ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 2019 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

ಚಂದ್ರನ ಚಲನೆಯನ್ನು ಆಧಿರಿಸಿ ರೂಪಿಸಲಾಗಿರುವ ಈ ಕ್ಯಾಲೆಂಡರನ್ನು ನೋಡಿ ಆಯಾ ದಿನ ಪ್ರೇಮ ಪರಿಣಯ ಎಂದು ಹೇಗೆ, ಮನೆ ಕೊಳ್ಳಲು ಯಾವ ದಿನ ಸೂಕ್ತ, ಎಂದು ಧನ ಪ್ರಾಪ್ತಿಯಾಗುತ್ತದೆ, ಯಾವ ದಿನ ಖಿನ್ನತೆ ಆವರಿಸುತ್ತದೆ ಎಂಬ ಬಗ್ಗೆ ಬಗ್ಗೆ ತಿಳಿಯಬಹುದು.

By ಪಂಡಿತ್ ಅನುಜ್ ಕೆ. ಶುಕ್ಲಾ
|
Google Oneindia Kannada News

ಈ ಜ್ಯೋತಿಷ್ಯ ಕ್ಯಾಲೆಂಡರನ್ನು ಖ್ಯಾತ ಜ್ಯೋತಿಷಿ ಪಂಡಿತ ಅನುಜ್ ಕೆ. ಶುಕ್ಲಾ ಅವರು ಜೂನ್ 2019ರ ಪಂಚಾಂಗದ ಆಧಾರದ ಮೇಲೆ ಆಯಾ ರಾಶಿಗೆ ಅನುಗುಣವಾಗಿ ರೂಪಿಸಿದ್ದಾರೆ. ನಿಮ್ಮ ರಾಶಿಗೆ ತಕ್ಕಂತೆ ಅಂದಿನ ದಿನ ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂದು ಮಾತ್ರವಲ್ಲ, ನಾಳೆ, ನಾಡಿದ್ದು ಅಥವಾ ಮುಂದಿನ ದಿನ ಹೇಗಿರುತ್ತದೆಂದು ಕೂಡ ಈ ಕ್ಯಾಲೆಂಡರ್ ಮುಖಾಂತರ ತಿಳಿಯಬಹುದು.

ವಾರ ಭವಿಷ್ಯ ಅಥವಾ ತಿಂಗಳ ಭವಿಷ್ಯ ಒಂದು ಬಾರಿ ನೋಡಿ ಮರೆತುಬಿಟ್ಟಿರುತ್ತೇವೆ. ನಾವು ಅವುಗಳನ್ನು ಮರೆತರೂ ಗ್ರಹ, ನಕ್ಷತ್ರ ಮತ್ತು ಕಾಲಚಕ್ರಗಳನ್ನು ನಮ್ಮನ್ನು ಮರೆಯುವುದಿಲ್ಲ. ಭಾರತದ ಪ್ರಾಚೀನ ಜ್ಯೋತಿಷ್ಯಶಾಸ್ತ್ರ ನಮ್ಮ ಜೀವನದೊಂದಿಗೆ ಯಾವತ್ತೂ ಕೂಡಿಕೊಂಡಿರುತ್ತದೆ. ನಿಮ್ಮ ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ ಜ್ಯೋತಿಷ್ಯ ಕ್ಯಾಲೆಂಡರನ್ನು ಇಲ್ಲಿ ಸಾದರಪಡಿಸುತ್ತಿದ್ದೇವೆ. ನಮ್ಮ ಭವಿಷ್ಯಫಲ ಏನಿದೆ ಎಂದು ಇಲ್ಲಿ ಖುದ್ದಾಗಿ ನಾವೇ ನೋಡಿಕೊಳ್ಳಬಹುದು.

ಚಂದ್ರನ ಚಲನೆಯನ್ನು ಆಧಿರಿಸಿ ರೂಪಿಸಲಾಗಿರುವ ಈ ಕ್ಯಾಲೆಂಡರನ್ನು ನೋಡಿ ಆಯಾ ದಿನ ಪ್ರೇಮ ಪರಿಣಯ ಎಂದು ಹೇಗೆ, ಮನೆ ಕೊಳ್ಳಲು ಯಾವ ದಿನ ಸೂಕ್ತ, ಎಂದು ಧನ ಪ್ರಾಪ್ತಿಯಾಗುತ್ತದೆ, ಯಾವ ದಿನ ಖಿನ್ನತೆ ಆವರಿಸುತ್ತದೆ, ಎಂದು ಸಂತಸದ ಬುಗ್ಗೆ ಉಕ್ಕುತ್ತದೆ ಮುಂತಾದ ವಿಷಯಗಳ ಬಗ್ಗೆ ತಿಳಿಯಬಹುದು. ಎಲ್ಲ ಸಂಗತಿಗಳನ್ನು ಪಂಡಿತರು ವಿವಿಧ ಚಿಹ್ನೆಗಳ ಮುಖಾಂತರ ಅತ್ಯಂತರ ಸರಳವಾಗಿ ತಿಳಿಸಿಕೊಡುತ್ತಾರೆ.

ಯಾವ ಚಿಹ್ನೆ ಏನು ಹೇಳುತ್ತದೆ?

ಹೃದಯ - ಪ್ರೀತಿ ಪ್ರೇಮ ಪ್ರಣಯಕ್ಕೆ ಆ ದಿನ ಅತ್ಯಂತ ಸುದಿನವಾಗಿರುತ್ತದೆ.
ಮಿಂಚು - ಆ ದಿನ ನಿಮ್ಮ ಜೀವನದಲ್ಲಿ ಆಪತ್ತು ಬರಬಹುದು.
ಮನೆ - ಮನೆ ಅಥವಾ ಅಂಗಡಿಯನ್ನು ಆ ದಿನ ಕೊಳ್ಳಬಹುದು ಅಥವಾ ಮಾರಬಹುದು.
ಮುಗುಳ್ನಗೆ - ಆ ದಿನ ನಿಮ್ಮ ಜೀವನದಲ್ಲಿ ಸಂತಸ ಬರಬಹುದು.
ಚಿಂತೆ - ಯಾವುದೋ ವಿಷಯದಲ್ಲಿ ಚಿಂತೆ ಅಥವಾ ಖಿನ್ನತೆ ಆವರಿಸಬಹುದು.
ನಕ್ಷತ್ರ - ಆ ದಿನ ಜೀವನದಲ್ಲಿ ಸೌಭಾಗ್ಯದ ದಿನವಾಗಿರುತ್ತದೆ.
ನಾಣ್ಯ - ನಾಣ್ಯ ಇದ್ದ ದಿನ ಧನ ಲಾಭ ಆಗುವ ಸಂಭವನೀಯತೆ ಇರುತ್ತದೆ.

ಪ್ರತಿದಿನ ಬಿಡುವು ಸಿಕ್ಕಾಗಲೆಲ್ಲ ಈ ಕ್ಯಾಲೆಂಡರನ್ನು ನೋಡಬೇಕೆಂದಿದ್ದರೆ ಈ ಪುಟವನ್ನು ಬುಕ್‌ಮಾರ್ಕ್ ಮಾಡಿಟ್ಟುಕೊಳ್ಳಿ.

ಮೇಷ : ಮಕ್ಕಳಿಂದ ಕಲಿಯುವುದು ಸಾಕಷ್ಟಿದೆ

ಮೇಷ : ಮಕ್ಕಳಿಂದ ಕಲಿಯುವುದು ಸಾಕಷ್ಟಿದೆ

ಚಿಕ್ಕಮಕ್ಕಳು ಒಂದೊಂದು ಬಾರಿ ಅದ್ಭುತ ಶಿಕ್ಷಕರಂತೆ ವರ್ತಿಸುತ್ತಾರೆ. ಅವರಲ್ಲಿನ ಪ್ರಬುದ್ಧತೆ, ತಾಳ್ಮೆ, ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ರೀತಿ, ತಪ್ಪಾದಾಗ ಸರಿಪಡಿಸಿಕೊಳ್ಳುವ ರೀತಿ ನಮಗೆ ಪಾಠ ಕಲಿಸುತ್ತದೆ ಮತ್ತು ಹೇಗೆ ನಡೆದುಕೊಳ್ಳಬೇಕೆಂಬ ಮಾರ್ಗದರ್ಶಿಯೂ ಆಗುತ್ತಾರೆ. ಆದರೆ, ನಾವು ಅವರಿಂದ ಎಷ್ಟು ಕಲಿಯುತ್ತೇವೆ? ಮೊದಲು ಮಕ್ಕಳೊಂದಿಗೆ ಮಕ್ಕಳಾಗುವುದರ ಜೊತೆಗೆ, ನಯವಿನಯದಿಂದ ನಡೆದುಕೊಳ್ಳುವುದು, ಸಿಟ್ಟು ಮಾಡಿಕೊಳ್ಳದಿರುವುದನ್ನು ಕಷ್ಟವಾದಾರೂ ಕಲಿಯಬೇಕು. ಮಕ್ಕಳ ಮುಂದೆ ಅಹಂಕಾರ ಎಂದಿಗೂ ಸಲ್ಲ. ಅವರೆದುರಿಗೆ ನಾವು ಸೋಲುತ್ತಲೇ ಇರಬೇಕು, ಆಗಲೇ ಗೆಲ್ಲುವುದು. ಮಕ್ಕಳೂ ನಮ್ಮಿಂದ ಇವನ್ನೇ ಕಲಿಯುತ್ತವಲ್ಲವೆ? ಒಂದೊಮ್ಮೆ ಮಕ್ಕಳಾಗಿ, ಕಲಿಯಲು ಸಾಧ್ಯವಿದ್ದರೆ ಕಲಿಯಿರಿ, ವ್ಯಕ್ತಿತ್ವವನ್ನು ಇನ್ನಷ್ಟು ಉತ್ತಮಪಡಿಸಿ. ಅವರ ಮುಂದೆ ನಾವೆಂದಿಗೂ ಸಣ್ಣವರಾಗಬಾರದು.

ವೃಷಭ : ವೃದ್ಧಾಪ್ಯದಲ್ಲಿ ಮಕ್ಕಳು ಆಸರೆಯಾಗಬೇಕು

ವೃಷಭ : ವೃದ್ಧಾಪ್ಯದಲ್ಲಿ ಮಕ್ಕಳು ಆಸರೆಯಾಗಬೇಕು

ವೃದ್ಧಾಪ್ಯದಲ್ಲಿ ಮಕ್ಕಳು ನಮಗೆ ಆಸರೆಯಾಗಬೇಕು ಎಂದು ಬಯಸುವುದು ಸಹಜ. ಆದರೆ, ಮಕ್ಕಳೇ ದೊಡ್ಡವರ ಆಸರೆ ಬೇಡುವಂತಾದರೆ ಅಥವಾ ಅವರೇ ತಂದೆತಾಯಿಯರನ್ನು ಕಡೆಗಣಿಸುವಂತಾದರೆ? ಇಂಥ ಸ್ಥಿತಿ ಬರದಂತೆ ತಡೆಯುವುದು ಹಿರಿಯ ಕರ್ತವ್ಯ. ಏನೇನು ಸಾಧ್ಯವೋ ಅವೆಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಇಲ್ಲಿ, ಭಾವನೆಗಳಿಗೆ, ಸಂಬಂಧಗಳಿಗೆ ಯಾವುದೇ ಜಾಗವೇ ಇಲ್ಲ. ಕೆಲಬಾರಿ ಸ್ವಾರ್ಥಿಗಳಾಗದಿದ್ದರೆ ನಾವೇ ಅಳಿದುಹೋಗಬೇಕಾಗುತ್ತದೆ. ಇದನ್ನು ಆ ಹಿರಿಯರನ್ನು ಬಲ್ಲ ಇತರರು ಕೂಡ ಗಮನಿಸುತ್ತಿರಬೇಕಾಗುತ್ತದೆ.

ಮಿಥುನ : ಸಂಕಷ್ಟಗಳನ್ನು ಅನುಭವಿಸಲು ಸಿದ್ಧತೆ ಮಾಡಿಕೊಳ್ಳಿ

ಮಿಥುನ : ಸಂಕಷ್ಟಗಳನ್ನು ಅನುಭವಿಸಲು ಸಿದ್ಧತೆ ಮಾಡಿಕೊಳ್ಳಿ

ಥೇಟ್ ಮಲೆನಾಡಿನ ಮಳೆಗಾಲದ ರೀತಿಯಲ್ಲಿ ಸಂಭವಿಸಲಿರುವ ಘಟನೆಯನ್ನು ಮೊದಲೇ ನಿರೀಕ್ಷಿಸಿ, ಅನುಭವಿಸಲು, ಆನಂದಿಸಲು, ಸಂಕಷ್ಟಗಳನ್ನು ಅನುಭವಿಸಲು ಸಿದ್ಧತೆ ಮಾಡಿಕೊಳ್ಳಿ. ಮಾನಸಿಕವಾಗಿ ಸಿದ್ಧತೆಗಳನ್ನು ಮಾಡಿಕೊಂಡಷ್ಟೂ ಸಣ್ಣ ಆಘಾತದಿಂದ ಪಾರಾಗಲು ಸಾಧ್ಯ. ಅಂಗಿಗೆ ಸವರಿದ ಧೂಳನ್ನು ಝಾಡಿಸಿಕೊಂಡು ಮುಂದೆ ಸಾಗಿರಿ. ಮನೆಯಲ್ಲಿ ಯಾವುದೇ ಕಾರಣಕ್ಕೆ ಜಗಳವಾಗದಂತೆ, ಮನಸ್ತಾಪವಾಗದಂತೆ ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳಿ. ಯಾರಿಂದಲಾದರೂ ಬರಬೇಕಿದ್ದ ಹಣವನ್ನು ಕೇಳಿ, ಬೇಡಿ ಇಸಿದುಕೊಳ್ಳಬೇಡಿ. ತಾನಾಗಿಯೇ ಬರುವವರೆಗೆ ಕಾಯಿರಿ.

ಕರ್ಕಾಟಕ : ಏಣಿ ಹಾಕಿ ಏರಿಸುವವರ ಬಗ್ಗೆ ಎಚ್ಚರಿಕೆ

ಕರ್ಕಾಟಕ : ಏಣಿ ಹಾಕಿ ಏರಿಸುವವರ ಬಗ್ಗೆ ಎಚ್ಚರಿಕೆ

ನಮಗಿಂತ ನಮ್ಮ ಸಾಮರ್ಥ್ಯವನ್ನು, ನಮ್ಮ ದೌರ್ಬಲ್ಯಗಳನ್ನು ಸರಿಯಾಗಿ ಅರಿಯಲು, ಅಳೆಯಲು ಯಾರಿಂದ ಸಾಧ್ಯ? ಏಣಿ ಹಾಕಿ ಅಟ್ಟಕ್ಕೇರಿಸುವವರಿರುತ್ತಾರೆ, ಕೆಲವರು ಆಕಾಶಕ್ಕೆ ನಿಚ್ಚಣಿಕೆಯನ್ನು ಹಾಕಿ ಹತ್ತಿಸಿಬಿಡುತ್ತಾರೆ. ಅಂಥವರಿಂದ ಎಚ್ಚರವಿರಿ. ಏರಿದ ಏಣಿಯನ್ನು ಒದೆಯುವುದು ಅತ್ಲಾಗಿರಲಿ, ನೀವು ಇಳಿಯದಂತೆ ಆ ಏಣಿಯನ್ನೇ ತೆಗೆಯುವವರಿರುತ್ತಾರೆ. ಇದರ ತಾತ್ಪರ್ಯ ಇಷ್ಟೆ, ಯಾರ ಮಾತನ್ನೂ ಕೇಳಬೇಡಿ, ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ನಿಮಗೆ ಬೇಡ ಅನ್ನಿಸಿದ್ದನ್ನು ನಿಷ್ಠುರವಾಗಿಯೇ ಸಾಧ್ಯವಿಲ್ಲ ಅಂದುಬಿಡಿ. ಸಂಬಂಧಗಳು ಕಡಿದುಹೋದಾವು, ಜೀವವೇನೂ ಹೋಗುವುದಿಲ್ಲ. ಬತ್ತಳಿಕೆಯಲ್ಲಿನ ಬಾಣಗಳು ಖಾಲಿಯಾದಾಗ, ತಾವೇ ಶಿರಬಾಗಿ ಮುಂದೆ ಬರುತ್ತಾರೆ. ಪುಣ್ಯಕ್ಷೇತ್ರಕ್ಕೆ ಹೋದಾಗ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ಎಲ್ಲಕ್ಕಿಂತ ಹೆಚ್ಚಾಗಿ ನೀರಿನ ಬಗ್ಗೆ ಗಮನವಿರಲಿ.

ಸಿಂಹ : ನಿಮ್ಮಲ್ಲಿ ನಿಷ್ಕಲ್ಮಶ ಮನಸ್ಸು ಇರುವವರೆಗೆ...

ಸಿಂಹ : ನಿಮ್ಮಲ್ಲಿ ನಿಷ್ಕಲ್ಮಶ ಮನಸ್ಸು ಇರುವವರೆಗೆ...

ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವುದರಲ್ಲಿ, ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳುವುದರಲ್ಲಿ ನೀವು ಜಾಣರು. ಆದರೆ, ಬದುಕಿನಲ್ಲಿ ನಾವು ನಿರೀಕ್ಷಿಸದೇ ಇದ್ದ ಘಟನೆಗಳು ಘಟಿಸಿಬಿಡುತ್ತವೆ. ಎಡವಿ ಬಿದ್ದಾಗ ಎತ್ತಿ ಹಿಡಿದವರ ಮಾತುಗಳಿಗೆ ಕಿವಿಯಾಗಿರಿ. ಆದರೆ, ಇತರರ ಕೊಳಕು ಮಾತುಗಳಿಗೆ ಕಿವಿಯಾಗಬೇಡಿ, ಕಿಡಿ ನುಡಿಗಳಿಗೆ ಸಿಡಿದೇಳಬೇಡಿ. ಏಕೆಂದರೆ, ನಿಮ್ಮಲ್ಲಿ ನಿಷ್ಕಲ್ಮಶ ಮನಸ್ಸು ಇರುವವರೆಗೆ ಯಾರೂ ನಿಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಆ ಪರಿಶುದ್ಧತೆ ನಿಮ್ಮನ್ನು ಯಾವತ್ತೂ ಕಾಪಾಡುತ್ತದೆ. ಧೋಧೋ ಮಳೆ ಸುರಿದು ಆ ಕಲ್ಮಶವೆಲ್ಲ ತೊಳೆದು ಹೋಗುವವರೆಗೆ ತಾಳ್ಮೆಯಿಂದ ಕಾಯಿರಿ. ಏಕೆಂದರೆ, ನಿಮಗೆ ಆಗುವ ತೊಂದರೆಯಿಂದ ಮನೆಯವರಿಗೂ ತೊಂದರೆಯಾಗುತ್ತದೆ ಎನ್ನುವುದನ್ನು ಮರೆಯಬೇಡಿ.

ಕನ್ಯಾ : ಸವಾಲುಗಳನ್ನು ಧೈರ್ಯವಾಗಿಯೇ ಎದುರಿಸಿ

ಕನ್ಯಾ : ಸವಾಲುಗಳನ್ನು ಧೈರ್ಯವಾಗಿಯೇ ಎದುರಿಸಿ

ನಿಮ್ಮದು ಸಾಹಸಮಯ ವ್ಯಕ್ತಿತ್ವವಾಗಿದ್ದರೆ ನಿಮ್ಮ ನೈಪುಣ್ಯತೆಯನ್ನು ಒರೆಗೆ ಹಚ್ಚುವಂಥ ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂಥ ಸವಾಲುಗಳನ್ನು ಧೈರ್ಯವಾಗಿಯೇ ಎದುರಿಸಿ. ಗೆದ್ದರೆ ಬೀಗಬೇಡಿ, ಸೋತರೆ ಮೀಸೆ ಮಣ್ಣಾಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿ ಬಡ್ತಿಯ ನಿರೀಕ್ಷೆಯಿದ್ದರೆ ಶುಭಸಂದೇಶ ಬರಲಿದೆ. ಆದರೆ, ಪಾಲಿಗೆ ಬಂದದ್ದನ್ನು ಪಂಚಾಮೃತ ಎಂದು ಸ್ವೀಕರಿಸಿಬಿಡಿ, ಹೆಚ್ಚಿನ ಡಿಮ್ಯಾಂಡ್ ಮಾಡುವುದು ಸಲ್ಲದು. ಸಾಧ್ಯವಾದರೆ, ಒಂದಿಷ್ಟು ಹಣವನ್ನು ದೇಣಿಗೆ ಅಥವಾ ದಾನ ನೀಡಲು ವಿನಿಯೋಗಿಸಿ. ಮನಸ್ಸಿಗೆ ಸಿಗುವ ಸಂತೋಷಕ್ಕೆ ಸಮನಾದದ್ದು ಯಾವುದೂ ಇಲ್ಲ ಮತ್ತು ಆ ಸಂತೋಷವನ್ನು ಎಷ್ಟೇ ಹಣದಿಂದ ಕೊಳ್ಳುವುದೂ ಸಾಧ್ಯವಿಲ್ಲ.

ತುಲಾ : ಯಶಸ್ಸಿಗೆ, ವೈಫಲ್ಯಕ್ಕೆ ನಾನಾ ಕಾರಣ

ತುಲಾ : ಯಶಸ್ಸಿಗೆ, ವೈಫಲ್ಯಕ್ಕೆ ನಾನಾ ಕಾರಣ

ನಾನು ಹೇಳಿದ ಮಂತ್ರದಿಂದಲೇ ಮಾವಿನಕಾಯಿ ಉದುರಿದೆ ಎಂದು ಹೇಳಿಕೊಳ್ಳುವುದು ಮಹಾನ್ ತಪ್ಪು. ಯಶಸ್ಸಿಗಾಗಲಿ, ವೈಫಲ್ಯಕ್ಕಾಗಿ ನಾನಾ ಕಾರಣಗಳು ಇರುತ್ತವೆ. ಅವುಗಳಿಗೆ ತಕ್ಕಂತೆ ಯಶಸ್ಸಿನ ಶ್ರೇಯಸ್ಸು ಅವರಿಗೆ ತಲುಪುತ್ತದೆ ಅಥವಾ ಸೋಲಿನ ಉತ್ತರದಾಯಿತ್ವ ಅವರದಾಗಿರುತ್ತದೆ. ನೀವು ಏನಿದ್ದರೂ ನಿಮಿತ್ತ ಮಾತ್ರ. ನಿಮ್ಮ ಕೆಲಸ ಏನಿದೆಯೋ ಅಥವಾ ವಹಿಸಿದ ಕಾರ್ಯ ಏನಿದೆಯೋ ಅಷ್ಟೇ ನೋಡಿ, ಉಳಿದ ಫಲಿತಾಂಶವನ್ನು ಅಥವಾ ಫಲವನ್ನು ನಿರೀಕ್ಷಿಸಬೇಡಿ ಮತ್ತು ಭಗವಂತನಿಗೆ ಬಿಟ್ಟುಬಿಡಿ. ಬಹುವರ್ಷಗಳಿಂದ ನಿರೀಕ್ಷಿಸುತ್ತಿದ್ದ ಅಥವಾ ಅಂದುಕೊಂಡಿದ್ದ ಕೆಲಸವನ್ನು ಪೂರೈಸಲು ಸಾಧ್ಯವಿದೆಯೋ ನೋಡಿಕೊಳ್ಳಿ. ಎಲ್ಲಕ್ಕಿಂತ ಮಿಗಿಲಾಗಿ ದೊಡ್ಡದೊಂದು ಜವಾಬ್ದಾರಿ ನಿಮ್ಮ ಹೆಗಲ ಮೇಲೇರಲಿದೆ, ಹೊರಲು ಸಿದ್ಧರಾಗಿ.

ವೃಶ್ಚಿಕ : ಮುಟ್ಟಬೇಕಾದ ಗುರಿಯತ್ತ ಗಮನವಿರಲಿ

ವೃಶ್ಚಿಕ : ಮುಟ್ಟಬೇಕಾದ ಗುರಿಯತ್ತ ಗಮನವಿರಲಿ

ಸಾಗಬೇಕಾದ ಗುರಿ ದೂರವಿದ್ದರೂ, ಆ ಗುರಿಯನ್ನೇ ಚಿಕ್ಕದಾಗಿಸಿ, ತ್ರೈಮಾಸಿಕವಾಗಿ, ಮಾಸಿಕವಾಗಿ ಅಥವಾ ವಾರಕ್ಕೆ ತಕ್ಕಂತೆ ವಿಭಾಗಿಸಿಕೊಂಡು ಮುಟ್ಟಲು ಯತ್ನಿಸಿ. ಆಗ, ಸಾಗಬೇಕಾದ ಪಯಣ ದೂರ ಅನ್ನಿಸುವುದಿಲ್ಲ, ಭಾರವವೂ ಅನ್ನಿಸುವುದಿಲ್ಲ. ತಾಳ್ಮೆ ಕಳೆದುಕೊಂಡರೆ ಮಾತ್ರ ನೀವು ದಿಕ್ಕು ತಪ್ಪಲು ಆರಂಭಿಸುತ್ತೀರಿ. ಸಣ್ಣಪುಟ್ಟ ಹಿನ್ನಡೆಯಿಂದ ಚಿಂತಿಸುವ ಅಗತ್ಯವಿಲ್ಲ, ನಮ್ಮನ್ನು ಎಚ್ಚರಿಸಲೆಂದೇ ಇಂಥ ಘಟನೆಗಳು ಘಟಿಸುತ್ತಿರುತ್ತವೆ. ನೆಟ್ಟ ಸಸಿ ಕೂಡಲೆ ಫಲ ನೀಡುವುದಿಲ್ಲ, ಅದಕ್ಕೆ ಬೇಕಾದಂಥ ಪೋಷಕಾಂಶ ಆಗಾಗ ನೀಡುತ್ತಿರಬೇಕಾಗುತ್ತದೆ, ನೀರೆರೆಯುತ್ತಿರಬೇಕಾಗುತ್ತದೆ. ವಿದ್ಯಾರ್ಥಿಗಳೇ ಓದಿನತ್ತ ಗಮನವಿರಲಿ.

ಧನುಸ್ಸು : ನಾವು ನೀವೆಲ್ಲ ಪರಿಸ್ಥಿತಿಯ ಕೈಗೊಂಬೆಗಳು

ಧನುಸ್ಸು : ನಾವು ನೀವೆಲ್ಲ ಪರಿಸ್ಥಿತಿಯ ಕೈಗೊಂಬೆಗಳು

ನಾವು ಪರಿಸ್ಥಿತಿಯ ಕೈಗೊಂಬೆಗಳು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ನಮ್ಮ ವೈಯಕ್ತಿಕ ಜೀವನವಾಗಲಿ, ಸಾರ್ವಜನಿಕ ಜೀವನವಾಗಲಿ ಪರಿಸ್ಥಿತಿಯ ಮೇಲೆ ತುಂಬಾ ಅವಲಂಬಿತವಾಗಿರುತ್ತದೆ. ಕೈಗೆ ಬಂದಿದ್ದ ಅದ್ಭುತ ಅವಕಾಶ ಮರೀಚಿಕೆಯಂತೆ ಕೈಜಾರಿ ಹೋಗಿದ್ದಕ್ಕೆ ಹಳಹಳಿಸುವ ಅವಶ್ಯಕತೆಯಿಲ್ಲ. ಆ ಸಂದರ್ಭದಲ್ಲಿ ಒದಗಿಬಂದ ಪರಿಸ್ಥಿತಿಯೇ ಅವಕಾಶ ಕೈಸಿಗದಂತೆ ಮಾಡಿರಬಹುದು. ಆದರೆ, ನಿಮ್ಮ ಪ್ರಯತ್ನ ಮತ್ತು ಆಶಾವಾದಿತನ ಎಂದೂ ನಿಲ್ಲಬಾರದು. ಹಣ, ಉದ್ಯೋಗ, ಬಂಧುಗಳನ್ನು ನೀವು ಎಷ್ಟೇ ಪ್ರೀತಿಸುತ್ತಿದ್ದರೂ ಮೊದಲು ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲು ಆರಂಭಿಸಿ. ಆರೋಗ್ಯದ ಬಗ್ಗೆ ಎಲ್ಲಕ್ಕಿಂತ ಹೆಚ್ಚು ನಿಗಾ ಇರಲಿ, ವಯಸ್ಸಾಗುತ್ತಿದೆ ಎಂದು ಅನಿಸಿದರೂ ಸ್ವಯಂಪ್ರೀತಿಗೆ ಕೊರೆತೆಯಾಗಬಾರದು. ನಲವತ್ತರ ನಂತರವೇ ಜೀವನ ಅದ್ಭುತವಾಗಿರುತ್ತದೆ ಎಂದು ಬಲ್ಲವರು ಹೇಳುತ್ತಾರೆ. ನಾಳೆಯ ಬಗ್ಗೆ ಚಿಂತೆ ಬೇಡ, ಆದರೆ ನಾಳೆಯ ಬಗ್ಗೆ ಚಿಂತನೆ ಇರಲಿ, ಯೋಜನೆ ರೂಪಿಸಿಕೊಳ್ಳಿ, ಭವಿಷ್ಯ ಅದ್ಭುತವಾಗಿರುವಂತೆ ಜೀವನಶೈಲಿಯನ್ನೇ ಬದಲಿಸಿಕೊಳ್ಳಿ. ಎಲ್ಲಕ್ಕಿಂತ ಪ್ರಮುಖವಾಗಿ ಋಣಾತ್ಮಕತೆಯನ್ನು ದೂರವಾಗಿಸಿ.

ಮಕರ : ಬರುವಾಗ, ಹೋಗುವಾಗಿನ ನಡುವಿನ ಜೀವನ

ಮಕರ : ಬರುವಾಗ, ಹೋಗುವಾಗಿನ ನಡುವಿನ ಜೀವನ

ಸುಖ ಜೀವನಕ್ಕೆ ಹಾತೊರೆಯುವವನು ಎಂದೂ ಸುಖದಿಂದ ಬಾಳಲಾರ. ಬಹುಶಃ ಕಷ್ಟಪಟ್ಟು ದುಡಿಯುವವನು ಎಲ್ಲರಿಗಿಂತ ಹೆಚ್ಚು ಸುಖದಿಂದ ಬಾಳುತ್ತಿರುತ್ತಾನೆ. ಆತ್ಮತೃಪ್ತಿ ಎಂಬುದು ಇಂತಹ ಕಷ್ಟದ ದುಡಿಮೆಯಲ್ಲಿಯೇ ಹೆಚ್ಚು. ನಿಮ್ಮದು ಯಾವ ಕೆಟಗರಿ? ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆ ಎಂದಿಗೂ ನೆನಪಿನಲ್ಲಿರಲಿ. ಕುಡಿಕೆ ಹೊನ್ನು ಅತ್ಲಾಗಿರಲಿ, ಹಣ, ಅಂತಸ್ತು, ಸಂಬಂಧಗಳು ಯಾವುದೂ ನಮ್ಮದಲ್ಲ, ನಾವಿಲ್ಲಿ ನಿಮಿತ್ತ ಮಾತ್ರ. ಬರುವಾಗ ಖಾಲಿ ಕೈಯಲ್ಲಿ ಬರುವವರು, ಹೋಗುವಾಗಲೂ ಖಾಲಿ ಕೈಯಲ್ಲಿಯೇ ಹೋಗುತ್ತೇವೆ. ಆದರೆ, ಇವೆರಡರ ನಡುವಿನ ಜೀವನವನ್ನು ಸಂತೃಪ್ತಿಯಿಂದ ಕಳೆಯಬೇಕು, ಅಷ್ಟೇ.

ಕುಂಭ : ಅವನು ಸೂತ್ರಧಾರ, ನಾವು ಪಾತ್ರಧಾರಿ

ಕುಂಭ : ಅವನು ಸೂತ್ರಧಾರ, ನಾವು ಪಾತ್ರಧಾರಿ

ನಾಟಕ ನಡೆಯುವಾಗ ರಂಗಮಂದಿರದ ವೇದಿಕೆ ಮೇಲೆ ನಾಟಕವಾಡುತ್ತಿರುವವರು ಎಷ್ಟು ಪ್ರಮುಖವೋ, ಸೈಡ್ ವಿಂಗ್ ನಲ್ಲಿರುವವರು, ಮುಂದೆ ಕುಳಿತು ಸಂಗೀತ ನುಡಿಸುತ್ತಿರುವವರು, ಬೆಂಬಲ ಸಿಬ್ಬಂದಿಗಳು ಕೂಡ ಅಷ್ಟೇ ಪ್ರಮುಖರಾಗುತ್ತಾರೆ. ಹೀಗಾಗಿ, ನಾವು ಯಾವತ್ತಿಗೂ ಲೈಮ್ ಲೈಟ್ ನಲ್ಲಿಯೇ ಇರಬೇಕೆಂದು ಬಯಸುವುದು ಅಷ್ಟು ತರವಲ್ಲ. ಬದುಕು ನಮ್ಮೆಲ್ಲರ ಮೇಲೆ ನಮಗಾಗಿಯೇ ಇರುವಂಥ ಜವಾಬ್ದಾರಿಗಳನ್ನು ಹೊರಿಸಿಯೇ ಇರುತ್ತದೆ. ಮತ್ತು ಇದೆಲ್ಲವನ್ನು, ಬದುಕಿನ ಲೆಕ್ಕಾಚಾರಗಳನ್ನು ದೇವರು ಮರೆಯಲ್ಲಿಯೇ ಕುಳಿತು ನೋಡುತ್ತಿರುತ್ತಾನೆ. ಅವನು ಸೂತ್ರಧಾರ ನಾವು ಕೇವಲ ಪಾತ್ರಧಾರಿಗಳಷ್ಟೆ. ನಮ್ಮ ಪಾತ್ರಗಳು ಕೂಡ ಆಗಾಗ ಬದಲಾಗುತ್ತಿರುತ್ತವೆ. ಕೆಲಸ ಮಾಡುವುದು ಅಷ್ಟೇ ನಮ್ಮ ಕೆಲಸ, ಫಲಿತಾಂಶ ಆತನಿಗೆ ಬಿಟ್ಟುಬಿಡೋಣ.

ಮೀನ : ನಿಮ್ಮ ಬಳಿ ಉಜ್ವಲವಾದ ಭವಿಷ್ಯವಿದೆ

ಮೀನ : ನಿಮ್ಮ ಬಳಿ ಉಜ್ವಲವಾದ ಭವಿಷ್ಯವಿದೆ

ಧಿಗ್ಗನೆ ಎದುರಾಗಿ ಬರುವ ತೊಂದರೆ ಅಥವಾ ಸಂಕಷ್ಟ ಅಥವಾ ಬದುಕಿನ ತಿರುವನ್ನು ಎದುರಿಸಲು ನೀವೆಷ್ಟು ಸಿದ್ಧರಾಗಿದ್ದೀರಿ? ಹೊರಗೆ ಅಡಿಯಿಟ್ಟಾಗಲೇ ಕಷ್ಟವೇನೆಂದು ನಮ್ಮ ಅರಿವಿಗೆ ಬರೋದು, ನೀರಿನಲ್ಲಿ ಇಳಿದಾಗಲೇ ಆಳವೆಷ್ಟೆಂದು ತಿಳಿಯುವುದು. ಇದಕ್ಕೆಲ್ಲ ಸಿದ್ಧತೆ ಮಾಡಿಕೊಳ್ಳಬೇಕಂತೇನಿಲ್ಲ, ಆದರೆ, ಇಂತಹ ಪರಿಸ್ಥಿತಿಗಳ ಬಗ್ಗೆ ನಮಗೆ ಅರಿವಿರಬೇಕು. ಕೆಲವೊಂದು ಬಾರಿ ರಿಸ್ಕನ್ನು ಕೂಡ ತೆಗೆದುಕೊಳ್ಳಲು ನಾವು ಹಾತೊರೆಯುತ್ತಿರಬೇಕು. ಕೆಲಸದಲ್ಲಿ ನಿಮಗೆ ಇರುವಷ್ಟು ಪ್ರೀತಿ, ಬಂಧುಮಿತ್ರರ ಮೇಲೆ ಇದೆಯೆ? ಇತ್ತೀಚಿನ ಜೀವನ ನಿಮ್ಮ ಬದುಕಲ್ಲಿ ಏನಾದರೂ ಬದಲಾವಣೆ ತಂದಿದೆಯಾ? ನೀವು ಇತರರನ್ನು ಪ್ರೀತಿಸಿದಷ್ಟು, ಇತರರು ನಿಮ್ಮನ್ನು ಪ್ರೀತಿಸುತ್ತಾರಾ? ಈ ಪ್ರಶ್ನೆಗಳಿಗೆ ಋಣಾತ್ಮಕ ಉತ್ತರಗಳಿದ್ದರೆ, ಧನಾತ್ಮಕವಾಗಿ ಚಿಂತಿಸಿ ಉತ್ತರ ಕಂಡುಕೊಳ್ಳಿ.

English summary
The calendars specially designed by astrologer Pandit Anuj K. Shukla shows days when the Moon, Sun, and planets favour particular zodiac sign. Astro Calendar for Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius and Pisces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Metrics Calculation