ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಷದಿಂದ ಮೀನದವರೆಗೆ ಸೆಪ್ಟೆಂಬರ್ ಮಾಸ ಭವಿಷ್ಯ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಮಾಸ ಭವಿಷ್ಯ ಎಂಬುದು ಒಂದು ತಿಂಗಳ ಕಾಲ ನಡೆಯಬಹುದಾದ ಘಟನೆಗಳ ಸುಳಿವು. ಒಳಿತು-ಕೆಡುಕುಗಳನ್ನು ಗ್ರಹಗಳ ಸ್ಥಿತಿಯನ್ನು ಆಧರಿಸಿ, ಲೆಕ್ಕಾಚಾರಗಳನ್ನು ಮಾಡಿದ ನಂತರ ನುಡಿಯುವ ಭವಿಷ್ಯತ್ತಿನ ಫಲಾಫಲ. ಒನ್ಇಂಡಿಯಾದಲ್ಲಿ ಪ್ರಕಟವಾಗುವ ಈ ಭವಿಷ್ಯವನ್ನು ಇಡೀ ಮಾಸಕ್ಕೆ ಅನ್ವಯಿಸುವಂತೆ ನೀಡಲಾಗುತ್ತದೆ.

ಘಟನೆ-ಸನ್ನಿವೇಶವನ್ನು ಆಧರಿಸಿ ನಿಮ್ಮ ಜೀವನಕ್ಕೆ ಅದನ್ನು ಅನ್ವಯಿಸಿಕೊಳ್ಳಬಹುದು. ಆದರೆ ಈ ಭವಿಷ್ಯವು ಗೋಚಾರ ಅಂದರೆ ಗ್ರಹಗಳ ಸಂಚಾರ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ದಶಾ- ಭುಕ್ತಿ ಮತ್ತಿತರ ಪ್ರಮುಖ ವಿಚಾರಗಳನ್ನು ಜ್ಯೋತಿಷಿಗಳ ಬಳಿಯೇ ಕೇಳಬೇಕು. ಏಕೆಂದರೆ, ಒಂದೇ ರಾಶಿಯವರು ಲಕ್ಷಾಂತರ ಮಂದಿಗೆ ಒಂದೇ ಥರದ ಭವಿಷ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಗುರು ಸಂಚಾರ ದುಷ್ಪ್ರಭಾವಕ್ಕೆ ಜ್ಯೋತಿಷ್ಯ ಪರಿಹಾರೋಪಾಯಗುರು ಸಂಚಾರ ದುಷ್ಪ್ರಭಾವಕ್ಕೆ ಜ್ಯೋತಿಷ್ಯ ಪರಿಹಾರೋಪಾಯ

ನಿಜ, ಈ ಮಾತು ನೂರಕ್ಕೆ ನೂರು ನಿಜ. ಆದ್ದರಿಂದ ತಮ್ಮ ಜಾತಕವನ್ನು ವರ್ಷಾವಧಿಗೆ ಒಮ್ಮೆಯೋ ಅಥವಾ ಹೇಗೆ ವಾಡಿಕೆಯಲ್ಲಿ ನಡೆಸಿಕೊಂಡು ಬಂದಿದ್ದಾರೆಯೋ ಹಾಗೆ ಜ್ಯೋತಿಷಿಗಳ ಬಳಿ ತೋರಿಸಿ, ಆಯಾ ಕಾಲಕ್ಕೆ ಕೈಗೊಳ್ಳಬೇಕಾದ ಪೂಜೆ-ಶಾಂತಿಯನ್ನು ಮಾಡಿಸಿಕೊಂಡರೆ ಒಳಿತು. ನಂಬಿಕೆ ವೈಯಕ್ತಿಕವಾದದ್ದು. ಎಲ್ಲರಿಗೂ ಒಳಿತಾಗಬೇಕು ಎಂಬುದು ನಮ್ಮ ಆಶಯ.

ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

ನಿಮ್ಮ ರಾಶಿಗೆ ಈ ಮಾಸದ ಗೋಚಾರ ಏನು ಹೇಳುತ್ತದೆ ಎಂದು ತಿಳಿಯುವುದಕ್ಕೆ ಮುಂದೆ ಓದಿ.

ಮೇಷ: ಆಭರಣ ಖರೀದಿ ಮಾಡಲು ಉತ್ತಮ ಸಮಯ

ಮೇಷ: ಆಭರಣ ಖರೀದಿ ಮಾಡಲು ಉತ್ತಮ ಸಮಯ

ಪುರುಷರು: ನಿಮ್ಮ ನಿತ್ಯದ ವ್ಯವಹಾರಗಳು ಸ್ವಲ್ಪ ಆತುರಾತುರವಾಗಿ ಗಜಿಬಿಜಿ ಆಗಿದೆ ಅನಿಸುತ್ತದೆ. ಶಾರೀರಿಕವಾಗಿ ಸತ್ವ ಸಂಪನ್ನರಾಗಿರುತ್ತೀರಿ, ತೊಂದರೆ ಇಲ್ಲ. ಗುರು- ಹಿರಿಯರಲ್ಲಿ ಗೌರವ ಭಾವನೆ ಹೆಚ್ಚುತ್ತದೆ. ಮಕ್ಕಳಿಂದ ಧನ ಪ್ರಾಪ್ತಿ ಇದೆ. ಇಲ್ಲದಿದ್ದರೆ ನಿಮಗಾಗಿ ಮಕ್ಕಳು ವಾಹನ ಖರೀದಿ ಮಾಡಬಹುದು. ನಿಮಗೆ ಕಲ್ಪನೆ ಇಲ್ಲದೆಯೇ ಉತ್ತಮ ಜನರು ಮಿತ್ರರಾಗಿ ಸಿಕ್ಕು, ಮನಸಿಗೆ ಆನಂದವಾಗುತ್ತದೆ.

ವಿದ್ಯಾ ಇಲಾಖೆಗೆ ಸಂಬಂಧಪಟ್ಟು ಉದ್ಯೋಗದಲ್ಲಿ ಇರುವವರಿಗೆ ಆದಾಯ ಉತ್ತಮವಾಗಿ ಕಾಣಿಸುತ್ತಿದೆ. ಆಭರಣಗಳನ್ನು ಖರೀದಿಸಬೇಕು ಎಂದುಕೊಂಡಿದ್ದಲ್ಲಿ ಈ ತಿಂಗಳಷ್ಟು ಉತ್ತಮ ಉತ್ತಮ ಸಮಯ ಈ ಸದ್ಯದಲ್ಲಿ ಸಿಗುವುದಿಲ್ಲ. ತಿಂಗಳ ಆದಿಯಲ್ಲಿ ಅತ್ಯುತ್ತಮ ಆರೋಗ್ಯ. ಒಂದು ವೇಳೆ ಸಮಸ್ಯೆ ಆದರೆ ಅದು ತಿಂಗಳಾಂತ್ಯದಲ್ಲಿ ಆಗಬೇಕಷ್ಟೇ.

ಕಬ್ಬಿಣ, ಸಿಮೆಂಟ್ ಹಾಗೂ ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಅಥವಾ ವ್ಯಾಪಾರ ಇಲ್ಲದೇ ಪರದಾಟ ಆಗಬಹುದು. ತಿಂಗಳ ಮಧ್ಯ ಭಾಗದ ನಂತರ ಸ್ವಲ್ಪ ವ್ಯತಾಸಗಳನ್ನು ಕಾಣುತ್ತೀರಿ. ನಿಮ್ಮೊಂದಿಗಿನ ಇತರರ ವ್ಯವಹಾರದಲ್ಲಿ ಸಹ ಬದಲಾವಣೆ ಕಾಣಸಿಗುತ್ತದೆ. ವಿಶೇಷ ಎಂದರೆ, ಏನೋ ನಾಟಕ ಆಡುತ್ತಿದ್ದರೆ ಶತ್ರುಗಳು ಅನಿಸುತ್ತದೆ.

ಅನವಶ್ಯಕವಾದ ಓಡಾಟ, ಅಲೆದಾಟಗಳು ಹೆಚ್ಚಾಗುವ ಸಂಭವ. ಬಹಳ ಮುಖ್ಯವಾಗಿ ನಿಮ್ಮ ಎದುರಿಗೆ ಸಜ್ಜನರು- ಸ್ನೇಹಿತರಂತೆ ಇದ್ದು, ಹಿಂದಿನಿಂದ ಕತ್ತಿ ಮಸೆಯುವ ಬುದ್ಧಿ ಇರುವವರನ್ನು ಗುರುತಿಸಿ. ಅಂಥವರಿಂದ ಜಾಗೃತರಾಗಿರಿ.

ಸ್ತ್ರೀಯರು: ನಿಮ್ಮ ಮಕ್ಕಳು ಅನಾರೋಗ್ಯ ಪೀಡಿತರಾಗಿದ್ದಲ್ಲಿ ತಿಂಗಳ ಮಧ್ಯ ಅಥವಾ ಕೊನೆಯ ಭಾಗದಲ್ಲಿ ಸ್ವಲ್ಪ ಚೇತರಿಸಿಕೊಳ್ಳುತ್ತಾರೆ, ಚಿಂತೆ ಬೇಡ. ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವವರಾಗಿದ್ದರೆ ಈ ತಿಂಗಳು ಸ್ವಲ್ಪ ಅದನ್ನು ಬಿಟ್ಟು, ಪರ್ಯಾಯ ಬಗ್ಗೆ ಯೋಚಿಸುವುದು ಉತ್ತಮ.

ವಿದೇಶ ಪ್ರಯಾಣಕ್ಕೆ ಮಕ್ಕಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ಸ್ತ್ರೀಯರು ಹಣದ ವಿಚಾರದಲ್ಲಿ ಇನ್ನೊಮ್ಮೆ ಯೋಚಿಸಿ, ನಿರ್ಧರಿಸಿ. ಅಗ್ಯತ್ಯಕ್ಕಿಂತಲೂ ಹೆಚ್ಚು ಖರ್ಚಾಗುತ್ತಿರುವಂತೆ ಅಥವಾ ಬರಬೇಕಾದ ಹಣ ಬಾರದೆ ಚಿಂತಿಸುವಂತೆ ಆಗುತ್ತದೆ. ಸರಿಯಾದ ವ್ಯಕ್ತಿಗಳ ಬಳಿ ತೂಕದ ಮಾತುಗಳನ್ನು ಆಡುವ ಮೂಲಕ ವ್ಯಾವಹಾರಿಕವಾಗಿಯೂ ಹಾಗೂ ವೈಯಕ್ತಿಕವಾಗಿಯೂ ಅನುಕೂಲಕರವಾಗಿ ಇರುತ್ತದೆ. ಮುನಿಸಿಕೊಂಡು ದೂರವಾದ ಸಹೋದರ ಪುನಃ ಹತ್ತಿರವಾಗಲಿದ್ದಾನೆ.

ವಿದ್ಯಾರ್ಥಿಗಳು: ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ಐಎಎಸ್-ಐಪಿಎಸ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಅನುಕೂಲಕರ ದಿನಗಳಾಗಿರುತ್ತವೆ. ಇತರರ ವಿಚಾರಕ್ಕೆ ಬಂದರೆ ಸಂಸ್ಥೆಗಳಿಗೆ ನೀಡಬೇಕಾದ ಶುಲ್ಕದ ವಿಚಾರದಲ್ಲಿ ಕಷ್ಟಗಳು ಆಗುತ್ತವೆ. ಅದೇ ವಿಚಾರದಲ್ಲಿ ಶಾಲಾ- ಕಾಲೇಜುಗಳಿಗೆ ಹೋಗಲಾಗದೆ ಚಡಪಡಿಸ ಬೇಕಾಗಬಹುದು. ಆದ್ದರಿಂದ ಮೊದಲೇ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಿ.

ವಿದ್ಯೆಯಲ್ಲಿ ಸ್ವಲ್ಪ ಹಿಂದಿರುವವರಿಗೆ ಸಮಯ ಸರಿಪಡಿಸಿಕೊಂಡು ಉತ್ತಮ ವಿಧದಲ್ಲಿ ಓದುವತ್ತ ಗಮನಹರಿಸಲು ಕೊನೆಯದಾಗಿ ಇನ್ನೂ ಒಂದು ಅವಕಾಶ ಲಭಿಸಲಿದೆ. ಅದರ ಸದುಪಯೋಗ ಪಡಿಸಿಕೊಳ್ಳಿ ಎಂದಷ್ಟೇ ಹೇಳಬಹುದು.

ಪರಿಹಾರ: ಈ ತಿಂಗಳಲ್ಲಿ ಬರುವ ಎಲ್ಲಾ ಸೋಮವಾರಗಳಲ್ಲಿ ಈಶ್ವರ ದೇಗುಲದಲ್ಲಿ ಬಿಲ್ವ ಪತ್ರೆಯಲ್ಲಿ ರುದ್ರ ತ್ರಿಶತಿ ಅರ್ಚನೆ ಮಾಡಿಸಿ.

ವೃಷಭ: ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ

ವೃಷಭ: ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ

ಪುರುಷರು: ಈ ತಿಂಗಳು ಪೂರ್ತಿಯಾಗಿ ಕಷ್ಟದ ಸಮಯ. ಆದರೆ ಇಲ್ಲಿ ಒಂದು ಸಂತಸದ ವಿಚಾರ ಏನೆಂದರೆ, ಇದೇ ನಿಮ್ಮ ಕಷ್ಟಗಳ ಕೊನೆಯ ತಿಂಗಳು. ಆದ್ದರಿಂದ ಬೇಸರ ಮಾಡಿಕೊಳ್ಳದೆ ಅನುಭವಿಸಿ ಬಿಡಿ. ಮುಂದಿನ ತಿಂಗಳಿನಿಂದ ನಿಮಗೆ ಗುರುಬಲ ಪ್ರಾರಂಭ
ಆಗುತ್ತಿದೆ.

ಆರೋಗ್ಯದ ವಿಚಾರದಲ್ಲಿ ಬಹಳವಾದ ಎಚ್ಚರಿಕೆ ಇರಲಿ. ಆಹಾರ ಸ್ವೀಕರಿಸುವಾಗ ರುಚಿಗೆ ಪ್ರಾಮುಖ್ಯ ಕೊಡದೇ ಶುಚಿಗೆ ಹಾಗೂ ಗುಣಮಟ್ಟಕ್ಕೆ ಪ್ರಾಮುಖ್ಯ ಕೊಡಿ. ಎಲ್ಲ ವಿಧದ ವ್ಯಾಪಾರಿಗಳಿಗೂ ಅಲ್ಪ ಲಾಭ ಮಾತ್ರ ಕಾಣುತ್ತಿದೆ. ಆದುದರಿಂದ ದೊಡ್ಡ ಮಟ್ಟದ ಹೂಡಿಕೆ ಮಾಡದಿರಿ.

ಸರಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ತೊಂದರೆ ಹಾಗೂ ಒತ್ತಡ ಆಗುತ್ತಿದೆ ಎಂದು ನಿಮಗೆ ಅನಿಸಿದರೂ ತಿಂಗಳ ಮಧ್ಯ ಭಾಗದ ಕೆಲ ದಿನಗಳು ಅನುಕೂಲಕರವಾಗಿವೆ. ನಿಮ್ಮಲ್ಲಿ ಇರುವ ಯಾವುದೋ ಒಂದು ಬೆಲೆಬಾಳುವ ವಸ್ತು ಒಂದನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ.

ನಿಮ್ಮ ಸ್ನೇಹಿತರು ರಾಜಕೀಯದಲ್ಲಿ ಇದ್ದರೆ ಅವರ ಸಹಾಯ ನಿಮಗೆ ಬೇಕಾಗುತ್ತದೆ. ಸರಕಾರಿ ಶಾಲೆಯ ಅಧ್ಯಾಪಕರಿಗೆ ಆರ್ಥಿಕ ಅನುಕೂಲಗಳು ಕಾಣುತ್ತಿವೆ. ಅದರಲ್ಲಿಯೂ ಗಣಿತ ಶಾಸ್ತ್ರದ ಪ್ರಾಧ್ಯಾಪಕರಿಗೆ ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಇದೆ. ಈ ಹಿಂದೆ ನಿಮಗೆ ಅನಗತ್ಯವಾಗಿದ್ದ ವಿಚಾರದಲ್ಲಿ ಮೂಗು ತೂರಿಸಿದ್ದರ ಪ್ರತಿಫಲ ಈಗ ಅನುಭವಿಸಬೇಕಾಗುತ್ತದೆ. ಆದರೂ ಹೆಚ್ಚಿನ ಚಿಂತೆ ಬೇಡ. ಸ್ವಲ್ಪ ತಾಳ್ಮೆ ಇರಲಿ, ಸರಿ ಹೋಗುತ್ತದೆ.

ಸ್ತ್ರೀಯರು: ಸ್ತ್ರೀ ಸಂಬಂಧಿತ ರೋಗಗಳು ಕಡಿಮೆ ಆಗುತ್ತಾ ಬರುತ್ತದೆ. ಪತಿಯೊಂದಿಗೆ ತೀರ್ಥ ಕ್ಷೇತ್ರಗಳ ದರ್ಶನ ಯೋಗವೂ ಇದೆ. ಕಫ ಪ್ರಕೃತಿಯ ವ್ಯತ್ಯಾಸದಿಂದ ಕೆಮ್ಮು ಮಾತ್ರ ಬರಬಹುದು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸದೆ ಇದ್ದರೆ ಉತ್ತಮ. ಮಾಡಲು ಮನಸಿಲ್ಲದ ಕೆಲಸಗಳನ್ನು ಇತರರ ಒತ್ತಾಯದ ಮೇರೆಗೆ ಮಾಡಲು ಮಾತ್ರ ಹೋಗದಿರಿ.

ಏಕೆಂದರೆ, ಕೆಲಸಗಳು ಸುಲಭವಾಗಿ ಮುಗಿಯದೆ ಹಣ ಮಾತ್ರ ಪೋಲು ಆಗುವ ಸಾಧ್ಯತೆಗಳಿವೆ. ಅವಿವಾಹಿತೆ ಆಗಿದ್ದಲ್ಲಿ ನಿಶ್ಚಯವಾಗಿದ್ದ ವಿವಾಹವು ಶತ್ರುಗಳ ಕೈವಾಡದಿಂದಾಗಿ ಹಾಳಾಗುವ ಸಂಭವ ಇದೆ, ಎಚ್ಚರವಹಿಸಿ. ನೀವು ಮಾಡಬೇಕಾದ ಕೆಲಸ ಎಂದರೆ ನಿಶ್ಚಿತಾರ್ಥವನ್ನು ಒಂದು ತಿಂಗಳು ಸಾಧ್ಯ ಆದರೆ ಮುಂದೆ ಹಾಕಿ. ಯಾರೊಂದಿಗೂ ಆರ್ಥಿಕವಾದ ವ್ಯವಾಹರಗಳು ಬೇಡ. ಯಾರೋ ಯಾರಿಗೋ ಹಣ ಕೊಡುವಾಗ ನೀವು ಮಧ್ಯವರ್ತಿ ಆಗದಿರಿ.

ವಿದ್ಯಾರ್ಥಿಗಳು: ಇದ್ದಕ್ಕಿದ್ದಂತೆ ದೊಡ್ಡದಾದ ಸವಾಲುಗಳು ಎದುರಾಗಬಹುದು. ಕಷ್ಟ ಆದರೂ ಹಿಂಜರಿಯದಿರಿ, ಎದುರಿಸಿ. ಒತ್ತಡದ ಸಮಯ; ಓದಿ ಮುಗಿಸಬೇಕಾದ ವಿಷಯಗಳು ಇನ್ನೂ ಹತ್ತು ಹಲವು ಇವೆ. ಸಮಯ ಮಾತ್ರ ಇಲ್ಲದ ಸ್ಥಿತಿ. ಕಲಾ ವಿಭಾಗದ ವಿದ್ಯಾರ್ಥಿಗಳು ಸ್ವಲ್ಪ ಎಚ್ಚರದಿಂದ ಇರಬೇಕು.

ವ್ಯಸನಗಳನ್ನು ನಿಮಗೆ ಕಲಿಸುವ ಸಾಧ್ಯತೆಗಳಿವೆ ನೆನಪಿಡಿ. ಯಾವುದೇ ಅನಗತ್ಯ ಮನರಂಜನೆ ಸಹ ಒಂದು ವ್ಯಸನ. ಹೇಗೆ ಎಂದರೆ ಮನಸಿದ್ದಲ್ಲಿ ಮಾರ್ಗ ಎಂಬ ವಾಕ್ಯವನ್ನು ಅರಿತು, ಅಳವಡಿಸಿಕೊಳ್ಳಲೇ ಬೇಕು ಅಷ್ಟೇ.

ಪರಿಹಾರ: ಪ್ರತಿ ದಿನ ತಪ್ಪದೇ ದುರ್ಗಾದೇವಿಯ ಅಷ್ಟೋತ್ತರ ಪಠಣ ಮಾಡಿ. ಸಾಧ್ಯವಾದರೆ ಉತ್ತಮ ಗುಣಮಟ್ಟದ ಕುಂಕುಮವನ್ನು ಹತ್ತಿರದ ದುರ್ಗಾ ದೇಗುಲಕ್ಕೆ ತೆಗೆದುಕೊಂಡು ಹೋಗಿ ಕುಂಕುಮಾರ್ಚನೆ ಮಾಡಿಸಿ.

ಮಿಥುನ: ಸಾಲಗಳು ಹೆಚ್ಚಾಗಬಹುದು, ಎಚ್ಚರ

ಮಿಥುನ: ಸಾಲಗಳು ಹೆಚ್ಚಾಗಬಹುದು, ಎಚ್ಚರ

ಪುರುಷರು: ಚಾಲಕ ವೃತ್ತಿಯಲ್ಲಿ ಇರುವವರು ಅಥವಾ ವಾಹನ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಉತ್ತಮ ಸಮಯ. ಹಣ ಉಳಿಸಲು ಸಾಧ್ಯವಾಗದೇ ಹೋದರೂ ಲಾಭ ಖಂಡಿತ ನೋಡಬಹುದು. ಕೆಲವರು ಕಣ್ಣಿಗೆ ಸಂಬಂಧ ಪಟ್ಟ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ. ಆದರೆ ತಿಂಗಳಾಂತ್ಯಕ್ಕೆ ಸರಿದಂತೆ ಸ್ವಲ್ಪ ನಗು ಹಾಗೂ ಸಂತೋಷದ ಘಳಿಗೆಗಳು ಇವೆ.

ತಿಂಗಳ ಮಧ್ಯ ಭಾಗದಲ್ಲಿ ಕೆಲ ದಿನಗಳು ದುಡ್ಡು ಇದ್ದರೂ ಅದನ್ನು ಬಳಸಲಾಗದ ವಿಚಿತ್ರ ಸ್ಥಿತಿ ಕಾಡುತ್ತದೆ. ಮದ್ಯಪಾನ ಹಾಗೂ ಧೂಮಪಾನ ಮಾಡುವವರಿಗೆ ಆರೋಗ್ಯ ಹದಗೆಡುವ ಕಾಲ. ಬರಹಗಾರರು ಕೃತಿ ಚೌರ್ಯದ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಪ್ರತಿ ಸಲ ಬೇರೆಯವರಿಂದ ಹಣ ಪಡೆದು, ಆ ಹಣದಲ್ಲಿ ವ್ಯಾಪಾರ ಮಾಡಿ ನಂತರ ಅದನ್ನು ಹಿಂತಿರುಗಿಸಿ ವ್ಯವಹಾರ ಮಾಡುವವರಿಗೆ ಈ ಬಾರಿ ಹಣ ಸಿಗದೆ ಕಷ್ಟವಾಗುತ್ತದೆ. ಆದರೆ ನಿಮ್ಮ ಬುದ್ಧಿವಂತಿಕೆಗೆ ಬೇರೆ ಅವಕಾಶಗಳು ಇದ್ದೇ ಇರುತ್ತವೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಅರಿಯದೇ ಕೆಲಸ ಮಾಡಲು ಇನ್ನಿಲ್ಲದ ಒತ್ತಡ ಹಾಕುತ್ತಾರೆ. ಆದರೆ, ಅದನ್ನು ಸಮರ್ಥವಾಗಿ ನಿರ್ವಹಿಸಬೇಕು. ಕೊಡುತ್ತೀರೋ ಅಥವಾ ತೆಗೆದುಕೊಳ್ಳುತ್ತೀರೋ ಒಟ್ಟಿನಲ್ಲಿ ಸಾಲಗಳು ಹೆಚ್ಚಾಗಬಹುದು. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದರಿಂದ ಇಂಥ ಸಮಸ್ಯೆಗಳು ಬಹುಪಾಲು ಕಡಿಮೆ ಆಗಲಿವೆ. ಮನೆ ಕಟ್ಟುವ ಆಲೋಚನೆಗಳಿದ್ದರೆ ಸ್ವಲ್ಪ ಬೇಗ ಇದೇ ತಿಂಗಳಿನಲ್ಲಿ ಭೂಮಿ ಪೂಜೆ ಮಾಡಿ, ಪ್ರಾರಂಭ ಮಾಡಿಬಿಡಿ.

ಸ್ತ್ರೀಯರು: ನಿಮ್ಮ ಲೆಕ್ಕಾಚಾರಗಳು ಮಾತ್ರ ಹೆಚ್ಚು- ಕಡಿಮೆ ಆಗುವುದಿಲ್ಲ. ಮುಂದೆ ಆಗುವ ಸಮಸ್ಯೆ ಅಥವಾ ನಷ್ಟದ ಮುನ್ಸೂಚನೆ ಸರಿಯಾಗಿ ಸಿಗುತ್ತದೆ. ನಿಮ್ಮನ್ನು ಅರಸುತ್ತಾ ಬರುವ ಅವಕಾಶಗಳೆಲ್ಲಾ ಉತ್ತಮವೇ ಆಗಿರಬೇಕೆಂದೇನೂ ಇಲ್ಲ. ಹಾಗೆಂದು ಅವಕಾಶಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದೂ ಬೇಡ. ಆಲೋಚಿಸಿ, ದೃಢ ನಿರ್ಧಾರ ತೆಗೆದುಕೊಳ್ಳಿ.

ಹಠದ ಪ್ರವೃತ್ತಿ ನಿಮ್ಮಲ್ಲಿ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ತಾತಕಾಲಿಕವಾದ ನಿಮ್ಮ ಹಠದ ಪ್ರವೃತ್ತಿಯಿಂದ ನಿಂದನೆಗೆ ಗುರಿಯಾಗುತ್ತೀರಿ. ಬೆನ್ನಿಗೆ ಚೂರಿ ಹಾಕುವುದು ಅಂದರೇನು ಎಂಬ ಅರಿವು ಮೂಡುತ್ತದೆ. ಮಾನಸಿಕವಾಗಿ ಸ್ವಲ್ಪ ಕುಗ್ಗಬಹುದು. ಇನ್ನು ಹೊಸ ಅವಕಾಶಗಳ ಹುಡುಕಾಟದಲ್ಲಿ ಇರುವವರಿಗೆ ತಿಂಗಳ ಮಧ್ಯಭಾಗದ ನಂತರ ಅದು ಪ್ರಾಪ್ತಿ ಆಗುತ್ತದೆ.

ಯಾರಿಗೂ ತಿಳಿಯದ ಹಾಗೆ ಕೂಡಿಟ್ಟ ಹಣ ಬಳಸುವ ಸಮಯ ಇದಲ್ಲ. ಆ ಹಣದ ಅವಶ್ಯಕತೆ ಮುಂದಿನ ದಿನಗಳಲ್ಲಿ ಬರಲಿದೆ. ಈಗಲೇ ಖಾಲಿ ಮಾಡಿಕೊಳ್ಳಬೇಡಿ.

ವಿದ್ಯಾರ್ಥಿಗಳು: ನಿಮ್ಮ ಶಾಲಾ- ಕಾಲೇಜುಗಳಲ್ಲಿ ಹಣದ ವ್ಯವಹಾರ ಬೇಡ ಎಂದು ಪೋಷಕರು ತಿಳಿ ಹೇಳಿದರೂ ಹಣದ ಲಾಭ ಸಿಗುವ ಯಾವ ಚಿಕ್ಕ ವ್ಯವಹಾರವನ್ನೂ ಬಿಡದೇ ಹುಡುಕಿಕೊಂಡು ಹೋಗಿ ಮಾಡುತ್ತೀರಿ. ಆದರೆ ನಿಮಗೆ ಇದು ಲಾಭ ತರುವ ಕೊನೆಯ ತಿಂಗಳು ಅಷ್ಟೆ.

ಅಂಥ ವ್ಯವಹಾರಗಳನ್ನು ಕೂಡಲೇ ನಿಲ್ಲಿಸಿ. ಅಷ್ಟೇ ಅಲ್ಲ, ನಿಮ್ಮ ಯಶಸ್ಸು ಎಂದಿಗೂ ಅಹಂಕಾರಕ್ಕೆ ಕಾರಣ ಆಗಬಾರದು. ನಿಮ್ಮ ಯಶಸ್ಸು ಮುಂದುವರಿದೇ ಬಿಡುತ್ತದೆ ಎಂದೇನೂ ಇಲ್ಲ.

ಪರಿಹಾರ: ಈ ತಿಂಗಳಿನಲ್ಲಿ ಬರುವ ಎಲ್ಲ ಬುಧವಾರಗಳಲ್ಲಿ ಮಹಾ ವಿಷ್ಣು ದೇಗುಲದಲ್ಲಿ ಹಾಲಿನಲ್ಲಿ ಪುರುಷ ಸೂಕ್ತ ಅಭಿಷೇಕ ಮಾಡಿಸಿ.

ಕರ್ಕಾಟಕ: ಅನ್ಯರೊಡನೆ ಮಾತನಾಡುವಾಗ ಎಚ್ಚರ ಇರಲಿ

ಕರ್ಕಾಟಕ: ಅನ್ಯರೊಡನೆ ಮಾತನಾಡುವಾಗ ಎಚ್ಚರ ಇರಲಿ

ಪುರುಷರು: ದ್ರವ ರೂಪದ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ವಿಧದಲ್ಲಿ ಧನ ಲಾಭ ಕಂಡುಬರುತ್ತಿದೆ. ಮನೆ ಕಟ್ಟಲು ಆಲೋಚನೆ ನಡೆಸುತ್ತಿದ್ದರೆ ಮಾತ್ರ ಪ್ರಾರಂಭಿಸಲು ಈಗ ಉತ್ತಮ ಸಮಯ. ಹಣ ಇಲ್ಲ ಎಂದು ಚಿಂತೆ ಬೇಡ, ಎಲ್ಲಿಂದಲೋ ಸಹಾಯ- ವ್ಯವಸ್ಥೆ ಆಗುತ್ತದೆ. ನೀವು ಮೊದಲು ಕಾರ್ಯ ಪ್ರಾರಂಭಿಸಿ.

ದ್ವಿಚಕ್ರ ವಾಹನ ಸವಾರರಾಗಿದ್ದಲ್ಲಿ ಸ್ವಲ್ಪವೂ ಅಸಡ್ಡೆ ಮಾಡದೇ ಹೆಲ್ಮೆಟ್ ಧರಿಸಿಯೇ ಪ್ರಯಾಣಿಸಿ. ಯಾವುದೇ ಚಿಕ್ಕ ವಿಚಾರಗಳನ್ನು ಎಳೆದು ದೊಡ್ಡದು ಮಾಡಬೇಡಿ. ಕನಿಷ್ಠ ಪಕ್ಷ ನೀವು ಮೌನವಾಗಿರಿ. ದೂರ ಪ್ರಯಾಣಗಳಿಂದ ಉತ್ತಮ ಲಾಭಗಳಿವೆ. ಯಾವುದೋ ಕ್ಷೇತ್ರ ದರ್ಶನದ ಯೋಗವೂ ಕಂಡು ಬರುತ್ತಿದೆ.

ದಾನ, ಧರ್ಮ ಮಾಡಲು ಉತ್ತಮ ಸಮಯ -ಶಕ್ತಿ ಸಹ ನಿಮಗೆ ಇದೆ. ಗುರು, ಹಿರಿಯರ ಉತ್ತಮ ಮಾರ್ಗದರ್ಶನ ಸಹ ಸಿಗುತ್ತದೆ. ವೃತ್ತಿಪರವಾಗಿ ನೋಡಿದಾಗ ಉತ್ತಮ ಸಮಯ ಕಾಣಿಸುತ್ತಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿ ಹಾಗೂ ಮೇಲಧಿಕಾರಿಗಳಿಂದ ಸಹಕಾರ ಲಭಿಸಲಿದೆ. ಉದ್ಯೋಗ ನಿಮಿತ್ತ ಪರ ದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಅಲ್ಲಿ ಉತ್ತಮ ಸ್ಥಾನಮಾನ, ಇನ್ನೂ ಹೆಚ್ಚಿನ ಅಧಿಕಾರ ಯೋಗ ಇದೆ.

ಸಾಮಾನ್ಯವಾಗಿಯೇ ಈ ತಿಂಗಳು ಪ್ರಯಾಣಗಳು ಹೆಚ್ಚಿವೆ. ಅನ್ಯರೊಡನೆ ಮಾತನಾಡುವಾಗ ಎಚ್ಚರ ಇರಲಿ. ನಿಮ್ಮನ್ನು ಅವರು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ತಿಂಗಳ ಮಧ್ಯಭಾಗ ದಾಟುತ್ತಿದ್ದಂತೆ ಕೆಲಸದ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಆದರೆ ಆರ್ಥಿಕವಾಗಿ ನೋಡಿದಾಗ ಈ ತಿಂಗಳು ಪೂರ್ಣವಾಗಿ ಅತ್ಯುತ್ತಮವಾಗಿದೆ.

ಸ್ತ್ರೀಯರು: ಆರೋಗ್ಯ ಬಹಳ ಉತ್ತಮವಾಗಿ ಕಾಣಿಸುತ್ತಿದೆ. ಆದರೆ ಹೊಸ ಹೊಸ ಪ್ರಯೋಗಗಳನ್ನು ನಿಮ್ಮ ತ್ವಚೆಯ ಮೇಲೆ ಮಾಡಲು ಹೋಗಿ, ಚರ್ಮ ವ್ಯಾಧಿ ತಂದುಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ಕಣ್ಣಿನ ಸಮಸ್ಯೆ ಸಹ ಆಗಬಹುದು, ಎಚ್ಚರ. ಬಾಳಸಂಗಾತಿ ಜೊತೆ ಹಲವು ಕಾರ್ಯಕ್ರಮಗಳಿಗೆ ಹೋಗಬಹುದು ಹಾಗೂ ಅವರ ಕಡೆಯಿಂದ ಉಡುಗೊರೆ ಸಹ ಸಿಗಲಿದೆ.

ಕೌಟುಂಬಿಕವಾಗಿ ಉತ್ತಮವಾಗಿ ಕಾಣುತ್ತಿದೆ. ಚಿಕ್ಕಪುಟ್ಟ ವ್ಯಾಪಾರ- ವಹಿವಾಟು ಮಾಡುತ್ತಾ ಇದ್ದೀರಿ ಎಂದಾದಲ್ಲಿ ನಿಮಗೆ ಉತ್ತಮ ಲಾಭ ಇದೆ. ಮನೆಯಲ್ಲಿ ಗೊತ್ತಿಲ್ಲದೆ ಕೊಟ್ಟ ಸಾಲ ಹಿಂತಿರುಗಿ ಬರುತ್ತದೆ. ಹಣದ ಒಳ ಹರಿವು ಉತ್ತಮವಾಗಿ ಇದ್ದು, ಅನಿರೀಕ್ಷಿತ ಧನ ಲಾಭ ಸಹ ಕಾಣಿಸುತ್ತಿದೆ.

ದುಡ್ಡು ಉತ್ತಮವಾಗಿ ಬರುತ್ತಿರುವುದರಿಂದ ನೀವು ಖರ್ಚುಗಳನ್ನೂ ಸಹ ಹೆಚ್ಚು ಮಾಡುತ್ತೀರಿ. ಅದರಲ್ಲಿಯೂ ಐಷಾರಾಮಿ ಜೀವನ ಪದ್ಧತಿ ನಿಮಗೆ ಅರಿವಿಲ್ಲದಂತೆ ರೂಢಿ ಆಗಿಬಿಡುತ್ತದೆ. ಆದರೆ ಆ ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಿದಲ್ಲಿ ಮಾತ್ರ ಅತ್ಯುತ್ತಮ.

ವಿದ್ಯಾರ್ಥಿಗಳು: ಉತ್ತಮ ಫಲಿತಾಂಶಗಳು ಲಭಿಸಲಿವೆ. ಅಂದರೆ ನಿಮಗಿದು ಅತ್ಯುತ್ತಮ ಸಮಯ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೂ ಶಾಲಾ- ಕಾಲೇಜು ಪರಿಸರದಲ್ಲಿ ಎಲ್ಲರೂ ಗುರುತಿಸುವಂತೆ ಆಗುತ್ತದೆ.

ಪರಿಹಾರ: ಮೈಸೂರು ಚಾಮುಂಡೇಶ್ವರಿ ದೇವಿ ದರ್ಶನ ಮಾಡಿ ಬನ್ನಿ.

ಸಿಂಹ: ಸ್ಥಳಾಂತರ ಸಾಧ್ಯತೆಗಳು ಗೋಚರಿಸುತ್ತಿವೆ

ಸಿಂಹ: ಸ್ಥಳಾಂತರ ಸಾಧ್ಯತೆಗಳು ಗೋಚರಿಸುತ್ತಿವೆ

ಪುರುಷರು: ಚಿನ್ನ ಖರೀದಿಸಬೇಕು ಎನ್ನುವ ಆಲೋಚನೆ ಬರುತ್ತದೆ. ಆದರೆ ಪರಿಸ್ಥಿತಿ ಅದಕ್ಕೆ ಅನುಕೂಲವಾಗಿ ಇಲ್ಲ ಎನ್ನುವುದು ನಿಮಗೆ ತಿಳಿದಿದೆ. ಕೋರ್ಟು-ಕಚೇರಿಗಳಲ್ಲಿ ವಾಯಿದೆಗಳು ಸಿಗದೆ ಸ್ವಲ್ಪ ಪರದಾಡಬೇಕಾಗುತ್ತದೆ. ಆದರೆ ವೈದ್ಯ ವೃತ್ತಿಯಲ್ಲಿ ಇರುವವರಿಗೆ ತಕ್ಕ ಮಟ್ಟಿಗೆ ಯಶಸ್ಸು ಇದೆ. ರಾತ್ರಿ ಪ್ರಯಾಣಗಳನ್ನು ಆದಷ್ಟು ತಪ್ಪಿಸಲು ಪ್ರಯತ್ನಿಸಿ.

ಇನ್ನು ರಾತ್ರಿ ಪಾಳಿಯ ಉದ್ಯೋಗಿಗಳು ಎಚ್ಚರ ವಹಿಸಿ. ಶನಿವಾರಗಳಲ್ಲಿ ಪ್ರಮುಖರ ಭೇಟಿ ಅಥವಾ ಸಾಲ ಮಾಡುವುದು- ಕೊಡುವುದು ಇಟ್ಟುಕೊಳ್ಳಬೇಡಿ. ಒಳ್ಳೆಯ ವಿಚಾರ ಹೇಳಬೇಕು ಎಂದಾದಲ್ಲಿ ತಿಂಗಳ ಮೊದಲರೆಡು ವಾರಗಳಲ್ಲಿ ಅತ್ಯುತ್ತಮ ಸಮಯ ಕಾಣಬಹುದು.

ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಮಯ ಕಾಣಬಹುದು. ಬಡ್ತಿ ಸಹ ಸಿಗುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆ ಬೇಕಿದ್ದಲ್ಲಿ ತಿಂಗಳ ಮೊದಲ ಎರಡು ವಾರಗಳ ಒಳಗೆ ಮುಗಿಸಿಕೊಳ್ಳಬೇಕು. ಸ್ಥಳಾಂತರದ ಸಾಧ್ಯತೆಗಳು ಸಹ ಕಾಣುತ್ತಿದೆ. ಆರ್ಥಿಕವಾಗಿ ಸಮಾಧಾನಕರವಾಗಿ ಇರುತ್ತದೆ.

ವ್ಯಾಪಾರ ಮಾಡುವವರಿಗೆ ದುಡ್ಡಿನ ಒಳಹರಿವು ಅಂದುಕೊಂಡ ಪ್ರಮಾಣಕ್ಕಿಂತ ಹೆಚ್ಚು ಬರುತ್ತದೆ. ಇನ್ನು ತಿಂಗಳ ಮಧ್ಯ ಹಾಗೂ ಕೊನೆಯ ಭಾಗಕ್ಕೆ ಸರಿದಂತೆ ಭೂಮಿ ಖರೀದಿಗಾಗಿ ಕೈ ಹಾಕಿ, ಕೆಲಸ ಅರ್ಧದಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಿದೆ. ಅದರಲ್ಲಿಯೂ

ನೀವು ಕೊಂಡುಕೊಳ್ಳಬೇಕು ಎಂದು ಕೈ ಹಾಕಿದ ಜಮೀನಿನ ಕಾಗದದ ಪತ್ರ ಸರಿ ಇಲ್ಲದೆ ಸಮಸ್ಯೆ ಆಗುತ್ತದೆ. ನಿಮಗೆ ತಪ್ಪು ಮಾಹಿತಿ ಕೊಡಲಾಗುತ್ತದೆ, ಎಚ್ಚರ.

ಸ್ತ್ರೀಯರು: ಕೌಟುಂಬಿಕವಾಗಿ ಉತ್ತಮವಾಗಿರುತ್ತದೆ. ಬಹಳ ಮುಖ್ಯವಾಗಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಲಭಿಸುತ್ತದೆ. ಈ ಹಿಂದೆ ಇದ್ದ ಜಗಳ- ಮನಸ್ತಾಪ ಎಲ್ಲ ಶಮನ ಆಗುತ್ತದೆ. ನಿಮ್ಮ ಬಾಳಸಂಗಾತಿ ಹಾಗೂ ಮಕ್ಕಳ ಸಹಕಾರ ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸಿಗುತ್ತದೆ.

ಬಹು ಮುಖ್ಯವಾದ ಅಥವಾ ದೊಡ್ಡ ಆರೋಗ್ಯ ಸಮಸ್ಯೆ ಎಂದು ಹೇಳುವಂಥ ಯಾವ ದೊಡ್ಡ ಆರೋಗ್ಯ ಸಮಸ್ಯೆಗಳೂ ಬಾರದು. ಹೊಸದೊಂದು ವ್ಯಾಪಾರ ಮಾಡುವ ಮನಸಾಗುತ್ತದೆ. ಅದಕ್ಕಾಗಿ ಹಣದ ಹೂಡಿಕೆ ಮಾಡಲು ಸಹೋದರರ ಸಹಾಯ ಕೇಳುವ ಸಾಧ್ಯತೆಗಳು ಕಾಣಿಸುತ್ತಿವೆ.

ಸಂತಸದ ವಿಚಾರ ಎಂದರೆ ಹಿರಿಯ ವಯಸ್ಸಿನ ಸ್ತ್ರೀಯರಿಗೆ ಮಗ ಅವಶ್ಯಕವಾದ ಕೆಲ ವಸ್ತುಗಳನ್ನು ಕೊಡಿಸುತ್ತಾನೆ. ಕೆಲವರ ಹೊಗಳಿಕೆಗಳಿಗೆ ಅಟ್ಟ ಹತ್ತಬೇಡಿ. ಎಲ್ಲರನ್ನೂ ಕಣ್ಣು ಮುಚ್ಚಿ ನಂಬಬೇಡಿ.

ವಿದ್ಯಾರ್ಥಿಗಳು: ಹೊಸದಾಗಿ ಏನೋ ಅಧ್ಯಯನ ಮಾಡುವ ಆಸೆ ಇರುವವರಿಗೆ ಅದು ಸಾಧ್ಯ ಆಗುವ ಸಮಯ. ಬಯಸಿದ ವಿದ್ಯಾಲಯಗಳಲ್ಲಿ ಅಥವಾ ತರಗತಿಗಳಲ್ಲಿ ಪ್ರವೇಶ ಲಭಿಸುತ್ತದೆ. ಮಾಸದ ಮಧ್ಯ ಅಥವಾ ಅಂತ್ಯದಲ್ಲಿ ಕೆಲ ದಿನಗಳು ಅನಿವಾರ್ಯವಾಗಿ ತರಗತಿಗೆ ಹೋಗಲು ಆಗದೇ ಇರಬಹುದು. ಆದರೆ ಆ ಸಮಯದಲ್ಲಿ ತಪ್ಪಿಸಿಕೊಂಡ ಪಾಠ ನಂತರ ಕಲಿಯಲು ತೊಂದರೆ ಆಗುವುದಿಲ್ಲ.

ಪರಿಹಾರ: ಈ ತಿಂಗಳಿನಲ್ಲಿ ಸಮಯ ಮಾಡಿಕೊಂಡು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗಿ, ಅಲ್ಲಿ ನದೀ ಸ್ನಾನ ಮಾಡಿ, ದೇವರ ದರ್ಶನ ಮಾಡಿ.

ಕನ್ಯಾ: ಅನಿವಾರ್ಯ ಇಲ್ಲದಿದ್ದಲ್ಲಿ ಖರೀದಿ ಮುಂದೂಡಿ

ಕನ್ಯಾ: ಅನಿವಾರ್ಯ ಇಲ್ಲದಿದ್ದಲ್ಲಿ ಖರೀದಿ ಮುಂದೂಡಿ

ಪುರುಷರು: ಪ್ರತಿ ದಿನದ ಮನೆ ಕೆಲಸ ಮಾಡುವಾಗ ಸಹ ತಿಂಗಳ ಮೊದಲ ಹದಿನೈದು ದಿನಗಳು ಹೆಚ್ಚಿನ ಕಷ್ಟ ಅಥವಾ ಪರಿಶ್ರಮದ ಅವಶ್ಯಕತೆ ಕಾಣಿಸುತ್ತದೆ. ಉದ್ಯೋಗ ಅರಸುತ್ತಾ ಇರುವವರು ನೀವಾಗಿದ್ದಲ್ಲಿ ಈ ತಿಂಗಳ ಅಂತ್ಯದಲ್ಲಿ ತಕ್ಕ ಉದ್ಯೋಗ ಲಭಿಸುವ ಅವಕಾಶ ಹೆಚ್ಚು ಇದೆ. ನಿಮಗೆ ಇದು ಒಂದು ಸಾಮಾನ್ಯವಾದ ಮಾಸ ಎನ್ನಬಹುದು.

ಉದ್ಯೋಗದಲ್ಲಿ ಮಾತ್ರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ. ಬಹಳ ಜಾಗರೂಕರಾಗಿ ಇರಿ. ಬಾಯಿಗೆ ಬಂದಂತೆ ಮಾತನಾಡಿದರೆ ಸಮಸ್ಯೆಗಳನ್ನು ಎದುರಿಸುತ್ತೀರಿ. ದಿನಗಳು ಉರುಳಿದಂತೆ ಬದಲಾವಣೆಗಳು ಕಂಡುಬರುತ್ತವೆ. ಒತ್ತಡಗಳು ಕಡಿಮೆ ಆಗುತ್ತವೆ. ಉದ್ಯೋಗದಲ್ಲಿ ಬದಲಾವಣೆ ಬಯಸುವವರು ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದು.

ಇನ್ನು ಕೆಲವರಿಗೆ ಅವರು ಬಯಸದೇ ಇದ್ದರೂ ಉದ್ಯೋಗ ಬದಲಾವಣೆ ಅನಿವಾರ್ಯ ಆಗಬಹುದು. ಆದಾಯಕ್ಕಿಂತ ಖರ್ಚುಗಳು ಹೆಚ್ಚು ಕಾಣುತ್ತಿವೆ. ಅನಿವಾರ್ಯ ಇಲ್ಲದೇ ಇದ್ದಲ್ಲಿ ಕೆಲ ಖರೀದಿಗಳನ್ನು ಮುಂದೂಡಿದರೆ ಉತ್ತಮ. ಷೇರು ಮಾರುಕಟ್ಟೆಯಲ್ಲಿ
ಸಹ ಲಾಭಕ್ಕಿಂತಲೂ ನಿಮ್ಮ ಹೂಡಿಕೆ ಪ್ರಮಾಣವೇ ಹೆಚ್ಚಾಗಿ ಸಮಸ್ಯೆ ಎನಿಸಬಹುದು. ಕುತ್ತಿಗೆ ನೋವು ಅಥವಾ ಅಶಕ್ತತೆ ಈ ತಿಂಗಳ ನಿಮ್ಮ ಪಾಲಿನ ಆರೋಗ್ಯ ಬಾಧೆ ಎನ್ನಬಹುದು.

ಸ್ತ್ರೀಯರು: ಗೆಳತಿ ಮಾಡಿದ ತಪ್ಪಿಗೆ ನೀವು ಕಷ್ಟ, ಅವಮಾನ ಇತ್ಯಾದಿ ಅನುಭವಿಸಬೇಕಾಗುತ್ತದೆ. ನಿತ್ಯದ ಜೀವನ ಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಅವಶ್ಯ ಮಾಡಿಕೊಳ್ಳಬೇಕಾದ ಸಮಯ. ಕೆಲ ರೂಢಿಗಳಿಂದಾಗಿ ನೀವು ಅಥವಾ ನಿಮ್ಮ ಕುಟುಂಬ ಸದಸ್ಯರು ಅವಮಾನವನ್ನು ಎದುರಿಸ ಬೇಕಾಗಿ ಬರಬಹುದು.

ನಿಮ್ಮ ಮಾತೇ ಅಂತಿಮ ಆಗಬೇಕು, ನೀವು ಬಯಸಿದಂತೆ ನಡೆಯಬೇಕು ಎಂದಾದಲ್ಲಿ ಈ ತಿಂಗಳ ಕೊನೆಯ ತನಕ ಸ್ವಲ್ಪ ಕಾಯಬೇಕು. ಕೆಲವರ ಬಗ್ಗೆ ನಿಮ್ಮ ನಿರ್ಧಾರ ತಪ್ಪು ಆಗಿರಬಹುದು, ಮರುಪರಿಶೀಲಿಸಿ.

ವಿದ್ಯಾರ್ಥಿಗಳು: ಕೇವಲ ಚನ್ನಾಗಿ ಮಾತನಾಡಿದರೆ ಸಾಲದು. ಮಾತಿಗೆ ತಕ್ಕಂತೆ ನಡೆ ಸಹ ಇರಬೇಕಾಗುತ್ತದೆ. ನಿಮಗೆ ಅರಿವು ಇರುವಂತೆಯೇ ಆಲಸ್ಯ ಜಾಸ್ತಿ ಆಗುತ್ತದೆ. ಸಮಸ್ಯೆ ಅಂದರೆ ಆ ಆಲಸ್ಯ ನಿಮ್ಮ ಅಧ್ಯಯನವನ್ನು ಹಾಳು ಮಾಡಲಿದೆ. ನೀವು ಚುರುಕು ಆಗದೇ ಇದ್ದಲ್ಲಿ ನಿಮಗೆ ಓದುವ ವಿಚಾರದಲ್ಲಿ ಆಸಕ್ತಿ ಕಡಿಮೆ ಆಗಿ, ಅಧ್ಯಾಪಕರಿಂದ ಬೈಗುಳ ಲಭಿಸುತ್ತದೆ.

ಪರಿಹಾರ: ಒಮ್ಮೆ ಧರ್ಮಸ್ಥಳದ ಹತ್ತಿರ ಇರುವ ಸೌತಡ್ಕಾ ಮಹಾ ಗಣಪತಿ ದೇಗುಲಕ್ಕೆ ಹೋಗಿ, ದರ್ಶನ ಪಡೆದು, ಪೂಜೆ ಮಾಡಿಸಿ.

ತುಲಾ: ಹಣದ ವಿಚಾರದಲ್ಲಿ ಕಲಹವಿದೆ

ತುಲಾ: ಹಣದ ವಿಚಾರದಲ್ಲಿ ಕಲಹವಿದೆ

ಪುರುಷರು: ಮಾಡಬಾರದ್ದನ್ನು ಮಾಡಿ, ಆಗಬಾರದ್ದು ಆಗಿರುವ ಜನರನ್ನು ನೀವು ನೋಡಿದ್ದೀರಿ. ಆದರೂ ನಿಮಗೆ ನಂಬಿಕೆ ಇಲ್ಲ ಎಂದರೆ, ನಿಮಗೆ ನಂಬಿಕೆ ಬರಲು ಏನು ಮಾಡಬೇಕು ಎಂಬುದು ಮಾತ್ರ ಉತ್ತರ ಇಲ್ಲದ ಪ್ರಶ್ನೆ. ಕೊನೆಯದಾಗಿ ಜನ್ಮ ರಾಶಿಯಲ್ಲಿನ ಗುರು ಇತರರ ಸಹಾಯದಿಂದಾಗಿ ನಿಮಗೆ ಉದ್ಯೋಗ ಸಿಗುವಂತೆ ಮಾಡುತ್ತದೆ.

ಆದರೆ, ಸಿಕ್ಕಿದ ಇದೇ ಚಿಕ್ಕ ಅವಕಾಶವನ್ನು ಮಾತ್ರ ತಪ್ಪಿಸಿಕೊಳ್ಳದೆ ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಮಾತ್ರ ನೆಮ್ಮದಿ ಇದೆ. ಇಲ್ಲದಿದ್ದರೆ ಇಲ್ಲ. ಆದಿಯಲ್ಲಿ ನಿಮ್ಮಲ್ಲಿ ಸದೃಢ ಮನಸ್ಸು ಹಾಗೂ ನೆಮ್ಮದಿ ಕಂಡುಬರುತ್ತದೆ. ಒಂದು ವೇಳೆ
ಯಾವುದೋ ಕಾರಣಗಳಿಂದ ದುಃಖ ಆದರೂ ಬಾಳ ಸಂಗಾತಿ ಅಥವಾ ಸ್ನೇಹಿತರು ಆಡುವ ಧೈರ್ಯದ ಮಾತುಗಳಿಂದ ಮತ್ತೆ ಸಂತೋಷದಿಂದ ಇರುತ್ತೀರಿ.

ನೀವು ಮಾಡಿದ ಖರ್ಚು ಅಥವಾ ಇನ್ನೊಂದಕ್ಕೆ ಏನೇ ಇರಲಿ ಹಣದ ವಿಚಾರದಲ್ಲಿ ತಿಂಗಳ ಮಧ್ಯ ಭಾಗದಲ್ಲಿ ಕುಟುಂಬದಲ್ಲಿ ಸ್ವಲ್ಪ ಕಲಹ ಸಂಭವಿಸುವುದು. ಪೂರ್ವಜರ ಆಸ್ತಿ ಹಂಚಿಕೆ ಆಗದೇ ಉಳಿದಿದ್ದಲ್ಲಿ, ಆ ಆಸ್ತಿ ಮೇಲೆ ನಿಮಗೆ ಆಸೆ ಇದ್ದಲ್ಲಿ ಆ ವಿಚಾರವಾಗಿ ಮಾತುಕತೆ ಮಾಡಿ, ಫಲಿಸಬಹುದು.

ಆದರೂ ಯಾವುದೋ ಒಂದು ಅನಿರೀಕ್ಷಿತ ಕಾರಣಗಳಿಂದ ನಿಮಗೆ ಬರಬೇಕಾದ ಪಾಲು ಸಂಪೂರ್ಣ ನಿಮಗೆ ಸಿಗುವುದಿಲ್ಲ. ಸಿಟ್ಟು ಮಾಡಿಕೊಂಡು ನಿಮ್ಮನ್ನು ಬಿಟ್ಟು ಹೋದ ಗೆಳೆಯ ನೆನಪಾಗಿ ಬಹಳ ಕಾಡುತ್ತಾನೆ. ಹೋಗಲಿ, ನೀವೇ ಹೋಗಿ ಸಮಾಧಾನ ಮಾಡಲು ನಿಮ್ಮ ಅಹಂ ಒಪ್ಪುವುದಿಲ್ಲ.

ಸ್ತ್ರೀಯರು: ವ್ಯಾವಹಾರಿಕವಾಗಿ ನೋಡಿದಾಗ ಮಾತ್ರ ಖರ್ಚು ಹೆಚ್ಚು ಕಾಣಿಸುತ್ತಿದೆ. ಆದರೆ ಸಮಯಕ್ಕೆ ಸರಿಯಾಗಿ ದುಡ್ಡು ಸಿಗುತ್ತದೆ ಎಂಬುದೇ ಆಶ್ಚರ್ಯಕರ. ನಿಮ್ಮ ಆರ್ಥಿಕ ಸ್ಥಿತಿ ವಿಚಿತ್ರವಾಗಿ ಇರುತ್ತದೆ. ಪ್ರಯತ್ನಿಸಿದರೆ ಮಾತ್ರ ನಿಮಗೆ ಸಂತೋಷಕ್ಕೆ ಏನೂ ಕೊರತೆ
ಇರುವುದಿಲ್ಲ. ನಿಮ್ಮ ಮನಸಿನಲ್ಲಿ ಇರುವ ಭಯ ಎಲ್ಲಾ ಬಿಟ್ಟು ಇರಬೇಕಾದ ತಿಂಗಳು ಇದು.

ಹಣಕಾಸಿನ ವ್ಯವಹಾರಗಳಿಂದ ಆದಷ್ಟೂ ದೂರವಿರಿ. ತಿಂಗಳಿನ ಮೊದಲ ಅರ್ಧ ಭಾಗದ ತನಕ ಅಷ್ಟಾಗಿ ಯಶಸ್ಸು ಸಿಗದು. ಆದರೆ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಲಭಿಸುತ್ತದೆ. ಮಾಸಿಕ ಋತು ಚಕ್ರದ ಸಮಸ್ಯೆಯಾಗಬಹುದು. ಆ ಆರೋಗ್ಯ ಬಾಧೆ ಇಲ್ಲದಿದ್ದರೆ ಮಾತ್ರ ಇನ್ಯಾವ ಸಮಸ್ಯೆಯೂ ಆಗುವುದಿಲ್ಲ.

ಇಬ್ಬರು ಅಥವಾ ಅದಕ್ಕೂ ಹೆಚ್ಚಿನ ಜನರಿಗಾಗಿ ಅಡುಗೆ ಮಾಡಬೇಕಾದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬಂದಲ್ಲಿ ಬೇರೆ ಸ್ತ್ರೀಯರ ಸಹಾಯ ಪಡೆದರೆ ಉತ್ತಮ. ಏಕೆಂದರೆ ನೀವೊಬ್ಬರೆ ಅಡುಗೆ ಮಾಡುವ ಪ್ರಯತ್ನ ಮಾಡಿದರೆ ಅದು ಹಾಳಾಗುತ್ತದೆ.

ವಿದ್ಯಾರ್ಥಿಗಳು: ಊರಿಗೆ ಬಂದವರು ನೀರಿಗೆ ಬಾರದೇ ಇರುತ್ತಾರೆಯೆ? ನಿಮ್ಮ ಬಳಿ ಸಹಾಯ ಕೇಳಿ ಬಂದೇ ಬರುತ್ತಾರೆ; ಆ ವಿಚಾರ ನಿಮಗೂ ಗೊತ್ತಿದೆ. ಸಂಘಟನೆ ಮಾಡಲು ನಿಮಗೆ ಉತ್ತಮ ಸಹಕಾರ ಲಭಿಸುತ್ತದೆ. ಅಧ್ಯಾಪಕರಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ.

ಹೇಗಿದ್ದರೂ ಅಪಾರವಾದ ನಂಬಿಕೆ ಇದೆ ಎನ್ನುವ ಒಂದೇ ಕಾರಣಕ್ಕೆ ಸುಳ್ಳು ಮಾತ್ರ ಹೇಳಬೇಡಿ. ಹಾಗೆ ಮಾಡಿದರೆ ತಕ್ಷಣ ಸಿಕ್ಕಿಬೀಳುತ್ತೀರಿ.

ಪರಿಹಾರ: ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ದರ್ಶನ ಮಾಡಿಕೊಂಡು, ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಬನ್ನಿ.

ವೃಶ್ಚಿಕ: ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರುತ್ತದೆ

ವೃಶ್ಚಿಕ: ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರುತ್ತದೆ

ಪುರುಷರು: ತಿಂಗಳ ಮೊದಲ ಎರಡು ವಾರ ಸ್ವಲ್ಪ ಆರ್ಥಿಕ ಮುಗ್ಗಟ್ಟು ಇದ್ದಂತೆ ಕಂಡರೂ ಕ್ರಮೇಣ ಸರಿಹೋಗುತ್ತಾ ಬರುತ್ತದೆ. ಕುಟುಂಬದಲ್ಲಿ ಅಥವಾ ಅತೀ ಹತ್ತಿರದ ಸ್ನೇಹ ಬಳಗದಲ್ಲಿ ನಿಮ್ಮ ವರ್ಚಸ್ಸು ಕಡಿಮೆ ಆದಂತೆ ಅನಿಸಬಹುದು. ಪಿತ್ರಾರ್ಜಿತ ಆಸ್ತಿಯ ಹೆಸರಿನಲ್ಲಿ ಭೂಮಿ ಬರಬೇಕಾದುದು ಇದ್ದಲ್ಲಿ ಪ್ರಯತ್ನಿಸಿದರೆ ಯಶಸ್ಸು ಕಾಣುತ್ತದೆ.

ತಿಂಗಳ ಮಧ್ಯ ಭಾಗದ ನಂತರ ಆದಾಯ ಹೆಚ್ಚಾಗಿ, ಖರ್ಚು ಹೆಚ್ಚಾಗುತ್ತದೆ. ಆದುದರಿಂದ ಹೊರೆ ಎಂದು ಅನಿಸುವುದಿಲ್ಲ. ಸಹೋದರರೊಡನೆ ಅಥವಾ ಸೋದರ ಮಾವನ ಜೊತೆಗೂಡಿ ದೂರ ಪ್ರಯಾಣಿಸಬೇಕಾದ ಸಂದರ್ಭಗಳು ಬರುವ ಸಾಧ್ಯತೆಗಳು ಇವೆ. ಸರಕಾರಿ ನೌಕರರು ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿದ್ದಲ್ಲಿ ಈ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಆಗಲಿಲ್ಲ ಎಂದಾದಲ್ಲಿ ಆ ನಂತರ ಆಗುವುದು ಕಷ್ಟ.

ಮಕ್ಕಳ ವಿದ್ಯಾಭ್ಯಾಸವು ನೆಮ್ಮದಿ ಕೆಡಿಸಬಹುದು. ಆದರೂ ಚಿಂತಿಸುತ್ತಾ ಕೂರದೆ ಆ ಸಮಸ್ಯೆಗೆ ಪರ್ಯಾಯ ಮಾರ್ಗ ಹುಡುಕುವುದು ಶ್ರೇಷ್ಠ ! ಕೆಲವರು ನಿಮ್ಮ ಮುಖ ಸ್ತುತಿಯನ್ನು ಮಾಡಿ, ನಿಮ್ಮಿಂದ ಕೆಲ ಪ್ರಮುಖವಾದ ಕೆಲಸ- ಕಾರ್ಯಗಳನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಎಚ್ಚರ.

ಏಕೆಂದರೆ, ಆ ಕೆಲಸ ಮಾಡಿಕೊಡುವುದರಿಂದ ನಂತರ ನಿಮ್ಮ ಹೆಸರು ಹಾಳಾಗಬಹುದು. ನೀವು ಜ್ಯೇಷ್ಠಾ ನಕ್ಷತ್ರದ ವೃಶ್ಚಿಕ ರಾಶಿಯವರಾಗಿದ್ದಲ್ಲಿ, ವಿವಾಹ ನಿಶ್ಚಯ ಆಗಿದ್ದಲ್ಲಿ ದಿನಾಂಕಗಳು ಮುಂದೆ ಹೋಗುವ ಸಾಧ್ಯತೆಗಳಿವೆ.

ಸ್ತ್ರೀಯರು: ಶಾರೀರಿಕವಾಗಿ ನಿಮ್ಮಲ್ಲಿ ಆಲಸ್ಯ ಹೆಚ್ಚಾಗುತ್ತದೆ. ಆದರೆ ಅದು ಮೊದಲ ಎರಡು ವಾರ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಮನೆಯಲ್ಲಿ ಪೂಜೆ- ಪುನಸ್ಕಾರ ಇತ್ಯಾದಿ ಕೈಂಕರ್ಯಗಳನ್ನು ನೆರವೇರಿಸುವತ್ತ ಗಮನ ಹೆಚ್ಚಾಗಲಿದೆ. ಖಾಸಗಿ ಸಂಸ್ಥೆಯ
ಉದ್ಯೋಗಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಕ್ಕಿದಂತೆ ಅನಿಸಿದರೂ ನಂತರದಲ್ಲಿ ಒತ್ತಡ ಹೆಚ್ಚಾಗುತ್ತದೆ.

ನೀವು ಮಾಡದ ತಪ್ಪಿಗೆ ಅಪವಾದ ಹೊತ್ತು ಶಿಕ್ಷೆ ಸಹ ಅನುಭವಿಸುವಂತಾದಲ್ಲಿ ಆಶ್ಚರ್ಯವಿಲ್ಲ. ಬ್ಯಾಂಕ್ ಅಥವಾ ಕದಾಯ ಇಲಾಖೆ ಅಥವಾ ಯಾವುದೇ ಉದ್ಯೋಗದಲ್ಲಿ ಹಣವನ್ನು ಎಣಿಸಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಹೊತ್ತವರುವ್ಯವಹರಿಸುವಾಗ ಎಚ್ಚರವಿರಲಿ.

ವಿದ್ಯಾರ್ಥಿಗಳು: ಏನು ಕೇಳಬೇಕು, ಎಷ್ಟು ಕೇಳಬೇಕು ಎನ್ನುವ ಒಂದು ವಿಧಾನ ಇರುತ್ತದೆ. ಆ ವಿಚಾರ ನೀವು ಕಲಿಯಬೇಕಾದ ಅನಿವಾರ್ಯ ಇದೆ ಅನಿಸುತ್ತಿದೆ. ನಿಷ್ಠುರ ಗುಣ ಬಿಡಬೇಕು. ಹೊಂದಾಣಿಕೆ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸುಂದರ ಹಾಗೂ ಸುಖಕರ ಜೀವನ ನಡೆಸಲು ಸಾಧ್ಯ.

ಪರಿಹಾರ: ಪ್ರತೀ ದಿನ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರವನ್ನು ಪಠಿಸಿ ಅಥವಾ ಶ್ರವಣ ಮಾಡಿ. ಅದೂ ಆಗದವರು ಪ್ರತೀ ದಿನ ಕನಿಷ್ಠ ನೂರೆಂಟು ಸಲ 'ಓಂ ಶ್ರೀ ಲಲಿತಾ ತ್ರಿಪುರ ಸುಂದರ್ಯೈ ನಮಃ' ಜಪ ಮಾಡಿ.

ಧನು: ಅಂದಾಜಿಗಿತ ಹೆಚ್ಚಿನ ಖರ್ಚುಗಳು ಆಗುತ್ತವೆ

ಧನು: ಅಂದಾಜಿಗಿತ ಹೆಚ್ಚಿನ ಖರ್ಚುಗಳು ಆಗುತ್ತವೆ

ಪುರುಷರು: ನಿಮ್ಮ ಅಂದಾಜಿನ ಪ್ರಕಾರ ಖರ್ಚುಗಳು ಇರುವುದಿಲ್ಲ. ಅದಕ್ಕಿಂತ ಹೆಚ್ಚು ಆಗುತ್ತದೆ. ಎಲ್ಲೆಲ್ಲಿಂದ ನಿಮಗೆ ದುಡ್ಡು ಬರುವುದಿದೆ, ಇನ್ನೂ ಯಾರು ದುಡ್ಡು ಕೊಡಬೇಕು ಇತ್ಯಾದಿ ವಿಚಾರ ಹೆಚ್ಚು ಯೋಚನೆ ಮಾಡುತ್ತಾ, ಅಲ್ಲಿ ಹೆಚ್ಚು ಪ್ರಯತ್ನ ಮಾಡುತ್ತೀರಿ. ನಿಮ್ಮ ಕೆಲಸಗಳು ನಿಧಾನ ಆಗುತ್ತವೆ.

ಆದರೆ, ಸಂತಸದ ವಿಚಾರ ಎಂದರೆ ನಿಧಾನ ಆದರೂ ನಿಮ್ಮ ಪರವಾಗಿ ಆಗುತ್ತದೆ. ಹೆಂಡತಿಯೊಂದಿಗೆ ವಿರಸ ಕಡಿಮೆ ಆಗಿ, ಅನ್ಯೋನ್ಯತೆ ಹೆಚ್ಚುತ್ತದೆ. ಒಟ್ಟಿನಲ್ಲಿ ಹೇಳಬೇಕು ಎಂದರೆ, ದಾಂಪತ್ಯ ಸುಖವಾಗಿ ಇರುತ್ತದೆ. ಕೆಲ ಕಾರ್ಯಕ್ರಮಗಳಿಗೆ ನೀವೇ ಪ್ರಧಾನ ಆಗುತ್ತೀರಿ. ಇನ್ನು ಕೆಲವರ ಕೆಲ ಪ್ರಧಾನ ಕೆಲಸಗಳಿಗೆ ನಿಮಗೆ ಪಾಳ್ಗೊಳ್ಳುವಂತೆ ಕರೆ ಬರಬಹುದು.

ಇನ್ನು ಮಾಸದ ಮಧ್ಯ ಅಥವಾ ಅಂತ್ಯಕ್ಕೆ ಸರಿದಂತೆ ನಿಮ್ಮ ಆಪ್ತರಿಗೆ ಆರೋಗ್ಯ ಬಾಧೆ ಇರುವುದು ಅರಿವಿಗೆ ಬರಬಹುದು. ಅದೇ ಅಥವಾ ಇಂಥ ವಿಭಿನ್ನ ಕಾರಣಗಳಿಂದಾಗಿ ನಿಮ್ಮ ಎಷ್ಟೋ ಕೆಲಸ- ಕಾರ್ಯಗಳು ಮುಂದೂಡುತ್ತೀರಿ. ನಿಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು. ಅದಕ್ಕೆ ಸಹಾಯ- ಮಾರ್ಗದರ್ಶನ ಕೇಳುತ್ತಾರೆ ಅಥವಾ ಅವರ ವಿದ್ಯಾಭ್ಯಾಸದ ವಿಚಾರವಾಗಿ ಖರ್ಚು ಹೆಚ್ಚು ಬರಬಹುದು.

ವ್ಯಾಪಾರ ಮಾಡುವವರು ಮಧ್ಯವರ್ತಿಗಳು ಪೂರ್ಣವಾಗಿ ನಂಬಿ ಕೆಲಸ- ಕಾರ್ಯಗಳು ಮಾಡಬೇಡಿ ಅಥವಾ ಹಣ ಹೂಡಿಕೆ ಮಾಡಬೇಡಿ. ನಿಮ್ಮ ನಿತ್ಯದ ಹಳೆಯ ವಿಧಾನದಲ್ಲಿಯೇ ಉತ್ತಮ ವ್ಯಾಪಾರ ನಿಮಗೆ ಲಭಿಸುತ್ತದೆ.

ಸ್ತ್ರೀಯರು: ಮನೆಯನ್ನು ಬದಲಾಯಿಸುವ ಪ್ರಮೇಯ ಬರಬಹುದು ಅಥವಾ ನೀವು ನಿತ್ಯ ಕೆಲಸ ಮಾಡುವ ಅಡುಗೆ ಮನೆಯಲ್ಲಿ ಕೆಲ ಬದಲಾವಣೆಗಳು ಆಗಬಹುದು ಅಥವಾ ನೀವು ಮಾಡಿಕೊಳ್ಳಬಹುದು. ನೀವು ಸ್ವಂತಂತ್ರವಾಗಿ ವ್ಯಾಪಾರ- ವ್ಯವಹಾರ ಮಾಡುತ್ತಾ ಇದ್ದಲ್ಲಿ ಅವುಗಳು ಒಂದು ಉತ್ತಮ ಲಾಭ ತರುವ ಸ್ಥಿತಿಗೆ ಬರುತ್ತದೆ.

ಈ ಹಿಂದೆ ಆಗಿದ್ದ ನಷ್ಟಗಳನ್ನು ಈಗ ಸರಿತೂಗಿಸಬಹುದು. ಅನ್ಯರ ಸಹಭಾಗಿತ್ವದಲ್ಲಿ ವ್ಯವಹಾರ ಆರಂಭಿಸುವ ಪ್ರಯತ್ನ ಈ ಹಿಂದಿನಿಂದ ಮಾಡುತ್ತಾ ಇದ್ದಲ್ಲಿ ಈಗ ಅದಕ್ಕೆ ಒಂದು ಉತ್ತಮ ರೂಪುರೇಷೆ ಬರುವ ಕಾಲ. ಮಾತುಕತೆ ಸಫಲತೆ ಕಾಣುತ್ತದೆ. ಅವಿವಾಹಿತೆ ಆಗಿದ್ದಲ್ಲಿ ತಕ್ಷಣ ವಿವಾಹದ ವಿಚಾರದಲ್ಲಿ ಪ್ರಯತ್ನ ಹೆಚ್ಚು ಮಾಡಿ. ನಿಮಗೆ ಗುರು ಬಲ ಇರುವ ಕೊನೆ ತಿಂಗಳು ಇದು ಆದುದರಿಂದ ತಡ ಮಾಡಬೇಡಿ.

ವಿದ್ಯಾರ್ಥಿಗಳು: ಆಶಾವಾದಿ ಆಗುತ್ತೀರಿ. ಪರೀಕ್ಷೆಗಳು ಉತ್ತಮವಾಗಿ ಸಾಗುತ್ತವೆ. ಉತ್ತಮ ನಿರೀಕ್ಷಿತ ಫಲಿತಾಂಶ ಬಂದೇ ಬರುತ್ತದೆ ಅನ್ನುವಂಥ ಆಶಾವಾದಿ ಆಗುತ್ತೀರಿ. ವೃತ್ತಿ ತರಬೇತಿ ಶಿಕ್ಷಣ ಪಡೆಯುತ್ತಾ ಇರುವ ವಿದ್ಯಾರ್ಥಿಗಳೇ ಈ ಬಾರಿ ಕಪ್ ನಿಮ್ಮದೇ! ಇನ್ನೂ
ಪರೀಕ್ಷೆ ಮುಗಿಯದೇ ಇದ್ದರೂ ನಿಮ್ಮನ್ನು ಕೆಲಸಕ್ಕೆ ಬರುವಂತೆ ಕರೆಯುತ್ತಾರೆ.

ಪರಿಹಾರ: ತಾಮ್ರದ ತಗಡಿನಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಯಂತ್ರ ಬರೆಸಿ, ಅಭಿಮಂತ್ರಿಸಿ, ಮೂರು ದಿನ ಪೂಜಿಸಿದ ಯಂತ್ರವನ್ನು ಮನೆಯಲ್ಲಿ ಇಟ್ಟು ಪೂಜಿಸಿ.

ಮಕರ: ಜಗಳ ಮಾಡಲು ಹೋಗದಿರಿ, ಕೆಟ್ಟ ಹೆಸರು ಬಂದೀತು

ಮಕರ: ಜಗಳ ಮಾಡಲು ಹೋಗದಿರಿ, ಕೆಟ್ಟ ಹೆಸರು ಬಂದೀತು

ಪುರುಷರು: ಎಲ್ಲಾ ಇದೆ, ಎಲ್ಲಾ ಅನುಕೂಲಗಳೂ ಇವೆ. ಆದರೆ ಅವುಗಳಿಂದ ಪ್ರಯೋಜನ ಮಾತ್ರ ಏನೂ ಕಾಣುತ್ತಾ ಇಲ್ಲ. ಆಗುತ್ತಾ ಕೆಲ ಹಿನ್ನಡೆಗಳಂತೂ ನಿಮಗೆ ಪ್ರಯತ್ನ ಮಾಡುವ ಹುಮ್ಮಸ್ಸನ್ನೇ ಹಾಳು ಮಾಡುವ ಸಾಧ್ಯತೆಗಳಿವೆ. ಹಾಗಾಗದಂತೆ ಎಚ್ಚರ ವಹಿಸಿ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ನಷ್ಟ ಕಾಣುತ್ತಿದೆ.

ಭೂಮಿಯ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ಅಂಟು ಬುದ್ಧಿಯ ಜಿಪುಣ ಗಿರಾಕಿ ಸಿಕ್ಕು, ಲಾಭದ ಪ್ರಮಾಣ ಸಹ ಕಡಿಮೆ ಮಾಡಿಬಿಡುತ್ತಾರೆ. ಹೋಗಲಿ ಲಾಭ ಕಡಿಮೆ ಬಂದರೂ ಸಹ ವ್ಯಾಪಾರ ಆಗಲಿ ಅಂದರೆ ಅದನ್ನೂ ನಿಧಾನ ಮಾಡುತ್ತಾ ಪರಿಸ್ಥಿತಿಯು ಅತ್ತ ನುಂಗಲೂ ಆಗದ, ಇತ್ತ ಉಗುಳಲೂ ಇಷ್ಟ ಪಡದ ಬಿಸಿ ತುಪ್ಪದ ಹಾಗೆ ಇರುತ್ತದೆ.

ನ್ಯಾಯಾಲಯಗಳಲ್ಲಿ ಮಾತ್ರ ಸ್ವಲ್ಪ ನೆಮ್ಮದಿಯ ಫಲ ಸಿಗುವ ಸೂಚನೆಗಳು ಇವೆ. ಆದರೆ ನೀವು ಮಾತು ಕಡಿಮೆ ಮಾಡಿ, ಅವರ ಸಂಧಾನ ಸೂತ್ರಗಳಿಗೆ ತಲೆ ಆಡಿಸಬೇಕಾಗಬಹುದು. ನಿಮ್ಮ ಶರೀರದಲ್ಲಿ ಶಕ್ತಿ ಇದ್ದರೂ ಆಲಸ್ಯ ಮಾತ್ರ ಹೆಚ್ಚು ಆಳುತ್ತದೆ. ಅದರ ಪರಿಣಾಮವಾಗಿ ಕಾಲು ನೋವು ಹೆಚ್ಚು ಅನುಭವಿಸ ಬೇಕಾಗುತ್ತದೆ.

ನೀವು ಮಾತು ಕಡಿಮೆ ಮಾಡಿ, ಇಲ್ಲ ಎಂದರೆ ಜಾಸ್ತಿ ಮಾತನಾಡಬೇಡ ಎನ್ನುವ ಸಲಹೆಗಳು ಹೆಚ್ಚು ಬರುತ್ತವೆ. ಅಪರಿಚಿತರೊಂದಿಗೆ ಜಗಳ ಮಾಡಲು ಹೋಗದಿರಿ. ಹಾಗೆ ಜಗಳ ಮಾಡಿದಲ್ಲಿ ತಪ್ಪು ನಿಮ್ಮದೇ ಎನ್ನುವ ತೀರ್ಮಾನ ಬರುತ್ತದೆ. ಏಕೆಂದರೆ ಈ ಜಗಳದ ಮಧ್ಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ನಿಮ್ಮ ಬಾಯಲ್ಲಿ ಅಪ ಶಬ್ದ ಬರುವ ಸಾಧ್ಯತೆ ಹೆಚ್ಚು.

ಸ್ತ್ರೀಯರು: ಬಂಗಾರ, ಭೂಮಿ ಇತ್ಯಾದಿ ಬೆಲೆ ಬಾಳುವ ವಸ್ತುಗಳ ಖರೀದಿಯತ್ತ ನಿಮ್ಮ ಮನಸು ವಾಲಬಹುದು. ಕೆಲವರು ಯಶಸ್ವಿಯಾಗಿ ತೆಗೆದುಕೊಳ್ಳಲೂ ಬಹುದು. ಬಹಳ ದಿನಗಳಿಂದ ಆಸೆ ಪಡುತ್ತಿದ್ದ ಕ್ಷೇತ್ರ ದರ್ಶನ ಈ ತಿಂಗಳು ಆಗುವ ಸಾಧ್ಯತೆಗಳಿವೆ. ಅದೂ ಸಂಕ್ರಮಣ ಸಮಯದಲ್ಲಿ ಪ್ರಯತ್ನಿಸಿದರೆ ಮಾತ್ರ.

ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಗೌರವಾಭಿಮಾನಗಳು ಲಭಿಸುತ್ತವೆ. ಅದರಲ್ಲಿ ಅನುಮಾನ ಬೇಡ. ಒಂದು ಪಕ್ಷ ನಿಮ್ಮನ್ನು ವಿರೋಧಿಸುವವರೂ ತಾತ್ಕಾಲಿಕವಾಗಿ ಪರವೇ ನಿಲ್ಲುತ್ತಾರೆ. ಇನ್ನು ಆಡುಗೆ ಮನೆಯಲ್ಲಿ ಅಥವಾ ಎಲ್ಲೇ ಆದರೂ ಎಣ್ಣೆ ಪದಾರ್ಥಗಳಿಂದ ಎಚ್ಚರ ವಹಿಸಿ. ಅದರ ಉತ್ಪನ್ನಗಳಿಂದಲೂ ತೊಂದರೆ ಆಗಬಹುದು.

ಸಂತೋಷದ ವಿಚಾರ ಎಂದರೆ ತವರು ಮನೆಯಲ್ಲಿ ಭೂಮಿ ವಿಚಾರವಾಗಿ ನಿಮಗೆ ಸಮಾಧಾನ ಆಗುವ ಉತ್ತರ ಅಥವಾ ಪ್ರತಿಕ್ರಿಯೆ ದೊರಕುತ್ತದೆ. ಸಹಾಯ ಬೇಡಲು ಯಾರ ಬಳಿಯೂ ಹೋಗದಿರಿ. ಏಕೆಂದರೆ ನಿಮ್ಮನ್ನು ಬಹಳ ತುಚ್ಛವಾಗಿ ಕಾಣುತ್ತಾರೆ. ದುರುಪಯೋಗಕ್ಕೂ ಪ್ರಯತ್ನಿಸಬಹುದು.

ವಿದ್ಯಾರ್ಥಿಗಳು: ನೆನಪಿನ ಶಕ್ತಿಯ ತೊಂದರೆ, ಮರೆವು ಹೆಚ್ಚು ಆಗಿದೆ ಎನ್ನುವ ಭ್ರಮೆಯಲ್ಲಿ ನೀವು ಇದ್ದೀರಿ. ಅದನ್ನು ಬಿಟ್ಟು, ಓದುವ ಸಮಯ ಹೆಚ್ಚು ಮಾಡಿ. ಆಗ ತಾನಾಗಿಯೇ ಅದರ ಫಲಿತಾಂಶ ತಿಳಿಯುತ್ತದೆ. ಭಾಷಣ ಇತ್ಯಾದಿ ಸ್ಪರ್ಧೆಗಳು ಇದ್ದಲ್ಲಿ ಅದರಲ್ಲಿ

ಪಾಲ್ಗೊಳ್ಳಬೇಡಿ. ಏಕೆಂದರೆ, ಅದರಲ್ಲಿ ನೀವು ಪಾಲ್ಗೊಂಡು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತೀರಿ.


ಅದೇ ಸಮಯವನ್ನು ಓದುವುದಕೆ ಬಳಸಿದಲ್ಲಿ ಹೆಚ್ಚಿನ ಪ್ರಯೋಜನ ಲಭಿಸುತ್ತದೆ. ವಾಣಿಜ್ಯ ವಿದ್ಯಾರ್ಥಿಗಳು ಬಹಳ ಹೆಚ್ಚಿನ ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಓದಬೇಕಾದ ಅನಿವಾರ್ಯ ಕಂಡು ಬರುತ್ತಿದೆ.

ಪರಿಹಾರ: "ಸರ್ವ ಮಂಗಲ ಮಾಂಗಲ್ಯೇ ...." ಈ ಪೂರ್ಣ ಶ್ಲೋಕ ಬಳಸಿ ಸಂಪುಟೀ ವಿಧಾನದಲ್ಲಿ ಶ್ರೀ ಸಪ್ತಶತೀ ಚಂಡಿಕಾ ಪಾರಾಯಣ ಮಾಡಿಸಿ.

ಕುಂಭ: ವ್ಯವಹರಿಸುವಾಗ ಮಾತಿನ ಮೇಲೆ ಹಿಡಿತ ಇರಲಿ

ಕುಂಭ: ವ್ಯವಹರಿಸುವಾಗ ಮಾತಿನ ಮೇಲೆ ಹಿಡಿತ ಇರಲಿ

ಪುರುಷರು: ಸಾಮಾಜಿಕ ಕಳಕಳಿ ಬಹಳ ಮುಖ್ಯವಾಗಿ ಇರಬೇಕು. ಆದರೆ ಅದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಇರಬೇಕು. ಕೇವಲ ಉತ್ತಮ ವಿಚಾರಗಳನ್ನು ಲೈಕ್- ಶೇರ್ ಮಾಡಿ ಮುಗಿಸಿದರೆ ಸಾಲದು. ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ನಿಮಗೆ ಬುದ್ಧಿವಾದ ಹೇಳಲು ಬಂದರೆ ವಿಚಾರಗಳು ಓವರ್ ಡೋಸ್ ಆಗುತ್ತಿದೆ ಅನಿಸುತ್ತದೆ, ಸಾಕು ಅನಿಸುತ್ತದೆ. ಆದರೂ ಅವು ಸತ್ಯ. ವ್ಯಾಪಾರದಲ್ಲಿ ಸಾಲ ಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗುತ್ತದೆ. ಅವರಿಗೆ ಸಾಲ ಕೊಟ್ಟರೆ ನಿಮ್ಮ ಲಾಭದ ಲೆಕ್ಕಾಚಾರ ಬುಡಮೇಲಾಗುತ್ತದೆ.

ಕೆಲ ಪ್ರಮುಖವಾದ ಕೆಲಸ- ಕಾರ್ಯಗಳು ಆಗಬೇಕಾದಲ್ಲಿ ದೂರ ಪ್ರಯಾಣ ಮಾಡಲೇಬೇಕಾದ ಅನಿವಾರ್ಯ ಇದೆ. ಚಲನಚಿತ್ರ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಹೇರಳವಾಗಿ ಬರುವ ಸಮಯ! ವ್ಯವಹರಿಸುವಾಗ ನಿಮ್ಮ ಮಾತಿನ ಮೇಲೆ ಹಿಡಿತ, ಪ್ರಜ್ಞೆ ಇರಲಿ ಸಾಕು.

ವಿದೇಶ ಪ್ರಯಾಣ ಸ್ವಲ್ಪದರಲ್ಲಿಯೇ ತಪ್ಪಿ ಹೋಗುತ್ತಿದೆ ಎಂದಾದಲ್ಲಿ ಆ ಎಲ್ಲ ವಿಘ್ನಗಳು ನಿವಾರಣೆ ಆಗಿ, ನಿರ್ವಿಘ್ನವಾಗಿ ಪ್ರಯಾಣ ಬೇಳೆಸುತ್ತೀರಿ. ಆದರೆ ನಿಮ್ಮ ಕಾಗದ- ಪತ್ರಗಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ನಿಮ್ಮದಲ್ಲದ ಊರಿನಲ್ಲಿ ಕಾನೂನಾತ್ಮಕ ತೊಂದರೆಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ ಹಾಗೂ ಅದರಿಂದ ಸುರಕ್ಷಿತವಾಗಿ ತಪ್ಪಿಸಿಕೊಂಡು ಬರುವ ಯೋಗ ಬಹಳ ಕಡಿಮೆ ಜನರಿಗೆ ಮಾತ್ರ ಇದೆ. ಸಂಗೀತಗಾರರಿಗೆ ಅವಕಾಶಗಳು ಹೇರಳವಾಗಿ ಬಂದರೂ ಆರೋಗ್ಯ ಕೈ ಕೊಟ್ಟು, ಅವಕಾಶಗಳನ್ನು ಕೈ ಚೆಲ್ಲ ಬೇಕಾದ ಪರಿಸ್ಥಿತಿ ಕಾಣುತ್ತಿದೆ.

ಸ್ತ್ರೀಯರು: ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ಕೆಲಸದಲ್ಲಿ ಒತ್ತಡ. ನಿಗದಿತ ಸಮಯದಲ್ಲಿ ಅಂದುಕೊಂಡಂತೆ ಕೆಲಸಗಳನ್ನು ಮುಗಿಸಲು ತೀವ್ರ ಒದ್ದಾಟ. ಗೆಳತಿಯರೊಂದಿಗೆ ಸೇರಿ ಮಾಡುತ್ತಿದ್ದ ವ್ಯಾಪಾರದಲ್ಲಿ ಚಿಕ್ಕ- ಪುಟ್ಟ ಮನಸ್ತಾಪ ಹೆಚ್ಚುತ್ತದೆ. ತಿಂಗಳ ಅಂತ್ಯದಲ್ಲಿ ಕೆಲವರಿಗೆ ಮಾತ್ರ ಸ್ವಲ್ಪ ವಿಭಿನ್ನವಾಗಿರುತ್ತದೆ

ಅಂಗೈನಲ್ಲಿ ಕಾಣುವುದು ಬಾಯಿಗೆ ಮಾತ್ರ ಸಿಗುವುದಿಲ್ಲ. ಇಷ್ಟಪಟ್ಟ ಹುಡುಗ ಕಾಡಿಸುತ್ತಿದ್ದಾನೆ ಅನಿಸುತ್ತದೆ. ಚಲನಚಿತ್ರದಲ್ಲಿ ಅಭಿನಯದ ಅವಕಾಶಕ್ಕಾಗಿ ಕಾಯುತ್ತಾ ಕುಳಿತಿರುವವರಿಗೆ ಅವಕಾಶಗಳು ಸಿಗುತ್ತವೆ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಖರ್ಚುಗಳು ಹೆಚ್ಚುತ್ತವೆ. ಆದರೆ ಅದರ ಬಗ್ಗೆ ಹೆಚ್ಚು ಯೋಚನೆ ಮಾಡಬೇಡಿ. ಖರ್ಚಿಗೆ ತಕ್ಕ ಪ್ರತಿಫಲ ಲಭಿಸುತ್ತದೆ.

ವಿದ್ಯಾರ್ಥಿಗಳು: ಈಗಲೇ ಬಹಳ ತಡವಾಗಿದೆ. ಆದರೂ ನೀವು ಬಯಸಿದ ವಿದ್ಯಾಲಯಗಳಲ್ಲಿ ಅಥವಾ ತರಗತಿಗಳಲ್ಲಿ ಪ್ರವೇಶ ಲಭಿಸುತ್ತದೆ. ಇದು ಕೊನೆಯ ಭಾಗ ಆಗಿರುವುದರಿಂದ ಉಳಿದ ವಿದ್ಯಾರ್ಥಿಗಳೊಂದಿಗೆ ನೀವು ಸರಿದೂಗಿಸಿಕೊಂಡು ಹೋಗುವ ವಿಚಾರದಲ್ಲಿ ಹಿಂದೆ ಬೀಳಬಹುದು. ಇದೇ ಕಾರಣದಿಂದಾಗಿ ನೀವು ಪದೇ ಪದೇ ವಿಷಯಗಳನ್ನು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ.

ಇವೆಲ್ಲದರ ಪರಿಣಾಮವಾಗಿ ಸ್ವಲ್ಪ ಕಿರಿಕಿರಿ ಅನುಭವಿಸುತ್ತೀರಿ. ಇಷ್ಟು ದಿನ ಇಲ್ಲದ ನೀವು ಈಗ ಕೊನೆಯ ಸಮಯದಲ್ಲಿ ಬಂದು ತೊಂದರೆ ನೀಡುತ್ತಿದ್ದೀರಿ ಎನ್ನುವ ಆಪಾದನೆ ಸಹ ಎದುರಿಸಬೇಕಾಗುತ್ತದೆ.

ಪರಿಹಾರ: ಪ್ರತೀ ಬುಧವಾರ ಹೆಸರು ಕಾಳು ಹಾಗೂ ಪ್ರತೀ ಶನಿವಾರ ಉದ್ದಿನ ಬೇಳೆ ದಾನ ಮಾಡಿ.

ಮೀನ: ಕುಟುಂಬದವರಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೀರಿ

ಮೀನ: ಕುಟುಂಬದವರಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೀರಿ

ಪುರುಷರು: ನಿಮ್ಮ ಭಾವನೆಗಳನ್ನು ಬಹಳ ಮುಕ್ತವಾಗಿ ವ್ಯಕ್ತಪಡಿಸಲೇ ಬೇಕಾದ ಸಮಯವಿದು! ಸೂಕ್ತ ವ್ಯಕ್ತಿಗಳನ್ನು ನಿಮ್ಮ ವ್ಯವಹಾರಕ್ಕೆ ಪರೀಕ್ಷಿಸಿ, ಆಯ್ಕೆ ಮಾಡಿಕೊಳ್ಳುತ್ತೀರಿ. ಹಿಂದಿಗಿಂತಲೂ ಬುದ್ಧಿವಂತಿಕೆ ಸ್ವಲ್ಪ ಹೆಚ್ಚು ಕಾಣುತ್ತಿದೆ. ಕೆಲ ಪ್ರಮುಖರ ಮನಸ್ತಾಪಗಳನ್ನು ಸಮರ್ಥ ಮಧ್ಯಸ್ತಿಕೆ ಮಾಡಿ ಬಗೆಹರಿಸುವಲ್ಲಿ ಯಶಸ್ವಿ ಆಗುತ್ತೀರಿ.

ಫಲಿತಾಂಶದ ಚಿಂತೆ ಮಾಡದೆ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಿದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಚಿಕ್ಕ- ಪುಟ್ಟ ಸಾಧ್ಯತೆಗಳು ಕಾಣುತ್ತಿವೆ. ಮಾಸದ ಎರಡು ಅಥವಾ ಮೂರನೇ ವಾರಕ್ಕೆ ಸರಿದಂತೆ ಜೀವನವನ್ನು ಇನ್ನೂ ಹೆಚ್ಚು ಸಂತೋಷದಿಂದ ಹಾಗೂ ಆಹ್ಲಾದಕರವಾಗಿ ಜೀವಿಸಲು ಪ್ರಯತ್ನ ನಡೆಸುತ್ತೀರಿ.

ಇದೇ ಸಂದರ್ಭದಲ್ಲಿ ಕುಟುಂಬದವರಿಗೆ ಅಥವಾ ಬಾಳಸಂಗಾತಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೀರಿ. ನಿಮಗೆ ಅರಿವು ಇಲ್ಲದಂತೆ ಖರ್ಚುಗಳು ಸಹ ಹೆಚ್ಚುತ್ತಾ ಹೋಗುತ್ತವೆ. ಅದಕ್ಕೆ ಕಾರಣ ಆಗುವುದು ನೀವು ಮಾಡುವ ಖರೀದಿಗಳು, ಬೆಲೆ ಬಾಳುವ ವಸ್ತುಗಳು ಎನ್ನುಬಹುದು.

ಮಾಸಾಂತ್ಯಕ್ಕೆ ಸರಿದಂತೆ ವ್ಯಾಪಾರಿಗಳು ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರು ಹೆಚ್ಚಿನ ಜಾಗ್ರತೆ ವಹಿಸಬೇಕಾದ ಸಮಯ. ಅನ್ಯರು ಲಾಭ ಮಾಡುತ್ತಿದ್ದಾರೆ ಎಂದು ನೀವು ಲೆಕ್ಕ ತಪ್ಪಿ ಹೂಡಿಕೆ ಮಾಡಿದರೆ ನಷ್ಟ ಖಚಿತ.

ಸ್ತ್ರೀಯರು: ಶುಕ್ರನ ಪ್ರಭಾವ ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳು ಕಂಡುಬರುತ್ತಿವೆ. ಸಂಬಂಧಗಳ ಮಧ್ಯ ಒತ್ತಡದಲ್ಲಿ ಸಿಲುಕಿ ಹಾಕಿಕೊಂಡಿದ್ದವರು ಒಮ್ಮೆ ಆ ಎಲ್ಲಾ ಬಂಧನಗಳಿಂದ ಹೊರಬಂದು, ಸ್ವಚ್ಛದ ಹಕ್ಕಿಯಂತೆ ಹಾರಾಡುವ ಮನಸ್ಸು ಮಾಡುತ್ತೀರಿ. ಇವೆಲ್ಲಕ್ಕೂ ನಿಮಗೆ ಬೇಕಾದ ಮನಸ್ಥೈರ್ಯ ನೀಡುವವರು ಸಿಗುತ್ತಾರೆ.

ಅವರು ನೀನು ಮಾಡುತ್ತಿರುವುದು ಸರಿ ಇದೆ ಎನ್ನುತ್ತಾ ನಿಮ್ಮ ತಾಳಕ್ಕೆ ತಕ್ಕ ಸಂಗೀತ ನುಡಿಸುತ್ತಾರೆ. ತಿಂಗಳ ಮಧ್ಯ ಹಾಗೂ ಅಂತ್ಯ ಭಾಗಕ್ಕೆ ಸರಿದಂತೆ ಆರೋಗ್ಯ ಸಮಸ್ಯೆ ಇದ್ದವರಿಗೆ ಸ್ವಲ್ಪ ಸುಧಾರಿಸುತ್ತಾ ಬರುತ್ತದೆ. ಹೊಲಿಗೆ ಇತ್ಯಾದಿ ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಿರುವ

ಸ್ತ್ರೀಯರಿಗೆ ಕಠಿಣವಾದ ಸವಾಲುಗಳು ಎದುರಾಗಬಹುದು. ಆದರೆ ಕೊನೆಯಲ್ಲಿ ಧನ ಲಾಭ ಇದೆ.

ಹಳೆಯ ಕೆಲ ಸಾಲಗಳನ್ನು ಸ್ವಲ್ಪ ಪ್ರಯತ್ನಿಸಿದರೂ ತೀರಿಸಬಹುದು. ಆದರೆ ಅತ್ತ ಹೆಚ್ಚಿನ ಗಮನ ಬೇಕು. ದೈವಾನುಗ್ರಹ ಇದೆ.

ವಿದ್ಯಾರ್ಥಿಗಳು: ನಿಮ್ಮ ಅಮ್ಮನ ಸಹಕಾರ, ಪ್ರೀತಿ ಹೆಚ್ಚು ಲಭ್ಯ ಇದೆ. ಅದೇ ನಿಮಗೆ ಶ್ರೀ ರಕ್ಷೆ. ಸಂಘಟನೆಗಳಿಂದ ನಿಮಗೆ ಅವರನ್ನು ಸೇರಲು ಕರೆ ಬರುತ್ತದೆ. ಸಿದ್ಧರಾಗಲು ಬಹಳ ಕಡಿಮೆ ಸಮಯ ಕೊಟ್ಟು ನಿಮಗೆ ಅನನುಕೂಲ ಆಗುತ್ತಿದೆ ಅನಿಸುತ್ತದೆ. ವಿದ್ಯಾರ್ಥಿಗಳನ್ನು

ಪರೀಕ್ಷಿಸುವ ಕಾಲ ಇದು. ಅಂದರೆ ಪೂರ್ಣ ಮಾಸವನ್ನು ನೋಡಿದಾಗ ಸ್ವಲ್ಪ ಕಷ್ಟದಾಯಕವೇ ಎನ್ನಬಹುದು.

ಓದಿದ್ದು ನೆನಪಿನಲ್ಲಿ ಉಳಿಯದೆ ತೊಂದರೆ ಒಂದು ಕಡೆ ಆದರೆ, ಹುಡುಕಿ ಹುಡುಕಿ ಅಧ್ಯಾಪಕರು ನಿಮ್ಮನ್ನೇ ಬೈಯುತ್ತಿದ್ದಾರೆ ಎಂದು ಇನ್ನೊಂದು ಕಡೆ ಎನಿಸುತ್ತದೆ. ಇತರೆ ವಿದ್ಯಾರ್ಥಿಗಳ ತಪ್ಪಿಗೂ ನಿಮ್ಮನ್ನೇ ಹೊಣೆ ಆಗಿಸಿದರೆ ಹೇಗೆ ಎಂಬ ನಿಮ್ಮ ಚಿಂತನೆಗೆ ಉತ್ತರಿಸುವವರು ಮಾತ್ರ ಸಿಗುವುದಿಲ್ಲ. ಆದರೆ ಈ ತಿಂಗಳಿನಲ್ಲಿ ನೀವು ಗಮನಹರಿಸ ಬೇಕಾದದ್ದು ಮಾತ್ರ ನಿಮ್ಮ ನೆನಪಿನ ಶಕ್ತಿಯ ವೃದ್ಧಿ ಹಾಗೂ ವಿದ್ಯೆಯತ್ತ! ಅದೂ ಸಾಧ್ಯ ಆಗುತ್ತದೆ.

ಪರಿಹಾರ: ನಿಮಗೆ ಅನುಕೂಲಕರ ದಿನಗಳಲ್ಲಿ ಕಡಲೇ ಕಾಳು ವಸ್ತ್ರದಲ್ಲಿ ಗಂಟು ಕಟ್ಟಿ, ಹತ್ತಿರದ ದೇಗುಲದಲ್ಲಿ ಅರ್ಚಕರಿಗೆ ಯಥಾ ಶಕ್ತಿ ದಕ್ಷಿಣೆ ಸೇರಿಸಿ ದಾನ ಮಾಡಿ (ಗುರುವಾರ ಆದರೆ ಉತ್ತಮ).

English summary
Get the complete month prediction for the month of August 2018. Read monthly horoscope of 12 zodiac signs in Kannada. Get free monthly horoscope, astrology and monthly predictions in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X