• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿ 2021ರ ವಿಶೇಷ: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ

By ಶಂಕರ್ ಭಟ್
|

ಸಂಕ್ರಾಂತಿ ಬಹಳ ವಿಶೇಷವಾದ ಪರ್ವ ಕಾಲ. ಜನವರಿ 14, 2021ರಂದು ಮಕರ ಸಂಕ್ರಮಣ. ಅಂದಿನ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ಮಾಡುವವರು ಸಾಮಾನ್ಯವಾಗಿ ಸಂಕ್ರಾಂತಿಯ ನಂತರ ಶುರು ಮಾಡುತ್ತಾರೆ. ಮತ್ತು ಹಲವು ಶುಭ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಈ ಸಮಯವನ್ನು ಎದುರು ನೋಡುತ್ತಾರೆ.

ರವಿ ಗ್ರಹವು ಮಕರ ರಾಶಿಯನ್ನು ಪ್ರವೇಶಿಸುವ ದಿನ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಅಲ್ಲಿಂದ ಮುಂದೆ ಕರ್ಕಾಟಕ ರಾಶಿಗೆ ರವಿ ಗ್ರಹ ಪ್ರವೇಶ ಮಾಡುವ ತನಕ ಮದುವೆ, ಉಪನಯನ ಮೊದಲಾದ ಶುಭ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಬಹಳ ಪ್ರಶಸ್ತವಾದ ಕಾಲ ಎಂಬುದು ಜ್ಯೋತಿಷ್ಯ ನಂಬಿಕೆ.

ಇನ್ನು ಈ ಮಕರ ಸಂಕ್ರಾಂತಿಗೆ ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸಿಕೊಡುವುದು ಈ ಲೇಖನ ಉದ್ದೇಶ. ಇಲ್ಲಿ ಹೇಳುವ ಎಚ್ಚರಿಕೆ ಮಾತುಗಳ ಕಡೆಗೂ ಸ್ವಲ್ಪ ಲಕ್ಷ್ಯ ನೀಡಿ. ಹಾಗೆ ಮಾಡುವುದರಿಂದ ಕಣ್ಣಿಗೆ ಬಂದ ಅಪಾಯ ರೆಪ್ಪೆಗೆ ತಾಗಿಹೋಯಿತು ಎಂದು ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ. ಇನ್ನು ದ್ವಾದಶ ರಾಶಿಗಳ ಮೇಲೆ ಸಂಕ್ರಾಂತಿ ಫಲ ಏನು ಎಂಬುದನ್ನು ತಿಳಿದುಕೊಳ್ಳಿ.

ಮೇಷ

ಮೇಷ

ಕೌಟುಂಬಿಕ ವ್ಯವಹಾರದಲ್ಲಿ ತೊಡಗಿರುವವರಿಗೆ ಮನೆಯ ಹಿರಿಯರ ಜತೆಗೆ ಅಸಮಾಧಾನ ಆಗುತ್ತದೆ. ನಿಮ್ಮ ನಡವಳಿಕೆ, ಸಿಟ್ಟಿನಿಂದ ಸಂಬಂಧದಲ್ಲಿ ಬಿರುಕು ಏರ್ಪಡಬಹುದು. ನಿಮ್ಮ ತಂದೆಯವರು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರು ಇತರರ ಮಾತನ್ನು ಕೇಳಿಕೊಂಡು ಏಕಾಏಕಿ ಕೆಲಸ ಬಿಡದಿರಿ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಬಾಕಿ ಸೇರಿದಂತೆ ಮೊದಲಾದ ಶುಲ್ಕವನ್ನು ಪ್ರಾಮಾಣಿಕವಾಗಿ ಪಾವತಿಸಿ. ಇಲ್ಲದಿದ್ದಲ್ಲಿ ಅವಮಾನ ಎದುರಿಸಬೇಕಾಗುತ್ತದೆ. ರಾಜಕಾರಣದಲ್ಲಿ ಇರುವವರಿಗೆ ಪದವಿ ಕಳೆದುಕೊಳ್ಳುವ ಅಥವಾ ಈಗಿರುವ ಸ್ಥಾನಮಾನ ಕಡಿಮೆ ಆಗುವ ಸಾಧ್ಯತೆ ಇದೆ.

ವೃಷಭ

ವೃಷಭ

ಇನ್ನೇನು ಸರ್ಕಾರಿ ಕೆಲಸ ಆಗಿಯೇ ಹೋಯಿತು ಅಥವಾ ನಿಮಗೆ ಬರಬೇಕಾದ ಪಿತ್ರಾರ್ಜಿತ ಆಸ್ತಿ ಬಂದೇಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ಆಲಸ್ಯ ಮಾಡಿಕೊಳ್ಳಬೇಡಿ. ಗಟ್ಟಿಯಾದ ಪ್ರಯತ್ನ ಮಾಡಿದಲ್ಲಿ ನಿಮ್ಮ ಕಡೆಗೆ ಆಗುತ್ತದೆ. ನೀವು ತುಂಬ ನಂಬಿದ ವ್ಯಕ್ತಿಗಳಿಂದ ವಿಶ್ವಾಸ ದ್ರೋಹ ಆಗುವ ಸಾಧ್ಯತೆ ಇರುವುದರಿಂದ ಕಾಗದ- ಪತ್ರಗಳಿಗೆ ಸಹಿ ಹಾಕುವಾಗ ಸರಿಯಾಗಿ ಓದಿಕೊಳ್ಳಿ. ವಿದೇಶ ಪ್ರಯಾಣಕ್ಕೆ ಅವಕಾಶ ಸಿಕ್ಕಲ್ಲಿ ಅದಕ್ಕೆ ಬೇಕಾದ ದಾಖಲಾತಿಗಳನ್ನು ಮುಂಚಿತವಾಗಿ ಹೊಂದಿಸಿಟ್ಟುಕೊಳ್ಳಿ. ಕೊನೆ ಕ್ಷಣದಲ್ಲಿ ಆತುರ ಮಾಡಿಕೊಳ್ಳದಿರಿ. ಇದರಿಂದ ಆಗಬೇಕಾದ ಕೆಲಸ ಮುಂದಕ್ಕೆ ಹೋಗುವಂತಾಗುತ್ತದೆ.

ಮಿಥುನ

ಮಿಥುನ

ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನು ಸರ್ಕಾರಿ ಅಧಿಕಾರಿಗಳು, ಉದ್ಯೋಗಿಗಳಿಗೆ ಬಹಳ ಒತ್ತಡದ ಸಮಯ ಇದು. ನಿಮಗೆ ಇಷ್ಟವಿಲ್ಲದ ಇಲಾಖೆಗೆ, ಸ್ಥಳಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ತಂದೆಯ ಜತೆಗೆ ಅಥವಾ ತಂದೆಗೆ ಸಮಾನರಾದವರೊಂದಿಗೆ ಭಿನ್ನಾಭಿಪ್ರಾಯ ಏರ್ಪಡುವ ಸಾಧ್ಯತೆ ಇದೆ. ವಿದೇಶದಲ್ಲಿ ವಾಸ ಇರುವವರಿಗೆ ಒತ್ತಡದ ಸನ್ನಿವೇಶ ಎದುರಾಗಬಹುದು. ಹಣ ಹೊಂದಿಸುವುದಕ್ಕಾಗಿ ನಿಮಗೆ ಇಷ್ಟವಿಲ್ಲದಿದ್ದರೂ ಇತರರ ಸಹಾಯವನ್ನು ಕೇಳಬೇಕಾಗುತ್ತದೆ. ಕಲಾವಿದರಿಗೆ ಚಾಡಿ ಮಾತುಗಳಿಂದ ಅವಕಾಶ ತಪ್ಪಿಹೋಗುವ ಸಾಧ್ಯತೆ ಇದೆ.

ಕರ್ಕಾಟಕ

ಕರ್ಕಾಟಕ

ವಿವಾಹ ವಯಸ್ಕರಿಗೆ ತಂದೆ ಕಡೆಯ ಸಂಬಂಧಿಕರಿಂದ ಮದುವೆಗೆ ಪ್ರಸ್ತಾವಗಳು ಬರಬಹುದು. ಟೆಂಡರ್ ಹಾಕಿದ್ದಲ್ಲಿ ಅಥವಾ ದೊಡ್ಡ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಲ್ಲಿ ಹೆಚ್ಚಿನ ಶ್ರಮ ಹಾಕಬೇಕು. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಹಿರಿಯರ ಮಾರ್ಗದರ್ಶನ, ಬೆಂಬಲ ನಿಮ್ಮ ಪಾಲಿಗೆ ದೊರೆಯಲಿದೆ. ವ್ಯಾಯಾಮ, ಯೋಗ, ಜಿಮ್ ಮೊದಲಾದವುಗಳನ್ನು ಆರಂಭಿಸುವುದಕ್ಕೆ ಇದು ಸರಿಯಾದ ಸಮಯ ಆಗಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಆದರೆ ಇದನ್ನು ದಾಟಿ, ನಿಮ್ಮ ವರ್ಚಸ್ಸು ಹೆಚ್ಚು ಮಾಡಿಕೊಳ್ಳಲಿದ್ದೀರಿ.

ಸಿಂಹ

ಸಿಂಹ

ಶತ್ರುಗಳ ವಿರುದ್ಧ ಮೇಲುಗೈ ಸಾಧಿಸುತ್ತೀರಿ. ನಿಮಗೆ ಬರಬೇಕಾದ ಹಣಕ್ಕೆ ಪ್ರಯತ್ನಿಸಿದಲ್ಲಿ ವಾಪಸ್ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ. ಕುಟುಂಬದವರಿಗೆ ಹೆಚ್ಚಿನ ಸಮಯ ನೀಡುವುದಕ್ಕೆ ಕಷ್ಟವಾಗುತ್ತದೆ. ತಂದೆ- ತಾಯಿ, ಕುಟುಂಬಸ್ಥರೊಂದಿಗೆ ಸಣ್ಣ- ಪುಟ್ಟ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳು ಏರ್ಪಡುವ ಸಾಧ್ಯತೆ ಸಹ ಇದೆ. ವಯಸ್ಸಾದ ಸಿಂಹ ರಾಶಿಯವರಿಗೆ ಮಕ್ಕಳು ಆಸ್ತಿಯಲ್ಲಿ ಪಾಲು ನೀಡುವಂತೆ ಒತ್ತಾಯ ಮಾಡಲಿದ್ದಾರೆ. ಇನ್ನೂ ಕೆಲವರಿಗೆ ಇದೇ ವಿಷಯವಾಗಿ ಕೋರ್ಟ್- ಕಟಕಟೆ ತನಕ ಎಳೆದುಕೊಂಡು ಹೋಗುವ ಸಾಧ್ಯತೆ ಇದೆ. ಆದ್ದರಿಂದ ನಯವಾಗಿ ಮಾತನಾಡಿ, ಸಮಸ್ಯೆ ಮೈಮೇಲೆ ಎಳೆದುಕೊಳ್ಳಬೇಡಿ.

ಕನ್ಯಾ

ಕನ್ಯಾ

ಈ ಹಿಂದೆ ನೀವು ಮಾಡಿದ್ದ ಪ್ರಯತ್ನ ಹಾಗೂ ಹಾಕಿದ್ದ ಶ್ರಮಕ್ಕೆ ಫಲ ದೊರೆಯುತ್ತದೆ. ವ್ಯಾಪಾರ- ವ್ಯವಹಾರಗಳಲ್ಲಿ ಬಾಕಿ ಬರಬೇಕಾಗಿದ್ದಲ್ಲಿ ಈಗ ಹೆಚ್ಚಿನ ಶ್ರಮ ಹಾಕಿ, ಪ್ರಯತ್ನಿಸಿ. ವಯಸ್ಸಾದವರಿಗೆ ಕೆಲವು ವಯೋ ಸಹಜ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಇನ್ನು ಸಂಬಂಧಿಕರ ಜತೆಗೆ ತೀರ್ಥ ಕ್ಷೇತ್ರ ತೆರಳುವಂಥ ಯೋಗ ನಿಮಗಿದೆ. ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಂಡಿ ನೋವು, ಕಾಲು ನೋವು ಮೊದಲಾದ ಸಮಸ್ಯೆಗಳು ಇದ್ದಲ್ಲಿ ಉಲ್ಬಣಿಸಲಿದೆ. ತಾಯಿಯ ಮನೆ ಕಡೆ ಸಂಬಂಧಿಕರು ನಿಮ್ಮ ಸಹಾಯವನ್ನು ಕೇಳಿಕೊಂಡು ಬರಲಿದ್ದಾರೆ.

(ಮುಂದಿನ ಭಾಗದಲ್ಲಿ ತುಲಾದಿಂದ ಮೀನದ ತನಕ)

English summary
Makar Sankranti 2021 Rashi Bhavishya : Makar Sankranti is on 14 January. The Sun Transit in Capricorn will take place on 14 January 2021. Know Effects on aries to virgo zodiac signs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X