ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ 18ಕ್ಕೆ ಕರ್ಕಕ್ಕೆ ರಾಹು- ಮಕರಕ್ಕೆ ಕೇತು ಪ್ರವೇಶ, ಏನು ಪ್ರಭಾವ?

By ರಾಕೇಶ್
|
Google Oneindia Kannada News

ಕಳೆದ ವರ್ಷ ಜನವರಿಯಲ್ಲಿ ರಾಹು ಸಿಂಹ ರಾಶಿಗೂ ಕೇತು ಕುಂಭ ರಾಶಿಗೂ ಪ್ರವೇಶ ಆಗಿತ್ತು. ಈ ಎರಡೂ ಗ್ರಹಗಳು ಅಪ್ರದಕ್ಷಿಣೆಯಾಗಿ (ಉಲ್ಟಾ) ಸಂಚಾರ ಮಾಡುವವರು. ರಾಹು ಕರ್ಕಾಟಕ ರಾಶಿಯನ್ನು ಹಾಗೂ ಕೇತು ಮಕರ ರಾಶಿಯನ್ನು ಇದೇ ಆಗಸ್ಟ್ ಹದಿನೆಂಟರಂದು ಪ್ರವೇಶ ಮಾಡಲಿವೆ.

ಆ ನಂತರ ಮಾರ್ಚ್ 7, 2019ರವರೆಗೆ ಇವೇ ರಾಶಿಯಲ್ಲಿ ಸಂಚಾರ ಮಾಡುತ್ತವೆ. ನಿಮಗೆ ಗೊತ್ತಿರಲಿ, ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಸಂಚಾರ ಮಾಡುವ ಶನಿಯನ್ನು ಹೊರತು ಪಡಿಸಿದರೆ, ದೀರ್ಘ ಕಾಲ ಸಂಚರಿಸುವ ಗ್ರಹಗಳೆಂದರೆ ರಾಹು ಹಾಗೂ ಕೇತು. ಛಾಯಾಗ್ರಹಗಳಾದ ರಾಹು-ಕೇತುಗಳ ಪ್ರಭಾವ ಕೂಡ ಹನ್ನೆರಡು ರಾಶಿಗಳ ಮೇಲೆ ಇರುತ್ತವೆ.

ಪರಿಹಾರ ಜ್ಯೋತಿಷ್ಯ: ಚೌಡೇಶ್ವರಿ ದೇವಿಗೆ ಯಾವ ಪೂಜೆ ಮಾಡಿದರೆ ಏನು ಫಲ?ಪರಿಹಾರ ಜ್ಯೋತಿಷ್ಯ: ಚೌಡೇಶ್ವರಿ ದೇವಿಗೆ ಯಾವ ಪೂಜೆ ಮಾಡಿದರೆ ಏನು ಫಲ?

ರಾಹು ಗ್ರಹವು ನಮ್ಮ ಭವಿಷ್ಯದ ಮೇಲೂ, ಕೇತು ಗ್ರಹವು ಭೂತಕಾಲದ ಫಲಿತವನ್ನು ನೀಡುತ್ತವೆ. ಈ ರೀತಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಿರುವ ರಾಹು-ಕೇತು ಮನುಷ್ಯರ ಜೀವನದ ಮೇಲೆ ಮಾತ್ರವಲ್ಲ, ಪ್ರಪಂಚದ ಮೇಲೆ ಕೂಡ ಪರಿಣಾಮ ಬೀರುತ್ತವೆ.

ದಿಢೀರ್, ಅನಿರೀಕ್ಷಿತ ಹಾಗೂ ಅನಿಶ್ಚಿತತೆ- ಇದು ಈ ಎರಡೂ ಗ್ರಹಗಳು ಕಾರ್ಯ ನಿರ್ವಹಿಸುವ ರೀತಿ. ರಾಹು- ಕೇತುಗಳು ಸಮಸ್ಯೆಗಳನ್ನು ತರುವುದಾದರೂ ಯಾವುದೇ ಕರುಣೆಯಿಲ್ಲದೆ ನೀಡುತ್ತವೆ. ಹಿಂದಿನ ಕರ್ಮ ಹಾಗೂ ಧೋರಣೆಯ ಆಧಾರದಲ್ಲಿ ಫಲಿತಾಂಶವನ್ನು ಅನುಭವಿಸಬೇಕಾಗುತ್ತದೆ.

ಮೇಷದಿಂದ ಮೀನದವರೆಗೆ ಯಾವ ರಾಶಿಗೆ ಎಂಥ ಜೋಡಿ?ಮೇಷದಿಂದ ಮೀನದವರೆಗೆ ಯಾವ ರಾಶಿಗೆ ಎಂಥ ಜೋಡಿ?

ರಾಹು-ಕೇತುವಿನ ಗೋಚಾರದಿಂದ ಹನ್ನೆರಡು ರಾಶಿಯವರ ಮೇಲೆ ಆಗುವ ಪರಿಣಾಮಗಳನ್ನು ತಿಳಿಯಲು ಮುಂದೆ ಓದಿ...

ಮೇಷ

ಮೇಷ

ನಾಲ್ಕನೇ ಮನೆಯಲ್ಲಿ ಸಂಚರಿಸುವ ರಾಹು ಅಭದ್ರತೆ ಕಾಡುವಂತೆ ಮಾಡುತ್ತದೆ. ಜತೆಗೆ ಪ್ರತಿಷ್ಠೆ, ಗೌರವಗಳಿಗೆ ಚ್ಯುತಿ ಬರುವ ಪ್ರಸಂಗಗಳು ಎದುರಾಗುತ್ತವೆ. ಸಾಲು ಸಾಲು ಸವಾಲುಗಳು ಎದುರಾಗಿ, ಕೆಲ ವಿಚಾರಗಳಲ್ಲಿ ವಿಪರೀತ ಸಿಟ್ಟು ಬರುತ್ತದೆ. ಆಸ್ತಿ, ಭೂಮಿ ಹಾಗೂ ವಾಹನಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಸಮಸ್ಯೆಗಳು ಎದುರಾಗುತ್ತವೆ.

ವೈಯಕ್ತಿಕ ಜೀವನದ ಕಡೆ ಹೆಚ್ಚು ಗಮನ ಕೊಡಬೇಕು. ಕುಟುಂಬದ ವಿಚಾರದಲ್ಲಿನ ಜವಾಬ್ದಾರಿ ಅರಿತು ವರ್ತಿಸಬೇಕು. ಬೇರೆಯವರ ಅಭಿಪ್ರಾಯಗಳನ್ನು ಕೇಳದಿರುವಂಥ ಮನಸ್ಥಿತಿ ಬಿಡಬೇಕು. ಮಗುಮ್ಮಾಗಿ ಇದ್ದು, ಅದೇ ಕಾರಣಕ್ಕೆ ಇತರರ ಜತೆ ತಿಕ್ಕಾಟಗಳು ಕಾಣಿಸಿಕೊಳ್ಳುತ್ತದೆ. ಬೇರೆಯವರನ್ನು ಹತೋಟಿಯಲ್ಲಿಡಲು ಪ್ರಯತ್ನಿಸಬೇಡಿ.

ಇನ್ನು ಕೇತು ಹತ್ತನೇ ಸ್ಥಾನದಲ್ಲಿ ಸಂಚರಿಸುವುದರಿಂದ ವೃತ್ತಿ ಸಂಬಂಧವಾಗಿ ಸವಾಲುಗಳು ಎದುರಾಗುತ್ತವೆ. ಅಡೆ-ತಡೆಗಳು ಎದ್ದು ನಿಲ್ಲುತ್ತವೆ. ಹಿತಶತ್ರುಗಳ ಬಗ್ಗೆ ಹುಷಾರಾಗಿರಿ. ಸಾಮರ್ಥ್ಯಕ್ಕೆ ತಕ್ಕತೆ ಕೆಲಸ ಮಾಡಲು ಆಗಲ್ಲ. ಆದರೆ ಇವೆಲ್ಲದರ ಹೊರತಾಗಿ ದಿಢೀರ್ ಅಂತ ಕೆಲಸದ ಸ್ಥಳದಲ್ಲಿ ಹೀರೋ ಆಗಿಬಿಡ್ತೀರಿ. ಆ ಸಂತೋಷದಲ್ಲಿ ವಹಿಸಿರುವ ಕೆಲಸವನ್ನು ಗಡುವಿನೊಳಗೆ ಮಾಡಿ ಮುಗಿಸದಿದ್ದರೆ ನಿಮ್ಮ ಶ್ರಮ ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗುತ್ತದೆ.

ವೃಷಭ

ವೃಷಭ

ಈ ರಾಶಿಯಿಂದ ಮೂರನೇ ಮನೆಯಲ್ಲಿ ರಾಹು ಸಂಚಾರ ಆಗುವುದರಿಂದ ಹಲವು ವಿಧದಲ್ಲಿ ಅನುಕೂಲಗಳಿವೆ. ಅನಿರೀಕ್ಷಿತವಾದ ಲಾಭಗಳಿವೆ. ಹೊಸ ವಿಷಯಗಳನ್ನು ಕಲಿಯುವುದಕ್ಕೆ, ಆಲೋಚನೆಗಳನ್ನು ಜಾರಿಗೆ ತರುವುದಕ್ಕೆ ಇದು ಸೂಕ್ತ ಕಾಲ. ಮಾತಿನಲ್ಲೇ ಒಂದು ಬದಲಾವಣೆ ಕಾಣಿಸಿಕೊಳ್ಳುತ್ತದೆ. ಪ್ರವಾಸಗಳನ್ನು ಮಾಡುತ್ತೀರಿ. ಅದರಲ್ಲೂ ಪ್ರಕೃತಿಯ ಮಧ್ಯೆ ಸಮಯ ಕಳೆಯುತ್ತೀರಿ.

ಸಿಕ್ಕಾಪಟ್ಟೆ ಕೆಲಸ ಇದೆ ಅಂತ ಸಂಬಂಧಿಕರು, ಕುಟುಂಬದವರನ್ನು ನಿರ್ಲಕ್ಷ್ಯ ಮಾಡಬೇಡಿ. ಬಹುತೇಕ ಸಕಾರಾತ್ಮಕ ಸಂಗತಿಗಳನ್ನೇ ರಾಹು ನಿಮ್ಮ ಬದುಕಿಗೆ ತರುತ್ತಾನೆ. ಗೊತ್ತಿಲ್ಲದ ವಿಚಾರ ಇದ್ದಾಗ ಪಟ್ಟು ಹಿಡಿದು, ಇದೇ ಸರಿ ಎಂಬ ವಾದ ಮಾಡಬೇಡಿ. ಯಾರ ಜತೆಗೆ ಮಾತನಾಡುವಾಗಲೂ ಹುಷಾರಾಗಿರಿ. ಈ ಸಮಯದಲ್ಲಿ ಮೊದಲು ಒಳ್ಳೆ ಕೇಳುಗರಾಗಿ.

ಇನ್ನು ಕೇತು ಒಂಬತ್ತನೇ ಸ್ಥಾನದಲ್ಲಿ ಸಂಚರಿಸುವುದರಿಂದ ಆಧ್ಯಾತ್ಮ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಮನಸ್ಸು ಸೆಳೆಯುತ್ತದೆ. ತುಂಬ ಹಿಂದಿನಿಂದ ತಲೆಯಲ್ಲಿ ಕೊರೆಯುತ್ತಿದ್ದ ವಿಚಾರಗಳಿಗೆ ಉತ್ತರ ದೊರೆಯುತ್ತದೆ. ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಸಾಧ್ಯತೆಗಳಿವೆ. ಅದೃಷ್ಟ ಅಂತ ತುಂಬ ಅವಲಂಬನೆ ಬೇಡ. ಸ್ವಸಾಮರ್ಥ್ಯಕ್ಕೆ ಪ್ರಾಶಸ್ತ್ಯ ಕೊಡಿ. ಆಲಸ್ಯದಿಂದ ಕೆಲ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಿರಿಯರ ಜತೆ ಸಮಸ್ಯೆ ಮಾಡಿಕೊಳ್ಳಬೇಡಿ.

ಮಿಥುನ

ಮಿಥುನ

ರಾಹು ನಿಮ್ಮ ರಾಶಿಯಿಂದ ಎರಡನೇ ಮನೆಯಲಲ್ಲಿ ಸಂಚರಿಸುವುದರಿಂದ ಹಣಕಾಸು ವಿಚಾರದಲ್ಲಿ ಎಚ್ಚರವಾಗಿರಬೇಕು. ಕೆಲ ಸಮಸ್ಯೆಗಳು ಎದುರಾಗಿ ಇಷ್ಟು ಕಾಲ ನಿಮಗಿದ್ದ ಅಧಿಕಾರ ಹಾಗೂ ಹಣದ ಬೆಲೆ ಗೊತ್ತಾಗುತ್ತದೆ. ದ್ವಿತೀಯ ಸ್ಥಾನದ ರಾಹು ನಷ್ಟಗಳನ್ನು ಕೊಡುತ್ತಾನೆ. ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತವೆ. ಮತ್ತು ಪದಾರ್ಥಗಳ ಸೇವನೆ ಕಡ್ಡಾಯವಾಗಿ ಬೇಡ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಕಟ್ಟಿಟ್ಟ ಬುತ್ತಿ.

ಬಹಳ ಕಾಲದ ಹಿಂದೆ ತೆಗೆದುಕೊಂಡ ವಸ್ತು, ಆಸ್ತಿ, ಬಟ್ಟೆ-ಬರೆ... ಇಂಥವುಗಳಿಂದ ಈಗ ಸುಖ ಪಡುತ್ತೀರಿ. ಗಂಟಲು, ನಾಲಗೆ, ಕತ್ತಿನ ಭಾಗದ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಕಣ್ಣಿನ ಪರೀಕ್ಷೆಯನ್ನು ಆಗಾಗ ಮಾಡಿಸಿಕೊಂಡರೆ ಒಳ್ಳೆಯದು.

ಕೇತು ಗ್ರಹ ಎಂಟರಲ್ಲಿ ಸಂಚರಿಸುವುದರಿಂದ ದಿಢೀರ್ ಸಮಸ್ಯೆಗಳು ಎದುರಾಗುತ್ತವೆ. ಈ ಅವಧಿಯಲ್ಲಿ ಸುರಕ್ಷತೆಗೆ ಮೊದಲ ಆದ್ಯತೆಯಿರಲಿ. ನಿಮ್ಮ ಯಾವುದೇ ಕೆಲಸವಿರಲಿ, ಅಪಾಯ ಇದೆ ಅಂತಾದರೆ ಮಾಡಲೇ ಬೇಡಿ. ಇದು ಸಾಲ ಮಾಡುವುದಕ್ಕೆ ಸೂಕ್ತ ಕಾಲ ಅಲ್ಲ ಅನ್ನೋದು ನೆನಪಿಡಿ. ನಿಮ್ಮಲ್ಲಿ ಅನೇಕ ರಹಸ್ಯಗಳು ಉಳಿಯುತ್ತವೆ. ಅವುಗಳನ್ನು ಇತರರ ಜತೆ ಹಂಚಿಕೊಳ್ಳುವುದಕ್ಕೂ ಮನಸ್ಸಾಗಲ್ಲ.

ಕರ್ಕಾಟಕ

ಕರ್ಕಾಟಕ

ರಾಹು ಮೊದಲನೇ ಮನೆಯಲ್ಲಿ ಇರುವುದರಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ ಕಾಣಿಸಿಕೊಳ್ಳುತ್ತದೆ. ವಿಪರೀತವಾದ ಯೋಚನೆಯಿಂದ ನಿರ್ಧಾರದಲ್ಲಿ ಗೊಂದಲ ಏರ್ಪಡುತ್ತದೆ. ನಕಾರಾತ್ಮಕ ಯೋಚನೆಗೆ ಅವಕಾಶ ಕೊಡುವುದನ್ನು ಬಿಟ್ಟು ಹೊಸ ವಿಚಾರಗಳನ್ನು ಕಲಿಯುವ ಕಡೆಗೆ ಗಮನ ಕೊಡಿ. ಜನರ ಮಧ್ಯೆ ಬೆರೆಯುವುದಕ್ಕೆ, ನಿಮ್ಮ ಆಲೋಚನೆಗಳನ್ನು ಹೇಳಿಕೊಳ್ಳುವುದಕ್ಕೆ ಮುಂದಾಗಿ.

ಯಾರಿಗಾದರೂ ಮಾತು ನೀಡುವ ಮುನ್ನ ಎಚ್ಚರ. ಅದನ್ನು ಉಳಿಸಿಕೊಳ್ಳುವುದೇ ಕಷ್ಟವಾಗುತ್ತದೆ. ನೀವು ಏನು ಅಂದುಕೊಳ್ತೀರೋ ಅದನ್ನು ಎದುರಿನವರಿಗೆ ಅರ್ಥ ಮಾಡಿಸುವುದರಲ್ಲಿ ಹೈರಾಣಾಗುತ್ತೀರಿ. ನಿಮಗೆ ಸಿಗುವ ಏಕಾಂತವನ್ನು ನೀವೇಷ್ಟು ಗಟ್ಟಿಗರು ಎಂದು ಗುರುತಿಸಲು ಬಳಸಿಕೊಳ್ಳಿ. ಈ ಸಮಯದಲ್ಲಿ ಶೀಘ್ರವಾಗಿ ಪ್ರತಿಕ್ರಿಯೆ ನೀಡುವುದು ಹೇಗೆ ಎಂಬುದನ್ನು ರಾಹು ಗ್ರಹ ಕಲಿಸುತ್ತದೆ.

ಏಳನೇ ಮನೆಯ ಕೇತು ಆರೋಗ್ಯ ಸೇರಿದಂತೆ ಇತರ ಸಮಸ್ಯೆಗಳನ್ನು ತರುತ್ತದೆ. ಸಂಬಂಧಗಳಲ್ಲಿ ಏನಿದು ಸಮಸ್ಯೆ ಎಂದು ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಅದರಲ್ಲೂ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಲ್ಬಣವಾಗುತ್ತವೆ. ಯಾವುದೇ ಕಾರಣವಿಲ್ಲದೆ ವಾದ-ವಿವಾದಗಳು ಏರ್ಪಡುತ್ತವೆ. ನಿಮ್ಮ ವರ್ಚಸ್ಸಿಗೆ ಘಾಸಿಯಾಗುವಂಥ ಸಾಧ್ಯತೆಯಿರುವುದರಿಂದ ಎಚ್ಚರವಾಗಿರಿ. ಪ್ರತಿಸ್ಪರ್ಧಿಗಳಿಂದ ಸೋಲುಗಳು ಎದುರಾದರೆ ತೀರಾ ಕಂಗಾಲಾಗಬೇಡಿ.

ಸಿಂಹ

ಸಿಂಹ

ಹನ್ನೆರಡನೇ ಸ್ಥಾನದಲ್ಲಿರುವ ರಾಹು ವಾಸ್ತವದ ಬಗ್ಗೆ ಚಿಂತಿಸುವ ಶಕ್ತಿಯನ್ನೇ ಕಸಿಯುತ್ತದೆ. ಭ್ರಮಾ ಲೋಕದಲ್ಲಿ ಸಂಚರಿಸಿ, ಏನೇನೋ ಕನಸು ಕಾಣುತ್ತೀರಿ. ಅಗತ್ಯ ಇಲ್ಲದ ವಸ್ತುಗಳ ಮೇಲೆ ತುಂಬ ಖರ್ಚು ಮಾಡಬೇಡಿ. ಏಕೋ ಒಬ್ಬಂಟಿ ಆದೆ. ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಾ ಇಲ್ಲ ಎಂದು ಪದೇಪದೇ ಅನ್ನಿಸಿ, ನೀವಾಗಿಯೇ ಆಪ್ತರಿಂದ ದೂರವಾಗುವ ಸಾಧ್ಯತೆಗಳಿವೆ ಎಚ್ಚರ.

ಯಾವುದೋ ಒಂದು ವಿಚಾರ ಸದಾ ತಲೆಯಲ್ಲಿ ಕೊರೆಯುತ್ತಲೇ ಇರುತ್ತದೆ. ನಿಮ್ಮಷ್ಟಕ್ಕೆ ಕೆಲಸ ಮಾಡಿ, ನಿರೀಕ್ಷಿಸದ ಮೆಚ್ಚುಗೆ ಪಡೆಯುತ್ತೀರಿ. ಕೆಲವು ವಿಚಾರದಲ್ಲಿ ಸಾಮರ್ಥ್ಯಕ್ಕೆ ತಕ್ಕ ಕೆಲಸ ಆಗಿಲ್ಲ ಎಂಬುದು ಗೊತ್ತಾಗುತ್ತದೆ. ಅದರ ಬಗ್ಗೆ ತುಂಬ ಯೋಚಿಸುವ ಬದಲು, ಸಾಮರ್ಥ್ಯ ವೃದ್ಧಿಗೆ ಏನು ಮಾಡಬೇಕು ಅನ್ನೋದು ಚಿಂತಿಸಿ. ವಿದೇಶ ಪ್ರವಾಸದ ಸಾಧ್ಯತೆಗಳು ಕೂಡ ಇವೆ.

ಆರನೇ ಸ್ಥಾನದಲ್ಲಿ ಸಂಚರಿಸುವ ಕೇತು ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆ ತರುತ್ತದೆ. ಮೈ ಚಳಿ ಬಿಟ್ಟು ಅಭಿಪ್ರಾಯಗಳನ್ನು ಹೇಳಲು ಧೈರ್ಯ ಬರುತ್ತದೆ. ಉದ್ಯೋಗದಲ್ಲಿ ಗೌರವ, ಮನ್ನಣೆ ಸಿಗುತ್ತದೆ. ನಿಮಗೆ ಬೇಕಾದವರ ಜತೆಗೆ ಈ ಹಿಂದೆ ಮನಸ್ತಾಪ ಆಗಿತ್ತು ಅಂದರೆ ಪರಿಹರಿಸಿಕೊಳ್ಳಲು ಇದು ಸೂಕ್ತ ಸಮಯ.

ಕನ್ಯಾ

ಕನ್ಯಾ

ಹನ್ನೊಂದರಲ್ಲಿ ಸಂಚರಿಸುವ ರಾಹು ಹಲವು ರೀತಿಯಲ್ಲಿ ಲಾಭವನ್ನು ಸೂಚಿಸುತ್ತಿದೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿಯಾಗುತ್ತದೆ, ಆದಾಯದ ಮೂಲ ಚೆನ್ನಾಗಿ ಆಗುತ್ತದೆ. ವ್ಯಾಪಾರಸ್ಥರಿಗಂತೂ ತುಂಬ ಅನುಕೂಲಕರವಾದ ಸಮಯವಿದು. ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. ತುಂಬ ಒಳ್ಳೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ.

ಪಾರ್ಟಿ ಅದು-ಇದು ಎಂದು ತುಂಬ ಚಟುವಟಿಕೆಯಾಗಿ ಕಾಣಿಸಿಕೊಳ್ಳುತ್ತೀರಿ. ಸಂಬಂಧಗಳ ವಿಚಾರದಲ್ಲಿ ಹುಡುಗಾಟ ಬೇಡ. ಪ್ರಬುದ್ಧತೆಯಿಂದ ಹಾಗೂ ವಾಸ್ತವವನ್ನು ಅರಿತು ವರ್ತಿಸಿ. ಸಂತೋಷದಲ್ಲಿ ಮುಳುಗಿ ಹಳೆ ಸ್ನೇಹಿತರನ್ನು ಮರೆಯಬೇಡಿ. ದಾನ-ಧರ್ಮದ ಬಗ್ಗೆ ಮಾತು ಕೊಟ್ಟಿದ್ದರೆ ತಪ್ಪದೆ ಉಳಿಸಿಕೊಳ್ಳಿ.

ಕೇತು ಐದನೇ ಸ್ಥಾನದಲ್ಲಿ ಸಂಚರಿಸುವುದರಿಂದ ಸುಪ್ತ ಮನಸ್ಸಿಗೆ ಕೆಲವು ಸೂಚನೆಗಳು ಸಿಗುತ್ತವೆ. ಯಾವುದೇ ವಿಚಾರ ಆಗಿರಲಿ ಪೂರ್ತಿಯಾಗಿ ತಿಳಿದುಕೊಳ್ಳಿ. ಯಾವುದೋ ಮೈಮರೆವಿನಲ್ಲಿ ಪ್ರತಿಸ್ಪರ್ಧಿಗಳಿಗೆ ಅವಕಾಶಗಳನ್ನು ಬಿಟ್ಟುಕೊಡಬೇಡಿ. ಮಕ್ಕಳ ವಿಚಾರವಾಗಿ ಕೆಲ ಸಮಸ್ಯೆಗಳು ಎದುರಾಗುತ್ತವೆ. ಆ ಬಗ್ಗೆ ಎಚ್ಚರವಿರಲಿ. ಅವರ ಆರೋಗ್ಯದ ಬಗ್ಗೆ ಕೂಡ ಹುಷಾರಾಗಿರಿ. ಸಂಬಂಧಗಳಲ್ಲಿ ಭಾವನಾತ್ಮಕ ಒತ್ತಡ ಕಂಡುಬರುತ್ತದೆ.

ತುಲಾ

ತುಲಾ

ಹತ್ತನೇ ಸ್ಥಾನದ ರಾಹುವಿನಿಂದ ನಿಮ್ಮ ಜೀವನದಲ್ಲಿ ಕೆಲ ನಾಟಕೀಯ ಬೆಳವಣಿಗೆಗಳು ಕಾಣಿಸಿಕೊಳ್ಳುತ್ತವೆ. ಅದು ಮೊದಲಿಗೆ ನಿಮ್ಮ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ವರ್ಗಾವಣೆ ಸಾಧ್ಯತೆಗಳು ಗೋಚರಿಸುತ್ತವೆ. ಅಷ್ಟೇ ಅಲ್ಲ, ಕಚೇರಿಯಲ್ಲಿ ನಿಮಗಿಂತ ಹಿರಿಯರ ಜತೆಗೆ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ದಿಢೀರ್ ಎದುರಾಗುವ ಖರ್ಚುಗಳಿಗೆ ಸಿದ್ಧರಾಗಿರಿ. ಈ ಎಲ್ಲ ಸನ್ನಿವೇಶಗಳು ನಿಮ್ಮ ತ್ರಾಣವನ್ನೇ ಹಿಂಡಿಬಿಡುತ್ತವೆ.

ಉದ್ಯೋಗ-ವೃತ್ತಿ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಹಿಂದಿನಿಂದ ಪಿತೂರಿ ಮಾಡುವವರಿಂದ ವರ್ಚಸ್ಸಿಗೆ ಘಾಸಿ ಆಗದಂತೆ ಎಚ್ಚರ ವಹಿಸಿ. ಮೇಲಧಿಕಾರಿಗಳ ಜತೆ ಮಾತನಾಡುವಾಗ ವಿನಮ್ರರಾಗಿರಿ. ಮನಸ್ಸು ಎಲ್ಲೆಲ್ಲೋ ಹರಿಬಿಡದೆ, ಕಷ್ಟಪಟ್ಟು ಕೆಲಸ ಮಾಡಿದರೆ ಈ ಗೋಚಾರ ಅಂಥ ಕೆಟ್ಟ ಫಲವೇನೂ ಕೊಡಲ್ಲ.

ನಾಲ್ಕರಲ್ಲಿ ಸಂಚರಿಸುವ ಕೇತು ಭೂಮಿ ಮತ್ತು ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ಬರುವಂತೆ ಮಾಡುತ್ತದೆ. ಯಾಕೋ ಮನಸಿಗೆ ಅಸಮಾಧಾನ ಎಂದು ಪದೇ ಪದೇ ಅನಿಸುತ್ತದೆ. ನಿಮ್ಮ ಸೋಲೋ ಗೆಲುವೋ ವಿಷಯ ಅಲ್ಲ. ಆದರೆ ಮನಸಿಗೆ ಸಮಾಧಾನ ಇರಲ್ಲ. ಬೇರೆಯವರಿಗೆ ನಿಮ್ಮ ಮನಸಿನ ತುಮುಲಗಳನ್ನು ಸಹ ಹೇಳಿಕೊಳ್ಳಲು ಆಗಲ್ಲ. ನಿಮ್ಮ ಬಾಳಸಂಗಾತಿ ಕಡೆಯ ಸಂಬಂಧಿಕರ ಜತೆಗೆ ಇರುಸು ಮುರುಸು ಆಗುತ್ತದೆ. ಬೇರೆಯವರ ಭಾವನೆಗೆ ಘಾಸಿ ಮಾಡುತ್ತೀರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಎಚ್ಚರ. ಆಸ್ತಿ ಖರೀದಿ-ಮಾರಾಟಕ್ಕೆ ಸೂಕ್ತ ಕಾಲವಲ್ಲ.

ವೃಶ್ಚಿಕ

ವೃಶ್ಚಿಕ

ಒಂಬತ್ತರಲ್ಲಿ ಸಂಚರಿಸುವ ರಾಹು ಈ ಸಮಯದಲ್ಲಿ ನಿಮ್ಮ ನಂಬಿಕೆಗಳನ್ನೇ ಬದಲಿಸುತ್ತದೆ. ಹೊಸ ಸ್ಥಳ, ಸಂಗತಿ, ಸಂಸ್ಕೃತಿಯ ಪರಿಚಯವಾಗುವ ಕಾಲ ಇದು. ಕುತೂಹಲದ ಗುಣ ಹೆಚ್ಚಾಗಿ, ಕಲಿಕೆ ಸಾಮರ್ಥ್ಯ ಹೆಚ್ಚಾಗುತ್ತದೆ. ತುಂಬ ಕಲಿತು ಬಿಡಬೇಕು ಎಂಬ ಹಪಹಪಿಯಲ್ಲಿ ಏನೂ ತಿಳಿದುಕೊಳ್ಳದ ಸಾಧ್ಯತೆ ಇದೆ, ಎಚ್ಚರ.

ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಡಿ. ಅದೃಷ್ಟ ಕೈ ಹಿಡಿಯಲು ರಾಹು ಬಿಡುವುದಿಲ್ಲ. ಒಳ ಮನಸ್ಸು ಹೇಳುವ ಸಂಗತಿಗಳಿಗೂ ಕಿವಿಗೊಡಿ. ಸುಪ್ತ ಮನಸ್ಸು ನೀಡುವ ಸಂದೇಶಗಳನ್ನು ನಿರ್ಲಕ್ಷಿಸಬೇಡಿ. ಸಣ್ಣ ಸಣ್ಣ ವಿಷಯಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡು ದೊಡ್ಡ ಸಂಗತಿಗಳನ್ನು ಕಳೆದುಕೊಳ್ಳಬೇಡಿ. ಸ್ವಸಾಮರ್ಥ್ಯದ ಮೇಲಿನ ನಂಬಿಕೆಯೇ ಯಶಸ್ಸಿನ ಕೀಲಿಕೈ ಎಂಬುದು ನೆನಪಿಡಿ.

ಮೂರನೇ ಸ್ಥಾನದಲ್ಲಿ ಸಂಚರಿಸುವ ಕೇತು ಉತ್ತಮ ಸಮಯ ಎಂಬುದನ್ನು ಸೂಚಿಸುತ್ತಿದೆ. ಇದರಿಂದ ಹಲವು ಅನುಕೂಲಗಳು ತರುತ್ತದೆ. ಆರೋಗ್ಯ ಸಮಸ್ಯೆಗಳು ಈ ಹಿಂದೆ ಇದ್ದಲ್ಲಿ ಸುಧಾರಣೆ ಕಾಣುತ್ತದೆ. ಉತ್ಸಾಹ ಹೊಮ್ಮುತ್ತದೆ. ಈ ವರೆಗೆ ಕಾಣದಿದ್ದ ಯಶಸ್ಸು ಈ ಸಮಯದಲ್ಲಿ ಬರುತ್ತದೆ. ಹತ್ತಿರದ ಪ್ರಯಾಣಗಳನ್ನು ಮಾಡುತ್ತೀರಿ. ನಿಮ್ಮ ಶತ್ರುಗಳನ್ನು ಬಾಯಿ ಮುಚ್ಚಿಸುತ್ತೀರಿ. ಸ್ಪರ್ಧೆಗಳಲ್ಲಿ ಗೆಲುವು ಪಡೆಯುತ್ತೀರಿ.

ಧನುಸ್ಸು

ಧನುಸ್ಸು

ಎಂಟನೆ ಸ್ಥಾನದಲ್ಲಿ ರಾಹು ಸಂಚರಿಸಲಿದ್ದು, ಅಗತ್ಯ ಬಿದ್ದಲ್ಲಿ ಬೇರೆಯವರಿಂದ ಸಹಾಯ ಪಡೆಯಲು ಹಿಂಜರಿಯಬೇಡಿ. ಸ್ವಂತ ಶಕ್ತಿ ಮೇಲೆ ನಂಬಿಕೆ ಇರುವುದು ತಪ್ಪಲ್ಲ. ಆದರೆ ಆ ಕಾರಣಕ್ಕೆ ಹಟಮಾರಿ ಧೋರಣೆ ಬಿಡಿ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಮಸ್ಯೆಗಳಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ.

ಈ ಸಮಯದಲ್ಲಿ ಕನಸಿನ ಮೂಲಕ ಭವಿಷ್ಯದ ಬಗ್ಗೆ ಸೂಚನೆಗಳು ದೊರೆಯುತ್ತವೆ. ಅವುಗಳನ್ನು ಅರ್ಥೈಸಿಕೊಂಡು ಮುಂದಿನ ಹೆಜ್ಜೆ ಇಡಿ. ಸ್ಥಿರತೆ ಹಾಗೂ ಸುರಕ್ಷತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹಿಡಿದಿದ್ದೇ ಹಠ ಬೇಡ. ಬೇರೆಯವರ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುವ ಬದಲು ಮುಕ್ತ ಮನಸಿನಿಂದ ವರ್ತಿಸಿ.

ಕೇತು ಎರಡನೇ ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ಹಣಕಾಸು, ಸಂಪತ್ತಿನ ವಿಚಾರದಲ್ಲಿ ಅದೃಷ್ಟ ಕೈ ಕೊಡುತ್ತದೆ. ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರ ವಹಿಸಿ. ವಸ್ತುಗಳು ಕಳೆದುಹೋಗುವ, ಕಳ್ಳತನ ಆಗುವ ಸಾಧ್ಯತೆಗಳಿವೆ. ಅದರಲ್ಲೂ ಪ್ರಯಾಣದ ವೇಳೆ ತೀರಾ ಎಚ್ಚರದಿಂದ ಇರಬೇಕು. ಕಿವಿ, ಗಂಟಲು, ಕಣ್ಣು, ಮೂಗಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಾಗಲಿವೆ. ಕುಟುಂಬ ಕಲಹ ಆಗುವ ಸಾಧ್ಯತೆಗಳಿವೆ. ಹಣಕಾಸು ಹಾಗೂ ಹೂಡಿಕೆ ವಿಚಾರವಾಗಿ ಸಾವಿರ ಬಾರಿ ಯೋಚಿಸಿ, ತೀರ್ಮಾನ ಕೈಗೊಳ್ಳಿ.

ಮಕರ

ಮಕರ

ರಾಹು ಏಳರಲ್ಲಿ ಸಂಚರಿಸುವುದರಿಂದ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ- ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಬಾಳಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ. ಪತಿ-ಪತ್ನಿಯರ ಮಧ್ಯೆ ಅಂತರ ಹೆಚ್ಚಾಗುತ್ತದೆ. ಮಾತುಕತೆ ಕಡಿಮೆ ಆಗಿ, ಅನುಮಾನಗಳಿಗೂ ಕಾರಣವಾಗುತ್ತದೆ.

ಎದುರಿನವರಿಗೆ ಹೇಳಬೇಕಾದ ವಿಚಾರದಲ್ಲಿ ಸ್ಪಷ್ಟವಾಗಿರಲಿ. ನಿಮ್ಮ ಆಲೋಚನೆ-ವಿಚಾರವನ್ನು ಬೇರೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಬೇಡಿ. ಈ ಗೋಚಾರದ ಸಂದರ್ಭದಲ್ಲಿ ನಿಧಾನವಾಗಿ ಹೇಗೆ ಮಾತನಾಡಬೇಕು ಎಂಬುದು ತಿಳಿಯುತ್ತಾ ಹೋಗುತ್ತದೆ. ಎಲ್ಲ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಪಾರ್ಟ್ ನರ್ ಷಿಪ್ ವ್ಯವಹಾರ ಮಾಡುತ್ತಿದ್ದರೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತವೆ.

ಕೇತು ಜನ್ಮರಾಶಿಯಲ್ಲೇ ಇರುವುದರಿಂದ ಹಲವು ಗೊಂದಲಗಳು ಏರ್ಪಡುತ್ತವೆ. ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ತೀರಾ ಒಬ್ಬಂಟಿ ಎನಿಸುತ್ತದೆ. ತುಂಬ ಮುಖ್ಯವಾದ ಯೋಜನೆಗಳು ಮುಂದಕ್ಕೆ ಸಾಗುವುದಿಲ್ಲ. ನಿಮ್ಮ ದೌರ್ಬಲ್ಯಗಳನ್ನು ಬಳಸಿಕೊಂಡು ಶತ್ರುಗಳು ಲಾಭ ಪಡೆಯಲು ಯತ್ನಿಸುತ್ತಾರೆ. ಪ್ರಯಾಣದ ಹಲವು ಅವಕಾಶಗಳು ಸಿಗುತ್ತವೆ. ಆರೋಗ್ಯದ ಬಗ್ಗೆ ಎಚ್ಚರ. ಜ್ವರ ಹಾಗೂ ಹೊಟ್ಟೆ ಸಮಸ್ಯೆಗಳು ಆಗುತ್ತವೆ. ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಹೆಚ್ಚುತ್ತದೆ.

ಕುಂಭ

ಕುಂಭ

ಆರರಲ್ಲಿ ಸಂಚರಿಸುವ ರಾಹುವಿನಿಂದ ಹಲವು ಸಕಾರಾತ್ಮಕ ವಿಚಾರಗಳನ್ನು ನಿರೀಕ್ಷಿಸಬಹುದು. ನೇರವಂತಿಕೆ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ. ಶತ್ರುಗಳು ಮೌನಕ್ಕೆ ಶರಣಾಗುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅದ್ಭುತ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ಅನಿರೀಕ್ಷಿತ ರೀತಿಯಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

ಆದರೆ, ಉದ್ಯೋಗದ ವಿಚಾರದಲ್ಲಿ ಕೆಲ ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀವು ಏನೆಂದರೂ ಸಹಿಸಿಕೊಳ್ಳುತ್ತಾರೆ ಎಂಬ ಧೋರಣೆ ಬಿಡುವುದು ಒಳಿತು. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಆದರೆ ಸಣ್ಣ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುವುದನ್ನು ಬಿಡಬೇಕು. ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಯೋಜನೆ ಮಾಡಿ.

ಎರಡರಲ್ಲಿ ಕೇತು ಸಂಚರಿಸಲಿದ್ದು, ಇತರರಿಂದ ಯಾವುದೇ ನಿರೀಕ್ಷೆ ಮಾಡಬಾರದು ಎಂಬ ಪಾಠ ಕಲಿಯುತ್ತೀರಿ. ವೃತ್ತಿಪರರಾಗಿದ್ದರೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ನೀವು ಕಲಿತ ಸಂಗತಿ, ವಿಚಾರಗಳಲ್ಲಿ ಈಗ ಆಗಿರುವ ಬದಲಾವಣೆಗಳ ಸಹಿತ ತಿಳಿದುಕೊಳ್ಳಿ. ಸಣ್ಣ-ಪುಟ್ಟ ಸಂಗತಿಗಳನ್ನು ಕೂಡ ನಿರ್ಲಕ್ಷ್ಯ ಮಾಡಬೇಡಿ. ವಿದೇಶದಲ್ಲಿ ವಾಸಿಸುತ್ತಿರುವವರು ಕೆಲ ಸಮಸ್ಯೆ ಎದುರಿಸುತ್ತೀರಿ.

ಮೀನ

ಮೀನ

ರಾಹು ಐದನೇ ಸ್ಥಾನದಲ್ಲಿ ಸಂಚರಿಸುವುದರಿಂದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಹಾಗೂ ಏಕಾಗ್ರತೆ ಕಷ್ತವಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದಕ್ಕೆ ಇದು ಸೂಕ್ತ ಕಾಲವಲ್ಲ. ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿ, ತಪ್ಪುಗಳು ಮಾಡುವ ಸಾಧ್ಯತೆಗಳಿರುತ್ತವೆ. ದಿಢೀರ್ ಆರ್ಥಿಕ ನಷ್ಟ ಕಾಣಿಸಿಕೊಳ್ಳುತ್ತದೆ. ಮಕ್ಕಳ ಆರೋಗ್ಯ ಆತಂಕಕ್ಕೆ ಕಾರಣವಾಗುತ್ತದೆ.

ಪ್ರೀತಿ-ಪ್ರೇಮ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಾರದು ಅಂದರೆ ಪಾರದರ್ಶಕವಾಗಿರಿ. ಕೆಲವು ಸನ್ನಿವೇಶದಲ್ಲಿ ಅದೃಷ್ಟ ಕೈ ಹಿಡಿಯುತ್ತದೆ. ನಿಮ್ಮ ಹೊಸ ಬಗೆಯ ಆಲೋಚನೆಗಳು ಯಶಸ್ಸನ್ನು ತಂದುಕೊಡುತ್ತದೆ. ಕ್ರಿಯಾತ್ಮಕವಾದ ಆಲೋಚನೆಗಳು ಹೊಳೆಯುತ್ತವೆ.

ಹನ್ನೊಂದರಲ್ಲಿನ ಕೇತು ಹಲವು ಕ್ಷೇತ್ರಗಳಲ್ಲಿ ಯಶಸ್ಸು ನೀಡುತ್ತದೆ. ಈ ಹಿಂದೆ ಪಟ್ಟಿದ್ದ ಶ್ರಮದ ಫಲವಾಗಿ ಅನಿರೀಕ್ಷಿತ ಲಾಭವಿದೆ. ಕನಸುಗಳ ಸಾಕಾರಕ್ಕಾಗಿ ಬುದ್ಧಿವಂತಿಕೆಯಿಂದ ತಂತ್ರಗಾರಿಕೆ ಮಾಡುತ್ತೀರಿ. ಉದ್ಯೋಗದಲ್ಲಿ ಏಳಿಗೆ ಇದೆ. ನಿರಂತರವಾಗಿ ಶ್ರಮ ಹಾಕದಿದ್ದರೆ ನಿಮ್ಮ ಗೆಲುವು ಒಂದು ಅವಕಾಶ ಅಷ್ಟೇ ಎಂದು ಇತರರು ಭಾವಿಸುತ್ತಾರೆ. ಸ್ನೇಹಿತರ ಮಧ್ಯೆ ಅಂತರ ಏರ್ಪಡುತ್ತದೆ. ಏಕಾಗ್ರತೆಯಲ್ಲಿ ಭಂಗವಾಗದಂತೆ ಎಚ್ಚರ ವಹಿಸಿ.

English summary
Rahu in Cancer, Ketu In Capricorn transit will start from August 18th, here is the effect on 12 zodiac signs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X