• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನ್ನೆರಡು ರಾಶಿಗಳ ಮೇಲೆ ಖಂಡಗ್ರಾಸ ಚಂದ್ರ ಗ್ರಹಣದ ಪ್ರಭಾವ

By ಪಂಡಿತ್ ಶಂಕರ್ ಭಟ್
|

ಈ ವರ್ಷದ ಜುಲೈನಲ್ಲಿ ಖಂಡಗ್ರಾಸ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆ. 17.7.2019ರ ಮಧ್ಯರಾತ್ರಿ ಈ ಗ್ರಹಣ ಸಂಭವಿಸಲಿದ್ದು, ಇದರ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ದ್ವಾದಶ ರಾಶಿಯವರಿಗೆ ಕುತೂಹಲ ಇರುತ್ತದೆ. ಈ ಬಾರಿಯ ಚಂದ್ರ ಗ್ರಹಣವು ಹಲವು ಬಗೆಯಲ್ಲಿ ಪ್ರಾಮುಖ್ಯ ಪಡೆದಿದೆ ಎಂಬುದು ಉಲ್ಲೇಖಾರ್ಹ.

ಧನುಸ್ಸು ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಗ್ರಹಣ ಸ್ಪರ್ಶವಾಗುತ್ತದೆ. ಮಕರ ರಾಶಿಯ ಉತ್ತರಾಷಾಢ ನಕ್ಷತ್ರದ ಎರಡನೆಯ ಪಾದದಲ್ಲಿ ಮೋಕ್ಷವಾಗುತ್ತದೆ. ಇದೇ ಮೊದಲನೆಯ ವಿಸ್ಮಯ. ಉತ್ತರಾಷಾಢವು ರವಿಯ ನಕ್ಷತ್ರವಾಗುತ್ತದೆ. ಇನ್ನು ರವಿ ಗ್ರಹವು ಮಿಥುನ ರಾಶಿಯ ಗುರು ನಕ್ಷತ್ರ ಪುನರ್ವಸು ಒಂದನೆಯ ಪಾದದಿಂದ ಕರ್ಕಾಟಕ ರಾಶಿಯ ಪುನರ್ವಸು ನಕ್ಷತ್ರದ ಎರಡನೆಯ ಪಾದಕ್ಕೆ ಚಲಿಸುವ ಸಂಧಿಕಾಲ ಇದು.

ಜುಲೈನಲ್ಲಿ ಚಂದ್ರ ಗ್ರಹಣ; ಯಾವ ರಾಶಿಗೆ ಅರಿಷ್ಟ, ಏನು ಪರಿಣಾಮ?

ಒಂದು ಕಡೆ ಚಂದ್ರನು ರವಿ ನಕ್ಷತ್ರದಲ್ಲಿ, ಮತ್ತೊಂದು ಕಡೆ ರವಿಯು ಗುರು ನಕ್ಷತ್ರದ ರಾಶಿ ಸಂಧಿಯಲ್ಲಿ ಇರುವ ಕಾಲದ ಗ್ರಹಣವು ಈ ಬಾರಿಯದು ಆದ್ದರಿಂದ ಇದು ಬಹಳ ಮಹತ್ವ ಪಡೆಯುತ್ತದೆ. ಈ ಬಾರಿಯ ಗ್ರಹಣದ ಸಮಯದಲ್ಲಿ ಧನು, ಮಕರ, ಕುಂಭ, ವೃಷಭ, ಮಿಥುನ, ಕರ್ಕ, ಸಿಂಹ ರಾಶಿಯಲ್ಲಿ ಜನಿಸಿದವರು ವಿಭಿನ್ನ ಫಲಗಳನ್ನು ಪಡೆಯಲಿದ್ದಾರೆ. ಅವು ಏನೆಂದು ತಿಳಿಯಲು ಮುಂದೆ ಓದಿ.

ಮೇಷ: ಹೊಸ ಉದ್ಯೋಗಾವಕಾಶ ಹುಡುಕಿಕೊಂಡು ಬರಲಿದೆ

ಮೇಷ: ಹೊಸ ಉದ್ಯೋಗಾವಕಾಶ ಹುಡುಕಿಕೊಂಡು ಬರಲಿದೆ

ರಾಶಿ ಚಕ್ರದಲ್ಲಿ ಮೊದಲಿಗರಾದ ಮೇಷ ರಾಶಿಯವರಿಗೆ ಜುಲೈ ತಿಂಗಳಲ್ಲಿ ನಡೆಯುವ ಖಂಡಗ್ರಾಸ ಚಂದ್ರ ಗ್ರಹಣವು ವಿಶೇಷ ಫಲವನ್ನು ನೀಡುತ್ತದೆ. ನಿಮ್ಮಲ್ಲಿ ಹೊಸ ಉತ್ಸಾಹವೊಂದನ್ನು ತುಂಬುತ್ತದೆ. ಅದರಲ್ಲೂ ಉದ್ಯೋಗ ವಿಚಾರದಲ್ಲಿ ಮಹತ್ತರವಾದ ಬದಲಾವಣೆಯೊಂದನ್ನು ನೀವು ನಿರೀಕ್ಷೆ ಮಾಡಬಹುದು. ಹೊಸದಾದ ಉದ್ಯೋಗಾವಕಾಶವೊಂದು ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಯಾವುದೇ ಅನುಮಾನ ಪಡದಂತೆ ಆ ಕೆಲಸವನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ಏಕೆಂದರೆ, ಮುಂದೆ ಹೇಗೋ- ಏನೋ ಎಂಬ ಸಂದೇಹವೊಂದು ನಿಮ್ಮನ್ನು ಕಾಡಬಹುದು.

ವೃಷಭ: ಆರ್ಥಿಕ ಸ್ಥಿತಿಯಲ್ಲಿ ಮುಂದಕ್ಕೆ ಹೆಜ್ಜೆ ಇಡುತ್ತೀರಿ

ವೃಷಭ: ಆರ್ಥಿಕ ಸ್ಥಿತಿಯಲ್ಲಿ ಮುಂದಕ್ಕೆ ಹೆಜ್ಜೆ ಇಡುತ್ತೀರಿ

ಇಷ್ಟು ಸಮಯ ನೀವು ನಿರೀಕ್ಷೆ ಮಾಡುತ್ತಿದ್ದ ಸಂಗತಿಗಳು ಸರತಿ ಪ್ರಕಾರ ಕೂಡಿಬರಲು ಆರಂಭಿಸಿವೆ ಎಂದು ಅನ್ನಿಸುವುದಕ್ಕೆ ಶುರು ಆಗುತ್ತದೆ. ಇದರ ಜತೆಜತೆಗೆ ಆರ್ಥಿಕ ಸ್ಥಿತಿಯಲ್ಲಿ ಮುಂದಕ್ಕೆ ಹೆಜ್ಜೆ ಇಡುತ್ತಾ ಸಾಗಲು ಅವಕಾಶಗಳು ರೂಪುಗೊಳ್ಳುತ್ತವೆ. ಇಷ್ಟು ಕಾಲ ಬಾಕಿ ಉಳಿದಿದ್ದ ಯೋಜನೆಗಳು ಪೂರ್ಣಗೊಳ್ಳುವ ಸೂಚನೆಗಳು ದೊರೆಯುತ್ತವೆ. ನಿಮ್ಮ ಮನಸ್ಸು ಅಧ್ಯಾತ್ಮ, ಧಾರ್ಮಿಕ ವಿಚಾರಗಳತ್ತ ಹೊರಳುತ್ತವೆ. ಬಹಳ ಸಮಯದಿಂದ ಕಾಡುತ್ತಿದ್ದ ಧಾರ್ಮಿಕ ಜಿಜ್ಞಾಸೆಗಳಿಗೆ ಉತ್ತರ ದೊರೆಯುವ ಕಾಲವಿದು. ಅನುಭಾವಿಗಳ ಸಾಂಗತ್ಯ ದೊರೆತು, ಸುಸ್ಪಷ್ಟವಾದ ಬದಲಾವಣೆ ನಿಮ್ಮಲ್ಲಿ ಕಾಣಿಸುತ್ತದೆ.

ಸಿಸೇರಿಯನ್ ಹೆರಿಗೆ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

ಮಿಥುನ: ಉದ್ಯೋಗ ಸ್ಥಳದಲ್ಲಿ ಸವಾಲುಗಳನ್ನು ಎದುರಿಸಲಿದ್ದೀರಿ

ಮಿಥುನ: ಉದ್ಯೋಗ ಸ್ಥಳದಲ್ಲಿ ಸವಾಲುಗಳನ್ನು ಎದುರಿಸಲಿದ್ದೀರಿ

ಸಂಸಿದ್ಧಗೊಂಡ, ಸಮರ ಸನ್ನದ್ಧ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಏಕೆಂದರೆ, ಈ ಬಾರಿಯ ಚಂದ್ರ ಗ್ರಹಣ ಭಾರೀ ಸವಾಲುಗಳನ್ನು ತಂದೊಡ್ಡಲಿದೆ. ಮುಖ್ಯವಾಗಿ ಉದ್ಯೋಗ ಸ್ಥಳದಲ್ಲಿ ಬಹಳ ಸವಾಲುಗಳು ನಿಮ್ಮೆದುರಿಗೆ ಕಾಣಿಸಿಕೊಳ್ಳಲಿವೆ. ನೀವು ಇಷ್ಟು ಸಮಯ ಪಟ್ಟ ಶ್ರಮದ ಶ್ರೇಯವನ್ನೆಲ್ಲ ಯಾರೋ ಬಂದು ಕಸಿದುಕೊಂಡು ಹೋಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಆದ್ದರಿಂದ ಸಂಬಂಧಪಟ್ಟ ವಿಚಾರದಲ್ಲಿ ಜಾಗರೂಕತೆ ತೆಗೆದುಕೊಳ್ಳಿ. ನಿಮ್ಮ ಅಂತರಂಗದ ಸಂಗತಿಯನ್ನು ಹೊಸಬರ ಜತೆಗೆ ಹಂಚಿಕೊಳ್ಳುವಾಗ ಜೋಪಾನವಾಗಿ ಇರಬೇಕು.

ಕರ್ಕಾಟಕ: ಸಂಗಾತಿ ಜತೆ ಮುಚ್ಚು ಮರೆ ಮಾಡದೆ ವ್ಯವಹರಿಸಿ

ಕರ್ಕಾಟಕ: ಸಂಗಾತಿ ಜತೆ ಮುಚ್ಚು ಮರೆ ಮಾಡದೆ ವ್ಯವಹರಿಸಿ

ಸಂಬಂಧಗಳ ವಿಚಾರದಲ್ಲಿ ಬಹಳ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ನೀವು ಕೂಡ ನಾಲಗೆ ಹರಿಬಿಟ್ಟರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಬಹುದು. ಎಷ್ಟೇ ಪ್ರಯತ್ನ ಪಟ್ಟರೂ ಕೆಟ್ಟ ಪರಿಸ್ಥಿತಿ, ಸನ್ನಿವೇಶಗಳನ್ನು ಎದುರಿಸುವುದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಸಂಗಾತಿಯ ಜತೆಗೆ ಯಾವುದೇ ಮುಚ್ಚು ಮರೆ ಮಾಡದೆ ವ್ಯವಹರಿಸಿ. ಈ ಹಿಂದೆ ಅಂಥದ್ದೇನಾದರೂ ನಿಮ್ಮಿಂದ ಆಗಿದ್ದರೆ ಈ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ಆ ವಿಷಯ ಗೊತ್ತಾಗಿ, ರಂಪ- ರಾದ್ಧಾಂತ ಆಗಬಹುದು. ಅದನ್ನು ಮತ್ತಷ್ಟು ಹಿಗ್ಗಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದೇ.

ಎಚ್ಡಿ ಕುಮಾರಸ್ವಾಮಿ ಸರ್ಕಾರ ಬಗ್ಗೆ ಟಾರೋ ಕಾರ್ಡ್ ಭವಿಷ್ಯವೇನು?

ಸಿಂಹ: ಶುಭ ಸುದ್ದಿಯನ್ನು ಕೇಳಲಿದ್ದೀರಿ

ಸಿಂಹ: ಶುಭ ಸುದ್ದಿಯನ್ನು ಕೇಳಲಿದ್ದೀರಿ

ನಿಮ್ಮ ರಾಶಿಯವರಿಗೆ ಈ ಚಂದ್ರ ಗ್ರಹಣವು ಶುಭ ಸುದ್ದಿಯನ್ನು ಹೊತ್ತು ತರಲಿದೆ. ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪವಾದರೂ ಸಕಾರಾತ್ಮಕವಾದ ಬದಲಾವಣೆ ಆಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಲಿದ್ದೀರಿ. ಅದಕ್ಕಾಗಿಯೇ ವ್ಯಾಯಾಮ, ಆಹಾರ ಪಥ್ಯ ಇತ್ಯಾದಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವ ಎಲ್ಲ ಸಾಧ್ಯತೆ ಇದೆ. ಇಷ್ಟು ಸಮಯ ನಿಮ್ಮ ಬದುಕು ಹೇಗಿರಬೇಕು ಎಂದು ನೀವು ಬಯಸಿದ್ದಿರೋ ಅದೇ ರೀತಿಯಲ್ಲಿ ರೂಪಿಸಿಕೊಳ್ಳುವುದಕ್ಕೆ ಅತ್ಯುತ್ತಮವಾದ ಅವಕಾಶವೊಂದು ದೊರೆಯಲಿದೆ. ಇನ್ನೇಕೆ ತಡ, ಗುರಿ ನಿಗದಿ ಮಾಡಿಕೊಳ್ಳಿ. ಮುಂದಕ್ಕೆ ಹೆಜ್ಜೆಯಿಡಿ.

ಕನ್ಯಾ: ಸಮಸ್ಯೆಗಳು ಒಂದರ ಹಿಂದೊಂದು ಬರಲಿವೆ

ಕನ್ಯಾ: ಸಮಸ್ಯೆಗಳು ಒಂದರ ಹಿಂದೊಂದು ಬರಲಿವೆ

ಸಮಸ್ಯೆಗಳು ನಿಮ್ಮ ಪಾಲಿಗೆ ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಎಂಬಂತೆ ಅಪ್ಪಳಿಸಿ ಬರಲಿವೆ. ನಿಮ್ಮ ಮಾಜಿ ಗೆಳೆಯ ಅಥವಾ ಗೆಳತಿ ದಿಢೀರನೆ ನಿಮ್ಮ ಬದುಕಿಗೆ ಮತ್ತೆ ಪ್ರವೇಶಿಸಿ ಬಿಡಬಹುದು. ಬಹಳ ಎಚ್ಚರಿಕೆಯಿಂದ ಮುಂದಿನ ಹೆಜ್ಜೆಗಳನ್ನು ಇಡಿ. ಇಲ್ಲದಿದ್ದಲ್ಲಿ ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಒಂದು ಮಾತನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಿ: ಈ ವರ್ಷ ಎಲ್ಲವೂ ಒಂದು ಕಡೆಯಿಂದ ಸರಿಹೋಗುತ್ತಾ ಬರುತ್ತಿದೆ. ಇಂಥ ಸನ್ನಿವೇಶದಲ್ಲಿ ಸಲ್ಲದ ವಿಚಾರಗಳತ್ತ ಮನಸ್ಸು ಹೊರಳಿ, ಸಮಸ್ಯೆಗಳನ್ನು ತಂದುಕೊಳ್ಳಬೇಡಿ.

ತುಲಾ: ಸವಾಲನ್ನು ನೀವಾಗಿಯೇ ಮೈ ಮೇಲೆ ಎಳೆದುಕೊಳ್ಳಬೇಡಿ

ತುಲಾ: ಸವಾಲನ್ನು ನೀವಾಗಿಯೇ ಮೈ ಮೇಲೆ ಎಳೆದುಕೊಳ್ಳಬೇಡಿ

ಮನಸು, ದೇಹ ದಣಿದಿದ್ದರೆ, ಇನ್ನು ಇಲ್ಲಿಗೆ ಸಾಕು, ಸ್ವಲ್ಪ ಸಮಾಧಾನದಿಂದ ಮುಂದುವರಿಯುವುದು ಉತ್ತಮ ಎಂದು ಅನಿಸಿದರೆ ತಕ್ಷಣವೇ ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಇಷ್ಟು ಸಮಯದ ನಿಮ್ಮ ಗೌರವ, ಪ್ರತಿಷ್ಠೆ, ಹೆಸರು, ಕೀರ್ತಿ, ಮನ್ನಣೆ ಎಲ್ಲವನ್ನೂ ಒಂದೆಡೆಗೆ ಕೂಡಿ ಹಾಕಿಕೊಂಡು, ನೆಮ್ಮದಿಯಿಂದ ಬದುಕುತ್ತಿರುವ ನಿಮಗೆ, ಈಗ ಪರೀಕ್ಷೆಯ ಸಮಯ. ಹಠವನ್ನು ಬಿಟ್ಟು, ನಿಮ್ಮ ಮಿತಿ ಹಾಗೂ ಅಗತ್ಯವನ್ನು ಅರಿತು ಮುಂದಕ್ಕೆ ಸಾಗಿ. ಅತಿ ದೊಡ್ಡ ಪ್ರಾಜೆಕ್ಟ್, ಸವಾಲನ್ನು ನೀವಾಗಿಯೇ ಮೈ ಮೇಲೆ ಎಳೆದುಕೊಳ್ಳಬೇಡಿ. ಒಂದು ವೇಳೆ ತಾನಾಗಿಯೇ ಬಂದರೆ ನಾಜೂಕಾಗಿ ಸಂಭಾಳಿಸುವುದನ್ನು ಕಲಿಯಿರಿ.

ವೃಶ್ಚಿಕ: ಹೊಸ ವಿಚಾರ ಕಲಿಯಲು ಪ್ರಾಮುಖ್ಯ ನೀಡಿ

ವೃಶ್ಚಿಕ: ಹೊಸ ವಿಚಾರ ಕಲಿಯಲು ಪ್ರಾಮುಖ್ಯ ನೀಡಿ

ಹೊಸ ವಿಚಾರಗಳನ್ನು ಕಲಿಯುವುದಕ್ಕೆ ಇದು ಸರಿಯಾದ ಸಮಯ. ಅದರಲ್ಲೂ ಶೈಕ್ಷಣಿಕವಾದ ಸಂಗತಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ. ನಿಮ್ಮ ಮೇಲೆ ಮತ್ತೊಬ್ಬರು ಹಿಡಿತ ಸಾಧಿಸುವುದಕ್ಕೆ ಅವಕಾಶ ನೀಡಬೇಡಿ. ನಿಮಗೆ ಗೊತ್ತಿರುವಂತೆ ಯಾವುದು ಉತ್ತಮ ಎಂಬುದನ್ನು ಮನಸಿನಲ್ಲಿ ಗಟ್ಟಿ ಮಾಡಿಕೊಳ್ಳಿ. ಅದೇ ಹಾದಿಯಲ್ಲಿ ಮುಂದಕ್ಕೆ ಸಾಗಿ. ಉನ್ನತ ವ್ಯಾಸಂಗ, ವಿದೇಶದಲ್ಲಿ ವ್ಯಾಸಂಗ, ಹೊಸ ವಾದ್ಯ, ಕ್ರೀಡೆಗೆ ಸಂಬಂಧಿಸಿದ ವಿಚಾರಗಳನ್ನು ಆರಂಭಿಸುವುದಕ್ಕೆ ಅಥವಾ ಪುನರಾರಂಭ ಮಾಡುವುದಕ್ಕೆ ಇದು ಸರಿಯಾದ ಸಮಯ. ಸದ್ಬಳಕೆ ಮಾಡಿಕೊಳ್ಳುವುದು ನಿಮ್ಮ ಕೈಲಿದೆ.

ಧನುಸ್ಸು: ಎಂಥ ಸಣ್ಣ ಕೆಲಸವಾದರೂ ಗಮನವಿಟ್ಟು ಮಾಡಿ

ಧನುಸ್ಸು: ಎಂಥ ಸಣ್ಣ ಕೆಲಸವಾದರೂ ಗಮನವಿಟ್ಟು ಮಾಡಿ

ಈ ಬಾರಿಯ ಖಂಡಗ್ರಾಸ ಚಂದ್ರ ಗ್ರಹಣವು ಹಲವು ಅವಕಾಶಗಳನ್ನು ನಿಮ್ಮ ಪಾಲಿಗೆ ಹೊತ್ತು ತರಲಿದೆ. ನಿಮ್ಮ ಮನಸು ಹೇಳಿದಂತೆ ನಡೆದುಕೊಳ್ಳಲು ಇದು ಸರಿಯಾದ ಸಮಯ. ಆದ್ದರಿಂದ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮುಂದಕ್ಕೆ ಸಾಗುವುದರ ಬಗ್ಗೆ ಆಲೋಚನೆ ಮಾಡಿ. ನೀವು ಯಾವುದೇ ಕೆಲಸ ಮಾಡಿದರೂ ಅದೆಷ್ಟೇ ಸಣ್ಣ ಪ್ರಮಾಣದ್ದೇ ಆಗಿದ್ದರೂ ಗಮನವಿಟ್ಟು ಕೆಲಸ ಮಾಡುವುದು ಬಹಳ ಮುಖ್ಯ. ಒಂದು ವೇಳೆ ಸ್ವಲ್ಪ ಆಸಕ್ತಿ ತಪ್ಪಿಹೋದರೂ ಅದ್ಭುತವಾದ ಅವಕಾಶ ಕೈ ತಪ್ಪಿ ಹೋಗಲಿದೆ. ಆದ್ದರಿಂದ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಮಕರ: ಮಿಂಚುವ ಸಮಯ ಬಂದಿದೆ

ಮಕರ: ಮಿಂಚುವ ಸಮಯ ಬಂದಿದೆ

ಎಂದೋ ಮಾಡಿದ ತಪ್ಪಿನ ಫಲಿತಾಂಶವನ್ನು ಇಂದಿಗೂ ಅನುಭವಿಸುತ್ತಿದ್ದೀರಾ? ಅದೆಷ್ಟೇ ಶ್ರಮಪಟ್ಟು ಕೆಲಸ ಮಾಡಿದರೂ ಹಳೇ ಅಳತೆಗೋಲಿನಲ್ಲಿ ಅಳೆಯುತ್ತಿದ್ದಾರೆ ಎಂಬ ಬೇಸರ ನಿಮ್ಮಲ್ಲಿದೆಯಾ? ಈಗ ಮಕರ ರಾಶಿಯವರು ಮಿಂಚುವ ಸಮಯ ಬಂದಿದೆ. ನಿಮ್ಮ ಬಗ್ಗೆ ಇರುವ ಎಲ್ಲ ನಕಾರಾತ್ಮಕ ಭಾವನೆಗಳನ್ನು ತೊಲಗಿಸಿ, ಮೈ ಕೊಡವಿ ಎದ್ದು ನಿಲ್ಲುವ ಸಮಯ ಇದು. ಆದರೆ ಅದಕ್ಕಾಗಿ ನೀವು ಪ್ರಾಮಾಣಿಕವಾದ ಪ್ರಯತ್ನ ಮಾಡುವುದು ಅತಿ ಮುಖ್ಯ. ನಿಮ್ಮ ಬಗ್ಗೆ ಆಡಿಕೊಂಡವರು, ಹೀಯಾಳಿಸಿದವರು ಸಹ ಸಹಾಯ ಕೇಳಿಕೊಂಡು ಬರುವ ಸಮಯ ಇದು.

ಕುಂಭ: ನಯವಂಚಕರಿಂದ ಎಚ್ಚರಿಕೆಯಿಂದ ಇರಬೇಕು

ಕುಂಭ: ನಯವಂಚಕರಿಂದ ಎಚ್ಚರಿಕೆಯಿಂದ ಇರಬೇಕು

ನಿಮಗೆ ಈ ವರೆಗೆ ಆದ ಅನುಕೂಲಗಳನ್ನು ನೆನೆದು, ಕೆಲ ಕಾಲ ಏನನ್ನೂ ಮಾಡದೆ ಸುಮ್ಮನೆ ಇದ್ದು ಬಿಡುವುದು ಉತ್ತಮ. ನಿಮ್ಮ ಸಾಧನೆಯನ್ನು ಮೆಲುಕು ಹಾಕುತ್ತಾ, ಅದರ ಆಸ್ವಾದ ಮಾಡುತ್ತಾ, ಮುಖ್ಯ ಕೆಲಸಗಳನ್ನು ಕೈಗೆತ್ತಿಕೊಳ್ಳದೆ ಸುಮ್ಮನಿದ್ದರೆ ಅಷ್ಟರ ಮಟ್ಟಿಗೆ ಈ ಅವಧಿಯಲ್ಲಿ ಹೆಚ್ಚಿನ ಧನ ಹಾನಿ ಸಂಭವಿಸುವುದಿಲ್ಲ. ನಿಮಗೆ ಈಗ ವಿಶ್ರಾಂತಿಯ ಅಗತ್ಯ ತುರ್ತಾಗಿದೆ. ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರ, ಸಾಲಕ್ಕೆ ಪ್ರಯತ್ನ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಇತ್ಯಾದಿಗಳನ್ನು ಮಾಡದಿರುವುದು ಉತ್ತಮ. ನಯವಂಚಕರ ಬಗ್ಗೆ ಬಹಳ ಎಚ್ಚರದಿಂದ ಇರಬೇಕು.

ಮೀನ: ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರು ಎಚ್ಚರ

ಮೀನ: ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರು ಎಚ್ಚರ

ಅತಿಯಾದರೆ ಎಲ್ಲವೂ ವಿಷ ಎನಿಸುತ್ತದೆ ಎಂಬುದನ್ನು ಚೆನ್ನಾಗಿ ನೆನಪಿನಲ್ಲಿ ಇಡಿ. ಉದ್ಯೋಗ ಹಾಗೂ ವ್ಯಾಪಾರಸ್ಥರಿಗೆ ಮಿಶ್ರ ಫಲವನ್ನು ಕಾಣುವ ಸನ್ನಿವೇಶ ಇದು. ಮಾದಕ ವಸ್ತುಗಳ ಕಡೆಗೆ ನಿಮಗೆ ಸೆಳೆತ ತೀವ್ರ ಆಗಬಹುದು. ಅಂಥ ದುರ್ಜನರ ಸಹವಾಸ ಕೂಡ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆತ್ಮ ಸ್ಥೈರ್ಯವನ್ನೇ ಹಾಳು ಮಾಡುವಂಥ ಯಾವುದೇ ಕೆಲಸವನ್ನು ಮಾಡಬೇಡಿ. ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರು ಯಾವುದೇ ಅವಕಾಶವನ್ನು ಒಂದಕ್ಕೆ ನಾಲ್ಕು ಬಾರಿ ಯೋಚನೆ ಮಾಡಿದ ನಂತರವೇ ಒಪ್ಪಿಕೊಳ್ಳಿ. ಇಲ್ಲದಿದ್ದರೆ ಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ.

English summary
July 17th, 2019 partial lunar eclipse. Here is the impact of lunar eclipse on zodiac signs prediction by well known astrologer Pandit Shankar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X