ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

By ಪ್ರಕಾಶ್ ಅಮ್ಮಣ್ಣಾಯ
|
Google Oneindia Kannada News

ಈ ದಿನ ನಾನು ತಿಳಿಸುತ್ತಿರುವ ವಿಚಾರ ಹಲವರಿಗೆ ಹೊಸ ಬಗೆಯಲ್ಲಿದೆ ಅನ್ನಿಸಬಹುದು. ಆದರೆ ಇಲ್ಲಿನ ಪ್ರತಿ ವಾಕ್ಯವನ್ನು ಪರೀಕ್ಷಿಸದೆ ನೀವು ಒಪ್ಪಬೇಡಿ. ಯಾವುದೇ ಸಂಸ್ಥೆ ಅಥವಾ ರಾಜಕೀಯ ಪಕ್ಷಗಳಿಗೆ ಲಾಂಛನ ಬಹಳ ಮುಖ್ಯವಾದದ್ದು. ಉದಾಹರಣೆಗೆ ಸಿಂಡಿಕೇಟ್ ಬ್ಯಾಂಕ್. ಆ ಬ್ಯಾಂಕ್ ಗೆ ನಾಯಿಯ ಲಾಂಛನ ಇದೆ. ಕಾವಲಿಗೆ ನಾಯಿಯೇ ಯಜಮಾನ.

ಇಲ್ಲಿ ನಾವಿಟ್ಟ ಹಣ ಮತ್ತಿತರ ರಕ್ಷಣೆಗೆ ಈ ಲಾಂಛನ ನಿಜಕ್ಕೂ ಅರ್ಥಗರ್ಭಿತ ಹಾಗೂ ಪೂರಕವಾಗಿದೆ. ಯಾವುದು ಅರ್ಥಗರ್ಭಿತ ಆಗುವುದಿಲ್ಲವೋ ಅದು ಆ ಸಂಸ್ಥೆಗೆ ಮಾರಕವಾಗುತ್ತದೆ. ಲಾಂಛನಗಳು ಸಂಸ್ಥೆಯ ಧ್ಯೇಯೋದ್ದೇಶವನ್ನು ಹೇಳುತ್ತವೆ. ಜತೆಗೆ ಅದರ ಶ್ರೇಯೋಭಿವೃದ್ಧಿ ಅಥವಾ ಅವಸಾನವನ್ನು ಸೂಚಿಸುತ್ತದೆ.

ಇನ್ನೊಂದು ಉದಾಹರಣೆ ಅಂದರೆ, ಕೌರವನ ಲಾಂಛನ ಉರಗ. ಅಂದರೆ ಹಾವು. ಇದು ವಿಷವನ್ನೇ ಕಾರುತ್ತಿರುತ್ತದೆ. ಹಾವೆಂದರೆ ಜನ ಹೆದರುತ್ತಾರೆ. ಆದರೆ ತಾಕತ್ತಿದ್ದವರು, ಧೈರ್ಯವಂತರು ಅದನ್ನು ಹೊಡೆದು ಕೊಲ್ಲುತ್ತಾರೆ. ಧೈರ್ಯ ಇಲ್ಲದವರು ಅದು ಸಾಯುವುದನ್ನೇ ಬಯಸುತ್ತಾರೆ. ಕೌರವರ ನಾಶಕ್ಕೆ ಈ ಉರಗ ಧ್ವಜವೇ ಕಾರಣವಾಯಿತು.

ನರ ರಾಕ್ಷಸನಾದ ಹಿಟ್ಲರ್

ನರ ರಾಕ್ಷಸನಾದ ಹಿಟ್ಲರ್

ಮುಖ್ಯವಾದ ಉದಾಹರಣೆ ಅಂದರೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ ಚಿಹ್ನೆ ಸ್ವಸ್ತಿಕ. ಇದು ಸರಿಯಾಗಿ(Clockwise) ಇದ್ದಿದ್ದರೆ ಆತ ನಿಜಕ್ಕೂ ಜನ ಮೆಚ್ಚುವ ನಾಯಕನಾಗಿರುತ್ತಿದ್ದ. ಆದರೆ ಇದು ವಾಮ ಪ್ರಯೋಗದ (Anti clockwise) ಚಿಹ್ನೆ ಆಗಿದ್ದುದರಿಂದ ಈತ ನರರಾಕ್ಷಸನಾದ. ಮತ್ತೆ ಮಹಾಭಾರತದ ಉದಾಹರಣೆಗೆ ಬರೋಣ. ಅರ್ಜುನನ ಚಿಹ್ನೆ ಹನುಮ. ಆತ ವಾಯು ಪುತ್ರ. ಆದ್ದರಿಂದಲೇ ಅರ್ಜುನನ ಬಾಣಗಳು ಗುರಿ ತಪ್ಪುತ್ತಿರಲಿಲ್ಲ.

ಕಮಲದ ಗೌರವಕ್ಕೆ ಧಕ್ಕೆ ತಂದರೆ ಕೆಸರು

ಕಮಲದ ಗೌರವಕ್ಕೆ ಧಕ್ಕೆ ತಂದರೆ ಕೆಸರು

ಸದ್ಯದ ರಾಜಕೀಯ ಪಕ್ಷಗಳ ಚಿಹ್ನೆಯನ್ನು ನೋಡೋಣ. ಬಿಜೆಪಿಗೆ ಸಿಕ್ಕಿದ್ದು ಕಮಲದ ಚಿಹ್ನೆ. ಕಮಲವು ಕೆಸರಿನಿಂದ ಹುಟ್ಟಿದ್ದು. ಈ ಹೂವು ಲಕ್ಷ್ಮಿ ಸೇರಿದಂತೆ ಹಲವು ದೇವತೆಗಳಿಗೆ ನೆಚ್ಚಿನದು. ಈ ಪಕ್ಷ ಎಲ್ಲಿವರೆಗೆ ತತ್ವ-ಸಿದ್ಧಾಂತಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತದೋ ಅಲ್ಲಿವರೆಗೆ ಸಮಸ್ಯೆ ಇರುವುದಿಲ್ಲ. ಹುಟ್ಟುವುದೇ ಕೆಸರಿನಲ್ಲಿ ಆದ್ದರಿಂದ ಹೆಸರು ಕೆಡದಂತೆ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನು ಕಮಲದ ಮೇಲೆ ಕೂರುವ ವ್ಯಕ್ತಿ ಅಂದರೆ 'ಪ್ರಧಾನ ವ್ಯಕ್ತಿ'ಗೆ ಶುದ್ಧ ಮನಸ್ಸು, ವರ್ಚಸ್ಸು, ತತ್ವ- ಸಿದ್ಧಾಂತ ಬಹಳ ಮುಖ್ಯ. ಅವೆಲ್ಲ ಇರುವವರೆಗೆ ಇದು ಏರುಗತಿಯಲ್ಲೇ ಸಾಗುತ್ತಿರುತ್ತದೆ. ಕಮಲದ ಗುಣಕ್ಕೆ, ಗೌರವಕ್ಕೆ ಧಕ್ಕೆ ತಂದರೆ ಮತ್ತೆ ಕೆಸರಾಗುತ್ತದೆ.

ಅಭಯ ಹಸ್ತದ ಮೇಲೆ ನಿರೀಕ್ಷೆ ಜಾಸ್ತಿ

ಅಭಯ ಹಸ್ತದ ಮೇಲೆ ನಿರೀಕ್ಷೆ ಜಾಸ್ತಿ

ಇನ್ನು ಕಾಂಗ್ರೆಸ್ ಕಾಂಗ್ರೆಸ್ ನ ಲಾಂಛನ ಅಭಯ ಹಸ್ತ. ತುಂಬಾ ಒಳ್ಳೆಯ ಚಿಹ್ನೆ ಇದು. ಪಕ್ಷಪಾತ ಮಾಡದೆ, ದುಷ್ಟ ಜನರ ಪರ ನಿಲ್ಲದವರೆಗೆ ಇದಕ್ಕೆ ಜಯ ಇರುತ್ತದೆ. ಈ ಚಿಹ್ನೆ ಇರುವ ಪಕ್ಷದ ಬಗ್ಗೆ ಜನರಲ್ಲಿ ವಿಪರೀತ ನಿರೀಕ್ಷೆಗಳಿರುತ್ತವೆ. ಇದರ ನಾಯಕತ್ವ ವಹಿಸಿಕೊಳ್ಳುವ ವ್ಯಕ್ತಿಗೆ ಅಧ್ಯಾತ್ಮ ಚಿಂತನೆ, ತ್ಯಾಗ ಮನೋಭಾವ ಹಾಗೂ ನಿಷ್ಪಕ್ಷಪಾತ ಆಲೋಚನೆ ಬಹಳ ಮುಖ್ಯ. ಇಲ್ಲದಿದ್ದರೆ ಈ ಪಕ್ಷ ಬಹಳ ಬೇಗ ವಿಶ್ವಾಸ ಕಳೆದುಕೊಳ್ಳುತ್ತದೆ.

ಮೈತ್ರಿಯಿಂದ ಜೆಡಿಎಸ್ ಗೆ ಲಾಭ

ಮೈತ್ರಿಯಿಂದ ಜೆಡಿಎಸ್ ಗೆ ಲಾಭ

ಈ ಮದ್ಯೆ ಜನತಾ ಪಕ್ಷ ಉದಯವಾಯಿತು. ಅದು ನೇಗಿಲ ಯೋಗಿಯ ಲಾಂಛನ. ಬಲರಾಮ ದೇವರ ಆಯುಧ. ಯಾವಾಗ ಈ ನೇಗಿಲ ಯೋಗಿಗೆ ಅನ್ಯಾಯವಾಯಿತೋ ಆ ಪಕ್ಷವೂ ಒಡೆದು ಹೋಯಿತು. ಇದು ಯುದ್ಧಕ್ಕೆ ಸೂಕ್ತವಾದ ಆಯುಧವಲ್ಲ. ಈಗ ರಾಜ್ಯದಲ್ಲಿರುವ ಜೆಡಿಎಸ್ ನ ಚಿಹ್ನೆ ತೆನೆಹೊತ್ತ ಮಹಿಳೆ. ಈ ಚಿಹ್ನೆ ಲಕ್ಷ್ಮಿ ಸ್ವರೂಪ. ಹೆಣ್ಣಿಗೆ ಗೌರವ, ತೆನೆಯ ತಾಜಾತನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಇದರ ಅವಸಾನ ಆಗುತ್ತದೆ. ಈಗ ಬಿಎಸ್ ಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿದೆ. ಬಿಎಸ್ ಪಿ ಚಿಹ್ನೆ ಆನೆ. ಅದು ತೀರಾ ಫ್ಲೆಕ್ಸಿಬಲ್ ಅಲ್ಲ. ತೆನೆಯನ್ನು ಆನೆ ನುಂಗಿಹಾಕುತ್ತದೆ. ಈ ಮೈತ್ರಿಯಿಂದ ಬಿಎಸ್ ಪಿಗೆ ಲಾಭವೇ ಹೊರತು ಜೆಡಿಎಸ್ ಗಲ್ಲ.

ಕಮ್ಯುನಿಸ್ಟರು ಕಟ್ಟುವುದಕ್ಕಲ್ಲ, ಕೆಡವುವುದಕ್ಕೆ

ಕಮ್ಯುನಿಸ್ಟರು ಕಟ್ಟುವುದಕ್ಕಲ್ಲ, ಕೆಡವುವುದಕ್ಕೆ

ಇನ್ನು ಕಮ್ಯುನಿಸ್ಟರ ಚಿಹ್ನೆ ಕತ್ತಿ ಸುತ್ತಿಗೆ. ಈ ಲಾಂಛನವೇ ಹೇಳುತ್ತದೆ ಇದರ ಧೋರಣೆಯನ್ನು. ಕತ್ತಿ ಹಾಗೂ ಸುತ್ತಿಗೆ ಛಿದ್ರ ಮಾಡಲು ಅಥವಾ ನಾಶ ಮಾಡಲು ಉಪಯೋಗಿಸುವ ಸಾಧನವಷ್ಟೆ. ಆದ್ದರಿಂದ ಇದು ಹೋರಾಟ-ಚಳವಳಿಯಲ್ಲಿ ಕಾಣಿಸಿಕೊಂಡು ನಿರ್ನಾಮಕ್ಕೆ ಸೂಕ್ತವೇ ಹೊರತು ಕಟ್ಟುವುದಕ್ಕೆ ಅಲ್ಲ.

ಪೊರಕೆ ಸ್ಥಾನ ಎಲ್ಲಿ?

ಪೊರಕೆ ಸ್ಥಾನ ಎಲ್ಲಿ?

ಇನ್ನು ಹೊಸ ಪಕ್ಷ ಆಮ್ ಆದ್ಮಿ ಪಕ್ಷ. ಇದು ಹಿಡಿದದ್ದು ಪೊರಕೆ. ಪೊರಕೆಯ ಉಪಯೋಗ ಯಾವುದಕ್ಕೆ ಎಂದು ಎಲ್ಲರಿಗೂ ತಿಳಿದಿದೆ. ಅದರ ಅವಶ್ಯಕತೆ ಮುಗಿದ ಬಳಿಕ ಅದರ ಸ್ಥಾನ ಎಲ್ಲಿ ಎಂಬುದೂ ತಿಳಿದ ವಿಚಾರ. ಮುಂದೆ ಇದು ಹೆಸರಿಲ್ಲದೆ ಹೋಗುತ್ತದೆ ಎಂದು ಈ ಲಾಂಛನವೇ ಹೇಳುತ್ತದೆ.

ಧರ್ಮಗಳ ಹೊಂದಾಣಿಕೆ ಕುಸಿದು ಬಿದ್ದ ದಿನ ನಾಶ

ಧರ್ಮಗಳ ಹೊಂದಾಣಿಕೆ ಕುಸಿದು ಬಿದ್ದ ದಿನ ನಾಶ

ಭಾರತದ ಲಾಂಛನ ನಾಲ್ಕು ದಿಕ್ಕುಗಳನ್ನು ನೋಡುವ ಸಿಂಹ. ಅದರ ಮೇಲೆ ಮೂರು ಧರ್ಮಗಳ ತ್ರಿವರ್ಣ ಧ್ವಜ. ಯಾವಾಗ ಈ ಮೂರೂ ಧರ್ಮಗಳ ಹೊಂದಾಣಿಕೆ ಮುರಿದುಬೀಳುತ್ತದೋ ಆಗ ಅದನ್ನು ಹೊತ್ತ ಸಿಂಹ (ಕೇಸರಿ) ಎಲ್ಲವನ್ನೂ ನುಂಗಿಬಿಡುತ್ತದೆ. ಇನ್ನು ಪಾಕಿಸ್ತಾನದ ಚಿಹ್ನೆ ಕಾಲು ಭಾಗದ ಕ್ಷೀಣ ಚಂದ್ರ. ಮನೋಕಾರಕ ಚಂದ್ರನು ಅವರ ಲಾಂಛನಕ್ಕೆ ಕೊಟ್ಟದ್ದು ಮೊಣಕಾಲಿನವರೆಗಿನ ಬುದ್ಧಿ. ಇದು ಶಾಶ್ವತವಾಗಿರುವ ದೇಶವಾಗಲಾರದು.

ಡಿಎಂಕೆ- ಎಐಎಡಿಎಂಕೆ ಭವಿಷ್ಯ ಏನು?

ಡಿಎಂಕೆ- ಎಐಎಡಿಎಂಕೆ ಭವಿಷ್ಯ ಏನು?

ತಮಿಳುನಾಡಿನ ಡಿಎಂಕೆ ಚಿಹ್ನೆ ಉದಯಿಸುವ ಸೂರ್ಯ. ಇಂಥ ಚಿಹ್ನೆಗೆ ತುಂಬ ಪ್ರಬಲವಾದ ನಾಯಕ ಮುಖ್ಯ. ಅದೇ ರೀತಿ ಪ್ರಚ್ಛನ್ನವಾದ ಆಲೋಚನೆ ಮುಖ್ಯ. ಆ ಎರಡೂ ಕಾಣಿಸಿಕೊಂಡರೆ ಮಾತ್ರ ಆ ಪಕ್ಷದ ಭವಿಷ್ಯ ಚೆನ್ನಾಗಿ ಆಗುತ್ತದೆ. ಎಐಎಡಿಎಂಕೆ ಚಿಹ್ನೆ ಎರಡೆಲೆ. ಅಂದರೆ ಅದಕ್ಕೆ ಬೇರು ಇಲ್ಲ. ಗಟ್ಟಿಯಾದ ಬೇರಿಲ್ಲದ ಪಕ್ಷದ ಉಳಿವು ಅಸಾಧ್ಯ ಎಂಬುದನ್ನು ಸೂಚಿಸುತ್ತದೆ.

English summary
Political party ups and downs prediction on the basis of symbol by well known astrologer Prakash Ammannaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X