ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುಬಲವಿಲ್ಲದ ಸಿಂಹ ಮತ್ತು ಕನ್ಯಾರಾಶಿಗೆ ಪರಿಹಾರವೇನು?

By ನಾಗನೂರಮಠ ಎಸ್ಎಸ್
|
Google Oneindia Kannada News

ಈ ಹಿಂದೆ ಪ್ರಾಮೀಸ್ ಮಾಡಿಬಿಟ್ಟಿದ್ವೀ... ಆದರೆ ಅದನ್ನು ಈಡೇರಿಸೊಕೇನೇ ಆಗ್ತಿಲ್ಲಾ... ಎಂದು ಗೊಣಗುತ್ತಿರುವ ತುಲಾ ರಾಶಿಯವರಿಗೀಗ ಗುರುಬಲ. ಏಕೆಂದರೆ, "ಈ ಹಿಂದೆ ಮಾಡಿದ ಪ್ರಾಮೀಸ್ನಾ ಮೊದಲು ನಿಜಾ ಮಾಡು, ಆಮೇಲೆ ಮುಂದಿನ ವಿಷಯ" ಎಂದೆನಿಸಿಕೊಂಡಿದ್ದಾರೆ ತುಲಾ ರಾಶಿಯವರೀಗಾಗಲೇ. ಈಗ ತುಲಾ ರಾಶಿಯವರಿಗೆ ಖುಷಿಯ ವಿಚಾರವೇ ಸರಿ ಎಂದೆನ್ನಬೇಕಾಗುತ್ತದೆ.

ಅಕಸ್ಮಾತ್ ದೇವರು ಮತ್ತು ಸಹಾಯ ಮಾಡಿದವರು ಮನೆ ಬಾಗಿಲಿಗೆ ಬಂದರೆ, ಸಹಾಯ ಮಾಡಿದವರನ್ನೇ ಮೊದಲು ಒಳಗೆ ಕರೆದುಕೊಳ್ಳುವಂತಹ ಮಹಾನ್ ಸದ್ಗುಣ ಹೊಂದಿರುವವರು ತುಲಾ ರಾಶಿಯವರು. ಹೀಗಾಗಿ ಗುರುಬಲದಿಂದ ಜೀವನದಲ್ಲಿ ಭದ್ರವಾಗಿ ಅಡಿಪಾಯ ಹಾಕಿಕೊಳ್ಳಲಿದ್ದಾರೆ.

ಆದರೆ, ಸಿಂಹ ರಾಶಿಯವರು ಮಾತ್ರ ಪರಿತಪಿಸಬೇಕಾಗುತ್ತದೆ. "ಅತ್ತ ದರಿ ಇತ್ತ ಪುಲಿ" ಎಂಬಂತಾಗುತ್ತದೆ ಇವರ ಸ್ಥಿತಿ. ಏಕೆಂದರೆ ಅರ್ಧಾಷ್ಟಮ ಶನಿಕಾಟ ಒಂದೆಡೆಯಾದರೆ ಇದ್ದಬದ್ದ ಗುರುಬಲವೂ ಹೋಗುವುದರಿಂದ ಪರಿಸ್ಥಿತಿ ಅಯೋಮಯವೆನಿಸಲಾರಂಭಿಸುತ್ತದೆ. [ಅಂತೂ ಇಂತೂ ಗುರುಬಲ ಬಂತು : ಯಾರಿಗುಂಟು, ಯಾರಿಗಿಲ್ಲ]

No Gurubala for Leo and Virgo zodiac signs

ಇನ್ನು ಕನ್ಯಾ ರಾಶಿಯವರು, ಗುರುಬಲದ ಫಲವನ್ನು ಸಾಡೇಸಾತಿಯ ನೋವಿನೊಂದಿಗೂ ಅನುಭವಿಸಿದ್ದಾರೆ. ಆದರೆ ಗುರುಬಲದ ಕೊರತೆಯ ಅನುಭವವಾಗಲಿದೆ ಇನ್ಮುಂದೆ. ಗುರುಫಲವೇ ಆ ರೀತಿಯದ್ದು.

ವೃಶ್ಚಿಕ ರಾಶಿಯವರಿಗೆ ಸಾಡೇಸಾತಿಯಿದ್ದರೂ ಗುರುಬಲವಿತ್ತು ಇಷ್ಟು ದಿನ. ಅದೂ ಕೂಡ ಉಚ್ಚ ಗುರುವೆಂದರೆ ಹೇಳಂಗಿಲ್ಲ. ಆದರೆ ಈಗ ಗುರುಬಲದ ಕೊರತೆ ಶುರುವಾಗುತ್ತದೆ. ಸಾಡೇಸಾತಿಯ ಎರಡನೇ ಹಂತ ಉಗ್ರವಾಗುತ್ತ ಹೋಗುತ್ತದೆ. ಸ್ವಲ್ಪ ಜಾಗೃತೆ ಅವಶ್ಯ.

ಸಿಂಹ : ಗುರುವು ಇಷ್ಟು ದಿನ ದ್ವಾದಶ ಎಂದರೆ, ಹನ್ನೆರಡನೇ ಸ್ಥಾನದಲ್ಲಿ ಕರ್ಕ ರಾಶಿಯಲ್ಲಿ ಉಚ್ಚನಾಗಿದ್ದುಕೊಂಡು ತೊಂದರೆಗಳನ್ನೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ನೀಡಿದ್ದಾನೆ. ಇನ್ಮುಂದೆ ಆ ತರಹದ ತೊಂದರೆಗಳು ಎರಡನೇ ಭಾಗದಂತೆ ಮುಂದುವರಿಯುತ್ತವೆ. ಜನ್ಮಸ್ಥ ಗುರು ಗೋಚಾರ ಅಷ್ಟೇನೂ ಒಳ್ಳೇಯದಲ್ಲ ಎಂಬುದು ನಿರೂಪಿತವಾಗಿದೆ. ಬೇಕಿದ್ದರೆ ಕರ್ಕ ರಾಶಿಯವರನ್ನೊಮ್ಮೆ ಮಾತನಾಡಿಸಬಹುದು ಬೇಕಾದವರು.

ಹೆಸರು ಕೆಡಿಸುವವರು ಹುಟ್ಟಿಕೊಂಡರೆ ಕೆಲವರಿಗೆ ಸ್ವತಃ ತಮ್ಮ ಹೆಸರನ್ನೇ ತಾವೇ ಕೆಡಿಸಿಕೊಳ್ಳುವಂತಹ ದುಃಸ್ಥಿತಿಯು ಬರುತ್ತದೆ. ಹೆಸರೊಂದಿಗೆ ಮಾನ, ಮರ್ಯಾದೆ ಮೂರು ಪಾಲಾಗುತ್ತದೆ ಎಂಬುದರ ಎಚ್ಚರಿಕೆ ಇರಬೇಕು. ದುಡ್ಡಿನ ಸ್ಥಿತಿಯೂ ಸ್ವಲ್ಪ ಮಂದವಾಗಲಾರಂಭಿಸುತ್ತದೆ. ಕರಗುತ್ತಿರುವ ಕಾಸನ್ನು ಕೂಡಿಡಲಾಗದೇ ಕೊರಗಬೇಕಾಗುತ್ತದೆ. ದುಡ್ಡು ಹೆಂಗೆ ಖರ್ಚಾಗುತ್ತಿದೆ ಎಂಬುದು ಅರಿವಾಗದೇ ಗೊಂದಲವೆನಿಸಲಾರಂಭಿಸುತ್ತದೆ.

ಮೈ, ಕೈ ಪೆಟ್ಟು ತಿನ್ನುವ ದುರ್ಯೋಗವೂ ಇದರಲ್ಲೊಂದು. ಮನೆಯವರೊಂದಿಗೆ ಜಗಳಗಳ ಮೇಲೆ ಜಗಳಗಳಿಂದ ಮೈಯೆಲ್ಲಾ ಪರಚಿಕೊಳ್ಳಬೇಕಿನಿಸಿದರೂ ಸಮಾಧಾನದಿಂದಿರಲು ಕಲಿತುಕೊಳ್ಳಬೇಕು. ಇಲ್ಲವಾದರೆ ಸಂಬಂಧಿಕರೆಲ್ಲವೂ ವಿರೋಧಿಗಳಾಗಲಾರಂಭಿಸುತ್ತಾರೆ.

ಇನ್ನು ಕೆಲಸದಲ್ಲಿದ್ದವರಿಗೆ ತೊಳಲಾಟ ಹೆಚ್ಚಳಗೊಳ್ಳುತ್ತದೆ. ಬೇರೆಡೆ ಹೋಗೆಂದರೆ ಮೌನವಾಗಿ ಹೋದರೊಳ್ಳೆಯದು. ಇಲ್ಲವೆಂದರೆ ಇದ್ದಲ್ಲಿಯೂ ನೆಮ್ಮದಿಯಿರಲ್ಲ. ಕೌಟುಂಬಿಕವಾಗಿಯೂ ಸ್ವಲ್ಪ ತೊಂದರೆಗಳು ಹೊಸದಾಗಿ ಹುಟ್ಟಿಕೊಳ್ಳುತ್ತವೆ. ಯಾವುದೇ ಹೊಸ ಯೋಜನೆಗಳು ಸದ್ಯಕ್ಕೆ ಬೇಡ. ಆದರೆ ಮಾಡಲೇಬೇಕೆಂದರೆ ದಶಾಭುಕ್ತಿಯನ್ನೊಮ್ಮೆ ಜಾತಕದಲ್ಲಿ ಪರಿಶೀಲಿಸಿಕೊಂಡು ಮುನ್ನುಗ್ಗಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ಗುರುವಿನ ಪ್ರಭಾವ ಎಷ್ಟಿದೆಯೆಂಬುದನ್ನು ತಿಳಿದುಕೊಳ್ಳುವ ಅತ್ಯುತ್ತಮ ಸಮಯವಿದೆನ್ನಬಹುದು.

ಕನ್ಯಾ : ಇಷ್ಟು ದಿನ ಏಕಾದಶ ಅಂದರೆ ಗೋಚಾರದಲ್ಲಿ ಹನ್ನೆರಡನೇ ಸ್ಥಾನದಲ್ಲಿದ್ದುಕೊಂಡು ಗುರು ತುಂಬಾ ಉತ್ತಮ ಫಲಗಳನ್ನೇ ನೀಡಿದ್ದಾನೆ. ಕರ್ಕ ರಾಶಿಯಲ್ಲಿ ಉಚ್ಚನಾಗಿದ್ದುಕೊಂಡು ತನ್ನ ಸುಫಲವನ್ನೇ ಕನ್ಯಾ ರಾಶಿಯವರಿಗೆ ಕೊಟ್ಟಿದ್ದಾನೆ. ಸಾಡೇಸಾತಿಯ ಹೊಡೆತಗಳು ಬೀಳುತ್ತಿದ್ದರೂ ಗುರುಬಲವಿದ್ದುದರಿಂದ ಕನ್ಯಾ ರಾಶಿಯವರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು.

ಆದರೀಗ ಗುರು ತನ್ನ ಬಲ ಕಳೆದುಕೊಂಡು ದ್ವಾದಶ ಸ್ಥಾನದಲ್ಲಿ ಗೋಚಾರದಲ್ಲಿ ಸಂಚರಿಸುತ್ತಿದ್ದಾನೆ. ಮೊದಲೇ ಹಾಳು ಮಾಡುವ ಸ್ಥಳ ದ್ವಾದಶವೆನಿಸಿಕೊಂಡಿರುವುದರಿಂದ ಸ್ವಲ್ಪ ಜಾಗೃತೆ ವಹಿಸಿಕೊಳ್ಳಬೇಕಾಗಿದೆ ಕನ್ಯಾ ರಾಶಿಯವರು. ಸಾಡೇಸಾತಿಯಂತೂ ಜೀವನದೆಲ್ಲ ಪಾಠವನ್ನು ಚೆನ್ನಾಗಿ ಕಲಿಸಿದೆ. ಅದನ್ನು ಹೇಳಬೇಕಾಗಿಲ್ಲ. ಸಾಡೇಸಾತಿಯೇ ಇಲ್ಲವೆಂದವರಿಗೆ ಕನ್ಯಾ ರಾಶಿಯವರು ತಿಳಿಸಬಹುದು ಆಗಿರುವ ಅನಾನುಕೂಲತೆಗಳನ್ನು.

ಇಷ್ಟು ದಿನ ಹಾಕಿಕೊಂಡ ಯೋಜನೆಗಳು ಯಶಸ್ಸುಗೊಂಡಿದ್ದರೆ, ಇನ್ನವು ಮುಗ್ಗರಿಸಲಾರಂಭಿಸುತ್ತವೆ. ಒಂದರ ಹಿಂದೊಂದು ಬರುವ ಸೋಲಿನ ಮೇಲೆ ಸೋಲುಗಳು ಮನಸ್ಸಿನ ವೇದನೆ ಹೆಚ್ಚಿಸುತ್ತವೆ. "ಗುರುಬಲ ಇತ್ತಲ್ಲ ಇಷ್ಟು ದಿನ ಈಗಿಲ್ವಲ್ಲ" ಎಂದು ಸಮಾಧಾನ ಮಾಡಿಕೊಳ್ಳುವುದೊಂದೇ ದಾರಿ. ಹೀಗಾಗಿ ಹಣಕ್ಕಾಗಿ ಪರದಾಡಬೇಕಾಗುತ್ತದೆ. ದೇಹಾರೋಗ್ಯದಲ್ಲೂ ತೊಂದರೆಗಳು ಆರಂಭವಾಗುತ್ತವೆ. ಚಿಕ್ಕಪುಟ್ಟದ್ದೆಂದು ಬಿಟ್ಟ ನೋವುಗಳು ಮುಂದೆ ದೊಡ್ಡದಾಗಿ ಕಾಡಲಾರಂಭಿಸುತ್ತವೆ. ಆದ್ದರಿಂದ ಆರೋಗ್ಯದ ಕಡೆಗೆ ಅತೀ ಹೆಚ್ಚಿನ ಗಮನ ಕೊಡಬೇಕು.

ಕುಟುಂಬದವರೊಂದಿಗೆ ಆದಷ್ಟು ವಾಗ್ವಾದ ಮಾಡದೆ, ಮನೆಯ ಹಿರಿಯರ ಮಾತಿಗೆ ಬೆಲೆ ಕೊಡಬೇಕು. ಇಲ್ಲವಾದಲ್ಲಿ ಎಲ್ಲರಿಗೂ ಬೇಡವಾಗಬೇಕಾಗುತ್ತದೆ. ಜೊತೆಗೆ ಮನಃಶಾಂತಿಯೂ ಮರೀಚಿಕೆಯಾಗುತ್ತದೆ. ಇದರಿಂದ ಎಲ್ಲೆಡೆ ಹೆಸರುಗೆಡಿಸಿಕೊಂಡವರಂತೆ ತಲೆ ತಗ್ಗಿಸಬೇಕಾಗುತ್ತದೆ.

ಉದ್ಯೋಗದಲ್ಲಿದ್ದವರಂತೂ ಬಾಸ್ ಮಾತೇ ಅಂತಿಮ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಇದ್ದ ಉದ್ಯೋಗವನ್ನು ಉಳಿಸಿಕೊಳ್ಳುವುದೇ ಏಕೈಕ ಗುರಿಯಾಗಿರಬೇಕು. ದೊಡ್ಡಸ್ತಿಕೆ ಏನಾದರೂ ಮಾಡಲು ಮುಂದಾದರೆ ಅನುಭವಿಸುವುದು ಗ್ಯಾರಂಟಿ. ಆದರೆ ಕೆಟ್ಟಫಲ. ಬೇರೆಡೆ ಕೆಲಸ ಮಾಡುವ ಸೂಚನೆ ಬಂದರೆ ಕೆಮ್ಮದೇ ಒಪ್ಪಿಕೊಂಡರೆ ಒಳ್ಳೆಯದು. ಕುಟುಂಬದವರಿಂದ ದೂರವಿರುವುದಾಗುವುದಿಲ್ಲ ಎನ್ನುವ ಭಾವನೆ ತೊಲಗಿಸಿಕೊಂಡು ಕುಟುಂಬದವರಿಗೋಸ್ಕರನೇ ದೂರವಿರಬೇಕಾಗಿದೆ ಎಂದುಕೊಳ್ಳಬೇಕು.

ಯಾವುದೇ ಹೊಸ ಯೋಜನೆಗಳನ್ನು ಹಾಕಿಕೊಳ್ಳುವ ಮೊದಲು ಹತ್ತಿಪ್ಪತ್ತು ಬಾರಿ ಬಲ್ಲವರಿಂದ ಸಮಾಲೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು. ಒಟ್ಟಿನಲ್ಲಿ, ಗುರುಬಲ ಕಮ್ಮಿಯಾಗಿದೆಯೆಂದು ಕೊರಗದೇ ಗುರುಗಳ ಸೇವೆ ಮಾಡುತ್ತಿದ್ದರೆ ಗುರುವಿನ ಅನುಗ್ರಹ ಪಡೆದುಕೊಳ್ಳಬಹುದು.

English summary
Religious functions can be done only when you have auspecious time or Gurubala. Good thing is that, gurubala begins to some of the zodiac signs from July 14, 2015. What will happen when one gets or loses gurubala? Astrologer SS Naganurmath explains. By the way, No Gurubala for Leo and Virgo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X