. ಆದರೆ ಮನೆಮಂದಿಯೆಲ್ಲ ಸುಖವಾಗಿ ನೆಮ್ಮದಿಯಿಂದ ಆ ಮನೆಯಲ್ಲಿ ಬಾಳಿ ಬದುಕುತ್ತಿರಬೇಕು. ಆದರೆ ಎಲ್ಲವೂ ಇದ್ದು ಏನೂ ಇಲ್ಲದಂತೆ ಇರುವವರು ಇಂದಿಗೂ ಎಷ್ಟೋ ಜನ ನಮ್ಮ ನಡುವೆ ಇದ್ದಾರೆ. ಏನೂ ಇಲ್ಲದೆ ಎಲ್ಲವೂ ಇದೆ ಎಂದುಕೊಳ್ಳುತ್ತ ಸಂತಸದಿಂದ ಜೀವಿಸುವವರು ನಮ್ಮೆಲ್ಲರ ನಡುವೆಯೇ ಇದ್ದಾರೆ.

ಆದ್ದರಿಂದ ಜನ್ಮಜಾತಕದಿಂದ ಮಕ್ಕಳ ಸಮಯ ಹೇಗಿದೆ ಎಂದು ಮೊದಲೇ ತಿಳಿದುಕೊಂಡು ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಮನೆಮಂದಿಯೆಲ್ಲ ಸಂತಸದಿಂದಿರಬೇಕು.

ಸಹಜವಾಗಿ 13ನೇ ವಯಸ್ಸಿನ ನಂತರ ಹುಡುಗ-ಹುಡುಗಿಯರಿಗೆ ಹದಿಹರೆಯ ಆರಂಭವಾಗುತ್ತದೆ. ಈ ಸಮಯದಲ್ಲಿ ಸಾಡೇಸಾತಿ ಗೋಚಾರದಲ್ಲಿ ಶುರುವಾದರೆ ಒಂಥರಾ ಮುಜುಗರವೇ ಅನಿಸಲಾರಂಭಿಸುತ್ತಿದೆ. ಏಕೆಂದರೆ ಒಂದೆಡೆ ದೇಹ ಬದಲಾವಣೆ ಆಗುತ್ತಿರುತ್ತದೆ. ಇತ್ತ ಕಡೆ ಆಸೆ, ಆಕಾಂಕ್ಷೆಗಳು ಚಿಗುರೊಡೆಯಲಾರಂಭಿಸುತ್ತಿರುತ್ತವೆ. ಆದರೆ ಬಯಸ್ಸಿದ್ದೆಲ್ಲವೂ ಕೈಗೆ ಸಿಗದೇ ನಿರಾಶೆಯನ್ನೇ ಈ ವಯಸ್ಸಿನಲ್ಲಿ ಅನುಭವಿಸುವಂತಾಗುತ್ತದೆ. ದಷ್ಟಪುಷ್ಟವಾಗಿ ಬೆಳೆಯಬೇಕಾದವರು ಹೊಟ್ಟೆ ತುಂಬ ಊಟ ಮಾಡದೇ ಸೋಮಾರಿತನ ಮೈಗೂಡಿಸಿಕೊಂಡಿರುತ್ತಾರೆ.

Sade Sati for children between 13 to 19 years

ಆದ್ದರಿಂದ ಮಕ್ಕಳನ್ನು ಈ ಸಮಯದಲ್ಲಿ ಒಂಟಿಯಾಗಿರಲು ಬಿಡಲೇಬಾರದು. ಅವರ ಪ್ರತಿಯೊಂದು ಚಟುವಟಿಕೆಗಳನ್ನು ನೋಡುತ್ತಿರಬೇಕು. ಕನಿಷ್ಠ ಅವರ ನಡೆ ನುಡಿಗಳನ್ನಾದರೂ ಅವಲೋಕನ ಮಾಡುತ್ತಿರಬೇಕು. ದುರಾಸೆಯೇನಾದರೂ ಅವರಲ್ಲಿದ್ದರೆ "ಆಸೆಯೇ ದುಃಖಕ್ಕೆ ಮೂಲ ಕಾರಣ" ಎಂಬುದನ್ನು ತಿಳಿಸಿ ಹೇಳಬೇಕು. ಆದಷ್ಟು ದೈವ ಭಕ್ತಿಯೆಡೆಗೆ ಅವರ ಮನಸ್ಸನ್ನು ಪರಿವರ್ತನೆ ಮಾಡಿಸಬೇಕು.

ಸಾಡೇಸಾತಿಯ ಮೂರು ಹಂತಗಳ ಬಗ್ಗೆ ಈ ಹಿಂದಿನ ಲೇಖನದಲ್ಲಿ ತಿಳಿದುಕೊಳ್ಳಬಹುದು. ಅದರಂತೆ ಮಕ್ಕಳ ಸಾಡೇಸಾತಿಯ ಕೊನೆಯ ಹಂತ ಮುಗಿಯುವವರೆಗೆ ಅವರಿಗೆ ಬೆನ್ನೆಲುಬಾಗಿ ಪಾಲಕರು ನಿಲ್ಲಬೇಕು.

ಹೆಣ್ಮಕ್ಕಳಿಗೆ ಅವರ ವಯೋಸಹಜ ಪ್ರಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತ ದೇಹವು ಸಣಕಲಾಗಲಾರಂಭಿಸುತ್ತದೆ. ಇನ್ನು ಹುಡುಗರಿಗೆ ಏನಾದರೊಂದು ಕಿರಿಕಿರಿ ಶುರುವಾಗಿ ದೇಹದ ಬೆಳವಣಿಗೆ ಕುಂಠಿತವಾಗುತ್ತದೆ. ದುಷ್ಟರ ಸಹವಾಸದಿಂದ ಚಟಗಳ ಸಾಲು ಇವರನ್ನು ಆವರಿಸಿಕೊಳ್ಳಲಾರಂಭಿಸುತ್ತವೆ. ಆದ್ದರಿಂದ ಮಕ್ಕಳ ಸ್ನೇಹ ಬಳಗದಲ್ಲಿ ಎಂಥವರಿದ್ದಾರೆ ಅವರ ಕುಟುಂಬದ ಹಿನ್ನೆಲೆ ಎಲ್ಲವನ್ನೂ ಪಾಲಕರು ತಿಳಿದುಕೊಂಡಿರಬೇಕು. ಮಕ್ಕಳು ಚೆನ್ನಾಗಿರಬೇಕೆಂದರೆ ಈ ರೀತಿ ಮಾಡಲೇಬೇಕು.

ಏಕೆಂದರೆ ಲೈಂಗಿಕ ಅಭಿಲಾಷೆಗಳು ಈ ಸಮಯದಲ್ಲಿ ಚಿಗುರೊಡೆಯುವುದರಿಂದ ಮಕ್ಕಳು ದಾರಿ ತಪ್ಪುವುದೇ ಈ ಸಮಯದಲ್ಲಿ. ಈ ಸಮಯದಲ್ಲಿ ಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಜಾಣತನ ತೋರಿಸಬೇಕು. ಅವರ ದೇಹದ ಬಗ್ಗೆಯೂ ಗಮನ ವಹಿಸುತ್ತಿರಬೇಕು. ದೇಹದಲ್ಲಿ ಏನಾದರೂ ಹೆಚ್ಚು ಕಮ್ಮಿಯಾಗುತ್ತಿದೆಯಾ ಎಂದು ಗಮನಿಸಬೇಕು. ಸಾಡೇಸಾತಿ ಬಗ್ಗೆ ಅವರಿಗೆ ತಿಳಿವಳಿಕೆ ಮೂಡಿಸುತ್ತ ಅವರನ್ನು ಜಾಗೃತಗೊಳಿಸುತ್ತಿರಬೇಕು.

ವಿದ್ಯಾಭ್ಯಾಸದ ಮಹತ್ವದ ಘಟ್ಟ ಈ ವಯಸ್ಸಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ನಿದ್ದೆಗೆಡದೆ ವಿದ್ಯಾಭ್ಯಾಸ ಮಾಡಲು ಸೂಚಿಸಬೇಕು. ಬೆಳಗಿನವರೆಗೆ ಗೂಬೆ ತರಹ ಕುತ್ಕೊಂಡು ನಿದ್ದೆಗೆಟ್ಟು ಅಭ್ಯಾಸ ಮಾಡುವುದರಿಂದ ಬುದ್ಧಿಗೆಡುತ್ತದೆ. ಸರಿಯಾಗಿ ವಿಶ್ರಾಂತಿ ತೆಗೆದುಕೊಂಡು ಅಭ್ಯಾಸ ಮಾಡಲು ಮಕ್ಕಳಿಗೆ ಹೇಳಬೇಕು. ಇಲ್ಲವಾದರೆ ಅನೈಸರ್ಗಿಕ ದಿನಚರಿಯಿಂದ ಮಕ್ಕಳ ಮನಸ್ಸು ಕೆಟ್ಟು ಮುಂದೊಂದು ದಿನ ಸೈಕಿಕ್‌ಗಳಾಗಿ ಪರಿವರ್ತಿತರಾಗುತ್ತಾರೆ.

ಅವರ ಶಾಲಾ ಚಟುವಟಿಕೆಗಳನ್ನು ಗಮನಿಸುತ್ತಿರಬೇಕು. ಅವರಿಗೆ ಗೊತ್ತಾಗದಂಗೆನೆ ಅವರ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಿಕೊಂಡು ಏನು ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಅವರನ್ನು ಸರಿ ದಾರಿಗೆ ತರಲು ಪ್ರಯತ್ನಿಸಬೇಕು. "ಇದೆಲ್ಲಾ ಯಾಕೆ ಸಾಮಿ, ಅವರು ನಮ್ಮ ಹೈಕ್ಳು ಹಂಗೆಲ್ಲಾ ಮಾಡಾಕಿಲ್ಲಾ" ಎನ್ನುತ್ತಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಏಕೆಂದರೆ "ಹೆತ್ತವರಿಗೆ ಹೆಗ್ಗಣಾನೂ ಮುದ್ದು" ಎಂದುಕೊಂಡು ಅವರನ್ನು ನಿಷ್ಕಾಳಜಿ ಮಾಡುವುದು ತುಂಬಾ ದೊಡ್ಡ ತಪ್ಪಾಗುತ್ತದೆ. ಅದೂ ಸಾಡೇಸಾತಿ ಸಮಯದಲ್ಲಿ ಮಕ್ಕಳ ಬಗ್ಗೆ ಒಂದಿನಿತೂ ನಿರ್ಲಕ್ಷ್ಯ ಸಲ್ಲದು.

ಅಪರಿಚಿತರೊಂದಿಗೆ ಪ್ರೇಮ, ಸ್ನೇಹ ಒಳ್ಳೆಯದಲ್ಲ ಎಂಬುದನ್ನು ಅವರಿಗೆ ಮನಗಾಣಿಸುತ್ತಿರಬೇಕು. ಮಕ್ಕಳಿಗೆ ತಂದೆ-ತಾಯಿ ಹೆಚ್ಚಿನ ಪ್ರೀತಿ ತೋರಿಸಿದರೆ ಮಕ್ಕಳು ಹೊರಗಡೆ ಪ್ರೀತಿ ಹುಡುಕುವುದಿಲ್ಲ. ಈ ಮಾತು ಅರಿತುಕೊಂಡರೆ ಸಾಕು. ಮಕ್ಕಳು ಪ್ರೀತಿಯ ನೆಪದಲ್ಲಿ ಮತ್ತೊಬ್ಬರಿಗೆ ಮೈಯೊಪ್ಪಿಸುವುದನ್ನು ತಪ್ಪಿಸಬಹುದು.

ಇನ್ನು ಈ ವಯಸ್ಸಿನಲ್ಲಿ ಕುಡಿತದ ದಾಸರಾದವರು ಮತ್ತೇರುವಂಗೆ ಕುಡಿದು ಅಮಲಿನಿಂದ ರೋಡಿನಲ್ಲೇ ಬಿದ್ದಿರುತ್ತಾರೆ. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗೂಂಡಾಗಿರಿಗಿಳಿಯುತ್ತಾರೆ. ಸಿನಿಮಾ ನೋಡಿ ನನ್ನಲ್ಲಿ ಸಾಕಷ್ಟು ಶಕ್ತಿಯಿದೆ. ನಾನೂ ಡಾನ್ ಅನ್ನಿಸಿಕೊಳ್ಳಬೇಕು ಎಂದು ಸಿಕ್ಕ ಸಿಕ್ಕಲ್ಲಿ, ಸಿಕ್ಕ ಸಿಕ್ಕವರೊಂದಿಗೆ ಹೊಡೆದಾಟಕ್ಕಿಳಿಯುತ್ತಾರೆ. ಡಾನ್ ಅನ್ನಿಸಿಕೊಳ್ಳಲು ಶಕ್ತಿಗಿಂತ ಯುಕ್ತಿ ಮುಖ್ಯ ಎಂಬುದು ಕೂಡ ಇವರಿಗೆ ಅರಿವಿರುವುದಿಲ್ಲ. ಏಕೆಂದರೆ ಒಬ್ಬರು ನಮ್ಮನ್ನು ನೋಡಿ ಹೆದರಬೇಕೆಂದರೆ ನಾವು ತುಂಬಾ ಕೆಟ್ಟವರಾಗಿರಬೇಕು ಇಲ್ಲವಾದರೆ ತುಂಬಾ ಒಳ್ಳೆಯವರಾಗಿರಬೇಕು. ಈ ಬಗ್ಗೆನೂ ಪಾಲಕರು ಮಕ್ಕಳು ಮೇಜರ್ ಆಗುವವರೆಗೂ ಕಾಳಜಿ ವಹಿಸಬೇಕು.

ಮಕ್ಕಳಿಗೆ ಈ ಸಮಯದಲ್ಲಿ ಚಟಗಳೇ ಜೀವನೋತ್ಸಾಹವಾಗಿರುತ್ತವೆ. ಆದ್ದರಿಂದ ಚಟ ಕಲಿತವರು ಚಟ ಮಾಡಲು ಕಾಸಿಗಾಗಿ ಕಳ್ಳತನಕ್ಕೆ ಕೈ ಹಾಕುತ್ತಿರುತ್ತಾರೆ. ಆದ್ದರಿಂದ ಪಾಲಕರು ಸಾಡೇಸಾತಿಯಲ್ಲಿರುವ ಈ ವಯಸ್ಸಿನ ಮಕ್ಕಳು 64 ವಿದ್ಯೆಗಳಲ್ಲಿ ಎಷ್ಟು ವಿದ್ಯೆ ಕಲಿತುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಇದರಿಂದಲೇ ಅವರ ಸಾಡೇಸಾತಿ ಪ್ರಭಾವ ಎಷ್ಟಿದೆ ಎಂದು ಅರಿವಾಗುತ್ತದೆ. ಇಲ್ಲವಾದರೆ ಏನೂ ಅರಿಯದ ಮುಗ್ಧ ಮಕ್ಕಳು ಹಾದಿ ತಪ್ಪಿ ತುಂಬಾ ದೂರ ಹೋದ ಮೇಲೆ ಪಾಲಕರು ಪರಿತಪಿಸಲಾರಂಭಿಸುವಂತಾಗುತ್ತದೆ.

ನಮ್ಮ ಶಿರಸಿ ಕಡೆಯ ಹಳ್ಳಿಗೆ ಯಾವುದೇ ವಾಹನದಲ್ಲಿ ಹೋದರೂ ರೋಲರ್ ಕೋಸ್ಟರ್‌ನಲ್ಲಿ ಹೋದಂಗಾಗುತ್ತದೆ! ಹಂಗೆ ಮಕ್ಕಳು ಎಲ್ಲಿ ಹೋದರೂ ಅಲ್ಲಿ ಅವರಿಗೆ ಕೆಟ್ಟದ್ದನ್ನು ಮಾಡಲು ಕಾಯುವ ಜನರಿರುತ್ತಾರೆ. ಆದ್ದರಿಂದ ಈ ವಯಸ್ಸಿನ ಮಕ್ಕಳ ಬಗ್ಗೆ ತುಂಬಾ ಹುಷಾರಾಗಿರಬೇಕು. ವಾಹನ ಕೊಡಿಸಿದ್ದರೆ ಅನವಶ್ಯಕ ತಿರುಗಾಟಕ್ಕೆ ಅವಕಾಶ ಕೊಡಬಾರದು. ಈ ಸಮಯದಲ್ಲಿ ಅತೀ ಸಡಿಲು ಬಿಟ್ಟರೆ ಮಕ್ಕಳು ಹಾದಿ ತಪ್ಪುವುದು ಗ್ಯಾರಂಟಿ.

ಜೀವನದ ಒಂದು ಹಂತದಲ್ಲಿ ಮಕ್ಕಳ ಸುಖವೇ ನಮ್ಮ ಸುಖವಾಗಿರುತ್ತದೆ. ಆದ್ದರಿಂದ ಮಕ್ಕಳ ಸುಖಕ್ಕಿಂತ ನಮ್ಮ ಸುಖಕ್ಕಾದರೂ ಮಕ್ಕಳ ಜಾತಕ ಪರಿಶೀಲಿಸಿಕೊಂಡು ಅವರಿಗೆ ಸಾಡೇಸಾತಿಯ ಸೂಕ್ತ ಪರಿಹಾರ ಮಾಡಿಸಿಕೊಳ್ಳುವವರು ಬುದ್ಧಿವಂತರೆನ್ನಬಹುದು.

"19ರಿಂದ 30 ವರ್ಷದೊಳಗಿನವರ ಸಾಡೇಸಾತಿ" ಎಂಬುದು ಮುಂದಿನ ಲೇಖನದಲ್ಲಿ (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಏನಾದರೂ ಮುಖ್ಯವಾದ ಕೆಲಸಕ್ಕೆ ಮನೆಯಿಂದ ಹೋಗುವಾಗ ಚಿಟಕೆ ಸಕ್ಕರೆ ಬಾಯಲ್ಲಿ ಹಾಕಿಕೊಂಡು ಹೊರಡಬೇಕು.

ಶನಿಕೃಪೆಗೆ : ಯಾವುದೇ ದೇವಸ್ಥಾನಕ್ಕೆ ಹೋದರೂ ಅಲ್ಲಿ ಕಸಕಡ್ಡಿಗಳು ಇದ್ದರೆ ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 48 : Impact of Sade Sati on zodiac signs. Let's see how Lord Shani troubles children between 13 to 19 years. The parents have to be very careful about their children and take corrective measures, so that children are not affected much.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X